|ಮಂಡಗದ್ದೆ ಪ್ರಕಾಶ್​ಬಾಬು ಕೆ.ಆರ್.
ಋಣಗಳಲ್ಲಿ ಮೂರು ವಿಧ:1. ದೇವ ಋಣ 2. ಋಷಿ ಋಣ 3. ಪಿತೃ ಋಣ. ದೇವ ಋಣ ಮತ್ತು ಋಷಿ ಋಣವನ್ನು ತೀರಿಸಬಹುದು ಆದರೆ ಮಾತಾಪಿತೃ ಋಣ ತೀರಿಸಲು ಆಗುವುದಿಲ್ಲ ಎನ್ನುತ್ತದೆ ಶಾಸ್ತ್ರ. ಹೀಗಾಗಿ ತಂದೆ-ತಾಯಿಯ ಋಣವನ್ನು ತೀರಿಸಲು ಅವರು ನಿಧನ ವಾದ ನಂತರ ಪಿತೃಪಕ್ಷದಲ್ಲಿ ಶ್ರಾದ್ಧ ಮಾಡಬೇಕೆಂದು ಹೇಳಲಾಗಿದೆ.
ಪ್ರತಿವರ್ಷ ಭಾದ್ರಪದ ಮಾಸದಲ್ಲಿ ಬರುವ ಕೃಷ್ಣಪಕ್ಷವನ್ನು ಪಿತೃಪಕ್ಷ ಎನ್ನುವರು. ಪಾಡ್ಯ ತಿಥಿಯಿಂದ ಮಹಾಲಯ ಅಮಾವಾಸ್ಯೆಯ ದಿನದವರೆಗೆ. ಈ ಹದಿನೈದು ದಿನಗಳು ಶುಭಕಾರ್ಯಗಳಾದ ಮದುವೆ, ಉಪನಯನ, ಚೂಡಾಕರ್ಮ, ಗೃಹಪ್ರವೇಶ ಮುಂತಾದ ದೇವತಾಕಾರ್ಯಗಳನ್ನು ಮಾಡುವುದಿಲ್ಲ. ಏಕೆಂದರೆ ಈ 15 ದಿನ ಪಿತೃಗಳ ಕಾರ್ಯಕ್ಕಾಗಿ ಮೀಸಲಿರುವುದು. ಮಾನವನ ಹುಟ್ಟಿನಿಂದ ಸಾಯುವವರೆಗೂ ಹದಿನಾರು (16) ಕರ್ಮಗಳನ್ನು ವಿಧಿಸಿರುವರು. ಅವುಗಳಲ್ಲಿ ಮುಖ್ಯವಾದವುಗಳಲ್ಲಿ ಶ್ರಾದ್ಧಕರ್ಮವೂ ಒಂದು.
ಬ್ರಹ್ಮಪುರಾಣದಲ್ಲಿ ಶ್ರಾದ್ಧ(ಪಕ್ಷ)ದ ಬಗ್ಗೆ ಈ ರೀತಿ ಹೇಳಿದೆ:
ದೇಶೇ ಕಾಲೇ ಚ ಪಾತ್ರೇ ಚ ಶ್ರದ್ಧಯಾ ವಿಧಿನಾ ಚ ಯತ್|
ಪಿತೃನುದ್ವಿಶ್ಯ ವಿಪ್ರೇಭ್ಯೋ ದತ್ತಂ ಶ್ರಾದ್ಧಾಮುದಾಹೃತಮ್|
ಅರ್ಥ:ಒಬ್ಬ ವ್ಯಕ್ತಿಯು ತನ್ನ ಪಿತೃಗಳನ್ನು ಉದ್ದೇಶಿಸಿ ಯೋಗ್ಯವಾದ ದೇಶ, ಕಾಲ, ಪಾತ್ರಗಳನ್ನು ಗಮನದಲ್ಲಿಟ್ಟುಕೊಂಡು ಶ್ರದ್ಧೆಯಿಂದಲೂ, ಶಾಸ್ತ್ರವಿಧಿಗೆ ಅನುಸಾರವಾಗಿಯೂ ಏನನ್ನು ದಾನವಾಗಿ ಕೊಡುತ್ತಾನೆಯೋ ಅದು ಶ್ರಾದ್ಧವೆನಿಸುತ್ತದೆ.
ತಿಲತರ್ಪಣ:ತರ್ಪಣ ಎಂದರೆ ‘ತೃಪ್ತಿಪಡಿಸುವಿಕೆ’ ಎಂದು. ತರ್ಪಣದಲ್ಲಿ ಜಲತರ್ಪಣ ಮತ್ತು ತಿಲತರ್ಪಣ ಎಂದು ಎರಡು ವಿಧ. ಋಷಿ, ದೇವತೆಗಳಿಗೆ ಜಲತರ್ಪಣ, ಪಿತೃದೇವತೆಗಳಿಗೆ ತಿಲತರ್ಪಣ ನೀಡಬೇಕು. ತಂದೆ-ತಾಯಿ ಇಲ್ಲದವರು, ತಾಯಿ ಜೀವಂತವಾಗಿದ್ದು, ತಂದೆ ಇಲ್ಲದವರು ಅಮಾವಾಸ್ಯೆ, ಸಂಕ್ರಾಂತಿ, ಗ್ರಹಣದ ಸಮಯದಲ್ಲಿ ಶ್ರಾದ್ಧಕರ್ಮದಲ್ಲಿ ಪಿತೃದೇವತೆಗಳಿಗೆ ತಿಲತರ್ಪಣ ಮಾಡಬೇಕು.
ತಿಲ ಅಂದರೆ ಎಳ್ಳು ಶನಿಗ್ರಹಕ್ಕೆ ಕಾರಕ. ಈತ ಜೀವನಾಡಿಗೆ ಕಾರಕನು. ಎಳ್ಳು ತೈಲ ನೀಡುವ ಧಾನ್ಯ. ನಮ್ಮ ಶರೀರದಲ್ಲಿ ವಿದ್ಯುತ್ ಉತ್ಪತ್ತಿಯಾಗುವುದು. ಅದು ಶರೀರಕ್ಕೆ ಎಷ್ಟು ಬೇಕೋ ಅಷ್ಟನ್ನು ಉಪಯೋಗಿಸಿ ಹೆಚ್ಚಾದ್ದನ್ನು ಶರೀರದಿಂದ ಹೊರಕ್ಕೆ ವಿಸರ್ಜಿಸಬೇಕಾಗುತ್ತದೆ. ವಿದ್ಯುತ್ ಉತ್ಪತ್ತಿ ಹೆಚ್ಚಾಗಿ ನಮ್ಮ ಹಸ್ತಗಳಲ್ಲಿ ಆಗುವುದು. ಆದ್ದರಿಂದ ಮಂತ್ರೋಚ್ಛಾರಣೆ ಮಾಡಿ ತಿಲ ಹಾಗೂ ನೀರನ್ನು ಉಪಯೋಗಿಸಿ ತರ್ಪಣ ನೀಡಬೇಕು.
ನೀರು ಸಹ ಒಳ್ಳೆಯ ವಿದ್ಯುತ್​ವಾಹಕ. ತಿಲದ ಮೇಲೆ ಬಿಟ್ಟ ನೀರು ತಿಲದಲ್ಲಿರುವ ಗುಣಗಳನ್ನು ಚರ್ಮದ ಮೂಲಕ ಶರೀರಕ್ಕೆ ವರ್ಗಾಯಿಸುತ್ತದೆ. ಕರ್ತೃು ನೀಡಿದ ಪಿಂಡದಾನದ ಮೂಲದ್ರವ್ಯ ಇಲ್ಲಿಯೇ ಇದ್ದರೂ ಅದರ ಫಲ ಪರಿವರ್ತನೆ ಮೂಲಕ ಮೃತವ್ಯಕ್ತಿಗೆ ತಲುಪುವುದು. ರೇಡಿಯೋ, ಟಿ.ವಿ., ದೂರವಾಣಿ ತರಂಗಗಳನ್ನು ಗಾಳಿಯ ಮೂಲಕ ಸಾಗುವ ಹಾಗೆ.
ಕಾಗೆಗೇ ಏಕೆ ಪಿಂಡ ಕೊಡಬೇಕು?:ಒಮ್ಮೆ ಮರುತ್ತ ಮಹಾರಾಜ ಎಂಬುವನು ಯಜ್ಞ ಮಾಡುತ್ತಿದ್ದಾಗ ಹೋಮಕ್ಕೆ ಅರ್ಪಿಸುತ್ತಿದ್ದ ಹವಿಸ್ಸನ್ನು ಸ್ವೀಕರಿಸಲು ದೇವತೆಗಳು ನಿಜರೂಪದಲ್ಲಿ ಅಲ್ಲಿಗೆ ಬಂದರು. ಅದೇ ಸಮಯದಲ್ಲಿ ಅಲ್ಲಿಗೆ ರಾವಣನೂ ಬಂದನು. ಅವನಿಗೆ ಹೆದರಿದ ದೇವತೆಗಳು ಭಯದಿಂದ ಕೆಲವು ಪ್ರಾಣಿರೂಪ ಧರಿಸಿದರು. ರಾಜನು ರಾವಣನೊಂದಿಗೆ ಯುದ್ಧ ಮಾಡಲು ಹೊರಟಾಗ ಯಜ್ಞ ದೀಕ್ಷಿತನು ಯುದ್ಧ ಮಾಡುವ ಹಾಗಿಲ್ಲ ಎಂದು ಋತ್ವಿಕರು ಮರುತ್ತನನ್ನು ತಡೆದರು. ಆಗ ರಾವಣ ನಾನೇ ಗೆದ್ದೆನೆಂದು ಹೊರಟುಹೋದನು. ದೇವತೆಗಳು ಪ್ರಾಣಿರೂಪದಿಂದ ನಿಜ ರೂಪಕ್ಕೆ ಬಂದರು. ದೇವತೆಗಳು ಯಾವ ಯಾವ ರೂಪದಲ್ಲಿ ಪ್ರಾಣಿಗಳಾಗಿದ್ದರೋ ಆಯಾ ಪ್ರಾಣಿಗಳಿಗೆ ವರ ನೀಡಿದರು. ನವಿಲಿನ ರೂಪ ಧರಿಸಿದ್ದ ಇಂದ್ರನು ನವಿಲಿಗೆ ನಾನು ಮಳೆಗರೆಯುವಾಗ ನೀನು ಆನಂದದಿಂದ ನರ್ತಿಸು, ಹಂಸರೂಪ ಧರಿಸಿದ್ದ ವರುಣ ನಿನ್ನ ವರ್ಣವು ಹಾಲಿನಂತೆ ಶುಭ್ರವಾಗಿರಲಿ ಎಂಬ ವರವನ್ನು ನೀಡಿದನು. ಕಾಗೆಯ ರೂಪ ಧರಿಸಿದ್ದ ಯಮನು ಭೂಮಿಯಲ್ಲಿ ನೀನು ಒಬ್ಬರು ಹಾಕಿದ ಅನ್ನ ತಿಂದಾಗ ನನ್ನ ಲೋಕದಲ್ಲಿರುವ ಅವನ ಪಿತೃಗಳಿಗೆ ತೃಪ್ತಿಯಾಗಲಿ ಎಂಬ ವರವನ್ನು ಕರುಣಿಸಿದನು. ಹಾಗಾಗಿ ಶ್ರಾದ್ಧದಲ್ಲಿ ‘ಕಾಗೆ’ಗೆ ಅನ್ನ (ಪಿಂಡ) ಹಾಕಿದರೆ ಪಿತೃಗಳು ತೃಪ್ತಿ ಆಗುವರು ಎಂಬ ನಂಬಿಕೆ.
ಶ್ರಾದ್ಧವನ್ನು ಯಾವ ಕ್ಷೇತ್ರದಲ್ಲಿ ಮಾಡಬೇಕು?:1. ಪಿತೃಗಳ ಸದ್ಗತಿಗಾಗಿ ಬಿಹಾರದ ಗಯಾ ಕ್ಷೇತ್ರದಲ್ಲಿ. 2. ಉತ್ತರ ಪ್ರದೇಶದ ಕಾಶೀ(ವಾರಣಾಸಿ) ಕ್ಷೇತ್ರದಲ್ಲಿ. 3. ಗಂಗಾನದಿ ತಟದಲ್ಲಿ. 4. ಅಯೋಧ್ಯೆಯ ಸರಯೂ ನದಿತೀರದಲ್ಲಿ. 5. ಪ್ರಯಾಗದ ತ್ರಿವೇಣಿ ಸಂಗಮದಲ್ಲಿ. 6. ಹರಿದ್ವಾರ, ಗಂಗಾತಟದ ಬ್ರಹ್ಮಕುಂಡದಲ್ಲಿ. 7. ಬದರಿಯ ಬ್ರಹ್ಮಕಪಾಲದಲ್ಲಿ. 8. ಕರ್ನಾಟಕದ ಗೋಕರ್ಣ ಹಾಗೂ ಶ್ರೀರಂಗಪಟ್ಟಣದಲ್ಲಿ. 9. ಮಾತೃಗಯಾದಲ್ಲಿ.
ಮನುಷ್ಯ ಯಾವುದೇ ಪಾಪವನ್ನು ಮಾಡಿದರೂ ಅದಕ್ಕೆ ಪ್ರಾಯಶ್ಚಿತ್ತ ಇರುವುದು. ಆದರೆ ಪಿತೃದ್ರೋಹಿಗಳಿಗೆ ಮಾತ್ರ ಪ್ರಾಯಶ್ಚಿತ್ತ ಇಲ್ಲವೆಂದು ಶಾಸ್ತ್ರವು ಹೇಳುತ್ತದೆ. ಪಿತೃಪಕ್ಷದಲ್ಲಿ ಮಾಡುವ ಕಾರ್ಯವು ಮಾತಾಪಿತೃಗಳಿಗಲ್ಲದೆ ಅಜ್ಜ-ಅಜ್ಜಿ, ಮುತ್ತಜ್ಜ-ಮುತ್ತಜ್ಜಿಯರಿಗೂ ಸೇರುತ್ತದೆ ಹಾಗೂ ರಕ್ತಸಂಬಂಧ ಇರುವ ಎಲ್ಲರಿಗೂ ಸೇರುತ್ತದೆ. ಅಂದರೆ, ಒಂದೇ ಗೋತ್ರದವರಿಗೆ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪಿತೃಗಳಿಂದ ಆಶೀರ್ವಾದ ಸಿಗುವುದು ಹಾಗೂ ಮುಂದಿನ ಪೀಳಿಗೆಗೆ ಮತ್ತು ಕುಟುಂಬದ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಶ್ರಾದ್ಧದಲ್ಲಿ ಶ್ರದ್ಧೆ ಮುಖ್ಯವೇ ಹೊರತು ಆಡಂಬರ, ತೋರಿಕೆ ಹಾಗೂ ಪ್ರಚಾರವಲ್ಲ.
(ಲೇಖಕರು ಆಧ್ಯಾತ್ಮ ಚಿಂತಕ, ಜ್ಯೋತಿಷ್ಯ ಪ್ರವೀಣ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 10 =
Remember me
