|ರಾಧಾ-ರುಕ್ಮಿಣಿ(ಸಿನಿಮಾ ಕಲಾವಿದರಾದ ಶರಣ್ ಮತ್ತು ಶ್ರುತಿ ಅವರ ತಾಯಿ)
ಗುಬ್ಬಿ ವೀರಣ್ಣನವರದ್ದು ಬರೀ ನಾಟಕ ಕಂಪನಿಯಷ್ಟೇ ಆಗಿರಲಿಲ್ಲ. ಅಲ್ಲಿ ಬರೀ ನಾಟಕ ಆಡಿಸುತ್ತಿರಲಿಲ್ಲ ಅಥವಾ ನಾಟಕದ ಪಾಠ ಮಾತ್ರ ಹೇಳಿಕೊಡುತ್ತಿರಲಿಲ್ಲ. ಸಂಸ್ಕೃತ, ಹಿಂದಿ, ನೃತ್ಯ, ಸಂಗೀತ ಎಲ್ಲವನ್ನೂ ಅಲ್ಲಿ ಹೇಳಿಕೊಡಲಾಗುತ್ತಿತ್ತು. ಕಂಪನಿಯಲ್ಲಿ ಪಾತ್ರ ಮಾಡುವವರ ಮಕ್ಕಳಿಗೆಂದೇ ಶಾಲೆಯ ಪಾಠ ಹೇಳಿಕೊಡಲಾಗುತ್ತಿತ್ತು.
ಗುಬ್ಬಿ ಕಂಪನಿಯ ‘ಲವ-ಕುಶ’ ನಾಟಕದಲ್ಲಿ ಪಾರ್ಟು ಮಾಡುವುದಕ್ಕೆ ಅವಳಿ ಮಕ್ಕಳ ಅವಶ್ಯಕತೆ ಇತ್ತು. ಮುಂಚೆ ಇದೇ ಪಾತ್ರಗಳನ್ನು ಬಿ. ಜಯಶ್ರೀ ಮತ್ತು ಇನ್ನೊಬ್ಬರು ಮಾಡುತ್ತಿದ್ದರು. ಅವರಿಗೆ ಆ ಪಾತ್ರಗಳನ್ನು ಮಾಡುವುದಕ್ಕೆ ಅವಳಿ ಮಕ್ಕಳ ಅವಶ್ಯಕತೆ ಇತ್ತು. ನಾವು ಅವಳಿ ಮಕ್ಕಳಾದ್ದರಿಂದ ಅವಕಾಶ ಸಿಕ್ಕಿತು. ನಮ್ಮ ಸಂಬಂಧಿಯೊಬ್ಬರ ಮೂಲಕ ನಾವು ಗುಬ್ಬಿ ಕಂಪನಿ ಸೇರಿದೆವು. ಆಗ ನಮಗೆ 13 ವರ್ಷ. ನಮ್ಮ ಯಜಮಾನರು (ಜೆ.ವಿ. ಕೃಷ್ಣ) ಅಲ್ಲೇ ಬೆಳೆದವರು. ಅಲ್ಲಿ ‘ಕೃಷ್ಣಲೀಲೆ’ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡುತ್ತಿದ್ದರು. ಡಾ. ರಾಜಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯನವರು ಕಂಸನ ಪಾತ್ರ ಮಾಡುತ್ತಿದ್ದರೆ, ನಮ್ಮ ಯಜಮಾನರ ತಾಯಿ ಹರಿಕಥಾ ವೆಂಕಟೇಶ್ ಕುಮಾರಿ ಅವರು ಯಶೋದಾ ಪಾತ್ರ ಮಾಡುತ್ತಿದ್ದರು. ಇನ್ನು, ರಾಜಣ್ಣನ (ರಾಜಕುಮಾರ್) ಸಹೋದರ ವರದಪ್ಪ, ಸಹೋದರಿ ಶಾರದಮ್ಮ ಎಲ್ಲರೂ ಅದೇ ನಾಟಕದಲ್ಲಿ ಬೇರೆಬೇರೆ ಪಾತ್ರಗಳನ್ನು ಮಾಡುತ್ತಿದ್ದರು. ಆ ನಂತರ ‘ಯಡಿಯೂರು ಸಿದ್ಧಲಿಂಗೇಶ್ವರ’ ಮುಂತಾದ ಹಲವು ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. ನಾವು ‘ಲವ ಕುಶ’, ‘ಸದಾರಮೆ’ ಮುಂತಾದ ನಾಟಕಗಳಲ್ಲಿ ಪಾತ್ರ ಮಾಡಿದೆವು.
ಆಗಿನ ಕಾಲಕ್ಕೆ ದೊಡ್ಡದೊಡ್ಡ ಕಲಾವಿದರು ಕಂಪನಿಯಲ್ಲಿದ್ದರು. ಜಿ.ವಿ. ಅಯ್ಯರ್, ರಾಜಕುಮಾರ್, ಕಲ್ಯಾಣ್ ಕುಮಾರ್, ಬಿ.ಆರ್. ಪಂತುಲು, ‘ಚೋಮನ ದುಡಿ’ ವಾಸುದೇವರಾವ್ ಮುಂತಾದವರೆಲ್ಲ ಅಲ್ಲಿದ್ದರು. ಅವರಲ್ಲಿ ಬಹಳಷ್ಟು ಜನರ ಜತೆಗೆ ಕೆಲಸ ಮಾಡುವ ಅವಕಾಶ ನಮಗೆ ಸಿಕ್ಕಿತ್ತು. ಅಲ್ಲಿ ಒಬ್ಬ ಕಲಾವಿದ ರಾಜನ ಪಾತ್ರ ಮಾಡಿದರೆಂದರೆ, ಬರೀ ಅದೇ ಪಾತ್ರಕ್ಕೆ ಸೀಮಿತವಾಗುತ್ತಿರಲಿಲ್ಲ, ಎಲ್ಲ ತರಹದ ಪಾತ್ರಗಳನ್ನೂ ಮಾಡಿಸುತ್ತಿದ್ದರು.
ಗುಬ್ಬಿ ಕಂಪನಿಯಲ್ಲಿರುವಷ್ಟು ಕಾಲ ಹೊಟ್ಟೆ-ಬಟ್ಟೆಗೆ ಕಷ್ಟ ಅನಿಸಲಿಲ್ಲ. ಹಬ್ಬಕ್ಕೆ ಬಟ್ಟೆ ಕೊಡಿಸೋರು. ಹಬ್ಬದ ಸಂದರ್ಭಗಳಲ್ಲಿ ಎಣ್ಣೆ ಸ್ನಾನ ಮಾಡಿಸುತ್ತಿದ್ದರು. ಪ್ರತೀ ಶುಕ್ರವಾರ ಕಂಪನಿಯಲ್ಲಿ ಪೂಜೆ ನಡೆಯುತ್ತಿತ್ತು. ಆಗಿನ ನಾಟಕರಂಗವೇ ಬೇರೆ. ಮುಖಕ್ಕೆ ಮಾತ್ರವಲ್ಲ, ಕಾಲಿಗೂ ಬಣ್ಣ ಹಾಕಿಕೊಳ್ಳದೇ ರಂಗಪ್ರವೇಶ ಮಾಡುವುದಕ್ಕೆ ಬಿಡುತ್ತಿರಲಿಲ್ಲ. ಇನ್ನು, ಯಾವಾಗಲೂ ಸಾಂಬ್ರಾಣಿ, ಧೂಪ ಹಾಕಲಾಗುತ್ತಿತ್ತು. ನಾಟಕಕ್ಕೆ ಹೋದರೆ, ದೇವಸ್ಥಾನಕ್ಕೆ ಹೋದ ಅನುಭವವಾಗುತ್ತಿತ್ತು. ಅಂತಹ ವೈಭವ ಈಗ ನೋಡುವುದಕ್ಕೆ ಸಾಧ್ಯವಿಲ್ಲ.
1963ರಲ್ಲಿ ಬಿ.ಡಿ. ಜತ್ತಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಿಧಾನ ಸೌಧದಲ್ಲಿ ನಮಗೆ ಸನ್ಮಾನ ಮಾಡಲಾಗಿತ್ತು. ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಫೋಟೋವನ್ನು ಅಪ್ಪೋರು (ಗುಬ್ಬಿ ವೀರಣ್ಣನವರು) ನಮಗೆ ತೋರಿಸಿ, ಬಹಳ ಸಂಭ್ರಮ ಪಟ್ಟಿದ್ದರು. ಒಟ್ಟಾರೆ ಹೇಳಬೇಕೆಂದರೆ, ಗುಬ್ಬಿ ವೀರಣ್ಣ ಆಲದ ಮರ ಇದ್ದಂತೆ. ಆ ಮರದ ಕೆಳಗೆ ಬೆಳೆದ ಗಿಡಗಳು ನಾವು. ಕಂಪನಿಯಲ್ಲಿ ಹಲವು ನಾಟಕಗಳ ನೂರಾರು ಪ್ರದರ್ಶನಗಳಲ್ಲಿ ನಟಿಸಿದೆವು. ಆ ನಂತರ ನಮ್ಮದೇ ಸ್ವಂತ ನಾಟಕ ಕಂಪನಿ ನಡೆಸಿ ನಾಟಕಗಳನ್ನು ಮಾಡಿಕೊಂಡು ಬಂದಿದ್ದೇವೆ. ಇವತ್ತು ನಾವು ಏನಾಗಿದ್ದೇವೋ, ಅವೆಲ್ಲಕ್ಕೂ ಗುಬ್ಬಿ ವೀರಣ್ಣನವರೇ ಕಾರಣ. ಅವರಿಂದ ಕಲಿತಿದ್ದು, ಕಂಪನಿಯಲ್ಲಿ ಕಲಿತಿದ್ದೇ ನಮಗೆ ಶ್ರೀರಕ್ಷೆಯಾಗಿದೆ.
|ಡಾ.ಬಿ.ವಿ. ರಾಜಾರಾಂರಂಗನಿರ್ದೇಶಕ
ಡಾ. ಗುಬ್ಬಿ ವೀರಣ್ಣನವರು ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ರಂಗದಲ್ಲಿ ಹಲವು ಪ್ರಥಮಗಳನ್ನು ಮಾಡಿದವರು. ವೃತ್ತಿರಂಗದಲ್ಲಿ ಸುಮಾರು ಒಂದು ಶತಮಾನಕಾಲ ಪ್ರದರ್ಶನ ನೀಡಿದವರು ಗುಬ್ಬಿ ಕಂಪನಿಯವರು. ಬಾಲ ಕಲಾವರ್ಧಿನಿ ಎಂದು ಮಕ್ಕಳಿಗಾಗಿ ಕಂಪನಿ ಆರಂಭಿಸಿದರು. ಲಕ್ಷಾಂತರ ರೂ.ಗಳನ್ನು ಖರ್ಚುಮಾಡಿ, ವಿಶೇಷವಾದ ನಾಟಕ ಪ್ರದರ್ಶನಗಳನ್ನು ಮಾಡಿಸಿದರು. ನಾಟಕಕಾರರನ್ನು ಕರೆಸಿ, ನಾಟಕ ಬರೆಸಿ, ಪ್ರದರ್ಶನ ಮಾಡಿಸಿದರು.
ದೃಶ್ಯ ವೈಭವ ಪರಂಪರೆ, ರಂಗಸಂಗೀತ ಪರಂಪರೆ ಮತ್ತು ಅಭಿನಯ ಪರಂಪರೆಯನ್ನು ಸೃಷ್ಟಿಸಿದರು. ಉತ್ತಮ ನಟ ಪರಂಪರೆ ಉಳಿದುಬಂದಿತು. ವ್ಯವಸ್ಥಿತವಾದ ಸಂಘಟನೆಯನ್ನು ರೂಢಿಗೆ ತಂದರು. ಪ್ರಾಣಿಗಳನ್ನು ರಂಗಕ್ಕೆ ತಂದರು. ನ ಭೂತೋ ನ ಭವಿಷ್ಯತಿ ಎನ್ನುವ ರೀತಿಯಲ್ಲಿ ವೃತ್ತಿ ಕಂಪನಿಗಳ ಹಿರಿಮೆಯನ್ನು ಸ್ಥಾಪಿಸಿದರು. ನಟ-ನಟಿಯರ ಜೀವನವನ್ನು ಸುಧಾರಿಸಿದರು. ಹೀಗೆ ವೃತ್ತಿರಂಗ ಸಮಗ್ರ ಬೆಳವಣಿಗೆಯನ್ನು ಕಾಣುವಂತಾಯಿತು. ಚಲನಚಿತ್ರರಂಗದಲ್ಲೂ ಮೂಕಿ ಚಿತ್ರ, ನಂತರ ಟಾಕಿ ಚಿತ್ರ, ಕಂಠೀರವ ಸ್ಟುಡಿಯೋ ಮುಂತಾದ ಕಾರ್ಯಗಳನ್ನು ಸಾಧಿಸಿದರು. ಕರ್ನಾಟಕಾಂಧ್ರ ಸಾರ್ವಭೌಮನೆನಿಸಿದರು. ಮೈಸೂರು ಮಹಾರಾಜರಿಂದ ಬಿರುದು, ಬಿಲ್ಲತ್ತುಗಳನ್ನು ಪಡೆದರು.
‘ರಂಗಭೂಮಿ ಅನಕ್ಷರಸ್ಥರ ವಿಶ್ವವಿದ್ಯಾಲಯ’ ಎನ್ನುವ ನಾಣ್ಣುಡಿಗೆ ಕಾರಣರಾದರು. ಕಥಾ ಚೌಕಟ್ಟು, ರಂಗಸಂಗೀತ, ಭಾಷಾ ಶುದ್ಧಿ, ಸಂಭಾಷಣೆ, ಅಭಿನಯ ಪ್ರೌಢಿಮೆ ರೂಪಿಸಿದರು. ಅವರ ಪ್ರದರ್ಶನಗಳು ಇಡೀ ಕುಟುಂಬದ ಸದಸ್ಯರು ಬಂದು ಕುಳಿತು ಆಸ್ವಾದಿಸುವಂತಿರುತ್ತಿತ್ತು. ರಂಗಸಂಗೀತದಲ್ಲಿ ಹೊಸತನ, ನವ-ನವೀನವಾದ ವಾದ್ಯಬಳಕೆ, ಬೆಳಕಿನ ಉಪಕರಣಗಳ ಮಾದರಿ ವೃತ್ತಿಕಂಪನಿ ಸ್ಥಾಪಿಸಿ, ಚಿರಸ್ಥಾಯಿಯಾದರು. ಕಲೆಯ ಕಾಯಕಮಾಡಿ ಕಲಾತಪಸ್ವಿಯಾದರು. ಆನೆ, ಕುದುರೆಗಳನ್ನು ಕುರುಕ್ಷೇತ್ರ ನಾಟಕದಲ್ಲಿ ರಂಗಕ್ಕೆ ತಂದರು. 1955ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾದರು. 1972ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಗೆ ಪಾತ್ರರಾದರು. 1891ರಲ್ಲಿ ಗುಬ್ಬಿಯಲ್ಲಿ ಹುಟ್ಟಿ 1972ರಲ್ಲಿ ಕಾಲವಾದರು. ಕಷ್ಟದಿಂದ ಆರಂಭವಾದ ಅವರ ಜೀವನ ರಂಗಕಾಯಕದಲ್ಲಿ ಮೇರು ಸಾಧನೆ ಮಾಡಿದ ಸಾರ್ಥಕ ಜೀವವಾಯಿತು.

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:4 × two =
Remember me
