|ಕೆ.ಎ.ದಯಾನಂದ
ವಿಜಯನಗರದ ಅರಸು ಪ್ರೌಢದೇವರಾಯನ ಮಂತ್ರಿ ಲಕ್ಷ್ಮೀಧರಾಮಾತ್ಯ ‘ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯಗಳನ್ನು ನಿರ್ವಿುಸು, ಬಂಧನಕ್ಕೆ ಸಿಕ್ಕ ಅನಾಥರನ್ನು ಬಿಡಿಸು, ಸ್ನೇಹಿತರಿಗೆ ಸಹಾಯಕನಾಗು, ನಂಬಿದವರಿಗೆ ಆಶ್ರಯದಾತನಾಗು, ಸತ್ಪುರುಷರನ್ನು ರಕ್ಷಿಸು’ ಎಂದು ತನ್ನ ತಾಯಿ ಹಾಲನ್ನು ಕುಡಿಸುತ್ತಾ ಕಿವಿಯಲ್ಲಿ ಹೇಳಿದ ಮಾತುಗಳೆಂದು 14ನೇ ಶತಮಾನದ ತನ್ನ ಶಾಸನದಲ್ಲಿ ಹೇಳಿಕೊಂಡಿದ್ದಾನೆ. ಆಗಿನ ಕಾಲಘಟ್ಟಕ್ಕೆ ಉತ್ತಮ ಅರಸನೊಬ್ಬ ಮಾಡಬೇಕಾದ ಕರ್ತವ್ಯಗಳು ಅವಾಗಿದ್ದವು. ಅದೇ ಮಾದರಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದ ನಾಯಕರು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಡಾ. ದೇವರಾಜ ಅರಸು ಮಾದರಿಯಾಗಿದ್ದಾರೆ.
ದೇವರಾಜ ಅರಸು ಎಂದಾಕ್ಷಣ ನನ್ನ ನೆನಪಿಗೆ ಬರುವ ಘಟನೆ ಅವರು ಮರಣ ಹೊಂದಿದ ದಿನದ್ದು. ನನಗೆ ಆಗ ಆರು ವರ್ಷ. ಗದ್ದೆಗಳನ್ನು ನಾಟಿಗೆ ಅಣಿಗೊಳಿಸಲು ಅಪ್ಪ ಮನೆಯಿಂದ ಐದು ಕಿಲೋಮೀಟರ್ ದೂರದ ಹಳೇ ಗದ್ದೆಗೆ ನನ್ನನ್ನು ಮತ್ತು ಅಣ್ಣಂದಿರನ್ನು ಮುಂಜಾನೆಯೇ ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನ ಊಟ ಹೊತ್ತುಕೊಂಡು ಎಮ್ಮೆ ಮತ್ತು ದನಗಳನ್ನು ಹೊಡೆದುಕೊಂಡು ಬಂದ ಅವ್ವ ಗದ್ದೆಯ ಬದುವಿನ ಪಕ್ಕ ನಮ್ಮನ್ನು ಕೂರಿಸಿ, ‘ದೇವರಾಜ ಅರಸು ತೀರ್ಕೆಂಡವ್ರಂತೆ. ಯಾರೊ ಮತ್ತೆ ಮುಖ್ಯಮಂತ್ರಿ ಆಗ್ಬುಡ್ತಾರೆ ಅಂತ ಬಾಳೆಹಣ್ಣಲ್ಲಿ ವಿಷ ಹಾಕಿ ಸಾಯ್ಸಬುಟ್ರಂತೆ’ ಎಂದು ಅಳುತ್ತಾ ಸೆರಗಿನಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಲೇ ಊಟ ಬಡಿಸಿದಳು. ನಮ್ಮ ಊರಿನಲ್ಲಿ ಪತ್ರಿಕೆ, ಟಿವಿ ಯಾವುದೂ ಇಲ್ಲದ ಕಾಲದಲ್ಲಿ ಅನಕ್ಷರಸ್ಥೆಯಾದ ನನ್ನವ್ವನಿಗೆ ಸರಿತಪ್ಪು ಎಂಬುದಕ್ಕಿಂತ ಬಾಯಿಂದ ಬಾಯಿಗೆ ಬಂದ ಮಾಹಿತಿ ಅದಾಗಿತ್ತು. ರಾಜ್ಯದ ಕುಗ್ರಾಮದ ಅನಕ್ಷರಸ್ಥ ಮಹಿಳೆಯವರೆಗೆ ಅರಸು ಆಡಳಿತದ ಪರಿಣಾಮ ಮುಟ್ಟಿದ್ದು ಮಾತ್ರ ಸತ್ಯ. ಅರಸು ಅವರು ರಾಜ್ಯದ ಎಲ್ಲಾ ಕಟ್ಟಕಡೆಯ ವ್ಯಕ್ತಿಗೆ ತಲುಪಿದಷ್ಟು ಕರ್ನಾಟಕದ ಬೇರಾವ ರಾಜಕೀಯ ವ್ಯಕ್ತಿಯೂ ತಲುಪಿಲ್ಲ ಎಂಬುದು ಸಾರ್ವತ್ರಿಕವಾಗಿ ಒಪ್ಪುವ ಸತ್ಯವಾಗಿದೆ.
ನನ್ನವ್ವನಂತಹ ಅಸಂಖ್ಯಾತ ಮಹಿಳೆಯರಿಗೆ ಮಾನ ಉಳಿಸಿದ ಮಹಾನ್ ಪುರುಷನಂತೆ ಅರಸು ಕಾಣಿಸಿದ್ದು ಹೌದು. ನಾವು ತೊಡುತ್ತಿದ್ದ ಅಂಗಿ-ಚಡ್ಡಿಗಳಿಗೆ ಮತ್ತು ನನ್ನವ್ವಂದಿರು ಉಡುತ್ತಿದ್ದ ಸೀರೆ ಮತ್ತು ರವಿಕೆಗಳಲ್ಲಿ ಹರಿದ ಜಾಗದಲ್ಲಿ ಹಲವು ಪತ್ತುಗಳನ್ನು ಹಾಕಿ ತೊಡುತ್ತಿದ್ದುದು ಹಳ್ಳಿಯಲ್ಲಿ ಸರ್ವೆಸಾಮಾನ್ಯವಾಗಿತ್ತು. ಅಂತಹ ಸಂದರ್ಭದಲ್ಲಿ ಸೊಸೈಟಿಯಲ್ಲಿ ಕೇವಲ ಆರು ರುಪಾಯಿಗೆ ಕೊಡುತ್ತಿದ್ದ ‘ಸೊಸೈಟಿ ಸೀರೆ’ಯೆಂದೆ ಕರೆಯಲ್ಪಡುತ್ತಿದ್ದ ಗಟ್ಟಿಮುಟ್ಟಾದ ಕಾಟನ್ ಸೀರೆಗಳು ಹೆಂಗಳೆಯರ ಮಾನಮುಚ್ಚುತ್ತಿದ್ದವು. ಇದಕ್ಕೆಲ್ಲ ಕಾರಣ ಮರ್ಯಾದೆಪುರುಷ ಅರಸು.
ದೇವರಾಜ ಅರಸು ಆಡಳಿತದ ವಿಷಯದಲ್ಲಿ ಎರಡು ಅಂಶಗಳು ಪ್ರಮುಖವಾಗಿ ಕಣ್ಮುಂದೆ ಬರುತ್ತವೆ. ಮೊದಲನೆಯದ್ದು ಬ್ರಿಟಿಷರ ಆಡಳಿತದಲ್ಲಿಯೂ ಮೈಸೂರು ಅರಸರು ವಿದೇಶಿಯರ ಆಡಳಿತದ ನೋವು ತಿಳಿಯದಂತೆ ಪ್ರಜೆಗಳನ್ನು ಸಲಹಿದ್ದು ಮತ್ತು ಪ್ರಜಾಸತ್ತಾತ್ಮಕವಾಗಿ ಆಡಳಿತ ನಡೆಸಿದ ವಿಶ್ವದ ಏಕೈಕ ಅರಸನೆಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್. ಅದೇ ವಂಶದ ದೇವರಾಜ ಅರಸರು ಅರಸೊತ್ತಿಗೆಯ ಎಲ್ಲಾ ಸವಲತ್ತುಗಳನ್ನು ಕಳೆದುಕೊಂಡು ಸಾಮಾನ್ಯ ರೈತನಾಗಿ, ನಾಯಕನಾಗಿ ಬೆಳೆದರು. ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದು ರಾಷ್ಟ್ರದಲ್ಲಿ ಕರಾಳವೆನಿಸಿದ್ದ ತುರ್ತು ಪರಿಸ್ಥಿತಿಯಲ್ಲಿಯೂ ನಮ್ಮ ರಾಜ್ಯ ಮಾತ್ರ ಅದಾವುದೇ ಗಾಢ ಪರಿಣಾಮಕ್ಕೊಳಗಾಗದಂತೆ ಕ್ರಾಂತಿಕಾರಕವಾದ ಸಾಮಾಜಿಕ ಸುಧಾರಣೆ ಸಾಧ್ಯವಾಗಿಸಿ ಮೌನ ಸಾಮಾಜಿಕ ಕ್ರಾಂತಿಯ ಹರಿಕಾರ ಎಂಬ ಕೀರ್ತಿಗೆ ಪಾತ್ರರಾದರು.
ಸ್ವಾತಂತ್ರ್ಯ ಬಂದು ರಾಜ್ಯ ಏಕೀಕರಣಗೊಂಡು ಕಾಲು ಶತಮಾನ ಕಳೆದು ಏಳು ಜನ ಮುಖ್ಯಮಂತ್ರಿಗಳ ನಂತರ ಎಂಟನೇ ಮುಖ್ಯಮಂತ್ರಿಯಾದವರು ಆರಸು. ಆದರೆ, ಅಲ್ಲಿಯವರೆಗೂ ಮಲಹೊರುವ ಪದ್ಧತಿ ಅಮಾನವೀಯ ಪದ್ಧತಿ ಎಂದೆನಿಸಲಿಲ್ಲವೇ? ತನ್ನ ಜಮೀನಿನಲ್ಲಿ ಜೀತ ಮಾಡುವ ರೈತನ ಬದುಕು ಅಸಹನೀಯವೆನಿಸಲಿಲ್ಲವೇ? ಗೇಣಿಗೆ ದುಡಿದು ಬೆಳೆದ ದವಸ-ಧಾನ್ಯಗಳನ್ನು ಒಡೆಯನಿಗೊಪ್ಪಿಸಿ ಹಸಿವಿನಿಂದ ಮಲಗುವ ರೈತನ ಬೆವರಿನ ವಾಸನೆ ಯಾರಿಗೂ ತಗುಲಲಿಲ್ಲವೇ? ಸ್ವಾತಂತ್ರ್ಯ ಹೋರಾಟದ ಜೊತೆಜೊತೆಗೆ ಕರ್ನಾಟಕ ಏಕೀಕರಣ ಚಳವಳಿ ನಡೆದು ನವೆಂಬರ್ 1, 1956ರಂದು ಭಾಷಾವಾರು ಪ್ರಾಂತ್ಯವಾಗಿ ಏಕೀಕರಣಗೊಂಡರೂ ಆಡಳಿತ ಭಾಷೆ ಕನ್ನಡ ಬಳಕೆಯಾಗಬೇಕೆಂಬ ಹಾಗೂ ಕರ್ನಾಟಕ ಎಂದು ಹೆಸರಾಗಬೇಕೆಂಬ ಒತ್ತಾಸೆ ಬರಲಿಲ್ಲವೇಕೆ? ಕತ್ತಲೆಯ ಬದುಕಿನಲ್ಲೆ ಜೀವನ ಕಳೆಯುವ ಬಡವರಿಗೆ ಬೆಳಕು ನೀಡಬೇಕೆನಿಸಲಿಲ್ಲವೇಕೆ? ಹಿಂದುಳಿದವರು ಶಿಕ್ಷಣ ವಂಚಿತರಾಗುತ್ತಿದ್ದಾರೆ, ಅವರಿಗೊಂದು ಇಲಾಖೆ ಬೇಕು, ಮೀಸಲಾತಿ ಬೇಕು ಎಂದೆನಿಸಲಿಲ್ಲವೇಕೆ? ಭೂ ಅಭಿವೃದ್ಧಿ ಹೆಸರಿನಲ್ಲಿ ಒಂದೆರಡು ಸಾವಿರ ರೂಪಾಯಿ ಸಾಲ ಪಡೆದ ರೈತ ಕಟ್ಟಲಾಗದೆ ಇದ್ದಾಗ ಬ್ಯಾಂಕ್ ಅಧಿಕಾರಿಗಳು ಮನೆಯ ದವಸ-ಧಾನ್ಯ ಸೇರಿದಂತೆ ಜಪ್ತಿ ಮಾಡುತ್ತಿದ್ದುದು, ಅದರಿಂದ ಜರ್ಜರಿತನಾದ ಬಡವನ ಬವಣೆ ನೀಗಿಸಬೇಕು ಎಂದೆನಿಸಲಿಲ್ಲವೇಕೆ? ಈ ಎಲ್ಲಾ ಪ್ರಶ್ನೆಗಳು ಹುಟ್ಟುವುದು ಸಹಜವೇ. ಸಮಾಜ ವಿಜ್ಞಾನಿಯಾಗಿದ್ದ ಅರಸು ಅವರಿಗೆ ದೀನ ದಲಿತ ಹಿಂದುಳಿದ ವರ್ಗದ ನೋವಿನ ಅರಿವು ಮತ್ತು ಸಂವೇದನೆ ಇದ್ದುದರಿಂದಲೇ ಮಲಹೊರುವ ಪದ್ಧತಿ, ಜೀತಪದ್ಧತಿ ನಿಷೇಧ ಮಾಡಿದರು. ಭಾಗ್ಯಜ್ಯೋತಿ ಯೋಜನೆ ಜಾರಿಗೊಳಿಸಿದರು. ‘ಉಳುವವನೆ ಭೂ ಒಡೆಯ’ ಘೊಷಣೆಯೊಂದಿಗೆ ಭೂ ಸುಧಾರಣಾ ಕಾಯ್ದೆ ಜಾರಿಗೊಂಡಿತು.
ಕನ್ನಡ ಅಸ್ಮಿತೆಯ ವಿಚಾರ ಬಂದಾಗ ಅರಸು ಎಲ್ಲರಿಗೂ ಚಿರಪರಿಚಿತರೆ. ‘ಮೈಸೂರು ರಾಜ್ಯ’ ಮೈಸೂರು ಅರಸರ ಭಾವನಾತ್ಮಕ ಮತ್ತು ಅವರ ಆಡಳಿತದ ಸಂಕೇತವೇ ಆಗಿತ್ತು. ಕನ್ನಡ ಭಾಷೆಯನ್ನಾಡುವ ಪ್ರದೇಶ ಮೈಸೂರು ರಾಜ್ಯವೆಂದು ಏಕೀಕರಣಗೊಂಡು 20 ವರ್ಷ ಕಳೆದರೂ ಕನ್ನಡ ನಾಡನ್ನು ಪ್ರತಿನಿಧಿಸುವ ಕರ್ನಾಟಕವೆಂಬ ಹೆಸರು ನಾಮಕರಣಗೊಂಡಿರಲಿಲ್ಲ. ನಾಡಿನ ಜನರ ಸಮಸ್ಯೆಯ ಜೊತೆಗೆ ಅವರ ಭಾವನೆಗಳನ್ನು ಅರ್ಥೈಸಿಕೊಂಡಿದ್ದ ಮೈಸೂರಿನ ಒಡೆಯರ್ ವಂಶಸ್ಥರೇ ಆದ ಅರಸು ಅವರು 1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿ ಆದೇಶ ಹೊರಡಿಸಿದರು. ಅಲ್ಲದೆ, ಆಡಳಿತದಲ್ಲಿ ಕನ್ನಡ ನೂರಕ್ಕೆ ನೂರಷ್ಟು ಬಳಕೆಯಾಗಬೇಕೆಂದು ಆದೇಶಿಸಿದರು. ನಂತರ 1994ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಗೊಂಡು ಎಷ್ಟೇ ಕ್ರಮಗಳಾದರೂ ಇಂದು ಸಹ ಕಡತಗಳಲ್ಲಿ ಟಿಪ್ಪಣಿಗಳಲ್ಲಿ ನೂರಕ್ಕೆ ನೂರರಷ್ಟು ಕನ್ನಡ ಕಾಣಲು ಸಾಧ್ಯವಾಗದಿರುವುದು ದುರಂತವೇ ಸರಿ.
ಸಾಮಾಜಿಕವಾಗಿ ಹಿಂದುಳಿದ ಮತ್ತು ತುಳಿತಕ್ಕೊಳಗಾದವರ ಬದುಕು ಬದಲಾವಣೆಯಾಗುವುದು ಶಿಕ್ಷಣದಿಂದ ಮಾತ್ರ ಎಂಬುದು ಅಂಬೇಡ್ಕರ್ ಅವರ ಒತ್ತಾಸೆಯಾಗಿತ್ತು. ವಿದ್ಯಾಭ್ಯಾಸ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಸವಲತ್ತುಗಳನ್ನು ಒದಗಿಸಲು ಸೂಕ್ತ ಅಧ್ಯಯನದ ಅಗತ್ಯವನ್ನು ಮನಗಂಡು ಅರಸು ಅವರು ಹಿಂದುಳಿದ ವರ್ಗಗಳ ಆಯೋಗ ರಚಿಸಿ ಮಂತ್ರಿಗಳಾಗಿದ್ದ ಎಲ್.ಜಿ ಹಾವನೂರು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರು. ಹಾವನೂರು ಅವರು 8, ಆಗಸ್ಟ್ 1972 ರಲ್ಲಿ ಅಧಿಕಾರ ಸ್ವೀಕರಿಸಿದ್ದು, ಈಗ 50 ವರ್ಷಗಳಾಗಿವೆ. ವೈಜ್ಞಾನಿಕ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅರಸು ಕೆಲವು ಬದಲಾವಣೆಗಳೊಂದಿಗೆ ಅದನ್ನು ಜಾರಿಗೊಳಿಸಿದರು. ಶೇ 58 ಮೀಸಲಾತಿ ನೀಡಲಾಯಿತು. ಇಂದಿಗೂ ಹಾವನೂರು ವರದಿಯನ್ನು ‘ಹಿಂದುಳಿದ ವರ್ಗಗಳ ಬೈಬಲ್’ ಎಂದೇ ಪರಿಗಣಿಸಲಾಗಿದೆ. 1977ರ ನವೆಂಬರ್ ತಿಂಗಳಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಥಾಪಿಸಿದರು. ಅದರ ಪರಿಣಾಮ 2439 ವಸತಿ ನಿಲಯಗಳು, 167 ವಸತಿ ಶಾಲೆಗಳು, 4 ಆಶ್ರಮ ಶಾಲೆಗಳು ಮತ್ತು ನಂತರ 11 ವಿವಿಧ ನಿಗಮಗಳು ಇಂದು ಕಾರ್ಯನಿರ್ವಹಿಸುತ್ತಿವೆ.
ಭೂ ಸುಧಾರಣಾ ಕಾಯ್ದೆ: ಸ್ವತಂತ್ರ ಭಾರತ ರಚನೆಗೊಂಡ ನಂತರ ಆರ್ಥಿಕ ಅಸಮಾನತೆ ಮತ್ತು ಸಾಮಾಜಿಕ ಶೋಷಣೆಯ ಕಾರಣದಿಂದಾಗಿ ನಕ್ಸಲಿಸಂ ಅನೇಕ ರಾಜ್ಯಗಳಲ್ಲಿ ಹಲವರನ್ನು ಬಲಿ ಪಡೆದಿದೆ. ಭೂ ಸುಧಾರಣ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗಿಲ್ಲದ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಆಂಧ್ರಪ್ರದೇಶ ಮುಂತಾದೆಡೆ ಮಾತ್ರ ನಕ್ಸಲಿಸಂ ತೀವ್ರಗೊಂಡಿದ್ದನ್ನು ಗಮನಿಸಬಹುದಾಗಿದೆ. ಭೂ ಸುಧಾರಣಾ ಕಾಯ್ದೆ ಮೊದಲು ಪರಿಣಾಮಕಾರಿಯಾಗಿ ಜಾರಿಗೊಂಡಿದ್ದು ಪಶ್ಚಿಮ ಬಂಗಾಳದಲ್ಲಿ. ನಂತರ ಕೇರಳ, ಆನಂತರ ಕರ್ನಾಟಕದಲ್ಲಿ. ಕರ್ನಾಟಕದಲ್ಲಿ ಅನುಷ್ಠಾನಗೊಳ್ಳಲು ಕಾರಣ ಅರಸು ಮುಖ್ಯಮಂತ್ರಿಯಾಗಿದ್ದುದು. ಉಳ್ಳವರು ಮತ್ತು ಮೇಲ್ವರ್ಗದ ನಾಯಕರು ಹಾಗೂ ವ್ಯವಸ್ಥೆಯ ವಿರೋಧ ಕಟ್ಟಿಕೊಂಡು ಕೆಲವರನ್ನು ಮನವೊಲಿಸಿ ಹಿಂದುಳಿದ, ದಲಿತ, ದಮನಿತ ವರ್ಗಗಳ ಪರವಾಗಿ ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಿದ್ದಲ್ಲದೆ ಆ ಶೋಷಿತ ವರ್ಗದ ಹಲವಾರು ಯುವಕರನ್ನು ಗುರುತಿಸಿ ನಾಯಕರನ್ನಾಗಿಸಿದ ಅರಸು ಚಾಣಾಕ್ಷತೆಗೆ ಸಲಾಂ ಹೇಳಲೇಬೇಕಿದೆ.
ಹಿಂದುಳಿದವರ ಜೀವನ ಬದಲಾವಣೆಯ ಕನಸು ಕಂಡು ಅನುಷ್ಠಾನಕ್ಕೆ ಶ್ರಮಿಸುತ್ತಾ ತನ್ನ ಜನಾಂಗ ಬೆರಳೆಣಿಕೆಯಷ್ಟಿದ್ದರೂ ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಕುವೆಂಪು ಮಾತನ್ನು ಸಾಕಾರಗೊಳಿಸಲು ಶ್ರಮಿಸಿದವರು ಅರಸು.
ಪ್ರಜೆಯಂಪಾಲಿಸಬಲ್ಲೋಡಾತನರಸಂ,
ಕೈಯಾಸೆಯಂ ಮಾಡದಂ ನಿಜಮಂತ್ರೇಶ್ವರ
ಎಂದು ಪಾಲ್ಕುರಿಕೆ ಸೋಮನಾಥ 13ನೇ ಶತಮಾನದಲ್ಲಿ ಹೇಳಿದ ಮಾತನ್ನು ನಿಜಗೊಳಿಸಿ ಬರಿಗೈನಲ್ಲಿಯೇ ಜೀವನಯಾತ್ರೆ ಮುಗಿಸಿದವರು ದೇವರಾಜ ಅರಸು. ಅವರ ಕಾರ್ಯ, ಸಾಧನೆಗಳನ್ನು ಸದಾ ಸ್ಮರಿಸಬೇಕಾದುದು ಅತ್ಯಗತ್ಯ.
(ಲೇಖಕರು ಐಎಎಸ್ ಅಧಿಕಾರಿ)
|ಡಾ. ಪೂರ್ಣಿಮಾ ಅಶೋಕ ಗೌರೋಜಿ
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ವಿಶಿಷ್ಟ ವ್ಯಕ್ತಿ. ಅವರಲ್ಲಿನ ಶಿಸ್ತು, ದಕ್ಷತೆ ಇಂದಿನ ರಾಜಕಾರಣಿಗಳಿಗೆ ಮಾದರಿ. ನನ್ನ ಪತಿ ಅಶೋಕ ಗೌರೋಜಿ ಈಗ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಹುಬ್ಬಳ್ಳಿ ಶಾಖೆಯಲ್ಲಿ ಹಿರಿಯ ಕಾನೂನು ಅಧಿಕಾರಿಯಾಗಿದ್ದಾರೆ. ಮೊರಾರ್ಜಿ ಅವರ ಮೇಲೆ ಅಶೋಕ ತುಂಬ ಪ್ರಭಾವ ಬೀರಿದ್ದರು; ಜತೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರೊಂದಿಗೂ ಅಶೋಕ ಒಡನಾಟವಿತ್ತು.
ಅಶೋಕ ವಿದ್ಯಾರ್ಥಿದೆಸೆಯಲ್ಲಿ ಮೊರಾರ್ಜಿ ಮತ್ತು ದೇವರಾಜ ಅರಸು ಅವರಿಗೆ ಪತ್ರಗಳನ್ನು ಬರೆಯುತ್ತಿದ್ದರು. ‘ನೀವು ಪ್ರಧಾನಿಯಾದಾಗ ಜನರಿಗೆ ದೇಶಕ್ಕೆ ಒಳ್ಳೆಯದಾಗಿತ್ತು. ಚರಣಸಿಂಗರನ್ನು ಧರ್ಮದಿಂದಾಗಲಿ ಅಥವಾ ಅಧರ್ಮದಿಂದಾಗಲಿ ನಿವಾರಿಸಿಕೊಂಡು ಅಧಿಕಾರದಲ್ಲಿ ಮುಂದುವರಿಯಬೇಕಾಗಿತ್ತು’ ಎಂದು ಅಶೋಕ ಬರೆದುದಕ್ಕೆ ಉತ್ತರಿಸಿದ ಮೊರಾರ್ಜಿ, ‘ಅಶೋಕ ನೀನು ಚಿಕ್ಕವನಾದರೂ ದೇಶದ ಬಗ್ಗೆ ಕಳಕಳಿ ಮೆಚ್ಚುವಂಥದ್ದು. ಆದರೆ, ನನಗೆ ತತ್ವ ಮುಖ್ಯ. ಅದಕ್ಕಾಗಿ ಅಧಿಕಾರ ತ್ಯಜಿಸಿದ್ದೆ. ತಪ್ಪುಮಾರ್ಗದಲ್ಲಿ ನಾನು ಅಧಿಕಾರದಲ್ಲಿ ಉಳಿಯ ಬಯಸಿರಲಿಲ್ಲ’ ಎಂದಿದ್ದರು.
ಮೊರಾರ್ಜಿಯವರು ಬೆಂಗಳೂರಿಗೆ ಬರುವಾಗಲೆಲ್ಲ ಮಾಹಿತಿ ನೀಡುತ್ತಿದ್ದುದರಿಂದ ಅಶೋಕ ಅವರನ್ನು ಬೆಂಗಳೂರಿನ ಮಲ್ಲೇಶ್ವರದಲ್ಲಿದ್ದ ಕಿಲೋಸ್ಕರ್ ಮನೆಯಲ್ಲಿ ಭೇಟಿಯಾಗುತ್ತಿದ್ದರು. ಅಂಥ ಸನ್ನಿವೇಶದಲ್ಲಿ ಅಶೋಕ ಅವರಿಗೆ ಪ್ರತಿಪಕ್ಷಗಳ ಏಕತೆಯ ಕಲ್ಪನೆ ಮೂಡಿತ್ತು. ಮೊರಾರ್ಜಿ ರಾಷ್ಟ್ರ ಮಟ್ಟದಲ್ಲಿ ಜನತಾ ಪಕ್ಷದ ನಾಯಕರಾಗಿದ್ದರು. ಕರ್ನಾಟಕದಲ್ಲಿ ದೇವರಾಜ ಅರಸು ಕಾಂಗ್ರೆಸ್ ಯು ಪಕ್ಷದ ನಾಯಕರಾಗಿದ್ದರು. ‘ರಾಷ್ಟ್ರದ ಹಿತದೃಷ್ಟಿಯಿಂದ ನೀವು ಮೊರಾರ್ಜಿಯವರ ನಾಯಕತ್ವ ಒಪ್ಪಿಕೊಳ್ಳಿ’ ಎಂದು ದೇವರಾಜ ಅರಸು ಅವರಿಗೆ, ಹಾಗೂ ‘ಕರ್ನಾಟಕದ ಹಿತದೃಷ್ಟಿಯಿಂದ ನೀವು ದೇವರಾಜ ಅರಸುರನ್ನು ಜನತಾ ಪಕ್ಷಕ್ಕೆ ಆಹ್ವಾನಿಸಿ’ ಎಂದು ಮೊರಾರ್ಜಿ ಅವರಿಗೆ ಅಶೋಕ ಪತ್ರ ಬರೆದರು.
ಮೊದಮೊದಲು ಈ ವಾದವನ್ನು ಮೊರಾರ್ಜಿಯವರು ಒಪ್ಪಲಿಲ್ಲ. ಕೊನೆಗೆ, ‘ನಿಮ್ಮ ಅರಸು ಅವರನ್ನು ಭೇಟಿಗೆ ಕಳಿಸು’ ಎಂದು ಪತ್ರ ಬರೆದರು. ಅರಸು ಕೂಡ ಒಪ್ಪಿಕೊಂಡರು. ಬೆಳಗಾವಿಗೆ ಬಂದಾಗ, ಮೊರಾರ್ಜಿ ಭೇಟಿಗೆ ಹೋಗೋಣ ಎಂದು ಹೇಳಿದರು. ಆದರೆ, ಸ್ವಲ್ಪ ದಿವಸದಲ್ಲಿ ಅರಸು ನಿಧನರಾಗಿದ್ದರಿಂದ ಈ ಪ್ರಯತ್ನ ಮುಂದುವರಿಯಲಿಲ್ಲ.
(ಲೇಖಕರು ಪರಿಸರವಾದಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
