|ಡಾ. ರಾಜೇಶ್ವರಿ ವೀ. ಶೀಲವಂತ
ಹನ್ನೆರಡನೆಯ ಶತಮಾನದಲ್ಲಿ ಇತಿಹಾಸದಲ್ಲಿಯೇ ಪ್ರಪ್ರಥಮ ವಾಗಿ ದುಡಿಯುವ ವರ್ಗದ ಅಸ್ಮಿತೆಯ ಪ್ರತೀಕವಾಗಿ ಹುಟ್ಟಿಕೊಂಡಿದ್ದು ಶರಣ ಚಳವಳಿ. ಈ ಚಳವಳಿಯಲ್ಲಿ ಶತಶತಮಾನಗಳಿಂದ ಜಾತಿಯ ಹೆಸರಿನಲ್ಲಿ ಶೋಷಣೆ, ಅವಮಾನಕ್ಕೊಳಗಾಗಿದ್ದ ಕಷ್ಟ ಸಹಿಷ್ಣುಗಳು, ಶ್ರಮಜೀವಿಗಳೆಲ್ಲರೂ ಒಂದಾಗಿ ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತರು. ಜಾತಿ, ವರ್ಣ, ವರ್ಗ, ಲಿಂಗಗಳನ್ನು ಆಧರಿಸಿ ಅಸಮಾನತೆಯಿಂದ ನಿರ್ವಣಗೊಂಡಿದ್ದ ಸಮಾಜವನ್ನು ಧಿಕ್ಕರಿಸಿ, ಪ್ರತಿಯಾಗಿ ಸಹಬಾಳ್ವೆ, ಸಮಾನತೆ, ಪರಸ್ಪರ ಸಹಕಾರ, ಸಹಾನುಭೂತಿ, ಅರಿವು, ಆಚಾರ, ನಡೆನುಡಿ ಸಿದ್ಧಾಂತಗಳ ಆಧಾರದ ಮೇಲೆ ಜನಮುಖಿ ಸಮಾಜ ನಿರ್ವಿುಸಿದರು. ಕಸುಬುದಾರರು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಅಸ್ಪೃ್ಯರು ಅಕ್ಷರಜ್ಞಾನವನ್ನು, ವೈಚಾರಿಕ ಮನೋಭಾವವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಪ್ರತಿಭಟನೆಯ ಕಿಚ್ಚನ್ನು ಪಡೆದುಕೊಂಡರು. ಭಾವನೆಗಳನ್ನು ಅಭಿವ್ಯಕ್ತಿಸಲು ಸಾಹಿತ್ಯವನ್ನು ಮಾಧ್ಯಮವನ್ನಾಗಿ ಮಾಡಿಕೊಂಡರು. ಅಸಂಖ್ಯಾತ ಶರಣರ ನೇತೃತ್ವದಲ್ಲಿ ನಡೆದ ಈ ಚಳವಳಿಯ ಪ್ರಮುಖ ಹರಿಕಾರರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು.
ಹಡಪದ ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದ ಚೆನ್ನವೀರಪ್ಪ- ದೇವಕಮ್ಮನವರ ಮಗ. ದೇಗಿನಾಳ ಗ್ರಾಮದ ಜೀರ ನಾಗಪ್ಪ- ಚೆನ್ನಬಸಮ್ಮನವರ ಮಗಳಾದ ಲಿಂಗಮ್ಮ ಇವರ ಪತ್ನಿ. ಇವರ ಕಾಲವನ್ನು ಕ್ರಿ.ಶ 1160 ಎಂದು ಗುರುತಿಸಲಾಗುತ್ತದೆ. ಇವರು ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ ಸುಮಾರು 250 ವಚನಗಳನ್ನು ರಚಿಸಿದ್ದಾರೆ. ಅವರ ಪತ್ನಿ ಲಿಂಗಮ್ಮ ‘ಅಪ್ಪಣ್ಣಪ್ರಿಯ ಚೆನ್ನಬಸವಣ್ಣ’ ಅಂಕಿತದಲ್ಲಿ 114 ವಚನಗಳನ್ನು ರಚಿಸಿದ್ದಾರೆ. ಕಲ್ಯಾಣ ಕ್ರಾಂತಿಯ ತರುವಾಯ ಇವರು ತಂಗಡಗಿಯಲ್ಲಿ ಐಕ್ಯರಾಗಿದ್ದು, ಅಲ್ಲಿಯೇ ಇವರ ಸಮಾಧಿ ಇದೆ. ಬನವಾಸಿಯ ಮಧುಕೇಶ್ವರ ದೇವಾಲಯದ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನಲ್ಲಿರುವ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನವರ ವಿಗ್ರಹವಿದೆ.
‘ಹಡಪ’ ಎಂಬ ಪದಕ್ಕೆ ಎಲೆ, ಅಡಿಕೆಯನ್ನಿ ಡುವ ಚೀಲ, ಕ್ಷೌರದ ವಸ್ತುಗಳನ್ನಿಡುವ ಚೀಲ ಎಂಬ ಅರ್ಥಗಳಿರುವುದರಿಂದ ಅಪ್ಪಣ್ಣನವರ ವೃತ್ತಿಯ ಬಗ್ಗೆ ಗೊಂದಲಗಳಿವೆ. ‘ಶರಣ ಲೀಲಾಮೃತ’ದಲ್ಲಿ ಬಿಜ್ಜಳನ ಆಸ್ಥಾನದಲ್ಲಿದ್ದ ಬಸವಣ್ಣನವರಿಗೆ ಅಪ್ಪಣ್ಣನವರು ತಾಂಬೂಲ ಕಳುಹಿಸಿಕೊಟ್ಟ ‘ತಾಂಬೂಲ ಪವಾಡದ ಕತೆ’ ಇದ್ದರೆ, ಇಂದು ಕ್ಷೌರಿಕ ವೃತ್ತಿಯನ್ನು ಮಾಡುವ ಹಡಪದ ಸಮಾಜದವರು ಅಪ್ಪಣ್ಣನೇ ತಮ್ಮ ಸಮಾಜದ ಮೂಲಪುರುಷ ಎನ್ನುತ್ತಾರೆ. ಬೆಳಗ್ಗೆ ಹಡಪದ ಸಮಾಜದವರ ಮುಖ ನೋಡಿದರೆ ಅಪಶಕುನವಾಗುತ್ತದೆ ಎಂಬ ಮೂಢನಂಬಿಕೆ ಸಮಾಜದಲ್ಲಿದ್ದು ಅದನ್ನು ನಿವಾರಿಸಲು ಬಸವಣ್ಣನವರು ಯಾರೇ ಬಂದರೂ ಮೊದಲು ಅಪ್ಪಣ್ಣನವರನ್ನು ನೋಡಿಕೊಂಡೆ ಬರಬೇಕೆಂಬ ನಿಯಮ ಮಾಡಿದ್ದರೆಂಬ ಪ್ರತೀತಿ ಇದೆ. ಹೀಗಾಗಿ, ಅಪ್ಪಣ್ಣನವರು ಶರಣರ ಕ್ಷೌರ ಮಾಡುವ ವೃತ್ತಿ ಮಾಡುತ್ತಿದ್ದರೆಂಬ ಅಭಿಪ್ರಾಯಗಳಿವೆ. ಅಪ್ಪಣ್ಣನವರ ಒಂದು ವಚನದಲ್ಲಿ ಮಾತ್ರ ‘ಹಡಪಿಗ’ಎನ್ನುವ ಪದವಿದ್ದು, ಅಲ್ಲಿ ಅವರ ವೃತ್ತಿಯನ್ನು ಪ್ರಸ್ತಾಪಿಸಿಲ್ಲ. ಹಾಗಾಗಿ ಅವರ ವೃತ್ತಿಯ ಬಗ್ಗೆ ಇನ್ನೂ ಗೊಂದಲಗಳಿವೆ.
ಮಸಬಿನಾಳ, ವಿಜಯಪುರಗಳಲ್ಲಿ ಶಿಕ್ಷಣ ಪಡೆದ ಅಪ್ಪಣ್ಣನವರು ಗುರುಗಳೊಂದಿಗೆ ಕೂಡಲಸಂಗಮದಲ್ಲಿ ನೆಲೆಸಿರುವ ಸಂದರ್ಭದಲ್ಲಿಯೇ ಬಸವಣ್ಣನವರು ಕೂಡಲಸಂಗಮದಲ್ಲಿ ನೆಲೆಸಿದ್ದರಿಂದ, ಇವರಿಬ್ಬರ ನಡುವೆ ಬಾಂಧವ್ಯ ಬೆಳೆಯುತ್ತದೆ. ತರುವಾಯ ಕಲ್ಯಾಣಕ್ಕೆ ತೆರಳಿದ ಅಣ್ಣ, ಶರಣರ ಖ್ಯಾತಿ ತಿಳಿದು ಕಲ್ಯಾಣಕ್ಕೆ ಬಂದ ಬಾಲ್ಯದ ಜೊತೆಗಾರ ಅಪ್ಪಣ್ಣನವರನ್ನು ಅನುಭವ ಮಂಟಪದಲ್ಲಿ ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಳ್ಳುತ್ತಾರೆ. ಅಣ್ಣನ ಬಗ್ಗೆ ಅಪಾರವಾದ ಗೌರವ, ಭಕ್ತಿ ಹೊಂದಿದ್ದ ಅಪ್ಪಣ್ಣನವರು ಕಾಯಾ-ವಾಚಾ- ಮನಸ್ಸಿನಿಂದ ಸೇವೆ ಮಾಡಿ ಅಣ್ಣನ ಕೊನೆಗಾಲದವರೆಗೂ ಅವರ ಒಡನಾಡಿಯಾಗಿ, ಆಪ್ತಸೇವಕನಾಗಿ ಬಾಳುತ್ತಾರೆ. ಲೌಕಿಕ- ಪಾರಮಾರ್ಥಿಕಗಳೆರಡನ್ನೂ ಲೀಲಾಜಾಲವಾಗಿ ತೂಗಿಸಿಕೊಂಡು ಹೋಗುತ್ತಿದ್ದುದರಿಂದ ಶರಣರೆಲ್ಲ ಅವರನ್ನು ‘ನಿಜಸುಖಿ ಅಪ್ಪಣ್ಣ’ ಎಂದೂ, ಇವರ ಶರಣಸತಿ ಲಿಂಗಮ್ಮನನ್ನು ‘ನಿಜಮುಕ್ತೆ’ ಎಂದೂ ಕರೆದರು. ಅನುಭವ ಮಂಟಪದ ಮಹಾನುಭಾವಿ ಯಾದ ಅಪ್ಪಣ್ಣನವರ ವಚನಗಳಲ್ಲಿ ಷಟಸ್ಥಲದ ವಿಷಯಗಳು ಪ್ರಮುಖ ವಾಗಿ ಪ್ರಸ್ತಾಪವಾಗಿವೆ. ಪ್ರಭುದೇವ, ಅಕ್ಕಮಹಾದೇವಿ ಯರಂತೆ ಅಪ್ಪಣ್ಣ ಸಹ ಬೆಡಗಿನ ವಚನಗಳನ್ನು ರಚಿಸಿದ್ದು, ಕಾಯಕನಿಷ್ಠೆ, ದಾಸೋಹನಿಷ್ಠೆ, ಭಕ್ತಿ, ವೈರಾಗ್ಯ, ಆಚಾರ- ವಿಚಾರಗಳನ್ನು ವೈಚಾರಿಕತೆಯ ನೆಲೆಯಲ್ಲಿ ವಿಡಂಬನಾತ್ಮಕವಾಗಿ ವಚನಗಳಲ್ಲಿ ತಿಳಿಸುತ್ತಾರೆ. ಇವು ಅಜ್ಞಾನಿಗಳಿಗೆ ಸನ್ಮಾರ್ಗ ವನ್ನು ತೋರಿಸುವ ದಾರಿದೀಪಗಳಾದರೆ, ಶೋಷಕವರ್ಗಕ್ಕೆ ಚಾಟಿ ಏಟಿನಂತಿವೆ.
ಅನ್ನವನ್ನಿಕ್ಕಿದರೇನು? ಹೊನ್ನ ಕೊಟ್ಟರೇನು?
ಹೆಣ್ಣು ಕೊಟ್ಟರೇನು? ಮಣ್ಣು ಕೊಟ್ಟರೇನು? ಪುಣ್ಯ ಉಂಟೆಂಬರು.
ಅವರಿಂದಾದೊಡವೆ ಏನು ಅವರೀವುದಕ್ಕೆ?
ಇದಕ್ಕೆ ಪುಣ್ಯವಾವುದು, ಪಾಪವಾವುದು?
ನದಿಯ ಉದಕವ ನದಿಗೆ ಅರ್ಪಿಸಿ,
ತನತನಗೆ ಪುಣ್ಯ ಉಂಟೆಂಬ ಬಡಹಾರುವರಂತೆ,
ಸದಮಳ ಶಾಶ್ವತ ಮಹಾಘನಲಿಂಗವನರಿಯದೆ,
ಇವೇನ ಮಾಡಿದರೂ ಕಡೆಗೆ ನಿಷ್ಪಲವೆಂದಾತ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಸಮಾಜದಲ್ಲಿ ಮೇಲ್ಜಾತಿಯವರೆನಿಸಿಕೊಂಡವರು ಕೆಳಜಾತಿಯವರಲ್ಲಿ, ನಿಮ್ಮ ಸ್ಥಿತಿಗೆ ಪಾಪಗಳೇ ಕಾರಣ. ತಮಗೆ ಗೋದಾನ, ಭೂದಾನ, ಅನ್ನದಾನ, ಕನ್ಯಾದಾನ ಗಳನ್ನು ಮಾಡುವ ಮೂಲಕ ನಿಮ್ಮ ಪಾಪಗಳನ್ನು ಕಳೆದುಕೊಳ್ಳಬಹುದೆಂಬ ಮೌಢ್ಯವನ್ನು ಬಿತ್ತಿದ್ದರು. ಅಜ್ಞಾನದಲ್ಲಿ ಮುಳುಗಿದ್ದ ಶ್ರಮಿಕವರ್ಗ ತಮ್ಮ ದುಡಿಮೆಯನ್ನೆಲ್ಲ ಇದಕ್ಕಾಗಿಯೇ ಸುರಿದು ಕಷ್ಟದ ಬದುಕನ್ನು ನಡೆಸುವುದನ್ನು ಕಂಡ ಅಪ್ಪಣ್ಣನವರು ಅನ್ನ, ನೀರು, ಹಣ ಇತ್ಯಾದಿಗಳನ್ನು ಕೊಟ್ಟು ಪುಣ್ಯ ಪಡೆಯಲು ಆ ವಸ್ತುಗಳನ್ನೇನು ನೀವು ಸೃಷ್ಟಿಸಿರುವಿರಾ? ಎಂದು ಪ್ರಶ್ನಿಸುವ ಮೂಲಕ ವೈಚಾರಿಕ ಸತ್ಯವಿಚಾರಗಳನ್ನು ತಿಳಿಸಿ, ಅವರನ್ನು ಶೋಷಣೆಯಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಾರೆ. ಜ್ಯೋತಿಷ್ಯ, ಶಾಸ್ತ್ರ, ಪುರಾಣಗಳನ್ನು ನಂಬಿ ಮೂಢನಂಬಿಕೆಯ ದಾಸರಾದ ಜನರನ್ನು ಅಪ್ಪಣ್ಣನವರು ಎಚ್ಚರಿಸುತ್ತಾರೆ.
ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು
ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ.
ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ.
ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ.
ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ,
ಅಂಗವಿಸಿ ಮುಟ್ಟಿ ಹಿಡಿದ ಕಾರಣ, ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು.
ಇದನರಿದು, ಅಂತಪ್ಪ ಶರಣರ ಪಾದವ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣ
ಮುಂಜಾನೆ, ಮಧ್ಯಾಹ್ನ, ಸಾಯಂಕಾಲ, ರಾತ್ರಿಗಳೆಲ್ಲವೂ ಪ್ರಾಕೃತಿಕ ಕ್ರಿಯೆಗಳು. ದಿನ, ವಾರ, ವರ್ಷಗಳೂ ನಮ್ಮ ಗುರುತಿಗಾಗಿ ಮಾಡಿಟ್ಟುಕೊಂಡ ಚಿಂತನೆಯ ಸಾರ. ಆದರೆ, ಇವುಗಳನ್ನು ಅರಿಯದ ಮನುಷ್ಯ ಅವುಗಳ ಒಳಗೆ ತನ್ನ ಬದುಕಿನ ಒಳಿತು, ಕೆಡುಕುಗಳನ್ನು ತಳುಕು ಹಾಕಿಕೊಂಡು ಏಗುತ್ತಿದ್ದಾನೆ ಎನ್ನುವ ಅಪ್ಪಣ್ಣನವರು ಜೀವಕಂಟಕವಾದ ಮೂಢನಂಬಿಕೆಗಳಿಂದ ಹೊರಬರಲು ಸಮಾಜಕ್ಕೆ ಕರೆಕೊಡುತ್ತಾರೆ.
ಅಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ.
ಲಿಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ
ಜಂಗಮವ ತೋರಿಕೊಂಡು ಉಂಬಾತನೊಬ್ಬ ಠಕ್ಕ.
ಇವರು ಮೂವರು ಕಂಗಳು ಕಾಲು ಹೋದವರ ಸಂಗದಂತೆ,
ಲಿಂಗ ಜಂಗಮಕ್ಕೆ ದೂರ,
ನಮ್ಮ ಶರಣರ ಸಂಗಸುಖಕ್ಕೆ ಸಲ್ಲರು ನೋಡಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
ಹೊಟ್ಟೆಹೊರೆಯಲು ಭಕ್ತಿಯನ್ನು ಮಾರ್ಗವನ್ನಾಗಿ ಮಾಡಿಕೊಂಡು, ಆಸೆಗಾಗಿ ಮೋಸ ಮಾಡಿದರೆ ಅದರಿಂದ ಯಾವ ಲಾಭವೂ ಆಗಲಾರದು. ಅಂತಹ ಮೋಸಗಾರರಿಂದ ದೂರವಿದ್ದು, ಭಕ್ತಿಯನ್ನು ಸನ್ಮಾರ್ಗದ ಬದುಕಿನ ಕ್ರಮವೆಂದು ಭಾವಿಸಿದರೆ ಮುಕ್ತಿ ದೊರೆಯುತ್ತದೆ. ಇದು ಶರಣರ ಸಂಘದಿಂದ ಮಾತ್ರ ಸಾಧ್ಯವೆಂಬ ಧೋರಣೆ ಅಪ್ಪಣ್ಣನವರದು. ಕ್ರಾಂತಿಕಾರಕ ಧೋರಣೆ, ವೈಚಾರಿಕಪ್ರಜ್ಞೆಯ ಅಪ್ಪಣ್ಣನವರ ವಚನಗಳು ಸಮಾಜಕ್ಕೆ ಬೆಳಕಾಗಿ, ದಮನಿತರ ದನಿಯಾಗಿ, ದಾರಿತಪ್ಪಿದ ಸಮಾಜವನ್ನು ಬಂಡಾಯದ ಧ್ವನಿಯ ಮೂಲಕ ಸರಿದಾರಿಯಲ್ಲಿ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
(ಲೇಖಕರು ಕನ್ನಡ ಅಧ್ಯಾಪಕರು)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − fourteen =
Remember me
