ಆಂಜನೇಯ ಮತಿ ಪಾಟಲಾನನಂ
ಕಾಂಚನಾದ್ರಿ ಕಮನೀಯ ವಿಗ್ರಹಮ್
ಬಾಷ್ಪವಾದಿ ಪರಿಪೂರ್ಣ ಲೋಚನಮ್
ಭಾವಯಾಮಿ ಪವಮಾನ ನಂದನಂ ||
ಭಗವಾನ್ ಆಂಜನೇಯನನ್ನು ಸ್ಮರಿಸಿಕೊಂಡರೆ ಸಾಕು, ಅದೇನೋ ಚೈತನ್ಯ. ಅದೊಂದು ಭರವಸೆ. ಅನೂಹ್ಯ ಧೈರ್ಯ. ಅವ್ಯಕ್ತ ಆನಂದ ಪ್ರತಿಯೊಬ್ಬರಲ್ಲೂ ಮೂಡುವುದು. ಕಾರಣ ಇಷ್ಟೇ- ಆಂಜನೇಯನ ಸಾಧನೆ. ಅವನ ಆಪ್ತವಾದ ನಡವಳಿಕೆ. ಅಪಾರವಾದ ಬುದ್ಧಿಮತ್ತೆ. ದೃಢವಾದ ನಿಲುವು. ಅಕಳಂಕ ಸೇವಾತತ್ಪರತೆ. ಸದಾ ಸಂತೃಪ್ತಿಯ ಸಮಭಾವ. ಸೇವೆ ಅಂದರೆ ಏನು ಎಂಬುದಕ್ಕೆ ಅವನ ಜೀವನವೇ ಮಾದರಿ. ಅಂತಹ ಇನ್ನೊಂದು ಪಾತ್ರ ಸಿಗುವುದು ದುರ್ಲಭ. ಸೇವಕತನದಿಂದಲೇ ದೇವ ದೇವೋತ್ತಮನಾದವನು ಹನುಮಂತ. ಹಾಗೊಂದು ಸಾಧ್ಯತೆಯನ್ನು ಲೋಕಕ್ಕೆ ಕಾಣ್ಕೆಯಾಗಿ ಕೊಟ್ಟಂತಹ ಮಹಾನುಭಾವ ಅವನು.
ಪ್ರಥಮ ಪ್ರಭು ದೃಷ್ಟಿ:ಪಂಪಾ ತೀರ ಕಾಡಿನ ನಡುವೆ ಇದ್ದ ವಿಶಾಲವಾದ ಸರೋವರ. ಅಲ್ಲಿಗೆ ಬಂದು ತಲುಪಿದರು ಶ್ರೀರಾಮ-ಲಕ್ಷ್ಮಣರು. ಸೀತಾನ್ವೇಷಣೆಗಾಗಿ. ಅದರ ಜೊತೆಗೇ ಸುಗ್ರೀವನ ವ್ಯಥೆಯನ್ನೂ ತಿಳಿದಿದ್ದ ಶ್ರೀರಾಮ ಅವನಿಗೆ ನೆರವಾಗುವ ಮನಸ್ಸನ್ನೂ ಹೊಂದಿದ್ದ. ಸುಗ್ರೀವ ಸಚಿವನಾದ ಹನುಮಂತ ಬಂದು ಶ್ರೀರಾಮನನ್ನು ಯುಕ್ತಿ ಯುಕ್ತನಾಗಿ ಮೃದುವಚನಗಳಿಂದ ಮಾತನಾಡಿಸುತ್ತಾನೆ. ಆ ಮಾತುಗಳು ಹೇಗಿದ್ದವು ಎಂದರೆ, ಕೇಳಿ ಪುಲ್ಲಾರವಿಂದನಾದ ಶ್ರೀರಾಮ, ಸಹೋದರ ಲಕ್ಷ್ಮಣನಿಗೆ ಹೇಳುತ್ತಾನೆ- ‘ತಮ್ಮಾ, ಈ ವ್ಯಕ್ತಿ ಎಷ್ಟು ಶುದ್ಧವಾಗಿ, ವ್ಯಾಕರಣಬದ್ಧವಾಗಿ ಸ್ಪಷ್ಟವಾಗಿ ಮಾತನಾಡುತ್ತಾನೆ. ಅದರರ್ಥ ಇವನು ಸಿದ್ಧನೂ, ಜ್ಞಾನಸಂಮೃದ್ಧನೂ, ದೃಢವಂತನೂ, ಸತ್ಯಸಂಧನೂ ಆಗಿರಲೇಬೇಕು. ಅವನಿಗೆ ಎಲ್ಲವನ್ನೂ ಸವಿವರವಾಗಿ ಹೇಳು’. ಇದು ಹನುಮಂತನಿಗೆ ಭಗವಂತನ ಮೊದಲ ನೋಟದ, ಮೊದಲ ಭಾವದ ಪರಮಾನುಗ್ರಹ. ಅಂದಿನಿಂದ ಇಂದಿನವರೆಗೂ ಹನುಮಂತ ಲೋಕಪ್ರೀತಿ ಗಳಿಸಿದ್ದೂ, ಲೋಕವಂದ್ಯನಾದದ್ದು ರಾಮದಾಸನಾಗಿಯೇ.
ಶ್ರೀರಾಮ-ಸುಗ್ರೀವರು ಪರಸ್ಪರ ಮಾತನಾಡಿಕೊಳ್ಳುತ್ತ ಆನಂದಿಸುತ್ತಿದ್ದಾಗ ಆ ಸ್ನೇಹವನ್ನು ಸ್ಥಾಯಿಗೊಳಿಸಿದ ಸಾಕ್ಷೀಪ್ರಜ್ಞೆ ಹನುಮಂತ. ಅಗ್ನಿಯನ್ನು ಸ್ಥಾಪಿಸಿ, ಆ ಸೂರ್ಯಕುಲವನ್ನೂ- ಕೀಷಕುಲವನ್ನೂ ಬೆಸೆದ ಸೇತುವಾದ. ಉತ್ತರ-ದಕ್ಷಿಣದ ಮೊದಲ ರಾಜೋಚಿತ ಸಂಬಂಧ ಗಾಢವಾಗಿಸಿದ. ಎಂಥ ಜಾಣ್ಮೆ. ಸಕಾಲಿಕ ಯೋಚನೆ. ಆಮೇಲೆ ಎಂದೂ ಆ ಸಂಬಂಧದಲ್ಲಿ ಬಿರುಕಿಲ್ಲ. ಅಹಂಭಾವವೇ ಬರಲಿಲ್ಲ.
ಬುದ್ಧಿಮತಾಂ ವರಿಷ್ಠಂ:ಸೀತಾನ್ವೇಷಣೆಗಾಗಿ ನಾಲ್ಕು ದಿಕ್ಕುಗಳಲ್ಲೂ ಕಪಿನಾಯಕರ ತಂಡ ಹೊರಟಿದೆ. ದಕ್ಷಿಣ ದಿಕ್ಕಿನ ಅಂಗದನ ನೇತೃತ್ವದ ತಂಡದಲ್ಲಿ ಹನುಮಂತ ಒಬ್ಬ. ಸಾಧನೆಗೆ ನಾಯಕತ್ವವೇ ಬೇಕು ಎನ್ನುವವರು ಇದರ ಸೂಕ್ಷ್ಮ ಗಮನಿಸಬೇಕು. ಅವನು ಸೇವಕರಲ್ಲಿ ಒಬ್ಬ ಮಾತ್ರ. ಹಾಗಿದ್ದೂ ಅವನ ಒಳಸಾಮರ್ಥ್ಯ ಶಕ್ತಿ ಶ್ರೀರಾಮನಿಗೆ ವೇದ್ಯ. ಅವನನ್ನೇ ಹತ್ತಿರ ಕರೆದು ಅಂಗುಲೀಯಕವನ್ನು ಕೊಟ್ಟ. ಅದನ್ನೂ ಅತ್ಯಂತ ಸಹಜವಾಗಿ ಸ್ವೀಕರಿಸಿದ ಹನುಮ. ಯಾರಿಗೂ ಅಸಮಾಧಾನವಾಗದ ಹಾಗೆ ವ್ಯವಹರಿಸಿದ. ಮನದೊಳಗೇ ಹಿಗ್ಗಿದರೂ ನಡೆಯಲ್ಲಿ ಅನ್ಯರ ಅಸೂಯೆಗೆ ಕಾರಣವಾಗದಂತೆ ಎಚ್ಚರವಹಿಸಿ, ದೇವದೇವೋತ್ತಮನ ಪರಮಾನುಗ್ರಹದ ಸಂದರ್ಭದಲ್ಲೂ ದಿವ್ಯ ಸಂಯಮವನ್ನೇ ವಹಿಸಿದ.
ಸಮುದ್ರೋಲ್ಲಂಘನ ಸಾಧ್ಯವೇ ಇಲ್ಲ ಎಂಬ ಪ್ರಶ್ನೆ ಬಂದಾಗ ಎಲ್ಲ ಕಪಿವೀರರು ತಂತಮ್ಮ ಸಾಮರ್ಥ್ಯವನ್ನೂ ಹೇಳುವಾಗ ಇನಿತೂ ಗರ್ವ ಪಡದೆ ಸಹಜವಾಗಿಯೇ ಇದ್ದ. ಜಾಂಬವಂತ ಇವನ ಶಕ್ತಿಯನ್ನು ಹೇಳಿ, ಅಂತಸ್ಥ ಶಕ್ತಿಯನ್ನು ಜಾಗೃತಗೊಳಿಸು ಎಂದಾಗ ಅಂತಮುಖಿಯಾದ. ವಿಶ್ವ ವಿಸ್ಮಯಕಾರಿಯಾಗಿ ಬೆಳೆದ. ಸಮುದ್ರ ಮಧ್ಯದಲ್ಲಿ ರಕ್ಕಸಿ ರೂಪದ ಸುರಸೆ ಬ್ರಹ್ಮವರಾನ್ವಿತೆ ಬಾಯ್ದೆರೆದು ಬಂದಳು. ‘ನನ್ನ ಆಹಾರ ನೀನು’ ಎಂದಳು. ‘ರಾಮಕಾರ್ಯ ನಿರತ ನಾನು. ಆ ಕಾರ್ಯ ಮಾಡಿ ಬರುತ್ತೇನೆ’ ಎಂದರೂ ಕೇಳಲಿಲ್ಲ. ‘ನಿನ್ನನ್ನು ತಿನ್ನದೇ ಬಿಡಲಾರೆ’ ಎಂದಳು. ತನ್ನ ಬಾಯಿಯ ಒಳಗೆ ನೀನು ಹೋಗಲೇ ಬೇಕು ಎಂದಳು. ಯಾರು ಬಾಯೊಳಗೆ ಹೋದರೂ ತಿನ್ನುತ್ತಿದ್ದಳು. ಹನುಮಂತ ಸರಿ ಎಂದ. ಬೆಳೆದ. ಅವಳೂ ದೊಡ್ಡದಾಗಿ ಬಾಯ್ದೆರೆದಳು. ಇವನೂ ಬೆಳೆಯುತ್ತಲೇ ಹೋದ. ಅವಳೂ ಬಾಯ್ದೆರೆಯುತ್ತಲೇ ಹೋದಳು. ಒಮ್ಮೆಲೇ ಇರುವೆಯಷ್ಟು ಸೂಕ್ಷ್ಮನಾದ ಹನುಮಂತ ಫಕ್ಕನೆ ಅವಳ ಬಾಯೊಳಗೆ ಹೋಗಿ ಹೊರ ಬಂದುಬಿಟ್ಟ. ‘ನಿನ್ನ ಮಾತು ಪೂರೈಸಿದೆ’ ಎಂದ. ಆ ಬುದ್ಧಿಮತ್ತೆಗೆ ಸೋತಳು ಸುರಸೆ.
ದಾಸಮನದ ವೀರ:‘ನೀನ್ಯಾರು? ಎಲ್ಲಿಂದ ಬಂದೆ? ಯಾವ ಕಾರ್ಯ?’ ಎಂಬ ಪ್ರಶ್ನೆಗಳನ್ನು ರಾವಣನ ಆಸ್ಥಾನದಲ್ಲಿ ಎದುರಿಸಿದ ಹನುಮ. ಇಂತಹ ಪ್ರಶ್ನೆಗಳು ಈಗಲೂ ನಮ್ಮೆಲ್ಲರಿಗೂ ನಿತ್ಯ ಎದುರಾಗುತ್ತವೆ. ನಾವಾದರೋ ಎಷ್ಟು ಸಾಧ್ಯವೋ ಅಷ್ಟು ಆತ್ಮರತಿ ಮಾಡಿಕೊಳ್ಳುತ್ತೇವೆ. ನಮ್ಮದಲ್ಲದ ಎಷ್ಟೋ ಸಂಗತಿಗಳನ್ನು ನಮ್ಮದೇ ಎಂದು ಸೇರಿಸಿ ಹೇಳಿಕೊಳ್ಳುತ್ತೇವೆ. ಬರೆದುಕೊಳ್ಳುವ ಸಂದರ್ಭ ಬಂದಾಗಲಂತೂ ಪುಟಗಟ್ಟಲೇ ಬರೆದುಕೊಳ್ಳುತ್ತೇವೆ. ಈ ರೀತಿ ಇರುವವರು ಆಂಜನೇಯನ ಈ ಗುಣವನ್ನು ನೋಡಬೇಕು.
ಕಾರ್ಯಸಿದ್ಧಿ ಪ್ರವೀಣ:ತನಗೆ ಆದೇಶಿತವಾದ ಕಾರ್ಯವನ್ನು ಕ್ಲಪ್ತ ಕಾಲದಲ್ಲಿ ಯಶಸ್ವಿಯಾಗಿ ಮಾಡಿ ಪೂರೈಸುವಲ್ಲಿ ಹನುಮಂತನು ನಿಪುಣನು-ಅಗ್ರಗಣ್ಯನು. ಅದೂ ಘನತೆಯಿಂದ. ದೀನತೆಯಿಂದಲ್ಲ. ಇದು ಸಹ ದೂತಭಾವದ ಸಾಮರ್ಥ್ಯ. ಇದಕ್ಕೂ ಶ್ರೇಷ್ಠವಾದ ಉದಾಹರಣೆ- ಅಶೋಕವನದಲ್ಲಿ ಸೀತೆಯನ್ನು ಕಂಡು ಸುಮ್ಮನೇ ಬರಲಿಲ್ಲ. ಅವನಿಗಿದ್ದ ಸೂಚನೆ ಸೀತೆಯನ್ನು ಕಂಡುಬರಬೇಕು ಎಂಬುದು. ಹಾಗಿದ್ದು ಅಷ್ಟನ್ನು ಮೊದಲು ಮಾಡಿ, ತಾನು ವೀರನಾದ ಶ್ರೀರಾಮಚಂದ್ರನ ದೂತ ಎಷ್ಟು ಸಾಮರ್ಥ್ಯವಂತರು ಶ್ರೀರಾಮ ಸೇನೆಯಲ್ಲಿದ್ದಾರೆ ಎಂದು ತೋರಿಸಿದ. ಅಷ್ಟೆ ಅಲ್ಲ ರಾಮದೂತರು ಸುದ್ದಿಯಿಲ್ಲದೆ ಬಂದರೂ ತಮ್ಮ ಸಾಮರ್ಥ್ಯ ತೋರಿ ಶತ್ರುಮರ್ದನದ ಸೂಚನೆ ನೀಡಿಯೇ ನೀಡುತ್ತಾರೆ ಎಂಬುದನ್ನು ಇಡೀ ಲಂಕೆಯನ್ನು ಬೆಂಕಿಗಾಹುತಿ ನೀಡಿ ತೋರಿಸಿದ. ಇಷ್ಟು ಸಾಧನೆ ಮಾಡಿದವನು ಶ್ರೀರಾಮನ ಎದುರು ಬಂದಾಗ ಅತಿಯಾಗಿ ಹರ್ಷಿಸುತ್ತ ಆಡಂಬರ ಮಾಡದೆ ಅತ್ಯಂತ ಸಹಜವಾಗಿ-ಸರಳವಾಗಿ ಮೊದಲಿಗೆ ಹೇಳಿದ್ದು ಕಾರ್ಯದ ಪರಿಣಾಮವನ್ನು ಆತಂಕರಹಿತವಾಗಿ. ಇದನ್ನೇ ಸಂಯಮ ಎನ್ನುವುದಲ್ಲವೇ?
‘ಸೀತಾದೇವಿಯನ್ನು ನೋಡಿದೆ’. ಇದನ್ನು ಕೇಳಿದೊಡನೆಯೇ ಶ್ರೀರಾಮ ಗಾಢಾಲಿಂಗನಕ್ಕೆ ಹನುಮಂತ ಭಾಜನ. ಆಮೇಲೆ ವಿವರವಾಗಿ ನಡೆದ ಕತೆಯನ್ನು ಹೇಳುತ್ತಾನೆ. ಅಂದರೆ ಎಂತಹ ಸೂಕ್ಷ್ಮಗ್ರಾಹಿ, ಸಮರ್ಥ, ವಿನೀತ. ಹಾಗಾಗಿಯೇ ದಾಸ್ಯಭಾವದ ನಿರತನೇ ಆದರೂ ಲೋಕದ ದೃಷ್ಟಿಯಲ್ಲಿ ದೇವನೇ ಆದ. ತನ್ನ ಪ್ರಭುವನ್ನು ಹೃದಯದಲ್ಲಿ ಸಂಸ್ಥಾಪಿಸಿದ ಧೀಮಂತ. ತನ್ನ ಪ್ರಭುವಿನ ಎದುರು ಎಂದು ನಿಲ್ಲದ, ಅವನ ಪಾದಮೂಲದಲ್ಲಿಯೇ ಮಂಡಿಯೂರಿ ಕುಳಿತ ಆಂಜನೇಯನ ಎದುರು ಲೋಕವೇ ಮಂಡಿಯೂರುವಂತೆ ಮಾಡಿದ ದಿವ್ಯಪುರುಷ.
ಆಂಜನೇಯೋತ್ಸವದ ದಿನ ಅವನನ್ನು ಆರಾಧಿಸಬೇಕು ಎಂತಾದರೆ ಮೊದಲು ಡಾಂಬಿಕ ಅಭಿಮಾನವನ್ನು ತೊರೆದು, ಸೇವಾಭಾವವನ್ನು ಅಳವಡಿಸಿಕೊಳ್ಳುವತ್ತ ಸಂಕಲ್ಪಬದ್ಧರಾದರೆ ಅದುವೇ ಹನುಮತ್ಸೇವೆ. ಅದೇ ಶ್ರೀರಾಮ ನೈವೇದ್ಯ.
ದಾಸೋಹಂ ಕೋಸಲೇಂದ್ರಸ್ಯ:ನಾನು ದಾಸ ಎಂಬ ಆತ್ಮಪ್ರತ್ಯಯ ಮೊದಲಲ್ಲ. ‘ದಾಸನು ನಾನು’ ಎಂಬ ವಿನೀತ ಭಾವ. ದಾಸ ಎಂಬುದೇ ಸಣ್ಣ ಸ್ಥಾನ ಎಂಬ ಭಾವನೆ ಎಲ್ಲ ಕ್ಷೇತ್ರದಲ್ಲೂ ಇದೆ. ಆದರೆ, ಅದನ್ನು ಎಷ್ಟು ಆತ್ಮವಿಶ್ವಾಸದಲ್ಲಿ ಹನುಮಂತ ಹೇಳಿಕೊಂಡಿದ್ದಾನೆ. ಅದೇ ತನ್ನ ಪ್ರಭು ಶ್ರೀರಾಮಚಂದ್ರನ ಬಗೆಗೆ ಹೇಳುವಾಗ, ‘ಕೋಸಲೇಂದ್ರಸ್ಯ’ ಎಂಬ ಉಪಾಧಿಯೊಡನೆ ಹೇಳುವನು. ರಾಮನೆಂದರೆ ಯಾರು? ಎಂಬುದಕ್ಕೂ ಉತ್ತರ ಸ್ಪಷ್ಟ. ಎಂತಹ ಕ್ಲಿಷ್ಟ ಕಾರ್ಯಗಳನ್ನೂ ನಿರ್ವಹಿಸುವಂತಹ ರಾಮ-ಕೋಸಲೇಂದ್ರ. ಮುಂದೆ ಹೇಳುತ್ತಾನೆ-ಶತ್ರುಗಳನ್ನು ನಿಗ್ರಹ ಪಡಿಸುವವನು ಹಾಗೂ ಅವರಿಗೆ ಸಿಂಹಸ್ವಪ್ನನು. ಇಷ್ಟಾದ ಮೇಲೆ ತಾನು ಮಾರುತಾತ್ಮಜನಾದ ಹನುಮಂತ ಎನ್ನುತ್ತಾನೆ. ಈ ವಿನಮ್ರ ಭಾವವನ್ನೂ ಧೀರತನದ ಸ್ವಭಾವವನ್ನೂ ಮೈಗೂಡಿಸಿಕೊಂಡರೆ ಎಷ್ಟೋ ಸಮಸ್ಯೆಗಳು ಸಹಜವಾಗಿಯೇ ಪರಿಹಾರವಾಗುತ್ತವೆ. ಇಷ್ಟನ್ನು ರೂಢಿಸಿಕೊಳ್ಳಲು ಸಾಕಷ್ಟು ತಪಸ್ಸು ಬೇಕು. ಸಿದ್ಧಿ ಬೇಕು. ಎಲ್ಲಕ್ಕಿಂತ ಮೊದಲಾಗಿ ದಾಸ್ಯಭಾವ-ಅದರ ಸಂತೃಪ್ತ ಭಾವ ಮೈಗೂಡಬೇಕು. ಇದಕ್ಕೆಲ್ಲ ಹನುಮನೊಬ್ಬನೇ ದೃಷ್ಟಾಂತ ಚಿರಂಜೀವ.
(ಲೇಖಕರು ಯಕ್ಷಗಾನ ಅರ್ಥಧಾರಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 1 =
Remember me
