| ಮೋದೂರು ಮಹೇಶಾರಾಧ್ಯಹನ್ನೆರಡನೆಯ ಶತಮಾನ ಕನ್ನಡನಾಡಿನ ಚರಿತ್ರೆಯಲ್ಲಿ ಅತ್ಯಂತ ಗಮನಾರ್ಹವಾದ ಕಾಲ. ಶತಶತಮಾನಗಳಿಂದ ಉಳ್ಳವರ ರೂಕ್ಷಬಾಹುಗಳಲ್ಲಿ ಬಂಧಿಯಾಗಿ ಶೋಚನಿಯ ಬದುಕು ಸಾಗಿಸುತ್ತಿದ್ದ ಜನಸಮುದಾಯಕ್ಕೆ ಜೀವಜಲವಾಗಿ ಬಂದ ಬಸವಾದಿ ಶರಣರು ಕೆಳವರ್ಗದ ಜನರಲ್ಲಿ ಆತ್ಮಾಭಿಮಾನ ತುಂಬಿದರಲ್ಲದೆ ಅವರು ಸಮಾಜದಲ್ಲಿ ಗೌರವಯುತವಾಗಿ ತಲೆಯೆತ್ತಿ ಬದುಕುವಂತೆ ಮಾಡಿದರು. ನಾಡಿನ ಇತಿಹಾಸದಲ್ಲಿ ಇದೊಂದು ಮಹತ್ವದ ಕಾಲಘಟ್ಟ. ಬಸವಾದಿ ಪ್ರಮಥರು ಕಾಯಕ ಸಿದ್ಧಾಂತಕ್ಕೆ ಆದ್ಯತೆ ನೀಡಿ ಆ ಮೂಲಕ ದುಡಿಯುವ ವರ್ಗ ಅಥವಾ ಕಾಯಕ ಸಮಾಜದ ಔನ್ನತ್ಯಕ್ಕೆ ಅನುವು ಮಾಡಿಕೊಟ್ಟರು. ನಾಡಿನ ಪ್ರತಿಯೊಬ್ಬರೂ ದುಡಿದೇ ಉಣ್ಣಬೇಕು. ಪರರ ದುಡಿಮೆಯಲ್ಲಿ ತಿಂದುಂಡು ಬದುಕಬಾರದೆಂಬ ಸಿದ್ಧಾಂತವನ್ನು ಜನಮಾನಸದಲ್ಲಿ ಬಿತ್ತಿದರು. ವ್ಯಕ್ತಿಯ ಯೋಗ್ಯತೆ ಹುಟ್ಟಿನಿಂದ ನಿರ್ಧಾರವಾಗಬಾರದು. ಅವನ ಗುಣಗಳಿಂದ ಮಾತ್ರ ನಿರ್ಧರಿತವಾಗಬೇಕು ಎಂದು ಶರಣರು ಬಯಸಿದರು. ಈ ಸಾಮಾಜಿಕ, ಧಾರ್ವಿುಕ ಮತ್ತು ಆರ್ಥಿಕ ಕ್ರಾಂತಿಗೆ ನಿಸ್ಸಂದೇಹವಾಗಿ ಬಸವಣ್ಣನೇ ನಾಯಕನಾದರೂ ಅವನೊಂದಿಗೆ ಕೈ ಜೋಡಿಸಿದ ಸಾವಿರಾರು ಶರಣ ಶರಣೆಯರು ತಮ್ಮ ಚಿಂತನೆ ಕಾಯಕಗಳ ಮೂಲಕ ಬಸವಣ್ಣನ ಸಮಗ್ರ ಕ್ರಾಂತಿಯಲ್ಲಿ ಸಹಭಾಗಿಗಳಾದರು. ಇಂತಹ ಶರಣರ ಪೈಕಿ ಕಾಯಕಯೋಗಿ ನುಲಿಯ ಚಂದಯ್ಯ ನವರೂ ಒಬ್ಬರು.
ಶರಣ ನುಲಿಯ ಚಂದಯ್ಯನವರ ಬಗೆಗಿನ ಚಾರಿತ್ರಿಕ ದಾಖಲೆಗಳು ಅತ್ಯಂತ ತೆಳುವಾಗಿದ್ದರೂ ಬಸವಪುರಾಣ, ಗುರುರಾಜ ಚರಿತ್ರೆ ಮುಂತಾದ ಗ್ರಂಥಗಳಲ್ಲಿ ಇವರ ಬಗ್ಗೆ ವಿಸ್ತಾರವಾಗಿ ಬರೆಯಲಾಗಿದೆ. ಚಂದಯ್ಯನವರು ಸುಮಾರು 1,130 ರಲ್ಲಿ ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಶಿವಣಿಗೆ ಗ್ರಾಮದಲ್ಲಿ ಜನಿಸಿದರು. ಕೆಲವು ವರ್ಷಗಳ ನಂತರ ಬಸವಣ್ಣನ ಕಾರ್ಯಕ್ಷೇತ್ರ ಕಲ್ಯಾಣಕ್ಕೆ ಬಂದರು. ಕಲ್ಯಾಣದ ಕೆರೆಗಳಲ್ಲಿ ಸಿಗುವ ಹೊಡಕೆ, ಚೇಣಿ ಮುಂತಾದ ನಾರುಗಳಿಂದ ಹಗ್ಗ ಹೊಸೆದು ಮಾರಾಟ ಮಾಡಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದರು. ನುಲಿಯ ಕಾಯಕದಿಂದಾಗಿ ಮುಂದೆ ನುಲಿಯ ಚಂದಯ್ಯನೆಂದು ಹೆಸರಾದರು. ಕಲ್ಯಾಣದಲ್ಲಿ 1160ರ ವೇಳೆಯಲ್ಲಿ ನಡೆಯುತ್ತಿದ್ದ ಅನುಭವ ಗೋಷ್ಠಿಗಳಲ್ಲಿ ಅವರು ಭಾಗವಹಿಸುತ್ತಿದ್ದುದಕ್ಕೆ ದಾಖಲೆಗಳು ಲಭ್ಯವಿವೆ. ಹಗ್ಗ ಮಾರುವ ಕಾಯಕವನ್ನು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆ ಯಿಂದ ಮಾಡುತ್ತಾ ಬಸವಣ್ಣನವರಿಗೆ ಪ್ರಿಯರಾದರು. ಇವರು ಚಂದೇಶ್ವರ ಲಿಂಗ ಎಂಬ ಅಂಕಿತ ನಾಮದಲ್ಲಿ ಸುಮಾರು 48 ವಚನ ರಚಿಸಿದ್ದಾರೆ.
ನುಲಿಯ ಚಂದಯ್ಯ ಕಾಯಕದ ಮೂಲಕವೇ ಆತ್ಮೋನ್ನತಿ ಕಂಡವರು.ಒಮ್ಮೆ ಇವರು ಕೆರೆಯ ನೀರಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ಕೊರಳಲ್ಲಿದ್ದ ಇಷ್ಟಲಿಂಗ ಜಾರಿ ನೀರಲ್ಲಿ ಬಿದ್ದುಹೋಯಿತು. ಕಾಯಕದಲ್ಲಿ ಮೈಮರೆತ ಚಂದಯ್ಯ ಅದನ್ನು ಮೇಲೆತ್ತಿಕೊಳ್ಳಲಿಲ್ಲ. ಆದರೂ ಲಿಂಗವೇ ಅವರನ್ನು ಹಿಂಬಾಲಿಸಿತು.ಅದನ್ನು ಸ್ವೀಕರಿಸಲು ನಿರಾಕರಿಸಿದಾಗ ಲಿಂಗದೇವ ಮತ್ತು ಚಂದಯ್ಯನವರ ನಡುವೆ ರಾಜಿ ಮಾಡಿಸಿದ ಮಡಿವಾಳ ಮಾಚಿದೇವರು, ಲಿಂಗವನ್ನು ಸ್ವೀಕರಿಸಲು ಸಲಹೆ ನೀಡುತ್ತಾರೆ. ಆದರೆ ಚಂದಯ್ಯ ತಾನು ನುಲಿದ ಹಗ್ಗಗಳನ್ನು ಮಾರುವ ಕಾಯಕವನ್ನು ಲಿಂಗದೇವನಿಗೆ ವಹಿಸುತ್ತಾನೆ.ಲಿಂಗದೇವ ಈ ಹಗ್ಗಗಳನ್ನು ಬಸವಣ್ಣನಿಗೆ ಹೆಚ್ಚು ಹಣಕ್ಕೆ ಮಾರಿ ಹಣತಂದಾಗ ಚಂದಯ್ಯ ಅದನ್ನು ಸ್ವೀಕರಿಸದೆ ಹೆಚ್ಚುವರಿ ಹಣವನ್ನು ಬಸವಣ್ಣನಿಗೆ ಒಪ್ಪಿಸಲು ಲಿಂಗದೇವನಿಗೆ ಕಟ್ಟಪ್ಪಣೆ ಮಾಡುತ್ತಾನೆ. ಇದು ಚಂದಯ್ಯನವರ ಕಾಯಕನಿಷ್ಠೆ ಮತ್ತು ಪ್ರಾಮಾಣಿಕತೆ ಬಗೆಗಿನ ಕತೆಯಾಗಿ ಖ್ಯಾತವಾಗಿದೆ.
ನುಲಿಯ ಚಂದಯ್ಯ ನವರು ತಮ್ಮ ಒಂದು ವಚನದಲ್ಲಿ
ಗುರುವಾದಡೂ ಕಾಯಕದಿಂದವೇ ಜೀವನ್ಮುಕ್ತಿ
ಲಿಂಗವಾದಡೂ ಕಾಯಕದಿಂದವೇ ವೇಷದ ಪಾಶ ಹರಿವುದು
ಗುರುವಾದಡೂ ಚರ ಸೇವೆಯ ಮಾಡಬೇಕು
ಜಂಗಮವಾದಡೂ ಚರ ಸೇವೆಯ ಮಾಡಬೇಕು
ಚನ್ನ ಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು
ಎಂದು ಹೇಳಿ ಕಾಯಕದ ಮಹತ್ವವನ್ನು ಬಣ್ಣಿಸಿದ್ದಾರೆ.
ಚಂದಯ್ಯನವರ ಪ್ರಕಾರ ಕಾಯಕದಿಂದ ಬಂದುದು ಮಾತ್ರ ಲಿಂಗ ಜಂಗಮಕ್ಕೆ ಅರ್ಪಿತವಾಗಬೇಕು. ಈ ಕಾಯಕ ಗುರು, ಲಿಂಗ ಜಂಗಮರೆಲ್ಲರಿಗೂ ಕಡ್ಡಾಯವೆಂದು ಸಾರಿದ್ದಾರೆ. ಆಧುನಿಕ ಜಗತ್ತಿನ ಮಹಾನ್ ಚಿಂತಕ ಕಾರ್ಲ್ ಮಾರ್ಕ್ಸ್ ದುಡಿಯುವ ವರ್ಗದ ಪಾರಮ್ಯದ ಬಗ್ಗೆ ಚಿಂತಿಸುವುದಕ್ಕೆ ಶತಮಾನಗಳ ಮೊದಲೇ ಕಲ್ಯಾಣದ ಶರಣರು ಬಸವಣ್ಣನ ನೇತೃತ್ವದಲ್ಲಿ ನಡೆಸಿದ ಅಸಮಾನತೆಯ ವಿರುದ್ಧದ ಹೋರಾಟವು ಚಂದಯ್ಯನವರಂತಹ ಸಾವಿರಾರು ಕಾಯಕಜೀವಿಗಳ ಪರಿಶ್ರಮದಿಂದ ನಡೆದುದಾಗಿದೆ.
ಚಂದಯ್ಯನವರು ತಮ್ಮ ಮತ್ತೊಂದು ವಚನದಲ್ಲಿ ಹೀಗೆ ಹೇಳಿದ್ದಾರೆ.
ಸತ್ಯ ಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ
ಚಿತ್ತ ವಿಚ್ಛಂದವಾಗಿರಬೇಕು.
ನೇಮದ ಕೂಲಿಯಂದಿನ ನಿತ್ಯ ನೇಮದಲ್ಲಿ
ಸಂದಿಲ್ಲದಿರಬೇಕು.
ನೇಮದ ಕೂಲಿಯಬಿಟ್ಟು
ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದೆಡೆ
ತಾ ಮಾಡುವ ಸೇವೆ ನಷ್ಟವಯ್ಯ
ನಿನ್ನಾಸೆಯ ವೇಷದ ಪಾಶಕ್ಕೆ ನೀನೇ ಹೋಗು
ನನಗೆ ನಮ್ಮ ಜಂಗಮದ ಪ್ರಸಾದದಾಗೆ
ಚಂದೇಶ್ವರ ಲಿಂಗಕ್ಕೆ ಪ್ರಾಣವಯ್ಯಾ.
ಲಿಂಗ ದೇವನಿಗೆ ಸವಾಲು ಹಾಕಿ ಕಾಯಕದ ಮಹತ್ವವನ್ನು ಮೆರೆದಿದ್ದಾರೆ.
ನುಲಿಯ ಚಂದಯ್ಯ ನವರ ಕೊನೆಯ ದಿನಗಳು: ಕಲ್ಯಾಣ ಕ್ರಾಂತಿಯೆಂದೇ ಇತಿಹಾಸದಲ್ಲಿ ಬಿಂಬಿತವಾಗಿರುವ ಕಲ್ಯಾಣ ಹತ್ಯಾಕಾಂಡ ಸಾವಿರಾರು ಅಮಾಯಕ ಶರಣರ ಕಗ್ಗೊಲೆ ಮತ್ತು ವಚನ ಸಾಹಿತ್ಯದ ಲೂಟಿಗೆ ಕಾರಣವಾಯಿತು. ಚೆನ್ನಬಸವಣ್ಣ, ಕಿನ್ನರಿ ಬೊಮ್ಮಯ್ಯ, ಮಡಿವಾಳ ಮಾಚಿದೇವ ಮತ್ತು ಅಕ್ಕ ನಾಗಮ್ಮನವರ ನೇತೃತ್ವದ ಶರಣರ ಗುಂಪು ದಟ್ಟವಾದ ಕಾನನದ ನಡುವಿನ ಉಳುವಿಗೆ ಹೊರಟು ಹೋಯಿತು.ಚಂದಯ್ಯನವರು ಕೆಲಕಾಲ ಅಲ್ಲಲ್ಲಿ ಧರ್ಮಪ್ರಸಾರ ಮಾಡುತ್ತಾ ನಂತರ ಉಳುವಿಯನ್ನು ಸೇರಿಕೊಂಡರು. ಆ ವೇಳೆಗಾಗಲೇ ಉಳುವಿಯಲ್ಲಿನ ಬಹುತೇಕ ಶರಣರು ಲಿಂಗೈಕ್ಯರಾಗಿದ್ದು ಅಕ್ಕನಾಗಲಾಂಬೆ, ಹಡಪದ ರೇಚಣ್ಣ ಮುಂತಾದ ಕೆಲವೇ ಶರಣರು ಮಾತ್ರ ಅಲ್ಲಿನ ಗೊಂಡಾರಣ್ಯದ ನಡುವೆ ಉಳಿದಿರುತ್ತಾರೆ. ಅಳಿದುಳಿದ ಶರಣ ಶರಣೆಯರನ್ನು ಅಲ್ಲಿಯೇ ಉಳಿಸಿ ಚಂದಯ್ಯ ನವರು ಅಕ್ಕನಾಗಲಾಂಬೆ ಯರೊಡಗೂಡಿ ಧರ್ಮಪ್ರಸಾರ ಮಾಡುತ್ತಾ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಣ್ಣೆಹೊಳೆಗೆ ಬರುತ್ತಾರೆ. ಅಲ್ಲಿ ಅಕ್ಕನಾಗಲಾಂಬೆ ಲಿಂಗೈಕ್ಯರಾಗುತ್ತಾರೆ.
ಅಕ್ಕನಾಗಲಾಂಬೆಯ ಮರಣ ನಂತರ ಚಂದಯ್ಯನವರು ಆ ಗ್ರಾಮ ಬಿಟ್ಡು ಧರ್ಮ ಪ್ರಸಾರದ ಕೈಂಕರ್ಯಮಾಡುತ್ತ ಮುಂದೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿಗೆ ಬರುತ್ತಾರೆ. ಅಲ್ಲಿನ ರಾಮಗಿರಿ ಸಮೀಪದ ಪದ್ಮಾವತಿ ಎಂಬ ಗ್ರಾಮಕ್ಕೆ ಬಂದು ತಂಗುತ್ತಾರೆ. ಚಂದಯ್ಯನವರ ಧರ್ಮನಿಷ್ಠ ಸಿದ್ಧಾಂತದಿಂದ ಪ್ರಭಾವಿತರಾದ ಅಲ್ಲಿನ ಪ್ರಮುಖರಾದ ಪದ್ಮಾವತಿ ಅವರಿಂದ ಧರ್ವೇಪದೇಶ ಪಡೆದು ಅವರಿಗಾಗಿ ಒಂದು ಮಠ ಮತ್ತು ಕೆರೆ ನಿರ್ವಿುಸಿಕೊಡುತ್ತಾರೆ. ಬಹುಕಾಲ ಅಲ್ಲಿ ಧರ್ಮಪ್ರಸಾರಗೈದ ಚಂದಯ್ಯನವರು ಸುಮಾರು 1182ರಲ್ಲಿ ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ. ಪದ್ಮಾವತಿ ಎಂಬ ಆ ಊರು ಚಂದಯ್ಯನವರ ನುಲಿಯ ಕಾಯಕದಿಂದಾಗಿ ನುಲೇನೂರು ಎಂದು ಪ್ರಖ್ಯಾತವಾಗುತ್ತದೆ. ರಾಮಗಿರಿಯ ಹತ್ತಿರವಿರುವುದರಿಂದ ಕ್ರಮೇಣವಾಗಿ ಅದನ್ನು ಆರ್.ನುಲೇನೂರು ಎಂದು ಕರೆಯಲಾಗುತ್ತಿದೆ.ಈಗಲೂ ಆ ಊರಿನಲ್ಲಿ ಚಂದಯ್ಯನವರ ಗದ್ದುಗೆ ಮತ್ತು ಅವರ ಬಾವಿಯನ್ನು ನೋಡಬಹುದು.
ಕರ್ನಾಟಕದ ಕುಳುವ, ಕೊರಮ, ಕೊರವ ಹಾಗೂ ಕೊರಚ ಸಮುದಾಯದವರು ನುಲಿಯ ಚಂದಯ್ಯನವರನ್ನು ತಮ್ಮ ಜನಾಂಗದ ಮೂಲ ಪುರುಷ ಮತ್ತು ಆರಾಧ್ಯದೈವವೆಂದು ಆರಾಧಿಸುತ್ತಾರೆ. ಕಾಯಕ,ದಾಸೋಹ ಮತ್ತು ಸತ್ಯನಿಷ್ಠೆಯ ಮೂಲಕ ವಿಶ್ವ ಮಾನವ ಕೋಟಿಗೆ ಅರಿವಿನ ಬೆಳಕನ್ನು ನೀಡಿದ ಶರಣರ ಪೈಕಿ ನುಲಿಯ ಚಂದಯ್ಯನವರು ಅಗ್ರಮಾನ್ಯರಾಗಿದ್ದಾರೆ.
(ಲೇಖಕರು ವಿಶ್ರಾಂತ ಪ್ರಾಚಾರ್ಯರು ಮತ್ತು ರಾಜಕೀಯ ವಿಶ್ಲೇಷಕರು)
ಪೊಲೀಸ್ ‘ಪೋಸ್ಟ್​’ಗಳಲ್ಲೂ ಕ್ರಿಯೇಟಿವಿಟಿ; ಇಂಪ್ರೆಸ್​ ಆಗುವಂತೆ ‘ಎಕ್ಸ್​’ಪ್ರೆಸ್ ಮಾಡುತ್ತಿರುವ ಪೊಲೀಸರು!

ನೆಲದಡಿಯಲ್ಲಿದೆ ಎರಡಂತಸ್ತಿನ ಮನೆ; ಇದರ ನಿರ್ಮಾಣಕ್ಕೆ ಈತ ತೆಗೆದುಕೊಂಡ ಸಮಯ 12 ವರ್ಷ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five × two =
Remember me
