|ಸ್ವಾಮಿ ಕೃತಾತ್ಮಾನಂದ
ಆಚಾರ್ಯತ್ರಯರ ನಂತರ ಹಾಗೂ ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ನಂತರ ದೇಶಾದ್ಯಂತ ಯಾಕೆ, ವಿಶ್ವಾದ್ಯಂತ ಗೀತೋಪನಿಷತ್ತುಗಳ ಅವಿಚ್ಛಿನ್ನ ಧಾರೆಯನ್ನು ಹರಿಸುತ್ತಾ ಸನಾತನಧರ್ಮ ಧ್ವಜವನ್ನು ಎತ್ತಿ ಹಿಡಿದಿರುವ ಕೀರ್ತಿ ಸ್ವಾಮಿ ಚಿನ್ಮಯಾನಂದರದ್ದಾಗಿದೆ.
1916ನೇ ಇಸವಿ ರಾಮನವಮಿಯಂದು ಕೇರಳದ ತ್ರಿಚೂರಿನಲ್ಲಿ ಆವಿರ್ಭವಿಸಿದ ಈ ಕಿಡಿ (ಬಾಲಕೃಷ್ಣ ಮೆನನ್) ಹಿಮಾಲಯ ಮಹಾರಣ್ಯ ಶ್ರೇಣಿಯಲ್ಲಿ ಉದ್ದೀಪನಗೊಂಡು ಇಂದಿಗೆ ಇಡೀ ರಾಷ್ಟ್ರಕ್ಕೆ ದಾರಿದೀಪವಾಗಿದೆ. ಇವರ ವಿದ್ಯಾಗುರು ಶ್ರೀ ತಪೋವನ ಮಹಾರಾಜರು ಘನಗಂಭೀರವಾದ ಹಿಮಾಚಲವಾದರೆ ಇವರು ಹರ ಹರ ಹರ ಎಂದು ಭೋರ್ಗರೆಯುತ್ತಾ ನಿರರ್ಗಳವಾಗಿ ಹರಿಯುವ ಪುಣ್ಯನದಿ ಗಂಗೆ. ಗುರುಗಳು ತಪೋಜೀವಿಯಾಗಿ ಬಾಳಿದ್ದರೆ ಇವರು ಕರ್ಮಯೋಗಿಯಾಗಿ ಜ್ಞಾನಗಂಗೆಯನ್ನು ಹರಿಸುತ್ತಿದ್ದರು.
ಸನಾತನ ಧರ್ಮದ ಪುನರುತ್ಥಾನ; ದೇಶಾದ್ಯಂತದ ಜನತೆಗೆ ಭಾರತೀಯ ದಿವ್ಯಸಂಸ್ಕೃತಿಯ ಪರಿಚಯವನ್ನು ಮಾಡಿಸುವುದೇ ಇವರ ಜೀವನದ ಉಸಿರು. ಧರ್ಮಕ್ಕೂ-ನಿತ್ಯಜೀವನಕ್ಕೂ ಏನೂ ಸಂಬಂಧವಿಲ್ಲ ಎಂದು ನಂಬಿರುವ ಜನರ ಮೌಢ್ಯವನ್ನು ದೂರೀಕರಿಸಿ ಗೀತೋಪನಿಷತ್ತುಗಳಲ್ಲಿ ಅಡಗಿರುವ ತತ್ತ್ವಗಳು ನಿತ್ಯ ಜೀವನಕ್ಕೆ ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಂತ ಉಪಯುಕ್ತವಾದುವು ಎಂಬುದನ್ನು ಸ್ಪುಟಗೊಳಿಸಿದರು. ಅವರ ದಿವ್ಯವಾಣಿ ವಿಶ್ವಾದ್ಯಂತದ ಜನರನ್ನು ಹಿಂದೂ ಧರ್ಮದ ಕಡೆಗೆ ಆಕರ್ಷಿಸಿದೆ.
ಲೋಕಸಂಗ್ರಹದಲ್ಲೆ ಜೀವನದ ಸಾರ್ಥಕತೆ ಕಂಡುಕೊಂಡ ಅವರು ಈ ಕಾರ್ಯಸಾಧನೆಗಾಗಿ ಚಿನ್ಮಯ ಮಿಷನ್ ಎಂಬ ಸಂಸ್ಥೆಯನ್ನು ಆರಂಭಿಸಿದರು. ಪ್ರತಿಯೊಂದು ಕ್ಷಣವೂ ಅವರು ಕ್ರಿಯಾತ್ಮಕವಾಗಿ ಕೆಲಸದಲ್ಲಿ ತೊಡಗಿರುತ್ತಿದ್ದರು. ಆದರೆ, ಯಾವುದೇ ರೀತಿಯ ಕರ್ಮಲೇಪವಿಲ್ಲ. ಹೊರಗಿಂದ ನೋಡುವವರಿಗೆ ಅವರು ಸಾಕಷ್ಟು ಸಂಸಾರವನ್ನು ಕಟ್ಟಿಕೊಂಡ ಹಾಗೆ ಕಾಣುತ್ತದೆ. ಆದರೆ, ಯಾವುದೇ ರೀತಿಯ ಸಂಸಾರದ ಭಾರ ಅವರ ಮನಸ್ಸಿನಲ್ಲಿ ಲವಲೇಶವೂ ಇಲ್ಲ. ಅವರು ಎಲ್ಲಾ ಸಂದರ್ಭದಲ್ಲೂ ನಿತ್ಯ ಸಂನ್ಯಾಸಿ! ಹೊರಗಿನ ಕೆಲಸಗಳಲ್ಲಿ ಕಾರ್ಯಾಸಕ್ತಿ, ಕಾರ್ಯತತ್ಪರತೆ, ಮೇಲ್ವಿಚಾರಣೆ, ಮಾರ್ಗದರ್ಶನ ಮತ್ತು ಕಾರ್ಯಸಿದ್ಧಿಗೆ ಬೇಕಾದ ಹಠ ಇವೆಲ್ಲವುಗಳು ಇದ್ದರೂ ಅಂತಃಕರಣದಲ್ಲಿ ಸದಾ ಸರ್ವದಾ ಉದಾಸೀನ.
ಭಗವದ್ಗೀತೆಯ ಎರಡು, ಐದು, ಹನ್ನೆರಡು ಮತ್ತು ಹದಿನಾಲ್ಕನೇ ಅಧ್ಯಾಯಗಳಲ್ಲಿ ವಿವರಿಸಿರುವ ಜೀವನ್ಮುಕ್ತನ ಲಕ್ಷಣಗಳೆಲ್ಲವೂ ಇವರಲ್ಲಿ ಎದ್ದು ಕಾಣುತ್ತವೆ. ಶರೀರದಲ್ಲಿ, ಮೊಣಕಾಲು ನೋವು ಸಿಹಿಮೂತ್ರ ಬಾಧೆ – ಎರಡು ಸಾರಿ ಹೃದಯಾಘಾತದಿಂದ ತತ್ತರಿಸಿದ ಎದೆಗುಂಡಿಗೆ – ಇವೇ ಮೊದಲಾದ ವ್ಯಾಧಿಗಳಿದ್ದರೂ ಅವುಗಳನ್ನು ಲೆಕ್ಕಿಸದೆ ಸಮಾಜದ ಏಳಿಗೆಗಾಗಿ, ರಾಷ್ಟ್ರದ ಉನ್ನತಿಗಾಗಿ ಜೀವನವನ್ನು ಸವೆಸಿದರು.
ದೇಶದಲ್ಲಿ ತನ್ನ ನಂತರವೂ ಧರ್ಮಪ್ರಚಾರದ ಕೆಲಸ ನಡೆಯಬೇಕು ಎಂಬ ದೂರದೃಷ್ಟಿ ಇಟ್ಟುಕೊಂಡು 5 ಕಡೆ (ಮುಂಬೈ. ಅಲಹಾಬಾದ್, ಸಿದ್ಧಬಾರಿ, ಕೊಯ ಮತ್ತೂರು, ಮಧ್ಯಪ್ರದೇಶದ ರೇವಾ) ಸಾಂದೀಪನಿ ಸಾಧನಾಲಯ ಎಂಬ ವೇದಾಂತ ಮಹಾವಿದ್ಯಾಲಯ ಸ್ಥಾಪಿಸಿ ಯುವ ಬ್ರಹ್ಮಚಾರಿಗಳಿಗೆ ಪ್ರಸ್ಥಾನತ್ರಯ ಕಲಿಸುವ ಮಹತ್ತರ ಕೆಲಸವನ್ನು ಮಾಡಿದ್ದಾರೆ. ಈ ಸಾಧನಾಲಯಗಳಲ್ಲಿ ತರಬೇತಿ ಪಡೆದ ನೂರಾರು ಬ್ರಹ್ಮಚಾರಿಗಳು ದೇಶಾದ್ಯಂತ ಧರ್ಮಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
(ಲೇಖಕರು ಹುಬ್ಬಳ್ಳಿ ಚಿನ್ಮಯ ಮಿಷನ್ ಮುಖ್ಯಸ್ಥರು)
ನಕ್ಕರೆ ಕಣ್ಣೀರೂ ಆನಂದಬಾಷ್ಪ!; ನಗುವಿನಿಂದ ಅಂದ-ಆನಂದ-ಆಹ್ಲಾದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 16 =
Remember me
