|ಡಾ. ಎಸ್.ಆರ್. ರಾಮಸ್ವಾಮಿ
‘ನಿನ್ನ ಹತ್ತಿರ ನೋಟ್​ಬುಕ್ ಇದೆಯೊ?’ ಎಂದು ಒಂದು ಸಂಜೆ ಅವರಲ್ಲಿಗೆ ಹೋದಾಗ ಡಿ.ವಿ.ಜಿ. ಕೇಳಿದರು. ‘ಇದೆ’ ಎಂದಾಗ ಅದರಲ್ಲಿ ಅವರು ಬರೆಸಿದ್ದು ಈ ಶ್ಲೋಕವನ್ನು:
ಅಜ್ಞಸ್ಯ ದುಃಖೌಘಮಯಂ
ಜ್ಞಸ್ಯಾನಂದಮಯಂ ಜಗತ್ |
ಅಂಧಂ ಭುವನಮಂಧಸ್ಯ
ಪ್ರಕಾಶಂ ತು ಸುಚಕ್ಷುಷಃ||
(‘ಕುರುಡನಿಗೆ ಜಗತ್ತೆಲ್ಲ ಕತ್ತಲೆ, ಕಣ್ಣಿರುವವನಿಗೆ ಜಗತ್ತೆಲ್ಲ ಬೆಳಕು.’)
ಕರ್ನಾಟಕದ ಸಾರಸ್ವತಸೌಧಕ್ಕೆ ಧ್ವಜಪ್ರಾಯರಾಗಿದ್ದವರು ಡಿ.ವಿ.ಜಿ.ಯವರು. ಅವರ ನೆನಪು ಕನ್ನಡ ಜನದ ಮನದಲ್ಲಿ ದೀರ್ಘಕಾಲ ಉಳಿಯುವುದು ನಿಸ್ಸಂಶಯ. ಅನೇಕ ಕಾರಣಗಳಿಂದ ಅವರು ಜನರ ಪ್ರೀತಿ ಸಂಪಾದಿಸಿಕೊಂಡಿದ್ದರು. ಒಂದು ಕಡೆ ಕಾವ್ಯವಿಲಾಸ, ಇನ್ನೊಂದು ಕಡೆ ತತ್ವಜಿಜ್ಞಾಸೆ; ಒಂದು ಕಡೆ ಕಲಾರಸಿಕತೆ, ಇನ್ನೊಂದು ಕಡೆ ಸಾರ್ವಜನಿಕ ಸೇವೆ. ಅವರ ಪ್ರತಿಭೆ ಒಮ್ಮೆ ರಾಜಕೀಯ ಟೀಕೆಯಲ್ಲಿ ಪ್ರವೃತ್ತವಾದರೆ ಇನ್ನೊಂದು ಘಳಿಗೆಯಲ್ಲಿ ಸಮಾಜಸುಧಾರಣೆಯತ್ತ ಹೊರಳುವುದು; ಒಮ್ಮೆ ಸ್ವೀಯ ಉಪನ್ಯಾಸರೂಪದಲ್ಲಿ ಹೊರಟರೆ ಇನ್ನೊಮ್ಮೆ ಶ್ರುತಿವ್ಯಾಖ್ಯಾನರೂಪದಲ್ಲಿ ಹೊಮ್ಮುವುದು. ‘ಶಾಸ್ತ್ರವನ್ನು ಎಟುಕಿಸಿಕೊಳ್ಳಲಾಗದವರು ಕವಿಗಳಾಗುತ್ತಾರೆ’ ಎಂಬ ವ್ಯಂಗ್ಯೋಕ್ತಿಗೆ ಡಿ.ವಿ.ಜಿ. ಅಪವಾದ. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಭಾಷಾಶಾಸ್ತ್ರ, ವೇದಾಂತಶಾಸ್ತ್ರ ಮೊದಲಾದವುಗಳಲ್ಲಿ ಅವರಿಗೆ ಎಷ್ಟು ನಿಶಿತ ಪಾಂಡಿತ್ಯವಿತ್ತೋ ಅದಕ್ಕೆ ಸರಿತೂಗುವಂಥ ಕಾವ್ಯಪ್ರತಿಭೆಯೂ ಅವರಲ್ಲಿತ್ತು. ಜನತೆಯನ್ನು ಬೆರಗುಗೊಳಿಸಿದ ಸಾಧನೆ ಅವರದು. ಆದರೆ ಅವರು ಮುಖ ಸಿಂಡರಿಸಿಕೊಂಡು ದುಡಿದವರಲ್ಲ ; ತಾವು ನಕ್ಕು ಇತರರನ್ನು ನಗಿಸಿದವರು. ಊಟ, ಸಂಗೀತ, ಸಾಹಿತ್ಯ-ಎಲ್ಲದರಲ್ಲೂ ಶ್ರೇಷ್ಠದರ್ಜೆಯದನ್ನು ಅರಗಿಸಿಕೊಂಡ ಡಿ.ವಿ.ಜಿ.ಯವರನ್ನು ವಿ.ಸೀ. ಆಗಾಗ ಜಿರಾಫೆಗೆ ಹೋಲಿಸುತ್ತಿದ್ದರು: ‘ಅದರ ಕತ್ತು ನೀಳವಾಗಿದೆ. It eats nothing but the topmost foliage.. ಅದು ನಮ್ಮಂಥವರಿಗೆ ಎಲ್ಲಿ ಎಟುಕುತ್ತದೆ!’
ತತ್ವ, ಅನುಷ್ಠಾನ – ಈ ಎರಡಕ್ಕೂ ತಾಳಿಕೆಯಾಗದ ಜೀವನಸಂದರ್ಭಗಳನ್ನು ಕುರಿತು ಡಿ.ವಿ.ಜಿ. ಪದೇ ಪದೇ ಚಿಂತಿಸುತ್ತಿದ್ದರು. ಎಷ್ಟೋ ಜನ ಬುದ್ಧಿವಂತರಿರುತ್ತಾರೆ; ಅವರಲ್ಲಿ ಸಾತ್ತಿ ್ವತೆ ಇರುವುದಿಲ್ಲ. ಅಂತೆಯೇ ಎಷ್ಟೋ ಜನ ಒಳ್ಳೆಯವರಿರುತ್ತಾರೆ; ಅವರಿಗೆ ವಿಷಯಪರಿಜ್ಞಾನವಿರುವುದಿಲ್ಲ.
ಗ್ರಾಮಸ್ಥರ ಸರಳಜೀವನದ ಸಾರವಂತಿಕೆಯನ್ನು ಮೆಚ್ಚಿದ್ದವರು ಡಿ.ವಿ.ಜಿ. ‘ನಮ್ಮ ಧರ್ಮ ಉಳಿದಿರುವುದು ಸಾಮಾನ್ಯ ಜನರಿಂದ; ನಯನಾಜೂಕುಗಳನ್ನರಿಯದ ‘ಮುನೀಶ್ವರ’ ಉಪಾಸಕರಿಂದ’ – ಎಂದು ಪದೇ ಪದೇ ಹೇಳುತ್ತಿದ್ದರು.
ಡಿ.ವಿ.ಜಿ.ಯವರಿಗಿದ್ದ ಮುಖ್ಯಬಲ ವಿಶಾಲವಾದ ಜನಸಂಪರ್ಕ. ಜನರಲ್ಲಿ ನೆಮ್ಮದಿಯನ್ನೂ ಉಲ್ಲಾಸವನ್ನೂ ತುಂಬಲಾಗದ ಸಾಹಿತ್ಯ ನಿರರ್ಥಕವೆಂದು ಅವರ ನಂಬಿಕೆ. ಜನರಲ್ಲಿ ಅರಿವನ್ನು ಹರಡಲು ಅವರು ಜೀವನದುದ್ದಕ್ಕೂ ಶ್ರಮಿಸಿದರು.
ಗೋಕಾಕರು ಒಮ್ಮೆ ಹೀಗೆಂದರು:‘ಐವತ್ತರವತ್ತು ವರ್ಷಗಳ ಹಿಂದೆ ದೇಶವು ಮೂಕವಾಗಿದ್ದಾಗ ಡಿ.ವಿ.ಜಿ. ಮೊದಲು ಮಾತನಾಡಿದರು, ಧ್ವನಿ ಎತ್ತಿದರು. ಅನಂತರ ಉಳಿದವರಿಗೂ ಮಾತನಾಡಬೇಕೆನ್ನಿಸಿತು. ಡಿ.ವಿ.ಜಿ. ಮೊದಲು ಪ್ರೇರಣೆಗೆ ಒಳಗಾದರು; ಅನಂತರ ತಾವೇ ಪ್ರೇರಕರಲ್ಲಿ ಒಬ್ಬರಾದರು.’
***
ಜನ ಸಂಘಟನೆಗಳು:1919ರ ಅಂತ್ಯದಲ್ಲಿ ನಡೆದ ಕರ್ನಾಟಕದ ಪ್ರಜಾಜನ ಸಮಾವೇಶವನ್ನು ಸಂಘಟಿಸಿದವರು ಡಿ.ವಿ.ಜಿ. 1929ರಲ್ಲಿ ತಿರುವಾಂಕೂರಿನಲ್ಲಿ ನಡೆದ ದಕ್ಷಿಣ ಭಾರತ ದೇಶೀಯ ಪ್ರಜಾಸಮ್ಮೇಳನದ ಅಧ್ಯಕ್ಷ ವಿಶ್ವೇಶ್ವರಯ್ಯನವರಿಗೆ ಡಿ.ವಿ.ಜಿ. ಕಾರ್ಯದರ್ಶಿಯಾಗಿದ್ದರು.
ಪುಣೆಯಲ್ಲಿ 1925ರ ಮೇ ತಿಂಗಳಲ್ಲಿ ನಡೆದ ದಕ್ಷಿಣರಾಜ್ಯಗಳ ಪ್ರಜಾಸಮಾವೇಶ, 1927ರ ಡಿಸೆಂಬರ್ ತಿಂಗಳಲ್ಲಿ ಮುಂಬಯಿಯಲ್ಲಿ ನಡೆದ ಅಖಿಲ ಭಾರತ ರಾಜ್ಯಗಳ ಪ್ರಜಾಸಮಾವೇಶ ಮೊದಲಾದ ಸಂದರ್ಭಗಳಲ್ಲಿಯೂ ಡಿ.ವಿ.ಜಿ.ಯವರ ಅಭಿಪ್ರಾಯಗಳನ್ನು ಪಡೆದು ರ್ಚಚಿಸಲಾಯಿತು.
1927ರಲ್ಲಿ ಎಲ್ಲೋರಿನ ದಿವಾನ್ ಬಹಾದ್ದೂರ್ ಎಂ. ರಾಮಚಂದ್ರರಾಯರ ನೇತೃತ್ವದಲ್ಲಿ ‘ಇಂಡಿಯನ್ ಸ್ಟೇಟ್ಸ್ ಪೀಪಲ್ಸ್ ಕಾನ್​ಫರೆನ್ಸ್’ ಎಂಬ ಅಖಿಲ ಭಾರತ ಸಂಘಟನೆಯೊಂದು ಏರ್ಪಟ್ಟಿತು. ಅದರಲ್ಲಿ ದಕ್ಷಿಣ ಭಾರತ ರಾಜ್ಯಗಳ ಪ್ರತಿನಿಧಿಯಾಗಿ ಡಿ.ವಿ.ಜಿ.ಯವರನ್ನು ನಿಯೋಜಿಸಲಾಗಿತ್ತು. ಭಾವನಗರದ ಬಲವಂತರಾಯ್ ಮೆಹ್ತಾ, ಸಾಂಗ್ಲಿಯ ಜಿ.ಆರ್. ಅಭಯಂಕರ್ ಮೊದಲಾದ ಪ್ರತಿಷ್ಠಿತ ಜನನಾಯಕರನ್ನೊಳಗೊಂಡಿದ್ದುದು ಆ ಗೋಷ್ಠಿ. 1921ರಲ್ಲಿ ನಡೆದ ಇಂಥದೇ ದೇಶೀಯ ಸಂಸ್ಥಾನಗಳ ಪ್ರಜಾಪರಿಷತ್ತಿನಲ್ಲಿಯೂ ಡಿ.ವಿ.ಜಿ.ಯವರ ಪ್ರಮುಖ ಪಾತ್ರವಿತ್ತು.
1928ರ ಮಧ್ಯಭಾಗದಲ್ಲಿ ಸರ್ವಪಕ್ಷ ಸಮ್ಮೇಳನದ ಹೆಸರಿನಲ್ಲಿ ಭಾರತದ ಸಂವಿಧಾನಿಕ ಸಮಸ್ಯೆಗಳನ್ನು ಕುರಿತು ಪ್ರಕಟವಾದ ಪ್ರಸಿದ್ಧ ಮೋತಿಲಾಲ್ ನೆಹರು ವರದಿಯನ್ನು ಡಿ.ವಿ.ಜಿ. ಪ್ರಬಲವಾಗಿ ಟೀಕಿಸಿದರು. ಆ ವರದಿ ಸಂಸ್ಥಾನಾಧಿಪ ಮಹಾರಾಜರುಗಳನ್ನು ರಂಜನೀಯವಾಗಿ ಟೀಕಿಸುವುದರಲ್ಲಿ ಸಮಾಧಾನಪಟ್ಟುಕೊಂಡಿತ್ತೇ ಹೊರತು, ಪ್ರಜೆಗಳ ನೈಜ ಸಮಸ್ಯೆಗಳ ಬಗ್ಗೆಯಾಗಲಿ, ಮೂಲಭೂತ ಜಟಿಲ ಸಂವಿಧಾನಿಕ ಸಮಸ್ಯೆಗಳ ಬಗ್ಗೆಯಾಗಲಿ ಸಾಕಷ್ಟು ಗಮನಹರಿಸಿಲ್ಲವೆಂದರು.
ಲಂಡನ್ನಿನ ಎರಡನೆ ಚಕ್ರಗೋಷ್ಠಿಯಲ್ಲಿ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ದೇಶೀಯ ಸಂಸ್ಥಾನಗಳ ಬಗ್ಗೆ ಮಾತನಾಡುವಾಗ ಡಿ.ವಿ.ಜಿ.ಯವರ ಬರಹಗಳನ್ನು ಉದ್ಧರಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − eight =
Remember me
