ವಚನಗಳಲ್ಲಿ ಬಸವಣ್ಣ ಅನೇಕ ಶರಣರನ್ನು ಹಾಗೂ ಅವರ ಭಕ್ತಿಸಾಧನೆಯ ವಿಶೇಷತೆಗಳನ್ನು ಉಲ್ಲೇಖಿಸಿದ್ದಾರೆ. ಈ ದೃಷ್ಟಿಯಲ್ಲಿ ದೇವರ ದಾಸಿಮಯ್ಯನವರನ್ನು ಬಸವಣ್ಣ ದಾಸ, ದಾಸಯ್ಯ, ದಾಸಿಮಯ್ಯ, ದಾಸಿದೇವ, ಜೇಡರ ದಾಸಿಮಯ್ಯ ಎಂಬ ಹೆಸರುಗಳಿಂದ ಸ್ಮರಿಸಿದ್ದಾರೆ. ಇವರ ಜೊತೆಗೆ ಸಿಂಧುಬಲ್ಲಾಳ, ಸಿರಿಯಾಳ, ಬಾಣ, ಮಯೂರ, ಕಕ್ಕಯ್ಯ, ಚನ್ನಯ್ಯ ಮೊದಲಾದ ಶರಣರನ್ನೂ ಸ್ಮರಿಸಿದ್ದಾರೆ.
ಭಕ್ತಿ ಎಂತಹದಯ್ಯ? ದಾಸಯ್ಯ ಮಾಡಿದಂತಹದು
ಭಕ್ತಿ ಎಂತಹದಯ್ಯ? ಸಿರಿಯಾಳ ಮಾಡಿದಂತಹದು
ಭಕ್ತಿ ಎಂತಹದಯ್ಯ? ಸಿಂಧುಬಲ್ಲಾಳ ಮಾಡಿದಂತಹದು
ಭಕ್ತಿ ಎಂತಹದಯ್ಯ? ಕೂಡಲಸಂಗಮದೇವಾ
ನೀ ಬಾಣನ ಬಾಗಿಲ ಕಾಯ್ದಂತಹದು.
ಭಕ್ತಿಯ ಮಹತ್ವವನ್ನು ದಾಸಿಮಯ್ಯ ಮೊದಲಾದ ಶರಣರ ಉಲ್ಲೇಖದೊಂದಿಗೆ ಬಸವಣ್ಣ ವಿವರಿಸಿದ್ದಾರೆ. ದಾಸಿಮಯ್ಯ ಕುರಿತು ಭಕ್ತಿಯ ವೈಶಿಷ್ಟ್ಯ ಅರಿತ ಮಹಾನುಭಾವಿ ಎಂದು ಕೊಂಡಾಡಿದ್ದಾರೆ.
ಮುನ್ನಿನವರು ಹೋದ ದಾರಿ ಭಯ ಕಾಣಿರಣ್ಣ,
ಬಲ್ಲಾಳನ ವಧುವಿನೊಡನೆ ಸರಸವಾಡಿದಂದಿಂದ ಭಯ ಕಾಣಿರಣ್ಣ,
ಸಿರಿಯಾಳನ ಮಗನ ಬೇಡಿದಂದಿಂದ ಭಯ ಕಾಣಿರಣ್ಣ,
ದಾಸನ ವಸ್ತ್ರವ ಸೀಳಿದಂದಿಂದ ಭಯ ಕಾಣಿರಣ್ಣ,
ಅಘಟಿತ ಘಟಿತರು ವಿಪರೀತ ಚರಿತರು,
ಕೂಡಲಸಂಗನ ಶರಣರು ನಡೆದ ದಾರಿ ಭಯ ಕಾಣಿರಣ್ಣ.
ಮೇಲಿನ ವಚನದಲ್ಲಿ ದಾಸಿಮಯ್ಯ ಮೊದಲಾದ ಶರಣರ ಭಕ್ತಿಯ ವೈಶಿಷ್ಟ್ಯವನ್ನು ಸಮರ್ಥಿಸಿದ್ದಾರೆ. ದಾಸಿಮಯ್ಯ ವಸ್ತ್ರವನ್ನು ಸೀಳಿದ ಶಿವನ ಕಠಿಣ ಪರೀಕ್ಷೆಯನ್ನು ಎದುರಿಸಿದ ಏಕೈಕನಿಷ್ಠೆ ಅದ್ಭುತವಾದುದು. ಅವರು ಅಘಟಿತ ಘಟಿತರು, ವಿಪರೀತ ಚರಿತರು ಎಂದು ಹೇಳುತ್ತ ಅವರು ನಡೆದ ದಾರಿ ಭಯ ಕಾಣಿರಣ್ಣಾ! ಎಂದು ಉದ್ಗಾರ ತೆಗೆದಿದ್ದಾರೆ.
ಭಕ್ತಿಯಿಲ್ಲದ ಬಡವ ನಾನಯ್ಯ
ಕಕ್ಕಯ್ಯನ ಮನೆಯಲೂ ಬೇಡಿದೆ,
ಚೆನ್ನಯ್ಯನ ಮನೆಯಲೂ ಬೇಡಿದೆ,
ದಾಸಯ್ಯನ ಮನೆಯಲೂ ಬೇಡಿದೆ,
ಎಲ್ಲ ಪುರಾತನರು ನೆರೆದು ಭಕ್ತಿ ಭಿಕ್ಷವನಿಕ್ಕಿದರೆ
ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.
ಬಸವಣ್ಣ ಭಕ್ತಿಯಿಲ್ಲದ ಬಡವ ಎಂದು ಹೇಳಿಕೊಳ್ಳುತ್ತಿದ್ದರೂ, ದಾಸಿಮಯ್ಯನ ಭಕ್ತಿ ಶ್ರೀಮಂತಿಕೆಯನ್ನು ಇಲ್ಲಿ ಕಾಣುತ್ತೇವೆ. ಬಸವಣ್ಣ ದಾಸಿಮಯ್ಯ ಮೊದಲಾದ ಶರಣರ ಹತ್ತಿರ ಭಕ್ತಿಭಿಕ್ಷೆಯನ್ನು ಕೇಳಿದಾಗ ಅವರಿಂದ ಭಿಕ್ಷಾಪಾತ್ರೆ ತುಂಬಿತು ಎನ್ನುತ್ತಾರೆ. ಅಹಂಕಾರವನ್ನು ಅಳಿದು ಈಶ್ವರನಿಗೆ ತಮ್ಮನ್ನು ಅರ್ಪಿಸಿಕೊಂಡಿರುವ ಭಕ್ತಿಸಾಧನೆಯ ರಹಸ್ಯ ಈ ಮೇಲಿನ ವಚನದಲ್ಲಿ ಕಾಣಬಹುದು.
ಬಾಣ ಮಯೂರನಂತೆ ಬಣ್ಣಿಸಬಲ್ಲೆನೆ?
ಸಿರಿಯಾಳನಂತೆ ಉಣಲಿಕ್ಕ ಬಲ್ಲೆನೆ?
ದಾಸಿಮಯ್ಯನಂತೆ ಉಡಕೊಡಬಲ್ಲೆನೆ?
ಉಂಡುಟ್ಟು ಕೊಟ್ಟರೆ ಮುಯ್ಯಿಗೆ ಮುಯ್ಯೆನಿಸಿತ್ತು.
ಎನಗೆ ಕೊಟ್ಟರೆ ಧರ್ಮ ಕೂಡಲಸಂಗಮದೇವಾ.
ಶಿವ ಭಕ್ತಿನಿಷ್ಠೆಯನ್ನು ಮೆರೆದ ದಾಸಿಮಯ್ಯ ಮೊದಲಾದ ಶರಣರನ್ನು ಬಸವಣ್ಣ ಸ್ಮರಿಸಿದ್ದಾರೆ. ಇವರೆಲ್ಲ ಅರ್ಥ, ಪ್ರಾಣ, ಅಭಿಮಾನಗಳನ್ನು ತೊರೆದು ಅತ್ಯಂತ ಕಠಿಣ ಪ್ರಸಂಗಗಳಲ್ಲಿಯೂ ಅಚಲ ನಿಷ್ಠೆಯಿಂದ ಸರ್ವಾರ್ಪಣವನ್ನು ಮಾಡಿದ ವೀರಭಕ್ತರು. ಅವರಿಗೆಲ್ಲ ದೇವರು ಒಲಿದದ್ದು ದೊಡ್ಡದಲ್ಲ, ಅವರಿಂದ ಭಕ್ತಿಸರ್ವಸ್ವವನ್ನು ಪಡೆದು ಅದರ ಪ್ರತಿಫಲವನ್ನು ಕೊಟ್ಟಿದ್ದು ಮುಯ್ಯಿಗೆ ಮುಯ್ಯಿಯಂತಾಯಿತು. ಅದನ್ನು ಬಸವಣ್ಣ ತನಗೆ ಕೊಟ್ಟರೆ ಅದು ನಿನ್ನ ಔದಾರ್ಯ ಅನುಗ್ರಹವಾಗುತ್ತದೆಂದು ಈಶ್ವರನಿಗೆ ಹೇಳಿದ್ದಾರೆ.
ದಾಸನಂತೆ ತವನಿಧಿಯ ಬೇಡುವವನಲ್ಲ,
ಚೋಳನಂತೆ ಹೊನ್ನಮಳೆಯ ಕರೆಸೆಂಬವನಲ್ಲ,
ಅಂಜದಿರು ಅಂಜದಿರು ಅವರಂದದವ ನಾನಲ್ಲ,
ಎನ್ನ ತಂದೆ ಕೂಡಲಸಂಗಮದೇವಾ
ಸದ್ಭಕ್ತಿಯನೆ ಕರುಣಿಸೆನಗೆ.
ಭಗವಂತನ ಭಕ್ತರು ಈಶ್ವರರನ್ನು ಬಿಟ್ಟು ಬೇರೇನನ್ನೂ ಬಯಸುವುದಿಲ್ಲ. ಅವರಿಗೆ ಭಕ್ತಿಯೊಂದೇ ಸಾಕು ಎನ್ನುವರು ಬಸವಣ್ಣ ಈಶ್ವರನಿಗೆ ಹೆದರಬೇಡ ತಾನು ಏನನ್ನೂ ಕೇಳುವುದಿಲ್ಲವೆಂದು ಹೇಳುವುದರ ಜೊತೆಗೆ ದಾಸಿಮಯ್ಯ ತವನಿಧಿ ಪಡೆದಿರುವುದನ್ನು ವಿವರಿಸಿದ್ದಾರೆ ಮೇಲಿನ ವಚನದಲ್ಲಿ.
ಸೋಲಬಲ್ಲರು ಅವರು ಗೆಲಲರಿಯರಯ್ಯಾ;
ತನುಮನಧನದಲ್ಲಿ ವಂಚನೆಯನರಿಯರಯ್ಯಾ;
ದಾಸ-ಸಿರಿಯಾಳನವರು.
ಕೂಡಲಸಂಗನ ಶರಣರು ಉಪಚಾರವನರಿಯರಯ್ಯಾ.
ನಿಷ್ಠಾವಂತ ಭಕ್ತರು ಎಂದಿಗೂ ಸೋಲುವುದಿಲ್ಲ. ಅವರು ಫಲವನ್ನು ಬಯಸದೆ ನುಡಿದಂತೆ ನಡೆದು ತೋರಿಸುತ್ತಾರೆ. ತನು, ಮನ ಮತ್ತು ಧನಗಳೆಂಬ ತ್ರಿವಿಧಗಳನ್ನು ವಂಚನೆಯಿಲ್ಲದೆ ಅರ್ಪಿಸುತ್ತಾರೆ. ಅವರು ತೋರಿಕೆಯ ಔಪಚಾರಿಕ ಭಕ್ತಿಯನ್ನು ಒಪ್ಪುವುದಿಲ್ಲವೆಂದು ಈ ಮೇಲಿನ ವಚನದ ಸಾರ.
ಅರ್ಥ ಪ್ರಾಣಾಭಿಮಾನ ಕೊಟ್ಟೆನೆಂಬರಲ್ಲದೆ
ಕೊಟ್ಟ ಭಕ್ತರನಾರನೂ ಕಂಡುದಿಲ್ಲ.
ದಾಸ ತನ್ನ ವಸ್ತ್ರವ ಕೊಟ್ಟನಲ್ಲದೆ, ತನ್ನ ಕೊಟ್ಟುದಿಲ್ಲ.
ಸಿರಿಯಾಳ ತನ್ನ ಮಗನ ಕೊಟ್ಟುದಲ್ಲದೆ ತನ್ನ ಕೊಟ್ಟುದಿಲ್ಲ.
ಇದೆಲ್ಲ ಹೊರಗಣ ಮಾತು.
ಕೂಡಲಸಂಗಮದೇವರಲ್ಲಿ ತನ್ನ ಕೊಟ್ಟ ಸಿಂಧುಮರಾಳ.
ಈ ಮೇಲಿನ ವಚನದಲ್ಲಿ ಭಕ್ತಿಯನ್ನು ಮೀರಿದ ಮಹಾಸಾಧಕ ಸಿಂಧುಮರಾಳ ಎಂದು ಹೇಳುವಾಗ ದಾಸಿಮಯ್ಯ ಮೊದಲಾದ ಶರಣರನ್ನು ಬಸವಣ್ಣ ಸ್ಮರಿಸಿದ್ದು ಕಾಣಬಹುದು.
ತೊತ್ತಿಂಗೆ ಬಲ್ಲಹನೊಲ್ಲಿದಡೆ ಪದವಿಯಮಾಡದೆ ಮಾಣ್ಬನೆ? ಜೇಡರ ದಾಸಿಮಯ್ಯನಿಗೊಲಿದಾತ, ಮತ್ತೊಬ್ಬ ದೇವನೇ ಅಯ್ಯಾ? ಮಾದರ ಚೆನ್ನಯ್ಯಂಗೆ, ಡೋಹರ ಕಕ್ಕಯ್ಯಂಗೆ, ತೆಲಗು ಬೊಮ್ಮಯ್ಯಂಗೆ ಒಲಿದಾತ ಮತ್ತೊಬ್ಬ ದೇವನೇ ಅಯ್ಯಾ? ಎನ್ನ ಮನದ ಪಂಚೇಂದ್ರಿಯ ನಿಮ್ಮತ್ತಲಾದಡೆ / ತನ್ನತ್ತ ಮಾಡುವ ಕೂಡಲಸಂಗಮದೇವಾ.
ಸೇವಕನಿಗೆ ರಾಜನು ಒಲಿದು ಅವನಿಗೆ ಬೇಕಾದ ಪದವಿಯನ್ನು ಕೊಡುವಂತೆ, ಶಿವನು ಒಲಿದರೆ ನಮಗಾವ ಕೊರತೆಯೂ ಇರುವುದಿಲ್ಲ ಎನ್ನುವರು ಬಸವಣ್ಣ. ದೇವರ ದಾಸಿಮಯ್ಯ ಮೊದಲಾದ ಶರಣರಿಗೆ ಒಲಿದ ಶಿವನು ತನಗೂ ಒಲಿಯುತ್ತಾನೆಂಬ ಭರವಸೆ ಅವರಲ್ಲಿತ್ತು. ಅದಕ್ಕೆ ನಿಷ್ಠೆ ಬೇಕು. ದೇಹ, ಮನಸುಗಳನ್ನು ಶಿವನಿಗೆ ಅರ್ಪಿಸಿದರೆ, ಅವನು ತನ್ನನ್ನೇ ನಮಗೆ ಅಪಿಸುತ್ತಾನೆ ಎಂಬ ಭಾವ.
ಹೀಗೆ ಮೊದಲಾದ ವಚನಗಳಲ್ಲಿ ಬಸವಣ್ಣ ಅನುಭವ ಮಂಟಪದಲ್ಲಿ ಅನೇಕ ಶರಣರ ಸನ್ನಿಧಿಯಲ್ಲಿ, ದೇವರ ದಾಸಿಮಯ್ಯರನ್ನು ಕೊಂಡಾಡಿದ್ದು, ಸ್ಮರಿಸಿದ್ದು ಹಾಗೂ ಅವರ ಜೀವನ ವೃತ್ತಾಂತವನ್ನು ವಚನಗಳಲ್ಲಿ ವ್ಯಕ್ತಪಡಿಸಿದ್ದು ಗಮನಾರ್ಹವಾಗಿದೆ. ಅಂತೆಯೇ ಸಿದ್ಧರಾಮ, ಅಕ್ಕಮಹಾದೇವಿ, ಕೋಲಶಾಂತಯ್ಯ, ಮೊದಲಾದ ಶರಣರು ದೇವರ ದಾಸಿಮಯ್ಯ ಕುರಿತು ತಮ್ಮ ವಚನಗಳಲ್ಲಿ ಸ್ಮರಿಸಿದ್ದನ್ನು ಈ ಕೆಳಗಿನಂತೆ ಕಾಣಬಹುದು.
ಸಿದ್ಧರಾಮ ಶಿವಯೋಗಿಗಳ ವಚನ-
ಕುಂಬಾರರೆಲ್ಲರೂ ಗುಂಡಯ್ಯನಾಗಬಲ್ಲರೇ?
ಮಡಿವಾಳರೆಲ್ಲರೂ ಮಾಚಯ್ಯನಾಗಬಲ್ಲರೆ?
ನೆಯ್ಯ ಬಲ್ಲವರೆಲ್ಲರೂ ದಾಸಿಮಯ್ಯನಾಗಬಲ್ಲರೇ?
ಎನ್ನ ಗುರುವೆ ಕಪಿಲಸಿದ್ಧ ಮಲ್ಲೇಶ್ವರಯ್ಯ
ಪ್ರಾಣಿಗಳ ಕೊಂದು ಪರಿಹರಿಸಬಲ್ಲರೂ
ತೆಲಗು ಜೊಮ್ಮಯ್ಯನಾಗಬಲ್ಲರೆ?
ಅಕ್ಕಮಹಾದೇವಿಯ ವಚನ-
ಅನಿಮಿಷನಲ್ಲಮಯ್ಯ ಮರುಳುಶಂಕರಯ್ಯ
ಕೋಲಶಾಂತಯ್ಯ ಮಾದಾರಧೂಳಯ್ಯ
ಮಿಂಡಮಲ್ಲಿನಾಥ ಚೆನ್ನಬಸವಣ್ಣ
ಚೇರಮರಾಯ, ತೆಲಗು ಜೊಮ್ಮಣ್ಣ, ಕಿನ್ನರಿಯ್ಯ
ಹಲಾಯುಧ, ದಾಸಿಮಯ್ಯ, ಭಂಡಾರಿ ಬಸವರಾಜ ಮುಖ್ಯವಾದ / ಚೆನ್ನಮಲ್ಲಿಕಾರ್ಜುನನ ಶರಣರಿಗೆ ನಮೋ ನಮೋ ಎಂಬೆನು.
ಕೋಲಶಾಂತಯ್ಯನವರ ವಚನ-
ಎನಗುಣಲಿಕ್ಕಿದರಯ್ಯಾ ಸಿರಿಯಾಳ-ಚಂಗಳೆಯರು,
ಎನಗುಡಕೊಟ್ಟರಯ್ಯಾ ದಾಸ-ದುಗ್ಗಳೆಯರು,
ಎನ್ನ ಮುದ್ದಾಡಿಸಿದರಯ್ಯಾ ಅಕ್ಕನಾಗಮ್ಮನವರು,
ಎನ್ನ ಸಲಹಿದರಯ್ಯಾ ಅಮ್ಮವ್ವೆ ಕೊಡಗೂಸು,
ಚೊಳಿಯಕ್ಕ ನಿಂಬವ್ವೆ, ನೀಲಮ್ಮ ಮಹಾದೇವಿ ಮುಕ್ತಾಯಕ್ಕಗಳು/ ಇಂತಿವರ ಒಕ್ಕುಮಿಕ್ಕ ತಾಂಬೂಲ ಪ್ರಸಾದವ ಕೊಂಡು ಬದುಕಿದೆನಯ್ಯಾ,/ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
ಚಂದಿಮರಸರ ವಚನ-
ದಾಸಿಮಯ್ಯನೆನೆಗೆ ಸಾಲೋಕ್ಯನಯ್ಯಾ, ಚೆನ್ನಯ್ಯನೆನೆಗೆ ಸಾಮಿಪ್ಯನಯ್ಯಾ,/ ಕಕ್ಕಯ್ಯನೆನೆಗೆ ಸಾರೂಪ್ಯನಯ್ಯಾ, ಮಾಚಯ್ಯನೆನೆಗೆ ಸಾಯುಜ್ಯನಯ್ಯಾ, / ದಾಸಯ್ಯನೊಕ್ಕುದ ಕೊಂಡೆನು, ಚೆನ್ನಯ್ಯನ ಮಿಕ್ಕುದ ಕೊಂಡೆನು, / ಕಕ್ಕಯ್ಯನುಂಡು ಮಿಕ್ಕುದ ಕಾದು ಕೊಂಡೆನು, / ಮಾಚಯ್ಯನ ಜ್ಞಾನ ಪ್ರಸಾದವ ಕೊಂಡೆನು, / ಪುರಾತನರೊಳಗಾಗಿ ಬಸವಣ್ಣಡಿಂಗರಿಗ, / ಚನ್ನಬಸವಣ್ಣನ ಹಳೆಯನೆಂದು
ತಮ್ಮೊಕ್ಕುದನಿಕ್ಕಿ ಸಲಹಿದರು ಕಾಣಾ ಸಿಮ್ಮಲಿಗೆಯ ಚನ್ನರಾಮ.
(ಲೇಖಕರು ಶ್ರೀ ಮುದನೂರು ಮಹಾಸಂಸ್ಥಾನ ಮಠದ ಅಧ್ಯಕ್ಷರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
