|ಸದ್ಯೋಜಾತ ಭಟ್ಟ
ವೇದಗಳಲ್ಲಿ ದೇವತೆಯ ಸ್ಥಾನ ಪಡೆದ ಕೆಲವೇ ಕೆಲವರಲ್ಲಿ ಬೃಹಸ್ಪತಿಯೂ ಒಬ್ಬ. ವಿಶ್ವದ ಪಾಲಕನ ಸ್ಥಾನವನ್ನು ಈತನಿಗೆ ಕೊಟ್ಟಿರುವುದು ಸೂಕ್ತಗಳಿಂದ ತಿಳಿದು ಬರುತ್ತದೆ. ಜಗತ್ತಿನ ಸಂರಕ್ಷಕನೂ ಹಾಗೂ ಪಾಲಕನೂ ಆಗಿರುವವನೇ ಬೃಹಸ್ಪತಿ ಎಂದು ಯಾಸ್ಕ ಮಹರ್ಷಿಗಳು ಹೇಳಿದ್ದಾರೆ (‘ಬೃಹತಃ ಪಾತಾವಾ ಪಾಲಯಿತಾ ವಾ’). ಯಜ್ಞ ಕರ್ಮಗಳಿಗೆ ಪ್ರಧಾನನೂ ಮಳೆಯನ್ನು ಸುರಿಸುವವನೂ ಆದುದರಿಂದ ಇವನನ್ನು ಬೃಹತಃ ಎನ್ನುವುದಾಗಿ ವಿವರಿಸುತ್ತಾರೆ. ಶಂತನು ಎನ್ನುವ ರಾಜನೊಬ್ಬ ತನ್ನ ರಾಜ್ಯಕ್ಕೆ ಕ್ಷಾಮ ಎದುರಾದಾಗ ಅದರ ಪರಿಹಾರಕ್ಕಾಗಿ ದೇವಾಪಿಯ ನೇತೃತ್ವದಲ್ಲಿ ವೃಷ್ಟಿವರ್ಷಣ ಸೂಕ್ತದಿಂದ ಯಜ್ಞ ಮಾಡುತ್ತಾನೆ. ವೃಷ್ಟಿ್ಟರ್ಷಣ ಯಾಗದ ಬ್ರಹ್ಮ ಸ್ಥಾನದ ಪುರೋಹಿತನಾಗಿದ್ದವನು ಬೃಹಸ್ಪತಿ. ಇದೇ ದೇವಾಪಿಯು ಬೃಹಸ್ಪತಿ ಮತ್ತು ಮಿತ್ರನನ್ನು ಸ್ತುತಿಸುವ ಬೃಹಸ್ಪತೇ ಪ್ರತಿ ಎನ್ನುವ ಋಗ್ವೇದದ 10:98ನೇ ಸೂಕ್ತದಲ್ಲಿನ ‘ಯದ್ದೇವಾಪಿಃ ಶಂತನವೇ ಪುರೋಹಿತೋ… ಬೃಹಸ್ಪತಿರ್ವಾಚಮಸ್ಮಾ ಅಯಚ್ಛತ್’ ಎನ್ನುವ ಋಕ್ಕಿನಲ್ಲಿ ಬ್ರಹ್ಮನೆನ್ನುವ ಪುರೋಹಿತನಾಗಿ ವಾಕ್ಯರೂಪವಾದ ಮಂತ್ರವನ್ನು ಉಪದೇಶಿಸಿದ ಮತ್ತು ಈ ಮಂತ್ರದಿಂದ ಯಜಮಾನನ ಅಪೇಕ್ಷೆಯಂತೆ ಯಥೇಷ್ಟವಾದ ಮಳೆ ಸುರಿಯಿತು ಎಂದು ತಿಳಿದುಬರುತ್ತದೆ. ಇದು ಈ ದಿನದ ಬೃಹಸ್ಪತಿ ಜಯಂತಿಗೆ ಪೂರಕ.
ವೇದಗಳಲ್ಲಿಯೇ ವಿಶೇಷ ಸ್ಥಾನ ಪಡೆದ ಬೃಹಸ್ಪತಿಯು ಋಗ್ವೇದ ಒಂದರಲ್ಲಿಯೇ ಹನ್ನೊಂದು ಸೂಕ್ತಗಳಲ್ಲಿ ಸ್ತುತಿಸಲ್ಪಟ್ಟಿದ್ದಾನೆ. ಋಗ್ವೇದ 4ನೇ ಮಂಡಲ ಮತ್ತು 7ನೇ ಮಂಡಲದ ಒಂದೊಂದು ಸೂಕ್ತದಲ್ಲಿ ಇಂದ್ರನ ಜತೆಯಾಗಿ ಸ್ತುತಿಸಲ್ಪಟ್ಟು ದ್ವಂದ್ವದೇವತೆ ಎನ್ನಿಸಿಕೊಂಡಿದ್ದಾನೆ. ಇನ್ನು ಬೃಹಸ್ಪತಿ ಎನ್ನುವ ಶಬ್ದವೇ ಋಗ್ವೇದದಲ್ಲಿ ಸುಮಾರು 120 ಸಲ ಹೇಳಲ್ಪಟ್ಟಿದೆ. ವೇದದಲ್ಲಿ ಬರುವ ದೇವತೆಗಳೆಲ್ಲ ಪ್ರಕೃತಿ ಮತ್ತು ಪ್ರಾಕೃತಿಕ ಶಕ್ತಿಯ ರೂಪಗಳಾಗಿದ್ದರೆ, ಈ ಬೃಹಸ್ಪತಿ ಮಾತ್ರ ಮಾನವನ ಧಾರ್ವಿುಕ ಮತ್ತು ನೈತಿಕ ಜೀವನಕ್ಕೆ ಸಂಬಂಧಿಸಿದವನು. ಸ್ತುತಿ, ಸ್ತೋತ್ರ ಮತ್ತು ಪ್ರಾರ್ಥನೆಗೆ ರಕ್ಷಕನಾದ ಈ ದೇವತೆ, ದೇವತೆಗಳ ಮನಸ್ಸು ಮತ್ತು ಸಂಕಲ್ಪ ಶಕ್ತಿಗಳ ಮೇಲೂ ಪ್ರಭಾವ ಬೀರುವಷ್ಟು ಪ್ರಬಲ ಎನ್ನುವುದು ಕೆಲವು ಸೂಕ್ತಗಳಿಂದ ತಿಳಿದುಬರುತ್ತದೆ. ವೃಷ್ಟಿಕಾಮ ಸೂಕ್ತದಿಂದ ಈತನು ಪ್ರಕೃತಿಯ ಮೇಲಿನ ಪರಸ್ಪರ ಸಂಬಂಧವನ್ನು ತಿಳಿಯುವುದು ಒಂದಾದರೆ, ಇನ್ನೊಂದು ಸರಮೆ ಮತ್ತು ಪಣಿಗಳ ಸಂವಾದ ಸಂದರ್ಭದ್ದು. ಇಲ್ಲಿ ಬೃಹಸ್ಪತಿ ಅದೆಷ್ಟು ಮಹತ್ವದವನು ಎನ್ನುವುದು ತಿಳಿಯುತ್ತದೆ.
‘ಪಣಿ’ ಎನ್ನುವ ಶಬ್ದಕ್ಕೆ ವ್ಯಾಪಾರಿ/ವಣಿಕ ಎನ್ನುವ ಅರ್ಥವಿದ್ದರೂ ಇಲ್ಲಿ ಯಜ್ಞ ಯಾಗಾದಿಗಳನ್ನು ಮಾಡದೇ ನಿತ್ಯ ನೈಮಿತ್ತಿಕ ಕರ್ಮಗಳಿಂದ ದೂರವಾಗಿ ದಾನಗಳನ್ನೂ ಮಾಡದೇ ಕೇವಲ ಲೋಭ ಸಹಿತವಾದ ಜೀವನವನ್ನು ಮಾಡುತ್ತಾ ಇರುವವರನ್ನು ಪಣಿಗಳು ಎನ್ನಲಾಗಿದೆ. ಪಣಿಗಳು ಪ್ರಮುಖವಾಗಿ ಗುಹೆಯಲ್ಲಿ ಜೀವಿಸುತ್ತಿದ್ದರು. ರಸಾ ಎನ್ನುವ ನದಿಯ ಇನ್ನೊಂದು ದಡದಲ್ಲಿ ಇವರ ವಾಸ. ಒಮ್ಮೆ ದೇವತೆಗಳ ಗೋವುಗಳನ್ನು ಕದ್ದು ರಸಾ ನದಿಯನ್ನು ದಾಟಿ ಗುಹೆಯಲ್ಲಿ ಅಡಗಿಸಿಟ್ಟಿದ್ದರು. ಅದನ್ನು ಹುಡುಕುತ್ತಾ ಸರಮೆ ಎನ್ನುವ ನಾಯಿ ಹೋಗುತ್ತದೆ. ಅದು ನದಿಯ ಸಮೀಪಕ್ಕೆ ಹೋಗುವಾಗ ಆ ನದಿ ಉಕ್ಕಿ ಹರಿಯುತ್ತಿತ್ತು. ಸರಮೆ ಇಂದ್ರನನ್ನೇ ಪ್ರಾರ್ಥಿಸುತ್ತದೆ ‘ಈ ನದಿಯನ್ನು ದಾಟಲು ನನಗೆ ಸಾಮರ್ಥ್ಯ ಕೊಡು’ ಎಂದು. ಆಗ ಇಂದ್ರ ನದಿಯ ವೇಗ ಕಡಿಮೆಗೊಳಿಸಿ ನೀರನ್ನು ಸರಿಸಿ ಸರಮೆ ದಾಟಲು ಅನುವು
ಮಾಡಿಕೊಡುತ್ತಾನೆ. ಮುಂದೆ ಉಕ್ಕಿ ಹರಿಯುತ್ತಿರುವ ನದಿಯನ್ನು ಸರಮಾ ದಾಟಿ ಬಂದಿರುವುದೇ ಪಣಿಗಳಿಗೆ ಆಶ್ಚರ್ಯವಾಗುತ್ತದೆ. ಪಣಿ ಮತ್ತು ಸರಮೆಯಲ್ಲಿ ಸಂಭಾಷಣೆೆ ನಡೆಯುತ್ತದೆ. ಬಹಳ ರೋಚಕ ಸನ್ನಿವೇಶಗಳೇ ನಡೆಯುತ್ತವೆ.
‘ಏತವಾ ಅಸ್ತು ಪಂಥಾ ಬೃಹಸ್ಪತಿರ್ವ ಉಭಯಾನ ಮೃಳಾತ್’ ಎನ್ನುವ 10:108ನೇ ಸೂಕ್ತದ ಈ ಋಕ್ಕು ಪಣಿಗಳು ಯಾರು ಎನ್ನುವುದನ್ನು ತಿಳಿಸಿಕೊಡುತ್ತದೆ. ಈ ಋಕ್ಕನ್ನು ಸರಮೆ ಪಣಿಗಳನ್ನು ಉದ್ದೇಶಿಸಿ ಹೇಳುವುದು, ‘ಎಲೈ ಪಣಿಗಳೆ, ನೀವು ಈಗ ನನ್ನೊಡನೆ ಆಡುತ್ತಿರುವ ಮಾತುಗಳು ನಿಜವಾದ ಸೈನಿಕನೊಬ್ಬ ಹೇಳುತ್ತಿರುವ ಮಾತು ಅನ್ನಿಸುತ್ತಿಲ್ಲ. ನಿಮ್ಮ ಶರೀರಗಳು ಅಂತಹ ದಷ್ಟಪುಷ್ಟವಾಗಿಲ್ಲ. ಬಾಣಗಳು ನಿಮ್ಮ ದೇಹವನ್ನು ಛಿದ್ರಗೊಳಿಸಬಲ್ಲವು, ಇನ್ನು ನಿಮ್ಮ ಇಡೀ ದೇಹ ಪಾಪಪೂರಿತವಾಗಿದೆ, ನಿಮ್ಮ ಮಾತು ಮತ್ತು ನೀವು ನಡೆದುಕೊಳ್ಳುವ ರೀತಿಯನ್ನು ಬೃಹಸ್ಪತಿ ಸಹಿಸಿಕೊಳ್ಳುವುದಿಲ್ಲ’ ಎಂದು ಹೇಳುವ ನುಡಿಯಲ್ಲಿ ಬೃಹಸ್ಪತಿಯನ್ನು ದೈವತ್ವಕ್ಕೆ ಸಮೀಕರಿಸಿ ಆತನ ಪ್ರಾಬಲ್ಯವನ್ನು ತಿಳಿಸಲಾಗಿದೆ.
ಬೃಹಸ್ಪತಿಯ ಜನನ, ದ್ಯಾವಾ ಪೃಥಿವಿಯಿಂದ ಎನ್ನುವುದನ್ನು ಗಮನಿಸಿದರೆ ಭೂಮಿ ಮತ್ತು ಆಕಾಶಗಳಿಗೆ ನೇರ ಸಂಬಂಧವನ್ನು ತಿಳಿಸಿದಂತೆ ಇದೆ. ಋತ್ವಿಜ ವರ್ಗಕ್ಕೆ ಈತ ಮಾರ್ಗದರ್ಶಕನೂ ಅಗ್ರಗಣ್ಯನೂ ಆಗಿದ್ದಾನೆ. ಮಂತ್ರಗಳ ಶಕ್ತಿಯಿಂದಲೇ ತನ್ನ ಕಾರ್ಯಸಾಧನೆ ಮಾಡಿಕೊಳ್ಳುವವನು. ಇನ್ನು ಋಗ್ವೇದದ 4ನೇ ಮಂಡಲದ 50ನೇ ಸೂಕ್ತ ವಾಮದೇವ ಮಹರ್ಷಿಗಳದ್ದು. ಅಲ್ಲಿ ಅವರು ಮೊದಲನೇ ಋಕ್ಕಿನಲ್ಲಿ ಹೇಳುವ ವಿಷಯದ ಗಂಭೀರತೆ ಆಶ್ಚರ್ಯ ಹುಟ್ಟಿಸುತ್ತದೆ. ಈ ಬೃಹಸ್ಪತಿ ಎನ್ನುವವನೇ ಭೂಮಿಗೆ ಒಂದು ಗ್ರಹದಂತೆ ಕಾರ್ಯ ನಿರ್ವಹಿಸುತ್ತಾನೆೆ ಎನ್ನುತ್ತಾರೆ. ಈ ಭೂಮಿಯ ಹತ್ತು ದಿಕ್ಕುಗಳನ್ನು ಬೃಹಸ್ಪತಿಯು ಸ್ವಸಾಮರ್ಥ್ಯದಿಂದ ನಿಲ್ಲಿಸಿದವನು ಎನ್ನುವ ಉಲ್ಲೇಖದಿಂದ ಆಶ್ಚರ್ಯ ಹುಟ್ಟುತ್ತದೆ.
ಗುರು ಒಂದು ಗ್ರಹವಂತೂ ಹೌದು. ಬೃಹಸ್ಪತಿಗೆ ಏಳು ಬಣ್ಣಗಳಿಂದ ಕೂಡಿದ ಕಿರಣಗಳಿವೆ ಎನ್ನುವುದಾಗಿ ಸಹ ಹೇಳಿದೆ. ಇನ್ನು ಋಗ್ವೇದ 10:97ರಲ್ಲಿ ‘ಯಾ ಫಲಿನೀರ್ಯಾ ಅಫಲಾ ಅಪುಷ್ಪಾ’ ಎನ್ನುತ್ತಾ ಬೃಹಸ್ಪತಿಗೂ ಸಸ್ಯಗಳಿಗೂ ಇರುವ ಸಂಬಂಧವನ್ನು ಸೂಚಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರವಂತೂ ಚಂದ್ರನಿಗೂ ಗುರುವಿಗೂ ಮಹತ್ವದ ಸ್ಥಾನ ಕೊಟ್ಟು ಯೋಗಕಾರಕರನ್ನಾಗಿಸಿದೆ. ಇವೆಲ್ಲವೂ ಬೃಹಸ್ಪತಿಯ ಕುರಿತಾಗಿದ್ದರೆ, ವೃಷ್ಟಿಕಾಮ ಸೂಕ್ತದ ಕುರಿತಾಗಿ ನೋಡುವುದಾದರೆ, ಭೂಮಿಗೆ ಮಳೆ ಇಲ್ಲದಿದ್ದರೆ ಯಾವ ಕೆಲಸವೂ ಆಗಲಿಕ್ಕಿಲ್ಲ. ಭೂಮಿ ಅವಲಂಬಿಸಿರುವುದೇ ಆಕಾಶವನ್ನು. ಹಾಗಿರುವಾಗ ಮಳೆ ಇಲ್ಲದಿದ್ದರೆ ಬೆಳೆ ಅಸಾಧ್ಯ. ಇಂತಹ ಒಂದು ಅಂಶವನ್ನು ಕಟ್ಟಿಕೊಡುವುದು ದೇವಾಪಿ ಶಂತನುವಿನ ಕಥೆ. ಬೃಹಸ್ಪತಿಯಿಂದ ಮಳೆಯ ಅನುಕೂಲ ಒದಗಿ ಬರಲಿ, ವೈಶಾಖದ ಬಿರುಬಿಸಿಲಿಗೆ ತಂಪನ್ನು ಒದಗಿಸಿ ಮುಂದೆ ಬರುವ ಮುಂಗಾರಿನ ಆಷಾಢವನ್ನು ಭೂಮಿ ಹಸನಾಗಿಸಿ ಹಸಿರು ಕಂಗೊಳಿಸಲಿ ಎನ್ನುವ ಆಶಯವೇ ಈ ಬೃಹಸ್ಪತಿಯ ಜಯಂತಿಗಿರುವ ಮಹತ್ವ. ಅದು ವೈಶಾಖದ ಶುಕ್ಲ ಏಕಾದಶಿಯಂದು ಬರುತ್ತದೆ. ಅಂದಿನಿಂದ ಹದಿನೈದು ದಿನಗಳ ಅಂತರದಲ್ಲಿ ಬೇಸಾಯದ ಆರಂಭ. ಹೀಗೆ ಬೃಹಸ್ಪತಿ ಎಲ್ಲರಿಗೂ ಎಲ್ಲ ಕಾರ್ಯಕ್ಕೂ ಗುರುವಾಗಿ ಗೋಚರಿಸುತ್ತಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
