| ಡಾ.ಕೆ.ಪಿ. ಪುತ್ತೂರಾಯ
ನಗು ಭಗವಂತ ಮಾನವರಿಗೆ ಮಾತ್ರ ಕೊಟ್ಟಿರುವ ವರ. ನಗೆ ಚಟಾಕಿಗಳ ಉದ್ದೇಶವೂ ನಗೆಯೇ. ಆರೋಗ್ಯದ ದೃಷ್ಟಿಯಿಂದ ನೋಡಿದರೂ, ನಗು ಆರೋಗ್ಯಕ್ಕೆ ಪೂರಕ ಹಾಗೂ ಆರೋಗ್ಯದ ಭಾಗ. ನಗೆಮದ್ದಿಗೆ ಎಕ್ಷ್​ಪೈರಿ ಡೇಟ್ ಇಲ್ಲ, ಅಡ್ಡ ಪರಿಣಾಮವೂ ಇಲ್ಲ. ನೀವು ಪಕ್ಕ ಕೂತವರ ಮೇಲೆ ಬಿದ್ದು ಬಿದ್ದು ನಕ್ಕರೆ, ಅದರಿಂದ ಅಡ್ಡ ಪರಿಣಾಮ ಆದೀತೇನೋ!
ನಗು ಬೇನೆ-ಬೇಸರಗಳನ್ನು, ಒತ್ತಡ-ಒಂಟಿತನಗಳನ್ನು ಕಡಿಮೆ ಮಾಡಬಲ್ಲುದು. ಸಂಬಂಧ-ಸ್ನೇಹಗಳನ್ನು ಹುಟ್ಟು ಹಾಕಬಲ್ಲುದು. ನಗುವಿನಲ್ಲಿ ನಾನಾ ಥರ. ತುಂಟನಗೆ, ಕಿರುನಗೆ, ಬಿಂಕದ ನಗೆ, ವಿಷಾದದ ನಗೆ, ವಿಚಿತ್ರ ನಗೆ, ವಿಕಾರದ ನಗೆ, ವೈಯಾರದ ನಗೆ, ವೈರಾಗ್ಯದ ನಗೆ ಇತ್ಯಾದಿ. ಕೆಲವರದು ದೇಶಾವರಿಯಾದರೆ, ಕೆಲವರದು ಸಹಜ ನಗು. ಕೆಲವರಿಗೆ ಕಣ್ಣಲ್ಲಿ ನಗು, ಕೆಲವರಿಗೆ ಮುಖದಲ್ಲಿ. ಕೆಲವರಿಗಂತೂ ಮೈಯೆಲ್ಲಾ ನಗುವೇ. ಇನ್ನು ಕೆಲವರು ಎಲ್ಲರಿಗೂ ಗೊತ್ತಾಗಲೆಂದು ಎದ್ದೂ ಬಿದ್ದೂ ನಕ್ಕರೆ ಮತ್ತೆ ಕೆಲವರು ಯಾರೂ ನೋಡಬಾರದೆಂದು ಕದ್ದೂ ಕದ್ದೂ ನಗುತ್ತಾರೆ. ಕೆಲವರದು ಮುಸಿ ಮುಸಿ, ಕೆಲವರದು ಕಿಸಿಕಿಸಿ. ಕೆಲ ಜನವಂತೂ ಶನಿವಾರ ಹೇಳಿದ ಜೋಕ್​ಗೆ ಸೋಮವಾರ ನಗುತ್ತಾರೆ! ಕಾರಣ ಅವರ ಮಧ್ಯಪ್ರದೇಶ (ಹೊಟ್ಟೆ) ಬೆಳೆದಷ್ಟು, ಉತ್ತರ ಪ್ರದೇಶ (ತಲೆ) ಬೆಳೆದಿರೋದಿಲ್ಲ! ಕೆಲವರಿಗೆ ನಗಲಿಕ್ಕೇ ಬರೋದಿಲ್ಲ. ಇಂತಹವರನ್ನು ಹಾಸ್ಯೋತ್ಸವಕ್ಕೆ ಕರೆಯೋಲ್ಲ. ಇನ್ನು ಕೆಲವರಿಗೆ ಅಳೋಕೆ ಬರೋದಿಲ್ಲ. ಇಂತಹವರನ್ನು ಸತ್ತವರ ಮನೆಗೆ ಕಳುಹಿಸೋದಿಲ್ಲ!
ಅದೇನೇ ಇರಲಿ, ಎಲ್ಲಿ ನಗಬೇಕೋ, ಅಲ್ಲಿ ನಕ್ಕು ಬಿಡಬೇಕು. ಮನಸಾರೆ. ಕಾರಣ, ನಕ್ಕಷ್ಟು ದಿನ ನಮ್ಮದು, ನಗದ ದಿನ ನಮ್ಮದಲ್ಲ. ನಗೆಯೊಂದು ವಿಶ್ವಭಾಷೆ. ‘ರಸಿಕನಾಡಿದ ಮಾತು, ಶಶಿಯುದಿಸಿ ಬಂದಂತೆ’ ಎಂದು ಸರ್ವಜ್ಞ ಹೇಳಿದರೆ, ಬೇಂದ್ರೆಯವರು, ‘ನಗೆಯಲ್ಲಿ ಹೊಗೀಬ್ಯಾಡ. ಹೋ ಹಿಂದೆ ಧಗೀ ಬ್ಯಾಡ, ಬಾಳಿಗೆ ಎರಡು ಬಗೀಬ್ಯಾಡ. ನನಗೆಳೆಯಾ, ಬ್ಯಾಸರಿಕೆ ಬ್ಯಾಡೋ ನಗುವಾಗ’ ಎಂದಿದ್ದಾರೆ.
ನಗುವಿನ ಮೂಲ ಹಾಸ್ಯ. ಅದು ನವರಸಗಳಲ್ಲಿ ಒಂದು. ಹಾಸ್ಯದಲ್ಲಿ, ಅಪಹಾಸ್ಯ, ಪರಿಹಾಸ್ಯ, ತಿಳಿಹಾಸ್ಯ, ಕೆಟ್ಟ ಹಾಸ್ಯ ಪೋಲಿ ಹಾಸ್ಯ, ವ್ಯಂಗ್ಯ ವಿಡಂಬನೆ ಎಂಬ ನಾನಾ ಪ್ರಕಾರಗಳಿವೆ. ಅಪಹಾಸ್ಯವೆಂದರೆ, ಇತರರ ಮನ ನೋಯಿಸುವ ಹಾಸ್ಯ, ಉದಾಹರಣೆಗೆ: ಮಹಾಭಾರತದಲ್ಲಿ ದ್ರೌಪದೀ ಸ್ವಯಂವರದಲ್ಲಿ ಪಾಲ್ಗೊಳ್ಳಲು ದ್ರುಪದ ರಾಜನ ಅರಮನೆಗೆ ಬಂದಿದ್ದ ದುರ್ಯೋಧನನು, ಎದುರಿಗಿದ್ದ ಮಾಯಾಜಲವನ್ನು, ಭೂಮಿಯೆಂದು ಭ್ರಮಿಸಿ, ಕಾಲುಜಾರಿ, ಕೊಳದೊಳಗೆ ಬಿದ್ದು ಬಿಡುತ್ತಾನೆ. ಅಂತಃಪುರದಿಂದ ಇದನ್ನು ನೋಡಿದ ದ್ರೌಪದಿ ಕಿಸಕ್ಕನೆ ನಕ್ಕು ‘ಅಪ್ಪ ಮಾತ್ರ ಕುರುಡನೆಂದು ತಿಳಿದುಕೊಂಡಿದ್ದೆ, ಈಗ ನೊಡಿದರೆ, ಮಗನೂ ಕುರುಡನೇ!’ ಎಂದು ಅಪಹಾಸ್ಯ ಮಾಡುತ್ತಾಳೆ.
ಇದನ್ನು ಕೇಳಿ ಕೆಂಡವಾದ ದುರ್ಯೋಧನನು ಈ ಅವಮಾನವ ಪ್ರತೀಕಾರಕ್ಕೆ ಕಾದಿರುತ್ತಾನೆ. ದ್ರೌಪದೀ ವಸ್ತ್ರಾಪಹರಣಕ್ಕೆ ಇದೂ ಒಂದು ಬಲವಾದ ಕಾರಣವಾಯಿತು. ತಿಳಿ ಹಾಸ್ಯವೆಂದರೆ, ಯಾರಿಗೂ ನೋವಾಗದ, ನವಿರಾದ ಹಾಸ್ಯ. ಒಮ್ಮೆ ಒಂದು ಭಟ್ಟರ ಮನೆಯ ಎದುರು, ಒಂದು ಮುದಿಕತ್ತೆ ಸತ್ತುಬಿತ್ತು. ತಕ್ಷಣ ಭಟ್ಟರು ಪಾಲಿಕೆ ಅಧಿಕಾರಿ ಫೋನಾಯಿಸಿ ಅದನ್ನು ಸಾಗಿಸಲು ಏರ್ಪಾಡು ಮಾಡಿ! ಎಂದರು. ಉತ್ತರವಾಗಿ ಹಾಸ್ಯಪ್ರಿಯರಾದ ಆ ಅಧಿಕಾರಿ, ‘ಅಲ್ಲಾ ಭಟ್ರೆ, ಸತ್ತವರಿಗೆ ಅಂತ್ಯ ಸಂಸ್ಕಾರ ಮಾಡೋದು ಪುರೋಹಿತರಾದ ನಿಮ್ಮ ಕೆಲಸ, ಅಲ್ಲಿ ನಮಗೇನು ಕೆಲಸ?’ ಎಂದರು. ಅವರಿಗಿಂತಲೂ ಹೆಚ್ಚಿನ ಹಾಸ್ಯಪ್ರಜ್ಞೆ ಹೊಂದಿದ್ದ ಭಟ್ರು ತಕ್ಷಣ, ‘ಸತ್ತವರ ಹತ್ತಿರದ ಬಂಧು ಬಾಂಧವರಿಗೆ ತಿಳಿಸೋದು ನಮ್ಮ ಕರ್ತವ್ಯವಲ್ಲವೇ! ಅದಕ್ಕೇ ನಿಮಗೆ ಫೋನ್ ಮಾಡಿದೆ’ ಎಂದರಂತೆ!
ಒಮ್ಮೆ ಮಾಡಿದ ಅಡುಗೆಯನ್ನು ಇನ್ನೊಮ್ಮೆ ಉಣಲಾರೆ ಎಂಬ ಗಂಡನ ಶಪಥಕ್ಕೆ , ಒಮ್ಮೆ ಉಟ್ಟ ಸೀರೆಯನ್ನು ಇನ್ನೊಮ್ಮೆ ಉಡಲಾರೆ ಎಂದು ಪತ್ನಿ ಶಪಥ ಮಾಡಿದರೆ, ಅದು ಹಾಸ್ಯಕ್ಕೊಂದು ದೃಷ್ಟಾಂತ. ಕರೊನಾ ಕಾಲದಲ್ಲಿ ಜನಿಸಿದ ಅವಳಿ ಮಕ್ಕಳಿಗೆ ಸೋಂಕಿತ -ಶಂಕಿತನೆಂದು ನಾಮಕರಣ ಮಾಡಿದರೆ, ನವಿರಾದ ಹಾಸ್ಯ!
ಹಾಸ್ಯ ಎಲ್ಲೆಡೆ ಇರುತ್ತೆ. ಆದರೆ ಅದನ್ನು ನೋಡುವ ಕಣ್ಣುಗಳು ಬೇಕು; ಕೇಳಿಸಿಕೊಳ್ಳುವ ಕಿವಿಗಳು ಬೇಕು. ಅದೇನೇ ಇರಲಿ, ಈ ಜಗತ್ತಿಗೆ ನಾವು ‘ಅಳುತಳುತ ಬಂದೇವಾ ನಗು ನಗುತ ಬಾಳೋಣ!’
ಮನೆಯೊಳಗೇ ಮಕ್ಕಳಿಬ್ಬರ ಅನುಮಾನಾಸ್ಪದ ಸಾವು!: ಹದಿಹರೆಯದ ಪುತ್ರ-ಪುತ್ರಿ ಇನ್ನಿಲ್ಲ..

ಒಂದೇ ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು!; ಅಚ್ಚರಿ ಮೂಡಿಸುತ್ತಿದೆ 15 ವರ್ಷಗಳ ಈ ಮರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 4 =
Remember me
