|ಸದೇಶ್ ಕಾರ್ಮಾಡ್ಮೈಸೂರು
ಮೈಸೂರಿನ ಚಹಾ ವ್ಯಾಪಾರಿಯೊಬ್ಬರ ಮಗಳ ಸಾಧನೆಯ ಕತೆ ಇದು… ಈಕೆಯ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯೇ ಸ್ಪೂರ್ತಿ. ಮಗಳ ಕನಸಿಗೆ ತಂದೆ ನೀರೆರೆಯುವ ಕೆಲಸ ಮಾಡಿದರು. ಇದರ ಫಲವಾಗಿ ಪ್ರಮೀಳಾ ಕುವರ್ ಬುಧವಾರ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್​ನಲ್ಲಿ ಎನ್​ಸಿಸಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು.
ವಿವಿ ಮೊಹಲ್ಲಾ ನಿವಾಸಿ ಪ್ರತಾಪ್ ಸಿಂಗ್-ಪುಷ್ಪ ಕುವರ್ ದಂಪತಿಯ ಪುತ್ರಿಯಾದ ಪ್ರಮೀಳಾ, ನಗರದ ಮಹಾರಾಣಿ ಪದವಿ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ. ಗಣರಾಜ್ಯೋತ್ಸವ ಪರೇಡ್​ನಲ್ಲಿ ದೇಶದ ಎಲ್ಲ ಎನ್​ಸಿಸಿ ನಿರ್ದೇಶನಾಲಯ ಘಟಕಗಳ ಸೀನಿಯರ್​ವಿಂಗ್ ಕೆಡೆಟ್​ಗಳಿಗೆ ಕಮಾಂಡಿಂಗ್ ಲೀಡರ್ ಆಗಿ 100 ಜನರ ತಂಡವನ್ನು ಅವರು ಮುನ್ನಡೆಸಿದರು. ಮೈಸೂರಿನ ನಿರ್ಮಲ ಕಾನ್ವೆಂಟ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ಪ್ರಮೀಳಾ ಕುವರ್, ಸ್ಕೌಟ್ಸ್ ಮತ್ತು ಗೈಡ್ಸ್​ಗೆ ಸೇರ್ಪಡೆಯಾದರು. ತಂದೆಯ ಸೇವಾ ಚಟುವಟಿಕೆಯು ಅವರನ್ನು ಸ್ಕೌಟ್ಸ್ ಮತ್ತು ಗೈಡ್ಸ್​ನತ್ತ ಆಕರ್ಷಿಸಿತು. ಆನಂತರ ಸೇಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗದ ಸಂದರ್ಭ ಎನ್​ಸಿಸಿಗೆ ಸೇರ್ಪಡೆಯಾದರು. 2018ರ ದಸರಾ ಟಾರ್ಚ್​ಲೈಟ್ ಪರೇಡ್​ನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ಕಮಾಂಡ್ ಲೀಡರ್ ಆಗಿ ತಂಡವನ್ನು ಮುನ್ನಡೆಸಿದ ಪ್ರಮೀಳಾ, ಅಂದಿನ ರಾಜ್ಯಪಾಲ ವಿ.ಆರ್. ವಾಲಾ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಂದ ಗೌರವ ಪಡೆದಿದ್ದರು.
ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸಬೇಕೆಂಬುದು ಪ್ರಮೀಳಾ ಅವರ ಕನಸಾಗಿತ್ತು. ಅದರಂತೆ, ಈ ಬಾರಿ ಪರೇಡ್​ನಲ್ಲಿ ಭಾಗವಹಿಸುವ ತಂಡದ ಸದಸ್ಯರಾಗಿಯೂ ಆಯ್ಕೆಗೊಂಡರು. ಆದರೆ, ತಂಡವನ್ನು ಮುನ್ನಡೆಸುವ ಸೌಭಾಗ್ಯ ತನ್ನದಾಗಲಿದೆ ಎಂದು ಅಂದುಕೊಂಡಿರಲಿಲ್ಲ. ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸಲು ಪ್ರಮೀಳಾ ಹಾಗೂ ಆಕೆಯ ತಂಡದ ಸದಸ್ಯರು ಬರೋಬ್ಬರಿ ಮೂರು ತಿಂಗಳ ತರಬೇತಿ ಪಡೆದುಕೊಂಡರು. ದೆಹಲಿಯಲ್ಲಿ ಒಂದು ತಿಂಗಳು ಬೆವರು ಹರಿಸಿದರು. ದೆಹಲಿ ತರಬೇತಿ ಸಂದರ್ಭದಲ್ಲಿ ಪ್ರತಿನಿತ್ಯ ಮುಂಜಾನೆ 2 ಗಂಟೆಗೆ ಎದ್ದು, 3 ಗಂಟೆಗೆ ತರಬೇತಿ ಸ್ಥಳಕ್ಕೆ ಹಾಜರಾಗುತ್ತಿದ್ದರು. ಅದಾದ ನಂತರ ನಿರಂತರ ಕಠಿಣ ತರಬೇತಿ ನೀಡಲಾಗುತ್ತಿತ್ತು.
ಆದ್ಯತೆ ಹೇಗಿದೆ?:ಎನ್​ಸಿಸಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸಿಇಟಿ ಸೀಟು ಹಂಚಿಕೆಯಲ್ಲಿ ಮೀಸಲಾತಿ ಇರುತ್ತದೆ. ಅಲ್ಲದೇ ಭಾರತೀಯ ಸೇನೆಯಲ್ಲಿ ಎನ್​ಸಿಸಿ ‘ಸಿ’ ಪ್ರಮಾಣ ಪತ್ರ ಪಡೆದ ಅಭ್ಯರ್ಥಿಗಳಿಗೆಂದೇ ಉದ್ಯೋಗಾವಕಾಶ ಇರುತ್ತದೆ ಹಾಗೂ ಇನ್ನೂ ಕೆಲ ಹುದ್ದೆಗಳಲ್ಲಿ ಅಂಕ, ವಯೋಮಿತಿಗಳಲ್ಲಿ ಸಡಿಲಿಕೆ ನೀಡಲಾಗುವುದು. ಅಲ್ಲದೇ ಕೆಲ ಹುದ್ದೆಗಳಲ್ಲಿ ಎನ್​ಸಿಸಿ ಅಭ್ಯರ್ಥಿಗಳಿಗೆ ಆದ್ಯತೆ ಇರುತ್ತದೆ.
ತಂದೆಯೇ ಪ್ರೇರಣೆ:ಪ್ರಮೀಳಾ ಅವರ ತಂದೆ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ‘ಸಾಗರ್ ಟೀ ಸ್ಟಾಲ್’ ಇಟ್ಟುಕೊಂಡಿದ್ದಾರೆ. ಅವರು ಸಮಾಜ ಸೇವೆಯನ್ನೂ ಕೈಗೊಳ್ಳುತ್ತಿದ್ದಾರೆ. ತಂದೆಯ ಈ ಗುಣ ಕಂಡು ಬೆಳೆದ ಪ್ರಮೀಳಾ ಕೋವಿಡ್ ಸಂದರ್ಭದಲ್ಲಿ ಹಲವಾರು ಜನರಿಗೆ ನೆರವು ನೀಡಿದ್ದಾರೆ. ಅಲ್ಲದೆ, ನಗರದ ವಿವಿಧೆಡೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಲೀಡರ್ ಆಗಿ ಆಯ್ಕೆ:ತರಬೇತಿ ವೇಳೆ ಪ್ರಮೀಳಾ ಅವರ ಕಮಾಂಡಿಂಗ್ ಹಾಗೂ ತಂಡದ ಸದಸ್ಯರೊಂದಿಗೆ ಬೆರೆಯುವ ರೀತಿಯ ಕುರಿತು ತರಬೇತುದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಡಿ.18 ರಿಂದ ಜ.23ರವರೆಗೆ ತರಬೇತಿ ನಡೆಸಿ ಅಂತಿಮವಾಗಿ ಮೂವರನ್ನು ಕಮಾಂಡಿಂಗ್ ಲೀಡರ್ ಆಗಿ ಆಯ್ಕೆ ಮಾಡಲಾಯಿತು. ಆನಂತರ ಪ್ರಮೀಳಾ ಅವರಿಗೆ ತಂಡವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ಘೊಷಿಸಲಾಯಿತು.
ಗಣರಾಜ್ಯೋತ್ಸವ ಪರೇಡ್​ನಲ್ಲಿ ಪಾಲ್ಗೊಂಡಿದ್ದರಿಂದ ದೇಶದ ವಿವಿಧ ಜನರೊಂದಿಗೆ ಬೆರೆಯಲು ಅವಕಾಶ ದೊರೆಯಿತು. ಮಾತ್ರವಲ್ಲ, ಅವರ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಯಿತು. ಎನ್​ಸಿಸಿ ಮೂಲಕ ಈ ಅವಕಾಶ ದೊರೆತಿದ್ದು ಸಂತಸ ಉಂಟುಮಾಡಿದೆ.
|ಪ್ರಮೀಳಾ ಕುವರ್
ನಾನು ಮೂಲತಃ ರಾಜಸ್ಥಾನದವನು. ನಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸುವುದಿಲ್ಲ. ಆದರೆ, ಮಗಳ ಮೇಲೆ ನನಗೆ ತುಂಬಾ ಅಭಿಮಾನ. ಆ ಕಾರಣಕ್ಕೆ ಆಕೆಗೆ ಉನ್ನತ ಶಿಕ್ಷಣ ಕೊಡಿಸುತ್ತಿದ್ದೇನೆ.
|ಪ್ರತಾಪ್ ಸಿಂಗ್ಪ್ರಮೀಳಾ ತಂದೆ
ವಾಯುಸೇನೆ ಕಡೆಗೆ ಆಕರ್ಷಣೆ:ಸಮಾಜಸೇವೆ, ದೇಶಸೇವೆಯ ಕಡೆಗೆ ಸದಾ ಮನಸ್ಸು ತುಡಿಯುವ ಪ್ರಮೀಳಾ ಅವರನ್ನು ಇದೀಗ ವಾಯುಸೇನೆ ಆಕರ್ಷಿಸುತ್ತಿದೆ. ಭಾರತೀಯ ವಾಯುಸೇನೆಯ ಫೈಟರ್ ಪೈಲಟ್ ಆಗಬೇಕೆಂಬುದು ಅವರ ಕನಸು. ಅವರಿಗೆ, ಯುದ್ಧ ವಿಮಾನವನ್ನು ಚಲಾಯಿಸಿದ ಮೊದಲ ಮಹಿಳಾ ಅಧಿಕಾರಿ ಅವನಿ ಚತುರ್ವೆದಿ ಸ್ಪೂರ್ತಿ.
ಆಯ್ಕೆ ಹೇಗೆ ಮಾಡುತ್ತಾರೆ?:ಗಣರಾಜ್ಯೋತ್ಸವ ಪರೇಡ್​ಗೆ ಆಯ್ಕೆ ಪ್ರಕ್ರಿಯೆ ಸುಧೀರ್ಘವಾಗಿ ರುತ್ತದೆ. ಮೊದಲು ಜಿಲ್ಲಾ ಹಂತದ ವಿಶ್ವವಿದ್ಯಾಲಯದ ಉತ್ತಮ ಎನ್​ಸಿಸಿ ವಿದ್ಯಾರ್ಥಿನಿಯರನ್ನು ಆಯ್ಕೆಮಾಡಿ ಅವರನ್ನು ಮಳವಳ್ಳಿಯ ಕ್ಯಾಂಪ್​ಗೆ ಕಳುಹಿಸಲಾಗುವುದು. ಇಲ್ಲಿ 8 ಜನರನ್ನು ಆಯ್ಕೆ ಮಾಡಲಾಗುವುದು. ಹೀಗೆ ಪ್ರತಿ ಜಿಲ್ಲೆಯಿಂದಲೂ ಆಯ್ಕೆ ಮಾಡಿ, ಬೆಂಗಳೂರಿನಲ್ಲಿ ನಡೆಯುವ 25 ದಿನದ ಕ್ಯಾಂಪ್​ಗೆ ಕಳುಹಿಸಲಾಗುವುದು. ಬೆಂಗಳೂರಿನಲ್ಲಿ ಕರ್ನಾಟಕ ಹಾಗೂ ಗೋವಾ ವಿದ್ಯಾರ್ಥಿಗಳಿಗೆ ಒಟ್ಟಿಗೆ ಕ್ಯಾಂಪ್ ನಡೆಸಲಾಗುವುದು. ಈ ಕ್ಯಾಂಪ್​ಗೆ ಪ್ರಮೀಳಾ ಕಮಾಂಡರ್ ಆಗಿ ಆಯ್ಕೆಯಾಗಿದ್ದಳು. ಇದೇ ರೀತಿ ಪ್ರತಿ ರಾಜ್ಯದಲ್ಲೂ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಎಲ್ಲ ರಾಜ್ಯದ ಆಯ್ಕೆಯಾದ ವಿದ್ಯಾರ್ಥಿಗಳನ್ನು ದೆಹಲಿಯ ಕ್ಯಾಂಪ್​ಗೆ ಕಳುಹಿಸಲಾಗುವುದು. ಇದರಲ್ಲಿ ಆಯ್ಕೆಯಾದವರನ್ನು ಕಮಾಂಡರ್ ಮಾಡಲಾಗುವುದು.

ಕರೊನಾ ಅಲೆ: ಕರ್ನಾಟಕದಲ್ಲಿ ಯಾವ ರೂಪಾಂತರಿಯ ಪ್ರಭಾವ ಜಾಸ್ತಿ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 15 =
Remember me
