ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಸಮಕಾಲೀನರಾದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರು ಆ ಕಾಲದ ಅಸಂಖ್ಯಾತ ಶರಣ ಸಂಕುಲದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ವೀರಗಣಾಚಾರಿ, ತತ್ವನಿಷ್ಠ ಶ್ರೇಷ್ಠ ತತ್ವಜ್ಞಾನಿಯಾಗಿ, ವಚನಕಾರನಾಗಿ, ಕ್ರಾಂತಿಯ ಕೆಂಡದುಂಡೆಯಾಗಿ ಹೊರಹೊಮ್ಮುತ್ತಾರೆ. ಅನೇಕ ಬಿರುದಾಂಕಿತ ಚೌಡಯ್ಯನವರಿಗೆ ಡಾ. ಜಿ.ಎಸ್. ಶಿವರುದ್ರಪ್ಪನವರು ಹೀಗೆ ಉದ್ಗಾರವೆತ್ತಿದ್ದಾರೆ. ‘ಮುಚ್ಚುಮರೆಯಿಲ್ಲದೆ ಬಿಚ್ಚು ಮನಸ್ಸಿನ; ಕಂಡದ್ದನ್ನು ಕಂಡಂತೆ ಹೇಳುವ; ಕೆಚ್ಚು ಡಂಭಾಚಾರವನ್ನು ಕಂಡರೆ ಸಾತ್ವಿಕವಾದ ರೊಚ್ಚು: ಇದು ವ್ಯಕ್ತಿತ್ವದ ಪಡಿಯಚ್ಚು; ನಿಜದ ನಗಾರಿ, ನಿರ್ಭಯತೆಯ ಭೇರಿ, ಅನುಭವ ವಿಹಾರಿ ಚಿನ್ಮಯ ಚಕೋರಿ’ ಎಂದು ಕಾವ್ಯಾನಂದದ ಕಾವ್ಯವಾಣಿ ನುಡಿದಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಇಂದಿನ ಚೌಡಯ್ಯದಾನಪುರ ಅಂದರೆ ಅಂದಿನ ಶಿವಪುರ. 12ನೇ ಶತಮಾನದಲ್ಲಿ ಚಂದ್ರಾಪುರ, ಶಿವಪುರ, ನರಸೀಪುರ ಇವು ತ್ರಿಪುರಗಳಾಗಿದ್ದು, ಇವುಗಳಲ್ಲಿ ಶಿವಪುರ ಅಂಬಿಗರ ಚೌಡಯ್ಯನವರ ಜನ್ಮಸ್ಥಳ ಎಂಬುದು ಆ ಭಾಗದ ಊರುಗಳಲ್ಲಿ ಜನರು ಆಡುವ ಭಾಷೆ ಮೇಲೆ ಗೊತ್ತಾಗುತ್ತದೆ. ಅಲ್ಲದೆ, ಚೌಡಯ್ಯ ಶರಣರು ತಮ್ಮ ವಚನಗಳಲ್ಲಿ ಬಳಸಿದ ಬೈಗುಳಗಳು ಇಲ್ಲಿ ಇಂದಿಗೂ ಬಳಕೆಯಲ್ಲಿವೆ. ಪೊ›. ಡಾ. ಬಸವರಾಜ ಸಿದ್ದಾಶ್ರಮ ಅವರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಸ್ಥಳೀಯವಾಗಿ ಅಧ್ಯಯನ ಮಾಡಿ ಇದನ್ನು ಸಿದ್ಧಮಾಡಿದ್ದಾರೆ.
ತಂದೆ ವಿರೂಪಾಕ್ಷ, ತಾಯಿ ಪಂಪಾದೇವಿಯ ಪುಣ್ಯಗರ್ಭದಲ್ಲಿ 1120ರ ಜನವರಿ 21ರಂದು ಜನಿಸಿ ತ್ರಿಪುರಗಳಲ್ಲಿ ಒಂದಾದ ನರಸೀಪುರದಲ್ಲಿ ಇರುವ ಉದ್ದಾಲಕ ಮುನಿಗಳ ಆಶ್ರಮದಲ್ಲಿ ಸಕಲ ವಿದ್ಯೆಗಳನ್ನು ಪಡೆದು, ಗ್ರಾಮದ ಮುಂದಿರುವ ತುಂಗಭದ್ರಾ ನದಿಯಲ್ಲಿ ದೋಣಿ ನಡೆಸುವ ಅಂಬಿಗ ಕಾಯಕ ವೃತ್ತಿ ಕೈಕೊಂಡು ಸದ್ಗುಣ ಸಂಪನ್ನೆಯಾದ ಶಿವಶರಣೆ ಸುಲೋಚನೆ ಎಂಬ ವಧುವನ್ನು ವಿವಾಹವಾಗಿ ಗೃಹಸ್ಥ ಜೀವನಕ್ಕೆ ಕಾಲಿಡುತ್ತಾರೆ. ಅಂದು ಬಸವಾದಿ ಶರಣರ ಚಿಂತನೆಗೆ ಪ್ರಭಾವಿತರಾಗಿ ದಂಪತಿ ಸಮೇತ ಅಂದಿನ ಕಲ್ಯಾಣ ಇಂದಿನ ಬಸವ ಕಲ್ಯಾಣ (ಬೀದರ ಜಿಲ್ಲೆ)ಕ್ಕೆ ಪ್ರವೇಶಿಸಿದರು. ಬಸವಣ್ಣನವರು ಸ್ಥಾಪಿಸಿದ ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ಆದ ಅನುಭವ ಮಂಟಪದಲ್ಲಿ ಭಾಗವಹಿಸಿ ಶೂನ್ಯಪೀಠಾಧ್ಯಕ್ಷರಾದ ಅಲ್ಲಮಪ್ರಭುಗಳು, ಅಣ್ಣಬಸವಣ್ಣ, ಅಕ್ಕಮಹಾದೇವಿ, ಶಿವಯೋಗಿ ಸಿದ್ಧರಾಮೇಶ್ವರರು, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ, ನುಲಿಯ ಚಂದಯ್ಯ ಮುಂತಾದ ಶರಣರ ಸಭೆಯಲ್ಲಿ ಅನುಭಾವ ಚಿಂತನೆ ನಡೆಯುತ್ತಿತ್ತು. ಅಂಬಿಗರ ಚೌಡಯ್ಯರಿಗೆ ಅಲ್ಲಮಪ್ರಭುದೇವರು, ‘ಇಲ್ಲಿ ನದಿಗಳೇ ಇಲ್ಲ, ಇದು ಬಯಲುಸೀಮೆ. ಇಲ್ಲಿ ನೀವು ಅಂಬಿಗ ಕಾಯಕ ಹೇಗೆ ಮಾಡುತ್ತಿರಿ? ಎಂದು ಅನುಭಾವಿಕ ಅರ್ಥದಲ್ಲಿ ಪ್ರಶ್ನೆ ಮಾಡಿದರು. ಅಂಬಿಗರ ಚೌಡಯ್ಯ ಅತ್ಯಂತ ಮಾರ್ವಿುಕವಾದ ಉತ್ತರ ನೀಡುತ್ತಾರೆ. ‘ತಡೆ ನಿಲ್ಲದ ಮಹಾನದಿಯಲ್ಲಿ ಒಡಲಿಲ್ಲದಂಬಿಗೆ ಬಂದಿದ್ದೇನೆ ಹಿಡಿವ ಬಿಡುವ ಮನವ ಬೆಲೆಗೊಟ್ಟಡೆ ಕಡೆಗಣಿಸಿ ಹಾಯಿಸುವ ಮಹಾಹೊಳೆಯ, ನುಡಿಯಿಲ್ಲದ ನಿಸ್ಸಿಮ ಗ್ರಾಮದಲ್ಲಿರಿಸುವೆನೆಂದಾತನಂಬಿಗರ ಚೌಡಯ್ಯ’ ಎಂದು ಹೇಳಿದಾಗ ಶಿವಶರಣರೆಲ್ಲ ಸಂತುಷ್ಟಗೊಂಡು ಜಯಘೊಷ ಮಾಡುತ್ತಾರೆ. ಆಗ ಅಣ್ಣ ಬಸವಣ್ಣನವರು ‘ನೀವು ಅಸಾಮಾನ್ಯ ಅನುಭಾವಿಗಳು. ನಂಬಿದವರಿಗೆ ಇಂಬಿಟ್ಟು ಕಡೆಗೆ ಹಾಯಿಸುವ ನಿರಾಕಾರದ ಪರಶಿವನ ನಿಲುವು ನಿಮ್ಮಲ್ಲಿದೆ. ನೀವು ಅನುಭವ ಮಂಟಪದ ಅನರ್ಥ್ಯ ರತ್ನ’ಎಂದು ಗುಣಗಾನ ಮಾಡಿ, ‘ಶಿವಶರಣರೆಲ್ಲರಲ್ಲಿ ನಿಜಶರಣ’ ಎಂಬ ಬಿರುದಾಂಕಿತ ನೀಡಿ ಗೌರವಿಸುತ್ತಾರೆ.
ಚೌಡಯ್ಯನವರು ಕಲ್ಯಾಣದಲ್ಲಿ ತ್ರಿಪುರಾಂತಕ ಕೆರೆಯಲ್ಲಿ ದೋಣಿ ನಡೆಸುವ ಕಾಯಕ ಕೈಗೊಂಡು ಕಾಯಕ ದಾಸೋಹ ಶಿವಯೋಗ ಸಾಧನೆಯನ್ನು ಆಚರಿಸುತ್ತಾ ಸಾವಿರ ಸಾವಿರ ವಚನಗಳನ್ನು ಬರೆದರೆಂದು ತಿಳಿದುಬರುತ್ತದೆ. ಆದರೆ, ಕಲ್ಯಾಣ ಕ್ರಾಂತಿಯಲ್ಲಿ ಎಲ್ಲವೂ ನಾಶವಾಗಿ ಕೇವಲ 330 ವಚನಗಳು ನಮಗೆ ಇಂದು ದೊರೆಯುತ್ತವೆ. ಇನ್ನೂ ಹೆಚ್ಚಿನ ಸಂಶೋಧನೆಗಳು ಆಗಬೇಕಿದೆ. ಕಲ್ಯಾಣ ಕ್ರಾಂತಿಯಲ್ಲಿ ಶರಣಧರ್ಮ ರಕ್ಷಣೆ, ವಚನ ಸಾಹಿತ್ಯ ಉಳಿವಿನಲ್ಲಿ ಅಂಬಿಗರ ಚೌಡಯ್ಯನವರ ಪಾತ್ರ ಪ್ರಮುಖವಾದದ್ದು. ಮಗುವಿನಂತೆ ಬೆನ್ನಿಗೆ ವಚನ ಸಾಹಿತ್ಯ ಕಟ್ಟುಗಳನ್ನು ಕಟ್ಟಿಕೊಂಡು ಖಡ್ಗ ಹಿಡಿದು ಹೋರಾಡಿದ ವೀರ ಗಣಾಚಾರಿ ಶರಣರಾಗಿದ್ದಾರೆ. ಶಿವಶರಣರೆಲ್ಲ ಕ್ರಾಂತಿಯಲ್ಲಿ ಚದುರಿ ಹೋದಾಗ ಕಲ್ಯಾಣದಿಂದ ಉಳವಿಯ ಮಾರ್ಗ ಹಿಡಿದ ಚೆನ್ನಬಸವಣ್ಣನವರ ತಂಡದಲ್ಲಿ ಚೌಡಯ್ಯ ಶರಣರು ಇದ್ದು ಉಳವಿಯ ದಟ್ಟ ಕಾಡಿನ ಗವಿಗಳಲ್ಲಿ ವಚನ ಸಾಹಿತ್ಯ ರಕ್ಷಣೆ ಆದಾಗ ಮರಳಿ ಜನ್ಮಭೂಮಿಯಾದ ಶಿವಪುರಕ್ಕೆ ಬಂದು ತುಂಗಭದ್ರಾ ನದಿಯಲ್ಲಿ ದೋಣಿ ಕಾಯಕ ಮಾಡುತ್ತಾ ಮೂಢನಂಬಿಕೆ, ಕಂದಾಚಾರ, ವೈದಿಕತೆಯನ್ನು ವಿರೋಧಿಸುತ್ತಾ ಶಿವಾನುಭವ, ವಚನಗಳ ಚಿಂತನೆ, ಶರಣ ತತ್ವವನ್ನು ಪ್ರಚಾರಗೊಳಿಸುತ್ತಾ ಅನೇಕ ಜನರಿಗೆ ಅಂಟಿರುವ ಕ್ಷಯರೋಗ, ಕುಷ್ಠರೋಗ, ಮಹಾಮಾರಿ ರೋಗರುಜಿನಗಳನ್ನು ಭಸ್ಮ (ವಿಭೂತಿ) ಮಂತ್ರಪಾದೋದಕ ಪೋ›ಕ್ಷಣೆಯಿಂದ ನಿವಾರಿಸುತ್ತಿದ್ದರು. ತುಂಬಿದ ಹೊಳೆಯಲ್ಲಿ ಕಲ್ಲಿನ ಡೋಣಿ ನಡೆಸಿ ಪವಾಡಗೈಯ್ಯುತ್ತಾ ಗುತ್ತರಸನ ಮಗ ಹಾವು ಕಚ್ಚಿ ಸತ್ತಾಗ ಭಸ್ಮ (ವಿಭೂತಿ) ಮಂತ್ರಪಾದೋದಕ ಪ್ರೋಕ್ಷಣೆಯಿಂದ ಮರಳಿ ಬದುಕಿಸುತ್ತಾರೆ. ಇದರಿಂದ ಸಂತಸಗೊಂಡ ಗುತ್ತರಸನು ಗುರುಕಾಣಿಕೆಯಾಗಿ ಪೂರ್ವ-ಪಶ್ಚಿಮಕ್ಕೆ 14 ಮೈಲು, ದಕ್ಷಿಣ-ಉತ್ತರಕ್ಕೆ 7 ಮೈಲು ಭೂಮಿಯನ್ನು ಅವರ ಪಾದಕ್ಕೆ ಅರ್ಪಿಸುತ್ತಾನೆ. ಕಾಲಾನಂತರ ಚೌಡಯ್ಯ ಶರಣರು ಶಿಷ್ಯನಾದ ಶಿವದೇವಮುನಿಗಳಿಗೆ ಆ ಭೂಮಿಯನ್ನು ಧಾನವಾಗಿ ನೀಡಿ ಅದನ್ನು ಬಡವರ, ರೋಗಿಗಳ, ನೊಂದವರ, ದೀನದಲಿತರ ಬವಣೆಯನ್ನು ಹಿಂಗಿಸಲು ಬಳಸಬೇಕೆಂದು ಅಪ್ಪಣೆ ಮಾಡುತ್ತಾರೆ.
ಅಂಬಿಗರ ಚೌಡಯ್ಯನವರಿಗೆ ಪುರವರ (ಪುರವಂತ) ಎಂಬ ಮಗ ಇದ್ದು, ತಂದೆಯ ಗಣಾಚಾರದ ಬೆಡಗಿನ ಕಾಲಜ್ಞಾನದ ವಚನಗಳನ್ನು ಹಾಗೂ ಕಲ್ಯಾಣದ ಶಿವಶರಣರ ವಚನಗಳನ್ನು ಪಟ್ಟಣಕ್ಕೆ ಪಂಚ ರಾತ್ರಿ, ಹಳ್ಳಿಗೆ ಏಕ ರಾತ್ರಿಯಂತೆ ಸಂಚರಿಸಿ ಮದುವೆ, ಸೀಮಂತ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ, ಪ್ರಚಾರ, ಪ್ರಸಾರ ಮಾಡುತ್ತಾ ಪುರವಂತಿಕೆಯ ಮೂಲಪುರುಷನಾಗುತ್ತಾನೆ.
ವೈಚಾರಿಕತೆ, ಏಕದೇವೋಪಾಸನೆ, ಇಷ್ಟಲಿಂಗ ನಿಷ್ಠೆ, ಬೆಡಗು ಕಾಲಜ್ಞಾನ ವಚನಗಳು, ಸಂಕೀರ್ಣ ವಚನಗಳು, ಜೀವನ್ಮುಕ್ತನ ಸ್ಥಿತಿ, ನೈತಿಕ ಮೌಲ್ಯ ವಚನಗಳು, ಆಧ್ಯಾತ್ಮಿಕತೆ, ವಿಡಂಬನೆ, ಸೃಷ್ಟಿಯ ಕ್ರಮ ಈ ಎಲ್ಲ ವಿಶೇಷತೆಗಳನ್ನು ನಿಜಶರಣರ ವಚನಗಳಲ್ಲಿ ಕಾಣಬಹುದು.
ಚೌಡಯ್ಯನವರು ತುಂಬಿದ ನದಿಯಲ್ಲಿ ದೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರನಲ್ಲದೆ, ಭವಸಾಗರವೆಂಬ ಈ ಸಂಸಾರದ ವಾರಿಧಿಯನ್ನು ಅರಿವೆಂಬ ಹುಟ್ಟು ಹಾಕಿ ದಾಟಿಸುವ ಕೌಶಲವುಳ್ಳವರೂ ಹೌದು. ಅಪಾರ ಅನುಭಾವದ ಅಮೃತವನ್ನು ಚಾಟಿಯೇಟಿನೊಂದಿಗೆ ಕೊಟ್ಟು ಹೊಡೆದೆಬ್ಬಿಸುತ್ತಾರೆ. ಅವರದು ಚುಚ್ಚುಮಾತಿನ ಬಿಚ್ಚು ಹೃದಯದ ಕೆಚ್ಚಿನ ಅಮರ ವಚನಗಳು ಸಜ್ಜಯಂತಿವೆ. ನುಡಿದಂತೆ ನಡೆದ ನಡೆದಂತೆ ನುಡಿದ ಧೀರ ವೀರ ಶರಣ. ಸಮಾಜದ ವಿಮರ್ಶೆ, ವ್ಯಕ್ತಿಟೀಕೆ, ಮೂಢನಂಬಿಕೆಗಳನ್ನು ತೆಗಳಿ, ಅವುಗಳನ್ನು ಬೆರಳು ಮಾಡಿ ತೋರಿಸಿ ತಾನು ಶುದ್ಧನಾಗಿ ಸಿದ್ಧಶುದ್ಧ ಬಾಳಬೆಳಗಿಸಿಕೊಂಡ ಶರಣ.
ಇವರ ವಚನಗಳು ಅಧರಕ್ಕೆ ಕಹಿಯಾದರೆ ಉದರಕ್ಕೆ ಸಿಹಿ; ನುಡಿದರೆ ಏಟೊಂದು ತುಂಡೆರಡು. ಇಚ್ಛಾಮರಣ ಶಕ್ತಿಯುಳ್ಳ ಅಂಬಿಗರ ಚೌಡಯ್ಯ ಶತಾಯುಷಿಗಳಾಗಿದ್ದು, ಕೊನೆಯ ದಿನಗಳಲ್ಲಿ ಶಿವಾನುಭವ ಚಿಂತನೆಗೈಯುತ್ತಾ ಗುರುನಾಮಸ್ಮರಣೆಯೊಂದಿಗೆ ತುಂಗಭದ್ರಾ ನದಿಯ ತೀರದಲ್ಲಿ ಗಂಗೆಯ ಮಡಿಲಲ್ಲಿ ಬಯಲಿನಲ್ಲಿ ಬಯಲಾಗುತ್ತಾರೆ. ನದಿ ತೀರದಲ್ಲಿ ಇವರ ಐಕ್ಯಮಂಟಪವಿದೆ. ಪಕ್ಕದಲ್ಲಿ ನರಸೀಪುರದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಗುರುಪೀಠವಿದ್ದು, ಚೌಡಯ್ಯನವರ ತತ್ವ ಪ್ರಸಾರ ಪ್ರಚಾರ ಗೈಯುತ್ತಿದೆ. ಶ್ರೀ ಶಾಂತಮುನಿ ಮಹಾಸ್ವಾಮಿಗಳು ಪ್ರಥಮ ಪೀಠಾಧಿಪತಿಗಳಾಗಿದ್ದು, ನಾವು ದ್ವಿತೀಯ ಪೀಠಾಧಿಪತಿಗಳಾಗಿ ಚುಕ್ಕಾಣಿ ಹಿಡಿದಿದ್ದೇವೆ. ಶ್ರೀಗುರುಪೀಠದಲ್ಲಿ ನಿರಂತರ ಅನ್ನ, ಅಕ್ಷರ, ಅರಿವು ತ್ರಿವಿಧ ದಾಸೋಹ ಜರುಗುತ್ತಿದೆ. ಪ್ರತಿ ವರ್ಷ ಜನವರಿ 14 ಮತ್ತು 15ರಂದು ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವ, ವಚನ ಸಾಹಿತ್ಯ ಹೊತ್ತು ಸಾಗುವ ವಚನ ಗ್ರಂಥ ಮಹಾರಥೋತ್ಸವ, ಸಾಮೂಹಿಕ ಸರಳ ವಿವಾಹ, ಧರ್ಮಸಭೆ, ವಿವಿಧ ಸಾಮಾಜಿಕ, ಧಾರ್ವಿುಕ, ಶೈಕ್ಷಣಿಕ ಕಾರ್ಯಕ್ರಮಗಳು ಜರುಗುತ್ತವೆ.
(ಲೇಖಕರು ಪೀಠಾಧ್ಯಕ್ಷರು, ಶ್ರೀನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ, ಸುಕ್ಷೇತ್ರ ನರಸೀಪುರ, ಹಾವೇರಿ ಜಿಲ್ಲೆ)
ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಸ್ವಾಮೀಜಿ ಶವವಾಗಿ ಪತ್ತೆ!
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:2 × two =
Remember me
