|ಡಾ. ಎಂ.ಆರ್. ಸತ್ಯನಾರಾಯಣ
ನಮ್ಮ ಕನ್ನಡ ನಾಡಿನ ಇತಿಹಾಸದಲ್ಲಿ 13ನೆಯ ಶತಮಾನ ಒಂದು ಮಹತ್ವದ ಅವಧಿ. ದಕ್ಷಿಣ ಕನ್ನಡ ಜಿಲ್ಲೆಯ ಪಾಜಕ ಕ್ಷೇತ್ರದಲ್ಲಿ ಜನಿಸಿದ ಶ್ರೀಮನ್ಮಧ್ವಾಚಾರ್ಯರು ಆಗಲೇ ಪ್ರಚುರವಿದ್ದ ಅದ್ವೈತ, ವಿಶಿಷ್ಟಾದ್ವೈತ ಮತಗಳಿಗಿಂತ ಭಿನ್ನವಾದ ದ್ವೈತ ವೇದಾಂತ ಮತವನ್ನು ಸಂಸ್ಥಾಪಿಸಿ ಇಡೀ ಭರತ ಖಂಡದಲ್ಲಿ ಅದನ್ನು ಪ್ರಚುರಪಡಿಸಿ ಪ್ರಖ್ಯಾತರಾದರು. ಆಚಾರ್ಯರ ಅನುಯಾಯಿಗಳು ಈ ದ್ವೈತ ಮತದ ದೀವಟಿಗೆ ಹಿಡಿದು ಮುನ್ನಡೆಸಿದರು. ಅವರಲ್ಲಿ ಪ್ರಮುಖರಾದವರು. ಶ್ರೀ ನರಹರಿ ತೀರ್ಥರು.
ನರಹರಿ ತೀರ್ಥರು ಸಂಸ್ಕೃತ ಭಾಷಾ ಪ್ರವೀಣರು. ಅಸಾಧಾರಣ ಪಂಡಿತರು. ಆ ಕಾಲಕ್ಕೆ ಅವರು ಭಾಗವತ ಧರ್ಮ ಪ್ರತಿಪಾದನೆಯ ಕೀರ್ತನ ಪದ್ಥತಿಯನ್ನು ಮಾನ್ಯ ಮಾಡಿ, ಅನೇಕ ಕನ್ನಡ ಕೀರ್ತನೆ ಗಳನ್ನು ರಚಿಸಿ, ಪ್ರಕಾರಕ್ಕೆ ಪೀಠಿಕೆ ಹಾಕಿದರು. ನರಹರಿ ತೀರ್ಥರ ರಚನೆಗಳು ಅಷ್ಟಾಗಿ ನಮಗೆ ಲಭ್ಯವಿಲ್ಲವಾದರೂ, ದಾಸ ಸಾಹಿತ್ಯದ ಬುನಾದಿಯನ್ನು ಹಾಕಿಕೊಟ್ಟಿದ್ದು, ನರಹರಿ ತೀರ್ಥರೆ ಎಂಬುದು ನಿರ್ವಿ ವಾದದ ಮಾತು. ಆನಂತರ ಪ್ರಮುಖವಾಗಿ ಕೇಳಿ ಬರುವ ಹೆಸರು ರಂಗ ವಿಠಲ ಎಂಬ ಅಂಕಿತದಲ್ಲಿ ಕೃತಿಗಳನ್ನು ರಚಿಸಿದ ಶ್ರೀಪಾದರಾಯರು.
ಶ್ರೀಪಾದರಾಯರಂತು ಹರಿದಾಸ ಸಾಹಿತ್ಯದ ಪ್ರಮುಖ ಕೃತಿಕಾರರು. ಅವರು ಎಂತಹ ಮಹಾಮಹಿಮರು ಎನ್ನುವುದಕ್ಕೆ ಶ್ರೀಪುರಂದರ ದಾಸರ ಮಕ್ಕಳಾದ ಮಧ್ವಪತಿದಾಸರು ಒಂದು ಉಗಾಭೋಗದಲ್ಲಿ ಸ್ಮೃಸಿರುವುದು ಕಂಡುಬರುತ್ತದೆ. ಶ್ರೀಪಾದರಾಯರ ‘ಭ್ರಮರ ಗೀತ’ ಮುಂತಾದ ಕೃತಿಗಳು ಇಂದಿಗೂ ದಾಸ ಸಾಹಿತ್ಯದ ಕೇಂದ್ರ ಬಿಂದುವಾಗಿವೆ. ಆ ನಂತರ ಬಂದವರೇ ಶ್ರೀ ವ್ಯಾಸರಾಜರು. ವ್ಯಾಸರಾಜರ ಕಾಲವನ್ನು ಕರ್ನಾಟಕದ ಇತಿಹಾಸದಲ್ಲಿ ಸ್ವರ್ಣಯುಗವೆಂದೇ ಕರೆಯಲಾಗುತ್ತದೆ. ಇವರ ಕಾಲದಲ್ಲಿಯೇ ಇದ್ದವರು ಹರಿದಾಸ ಶ್ರೇಷ್ಠರೆನಿಸಿರುವ ಶ್ರೀ ಪುರಂದರದಾಸರು ಹಾಗೂ ಶ್ರೀ ಕನಕದಾಸರು. ಈ ಇಬ್ಬರು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳು. ಹದಿಮೂರನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗೆ ಅಷ್ಟಾಗಿ ಕನ್ನಡ ಕೃತಿಗಳು ಕಾಣಬರದಿದ್ದರೂ, ಅದರ ಮೊಳಕೆ ಒಡೆದು, ಚಿಗುರಿ, ಫಲ ನೀಡಿದ್ದು, ವ್ಯಾಸರಾಯರ ಕಾಲದಲ್ಲಿ. ಪುರಂದರ ದಾಸರು ಮೊದಲು ನಾಯಕರೆನಿಸಿ, ಆನಂತರ ವಿಠ್ಠಲನ ಪರಮ ಭಕ್ತರಾಗಿ, ಬೆಳೆದುದರ ನಡುವಣದ ಒಂದು ಚಿತ್ರಣ ಪ್ರಸ್ತುತ ಲೇಖನ. ವ್ಯಾಸರಾಯರಿಗೆ ಪುರಂದರದಾಸರು ಶಿಷ್ಯರಾದರು. ಗುರುಗಳಿಂದಲೇ ತಮ್ಮ ಗುಣ ಕಥನ ಕೇಳುವ ಸೌಭಾಗ್ಯ ಪಡೆದವರು. ಅದೇ ‘ದಾಸರೆಂದರೆ ಪುರಂದರ ದಾಸರಯ್ಯ’ ಎಂಬ ಪ್ರಸಿದ್ಧ ಕೃತಿ. ನರಹರಿ ತೀರ್ಥರ ಭಾಗವತ ಧರ್ಮದ ಸಾರೋದ್ಧಾರ ಅಥವಾ ಪುನರುತ್ಥಾನ ಆಗಿರುವುದೇ ಪುರಂದರದಾಸರ ರಚನೆಗಳಿಂದ ಎನ್ನಲು ಅಡ್ಡಿಯಿಲ್ಲ. ಆರಿಸಿಕೊಂಡ ಮಾರ್ಗ ಭಕ್ತಿ. ಆದರೆ, ಹೇಳುವ ಪ್ರತಿಯೊಂದು ನುಡಿಯು ನಮ್ಮೆಲ್ಲರ ಜೀವನಕ್ಕೆ ಪ್ರೇರಕವಾಗುವ, ಸನ್ಮಾರ್ಗದಲ್ಲಿ ಕರೆ ದೊಯ್ಯುವ ಅಣಿಮುತ್ತುಗಳು. ಈ ದಾಸ ಪರಂಪರೆಯಲ್ಲೆ ಮುಂದೆ ಬಂದ ಪ್ರಮುಖ ಮತ್ತೊಬ್ಬ ಹರಿದಾಸ ಸಾಹಿತ್ಯದ ವಿಜಯದಾಸರು ಪುರಂದರದಾಸರ ಸಮಗ್ರ ಕಥಾನಕವನ್ನು ಒಂಭತ್ತು ನುಡಿಗಳಲ್ಲಿ ಅತ್ಯಂತ ಸಮರ್ಪಕವಾಗಿ ರಚಿಸಿ, ಉಪಕಾರ ಮಾಡಿದ್ದಾರೆ. ಈ ಒಂಭತ್ತು ಪದ್ಯಗಳಲ್ಲಿ ಶ್ರೀನಿವಾಸ ನಾಯಕರು ಪುರಂದರ ದಾಸರಾದ ಚರಿತೆಯನ್ನು ಸೊಗಸಾಗಿ ಮೂಡಿಸಿದ್ದಾರೆ. ಅವರ ಒಂದು ಪದ್ಯ ಗಮನಿಸಿ. ದಾಸರ ಜೀವನದಲ್ಲಾದ ಪವಾಡದ ದೃಶ್ಯ ಹೀಗಿದೆ.
ಹಿತ್ತಲ ಬಾಗಿಲಿಗೆ ಹೋಗಿ | ಮತ್ತೆ ಆತನ ಮಡದಿಗಾಗಿ
ಹತ್ತಿ ಬಿದ್ದನು ರೊಕ್ಕ ತಾರೆನುತ | ಮಗನ ಮುಂಚ್ಯೆಂದು
ಅತ್ಯಧಿಕದಿಂ ಬಾಯಿ ತೆಗೆಯುತ್ತ | ಆ ಪ್ರಾಣಿ ನುಡಿದಳು
ಎತ್ತಣ ದ್ರವ್ಯವು ತನಗೆನುತ | ನಿನ್ನ ಮೂಗಿನಾಗಿನ
ಮುತ್ತಿನ ಮೂಗುತಿಯ ತಾರೆನೆ | ಉತ್ತಮಳು ತೆಗೆದಿತ್ಥಳಾಗ.
ಸರಳ ಸ್ವರಾವಳಿ ಉಗಾ-ಭೋಗ ಗೀತೆಗಳು, ಅನೇಕ ಚರಣಗಳು ಉಳ್ಳ ದೇವರನಾಮ ಹಾಗೂ ಸುಳಾದಿಗಳು ಪುರಂದರದಾಸರ ಮಹತ್ವ ಕೊಡುಗೆಗಳಾಗಿವೆ. ದಾಸರ ಭಾಷೆ ಅತ್ಯಾಕರ್ಷಕ, ಆಲಂಕಾರಿಕ ಕಾವ್ಯ ಸಂಪತ್ತಿನಿಂದ ಕೂಡಿ ರಸಿಕರನ್ನು ಸೆಳೆಯುವ ಮನಮೋಹಕ ಶೈಲಿ. ಹಿಂದೂ ಧರ್ಮದ ತತ್ವಗಳನ್ನು ಸಾರ ರೂಪದಲ್ಲಿ ನಿವೇದಿಸಿರುವುದರಲ್ಲಿ ದಾಸರದು ಎತ್ತಿದ ಕೈ. ಬರೆದುದ್ದನ್ನು ಸುಮಧುರ ಸಂಗೀತದ ಮೂಲಕ ಹಾಡಿ, ಜನರ ನಾಲಿಗೆಯಲ್ಲಿ ನೆಲೆಸಿದ್ದರು ದಾಸವರ್ಯರು.
ದಾಸರಿಗೆ ಸಂಗೀತ ಮತ್ತು ಸಾಹಿತ್ಯಗಳ ಮೇಲೆ ಎಂತಹ ಹಿಡಿತವಿತ್ತು ಎಂಬುದನ್ನು ಅವರ ಕೀರ್ತನೆಗಳಿಂದಲೆ ನಾವು ಕಾಣಬಹುದು. ಒಟ್ಟಿನಲ್ಲಿ ಹರಿದಾಸರ ತಾಯ್ನುಡಿಯಲ್ಲಿ ಓದಿದಾಗ ಆಗುವ ಅನುಭವವೇ ವರ್ಣನೆಗೆ ನಿಲುಕದ್ದು. ಇಂತಹ ಭಕ್ತಿ ಸಾಹಿತ್ಯ ಪ್ರವರ್ತಕರಾದ ಪುರಂದರದಾಸರು ಹಾಗೂ ಅವರಿಂದ ಮೊದಲಾಗಿ ಮುಂದೆ ಬಂದ ಹರಿದಾಸರುಗಳ ಕಾಣಿಕೆ ಅತ್ಯಮೂಲ್ಯ ಹಾಗೂ ಅನುಷ್ಠಾನಕ್ಕೆ ಯೋಗ್ಯವಾದ ಶ್ರೀೕಮಂತ ಸಾಹಿತ್ಯ ಎಂದು ಕರೆಯಬಹುದು. ಸುಮಾರು 80 ವರ್ಷಗಳಷ್ಟು ತಮ್ಮ ಜೀವಿತ ಕಾಲದಲ್ಲಿ ಕನಿಷ್ಟ ಎಂದರೆ 40 ವರ್ಷಗಳನ್ನಾದರೂ ಅವರು ಹರಿದಾಸರಾಗಿ ದೇಶ ಸೇವೆಯನ್ನು ಮಾಡಿದ್ದಾರೆ. ಒಂದು ಅಂಕಿ ಅಂಶದ ಪ್ರಕಾರ ದಾಸವರ್ಯರು ಕರ್ನಾಟಕಕ್ಕೆ ತಮ್ಮ ಓಡಾಟವನ್ನು ಸೀಮಿತಗೊಳಿಸದೇ ಮೂರು ಬಾರಿ ಭರತ ಖಂಡದ ಪ್ರದಕ್ಷಿಣೆ ಮಾಡಿದರೆಂಬುದು. ಹೀಗೆ ಅವರ ಪಯಣ ಸುಧೀರ್ಘವಾಗಿ ಸಾಗುತ್ತಿರುವಾಗಲೇ ಲಕ್ಷಾಂತರ ಪಾಮರ ಜನರಿಗೆ ಧರ್ವೇಪದೇಶವನ್ನು ಮಾಡಿ ಲೋಕದಲ್ಲಿ ಆದರ್ಶ ಜೀವನವನ್ನು ನಡೆಸುವುದಕ್ಕೆ ಮಾರ್ಗದರ್ಶನವನ್ನು ಕೊಟ್ಟರು. ಪುರಂದರದಾಸರ ಕೀರ್ತನೆಗಳಲ್ಲಿ ಧರ್ಮ ಪ್ರಚಾರ, ಲೋಕೋಕ್ತಿ, ನೀತಿಬೋಧೆ, ದಾನ ಭಕ್ತಿ, ವೈರಾಗ್ಯಗಳಿಗೆ ಮಹತ್ವದ ಸ್ಥಾನವಿದೆ. ಭಕ್ತಿಯೊಂದನ್ನು ಕೇಂದ್ರವನ್ನಾಗಿಸಿಕೊಂಡು ಅದರ ಸುತ್ತಲು ಲೋಕ ನೀತಿಗೆ ಸಂಬಂಧಪಟ್ಟ ರಚನೆಗಳನ್ನು ಅವರು ಕೊಟ್ಟರು. ಗುರು ಕರುಣೆಯಿರಲಿ, ತಂದೆ-ತಾಯಿಯ ಪ್ರೀತಿ, ವಾತ್ಸಲ್ಯವಿರಲಿ, ಮಕ್ಕಳ ಸಂಬಂಧವಿರಲಿ, ಕೌಟುಂಬಿಕ ಪರಿಸರದಲ್ಲಿ ಬರಬಹುದಾದ ಸುಖ- ದುಃಖ, ಕಷ್ಟ-ಕೋಟಲೆಗಳಿರಲಿ ಎಲ್ಲದಕ್ಕು ದಾಸರ ಕೃತಿ ಧನ್ವಂತರಿ ಇದ್ದಂತೆ. ‘ನಿನ್ನ ಜ್ಞಾನವ ಕೊಡೊ ಎನ್ನ ಧನ್ಯವ ಮಾಡು’ ಎಂದು ಹೇಳುತ್ತಲೇ ‘ಮನಃ ಶುದ್ಧಿ ಇಲ್ಲದವಂಗೆ ಮಂತ್ರದಿ ಫಲವೇನು, ತನು ಶುದ್ಧವಿಲ್ಲದವಂಗೆ ತೀರ್ಥ ನೀಡಿ ಫಲವೇನು, ಮೀನು-ಮೊಸಳೆಗಳು ಇದ್ದಂತೆ ಇದ್ದಲ್ಲಿ ಫಲವೇನು, ಶ್ರೀಹರಿ ಎಂದು ಓದದ ಓದೆಲ್ಲ ಹಾಳು ಪುರಂದರ ವಿಠ್ಠಲ’ ಹೀಗೆ ಓತಪೋ›ತವಾಗಿ ಸಾಗುತ್ತದೆ ಅವರ ದಾಸ ಸಾಹಿತ್ಯದ ಲಹರಿ. ಇಂತಹ ಮಹೋನ್ನತ ಶಿಷ್ಯರನ್ನು ಪಡೆದ ಗುರು ವ್ಯಾಸರಾಜರ ಮಾತು ಎಷ್ಟು ಸತ್ಯ ಎನಿಸುತ್ತದೆ.
‘ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ ಪುರಂದರ ಗುರುಂ ವಂದೇ ದಾಸ ಶ್ರೇಷ್ಠಂ ದಯಾನಿಧಿಂ.’
(ಲೇಖಕರು ಗಮಕ ವಿದ್ವಾಂಸರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
