ಸಮುದ್ರ ಮಂಥನದ ಅಂತ್ಯದಲ್ಲಿ ದೇವತೆಗಳ ವೈದ್ಯ ಧನ್ವಂತರಿಯು ಅಮೃತಕಲಶವನ್ನು ಹಿಡಿದುಕೊಂಡು ಪ್ರತ್ಯಕ್ಷನಾದಾಗ, ರಾಕ್ಷಸರು ಆ ಕಲಶವನ್ನು ಕಸಿದುಕೊಂಡುಬಿಡುತ್ತಾರೆ. ಅಮೃತ ಕುಡಿಯಲು ತಮ್ಮತಮ್ಮಲ್ಲೇ ಜಗಳ ಶುರುವಿಟ್ಟುಕೊಳ್ಳುತ್ತಾರೆ. ಇದನ್ನು ನೋಡಿ, ದೇವತೆಗಳಿಗೆ ಚಿಂತೆಯಾಗುತ್ತದೆ. ಅಮೃತ ಕೆಳಗೆ ಬಿದ್ದು ವ್ಯರ್ಥವಾದೀತು ಅಥವಾ ಯಾರಾದರೊಬ್ಬ ರಾಕ್ಷಸ ಆ ಅಮೃತವನ್ನು ಕುಡಿದು ಅಮರತ್ವ ಪಡೆದುಕೊಂಡುಬಿಟ್ಟಾನು ಎಂಬ ಚಿಂತೆ ದೇವತೆಗಳದು.ಆಗ ವಿಷ್ಣುವು ಆ ಅಮೃತಕಲಶವನ್ನು ರಾಕ್ಷಸರ ಕೈಯಿಂದ ಪಡೆಯುವುದಕ್ಕಾಗಿ ಮೋಹಿನಿಯ ರೂಪ ಧರಿಸಿ ಬರುತ್ತಾನೆ. ಮೋಹಿನಿಯನ್ನು ನೋಡಿ ಅಸುರರೆಲ್ಲರೂ ಮೋಹಿತರಾಗುತ್ತಾರೆ. ಜಗಳವಾಡುವುದನ್ನು ನಿಲ್ಲಿಸುತ್ತಾರೆ. ಮೋಹಿನಿ ರೂಪದಲ್ಲಿದ್ದ ವಿಷ್ಣುವು ಅವರಿಂದ ಉಪಾಯವಾಗಿ ಅಮೃತಕಲಶವನ್ನು ತೆಗೆದುಕೊಳ್ಳುತ್ತಾನೆ. ದೇವತೆಗಳಿಗೆ ಅಮೃತ ಸೇವಿಸಲು ಅನುವು ಮಾಡಿಕೊಡುತ್ತಾನೆ. ಈ ಘಟನೆ ನಡೆದ ದಿನವೇ ವೈಶಾಖ ಮಾಸ ಶುಕ್ಲ ಪಕ್ಷದ ಏಕಾದಶಿ ಇತ್ತು. ಹಾಗಾಗಿ ಇದನ್ನು ಮೋಹಿನಿ ಏಕಾದಶಿ ಎಂದು ಕರೆಯುತ್ತಾರೆ. ಪ್ರತಿ ವರ್ಷ ಈ ದಿನ ವಿಷ್ಣುವಿನ ಪೂಜೆ, ವ್ರತ ಆಚರಿಸುತ್ತಾರೆ.
ಈ ಸಲ ಏಕಾದಶಿಯ ಸಮಯ:ಈ ಸಲದ ಮೋಹಿನಿ ಏಕಾದಶಿ ಬುಧವಾರ ಮೇ 11ರ ಸಂಜೆ 7.31ಕ್ಕೆ ಪ್ರಾರಂಭವಾಗಿದ್ದು, ಗುರುವಾರ ಮೇ 12ರ ಸಂಜೆ 6.51ಕ್ಕೆ ಅಂತ್ಯಗೊಳ್ಳುತ್ತದೆ.
ವ್ರತಾಚರಣೆ ಫಲ:ಮೋಹಿನಿ ಏಕಾದಶಿ ಆಚರಿಸುವುದರಿಂದ ಮನುಷ್ಯ ತನ್ನ ಎಲ್ಲ ಸಾಂಸಾರಿಕ ಬಂಧನಗಳ ಮೋಹದಿಂದ ಮುಕ್ತಿ ಪಡೆಯುತ್ತಾನೆ. ಒಂದು ಸಾವಿರ ಗೋವುಗಳ ದಾನ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ಸ್ವತಃ ಪೂಜೆ-ವ್ರತ ಮಾಡಲಾಗದವರು ಇನ್ನೊಬ್ಬರ ಪೂಜೆ-ವ್ರತ ನೋಡಿ, ಕೇಳಿ ಪುಣ್ಯ ಪಡೆಯಬಹುದು ಎಂಬ ನಂಬಿಕೆ ಇದೆ.
ಆಚರಣೆ ಹೇಗೆ?:ದಶಮಿಯ ಸಾಯಂಕಾಲದಿಂದಲೇ ನಿರಾಹಾರವಾಗಿರಬೇಕು. ಏಕಾದಶಿಯಂದು ಬ್ರಾಹ್ಮಿಮುಹೂರ್ತದಲ್ಲಿ ಎದ್ದು ಶೌಚಸ್ನಾನಾದಿಗಳ ನಂತರ ಪೂಜಾಸ್ಥಾನದಲ್ಲಿ ಕುಳಿತು ವ್ರತದ ಸಂಕಲ್ಪ ಮಾಡಬೇಕು. ಧೂಪ, ದೀಪ, ಅಕ್ಷತೆ, ಕಲಶ, ತೆಂಗಿನಕಾಯಿ ಮುಂತಾದವುಗಳಿಂದ ವಿಷ್ಣುವಿನ ಪೂಜೆ ಮಾಡಬೇಕು. ನಂತರ ಸೂರ್ಯದೇವನಿಗೆ ಜಲ ಅರ್ಪಿಸಬೇಕು. ನಿರ್ಜಲ ವ್ರತ ಇಟ್ಟುಕೊಳ್ಳುವ ವಿಧಾನ ಇದ್ದರೂ, ಆರೋಗ್ಯದ ಹಿನ್ನೆಲೆಯಲ್ಲಿ ಹಾಗೆ ಮಾಡಲು ಆಗದೇ ಇರುವವರು ಸಂಕ್ಷಿಪ್ತ ಫಲಾಹಾರ ಸೇವಿಸಿ ವ್ರತ ಇಟ್ಟುಕೊಳ್ಳಬಹುದು. ಅಂದು ರಾತ್ರಿ ನಿದ್ದೆ ಮಾಡದೇ ಭಜನೆಯಲ್ಲಿ ನಿರತರಾಗಿರಬೇಕು ಎಂಬ ನಿಯಮವೂ ಇದ್ದು, ಸಾಧ್ಯವಾದವರು ಪಾಲಿಸಬಹುದು. ಮರುದಿನ ಸೂರ್ಯೋದಯದ ವೇಳೆಗೆ ತುಳಸಿಗೆ ಜಲಾರ್ಪಣೆ ಮಾಡಿ, ವ್ರತ ಮುಕ್ತಾಯಗೊಳಿಸಬೇಕು. ಸಾಯಂಕಾಲ ತುಳಸಿಕಟ್ಟೆಯ ಬಳಿ ತುಪ್ಪದದೀಪ ಹಚ್ಚಿಡಬೇಕು.
ಹಲವು ಕಥೆಗಳು:ಮೋಹಿನಿ ಅವತಾರದ ಕುರಿತು ಹಲವು ಪೌರಾಣಿಕ ಕಥೆಗಳು ಇವೆ. ಅದರಲ್ಲಿ ಇದೂ ಒಂದು. ಭಸ್ಮಾಸುರ ಎಂಬ ರಾಕ್ಷಸ, ಒಮ್ಮೆ ಈಶ್ವರನನ್ನು ಕುರಿತು ತಪಸ್ಸು ಮಾಡಿದ. ತಾನು ಯಾರ ತಲೆಯ ಮೇಲೆ ಕೈ ಇಟ್ಟರೂ ಅವರು ಉರಿದು ಭಸ್ಮವಾಗಬೇಕು ಎಂಬ ವರ ಪಡೆದ. ವರವನ್ನು ಪರೀಕ್ಷಿಸಲು ಮೊದಲು ಈಶ್ವರನ ತಲೆಯ ಮೇಲೆಯೇ ಕೈಯಿಡಲು ಹೊರಟ. ಈಶ್ವರ ಹೆದರಿ, ವಿಷ್ಣುವಿನ ಬಳಿಗೆ ಓಡಿದ. ವಿಷ್ಣುವು ಮೋಹಿನಿಯ ರೂಪವನ್ನು ತಾಳಿ ಭಸ್ಮಾಸುರನ ಬಳಿ ಬಂದ. ಭಸ್ಮಾಸುರ ಮೋಹಿನಿಯನ್ನು ಮೋಹಿಸಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡ. ಮೋಹಿನಿ ತಾನು ಅಭಿನಯಿಸಿದಂತೆಯೇ ಅಭಿನಯಿಸುವುದಾದಲ್ಲಿ ಭಸ್ಮಾಸುರನನ್ನು ವರಿಸುವುದಾಗಿ ಹೇಳಿದಳು. ಭಸ್ಮಾಸುರ ಒಪ್ಪಿದ. ಮೋಹಿನಿ, ವಿವಿಧ ರೀತಿಯಲ್ಲಿ ಅಭಿನಯಿಸಿ, ಕೊನೆಗೆ ತನ್ನ ತಲೆಯ ಮೇಲೆ ಕೈ ಇಟ್ಟುಕೊಂಡಾಗ, ಅದನ್ನು ಅನುಕರಿಸಿದ ಭಸ್ಮಾಸುರ ತಾನೇ ಸುಟ್ಟು ಭಸ್ಮವಾದ. ‘ಭಗವಂತ ಎಲ್ಲವನ್ನೂ ನಮಗೆ ಕೊಟ್ಟುಬಿಟ್ಟಿದ್ದಾನೆ’ ಎಂಬ ಅವಿವೇಕಕ್ಕೆ ಯಾರೂ ಒಳಗಾಗಬಾರದು. ಎಲ್ಲೋ ಒಂದು ಕಡೆ ನಮ್ಮನ್ನು ಹದ್ದುಬಸ್ತಿನಲ್ಲಿ ಇಡಲು ಭಗವಂತ ಅವಕಾಶ ಇಟ್ಟುಕೊಂಡೇ ಇರುತ್ತಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
