|ಸಗ್ರಿ ರಾಘವೇಂದ್ರ ಉಪಾಧ್ಯಾಯ
ಬದುಕಿಗೆ ಗಾಳಿ, ನೀರು, ಬೆಳಕು ಹೇಗೆ ಅವಶ್ಯವೋ ಹಾಗೇ ದೇವರ ಪ್ರಜ್ಞೆಯೂ ಅತ್ಯವಶ್ಯ. ಜೀವನ ಸಾವು-ನೋವು, ರೋಗ-ರುಜಿನ, ಸನಿಹ-ವಿರಹ, ದುಃಖ-ದುಮ್ಮಾನಗಳ ಕವಚ. ಈ ಬಗ್ಗೆ ಸ್ಪಷ್ಟ ನಿಲುವಿಲ್ಲದೆ ಸಾವಿರಾರು ಹೆಜ್ಜೆಗಳ ಜತೆಗೆ ಸ್ಪರ್ಧೆಯಿಂದ, ಪೈಪೋಟಿಯಿಂದ ಹೆಜ್ಜೆ ಹಾಕುವ ನಿರರ್ಥಕತೆ ದೂರವಾಗಬೇಕಾದರೆ ದೇವರ ಸ್ಪರ್ಶವಾಗಬೇಕು. ದೇವರು ನಮ್ಮ ಸ್ವಭಾವಕ್ಕೆ, ವ್ಯಕ್ತಿತ್ವಕ್ಕೆ ಒಗ್ಗುವ ಸಾಧನೆಗಳನ್ನು ಮಾಡಿಸಿ, ಕ್ರಮೇಣ ತನ್ನೆಡೆಗೆ ಒಯ್ದು ಮೋಕ್ಷದಲ್ಲಿ ಸ್ವರೂಪಸುಖವನ್ನು ಅನುಭವಿಸುವಂತೆ ಮಾಡುತ್ತಾನೆ. ಇದೇ ಬದುಕಿನ ಪರಮಲಕ್ಷೃವಾಗಬೇಕು. ಇದರಿಂದ ಜೀವನ ಸಾರ್ಥಕವಾಗುತ್ತದೆ. ಹೀಗೆ ಜೀವನಕ್ಕೆ ವ್ಯವಸ್ಥಿತ ಪ್ರಕ್ರಿಯೆಯ ಮೆರುಗು ದೊರಕಬೇಕೆಂದರೆ ಅದಕ್ಕೆ ಕೇಂದ್ರಬಿಂದುವಾಗಿ ದೇವರನ್ನು ಒಪ್ಪಿಕೊಳ್ಳಬೇಕು. ಇಂತಹ ದೇವರನ್ನು ಗುರುತಿಸಿಕೊಟ್ಟಿರುವ ಸಿದ್ಧಾಂತವೇ ಮಧ್ವಸಿದ್ಧಾಂತ. ಏಳೂವರೆ ಶತಮಾನಗಳ ಹಿಂದೆ (ಕ್ರಿ.ಶ. 1238-1317) ಅವತರಿಸಿದ ಮಧ್ವಾಚಾರ್ಯರು ಬೆಳಕಿಗೆ ತಂದಿರುವ ಸಿದ್ಧಾಂತವೇ ದ್ವೈತ ಸಿದ್ಧಾಂತ.
ಇತರ ಸಿದ್ಧಾಂತಗಳಂತೆ ಮಧ್ವಸಿದ್ಧಾಂತದಲ್ಲೂ ದೇವರು, ಜೀವ, ಪ್ರಪಂಚದ ಬಗ್ಗೆ ಪ್ರತಿಪಾದನೆ ನಡೆದಿದೆ. ವಿಶೇಷವೆಂದರೆ ಮಧ್ವಗುರುಗಳು ತಮ್ಮ ಗ್ರಂಥಗಳಲ್ಲಿ ದೇವರ ಪ್ರತಿಪಾದನೆಗೆ ಪ್ರಾಶಸ್ತ್ಯೕಡಿ, ಅದಕ್ಕೆ ಪೂರಕವಾಗಿ ಪ್ರಪಂಚ ಮುಂತಾದ ತತ್ವಗಳನ್ನು ನಿರೂಪಿಸಿದ್ದಾರೆ. ಮುಖ್ಯವಾಗಿ ತತ್ವ ಎನಿಸಿರುವ ದೇವರನ್ನು ವಿಶೇಷವಾಗಿ ಸಾರುವುದರಿಂದ ಮಧ್ವಸಿದ್ಧಾಂತವನ್ನು ‘ತತ್ವವಾದ’ ಎಂದೇ ಕರೆಯಲಾಗುತ್ತದೆ. ಇಂತಹ ತತ್ವವಾದವನ್ನು ಸಮರ್ಥಿಸುವ ಮಧ್ವರ ನಲ್ವತ್ತು ಗ್ರಂಥಗಳನ್ನು ‘ಸರ್ವಮೂಲ’ ಎಂದು ಗುರುತಿಸಲಾಗಿದೆ. ವೈದಿಕ ವಾಂಗ್ಮಯಕ್ಕೆ ಸೇರಿದ ಎಲ್ಲಾ ಗ್ರಂಥಗಳ ಸಂದೇಶಗಳ ಮೂಲ ಈ ನಲವತ್ತು ಗ್ರಂಥಗಳಲ್ಲಿ ಅಡಗಿದೆ. ದೇವರಿಗೆ ಸಂಬಂಧಿಸಿದ ಸರ್ವಪ್ರಮೇಯಗಳಿಗೂ ಈ ಗ್ರಂಥಗಳು ಮೂಲವೆನಿಸಿವೆ. ಪ್ರತಿಯೊಬ್ಬ ಸಾಧಕನಿಗೂ ಬದುಕಿಗೆ ಬೇಕಾದ ಸರ್ವ ಮಾಹಿತಿಗಳು ಇಲ್ಲಿ ಲಭ್ಯ. ಮುಖ್ಯವಾಗಿ ದೇವರನ್ನು ಸಾರುವುದಕ್ಕಾಗಿ ಹೊರಟ ವೇದಗಳು, ಉಪನಿಷತ್, ಮಹಾಭಾರತ ಮುಂತಾದ ಇತಿಹಾಸ ಗ್ರಂಥಗಳು, ಭಾಗವತಾದಿ ಪುರಾಣ ಗ್ರಂಥಗಳು, ಬ್ರಹ್ಮಸೂತ್ರ ಇತ್ಯಾದಿ ಗ್ರಂಥಗಳನ್ನು ಒಳಗೊಂಡ ವೈದಿಕ ವಾಙ್ಮಯದಲ್ಲಿ ದೇವರ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಕ್ಕೊರಲಿನ ಸಮರ್ಥನೆ ನಡೆದಿದೆ ಎಂದು ಪ್ರತಿಪಾದಿಸಿರುವುದು ಮಧ್ವಸಿದ್ಧಾಂತದ ದೊಡ್ಡ ಕೊಡುಗೆ. ಇದರ ಸಾಧನೆಗಾಗಿ ಸಮಾಧಿ, ಗುಹ್ಯ, ದರ್ಶನ ಎಂಬ ಭಾಷಾ ತ್ರೖೆವಿಧ್ಯ ಬಳಕೆಯ ಪ್ರಾಸ್ತಾವ, ಮಿಶ್ರಸ್ತುತಿಯ ಪ್ರಕ್ರಿಯೆ ಇತ್ಯಾದಿ ಶಾಸ್ತ್ರೀಯ ಶೈಲಿಗಳ ಪರಿಚಯದೊಂದಿಗೆ ದೇವರ ಸರ್ವಶಬ್ದ ವಾಚಕತ್ವ ಹಾಗೂ ಸರ್ವಾಂತರ್ಯಾಮಿತ್ವ ಎಂಬ ಪ್ರಮೇಯಗಳ ಪ್ರತಿಪಾದನೆ ಗಮನಾರ್ಹವಾದುದು. ಸಂಸ್ಕೃತದ ಪ್ರತೀ ಶಬ್ದವೂ ಯಾವುದಾದರೊಂದು ಧರ್ಮವನ್ನು ನಿಮಿತ್ತವಾಗಿಟ್ಟುಕೊಂಡು ವ್ಯಕ್ತಿ ಅಥವಾ ವಸ್ತುವನ್ನು ತಿಳಿಸುತ್ತದೆ. ಹೀಗೆ ಶಬ್ದದಿಂದ ವಾಚ್ಯನಾಗುವುದಕ್ಕೆ ಪ್ರಯೋಜಕವಾಗುವ ಧರ್ಮ ಪೂರ್ಣಪ್ರಮಾಣದಲ್ಲಿ ದೇವರಲ್ಲೇ ಇರುವುದರಿಂದ ಅವನೇ ಸರ್ವಶಬ್ದಗಳಿಂದ ಮುಖ್ಯವಾಗಿ ವಾಚ್ಯನಾಗಿರುತ್ತಾನೆ. ಇತರ ಭಾಷೆಯ ಶಬ್ದಗಳು ಅಕಾರ ಮುಂತಾದ 51 ವರ್ಣಗಳಿಂದ ರೂಪಿತವಾಗಿರುವುದರಿಂದ ಆ ವರ್ಣಗಳಿಂದಲೇ ವಾಚ್ಯನಾದ ದೇವರೇ ಶಬ್ದಗಳಿಂದ ವಾಚ್ಯನಾಗಿರುತ್ತಾನೆ. ಹೀಗೆ ಬರೇ ವಾಙ್ಮಯಕ್ಕೆ ಸೇರಿದ್ದು ಮಾತ್ರವಲ್ಲದೆ ಪ್ರಪಂಚದ ಪ್ರತೀ ಶಬ್ದವೂ ಮುಖ್ಯವಾಗಿ ದೇವರನಾಮ ಎಂಬುದು ಸರ್ವಸಮನ್ವಯ ಸಾಧನೆಗೆ ತುಂಬಾ ಉಪಯುಕ್ತವೆನಿಸಬಲ್ಲ ಪ್ರಮೇಯ ಮಧ್ವಸಿದ್ಧಾಂತದ್ದಾಗಿದೆ.
ದೇವರು ಬಿಂಬನಾಗಿದ್ದು, ಉಳಿದ ಜೀವರು ಅವನ ಪ್ರತಿಬಿಂಬದಂತೆ ಅವನಿಗೆ ಅಧೀನರಾಗಿದ್ದಾರೆ. ದೇವರು ಮತ್ತು ಜೀವರ ನಡುವೆ ಬಿಂಬಪ್ರತಿಬಿಂಬ ಭಾವ ಸಂಬಂಧವನ್ನು ಸಿದ್ಧಾಂತದಲ್ಲಿ ಒಪ್ಪಲಾಗಿದೆ. ಪ್ರಪಂಚದ ಪ್ರತೀ ವ್ಯಕ್ತಿಯೂ ದೇವರ ಪ್ರತಿಮೆಯನ್ನು ಗೌರವಿಸುವಲ್ಲಿ ಈ ಪ್ರಮೇಯದ ಭಾವನೆ ಪ್ರಭಾವಕಾರಿಯಾಗಿದೆ. ಆದ್ದರಿಂದಲೇ ಮಧ್ವ ಗುರುಗಳು ದೇವರ ಮಂದಿರ ಎಂಬ ಅನುಸಂಧಾನದೊಂದಿಗೆ ಎಲ್ಲಾ ಜೀವಿಗಳ ಬಗ್ಗೆ ದಯೆ ತೋರಬೇಕು ಎಂದು ಕರೆ ನೀಡಿದ್ದಾರೆ.
ಮಹಾಭಾರತದಲ್ಲಿ ಭೀಮಸೇನ ಪ್ರಸ್ತುತಪಡಿಸಿದ ಪೌರುಷವಾದಕ್ಕೆ ಸಂಬಂಧಿಸಿ ಮಂಡಿಸಲಾದ ಸ್ವಭಾವವಾದದ ಹೊಂಬೆಳಕಿನಲ್ಲಿ ಆಯಾ ವ್ಯಕ್ತಿಗಳಲ್ಲಿ ಸಹಜವಾಗಿರುವ ಸ್ವಭಾವಕ್ಕೆ ಅನುಗುಣವಾಗಿ ಸ್ಪಂದಿಸುವ ದೇವರಲ್ಲಿ ಪಕ್ಷಪಾತ, ನಿರ್ದಯತೆ ಇಲ್ಲ ಎಂಬುದನ್ನು ಸಾಧಿಸಲಾಗಿದೆ. ಜ್ಞಾನ, ಬಲ, ಭಕ್ತವಾತ್ಸಲ್ಯ ಮುಂತಾದ ಅನಂತಗುಣಗಳಿರುವ ದೇವರ ಬಗ್ಗೆ ಹಾಗೂ ಗುಣಮಯ ವ್ಯಕ್ತಿತ್ವದ ದರ್ಶನಕ್ಕೆ ನಿಲುಗನ್ನಡಿಯಂತಿರುವ ಪ್ರಪಂಚ ಚಿಪ್ಪಿನಲ್ಲಿ ಮಿನುಗುವ ಮುತ್ತಿನಂತೆ ಸುಳ್ಳಲ್ಲ. ಅದು ಆಭರಣಗಳ ರಚನೆಯಲ್ಲಿ ಬಳಕೆಯಾಗುವ ನೈನ ಮುತ್ತಿನಂತೆ ಸತ್ಯವಾಗಿದೆ ಎಂದು ಮಧ್ವಾಚಾರ್ಯರು ಪ್ರಬಲವಾಗಿ ಸಮರ್ಥಿಸಿರುವ ಮುಖ್ಯ ಉದ್ದೇಶ ಪ್ರಪಂಚದ ಶಿಲ್ಪಿಯ ಗುಣಾನುಸಂಧಾನ. ಸ್ವಯಂಪರಿಪೂರ್ಣನಾದ ದೇವರ ಜಗತ್ ಸೃಷ್ಟಿಯೇ ಮುಂತಾದ ಪ್ರತಿಯೊಂದು ಚಟುವಟಿಕೆಯೂ ಭಕ್ತರ ಸಾಧಾನುಷ್ಠಾನಕ್ಕೆ ಸೌಕರ್ಯವನ್ನು ಒದಗಿಸಿ ಅವರನ್ನು ಉದ್ಧಾರ ಮಾಡುವುದಕ್ಕಾಗಿಯೇ ಎಂಬ ಪ್ರತಿಪಾದನೆಯಿಂದಾಗಿ ದೇವರ ಪ್ರತಿಯೊಂದು ಪ್ರವೃತ್ತಿಯೂ ಅವನ ಭಕ್ತವಾತ್ಸಲ್ಯ, ಕರುಣೆ ಮುಂತಾದ ಗುಣಗಳಿಗೆ ದ್ಯೋತಕ ಎಂದು ಸಮರ್ಥಿಸಿದ್ದಾರೆ. ಲಕ್ಷ್ಮೀದೇವಿಯೇ ಮುಂತಾದ ದೊಡ್ಡ ದೊಡ್ಡ ಭಕ್ತರ ಸೇವೆಯನ್ನು ಸ್ವೀಕರಿಸುವ ದೇವರು ಚಿಕ್ಕಪುಟ್ಟ ಭಕ್ತರ ಸೇವೆಯನ್ನೂ ಸ್ವೀಕರಿಸಿ ಸ್ಪಂದಿಸುವಷ್ಟು ಹೃದಯವಂತಿಕೆ ಉಳ್ಳವನೆಂದು ತೋರಿಸಿಕೊಡಲಾಗಿದೆ.
ವ್ಯಕ್ತಿ ವೈಶಿಷ್ಟೃಾದ:ಮಧ್ವಸಿದ್ಧಾಂತದ ವ್ಯಕ್ತಿವೈಶಿಷ್ಟೃಾದ ವಿಶಿಷ್ಟವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ವಸ್ತುವೂ ತನ್ನದೇ ಆದ ವ್ಯಕಿತ್ವವನ್ನು ಒಳಗೊಂಡಿರುತ್ತದೆ. ಇದನ್ನು ಸಾರುವುದರಿಂದ ಜೀವಿಗಳಲ್ಲಿ ಅಸೂಯೆ, ದ್ವೇಷ ಇತ್ಯಾದಿ ದೋಷಗಳಿಗೆ ಪರಿಹಾರವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯನ್ನು ಅವನ ವ್ಯಕ್ತಿತ್ವ ಅರಿತು ಅದಕ್ಕನುಗುಣವಾಗಿ ಪ್ರೇರೇಪಿಸುವ ದೇವರ ಸರ್ವಜ್ಞತ್ವ, ನಿಯಂತ್ರಣ ಚಮತ್ಕಾರದ ಮೇಲೂ ಬೆಳಕು ಚೆಲ್ಲಿದಂತಾಗಿದೆ. ಪ್ರತಿಯೊಂದು ಭಾಷೆಯೂ, ಪ್ರತೀ ಶಬ್ದವೂ, ಸಮುದ್ರ ಘೋಷ ಮುಂತಾದ ಪ್ರತೀ ಧನಾತ್ಮಕ ಧ್ವನಿಯೂ ದೇವರ ಗುಣಗಾನದಲ್ಲೇ ತೊಡಗಿದೆ ಎನ್ನುವುದು ಮಧ್ವಸಿದ್ಧಾಂತದ ಪ್ರಸ್ತುತಿ.
ಮಿಶ್ರಸ್ತುತಿ ಪ್ರಕ್ರಿಯೆ:ವೇದ, ಶಾಸ್ತ್ರಗಳಲ್ಲಿ ಯಾರದ್ದೇ ಸ್ತುತಿ ಬರಲಿ ಅದು ಮುಖ್ಯವಾಗಿ ಆಯಾ ದೇವತೆಗಳ ಅಂತರ್ಯಾಮಿ ಭಗವಂತನ ಸ್ತುತಿಯಾಗಿ ತೆರೆದುಕೊಂಡಿದೆ. ಅಮುಖ್ಯವಾಗಿ ಆಯಾ ವ್ಯಕ್ತಿಗಳ ಪರವಾಗಿ ತೊಡಗುವುದೆಂದು ಆಚಾರ್ಯರು ಸಾರುವ ಮೂಲಕ ಪ್ರತಿಯೊಂದು ಸ್ತುತಿಯಿಂದಲೂ ಸ್ತುತ್ಯವಾಗುವಂತಹ ದೇವರ ವೈಭವವನ್ನು ತೋರಿಸಿಕೊಟ್ಟಿದ್ದಾರೆ. ಹೀಗೆ ದೇವರ ಸವೋತ್ತಮತ್ವವನ್ನು ಶಾಸ್ತ್ರದ ಪ್ರಮಾಣಗಳಿಂದ ಸಮರ್ಥಿಸಿ ಸಾರಿದ ಮಧ್ವಾಚಾರ್ಯರು, ಮಧ್ವಸಿದ್ಧಾಂತದ ಮೂಲಕ ಆಸ್ತಿಕ ಪ್ರಪಂಚಕ್ಕೆ, ವೈದಿಕ ವಾಙ್ಮಯಕ್ಕೆ ಮಹತ್ವಪೂರ್ಣ ಕೊಡುಗೆ ಸಲ್ಲಿಸಿದ್ದಾರೆ.
(ಲೇಖಕರು ನಿವೃತ್ತ ಪ್ರಾಧ್ಯಾಪಕರು)
45 ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ಯಾರು, ಎಲ್ಲಿಂದ, ಎಲ್ಲಿಗೆ? ಇಲ್ಲಿದೆ ಮಾಹಿತಿ..
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × four =
Remember me
