ಅಭೀಷ್ಟಗಳನ್ನು ಕೊಟ್ಟು ಸರ್ವೇಷ್ಟನಾದ ಭಗವಂತನ ಅರಿವು ಮೂಡಿಸುವ ಕಲಾತ್ಮಕತೆ ಬೆರಳೆಣಿಕೆಯ ಮಹಾತ್ಮರಲ್ಲಷ್ಟೇ ಕಾಣುವೆವು. ಅಂತಹ ಮಹಾತ್ಮರು ಕಣ್ಣೆದುರು ಇದ್ದಾಗ ಕೆಲವರಿಗಷ್ಟೇ ಅರ್ಥವಾಗಿ ಕಾಣದಾದಾಗಲೇ ಹೆಚ್ಚು ಅಂತರಂಗಕ್ಕೆ ಹತ್ತಿರವಾಗುತ್ತ ಸಾಮಾನ್ಯರಿಂದ ಮೊದಲ್ಗೊಂಡು ಅಸಾಮಾನ್ಯರವರೆಗೂ ಹೆದೆ್ದೖವವಾಗಿ ಬಿಡುವರು. ವೈದಿಕರಾಗಿ-ವೈಣಿಕರಾಗಿ ಪೂರ್ವಾಪರ ಆಶ್ರಮಗಳೆರಡರಲ್ಲೂ ಉಪನಿಷತ್ತು ಸಾರುವಂತೆ ಅಕ್ಷರಶಃ ತಾವೇ ವೀಣೆಯಾಗಿ ಭಗವಂತನ ಹೃದ್ಯವ ನಾದದ ರೂಪದಲ್ಲಿ ಹೊಮ್ಮಿಸಿದ ಮಹಾತ್ಮರು ವೆಂಕಟನಾಥರು ಅರ್ಥಾತ್ ಶ್ರೀರಾಘವೇಂದ್ರ ಸ್ವಾಮಿಗಳು. ಅವರ ಭವ್ಯವ್ಯಕ್ತಿತ್ವವನ್ನು ಚಿತ್ರಿಸಲು ಅವರ ಸಮಕಾಲೀನ ಅಥವಾ ತರುವಾಯ ಬಂದ ಅದೆಷ್ಟೋ ಜ್ಞಾನಿಗಳಿಗೆ ರಾಯರ ಕುರಿತಾಗಿ ಅಸಂಖ್ಯ ವಿಚಾರಗಳಿದ್ದವು. ಆದರೆ ಬಣ್ಣಿಸಲು ಪದಗಳು ಸಾಲುತ್ತಿರಲಿಲ್ಲವೆಂದು ಬಿಗುಮಾನವಿಲ್ಲದೇ ಕೊಂಡಾಡಿದ ಜ್ಞಾನಿಗಳನ್ನು ಸಹಸ್ರ ಸಂಖ್ಯೆಯಲ್ಲಿ ಕಾಣುವೆವು. ತಿಳಿವಳಿಕೆಯ ಬೆನ್ನು ಹತ್ತಿ ಒಮ್ಮೆ ನೋಡಿ, ರಾಯರು ತಮ್ಮ ಪೂರ್ವಾವತಾರಗಳಾದ ಶ್ರೀ ವ್ಯಾಸರಾಜರು, ಪ್ರಹ್ಲಾದರಾಜರು ಮೊದಲಾದ ಸ್ಥಿತಿಯಲ್ಲೂ ಅವರ ಉದ್ದೇಶವಿದ್ದಿದ್ದು ಹರಿಯ ಸರ್ವೆತ್ತಮತ್ವದ ಚಿಂತನೆ ಮತ್ತು ಪ್ರತಿಪಾದನೆ ಹಾಗೂ ಅದಕ್ಕೆ ಮಾರಕವಾದ ವಿಷಯಗಳ/ಮಂದಿಯ ಕಿವಿಹಿಂಡಿ ಸರಿದಾರಿಗೆ ತರುವುದೇ ಹೊರತು ಇನ್ನಾವುದೂ ಅಲ್ಲ.
ಅನೂಚಾನವಾಗಿ 400 ವರ್ಷಗಳಿಂದ ಪಂಥ-ಜಾತಿಗಳ ವೈಷಮ್ಯವಿಲ್ಲದೆ ಅರಸಿ ಬಂದ, ಸ್ಮರಿಸಿ ಬಂದ ಎಲ್ಲರನ್ನೂ ಮೇಲೆತ್ತಿ, ಕಾಪಾಡುತ್ತಲೇ ಇರುವ ರಾಘವೇಂದ್ರಸ್ವಾಮಿಗಳಂತಹ ಕಾರುಣ್ಯದಪ್ರವಾಹ, ಎಲ್ಲರ ಪಾಪಗಳನ್ನು ಸ್ವಚ್ಛಗೊಳಿಸುವುದೇ ಹೊರತು ಕೊಚ್ಚಿಹೋಗಿಸುವುದಿಲ್ಲ. ಫಾಲ್ಗುಣ ಮಾಸ ರಾಯರ ಭಕ್ತರಿಗೆ ಸುಗ್ಗಿಯ ಹಿಗ್ಗನ್ನು ಹೆಚ್ಚಿಸುವ ಮಾಸ. ಕಾರಣ, ರಾಯರ ವರ್ಧಂತಿ ಹಾಗೂ ಪಟ್ಟಾಭಿಷೇಕಗಳೆರಡೂ ನಡೆದದ್ದು ಈ ಮಾಸದಲ್ಲೇ. ಕಡುಬಡತನವೇ ಹೃದಯ-ಶ್ರೀಮಂತಿಕೆಗೆ ಮಾಪಕವೆಂಬ ಸತ್ಯ ಅರಿವಿಗೆ ಬರುವುದೇ ಎಲ್ಲ ಕೊಡುವ ಸ್ವಾಮಿಯೇ ನಮಗೆ ಸಂಪತ್ತಾದಾಗ. ಇದನ್ನೇ ವೈರಾಗ್ಯದ ಮಜಲೆನ್ನುವರು. ನಾಕು-ನೂರು ವರುಷಗಳ ಹಿಂದೆ ವೆಂಕಟನಾಥರಿಗೆ ಸನ್ಯಾಸ ಒಲಿದದ್ದೇ ಒಂದು ಬಗೆಯ ಶಕುನರೂಪದಲ್ಲಿ. ಮಡದಿ ಸರಸ್ವತಿಯೊಂದಿಗೆ ಭಗವದುಪಾಸನೆಯಲ್ಲಿ ತೊಡಗಿಕೊಂಡಿದ್ದ ವೆಂಕಟನಾಥರ ಕಡುಬಡತನಕ್ಕೂ ಕಳ್ಳನೋರ್ವ ಮನಮಾಡಿ ಮುರುಕಿನಗೂಡನ್ನೂ ದೋಚಿ ಕೌಪೀನವೊಂದನ್ನಷ್ಟೇ ಬಿಟ್ಟುಹೋಗಿದ್ದ. ಇದನ್ನು ಸೂಚನೆ ಎಂದು ಭಾವಿಸಿದ್ದರು ವೆಂಕಟನಾಥರು. ಅಂತೆಯೇ ಇವರ ಕುರಿತಾಗಿ ಸ್ವಪ್ನವಾದ ಶ್ರೀಸುಧೀಂದ್ರತೀರ್ಥರು ಇವರನ್ನೇ ಉತ್ತರಾಧಿಕಾರಿಗಳಾಗಬೇಕೆಂದು ತೀರ್ವನವಿತ್ತಾಗ ನಯವಾಗಿ ಆತಂಕವನ್ನು ವ್ಯಕ್ತಪಡಿಸಿದ್ದರು. ಇಲ್ಲಿ ಅವರ ಆತಂಕಕ್ಕೆ ಕಾರಣ ಆಚಾರ್ಯಮಧ್ವರ ವೇದಾಂತಸಾಮ್ರಾಜ್ಯದಲ್ಲಿ ಮುನ್ನಡೆಯುವುದೇ ಎಂಬ ಸಾತ್ವಿಕ ಸಂಶಯವೇ ಹೊರತು ತಿರಸ್ಕಾರವಲ್ಲ. ಭಗವತ್ಸಂಕಲ್ಪದಂತೆ ಗುರುಗಳಾದ ಸುಧೀಂದ್ರ ತೀರ್ಥರಿಂದ ಫಾಲ್ಗುಣ ಶುದ್ಧ ದ್ವಿತೀಯದಂದು ಸನ್ಯಾಸ ಪಡೆದು ವೇದಾಂತ ಸಾಮ್ರಾಜ್ಯದಲ್ಲಿ ರಾಘವೇಂದ್ರವೆಂಬ ಅಂಕಿತದೊಂದಿಗೆ ಮಾಡಿದ ಮೊದಲ ದೊಡ್ಡ ಕೆಲಸವೇ, ಆಚಾರ್ಯಮಧ್ವರ ಹಾಗೂ ವೇದವ್ಯಾಸರ ನುಡಿಮುತ್ತುಗಳನ್ನು ವ್ಯಾಖ್ಯಾನ-ಟಿಪ್ಪಣಿಗಳ ರೂಪದಲ್ಲಿ ಕೊಡಮಾಡಿದ್ದು. ವಾಚಿಕ ತಪಸ್ಸಿನಲ್ಲಿಯೇ ಮಿಂದೆದ್ದು ತತ್ತ ್ವಜ್ಞಾನವನ್ನು ಸುಲಲಿತವಾಗಿ ಪರಿಚಯಿಸಿದ ರಾಘವೇಂದ್ರ ಸ್ವಾಮಿಗಳು ‘ವಾಙ್ಮಯಂ ತಪ ಉಚ್ಯತೇ’ ಎಂಬ ಗೀತಾಚಾರ್ಯನ ಮಾತನ್ನು ಸಾರ್ಥಗೊಳಿಸಿ ಜಿಜ್ಞಾಸುಗಳ ಜ್ಞಾನದಾಹವನ್ನು ತೀರಿಸಿದ್ದಾರೆ.
ಶ್ರೀವಾದೀಂದ್ರತೀರ್ಥರು (ರಾಯರ ಪೂರ್ವಾಶ್ರಮದ ಪ್ರಪೌತ್ರರೆನಿಸಿದ ಲಕ್ಷಿ್ಮೕನಾರಾಯಣಾಚಾರ್ಯರು) ತಮ್ಮ ಗುರುಗುಣಸ್ತವನದಲ್ಲಿ ‘ಧೀರ ಶ್ರೀರಾಘವೇಂದ್ರಂ…’ ಮುಂತಾದ ಪದಗಳಲ್ಲಿ ರಾಯರಿಗೆ ಜೀವೋತ್ತಮರಾದ ವಾಯುದೇವರ ಹಾಗೂ ಸರಸ್ವತೀದೇವಿಯ ಪರಮಾನುಗ್ರಹವಿತ್ತೆಂದು ಕೊಂಡಾಡಿದ್ದಾರೆ. ಸೂತ್ರಪ್ರಸ್ಥಾನಕ್ಕೆ, ಉಪನಿಷತ್ ಪ್ರಸ್ಥಾನಕ್ಕೆ, ಪ್ರಕರಣ ಗ್ರಂಥಗಳಿಗೆ, ಆಚಾರಗ್ರಂಥಗಳಿಗೆ ರಾಯರು ಕೊಟ್ಟ ಕೊಡುಗೆ ಅನ್ಯಾದೃಶ. ಸ್ವತಂತ್ರ ಗ್ರಂಥಗಳು ಕೆಲವೇ ಆದರು ಎಲ್ಲೆಡೆ ಸ್ವತಂತ್ರನಾದ ವಿಷ್ಣುವಿನ ಪಾರಮ್ಯವನ್ನೇ ಸಮರ್ಥಿಸಿ ದುರಿತಗಳಿಂದ ಉದ್ಧರಿಸುವುದು ಅವರ ಮುಖ್ಯ ಇಂಗಿತವಾಗಿತ್ತು. ಮಹಾಭಾರತ-ಭಾಗವತಾದಿಗಳಲ್ಲಿ ಬರುವ ಕೃಷ್ಣನ ಕಥೆಯನ್ನು ಯುಕ್ತಿಯುಕ್ತವಾಗಿ ಸಂಗ್ರಹ ಮಾಡಿ ಹೇಳುವ ರಾಯರ ಕಥನಶೈಲಿ ನಿಬ್ಬೆರಗಾಗಿಸುವುದು. ಸಾಮಾನ್ಯವಾಗಿ ಶಾಸ್ತ್ರದಲ್ಲಿನ ಆಳ ಅಳೆಯುವ ಮಂದಿಗೆ ಯೋಗ್ಯತೆ-ಸಮಯ ಇವೆರಡರ ಕೊರತೆ ಕಂಡುಬಂದರೆ ಅವರಿಗಾಗಿ ರಾಯರ ಗ್ರಂಥಗಳು ಭರವಸೆಯ ಸೆಲೆಯಾಗಿ ಕಾಣಸಿಗುವುದು.
ವ್ಯಾಸತೀರ್ಥರಾಗಿದ್ದಾಗ ವ್ಯಾಸತ್ರಗಳ ರಚನೆ ಮಾಡಿ ದುರ್ವಾದಿಗಳ ಸೊಲ್ಲಡಗಿಸಿ ಕೃಷ್ಣದೇವರಾಯರ ರಾಜಗುರುಗಳಾಗಿಯೂ ಮೆರೆದು ದಾಸಸಾಹಿತ್ಯದ ಸೊಗಡಿಗೆ ನೀರೆರೆದರೆ, ರಾಯರಾಗಿ ಮಂಚಾಲೆಯಿಂದಲೇ ಜಗತ್ತಿನಾದ್ಯಂತ ಜನರ ದುರಿತಗಳನ್ನು ಸನ್ನಿಧಾನ ವಿಶೇಷದಿಂದ ತರಿದು ಹಾಕುತ್ತಿದ್ದಾರೆ. ದೇವತೆಗಳು ಮುನಿಗಳೆಲ್ಲರು ಪರಪ್ರಯೋಜನಕ್ಕಾಗಿ ಅವತರಿಸುವರು ಎಂಬ ಪ್ರಹ್ಲಾದರಾಜರ ಮಾತಿಗೆ ಸಾಕ್ಷಿಯಂತಿರುವರು ಶ್ರೀ ಗುರುರಾಯರು.
ಬರೆದದ್ದನ್ನು ಅಳಸಿಹಾಕುವ ಅಥವಾ ಬರೆದವರನ್ನು ಜರಿವ ಸಣ್ಣ ಮನಸ್ಸು ರಾಮಾಯಣದ ಕಾಲದಿಂದಲೂ ನಡೆಯುತ್ತ ಬಂದಿದ್ದು ತತ್ತ ್ವ ನಿಜರೂಪವೇ ಏನೆಂದು ಗೊತ್ತಾಗದಂತಾದ ಕಾಲವೊಂದಿತ್ತು. ಆಗ ಆ ಕೊರತೆ ನೀಗಿದವರು ವಾಯ್ವವತಾರಿಗಳಾದ ಆಚಾರ್ಯಮಧ್ವರು. ಮುಂದೆ ಖಂಡನ ಮಂಡನಗಳ ರೂಪದಲ್ಲಿ ಬದಲಾದ ಅಧ್ಯಯನದೃಷ್ಟಿ ಪಂಡಿತರಿಗೂ ಅರ್ಥವಾಗದ ಸ್ಥಿತಿಯನ್ನುಂಟು ಮಾಡಿತ್ತು. ಆಗ ಉದ್ಭವಿಸಿದ ಕಾಮಧೇನುವೆ ಗುರು ರಾಘವೇಂದ್ರರು. ವಾದೀಂದ್ರರೇ ಹೇಳುವಂತೆ ‘ರಾಯರು ಒಮ್ಮೆ ಬರೆದದ್ದನ್ನು ಮತ್ತೊಮ್ಮೆ ಬರೆಯುತ್ತಿರಲಿಲ್ಲ, ತಿದ್ದುಪಡಿಗಾಗಿ ಅಳಿಸುತ್ತಿರಲಿಲ್ಲ ಅಥವಾ ನನ್ನದೇ ಮಾತಿದು ಎಂದು ಆಗ್ರಹ ತೋರುತ್ತಿರಲಿಲ್ಲ’, ಇದಲ್ಲವೇ ಪಾಂಡಿತ್ಯದ ಸೊಬಗು.
ರಾಘವೇಂದ್ರಸ್ವಾಮಿಗಳು ನೆಲೆಸಿರುವ ಮಂಚಾಲೆ ಅಥವಾ ಮಂತ್ರಾಲಯ ಅಕ್ಷರಶಃ ತೀರ್ಥಕ್ಷೇತ್ರವೇ. ತುಂಗೆಯ ತೀರ ತೀರ್ಥದ (ಪಾಪಗಳ ಕಿತ್ತೊಗೆವ ಬಗೆಗೆ) ಅನುಭೂತಿಗೆ ಕಾರಣವಾದರೆ, ಕ್ಷೇತ್ರಶಬ್ದದಿಂದ ಜ್ಞಾನ-ಆನಂದದ ಮೂಲಸ್ಥಾನ ಅಥವಾ ಸ್ವರೂಪನೆನಿಸಿದ ಭಗವಂತನ ನಿತ್ಯ ಸಾನ್ನಿಧ್ಯವನ್ನು ಅನುಭವಿಸಬಹುದಾಗಿದೆ. ರಾಯರ ಅಂತರಂಗ ಭಕ್ತರಲ್ಲೊಬ್ಬರಾದ ‘ರಾಘವೇಂದ್ರಸ್ತೋತ್ರ’ವೆಂಬ ಸಂಜೀವಿನಿಯನಿತ್ತಿರುವ ಅಪ್ಪಣಾಚಾರ್ಯರು ಭಕ್ತಿ ಪರವಶಭಾವದಿಂದ ಹೇಳಿದ ‘ದೇವಸ್ವಭಾವಃ ದಿವಿಜದ್ರುಮೋಯಂ’ (ಬೆಳಕಿನ ತದ್ರೂಪು, ಕಲ್ಪವೃಕ್ಷದ ತಾದಾತ್ಮ್ಯ) ಮುಂತಾದ ಮಾತುಗಳು ಹೊಗಳಿಕೆಗಾಗಿ ಹೇಳಿದ್ದಲ್ಲ ಹೊರತು ಸತ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಪಾಮರರನ್ನು ಸಲಹುವ ರಾಯರ ಕಾರುಣ್ಯ ಭರವಸೆಯನ್ನೇ ಕಳೆದುಕೊಂಡ ಜನಕೆ ಆಸರೆಯ ಸೆಲೆಯಂದರೆ ತಪ್ಪಾಗದು. ರಾಯರ ಮೃತ್ತಿಕಾ ಬೃಂದಾವನವಿರುವ ಸ್ಥಳವೆಲ್ಲವೂ ಮಂತ್ರಾಲಯದ ಪ್ರತಿಕೃತಿಯಾದರೆ, ರಾಯರ ಸ್ತೋತ್ರ ಪಠಿಸಿ ಪಾದೋದಕ ಸೇವಿಸಿದರೆ ಅದೇ ಪಾಪಗಳಿಗೆ ಅಂಕುಶಪ್ರಾಯ. ವಿದ್ಯಾಮಠವೆಂದೇ ಪ್ರತೀತವಾದ ರಾಯರ ಮಠ ಅನೂಚಾನವಾಗಿ ವಿದ್ಯಾವಂತರಿಗೆ ಸಗ್ಗವಾಗಿ ನಿಂತಿರುವುದು ವಿದ್ವಾಂಸರಿಗೆ, ಸಾಧಕವರ್ಗಕ್ಕೆ ನೆಮ್ಮದಿಯ ವಿಷಯ. ಪ್ರಸ್ತುತ ರಾಯರ ವೇದಾಂತ ಸಾಮ್ರಾಜ್ಯದಲ್ಲಿ ವಿರಾಜಮಾನರಾದ ಶ್ರೀ ಸುಬುಧೇಂದ್ರತೀರ್ಥರು ರಾಯರ ಪ್ರತಿನಿಧಿಗಳಾಗಿದ್ದು, ನಾಕು-ನೂರನೆಯ ಪಟ್ಟಾಭಿಷೇಕ ಮಹೋತ್ಸವವನ್ನು ವೈಭವದಿಂದ ಜ್ಞಾನಕಾರ್ಯ, ಸಮಾಜಸೇವಾ ಮುಂತಾದ ಭಗವತ್ಪ್ರೀತಿಕಾರಕ ಕಾರ್ಯಕ್ರಮಗಳ ಮೂಲಕ ಆಚರಿಸುತ್ತ ಭಕ್ತವೃಂದವನ್ನು ಅನುಗ್ರಹಿಸುತ್ತಿದ್ದಾರೆ. ಅವರ ಅಂತರ್ಯಾಮಿಯಾದ ರಾಯರಲ್ಲಿ ಹಾಗೂ ಶ್ರೀರಾಮಚಂದ್ರ ದೇವರಲ್ಲಿ ಕೇವಲ ಉದ್ಧಾರದ ಹೆದ್ದಾರಿಯನ್ನು ಪ್ರಾರ್ಥಿಸೋಣ.
(ಲೇಖಕರು ಸಂಸ್ಕೃತ ಪ್ರವಾಚಕರು)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 + eleven =
Remember me
