|ಜಗದ್ಗುರು ಡಾ.ಸ್ವಸ್ತೀ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮೀಜಿ
ಆತ್ಮಸ್ವರೂಪವನ್ನು ಬಲ್ಲವನು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾನೆ. ‘ಪುರುಷನೇ ನೀನೇ ನಿನ್ನ ಮಿತ್ರನಾಗಿದ್ದಿಯೇ. ಬಾಹ್ಯಜಗತ್ತಿನಲ್ಲೇಕೆ ಹುಡುಕುತ್ತಿಯೇ? ತನ್ನ ಆತ್ಮವೇ ನರಕದ ವೈತರಣೀ ನದಿ ಹಾಗೂ ಕೂಟಶಾಲ್ಮಲೀ ವೃಕ್ಷವೂ ಆಗಿದೆ. ತನ್ನ ಆತ್ಮವು ಸ್ವರ್ಗದಲ್ಲಿನ ಕಾಮಧೇನುವೂ ಮತ್ತು ನಂದನವನವೂ ಆಗಿದೆ. ಆತ್ಮದೊಂದಿಗೆ ಯುದ್ಧ ನಡೆಸಬೇಕು. ಕುಕರ್ಮಗಳೆಂಬ ಅರಿಷಡ್ ವೈರಿಗಳನ್ನು ಶತ್ರುಗಳೆಂದು ತಿಳಿದು ರತ್ನತ್ರಯ ಧರ್ಮಪಾಲನೆಯಿಂದ ಅರಿಷಡ್ ವೈರಿಗಳನ್ನು ಸೋಲಿಸಲು ಸಾತ್ವಿಕಾಚರಣೆ ಎಂಬ ಧರ್ಮಯುದ್ಧದ ಸಿದ್ಧತೆ ನಿರಂತರ ನಡೆಸಬೇಕು. ಜಯ ಪ್ರಾಪ್ತಿಸಿಕೊಳ್ಳಬೇಕು. ಜಗತ್ತಿನ ಎಲ್ಲ ಜೀವರೂ ಸದಾಚಾರದಿಂದ ಮೋಕ್ಷಕ್ಕೆ ಅರ್ಹರು’ ಎಂಬ ಶ್ರೇಷ್ಠ ಸಾರ್ವಕಾಲಿಕ ವಿಚಾರಧಾರೆಯನ್ನು ಸವೋದಯ ತೀರ್ಥದಲ್ಲಿ ದಿವ್ಯವಾಣಿ ಮೂಲಕ ಪ್ರತಿಪಾದಿಸಿದವರು ಭಗವಾನ್ ಮಹಾವೀರರು. ಅವರ ಸಂದೇಶವು ಆತ್ಮಕಲ್ಯಾಣ ಬಯಸುವವರ ಪಾಲಿಗೆ ಅಮೃತದ ವಾಣಿಯಾಯಿತು.
ಸರಿಸುಮಾರು 2611 ವರ್ಷಗಳ ಮೊದಲು ಕ್ರಿಸ್ತ ಪೂರ್ವ 599ರ (27-03-598) ಚೈತ್ರ ಶುಕ್ಲ ತ್ರಯೋದಶಿಯಂದು ಭಗವಾನ್ ಮಹಾವೀರ ಸ್ವಾಮಿಯ ಜನನವಾಯಿತು. ತಾಯಿ ತ್ರಿಶಾಲ (ಪ್ರಿಯಕಾರಿಣಿ), ತಂದೆ ಸಿದ್ಧಾರ್ಥನು ಜ್ಞಾತೃ ವಂಶದ ಕ್ಷತ್ರಿಯ ಕಾಶ್ಯಪ ಗೋತ್ರದವನು. ಮಾತಾಪಿತರು ಜಿನಬಾಲಕನ ಜನನವಾದ ಶುಭದಿನವೇ ಬಾಲಕನಿಗೆ ವರ್ಧಮಾನ ಎಂಬ ಶುಭನಾಮಕರಣ ಮಾಡಿದರು. ಭಗವಂತ ಜ್ಞಾತೃ ನಾಗ ಕುಲದಲ್ಲಿ ಜನಿಸಿರುವುದರಿಂದ ಇವರಿಗೆ ಜ್ಞಾತೃಪುತ್ರ ಎನ್ನುವ ಹೆಸರಾಯಿತು.
ಸಾಧನೆಯ ದೀರ್ಘಕಾಲದಲ್ಲಿ ಸಂಜಯಂತ, ವಿಜಯವಂತ ಎಂಬೀರ್ವರು ಮುನಿವರ್ಯರಿದ್ದರು. ಅವರ ಮನದಲ್ಲಿ ಕೆಲವು ಸಮಯದಿಂದ ‘ಪುನರ್​ಜನ್ಮ ಎಂಬುದು ಇದೆಯೋ ಇಲ್ಲವೋ?’ ಎಂಬುದರ ಕುರಿತು ಸಂದೇಹವಿತ್ತು. ಅದಕ್ಕೆ ಸರಿಯಾದ ಉತ್ತರ ಅವರಿಗೆ ಸಿಕ್ಕಿರಲಿಲ್ಲ. ಇದರ ಬಗ್ಗೆ ಯಾರಲ್ಲಿ ಕೇಳುವುದು ಎಂಬ ಗೊಂದಲದಲ್ಲಿದ್ದಾಗ ಅವರಿಗೆ ಬಾಲಕ ವರ್ಧಮಾನರ ನೆನಪು ಬಂತು. ಅವರ ದರ್ಶನ ಮಾಡಿದರು. ತಕ್ಷಣ ಅವರ ಸಂಶಯ ಪರಿಹಾರವಾಯಿತು. ಪುನರ್ಜನ್ಮ ಇರದೇ ಇರುತ್ತಿದ್ದರೆ ಬಾಲಕ ವರ್ಧಮಾನರ ಜನನ ಹೇಗಾಗುತ್ತಿತ್ತು? ಹಾಗಾಗಿ ಪುನರ್ಜನ್ಮ ಸಿದ್ಧಾಂತ ಎಂಬುದು ಸತ್ಯ ಎಂಬ ನಿರ್ಧಾರಕ್ಕೆ ಬಂದರು. ಹಾಗೂ ತಮ್ಮ ಮತಿಗೆ ಸಂತೃಪ್ತಿಯ ಉತ್ತರ ಸಿಕ್ಕಿದ್ದರಿಂದ, ದರ್ಶನ ಮಾತ್ರದಿಂದ ಸಂಶಯ ನಿವಾರಣೆಯಾದ ಸಂತೋಷದಲ್ಲಿ ಬಾಲಕನಿಗೆ ‘ಸನ್ಮತಿ’ ಎಂಬ ಹೆಸರಿಟ್ಟರು.
ಬಾಲ್ಯಾವಸ್ಥೆಯಲ್ಲಿ ಅಪಾರ ಧೈರ್ಯ ಪ್ರದರ್ಶಿಸಿ ಮದವೇರಿದ ಆನೆಯನ್ನು ಶಾಂತಗೊಳಿಸಿದರು ವರ್ಧಮಾನರು ಮತ್ತು ವಿಕಾರ ರೂಪವುಳ್ಳ ಕ್ರೂರಮನಸ್ಸಿನ ಸಂಗಮ ಎನ್ನುವ ದೇವನನ್ನು ಪ್ರಸನ್ನ ಮುದ್ರೆಯಿಂದ ಮಣಿಸಿದರು. ಶತ್ರುಗಳನ್ನು ಅರೆಕ್ಷಣದಲ್ಲಿ ಶರಣಾಗುವಂತೆ ಮಾಡುತ್ತಿದ್ದ ಪರಿಯಿಂದಾಗಿ ಜನಪದ ವಿದ್ವಾಂಸರ ಬಾಯಿಯಲ್ಲಿ ಅವರಿಗೆ ವಡ್ಡಮಾನ ವೀರಾಧಿವೀರ ಮಹಾವೀರ ಎಂಬ ಹೆಸರು ಜನಪ್ರಿಯವಾಯಿತು. ಇವರ ಸಂದೇಶದಿಂದ ಪ್ರಭಾವಿತರಾದವರಲ್ಲಿ ಗೌತಮ ಬುದ್ಧ, ರಾಜ ಶ್ರೇಣಿಕ, ಪರ್ಷಿಯಾದ ದೊರೆ ದಾರಶಾಹ, ಹೇಮಾಂಗ ದೇಶದ (ಈಗಿನ ಮೈಸೂರು) ರಾಜ ಜೀವಂಧರ, ಸಿಂಧೂ ದೇಶದ ರಾಜ ಉದಯನ್, ಅಲೆಕ್ಸಾಂಡರ್, ಗಾಂಧೀಜಿಯಂಥ ಶ್ರೇಷ್ಠರಿದ್ದಾರೆ. ಮಹಾವೀರರ ವಿಹಾರದಿಂದ ಮಗಧ ದೇಶದ ಹೆಸರು ಬಿಹಾರ ಎಂದಾಯಿತು. ಭಗವಾನ್ ಮಹಾವೀರರ ಬಾಲ್ಯಕಾಲದಲ್ಲಿ ಭಾರತದಾದ್ಯಂತ ಜನರು ಅನಕ್ಷರತೆ, ಅಜ್ಞಾನ, ಅನಾಗರಿಕತೆ, ಬಡತನದಿಂದ ನಲುಗಿ ಹೋಗಿದ್ದರು. ಕ್ಷತ್ರಿಯರು, ಬ್ರಾಹ್ಮಣರು, ವೈಶ್ಯರು ಶೂದ್ರರೆನ್ನುವ ವರ್ಣವ್ಯವಸ್ಧೆಯಲ್ಲಿ ಹಲವು ಕಡೆ ಪರಸ್ಪರ ಸಮನ್ವಯತೆ ಕೊರತೆ ಎದ್ದು ಕಾಣುತ್ತಿತ್ತು. ಇಂಥ ಹೊತ್ತಲ್ಲಿ, ‘ಸತ್ಕರ್ಮದಿಂದ ಸರ್ವ ಜೀವರಿಗೂ ಸದ್ಗತಿ, ದುಷ್ಕರ್ಮದಿಂದ ದುರ್ಗತಿ’ ಎಂಬ ವಿವೇಕವಾಣಿಯನ್ನು ಹಾಗೂ ನಮ್ಮ ದೇಹದಲ್ಲಿ ಆತ್ಮಶಕ್ತಿ ಇದೆ. ಅದುವೇ ಜ್ಞಾನದರ್ಶನ. ಅದು ಹೇಗೆಂದರೆ, ಹಾಲಿನಲ್ಲಿ ತುಪ್ಪ, ಎಳ್ಳಿನಲ್ಲಿ ಎಣ್ಣೆ, ಕಲ್ಲಿನಲ್ಲಿ ಬಂಗಾರ, ಕಟ್ಟಿಗೆಯಲ್ಲಿ ಬೆಂಕಿ ಇರುವಂತೆ ದೇಹದಲ್ಲಿ ಚೈತನ್ಯ ಆತ್ಮನಿದ್ದಾನೆ. ಅದು ಅಜರಾಮರವಾದುದು. ಅದಕ್ಕೆ ಸಾವಿಲ್ಲ. ನಾಶವಿಲ್ಲ. ತನ್ನ ಆಯುಷ್ಯ ಮುಗಿದಾಗ ದೇಹ ನಾಶವಾಗುತ್ತದೆ. ಆದರೆ ಆತ್ಮ ಈ ದೇಹ ಬಿಟ್ಟು ಇನ್ನೊಂದು ದೇಹವನ್ನು ಪ್ರವೇಶ ಮಾಡುತ್ತದೆ. ಜೀವ, ಪುದ್ಗಲ, ಧರ್ಮ, ಅಧರ್ಮ, ಆಕಾಶ, ಕಾಲಗಳೆಂಬ ಆರು ದ್ರವ್ಯಗಳು ಅನಾದಿನಿಧನ. ಈ ಜಗತ್ತನ್ನು ಯಾರೂ ಸೃಷ್ಟಿಸಿಲ್ಲ. ನಾಶಮಾಡುವುದೂ ಇಲ, ಇವು ಸ್ವಭಾವ ಸಿದ್ಧವಾದುದವುಗಳು’ ಎಂಬ ಪ್ರಾಚೀನ ವೈಜ್ಞಾನಿಕ ಆರ್ಷಸತ್ಯವನ್ನು ಮಹಾವೀರರು ತಿಳಿಸಿದರು.
ಇಲ್ಲಿ ಒಂದು ಘಟನೆ ನೆನಪಿಗೆ ಬರುತ್ತದೆ. ಮಹಾವೀರರ ಪೂರ್ವದ ಮೂವತ್ತಮೂರು ಭವಗಳ ಮೊದಲು ಪ್ರಥಮ ತೀರ್ಥಂಕರ ಭಗವಾನ್ ಆದಿನಾಥರ ಪೂರ್ವಾಶ್ರಮದ ಮೊಮ್ಮಗ ಮರೀಚಿ ಎಂಬ ನಾಮಧೇಯದಿಂದ ಚಿರಪರಿಚಿತರಾಗಿದ್ದರು. ಸಮಯ ಕಳೆದಂತೆ ಸಂನ್ಯಾಸದೀಕ್ಷೆಯನ್ನೂ ತೆಗೆದುಕೊಂಡರು. ಆದರೆ ಅಜ್ಜ ತೀರ್ಥಂಕರರಾಗಿರುವರು ಎಂಬ ಮಾನ ಕಷಾಯದಿಂದ ಸ್ವೇಚ್ಛೆಯ ಮಿಥ್ಯಾತಪಸ್ಸನ್ನು ಆಚರಿಸಿದ್ದರಿಂದ ನಾನಾ ಪರ್ಯಾಯಗಳಲ್ಲಿ ಸಿಂಹವಾಗಿ, ಸಾಮಾನ್ಯಜೀವಿಯಾಗಿ, ತಿರ್ಯಂಚ ಪ್ರಾಣಿಯಾಗಿ, ಭವಗಳನ್ನು ದಾಟಿ, ತನ್ನಲ್ಲಿ ಸದ್ಭಾವ, ತಪಸ್ಸು ಹೆಚ್ಚಿದಂತೆ ಉತ್ತಮ ಕುಲಗೋತ್ರದಲ್ಲಿ ಹುಟ್ಟಿ ವರ್ಧಮಾನರಾಗಿ ವೈಶಾಲಿಯ ಅರಮನೆಯ ಎಲ್ಲ ಸುಖಭೋಗಗಳನ್ನು ತೊರೆದು ಸಂನ್ಯಾಸಿಯಾದರು. ಸಮಯ ಸರಿದಂತೆ ಕೇವಲ ಜ್ಞಾನವನ್ನೂ ಪಡೆದರು. ಆದರೆ ಅವರ ಜ್ಞಾನವನ್ನು ಪ್ರಶ್ನಿಸಿ ಸರಳರೂಪದಲ್ಲಿ ತಿಳಿಸಬಲ್ಲ ಸುಜ್ಞಾನಿಯ ನಿರೀಕ್ಷೆಯಲ್ಲಿತ್ತು ಕಾಲ.
‘ನೀನು ಬದುಕುವುದು ನಿನ್ನ ಹಕ್ಕು. ಆದರೆ ಇತರರ ಬದುಕನ್ನು ಕಿತ್ತುಕೊಂಡು ಅವರ ಶಾಂತಿ, ನೆಮ್ಮದಿಯನ್ನು ಹಾಳುಮಾಡುವ ಅಧಿಕಾರ ನಿನಗಿಲ್ಲ’ ಎಂಬುದು ಮಹಾವೀರರ ಅತಿದೊಡ್ಡ ಸಂದೇಶ. ಚೈತನ್ಯರೂಪಿಯಾದ ನಿತ್ಯಾನಂದಮಯವಾದ ಜೀವ ಅಜ್ಞಾನದಿಂದ ತನ್ನ ನಿಜವನ್ನು ತಿಳಿಯದೆ ತನ್ನ ಸಾಮರ್ಥ್ಯವನ್ನು ಅರಿತು ಗುರುತಿಸದೆ ದುಃಖಿಯಾಗಿದ್ದಾನೆ. ಕ್ಷಣಿಕವಾದ ಮೋಹ-ಮಾಯೆಗಳ ಸಂಕ್ಷೇಪದಿಂದ ಭ್ರಮಾಧೀನನಾಗಿ ಹುಟ್ಟು-ಸಾವುಗಳ ತಿರುಗಣೆಯಲ್ಲಿ ಬಿದ್ದಿದ್ದಾನೆ. ಒಮ್ಮೆ ತನ್ನತನದ ಅರಿವು ಅವನಿಗಾದರೆ ಸಾಕು. ಶಾಶ್ವತ ಸುಖದ ಒಡೆತನ ಅವನಿಗೆ ದೊರೆಯುತ್ತದೆ’ ಎಂಬುದೇ ಮಹಾವೀರರ ಸಂದೇಶ.
ತನ್ನಲ್ಲಿರುವ ಸದ್ಗುಣಗಳನ್ನು ಹಾಗೂ ತಾನು ಆಚರಿಸಬೇಕಾಗಿರುವ ಪಂಚ ಅಣುವ್ರತ ಅಭಿವೃದ್ಧಿ ಪಡಿಸುವುದಕ್ಕೆ ಪೂರಕವಾದ ವ್ರತಗಳು ಮೂರು ಗುಣವ್ರತಗಳು. ಹಾಗೂ ನಾಲ್ಕುಶಿಕ್ಷಾವ್ರತಗಳ ಶಾಸ್ತ್ರಜ್ಞಾನದ ಅಭ್ಯಾಸ ಮುಂದಿನ ವ್ರತಪಾಲನೆಗೆ ಬೇಕಾದ ಶಿಕ್ಷಣವು ಶ್ರಾವಕ ವ್ರತದ ದೃಢವೂ ಆತ್ಮೋನ್ನತಿಯ ಚಾರಿತ್ರ್ಯಶುದ್ಧಿಯೂ ಆಗುವುದಕ್ಕೆ ಬೇಕಾದ ಸಾಧನೆಗೆ ಶಿಕ್ಷಾವ್ರತ ಎನ್ನುವರು. ಏಳು ತತ್ತ್ವಗಳ ದೃಢವಾದ ನಂಬಿಕೆ, ಜೀವ, ಪ್ರದಲ, ಅಸ್ರವ ಬಂಧ ಸಂವರ, ನಿರ್ಜರ, ಮೋಕ್ಷ ಇವು ಏಳು ತತ್ತ್ವ ಸೇರಿದಂತೆ ಪಾಪ ಮತ್ತು ಪುಣ್ಯ ಸೇರಿ ಒಂಬತ್ತು ಪದಾರ್ಥ. ಮನಸ್ಸು ವಚನ ಕಾಯದ ಮೂಲಕ ಪ್ರಮಾದಗಳು ಬರದಂತೆ ಸದಾಚಾರ ಸಂಪನ್ನನಾದವನೂ ಕರ್ಮದ ಬಿಡುಗಡೆಯನ್ನು ಮಾಡುವವನೆಂಬ ದಿವ್ಯಸಂದೇಶ ನೀಡಿದ ದೇವಾದಿ ದೇವ ಸಕಲ ಗುಣವಂತ ಭಗವಾನ್ ಮಹಾವೀರರು.
(ಲೇಖಕರು ಮೂಡುಬಿದಿರೆ ಜೈನ ಮಠದ ಮುಖ್ಯಸ್ಥರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + four =
Remember me
