| ಸಲೀಮ್ ಬೋಳಂಗಡಿ ಮಂಗಳೂರುತ್ಯಾಗ ಬಲಿದಾನದ ಪ್ರತೀಕವಾದ ಈದುಲ್ ಅಝ್ಹಾವನ್ನು ಇಂದು ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ. ತ್ಯಾಗ ಬಲಿದಾನವೇ ಈ ಹಬ್ಬದ ಮಹತ್ವ. ಹಿಜರಿ ಶಕೆಯ ದುಲ್ ಹಜ್ಜ್ ತಿಂಗಳ ಹತ್ತನೆಯ ದಿನಾಂಕದಂದು ಈ ಹಬ್ಬ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಶ್ವದಾದ್ಯಂತದ ಲಕ್ಷಾಂತರ ಭಕ್ತಾದಿಗಳು ಹಜ್ಜ್ ನಿರ್ವಹಿಸಲು ತೆರಳುತ್ತಾರೆ. ಇಬ್ರಾಹೀಮರ ಕುಟುಂಬದ ತ್ಯಾಗ-ಬಲಿದಾನಗಳನ್ನು ಸ್ಮರಿಸುತ್ತಾ ಆರಾಧನೆಯಲ್ಲಿ ನಿರತರಾಗಿ ಭಾವ ಪರವಶರಾಗುತ್ತಾರೆ. ಇಷ್ಟಕ್ಕೂ ಇದು ಇಸ್ಲಾಮಿನ ಕಡ್ಡಾಯ ಕರ್ಮಗಳಲ್ಲಿ ಒಂದು. ಆರ್ಥಿಕವಾಗಿ ಸಾಮರ್ಥ್ಯವಿರುವವರು ಜೀವನದಲ್ಲಿ ಒಂದು ಬಾರಿಯಾದರೂ ಹಜ್ಜ್ ನಿರ್ವಹಿಸಲೇಬೇಕು. ಆದರೆ, ಬಡವರಿಗೆ ಇದು ಕಡ್ಡಾಯವಲ್ಲ. ಹಾಗಾದರೆ ಕಡ್ಡಾಯ ಕರ್ಮವೆನಿಸುವಷ್ಟು ಪ್ರಾಮುಖ್ಯತೆಯನ್ನು ಇಸ್ಲಾಮಿನಲ್ಲಿ ಹಜ್ಜ್​ಗೆ ಯಾಕೆ ನೀಡಲಾಗಿದೆ ಎಂದು ಭಾವನೆ ಉದ್ಭವವಾಗುವುದು ಸಹಜ.
ಪ್ರವಾದಿ ಇಬ್ರಾಹೀಮರು ಬಾಲ್ಯ ಮತ್ತು ಯೌವ್ವನದಲ್ಲಿ ಬಹಳಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂದಿತ್ತು. ದೇವನು ನೀಡಿದ ಹಲವಾರು ಸತ್ವಪರೀಕ್ಷೆಗಳನ್ನು ಎದುರಿಸಿ ಜಯಶಾಲಿಯಾಗಿ ದೇವ ಸಂಪ್ರೀತಿಗೆ ಪಾತ್ರರಾದರು. ಅವರನ್ನು ಅಲ್ಲಾಹನು ಖಲೀಲುಲ್ಲಾಹ್ (ಅಲ್ಲಾಹನ ಮಿತ್ರ) ಎಂದು ವರ್ಣಿಸಿದ್ದಾನೆ. ಇಬ್ರಾಹೀಮರ ಬದುಕಿನ ಹಲವಾರು ಸತ್ವಪರೀಕ್ಷೆಗಳನ್ನು ಅಧ್ಯಯನ ಮಾಡಿದರೆ ವಾಸ್ತವ ತಿಳಿದು ಬರುವುದು. ಒಂದು ದಿನ ಮಕ್ಕಾದ ಮರುಭೂಮಿಯ ನಿರ್ಜನ ಪ್ರದೇಶವೊಂದರಲ್ಲಿ ಪತ್ನಿ ಹಾಜಿರಾ ಹಾಗೂ ತನ್ನ ಪ್ರೀತಿಪಾತ್ರ ಪುತ್ರ ಇಸ್ಮಾಈಲ್​ರನ್ನು ತೊರೆದು ಬರುವಂತೆ ದೇವನು ಕನಸಿನಲ್ಲಿ ಆದೇಶಿಸಿದನು. ಅದರಂತೆ ಅವರು ಪತ್ನಿ ಮತ್ತು ಹಸುಳೆಯನ್ನು ಮಕ್ಕಾದ ಮರುಭೂಮಿಯ ನಿರ್ಜನ ಪ್ರದೇಶದಲ್ಲಿ ತೊರೆದು ಬಂದರು. ಹಿಂದಿರುಗಿ ಹೋಗುವಾಗ ಪತ್ನಿ ಕರಿಯ ಗುಲಾಮ ಮಹಿಳೆ ಹಾಜಿರಾ ‘ತಾವು ನಮ್ಮನ್ನೇಕೆ ಇಲ್ಲಿ ತೊರೆದು ಹೋಗುತ್ತೀರಿ’ ಎಂದು ಕೇಳುತ್ತಾರೆ. ಆಗ ಇಬ್ರಾಹೀಮರು ದೇವಾಜ್ಞೆಯ ಪ್ರಕಾರ ನಾನು ನಿಮ್ಮನ್ನು ಬಿಟ್ಟು ಹೊರಡುತ್ತಿದ್ದೇನೆ ಎನ್ನುತ್ತಾರೆ.
‘ದೇವನ ಆದೇಶವಲ್ಲವೇ ನೀವು ಹೋಗಿ’ ಎಂದು ಹೇಳಿ ಹಾಜಿರಾ ಕಳುಹಿಸುತ್ತಾರೆ. ದೇವನ ಮೇಲೆ ಅವರಿಗೆ ಅಚಂಚಲವಾದ ಭರವಸೆಯಿತ್ತು. ಇದು ಇಬ್ರಾಹೀಮ್ ಮತ್ತು ಹಾಜಿರಾ ಈರ್ವರಿಗೂ ಸತ್ವಪರೀಕ್ಷೆಯಾಗಿತ್ತು. ಸಂತಾನರಹಿತರಾಗಿದ್ದಾಗ ದೇವನಾನುಗ್ರಹಂತೆ ವೃದ್ಧಾಪ್ಯದಲ್ಲಿ ದೊರೆತ ಮಗುವನ್ನು ದೇವನಾದೇಶಕ್ಕೆ ತಲೆಬಾಗಿ ಬಿಟ್ಟು ಬರುವ ಪರಿಸ್ಥಿತಿ. ನಿರ್ಜನವಾದ ಆ ಮರುಭೂಮಿಯಲ್ಲಿ ಹಸುಳೆಯೊಂದಿಗೆ ಹಾಜಿರಾ ದೃಢಚಿತ್ತರಾಗಿ ಕಳೆಯುತ್ತಾರೆ. ಅಲ್ಲಿ ಯಾವುದೇ ನರಪಿಳ್ಳೆಯಿರಲಿಲ್ಲ. ಪ್ರಾಣಿಗಳು ಆಕ್ರಮಣ ಮಾಡುವ ಸಾಧ್ಯತೆಯಿತ್ತು. ತಾವು ತಂದಿದ್ದ ಆಹಾರ ಖರ್ಜೂರಗಳು ಮುಗಿಯುತ್ತಾ ಬಂದವು. ಚರ್ಮದ ಚೀಲದಲ್ಲಿ ತಂದಿದ್ದ ನೀರು ಕೂಡಾ ಮುಗಿಯಿತು. ಮಗು ಅಳಲಾರಂಭಿಸಿತು. ಅಸಹನೀಯವಾದ ದಾಹ- ಹಸಿವಿನಿಂದ ಮಗು ಅತ್ತು ಚಡಪಡಿಸುತ್ತಿತ್ತು. ಹಾಜಿರಾ ಪ್ರಾರ್ಥಿಸಿದರು. ಸುತ್ತಮುತ್ತ ನೀರಿಗಾಗಿ ಹುಡುಕಾಡಿದರು. ಎತ್ತ ಕಡೆ ನೋಡಿದರೂ ನೀರು, ಆಹಾರ ಸಿಗುವ ಸಾಧ್ಯತೆಯಿರಲಿಲ್ಲ. ಸಫಾ ಮತ್ತು ಮರ್ವಾ ಬೆಟ್ಟದ ನಡುವೆ ಓಡುತ್ತಾ ನೀರನ್ನು ಹುಡುಕಾಡಿದರು. ಗಂಟಲು ಒಣಗಿತು. ಹನಿ ನೀರನ್ನು ಅರಸುತ್ತಾ ಹೀಗೇ ಏಳು ಬಾರಿ ಈ ಬೆಟ್ಟಗಳ ನಡುವೆ ಹಸುಳೆಯ ದಾಹ ತಣಿಸಲು ಓಡುತ್ತಾರೆ. ಹೀಗೇ ಓಡಿ ಸುಸ್ತಾಗಿ ಮರಳಿ ಬರುವಾಗ ಆ ದೃಶ್ಯ ಕಂಡು ಅವರು ಬೆರಗಾಗುತ್ತಾರೆ. ದೇವನನ್ನು ಸ್ಮರಿಸಿ ಸ್ತುತಿಸುತ್ತಾರೆ. ಅವರು ದೇವನ ಮೇಲೆ ಇಟ್ಟಿದ್ದ ಭರವಸೆಯು ಈಡೇರಿತ್ತು. ಹೌದು ಇಸ್ಮಾಈಲ್ ಎಂಬ ಆ ಹಸುಳೆಯು ಅಳುತ್ತಾ ಕಾಲು ಬಡಿದ ಸ್ಥಳದಲ್ಲಿ ನೀರು ಚಿಮ್ಮಿ ಹರಿಯುತ್ತಿದೆ. ಆ ನೀರನ್ನು ಬೊಗಸೆಯಲ್ಲಿ ತೆಗೆದು ಮಗುವಿಗೆ ಕುಡಿಸಿ ತನ್ನ ದಾಹವನ್ನೂ ತಣಿಸುತ್ತಾರೆ. ನೀರು ಚಿಮ್ಮುತ್ತಾ ಹರಿಯುತ್ತಲೇ ಇತ್ತು. ಆಗ ತನಗರಿವಿಲ್ಲದೆ ‘ಝುಮ್ ಝುಮ್ (ನಿಲ್ಲು ನಿಲ್ಲು ಎಂದರ್ಥ) ಎನ್ನುತ್ತಾರೆ. ಹೀಗೆ ಅವರು ದೇವನ ಸತ್ವಪರೀಕ್ಷೆಯಲ್ಲಿ ವಿಜಯಿಯಾಗುತ್ತಾರೆ. ಹಾಜಿರಾ ಎಂಬ ಆ ಕರಿಯ ಗುಲಾಮ ಮಹಿಳೆಗೆ ಇಸ್ಲಾಮಿನಲ್ಲಿ ಮಹತ್ತರವಾದ ಸ್ಥಾನ ಕಲ್ಪಿಸಲಾಗಿದೆ. ನಾಲ್ಕು ಸಾವಿರ ವರ್ಷಗಳ ಹಿಂದೆ ಮಾಡಿದ ಅ ಮಹಾತ್ಯಾಗದ ಸ್ಮರಣೆಯನ್ನು ಹಜ್ಜ್ ಯಾತ್ರಾರ್ಥಿಗಳು ಇಂದಿಗೂ ನಿರ್ವಹಿಸುತ್ತಾರೆ. ದೇವನ ಮೇಲೆ ಇಟ್ಟ ಭರವಸೆಗಾಗಿ ಅದರ ಸ್ಮರಣೆಯನ್ನು ಲೋಕಾಂತ್ಯದವರೆಗೂ ದೇವನು ನೆಲೆ ನಿಲ್ಲಿಸುತ್ತಾನೆ. ಹಜ್ಜ್ ಯಾತ್ರಾರ್ಥಿಗಳು ಹಾಜಿರಾರ ಆ ನಿಷ್ಕಳಂಕತೆಯ ಮಗುವಿನ ದಾಹ ತಣಿಸಲು ಓಡಿದ ಓಟದ ನೆನಪಿಗಾಗಿ ಸಫಾ ಮತ್ತು ಮರ್ವಾ ಬೆಟ್ಟದ ನಡುವೆ ಏಳು ಬಾರಿ ಓಡುತ್ತಾರೆ. ಹಜ್ಜ್ ಕರ್ಮದಲ್ಲಿ ಇದು ಕಡ್ಡಾಯವಾಗಿದೆ. ಈ ಓಟಕ್ಕೆ ಸಯೀ (Sa’ee) ಎನ್ನಲಾಗುತ್ತದೆ. ಪ್ರಾರ್ಥನೆ ಮತ್ತು ಪ್ರಯತ್ನಕ್ಕೆ ಪ್ರತಿಫಲ ದೊರೆಯುತ್ತದೆ ಎಂಬುದರ ನಿದರ್ಶನವಾಗಿದೆ. ಝುಮ್ ಝುಮ್ ಎಂಬ ಆ ನೀರಿನ ಒರತೆಯನ್ನು ಇಂದಿಗೂ ಕಾಣಬಹುದು. ಲಕ್ಷಾಂತರ ಹಾಜಿಗಳು ಆ ಪವಿತ್ರ ಜಲದಲ್ಲಿ ದಾಹವನ್ನು ತಣಿಸುತ್ತಾರೆ. ಅದು ಹಜ್ಜ್ ಮತ್ತು ಉಮ್ರಾ ಯಾತ್ರಾರ್ಥಿಗಳ ಮುಖಾಂತರ ವಿಶ್ವದಾದ್ಯಂತ ತಲುಪುತ್ತಿದೆ.
ಹೀಗೆ ಇಬ್ರಾಹೀಮರ ಕುಟುಂಬ ಸಂತೃಪ್ತಿಯ ಬದುಕು ಸಾಗಿಸುತ್ತಿತ್ತು. ಹೀಗಿರುವಾಗ ಮತ್ತೊಂದು ಸತ್ವಪರೀಕ್ಷೆ ಎದುರಾಯಿತು. ತನಗೆ ಆಸರೆಯಾಗಬೇಕಾಗಿದ್ದ ಪುತ್ರ ಇಸ್ಮಾಈಲ್​ರನ್ನು ಬಲಿಯರ್ಪಿಸಬೇಕೆಂಬ ದೇವನಾಜ್ಞೆಯು ಕನಸಿನ ಮೂಲಕ ಬರುತ್ತದೆ. ಧರ್ಮಸಂಕಟಕ್ಕೆ ಬಿದ್ದರು. ಅಸಾಮಾನ್ಯ ಪರೀಕ್ಷೆ. ತನ್ನ ಕರುಳ ಕುಡಿಯ ಕೊರಳು ಕತ್ತರಿಸಬೇಕೆಂಬ ಕನಸು. ಇದು ಸಾಮಾನ್ಯ ಕನಸಲ್ಲ ದೇವನಿಂದಲೇ ಒದಗಿ ಬಂದ ಕನಸು ಎಂಬುದನ್ನು ಮನಗಂಡರು. ಒಂದೆಡೆ ಪುತ್ರವಾತ್ಸಲ್ಯ ಮತ್ತೊಂದೆಡೆ ದೇವನಾದೇಶದ ಪಾಲನೆ ಗೊಂದಲಕ್ಕೆ ಬೀಳದೆ ದೃಢ ನಿರ್ಧಾರ ಮಾಡಿದರು. ಪುತ್ರವಾತ್ಸಲ್ಯವನ್ನು ಬದಿಗೊತ್ತಿದರು. ಮಗನೊಂದಿಗೆ ತಾನು ಕಂಡ ಕನಸನ್ನು ವಿವರಿಸಿದರು. ಪುತ್ರನೂ ಬಲಿಯಾಗಲು ಒಪ್ಪುತ್ತಾರೆ. ತಂದೆಗೆ ಸ್ಪೂರ್ತಿಯಾಗುತ್ತಾರೆ. ಅಪ್ಪನಿಗೆ ತಕ್ಕ ಮಗನಾಗಿ ಹೊಳೆಯುತ್ತಾರೆ. ಮಗನ ಒಪ್ಪಿಗೆಯು ಪ್ರವಾದಿ ಇಬ್ರಾಹೀಮರ ಮೇಲೆ ಇನ್ನಷ್ಟು ಪ್ರಭಾವ ಬೀರುತ್ತದೆ. ತನ್ನ ಕನಸಿನ ಸಾಕ್ಷಾತ್ಕಾರಕ್ಕಾಗಿ ಸಿದ್ಧರಾಗುತ್ತಾರೆ. ಮಗನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅಧೋಮುಖವಾಗಿ ಮಲಗಿಸುತ್ತಾರೆ. ಬಲಿಗೆ ಸಿದ್ಧರಾದ ಇಸ್ಮಾಈಲರು ಕೊರಳನ್ನು ತೋರಿಸುತ್ತಾರೆ. ಹರಿತವಾದ ಕತ್ತಿಯನ್ನು ತೆಗೆದು ಕೊಯ್ಯಲಾರಂಭಿಸುತ್ತಾರೆ. ಆದರೆ, ಕೊರಳು ಮಾತ್ರ ಸೀಳಾಗುವುದಿಲ್ಲ. ಆಗ ಅಶರೀರವಾಣಿಯೊಂದು ಮೊಳಗುತ್ತದೆ, ’ಓ ಇಬ್ರಾಹೀಮ್ ನೀವು ಕನಸನ್ನು ಸಾಕ್ಷಾತ್ಕಾರಗೊಳಿಸಿ ತೋರಿಸಿದಿರಿ. ಆ ತ್ಯಾಗದ ಸಂಕೇತವಾಗಿ ಒಂದು ಟಗರನ್ನು ಬಲಿ ನೀಡಿರಿ’ ಎಂದು ದೇವನು ಆದೇಶಿಸುತ್ತಾನೆ. ಅಲ್ಲಿ ಟಗರೊಂದು ಪ್ರತ್ಯಕ್ಷವಾಗುತ್ತದೆ. ಅದನ್ನು ಬಲಿಯರ್ಪಿಸುವ ಮೂಲಕ ಆ ಕನಸು ಸಾಕ್ಷಾತ್ಕಾರವಾಗುತ್ತದೆ. ಅಲ್ಲಿ ನಿಜವಾಗಿ ಬೇಕಾದದ್ದು ಇಸ್ಮಾಈಲರ ರಕ್ತ ಅಥವಾ ಮಾಂಸವಾಗಿರಲಿಲ್ಲ. ಅವರ ದೇವನಿಷ್ಠೆಯಾಗಿತ್ತು. ಇಬ್ರಾಹೀಮರ ಅರ್ಪಣಾ ಮನೋಭಾವ ಅಲ್ಲಿ ಮೇಳೈಸಿತ್ತು. ಪುತ್ರ ಇಸ್ಮಾಈಲರ ಅನುಸರಣೆಯೂ ಅಲ್ಲಿ ಪ್ರಜ್ವಲಿಸಿತ್ತು. ಈ ತ್ಯಾಗ ಬಲಿದಾನದ ಸಂಕೇತವಾಗಿ ವಿಶ್ವದ ಮುಸ್ಲಿಮರೆಲ್ಲರೂ ಬಕ್ರೀದ್​ನಂದು ಸಾಮೂಹಿಕವಾಗಿ ಪ್ರಾಣಿಬಲಿ ನೀಡುತ್ತಾರೆ. ಈ ಬಲಿ ನೀಡಿದ ಜಾನುವಾರಿನ ರಕ್ತವಾಗಲೀ ಮಾಂಸವಾಗಲೀ ಅಲ್ಲಾಹನಿಗೆ ತಲುಪುವುದಿಲ್ಲ. ಆತನ ದೇವನಿಷ್ಠೆ ಮತ್ತು ದೇವಭಕ್ತಿ ಮಾತ್ರ ದೇವನನ್ನು ತಲುಪುತ್ತದೆ ಎಂದು ಪವಿತ್ರ ಕುರ್​ಆನ್ ಸ್ಪಷ್ಟಪಡಿಸುತ್ತದೆ. ನಮ್ಮ ಬದುಕಿನ ಎಲ್ಲಾ ಘಟ್ಟದಲ್ಲಿಯೂ ಮಾದರಿಯಾಗಿ ತ್ಯಾಗಕ್ಕೆ ಸಿದ್ಧರಾಗಬೇಕೆಂಬ ಸಂದೇಶವನ್ನು ಈದುಲ್ ಅಝ್ಹಾ ನೀಡುತ್ತದೆ. ಹಜ್ಜ್ ಸಮಾನತೆಯ ಸಂದೇಶ ಸಾರುತ್ತದೆ. ವಿಶ್ವದೆಲ್ಲೆಡೆಯ ಭಕ್ತಾದಿಗಳು ಕರಿಯ-ಬಿಳಿಯ ಮೇಲೆಮೆ ಕೀಳರಿಮೆಯಿಲ್ಲದೆ ಒಂದೇ ರೀತಿಯ ಶ್ವೇತವಸ್ತ್ರ ಇಹ್ರಾಮ್ ಧರಿಸುತ್ತಾರೆ. ಜೊತೆಯಾಗಿ ಆರಾಧನಾ ನಿರತರಾಗುತ್ತಾರೆ. ಇದು ಕೂಡಾ ಹಬ್ಬದ ಸಂಭ್ರಮದಲ್ಲಿ ಸ್ಮರಿಸಬೇಕಾದ ಸಂದೇಶವಾಗಿದೆ.
(ಲೇಖಕರು ಹಿರಿಯ ಪತ್ರಕರ್ತರು)
ಭೀಕರ ಅಪಘಾತ: ಎರಡೂ ಕಾರುಗಳು ಜಖಂ, ರಾಜಕಾರಣಿಯ ಪುತ್ರ ಸೇರಿ ನಾಲ್ವರಿಗೆ ಗಾಯ, ಮೂವರ ಪರಿಸ್ಥಿತಿ ಗಂಭೀರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 8 =
Remember me
