ಸಿಖ್ ಪಂಥದ ಗುರುಪಂಕ್ತಿಯಲ್ಲಿ ಹತ್ತನೆಯವರು ಗುರು ಗೋವಿಂದ ಸಿಂಹರು. ಸಿಖ್ ಪಂಥದ ನಂಬಿಕೆಯಂತೆ, ಪಂಥದ ಸ್ಥಾಪಕರಾದ ಮೊದಲ ಗುರು ನಾನಕ್, ತಮ್ಮ ಅನಂತರ ಪಂಥದ ಗುರುವಾಗಿ ಇರಲು ಎರಡನೆಯ ಗುರು ಅಂಗದರನ್ನು ನೇಮಿಸುವಾಗ, ಅವರಲ್ಲಿ ತಮ್ಮ ಆತ್ಮವನ್ನಿರಿಸಿದರು. ಹೀಗೆಯೇ ಈ ಗುರುತ್ವ ಗುರುವಿನಿಂದ ಗುರುವಿಗೆ ಸಾಗಿತು. ಗುರು ಗೋವಿಂದ ಸಿಂಹರು, ತಾವು ದೇಹವನ್ನು ಬಿಡುವ ಮುನ್ನ, ‘ತಮ್ಮ ನಂತರ ಯಾವುದೇ ಒಬ್ಬ ವ್ಯಕ್ತಿ ಗುರುವಾಗಿ ಇರುವುದಿಲ್ಲ, ಗುರುತ್ವ ಗುರುವಾಣಿಯಾದ ಆದಿಗ್ರಂಥದಲ್ಲಿರುತ್ತದೆ’ ಎಂದೂ, ಮುಂದೆ ಪಂಥದ ಜನ ಈ ಪೂಜ್ಯಗ್ರಂಥವನ್ನು (ಗ್ರಂಥ್ ಸಾಹೇಬ್) ಗುರುವೆಂದು ಕಾಣಬೇಕು’ ಎಂದೂ ನಿಯಮಿಸಿದರು.
ಗುರು ಗೋವಿಂದ ಸಿಂಹರು ಸಿಖ್ ಪಂಥದ ಒಂಬತ್ತನೆಯ ಗುರುವಾದ ತೇಗ್ ಬಹದ್ದೂರರ ಪುತ್ರ. ಔರಂಗಜೇಬ್ ಹಿಂದೂಗಳನ್ನು ಶೋಷಿಸುತ್ತಿದ್ದಾನೆಂದು ಕಾಶ್ಮೀರದ ಬ್ರಾಹ್ಮಣರು ತೇಗ್ ಬಹದ್ದೂರರ ರಕ್ಷಣೆಯನ್ನು ಬೇಡಿ ಬಂದರು. ಗುರು ಈ ಸಂದರ್ಭದಲ್ಲಿ ಏನು ಮಾಡುವುದು ಎಂದು ಯೋಚಿಸುತ್ತ ಇದ್ದರಂತೆ. ಮಗ ‘ಚಿಂತೆಯೇನು?’ ಎಂದು ಕೇಳಿದ. ತಂದೆ, ‘ಕೆಲಸಕ್ಕೆ ಧೀರ, ಸತ್ಯವಂತ ಆದ ಸತ್ಪುರುಷ ಬೇಕು’ ಎಂದರಂತೆ. ಕುಮಾರ ಗೋವಿಂದ, ‘ನಿಮ್ಮಂಥ ಧೀರ ಸತ್ಯವಂತ ಸತ್ಪುರುಷ ಬೇರೆ ಯಾರಪ್ಪ?’ ಎಂದನಂತೆ. ತೇಗ್ ಬಹದ್ದೂರ್, ‘ಇದು ದೈವದ ವಾಣಿ’ ಎಂದು ನೆನೆದರು; ದೆಹಲಿಗೆ ಹೋಗಿ ಔರಂಗಜೇಬನಿಗೆ ಅವನು ಮಾಡುತ್ತಿದ್ದ ಅಕೃತ್ಯಗಳನ್ನು ನಿಲ್ಲಿಸಬೇಕು ಎಂದು ಸೂಚಿಸಿದರು. ಔರಂಗಜೇಬ್ ಅವರನ್ನು ಕೊಲ್ಲಿಸಿದ. ಹದಿನೈದು ವಯಸ್ಸಿನ ಬಾಲಕ ಗೋವಿಂದ ಗುರುವಾಗಬೇಕಾಯಿತು.
ಹಗೆಯೊಂದಿಗೆ ಹೋರಾಡದೆ ಬದುಕುವಂತಿಲ್ಲ ಎಂದು ನಿಶ್ಚಯಿಸಿಕೊಂಡ ಗುರು ಗೋವಿಂದ ಸಿಂಹ ಸಿಖ್ ಜನರನ್ನು ಒಂದು ಕ್ಷತ್ರಿಯ ಸಮುದಾಯವಾಗಿ ರೂಪಿಸಲು ನಿರ್ಣಯಿಸಿದರು. ತಮ್ಮ ಶಿಷ್ಯರು ಖಾಲ್ಸಾ ಎಂಬ ಹೆಸರಿಂದ ಒಂದು ಯೋಧಸಮಾಜವಾಗಿ ಬಾಳಬೇಕು ಎಂದು 1669ರ ಯುಗಾದಿಯ ದಿನ ಆಜ್ಞೆ ಮಾಡಿ ಮೊದಲು ಹತ್ತು ಜನರಿಗೆ ಅಂದೇ ದೀಕ್ಷೆ ಕೊಟ್ಟರು. ಖಾಲ್ಸಾ ಎಂದರೆ ಶುದ್ಧ. ಖಾಲ್ಸಾ ಮಂದಿ ಶುದ್ಧಜೀವನ ನಡೆಸಬೇಕು ಎಂದೂ; ಸಿಖ್ ಆದವನಿಗೆ ಕೇಶ, ಕಂಘ, ಕಚ್ಛ, ಕರ, ಕೃಪಾಣ ಎಂಬ ಪಂಚ ‘ಕ’ಕಾರಗಳ ರಕ್ಷಣ ಇರಬೇಕು ಎಂದೂ ನಿಯಮ ಹಾಕಿಕೊಟ್ಟರು. ಔರಂಗಜೇಬನಿಗೆ ಅವನ ಮತದ್ವೇಷವನ್ನು ಖಂಡಿಸಿ ಗೋವಿಂದ ಒಂದು ಪತ್ರ ಬರೆದರು. ಇದು ಜಫರ್ ನಾಮಾ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಆಯುಷ್ಯವೆಲ್ಲ ಧರ್ಮರಕ್ಷಣೆಗಾಗಿ ಕಾದಾಡಿದರು. ಈ ಕಾದಾಟದಲ್ಲಿ ಇವರ ಮಕ್ಕಳಲ್ಲಿ ಇಬ್ಬರು ಯುದ್ಧದಲ್ಲಿ ಹುತಾತ್ಮರಾದರು. ಇಷ್ಟಾದರೂ ಈ ಧರ್ಮಸಿಂಹ ಧೈರ್ಯಗೆಡಲಿಲ್ಲ; ಬಂದ ದುಃಖಕ್ಕೆ ತಲೆಕೊಟ್ಟು ಶಿಷ್ಯರಿಗೆ ಮೇಲ್ಪಂಕ್ತಿಯಾಗಿ ಬಾಳಿದರು.
ಹಿಂದಿನ ಗುರುಗಳ ಕೃತಿಗಳನ್ನೆಲ್ಲ ಸಂಗ್ರಹಿಸಿ ಪರಿಷ್ಕರಿಸಿ ಅವಕ್ಕೆ ಒಂದು ಸ್ಥಿರವಾದ ರೂಪವನ್ನು ಕೊಟ್ಟದ್ದು ಗುರು ಗೋವಿಂದ ಸಿಂಹರು. ಗೋವಿಂದ ಸಿಂಹ ತಾವೂ ಕೃತಿ ಗಳನ್ನು ರಚಿಸಿದರು. ಆದರೆ ಅದನ್ನು ಗ್ರಂಥ್ ಸಾಹೇಬ್​ನಲ್ಲಿ ಸೇರಿಸಲಿಲ್ಲ. ಇವರು ತೀರಿದ ಅನಂತರ ಶಿಷ್ಯನೊಬ್ಬ ಆ ಕೃತಿಗಳನ್ನು ಸಂಗ್ರಹಿಸಿದ. ಅದು ‘ದಶಮಗ್ರಂಥ’ ಎಂದರೆ ಹತ್ತನೆಯ ಗುರುವಿನ ಗ್ರಂಥ ಎಂಬ ಹೆಸರಿನಿಂದ ಬಳಕೆಗೆ ಬಂತು. ಇದರಲ್ಲಿ ಗೋವಿಂದ ಸಿಂಹರ ಎರಡು ಸಾವಿರದಷ್ಟು ರಚನೆಗಳಿವೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 + three =
Remember me
