|ಬಿ.ಆರ್.ಲಕ್ಷ್ಮಣರಾವ್
ಕನ್ನಡದ ಶ್ರೇಷ್ಠಕವಿಗಳಲ್ಲಿ ಒಬ್ಬರಾದ ಕೀರ್ತಿಶೇಷ ಪದ್ಮಶ್ರೀ ಕೆ.ಎಸ್.ನಿಸಾರ್ ಅಹಮದ್ ಅವರು ನನ್ನ ಮೆಚ್ಚಿನ ಕವಿ ಮಾತ್ರವಲ್ಲದೆ ನನ್ನ ಆದ್ಯ ಕಾವ್ಯಗುರುಗಳೂ ಹೌದು. ಏಕೆಂದರೆ ನಾನು ದಾವಣಗೆರೆಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದ ಕಾಲದಲ್ಲೇ ಪತ್ರಿಕೆಗಳಲ್ಲಿ ಅವರ ನವ್ಯಕವಿತೆಗಳನ್ನು ಓದಿ, ಪ್ರಭಾವಿತನಾಗಿದ್ದೆ. ಅವರ ನಗರಪ್ರಜ್ಞೆ, ಹೊಸ ನುಡಿಗಟ್ಟು, ಮೆಲುಹಾಸ್ಯ, ವಿಡಂಬನೆ ನನಗೆ ಮೋಡಿ ಮಾಡಿದ್ದವು. ಮುಂದೆ ನಾನು ಬೆಂಗಳೂರಿಗೆ ಬಂದು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿಎ ವಿದ್ಯಾರ್ಥಿಯಾದಾಗ, ಅವರು ಅದೇ ಕಾಲೇಜಿನಲ್ಲಿ ಭೂವಿಜ್ಞಾನದ ಅಧ್ಯಾಪಕರಾಗಿದ್ದರು. ನಾನು ಅವರ ಕಾವ್ಯಾಭಿಮಾನಿಯೆಂದು ಅವರ ಪರಿಚಯ ಮಾಡಿಕೊಂಡೆ. ಆಗ್ಗೆ ನಾನು ಬರೆದಿದ್ದ ಕೆಲವು ಕವಿತೆಗಳನ್ನು ಓದಿ, ತಿಳಿಸಲು ಕೋರಿ, ಅವರಿಗೆ ಕೊಟ್ಟೆ. ಅವುಗಳನ್ನು ಓದಿದ ಅವರು, ‘ನಿನ್ನಲ್ಲಿ ಒಬ್ಬ ಅಪ್ಪಟ ಕವಿಯಿದ್ದಾನೆ. ಅವನನ್ನು ಬೆಳೆಸುವುದು ನಿನ್ನ ಜವಾಬ್ದಾರಿ’ ಎಂದು ಬೆನ್ನು ತಟ್ಟಿದರು. ಹೀಗೆ ನನ್ನನ್ನು ಮೊದಲಿಗೆ ಕವಿಯೆಂದು ಗುರುತಿಸಿ ಹುರಿದುಂಬಿಸಿದವರು ಅವರೇ. ಹೀಗೆ 1964ರಲ್ಲಿ ಪ್ರಾರಂಭವಾದ ನಮ್ಮ ಆಪ್ತ ಗುರು-ಶಿಷ್ಯ ಸಂಬಂಧ ಮತ್ತು ಒಡನಾಟ 2020ರಲ್ಲಿ ಅವರ ನಿರ್ಗಮನದ ತನಕವೂ ನಿರಂತರವಾಗಿ ಮುಂದುವರಿಯಿತು.
ನಿಸಾರ್ ಅಹಮದ್ ಅವರು ತಮ್ಮ ‘ರಾಮನ್ ಸತ್ತ ಸುದ್ದಿ’, ‘ಅನಾಮಿಕ ಆಂಗ್ಲರು’, ‘ರಂಗೋಲಿ ಮತ್ತು ಮಗ’ ಮುಂತಾದ ಗಂಭೀರ ಓದುಗವಿತೆಗಳಿಂದ ಕನ್ನಡ ಕಾವ್ಯಲೋಕದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರಾದರೂ ಅವರು ಕನ್ನಡ ಜನಮಾನಸದಲ್ಲಿ ಅವಿಸ್ಮರಣೀಯರಾಗಿರುವುದು ವಿನೂತನ ಭಾವಗೀತೆಗಳಿಂದ ಎಂದರೆ ತಪ್ಪಾಗಲಾರದು. 1978ರಲ್ಲಿ ಮೈಸೂರು ಅನಂತಸ್ವಾಮಿ ಅವರ ಸಂಗೀತ ಸಂಯೋಜನೆಯಲ್ಲಿ ಹೊರಬಂದ ಅವರ ‘ನಿತ್ಯೋತ್ಸವ’ ಎಂಬ ಭಾವಗೀತೆಗಳ ಧ್ವನಿಸುರುಳಿ ಅಭೂತಪೂರ್ವ ಯಶಸ್ಸು ಮತ್ತು ಜನಪ್ರೀತಿ ಗಳಿಸಿ, ಕನ್ನಡ ಸುಗಮ ಸಂಗೀತಕ್ಕೆ ಹೊಸ ಆಯಾಮ ಮತ್ತು ವಿಸ್ತಾರವನ್ನು ನೀಡಿ, ‘ಟ್ರೆಂಡ್ ಸೆಟರ್’ ಆದದ್ದು ಈಗ ಇತಿಹಾಸ.
ನಿಸಾರ್ ಅಹಮದ್ ಅವರು ಒಬ್ಬ ಶ್ರೇಷ್ಠಕವಿಯಷ್ಟೇ ಅಲ್ಲದೆ ಜಾತಿ-ಮತಗಳ ಹಂಗಿಲ್ಲದ, ಮುಕ್ತ ಮನಸ್ಸಿನ, ಮನುಜಮತದ ಒಬ್ಬ ಶ್ರೇಷ್ಠವ್ಯಕ್ತಿಯೂ ಆಗಿದ್ದರು. ಆದ್ದರಿಂದಲೇ ಅವರಿಗೆ ‘ಈಸಿದವರು, ಇದ್ದು ಜೈಸಿದವರು’, ‘ಬೆಣ್ಣೆ ಕದ್ದ ನಮ್ಮ ಕೃಷ್ಣ / ಬೆಣ್ಣೆ ಕದ್ದನಮ್ಮ’ ಮುಂತಾದ ಕವಿತೆಗಳನ್ನು ಸಹಜವಾಗಿ ಬರೆಯಲು ಸಾಧ್ಯವಾಯಿತು. ಅವರು ಅಚ್ಚಕನ್ನಡಿಗರಾಗಿ ನಮ್ಮವರಿಗಿಂತಲೂ ಹೆಚ್ಚು ನಮ್ಮವರಾಗಿದ್ದರು. ನಿತ್ಯಸ್ಮರಣೀಯರಾದ ನನ್ನ ಕಾವ್ಯಗುರುವಿಗೆ ಪ್ರೀತಿಯ ನುಡಿನಮನಗಳು.
ಬೆಂಗಳೂರು ಪ್ರೀತಿ:ಡಿವಿಜಿ, ಮಾಸ್ತಿಯವರಂತೆ ದೀರ್ಘಕಾಲ ಬೆಂಗಳೂರಿನಲ್ಲಿ ನೆಲೆಸಿದವರು ನಿಸಾರ್. ಬೆಂಗಳೂರಿನ ಋತುಮಾನ, ಮಳೆಯ ರಿಂಗಣ ಮತ್ತು ಬೇಸಿಗೆ ಎಲ್ಲವೂ ಅವರ ಪ್ರಜ್ಞೆಯ ಭಾಗವೇ ಆಗಿತ್ತು. ಒಂದೊಂದು ಬಡಾವಣೆಯ ವಿಶೇಷತೆ ಕುರಿತು ಮಾತನಾಡಬಲ್ಲವರಾಗಿದ್ದರು.
ಸಾಹಿತ್ಯ ಕೃಷಿ: 21ಕವನ ಸಂಕಲನ, 14 ವೈಚಾರಿಕ ಕೃತಿ, 5 ಮಕ್ಕಳ ಸಾಹಿತ್ಯ ಕೃತಿ, 5 ಅನುವಾದ ಕೃತಿ, 13 ಸಂಪಾದನಾ ಗ್ರಂಥ, 8 ಧ್ವನಿಸುರಳಿ, 5 ಸಿಡಿ ಪ್ರಕಟಗೊಂಡಿವೆ.
ಡಿವಿಜಿ ಪ್ರಭಾವ:ನಿಸಾರ್ ಅವರಿಗೆ ಡಿವಿಜಿಯವರ ಸಾಹಿತ್ಯ ಅದರಲ್ಲೂ ಅವರ ಕವನ ಮತ್ತು ವೈಚಾರಿಕ ಗದ್ಯಬರವಣಿಗೆ ಎಂದರೆ ಮಹಾಪ್ರಾಣ. ಅನೇಕ ಲೇಖನ ಮತ್ತು ಅಂಕಣಗಳಲ್ಲಿ ನಿಸಾರ್ ಡಿವಿಜಿಯವರನ್ನು ನೆನಪಿಸಿಕೊಂಡಿದ್ದಾರೆ.
ಮೈಸೂರು ಅನಂತಸ್ವಾಮಿ ಹಾಗೂ ನಿಸಾರರು ಆತ್ಮೀಯ ಸ್ನೇಹಿತರು. ನಿಸಾರರ ಅನೇಕ ಕವಿತೆಗಳಿಗೆ ರಾಗ ಸಂಯೋಜಿಸಿದ ಅನಂತಸ್ವಾಮಿಯವರು ಅದನ್ನು ರಾಜ್ಯಾದ್ಯಂತ ಪ್ರಸಿದ್ಧಗೊಳಿಸಿದರು. ಅನಂತಸ್ವಾಮಿಯವರು ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಹಾಡಲು ನನ್ನನ್ನೂ ಜತೆಗೆ ಕರೆದೊಯ್ಯುತ್ತಿದ್ದರು. ಪ್ರಸಿದ್ಧವಾಗಿದ್ದ ಕವಿತೆಗಳಲ್ಲಿ ‘ನಿತ್ಯೋತ್ಸವ’ವೂ ಒಂದು. ದೇಶದ ವಿವಿಧೆಡೆ ಹಾಡಿನ ಕ್ಯಾಸೆಟ್​ಗಳ ಬಿಡುಗಡೆ ಆಗುತ್ತಿತ್ತಾದರೂ ರಾಜ್ಯದಲ್ಲಿ ಇಂತಹ ಪ್ರಯತ್ನಗಳು ಆರಂಭವಾಗಿರಲಿಲ್ಲ. ಈ ಸಮಯದಲ್ಲಿ ನಿತ್ಯೋತ್ಸವ ಕ್ಯಾಸೆಟ್ ಹೊರತರಬೇಕೆಂದು ಅನಂತಸ್ವಾಮಿ ಹಾಗೂ ನಿಸಾರ್ ನಿರ್ಧರಿಸಿದರು. ಆದರೆ ಇಬ್ಬರ ಬಳಿಯೂ ಅದಕ್ಕೆ ಬೇಕಾಗುವಷ್ಟು ಹಣ ಇರಲಿಲ್ಲ. ಬ್ಯಾಂಕ್​ನಿಂದ ಸಾಲ ಮಾಡಿ ನಿತ್ಯೋತ್ಸವ ಕ್ಯಾಸೆಟ್ ಹೊರತಂದರು. ನಾನಿನ್ನೂ ಚಿಕ್ಕ ಹುಡುಗಿ. ನಿಸಾರರು ನನ್ನನ್ನು ನೋಡಿದ ಕೂಡಲೇ ಪ್ರೀತಿಯಿಂದ ‘ಲತಾ ಮಂಗೇಶ್ಕರ್ ಬಂದರು ನೋಡಿ’ ಎನ್ನುತ್ತಿದ್ದರು. ಆಗ ರೆಕಾರ್ಡಿಂಗ್​ಗೆ ಈಗಿನಷ್ಟು ತಂತ್ರಜ್ಞಾನ ಅಭಿವೃದ್ಧಿಯಾಗಿರಲಿಲ್ಲ. ಲೈವ್ ರೆಕಾರ್ಡಿಂಗ್ ಆಗಿದ್ದರಿಂದ, ಹಾಡುವ ವೇಳೆ ಗಾಯಕರಾಗಲಿ ಅಥವಾ ಸಂಗೀತ ಉಪಕರಣಗಳನ್ನು ನುಡಿಸುವವರಾಗಲಿ ಸಣ್ಣ ತಪು್ಪ ಮಾಡಿದರೂ ಮತ್ತೆ ರೆಕಾರ್ಡಿಂಗ್ ಮಾಡಬೇಕಿತ್ತು. ಕನ್ನಡದ ಮೊದಲ ಕ್ಯಾಸೆಟ್​ನಲ್ಲಿ ಹಾಡುವ ಅವಕಾಶ ಸಿಕ್ಕಿತು. ‘ಪ್ರಭಾತ್’ ಕಲಾವಿದರ ಸಂಸ್ಥೆಯಲ್ಲಿ ರೆಕಾರ್ಡಿಂಗ್ ಆಯಿತು. ನಿತ್ಯೋತ್ಸವ ಸೇರಿ ಅನೇಕ ಗೀತೆಗಳನ್ನು ಅದಾಗಲೇ ಪ್ರಕಟವಾಗಿದ್ದ ಪುಸ್ತಕದಿಂದ ಆಯ್ಕೆ ಮಾಡಲಾಗಿದ್ದರೆ, ‘ನೀ ನುಡಿಯದಿರಲೇನು’, ‘ಮತ್ತದೇ ಬೇಸರ…’ ಕವಿತೆಗಳನ್ನು ಕ್ಯಾಸೆಟ್​ಗಾಗಿಯೇ ರಚಿಸಿದ್ದರು.
ಬಿಡುಗಡೆ ನಂತರ ಒಟ್ಟಾರೆ ಕ್ಯಾಸೆಟ್ ಹಾಗೂ ನಿತ್ಯೋತ್ಸವ ಕವಿತೆ ಮತ್ತಷ್ಟು ಪ್ರಸಿದ್ಧಿಯಾಯಿತು. ಭಾರತದಲ್ಲಷ್ಟೆ ಅಲ್ಲದೆ ಅಮೆರಿಕದವರೆಗೂ ಹಬ್ಬಿತು. ಪ್ರತಿ ಕವಿತೆಯ ಆರಂಭದಲ್ಲೂ ಸ್ವತಃ ನಿಸಾರ್ ಅವರೇ ಸಣ್ಣ ವಿವರಣೆಯನ್ನೂ ನೀಡಿದ್ದಾರೆ.
ನಿಸಾರ್ ಎಂದರೆ ಮೃದುಮಾತಿನ, ಶಿಸ್ತಿನ ವ್ಯಕ್ತಿತ್ವ. ಯಾರನ್ನೂ ನೋಯುವಂತೆ ಮಾತನಾಡಿಸಿದವರಲ್ಲ. ಪರಿಚಯದವರಿರಲಿ, ಅಪರಿಚಿತರಿರಲಿ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಅವರು ಉಪನ್ಯಾಸಕರಾಗಿದ್ದಾಗ ಮೂರ್ನಾಲ್ಕು ದಿನ ಶಿವಮೊಗ್ಗದ ಅನೇಕ ಕಡೆಗಳಲ್ಲಿ ಕಾರ್ಯಕ್ರಮಗಳಿಗಾಗಿ ಒಟ್ಟಿಗೆ ಸಂಚರಿಸಿದೆವು. ಅವರ ಮನೆಗೂ ಅನೇಕ ಬಾರಿ ಹೋಗಿದ್ದೇವೆ. ಪ್ರೀತಿಯಿಂದ, ಮಗಳಂತೆ ನನ್ನನ್ನು ಕಾಣುತ್ತಿದ್ದರು. ಅವರ ಮನೆಯಲ್ಲೂ ಅಷ್ಟೇ ಆತ್ಮೀಯತೆಯಿಂದ ಅತಿಥಿ ಸತ್ಕಾರ ಇರುತ್ತಿತ್ತು. ಅವರ ಮನೆಯ ಚಹಾ ಅದ್ಭುತವಾಗಿರುತ್ತಿದ್ದು, ಅದು ಇನ್ನೂ ನೆನಪಿನಲ್ಲಿದೆ. ನಿಸಾರ್ ಅವರೊಬ್ಬ ಉತ್ತಮ ಕವಿಯಷ್ಟೆ ಅಲ್ಲ ಉತ್ತಮ ವ್ಯಕ್ತಿಯೂ ಆಗಿದ್ದರು, ಅವರ ಕವಿತೆಗಳನ್ನು ಹಾಡುವುದೇ ನಮಗೆ ಸಂತಸದ ವಿಚಾರ.
ನಿತ್ಯೋತ್ಸವ ಕವಿತೆಗೆ ಕ್ಯಾಸೆಟ್​ನಲ್ಲಿ ನಿಸಾರರ ಪೀಠಿಕೆ:‘ರಾಜಕೀಯ ಸ್ವರೂಪದ ರಾಜ್ಯೋತ್ಸವ ಒಂದು ದಿನದ ಆಡಂಬರ. ಆದರೆ ನಿಸರ್ಗ ಹಾಗೂ ಇತಿಹಾಸ ಈ ಉತ್ಸವವನ್ನು ಸದ್ದುಗದ್ದಲವಿಲ್ಲದೆ ಶತಶತಮಾನಗಳಿಂದ ಆಚರಿಸುತ್ತ ಬಂದಿವೆ. ಎಂದೇ, ಈ ಉತ್ಸವ ದೈನಂದಿನ, ಜತೆಗೆ ಚಿರಂತನ. ಆದ್ದರಿಂದ ಇದೊಂದು ನಿತ್ಯೋತ್ಸವ’.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 5 =
Remember me
