|ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ
ನಮ್ಮ ಕಾಲದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಗೋಪಾಲಕೃಷ್ಣ ಅಡಿಗರ ಜನ್ಮದಿನ ಇಂದು. ಈ ಸಂದರ್ಭದಲ್ಲಿ ಅವರ ಧೀಮಂತ ವ್ಯಕ್ತಿತ್ವ ನೆನಪಾಗುತ್ತಿದೆ. ನನ್ನಂತಹ ಅನೇಕರ ಪಾಲಿಗೆ ಗುರುವಿನ ಸ್ಥಾನದಲ್ಲಿದ್ದು ಮಾರ್ಗದರ್ಶನ ಮಾಡಿದ ಅವರ ಚಿಂತನೆಗಳು ಎಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ ಅನ್ನಿಸುತ್ತಿದೆ. ಅಡಿಗರು ವೈಯಕ್ತಿಕ, ಸಾಮಾಜಿಕ, ಧಾರ್ವಿುಕ ಹಾಗೂ ರಾಜಕೀಯ ನೆಲೆಗಳ ಸಂಕೀರ್ಣ ಸಂಬಂಧವನ್ನು ಏಕತ್ರ ಗ್ರಹಿಸಿ ಪರಿಹಾರದ ಸಾಧ್ಯತೆಗಳನ್ನು ವಿಶ್ಲೇಷಿಸುತ್ತಿದ್ದರು. ಮಾತುಗಳ ಮೂಲಕವೇ ಭ್ರಮಾಲೋಕ ಸೃಷ್ಟಿಸುತ್ತಿರುವ ನಮ್ಮ ಸಂದರ್ಭದಲ್ಲಿ ಅಡಿಗರ ವಾಸ್ತವಪ್ರಜ್ಞೆ, ಮಾತು ಪೊಳ್ಳಾಗದಂತೆ ಆಡುವ ಎಚ್ಚರ, ಬುದ್ಧಿ ಮತ್ತು ಭಾವನೆಗಳು ಒಂದು ಹದದಲ್ಲಿ ಸೇರಿ ಸೃಷ್ಟಿಸುವ ಮೌಲ್ಯಗಳ ಬಗೆಗಿನ ಕಾಳಜಿ ಇಂದು ನಮ್ಮ ಕಣ್ಣು ತೆರೆಸಬೇಕಾದ ಸಂಗತಿಗಳಾಗಿವೆ. ವ್ಯಕ್ತಿ ಪರಮಸ್ವಾರ್ಥದಲ್ಲಿ ಸಿಲುಕಿದಾಗ ಆತ ರಾಕ್ಷಸನಾಗಿಬಿಡಬಹುದು. ಹಾಗೆಯೇ ಸಾಮಾಜಿಕ, ರಾಜಕೀಯ ಸಂಘಟನೆಗಳು ಪ್ರಬಲವಾಗಿ ಸರ್ವಾಧಿಕಾರಿಯ ಶಕ್ತಿ ಪಡೆದಾಗ ಅದು ವ್ಯಕ್ತಿಯ ಘನತೆಯನ್ನೇ ಹಾಳುಮಾಡಿ ಆತನನ್ನು ಬಲಿ ತೆಗೆದುಕೊಂಡು ಬಿಡಬಹುದು. ನಮ್ಮ ಖಾಸಗಿ ಬದುಕಿಗೂ, ಸುತ್ತಮುತ್ತಲ ಸಾಮಾಜಿಕ ಬದುಕಿಗೂ ಪರಸ್ಪರ ತಿಕ್ಕಾಟವಾಗದಂತೆ ಬದುಕುವುದು ನಾವು ಎದುರಿಸುತ್ತಿರುವ ಸವಾಲು. ಮನುಷ್ಯನನ್ನು ಪೊರೆಯಬೇಕಾದ ಶಕ್ತಿಗಳೇ ಆತನನ್ನು ಹಣಿಯುತ್ತಿರುವ ಸನ್ನಿವೇಶದಲ್ಲಿ ಜೀವಪರ ಸಂಸ್ಕೃತಿಯನ್ನು ಕುರಿತು ಚಿಂತಿಸಿದ ದಾರ್ಶನಿಕ ಲೇಖಕ ಗೋಪಾಲಕೃಷ್ಣ ಅಡಿಗ.
ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಅಡಿಗರು ಹೀಗೆ ಆತಂಕ ವ್ಯಕ್ತಪಡಿಸಿದ್ದರು: ‘ಅಪಾರವೆನ್ನಿಸುವಂಥ ಪರಮತಸಹಿಷ್ಣುತೆಯನ್ನು ಕಲಿತು ಬಂದ ನಮ್ಮ ದೇಶದಲ್ಲಿ ಈಗ ಕಂಡುಬರುತ್ತಿರುವ ಭಿನ್ನಮತದ ಬಗ್ಗೆ ತಾತ್ಸಾರ, ಪರಮತದ ಬಗ್ಗೆ ಅಸಹನೆ ದಿಗಿಲುಗೊಳಿಸುತ್ತವೆ. ತನಗಿಂತ ಬೇರೆಯಾಗಿ ಯೋಚಿಸುವವನನ್ನು, ತನಗಿಂತ ಭಿನ್ನವಾದ ಶ್ರದ್ಧೆಯುಳ್ಳವನನ್ನು, ತನಗಿಂತ ಬೇರೆಯಾಗಿ ಬದುಕುವಂಥವನನ್ನು ತದಕಿಹಾಕುತ್ತೇವೆ, ಹೊಸಕಿಹಾಕುತ್ತೇವೆ, ನಿರ್ನಾಮ ಮಾಡುತ್ತೇವೆ ಎಂಬ ಮಾತು ಈಗ ಎಲ್ಲ ಕಡೆಗಳಲ್ಲೂ ಕೇಳಿಬರುತ್ತಿದೆ. ಇಂಥವರ ಕಾರ್ಯಮಾರ್ಗವೆಂದರೆ ಗುಂಪು ಕಟ್ಟಿಕೊಂಡು ಪಶುಬಲದ ಪ್ರದರ್ಶನ ನಡೆಸುವುದು, ಅದರ ಪ್ರಯೋಗ ಮಾಡುವುದು. ಈ ಪಶುಬಲದ ವಿರುದ್ಧವಾಗಿ ನಿಲ್ಲುವ ಯಾವ ಶಕ್ತಿಯೂ ಇಲ್ಲವಾಗಿ ನಾವೆಲ್ಲ ನಿಷ್ಕಿ›ಯವಾಗಿ ಸ್ವಾತಂತ್ರ್ಯ, ಸಮಾನತೆ, ಸಮಾಜವಾದ ಇತ್ಯಾದಿ ದೊಡ್ಡ ದೊಡ್ಡ ಮಾತುಗಳನ್ನು ಲೀಲಾಜಾಲವಾಗಿ ಉರುಳಿಸುತ್ತಿದ್ದೇವೆ. ಈ ಎಲ್ಲದರ ನಡುವೆ ನಷ್ಟವಾಗುತ್ತಿರುವುದು ಮಾನವತೆಯ ಅತ್ಯಂತ ಕೋಮಲವೂ, ಸೂಕ್ಷ್ಮವೂ, ಅಮೂಲ್ಯವೂ ಆದ ವ್ಯಕ್ತಿಸ್ವಾತಂತ್ರ್ಯ. ಈ ರಾಕ್ಷಸ ವಾತಾವರಣದಲ್ಲಿ ಮಾನವತೆಯ ಮಂದ್ರಧ್ವನಿ ಅಡಗಿಹೋಗುತ್ತಿದೆ. ವ್ಯಕ್ತಿತ್ವವಿಕಾಸಕ್ಕೆ ಅತ್ಯಗತ್ಯವಾದ ವಾತಾವರಣ ನಿರ್ಮಾಣ ಮಾಡುವುದೇ ನಾವು ಮಾಡಬೇಕಾಗಿರುವ ಅತ್ಯಂತ ಜರೂರಿನ ಕೆಲಸ.’
ಅಡಿಗರ ಸಮಗ್ರ ಸಾಹಿತ್ಯದ ಮೂಲಧಾತು ವ್ಯಕ್ತಿತ್ವವಿಕಾಸದ ಪರಿಕಲ್ಪನೆ ಹಾಗೂ ನಮ್ಮ ವ್ಯಕ್ತಿತ್ವವನ್ನು ಹೊಸಕಿಹಾಕುವ ಶಕ್ತಿಗಳ ವಿರುದ್ಧದ ಪ್ರತಿಭಟನೆ. ವ್ಯಕ್ತಿಯನ್ನು ಮುಖಹೀನನನ್ನಾಗಿ ಮಾಡುವ, ವ್ಯಕ್ತಿಯ ಅಂತರಂಗದ ಶಕ್ತಿಯನ್ನೆಲ್ಲ ಒರೆಸಿಹಾಕುವ ವಿದ್ಯಮಾನಗಳು ಸಂವೇದನಾಶೀಲ ಲೇಖಕರನ್ನೆಲ್ಲಾ ತೀವ್ರವಾಗಿ ಕಾಡಿದೆ. ಆಧುನಿಕ ಬಂಡವಾಳಶಾಹಿ ವ್ಯವಸ್ಥೆ ಸಮಾಜ ಹಾಗೂ ವ್ಯಕ್ತಿಯ ನಡುವೆ ಬಿರುಕು ಸೃಷ್ಟಿಸಿ, ಆತನ ಖಾಸಗಿತನವನ್ನು ನಾಶಮಾಡಿ ತನ್ನ ಅಮಾನುಷ ಯಂತ್ರದ ಒಂದು ಭಾಗವನ್ನಾಗಿ ವ್ಯಕ್ತಿಯನ್ನು ಸ್ವೀಕರಿಸುತ್ತದೆ ಎಂಬ ನಿಲುವನ್ನೇ ಯೇಟ್ಸ್, ಎಲಿಯಟ್, ಲಾರೆನ್ಸ್, ಕಾನ್ರಾಡ್ ಮೊದಲಾದವರೆಲ್ಲ ಪ್ರತಿಪಾದಿಸಿದ್ದು. ಇಂತಹ ಸಾಮಾಜಿಕ ರಚನೆಯ ವಿನ್ಯಾಸದ ಬಗ್ಗೆ ಅಡಿಗರು ಸದಾ ಎಚ್ಚರಿಸುತ್ತಿದ್ದರು. ‘ದಂಗೆಯೇಳುತ್ತಲೇ ಇರಬೇಕಾಗುತ್ತದೆ ಇಲ್ಲಿ ಪ್ರತಿಯೊಬ್ಬನೂ/ತನ್ನ, ತನ್ನ ಚಿನ್ನದ್ದೋ ರನ್ನದ್ದೋ, ಕಬ್ಬಿಣದ್ದೋ, ಮರದ್ದೋ/ಅಥವಾ ಬರಿ ಮಣ್ಣಿನದೋ ಸಿಂಹಾಸನವ ಹುಡುಕಿ ತೆಗೆದು ಗುರುತಿಸಿ ಅಲ್ಲಿ/ಆಸನಾರೂಢನಾಗುವವರೆಗೆ/ ದಂಗೆಯೇಳುತ್ತಲೇ ಇರಬೇಕಾಗುತ್ತದೆ/ತನ್ನೊಳಗೆ ತನ್ನ ನಿಜದ ಸೆಲೆ ಪುಟಿವನಕ’ (ಬಂಡಾಯ).
ನಾಗರಿಕತೆಯ ಚರಿತ್ರೆ ಬರೆಯುತ್ತ ಟಾಯ್್ನೕ ಒಂದು ಮಹತ್ವದ ಮಾತು ಹೇಳುತ್ತಾನೆ. ‘ಪ್ರತಿಯೊಂದು ನಾಗರಿಕತೆಯೂ ಪ್ರಗತಿಯ ಹೆಸರಿನಲ್ಲಿ ನಿರ್ವಹಣೆಗೆ ಅಸಾಧ್ಯವಾದ ರೀತಿಯಲ್ಲಿ ಬೆಳೆಯುತ್ತಾ ಹೋಗುತ್ತದೆ. ದಿಕ್ಕುದೆಸೆಯಿಲ್ಲದ ಈ ಬೆಳವಣಿಗೆಯ ಒಡಲಿನಲ್ಲಿಯೇ ಅವುಗಳ ಅವನತಿಯ ಎಳೆಗಳೂ ಸೇರಿಕೊಂಡಿರುತ್ತವೆ. ನಿಂತು ನೋಡುವ ವ್ಯವಧಾನವಿಲ್ಲದ, ಧ್ಯಾನಸ್ಥ ಸ್ಥಿತಿ ಕಳೆದುಕೊಂಡ ಅವುಗಳ ವೇಗವೇ ಅವುಗಳ ದುರಂತ.’ ಅಡಿಗರು ಈ ‘ಧ್ಯಾನಸ್ಥ ಸ್ಥಿತಿ’ಯನ್ನು ನಾವು ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು/ಪುರುಷೋತ್ತಮನ ಆ ಅಂಥ ರೂಪುರೇಖೆ?’ (ಶ್ರೀರಾಮನವಮಿಯ ದಿವಸ). ಅಂತರಂಗದ ಸೂಕ್ಷ್ಮವನ್ನು ಕಾಪಾಡಿಕೊಳ್ಳದಿದ್ದರೆ ಮಹತ್ವದ್ದನ್ನು ಸೃಷ್ಟಿಸಲು ಸಾಧ್ಯವಿಲ್ಲ, ಮಾತ್ರವಲ್ಲ, ಹೊರಗಿನ ಜಗತ್ತನ್ನೂ ಸಮರ್ಪಕ ರೀತಿಯಲ್ಲಿ ಗ್ರಹಿಸಲು ಸಾಧ್ಯವಿಲ್ಲ. ಯೇಸು, ಬುದ್ಧ, ಬಸವ, ಅಲ್ಲಮ, ಅಕ್ಕ, ಗಾಂಧಿ ಇಂತಹ ಧ್ಯಾನಸ್ಥ ಸ್ಥಿತಿಯ ಫಲ.
ಪರಂಪರೆ, ಚರಿತ್ರೆಯ ಆಳಕ್ಕಿಳಿದು, ಅದನ್ನು ಸರಿಯಾದ ರೀತಿಯಲ್ಲಿ ಗ್ರಹಿಸಿ, ವರ್ತಮಾನಕ್ಕೆ ಸಲ್ಲುವ ರೀತಿಯಲ್ಲಿ ಅದನ್ನು ಪುನಾರಚಿಸಿಕೊಂಡು ನಮ್ಮ ಇಂದಿನ ಬದುಕನ್ನು ಚಂದ ಮಾಡಿಕೊಳ್ಳಬೇಕೆಂಬುದು ಅಡಿಗರ ತಾತ್ವಿಕ ನಿಲವು. ‘ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು/ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ/ಕಂಡೀತು ಗೆರೆಮಿರಿವ ಚಿನ್ನದದಿರು/ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ/ಇನ್ನಾದರೂ ಕೊಂಚ ಕಲಿಯಬೇಕು/ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ/ವಿಗ್ರಹಕ್ಕೊಗ್ಗಿಸುವ ಅಸಲು ಕಸುಬು.’
‘ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನು’- ಇದು ಅಡಿಗರ ಪ್ರಾರ್ಥನೆ ಕವಿತೆಯ ಸಾಲುಗಳು. ವಿನಯವಿಲ್ಲದ ಆತ್ಮ ವಿಶ್ವಾಸ ಅಹಂಕಾರವಾಗುತ್ತದೆ, ಆತ್ಮವಿಶ್ವಾಸವಿಲ್ಲದ ವಿನಯ ದೌರ್ಬಲ್ಯ ವಾಗುತ್ತದೆ. ಇವೆರಡರ ಸಮ್ಮಿಲನ ಬೆಳವಣಿಗೆಯ ಸಾಧನ.
(ಲೇಖಕರು ಖ್ಯಾತ ವಿಮರ್ಶಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 9 =
Remember me
