|ಸ್ವಾಮಿ ಶಾಂತಿವ್ರತಾನಂದ, ಅಧ್ಯಕ್ಷರು, ರಾಮಕೃಷ್ಣ ವೇದಾಂತ ಕೇಂದ್ರ, ಐರ್ಲ್ಯಾಂಡ್
ಭಗವದ್ಗೀತೆ ಒಂದು ಅತ್ಯುತ್ತಮ ಪ್ರಾಯೋಗಿಕ ಗ್ರಂಥ. ಅದನ್ನು ಭಗವಾನ್ ಶ್ರೀಕೃಷ್ಣನು ಶ್ರೇಷ್ಠ ಧನುರ್ಧಾರಿಯಾದ ಅರ್ಜುನನಿಗೆ ಯುದ್ಧದ ಸಮಯದಲ್ಲಿ ಉಪದೇಶಿಸಿರುವುದು ವಿಶಿಷ್ಟ ಸಂಗತಿ. ಯುದ್ಧ ಎಂದರೆ ನಮಗೆಲ್ಲ ಭಯವೇ. ಏಕೆಂದರೆ ಯಾವಾಗ ಮತು ಹೇಗೆ ನಾವು ಶತ್ರುಗಳಿಂದ ಹತರಾಗುತ್ತೇವೆಯೋ ಉಹಿಸಲು ಅಸಾಧ್ಯ.
ಮಹಾವೀರನಾದ ಅರ್ಜುನನು ನಾನು ಮತ್ತು ನಮ್ಮವರು ಎನ್ನುವ ಅಹಂ ಮತ್ತು ಮಮಕಾರಗಳಿಗೆ ಒಳಗಾಗಿ ಕರ್ತವ್ಯ ವಿಮೂಢನಾದ. ಶೋಕಗ್ರಸ್ತನಾದ. ಯುದ್ಧ ಮಾಡಲೆಂದು ಯುದ್ಧ ಭೂಮಿಗೆ ತೆರಳಿ, ಯುದ್ಧ ಮಾಡುವುದಿಲ್ಲ ಎಂದು ಹಠ ಹಿಡಿದ. ಅದೇ ರೀತಿಯಲ್ಲಿ ನಾವು ನಮ್ಮ ಜೀವನದ ಸಂಗ್ರಾಮಗಳಲ್ಲಿ ಅನೇಕ ಬಾರಿ ಅರ್ಜುನನಂತೆ ಮೋಹಪರವಶರಾಗಿ, ನಮ್ಮ ನಮ್ಮ ಕರ್ತವ್ಯಗಳನ್ನು ಮರೆಯುತ್ತೇವೆ ಅಥವಾ ಭಯಗ್ರಸ್ತರಾಗಿ ಖಿನ್ನತೆಗೆ ಒಳಗಾಗುತ್ತೇವೆ. ಇತರರಿಂದ, ಸಮಾಜದಿಂದ, ಪ್ರಕೃತಿ ವಿಕೋಪಗಳಿಂದ ಅಥವಾ ಸ್ವಕರ್ಮಗಳಿಂದ ತೊಂದರೆಗಳಿಗೆ ಒಳಗಾಗಿ ಹತಾಶರಾಗುತ್ತೇವೆ. ಜೀವನ ಇನ್ನು ಮುಂದೆ ಸಾಧ್ಯವೇ ಇಲ್ಲ ಎಂದು ಕುಳಿತು ಬಿಡುತ್ತೇವೆ. ಇಂತಹ ವಿಷಮ ಪರಿಸ್ಥಿತಿಗಳಲ್ಲಿ ನಮಗೆ ಗುರುವಿನ ಅಥವಾ ಶಾಸ್ತ್ರಗಳ ಅಥವಾ ಸದ್ವಿಚಾರಗಳ ಮಾರ್ಗದರ್ಶನ ಅತ್ಯಗತ್ಯ. ಅದು ನಮ್ಮ ಅಜ್ಞಾನವನ್ನು ನಿಮೂಲನೆ ಮಾಡುವುದಲ್ಲದೆ ಮುಂದಿನ ಮಾರ್ಗವನ್ನೂ ತೋರಿಸುತ್ತದೆ. ಅಂತಹ ಮಾರ್ಗದರ್ಶನಕ್ಕಾಗಿ ಭಗವದ್​ಗೀತೆ ಒಂದು ಅತ್ಯುತ್ತಮ ಮಾರ್ಗದರ್ಶಕ ಗ್ರಂಥ.
ಕ್ಲೈಬ್ಯಂ ಮಾಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ |
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತೊ್ವೕತ್ತಿಷ್ಠ ಪರಂತಪ ||
ಹೇ ಪಾರ್ಥ! ಹೇಡಿಯಾಗಬೇಡ. ನಿನಗೆ ಇದು ಯೋಗ್ಯವಾದದ್ದಲ್ಲ. ಶತ್ರುಗಳ ಎದೆಗೆಡಿಸುವ ವೀರನೇ, ಹೃದಯ ದೌರ್ಬಲ್ಯವು ತುಚ್ಚವಾದದ್ದು. ಇದನ್ನು ತೊರೆದು ಎದ್ದು ನಿಲ್ಲು.
ಈ ಮಾತು ನಮಗೆಲ್ಲ ಅನ್ವಯಿಸುತ್ತದೆ. ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಭಗವಂತ ನಮ್ಮಲ್ಲಿ ಅನಂತ ಶಕ್ತಿಯನ್ನು ಹುದುಗಿಸಿಟ್ಟಿದ್ದಾನೆ. ಅದನ್ನು ನಾವು ಅರಿತು ಆತ್ಮವಿಶ್ವಾಸದಿಂದ ಮೇಲೆದ್ದರೆ, ಮಾನಸಿಕವಾಗಿ ದೊಡ್ಡದಾಗಿ ಬೆಳೆದರೆ ಯಾವ ಸಮಸ್ಯೆಯೂ ದೊಡ್ಡದಾಗಿ ಕಾಣುವುದಿಲ್ಲ. ಸಮಸ್ಯೆ ಸಮಸ್ಯೆಯಾಗಿ ಉಳಿಯುವುದಿಲ್ಲ.
ಕೆಲವೊಮ್ಮೆ ಹಲವರು ಹೇಳುವುದುಂಟು. ‘ನಿಮ್ಮ ಅದೃಷ್ಟ ಚೆನ್ನಾಗಿದೆ. ಆದರೆ ನಾನು ದುರದೃಷ್ಟವಂತ. ಆದ್ದರಿಂದ ನಮಗೆ ಯಾವಾಗಲೂ ಸಮಸ್ಯೆಗಳು ಬರುತ್ತಲೇ ಇರುತ್ತವೆ ’ ಎಂದು ಹಲಬುತ್ತಿರುತ್ತಾರೆ. ಕೊರಗುತ್ತಿರುತ್ತಾರೆ. ಅದಕ್ಕೇ ಶ್ರೀಕೃಷ್ಣನು,
ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ |
ಆಗಮಾಪಾಯಿನೊà—ನಿತ್ಯಾ ತಾಂಸ್ತಿತಿಕ್ಷಸ್ವ ಭಾರತ ||
ಹೇ ಕೌಂತೇಯ! ಇಂದ್ರಿಯಗಳು, ಇಂದ್ರಿಯ ವಸ್ತುಗಳ ಸಂಪರ್ಕಕ್ಕೆ ಬಂದಾಗ, ಶೀತ-ಉಷ್ಣ, ಸುಖ-ದುಃಖ, ಇನ್ನು ಮುಂತಾದವು ಬಂದು ಹೋಗುತ್ತಿರುತ್ತವೆ. ಅವು ನಿರಂತರವಾಗಿ ಇರುವುದಿಲ್ಲ. ಆದ್ದರಿಂದ ಗೊಂದಲಕ್ಕೆ ಒಳಗಾಗದೆ ಸಹಿಸಿಕೊ.
ಪ್ರಪಂಚವು ದ್ವಂದ್ವಮಯ. ಅದು ಈಶ್ವರನ ಸೃಷ್ಟಿ, ನಿಯಮ. ಅದನ್ನು ನಾವು ಬದಲು ಮಾಡುವುದಕ್ಕೆ ಆಗುವುದಿಲ್ಲ. ಆದರೆ ಈ ಸತ್ಯವನ್ನು ತಿಳಿಯದೆ, ಸ್ವೀಕರಿಸಲಾಗದೆ ಪ್ರಪಂಚವನ್ನು ಬದಲು ಮಾಡಲು, ಇತರರನ್ನು ಸರಿ ಮಾಡಲು ನಾವು ಅನೇಕ ಬಾರಿ ವ್ಯರ್ಥ ಶ್ರಮ ಪಡುತ್ತಿರುತ್ತೇವೆ. ಅದಕ್ಕೆ ಬದಲಾಗಿ ನಾವು ಬದಲಾಗಬೇಕು. ಅದೇ ಜೀವ ಸೃಷ್ಟಿ. ಎಂದರೆ ನಮ್ಮ ಕೆಲಸ, ಮಾಡುವ ರೀತಿ, ಆಲೋಚನೆ, ದೃಷ್ಟಿಕೋನ ಇವುಗಳನ್ನು
ಬದಲು ಮಾಡಿಕೊಳ್ಳುವುದರಿಂದ ನಾವು ಆನಂದದಿಂದ ಇರಬಹುದು. ಸಮಸ್ಯೆಗಳನ್ನು ಸಮಸ್ಯೆಗಳಾಗಿ ನೋಡದೆ, ಅವುಗಳನ್ನು ಯಶಸ್ಸಿಗೆ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವುದರಲ್ಲಿ ನಮ್ಮ ಜಾಣ್ಮೆಯಿದೆ. ಅದೇ ಜೀವನ ಕೌಶಲ. ಅದನ್ನು ಅರಿತರೆ ಯಶಸ್ವಿ ಜೀವನ ನಡೆಸಬಹುದು.
ಶ್ರೀಕೃಷ್ಣನು ಆಧ್ಯಾತ್ಮಿಕ ಅಥವಾ ತಾತ್ವಿಕ ಸ್ತರದಲ್ಲೂ ಸಮಸ್ಯೆಗಳನ್ನು ನಿವಾರಿಸುವ ಉಪಾಯವನ್ನು ಈ ರೀತಿಯಾಗಿ ತಿಳಿಸಿದ್ದಾನೆ. ಅದು,
ನ ಜಾಯತೇ ಮ್ರಿಯತೇ ವಾ ಕದಾಚಿತ್
ನಾಯಂ ಭೂತ್ವಾ ಭವಿತಾ ನ ಭೂಯಃ |
ಅಜೋ ನಿತ್ಯಃ ಶಾಶ್ವತೊà—ಯಂ ಪುರಾಣಃ
ನ ಹನ್ಯತೇ ಹನ್ಯಮಾನೇ ಶರೀರೇ ||
ಆತ್ಮವು ಎಂದಿಗೂ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ. ಹಿಂದೆ ಹುಟ್ಟಿದ್ದಲ್ಲ, ಈಗ ಹುಟ್ಟಲಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಆತ್ಮವು ನಿತ್ಯ, ಶಾಶ್ವತ, ಪುರಾತನ. ಶರೀರವನ್ನು ಕೊಂದರೂ ಅದನ್ನು ಕೊಲ್ಲಲಾಗುವುದಿಲ್ಲ. ವಾಸ್ತವದಲ್ಲಿ ನಾವು ಅಮೃತ ಸ್ವರೂಪಿ, ಆತ್ಮ ಸ್ವರೂಪಿ. ಆದ್ದರಿಂದ ನಮಗೆ ಹುಟ್ಟು ಸಾವುಗಳಿಲ್ಲ. ಅದು ಕೇವಲ ಶರೀರಕ್ಕೆ ಮಾತ್ರ. ಆದ್ದರಿಂದ ನಾವು ಭಯಪಡಬೇಕಾಗಿಲ್ಲ. ಇದನ್ನು ನಾವು ಅರಿತು ನಡೆದರೆ ನಿರ್ಭಯತೆಯಿಂದ ಜೀವಿಸಬಹುದು. ಅಜ್ಞಾನದಿಂದಾಗಿ ನಾವು ಅದೆಷ್ಟೋ ಸಲ ಭಯಭೀತರಾಗುತ್ತೇವೆ, ದುಃಖತಪ್ತರಾಗುತ್ತೇವೆ.
‘ಒಹೋ ಇದು ವೇದಾಂತ. ಕೇಳುವುದಕ್ಕೆ ಚೆನ್ನಾಗಿರುತ್ತದೆ. ಆದರೆ…’ ಎಂದು ಯಾರಾದರೂ ಉದ್ಗಾರ ತೆಗೆದರೂ ಇದು ನಿತ್ಯ ಸತ್ಯ. ಇದನ್ನು ಸ್ವಾಮಿ ವಿವೇಕಾನಂದರು, ಸ್ವಾಮಿ ದಯಾನಂದ ಸರಸ್ವತಿ, ರಮಣ ಮಹರ್ಷಿಗಳು ಮುಂತಾದವರು ಅರಿತು ಬದುಕಿದ್ದರಿಂದ ಅನೇಕ ಕಷ್ಟ-ಕಾರ್ಪಣ್ಯ, ಸವಾಲು, ಎಡರು-ತೊಡರುಗಳನ್ನು ಅನುಭವಿಸಿದರೂ ಅವರು ಕುಗ್ಗಲಿಲ್ಲ. ಹತಾಶರಾಗಲಿಲ್ಲ. ಆನಂದಿಂದ ಸಾರ್ಥಕ ಬದುಕನ್ನು ಅಂತಹ ಅನೇಕ ಸಾಧು-ಸಂತರು, ಮಹನೀಯರು ನಡೆಸಿದರು.
ಅದಕ್ಕೆ ಕಾರಣ,
ದೇಹಿನೋಸ್ಮಿನ್ಯಥಾ ದೇಹೇ
ಕೌಮಾರಂ ಯೌವನಂ ಜರಾ |
ತಥಾ ದೇಹಾತರಪ್ರಾಪ್ತಿಃ
ದೀರಸತ್ತತ್ರ ನ ಮುಹ್ಯತಿ ||
ದೇಹದಲ್ಲಿರುವ ಆತ್ಮವು ಹೇಗೆ ಆ ದೇಹದ ಬಾಲ್ಯ- ಕೌಮಾರ್ಯ- ಯೌವನ- ಮುಪು್ಪ ಈ ಅವಸ್ಥೆಗಳಲ್ಲಿ ಸಾಗುತ್ತದೆಯೋ, ಹಾಗೆಯೇ ಸಾವಿನ ನಂತರ ಮತ್ತೊಂದು ದೇಹಕ್ಕೆ ಅದು ಸಾಗುತ್ತದೆ. ಆದ್ದರಿಂದ ಧೀರನಾದವನು ಇದರಿಂದ ಎಂದಿಗೂ ಕಂಗೆಡುವುದಿಲ್ಲ.
ನಿರ್ಭಯತೆ ನಮ್ಮ ಅನೇಕ ಸಮಸ್ಯೆಗಳಿಗೆ ಪರಮೌಷಧಿ!
ರಿಪಬ್ಲಿಕ್ ಸ್ಟುಡಿಯೋದಲ್ಲಿ ‘ವಿಜಯಾನಂದ’ ಚಿತ್ರತಂಡ; ಡಿ. 9ರಂದು ಅದ್ಧೂರಿ ಬಿಡುಗಡೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 12 =
Remember me
