|ನಂದೀಶ್ ಹಂಚೆ
ಹೊರಗೆ ಕಾಣುವ ವೇಷಕ್ಕೂ, ವ್ಯಕ್ತಿಯ ಆಂತರ್ಯಕ್ಕೂ ನೇರ ಸಂಬಂಧ ಇರಬೇಕಾಗಿಲ್ಲ. ತೋರುವ ವೇಷಗಳು ತರುವ ತೊಡಕುಗಳೆ ಹೆಚ್ಚು. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ ಅಥವಾ ಶಿವರಾಮ ಕಾರಂತರನ್ನು ನೆನಪಿಸಿಕೊಳ್ಳಿ. ಅವರ ವೇಷಭೂಷಣಗಳು ಅಪ್ಪಟ ಸಂಪ್ರದಾಯಸ್ಥರಂತೆ ತೋರುತ್ತವೆ. ಆದರೆ, ಅವರ ಸಾಹಿತ್ಯ ಸಂಪ್ರದಾಯದ ಓರೆಕೋರೆಗಳನ್ನೇ ತಿದ್ದಿತೀಡುವ ಮಹಾ ಮಾದರಿಗಳಾಗಿವೆ. ಕಾರಂತ ಹಾಗೂ ಪುತಿನ ಅವರ ಭೌತಿಕ ಹಾಗೂ ಬೌದ್ಧಿಕ ಸ್ವರೂಪದಲ್ಲಿ ಅನೇಕ ಭಿನ್ನತೆಗಳಿವೆ ನಿಜ. ಆದರೆ, ಅವರ ಆಲೋಚನಾಕ್ರಮದಲ್ಲಿ ಒಂದು ಸಾಮ್ಯತೆ ಇದೆ. ಪುತಿನ ಅವರು ದುಂಡು ಚಪ್ಪಟೆಯಾದ ಮುಖದ ಮೇಲೆ ಉದ್ದನೆಯ ನಾಮ, ತಲೆಯ ಮೇಲೊಂದು ಟೊಪ್ಪಿ, ಕಚ್ಚೆ, ನಿಲುವಂಗಿ ಕೈಯಲ್ಲೊಂದು ಕೋಲು. ಇದು ನಮ್ಮ ಮನೆಯಲ್ಲೂ ಇರುವ ಅಜ್ಜನೊಬ್ಬನನ್ನು ಸೂಚಿಸುವಂತಿದೆ.
ಆದರೆ, ಆ ಸಂಪ್ರದಾಯಸ್ಥ ಮನಸ್ಸು ಆಲೋಚಿಸುವ ಅರ್ವಾಚೀನ ಆಲೋಚನೆ ಮಾತ್ರ ವರ್ತಮಾನದಲ್ಲೂ ನಿಬ್ಬೆರಗುಗೊಳಿಸುತ್ತದೆ. ಅದೇನೇ ಇರಲಿ ಪುತಿನ ಕನ್ನಡ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಜಗತ್ತನ್ನು ಅದ್ಭುತವಾಗಿ ಕಟ್ಟಿದ ಕವಿ. ಮೇಲುನೋಟಕ್ಕೆ ಪಕ್ಕಾ ಸಂಪ್ರದಾಯಶೀಲರಾದರೂ ಅವರ ಮನಸ್ಸು ಮತ್ತು ಸಾಹಿತ್ಯ ಎಂದೂ ಸಂಪ್ರದಾಯದ ಒಳಗೆ ವಿರಮಿಸಲಿಲ್ಲ ಅಥವಾ ರಮಿಸಲೂ ಇಲ್ಲ. ಪರಂಪರೆ ಹಾಗೂ ವರ್ತಮಾನದ ನಡುವಿನ ಕೊಂಡಿಯಂತೆ ಪುತಿನ ಸಾಹಿತ್ಯವಿದೆ. ಪರಂಪರೆಯಲ್ಲಿರುವ ಮೌಲ್ಯವನ್ನು ಮುಂದಿನ ತಲೆಮಾರಿಗೆ ಸಾಗಿಸುತ್ತಲೇ ವರ್ತಮಾನಕ್ಕೆ ನಾವು ತೆರೆದುಕೊಳ್ಳಬೇಕಾದ ರೀತಿಯನ್ನು ಅವು ಶೋಧಿಸುತ್ತವೆ.
ಪುತಿನ ನಿಜಕ್ಕೂ ಸಾರ್ವಕಾಲಿಕ ಕವಿ. ಅವರ ಕಾವ್ಯಜಗತ್ತು ಸುತ್ತಲಿನ ಪ್ರಕೃತಿಯನ್ನು ಹೇಗೆ ಶೋಧಿಸಿ ಆರಾಧಿಸುತ್ತದೋ ಹಾಗೇ ಮನುಷ್ಯನ ಅಂತರಂಗವನ್ನು ಶೋಧಿಸಿ ನಿರೂಪಿಸುತ್ತದೆ. ಅವರ ಕಾವ್ಯ ಜಗತ್ತು ಎನ್ನುವಾಗ ಅವರ ಗೀತ ನಾಟಕಗಳನ್ನು ಒಳಗೊಂಡಿರುತ್ತದೆ. ಈ ಬಾಹ್ಯ ಹಾಗೂ ಆಂತರಿಕ ಜಗತ್ತಿನ ಅಂತರಾರ್ಥ ತಿಳಿದವನು ಮಾತ್ರ ಸಾರ್ವತ್ರಿಕವಾದ ಮನುಷ್ಯ ಬದುಕನ್ನು ಕುರಿತು ಮಾತನಾಡುತ್ತಾನೆ.
ಇದಕ್ಕೊಂದು ನವಿರಾದ ಉದಾಹರಣೆ ಅಹಲ್ಯೆ ಗೀತನಾಟಕ. ಸಂಪ್ರದಾಯಸ್ಥರಂತೆ ತೋರುವ ಪುತಿನ ಹೀಗೂ ಬರೆಯಬಹುದೆ ಎಂದು ಯೋಚಿಸುವಂತೆ ಮಾಡುತ್ತದೆ. ಕವಿ ಋಣಿಯಾಗಬೇಕಾಗಿದ್ದು ಕಾಲಕ್ಕೆ ಮತ್ತು ಅದರ ಧರ್ಮಕ್ಕೆ ತಾನೆ. ‘ಹುಲುಬಯಕೆ ಬಾ ಎನಲು ಓ ಎಂದು ಬಾರದಿರು, ವಾತಾಪಿಯಂದದೊಳು ಬಾಳನೊಡೆದು, ಮೊಗ್ಗಿನೊಳು ಕಂಪಂತೆ ಚೇತದೊಳು ಬೆಳೆಯುತ್ತ, ಸಮಯವರಿತರಳೆ ಬಾ ಒಲವೆ ನಲಿದು. ಇಂತೆಮ್ಮ ಬಿನ್ನಹ ಮಾರ ಮನ್ನಿಸಲಿ, ಆಮೋದಕಾಗುವೊಲು ಬಾಳಾನಾಗಿಸಲಿ..’ ವಾತಾಪಿ ಹಾಗೂ ಮೊಗ್ಗಿನ ಈ ರೂಪಕಗಳು ಮನುಷ್ಯನ ಬಯಕೆಯ ಈಡೇರಿಕೆಯ ಎರಡು ಬಗೆಯನ್ನು ಸೂಚಿಸುತ್ತವೆ.
ಒಂದು ನಾಶಕ್ಕೆ ಹೇತುವಾದರೆ ಮತ್ತೊಂದು ಬದುಕಿಗೆ ತೋರಣ ನಾಂದಿಯಾಗುತ್ತದೆ. ಪ್ರೇಮ ಮತ್ತು ಕಾಮ ಮನುಷ್ಯ ಬದುಕಿನ ಪ್ರಮುಖ ಮಜಲುಗಳು. ಆದರೆ, ಈ ಪ್ರೇಮ-ಕಾಮವನ್ನು ವರ್ಗಿಕರಿಸಿಕೊಳ್ಳಲು ಅಥವಾ ಅರಿಯಲು ನಮಗೆ ಸಾಧ್ಯವಾಗಬೇಕು. ಆಸೆಗಳು ಮೂಡಿದೊಡನೆ ಈಡೇರಿದರೆ ಆಗುವ ಅನಾಹುತವನ್ನು ವಾತಾಪಿ ಕಥೆ ವಿವರಿಸುತ್ತದೆ. ಆದುದರಿಂದ ಕವಿ ಇಲ್ಲಿ ಬಯಕೆಗಳ ಬಗ್ಗೆ ವಿನಂತಿ, ಮನ್ಮಥನಲ್ಲಿ ಬಿನ್ನಹ ಎರಡನ್ನೂ ಮಾಡುತ್ತಿದ್ದಾನೆ. ಯಾಕೆಂದರೆ ಮನುಷ್ಯನ ಪ್ರಯತ್ನವನ್ನು ಮೀರಿದ ಒಂದು ಶಕ್ತಿ ಇದೆ. ಅದು ನಮ್ಮನ್ನು ಭವಚಕ್ರದಲ್ಲಿ ನಿಲ್ಲುವಂತೆ ಮಾಡಬಾರದು. ಭವಚಕ್ರದಲ್ಲಿ ನಿಲ್ಲುವ ಮತ್ತು ಮೀರುವ ಎರಡು ಕ್ರಿಯೆಗಳ ನಿಯಂತ್ರಕನಲ್ಲಿ ಪ್ರಾರ್ಥಿಸುತ್ತಲೇ ಜೀವನ ಹೇಗಿರಬೇಕೆಂಬ ಬೇಡಿಕೆಯನ್ನು ಕವಿ ಸೂಚಿಸುತ್ತಾನೆ.
ಇದನ್ನೂ ಓದಿ:ವಿಶ್ವಸಂಸ್ಥೆಯಲ್ಲೂ ‘ಕಾಂತಾರ’ ಹವಾ; ಭಾರತದ ಪ್ರತಿನಿಧಿಯಾಗಿ ಕನ್ನಡದಲ್ಲೇ ಮಾತನಾಡಿದ ರಿಷಬ್​ ಶೆಟ್ಟಿ
ಪುತಿನ ಅವರ ಕಾವ್ಯಶಕ್ತಿ ಇರುವುದು ರೂಪಕಾತ್ಮಕ ಶೀರ್ಷಿಕೆಯಲ್ಲಿ ಹಾಗೂ ಚಿಂತನೆಯಲ್ಲಿ. ಅದಕ್ಕೆ ಸಾಕ್ಷಿ ‘ಗೋಕುಲ ನಿರ್ಗಮನ.’ ಸ್ವತಃ ಮೇಲುಕೋಟೆಯಲ್ಲಿ ವಾಸಿಸುತ್ತಾ, ಕೃಷ್ಣನ ಬಗೆಗೆ ಅಪಾರ ಭಕ್ತಿಯನ್ನುಟ್ಟುಕೊಂಡಿದ್ದ ಪುತಿನ, ಗೋಕುಲ ನಿರ್ಗಮನದಂತಹ ಮಹತ್ವದ ಕೃತಿಯನ್ನು ಹೇಗೆ ಬರೆದರೆಂದು ಆಶ್ಚರ್ಯವಾಗುತ್ತದೆ. ಈ ಇಡೀ ನಾಟಕ ನಮ್ಮ ಕಣ್ಣ ಮುಂದೆ ಎರಡು ಕೃಷ್ಣನ ಪರಿಕಲ್ಪನೆಗಳನ್ನು ತರುತ್ತದೆ. ಒಂದು: ದ್ವಾರಕೆಯ ಕೃಷ್ಣ, ಇನ್ನೊಂದು: ಗೋಕುಲದ ಕೃಷ್ಣ. ಗೋಕುಲದ ಕೃಷ್ಣನನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಆತ ಗೋವುಗಳನ್ನು ಮೇಯಿಸುತ್ತಾ, ಕೊಳಲನ್ನು ಊದುತ್ತಾ, ಶಿಖಿಯಲ್ಲಿ ನವಿಲುಗರಿ ಸಿಕ್ಕಿಸಿಕೊಂಡು, ಗೋಪಿಕಾ ಸ್ತ್ರೀಯರೊಡನೆ ರಮಿಸುವವ. ಆದರೆ, ದ್ವಾರಕೆಯ ಕೃಷ್ಣ ಕೊಳಲಿಗೆ ಬದಲಾಗಿ ಕೈಯಲ್ಲಿ ಚಕ್ರ ಹಿಡಿದು, ಶಿಖಿಯಲ್ಲಿ ಕಿರೀಟ ಧರಿಸಿ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ನಿಯಂತ್ರಿಸುವ ರಾಜತಾಂತ್ರಿಕ. ಪುತಿನ ಅವರ ಕಾವ್ಯ ಅಪೇಕ್ಷಿಸುವ ಕೃಷ್ಣ ಗೋಕುಲದವನು. ಆ ಕಾರಣದಿಂದಲೇ ನಾಟಕದ ಶೀರ್ಷಿಕೆಯೇ ರೂಪಕವಾಗಿ ನಮ್ಮನ್ನು ಆಲೋಚನೆಗೆ ಒಳಗು ಮಾಡುತ್ತದೆ.
ಮಲೆ ದೇಗುಲ ಹಾಗೂ ಅವರ ಇತರ ಕವಿತೆಗಳನ್ನು ಗಮನಿಸಿದರೂ ಅವರ ಅಲೋಚನೆಯ ಅರ್ವಾಚೀನತೆ ನಮ್ಮನ್ನು ಆವರಿಸುತ್ತದೆ. ‘ದೇವ ಬೊಂಬೆ ಪೂಜೆ ಆಟ, ಭಕ್ತಿ ಸೋಜಿಗ’- ಈ ಸಾಲು ಅವರ ಒಟ್ಟು ಕವಿತೆಯನ್ನು ಮಾರ್ದನಿಸುತ್ತದೆ. ಸ್ವತಃ ಭಕ್ತಿ, ಶ್ರದ್ಧೆ, ನಂಬಿಕೆಯ ಸಾಕಾರಮೂರ್ತಿಯಂತಿದ್ದ, ಪುತಿನ ಅವರ ಒಳಗಿನ ವೈಚಾರಿಕತೆಗೆ ತೋರುವ ಕನ್ನಡಿ ಇದು. ದೇವರನ್ನು ಶಿಲ್ಪಿಯೊಬ್ಬ ತನ್ನಲ್ಲಿ ಮೂಡಿದ ಕಲ್ಪನೆಯ ಚಿತ್ರವನ್ನು ಆಧರಿಸಿ ಕೆತ್ತುತ್ತಾನೆ. ಪೂಜೆಯನ್ನು ಹೀಗೇ ಮಾಡಬೇಕೆಂದು ಯಾರೂ ಹೇಳಿಲ್ಲ. ಒಬ್ಬೊಬ್ಬರಿಗೂ ಒಂದೊಂದು ಬಗೆ. ಆದರೆ, ಯಾವುದೇ ಮೂರ್ತಿ ಆಗಿರಲಿ, ಯಾವುದೇ ಬಗೆಯ ಪೂಜೆಯದಾಗಿರಲಿ ಭಕ್ತಿ ಮಾತ್ರ ಆಶ್ಚರ್ಯವನ್ನು ಉಂಟು ಮಾಡುವಂತಹದ್ದು. ಆ ಭಕ್ತಿಯ ನಂಬಿಕೆಯೇ ನಮಗೆ ಅನಾದಿ ಕಾಲದಿಂದಲೂ ಶ್ರದ್ಧೆಯಿಂದ ಜೀವನವನ್ನು ನಡೆಸಲು ಪ್ರೇರಣೆ ನೀಡಿದೆ. ನಮ್ಮ ಭಾರತೀಯ ತತ್ತ್ವಶಾಸ್ತ್ರದಲ್ಲಿ ತಲುಪುವುದಕ್ಕಿಂತ ತಲುಪಲು ಇರುವ ಮಾರ್ಗ ಮುಖ್ಯವಾದದ್ದು. ಪುತಿನ ಅವರ ‘ನೆರಳು’ ಅಥವಾ ‘ನನ್ನ ನಾಯಿ’ ಮುಂತಾದ ಕವಿತೆಗಳು ಇಂದಿನ ವರ್ತಮಾನಕ್ಕೆ ಕಣ್ಣು ತೆರೆಸುವ ಮಾದರಿಗಳು.
ಒಮ್ಮೆ ಪುತಿನ ಹಾಗೂ ಡಾ. ಪ್ರಭುಶಂಕರ ಇಬ್ಬರೂ ಬಿಹಾರದ ಗಯಾಕ್ಕೆ ಹೋಗಿದ್ದರಂತೆ. ಅಲ್ಲಿ ಪಿಂಡ ಪ್ರದಾನ ಮಾಡುವುದು ಶ್ರೇಷ್ಠವೆಂದು ಎಲ್ಲರೂ ನಂಬುತ್ತಾರೆ. ರಾಮ, ಲಕ್ಷ್ಮಣ, ಸೀತೆಯರು ಇಲ್ಲಿಗೆ ಆಗಮಿಸಿ ದಶರಥನಿಗೆ ಪಿಂಡ ಪ್ರದಾನ ಮಾಡಿದರು ಎಂಬ ಐತಿಹ್ಯ ಇದೆ. ಅಂತೆಯೇ, ಇದು ಬಹು ದೊಡ್ಡ ಬೌದ್ಧ ಕೇಂದ್ರವೂ ಹೌದು. ಜತೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಕೂಡ ಇಲ್ಲಿದೆ. ಪುತಿನ ಅವರು ಅಲ್ಲಿಗೆ ಪಿಂಡ ಪ್ರದಾನ ಮಾಡಲು ತೆರಳಿದರು. ಆ ಕಾರ್ಯವಾದ ಮೇಲೆ ಪ್ರಭುಶಂಕರ ಅವರು ‘ಇದೇನಿದು ವಿಜ್ಞಾನದ ಸ್ಥಳಕ್ಕೆ ಬಂದರೂ ನೀವು ಸಂಪ್ರದಾಯಕ್ಕೆ ಜೋತುಬಿದ್ದಿರಲ್ಲ’ ಎಂದಾಗ, ಪುತಿನ ಹೇಳಿದರಂತೆ- ‘ಇದು ನನ್ನ ನಂಬಿಕೆಯ ವಿಚಾರ.’ ಅಂದರೆ ಅವರ ಸಾಹಿತ್ಯ ನಂಬಿಕೆ, ಶ್ರದ್ಧೆ, ಭಕ್ತಿ ಮಾತ್ರವಲ್ಲ ಜೀವಪ್ರೇರಕ ಕೂಡ ಆಗಿದೆ.
(ಲೇಖಕರು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು)
ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
