| ಲಕ್ಷ್ಮೀನಾರಾಯಣ ಹುಬ್ಬಳ್ಳಿಮಹಾಭಾರತ ಒಂದು ಲಕ್ಷ ಶ್ಲೋಕಗಳ ಮಹಾ ಗ್ರಂಥ, ಅದರಲ್ಲಿ ಇರುವ ಭಗವದ್ಗೀತೆ, ವಿಷ್ಣು ಸಹಸ್ರನಾಮ ಭಾರತೀಯರ ಹೃದಯವನ್ನು ಆನಂದದಿಂದ ತಟ್ಟಿವೆ. ಮುಟ್ಟಿವೆ.
24,000 ಶ್ಲೋಕಗಳ ರಾಮಾಯಣ, ನಾಲ್ಕು ವೇದಗಳು, ಅದರಲ್ಲಿರುವ ಅಗಾಧ ಜ್ಞಾನ ಭಂಡಾರ, ಸ್ಮೃಗಳು , ಪುರಾಣಗಳು, ಮಹಾಕಾವ್ಯಗಳು, ನಾಟಕಗಳು, ತರ್ಕ, ವ್ಯಾಕರಣ, ಮೀಮಾಂಸ, ಅಲಂಕಾರ, ವೇದಾಂತ ಇತ್ಯಾದಿ ಶಾಸ್ತ್ರಗಳು, ಖಗೋಳ ವಿಜ್ಞಾನ, ಲೋಹ ಶಾಸ್ತ್ರ, ರಸಶಾಸ್ತ್ರ, ಆಯುರ್ವೆದ, ಜೀವಶಾಸ್ತ್ರ, ಸಸ್ಯಶಾಸ್ತ್ರ, ಗಣಿತ, ಸಂಗೀತ, ನಾಟ್ಯ ಅಲ್ಲದೆ ಅನೇಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಜ್ಞಾನ ರಾಶಿ ಇರುವುದು ಸಂಸ್ಕೃತದಲ್ಲಿ. ಇಂದು ಸಮಗ್ರ ವಿಶ್ವ ಭಾರತವನ್ನು ನಿಬ್ಬೆರಗಾಗಿ ಯಾವುದನ್ನು ನೋಡುತ್ತಿದ್ದೆಯೋ ಆ ಆಧ್ಯಾತ್ಮಿಕ ಶಕ್ತಿ ಹುದುಗಿರುವುದು ಸಂಸ್ಕೃತದಲ್ಲಿಯೇ. ಆದ್ದರಿಂದ ನಾವು ತಿಳಿದೋ, ತಿಳಿಯದೆಯೋ ಸಂಸ್ಕೃತದೊಂದಿಗೆ ಮೌನವಾಗಿ ಬೆರೆತಿದ್ದೇವೆ.
ಸಂಸ್ಕೃತ ಭಾಷೆಯ ಬಗ್ಗೆ ಹೇಳಿದಾಗ ಜನರು ಸಹಜವಾಗಿಯೇ ಸಂಸ್ಕೃತ ದೇವ ಭಾಷೆ ಎನ್ನುತ್ತಾರೆ. ಅದು ದೇವ ಭಾಷೆ ಅಷ್ಟೇ ಅಲ್ಲ ಲೋಕ ಭಾಷೆಯೂ ಹೌದು. ಪ್ರಾಚೀನ ಭಾಷೆಯೂ ಹೌದು. ಆಧುನಿಕ ಭಾಷೆಯೂ ಹೌದು. ಮಾತೃಭಾಷೆ ಹೌದು. ಜೀವಂತ ಭಾಷೆಯೂ ಹೌದು. ವೈಜ್ಞಾನಿಕ ಭಾಷೆಯೂ ಹೌದು.
ಸಂಸ್ಕೃತ ಇಂದು ಮಠ ಮಂದಿರಗಳಲ್ಲಿ, ಧಾರ್ವಿುಕ ವಿಧಿಗಳಲ್ಲಿ ಮಾತ್ರ ಇದೆ ಎಂದು ಭ್ರಾಂತಿಗೊಂಡು ಕೆಲವರು ಅದನ್ನು ಒಂದು ವರ್ಗದ ಭಾಷೆ ಎನ್ನುತ್ತಾರೆ. ಸಂಸ್ಕೃತ ಹಿಂದಿನಿಂದಲೂ ಎಲ್ಲರ ಭಾಷೆಯಾಗಿತ್ತು. ವಿಶ್ವದ ಆದಿ ಕಾವ್ಯ ರಾಮಾಯಣ ಇದನ್ನು ಬರೆದ ವಾಲ್ಮೀಕಿ ಬೇಡ ಜಾತಿಗೆ ಸೇರಿದವ. ಅದ್ಭುತ ಮಹಾ ಕಾವ್ಯಗಳನ್ನು ರಚಿಸಿದ ಕಾಳಿದಾಸ ಕುರಿ ಕಾಯುವವ, ಒಂದು ಲಕ್ಷ ಶ್ಲೋಕಗಳನ್ನು ಗಣಪತಿಯ ಮೂಲಕ ಬರೆಸಿದ ವೇದವ್ಯಾಸರು ಬೆಸ್ತ ಕುಲದವಳ ಮಗ, ಅದ್ಭುತ ಕವಿ ಪರಂಪರೆಗೆ ಸೇರಿದ ಶ್ರೀಹರ್ಷ ಹಾಗೂ ರಾಜ ಭೋಜ ಕ್ಷತ್ರಿಯರು. ಹೀಗೆ ಹಲವು ಜಾತಿಗೆ ಸೇರಿದ ಅನೇಕರು ಪಂಡಿತರಾಗಿದ್ದಾರೆ, ಪೂಜ್ಯರೂ ಆಗಿದ್ದಾರೆ.
ಶಿಕ್ಷಣದಲ್ಲಿ ಪಠ್ಯಪುಸ್ತಕದ ಒಂದು ಭಾಗವಾಗಿ ಸಂಸ್ಕೃತವನ್ನು ಓದುತ್ತಿರುವವರು ಅಥವಾ ಓದಿದವರು ಸಂಸ್ಕೃತ ಅಂಕಕ್ಕಾಗಿ ಇರುವ ಒಂದು ಭಾಷೆ ಎನ್ನುತ್ತಾರೆ. ಆಡುಭಾಷೆಯಾಗಿ ಸಂಸ್ಕೃತವನ್ನು ಕೇಳದೆ ಇದ್ದವರು ಅಥವಾ ಕವಿಗಳ ಮಹಾಕಾವ್ಯಗಳ ಕೆಲವು ಗ್ರಂಥಗಳ ಸಾಲುಗಳನ್ನು ಕೇಳಿಸಿಕೊಂಡು ಸಂಸ್ಕೃತ ಕಠಿಣ ಭಾಷೆ ಎನ್ನುವರು ಇದ್ದಾರೆ. ಆದರೆ ಇದು ವೈಜ್ಞಾನಿಕ ಭಾಷೆ, ಸಾಂಸ್ಕೃತಿಕ ಭಾಷೆ ಮತ್ತು ಜ್ಞಾನ ದೊಂದಿಗೆ ಬೆಸೆದ ಭಾಷೆ ಎಂದು ತಿಳಿಯಪಡಿಸಬೇಕಾಗಿದೆ. ನಮ್ಮ ದೇಶದ ಸಂಸ್ಕೃತಿ ನಮ್ಮ ಉಸಿರು. ಭಾರತದ ಪುನರುಜ್ಜೀವನಕ್ಕಾಗಿ ಸಾಂಸ್ಕೃತಿಕ ಬೆಳವಣಿಗೆ ಅತ್ಯಗತ್ಯ. ಇಂದು ಜನರಲ್ಲಿ ಜಾಗೃತಿ ಮೂಡಿಸಲು ಸಂಸ್ಕಾರ ಬೆಳೆಸಲು ಸಂಸ್ಕೃತ ಒಂದು ಪ್ರಬಲ ಸಾಧನ. ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಚರಕ ಇದ್ದಂತೆ, ಹೋಮಿಯೋಪತಿ ಮಾತ್ರೆ ಚಿಕ್ಕದಾದರೂ ಅದರ ಔಷಧೀಯ ಗುಣ ಹಿರಿದು ಎನ್ನುವಂತೆ ಸಂಸ್ಕೃತ ಭಾಷೆಯು ಭಾರತೀಯತ್ವದ ಬಗೆಗಿನ ಕೀಳರಿಮೆಯೆಂಬ ರೋಗವನ್ನು ನಾಶ ಮಾಡಿ ಭಾರತೀಯ ಸಂಸ್ಕೃತಿ, ಭಾರತೀಯ ಪರಂಪರೆ, ಭಾರತೀಯ ಪೂರ್ವಜರ ಸಾಧನೆಗಳನ್ನು ನೆನಪಿಸಲು ಇರುವ ಅತಿ ದೊಡ್ಡ ಸಾಧನ.
ಬ್ರಿಟಿಷರು ಭಾರತಕ್ಕೆ ಲಗ್ಗೆ ಇಡುವ ಮೊದಲು ಇಲ್ಲಿಯ ಶಿಕ್ಷಣ ಕ್ರಮ ಪೂರ್ಣತಃ ಭಾರತೀಯರದೇ ಆಗಿತ್ತು, ಇಲ್ಲಿಯ ಪಾಠಶಾಲೆಗಳಲ್ಲಿ ಎಲ್ಲ ಜಾತಿ ಪಂಥಗಳ ಜನ ಸಂಸ್ಕೃತದ ಮಾಧ್ಯಮದಲ್ಲಿ ಗ್ರಂಥಗಳ ಅಧ್ಯಯನವನ್ನು ಮಾಡುತ್ತಿದ್ದರು. ಗುರು ಶಿಷ್ಯರು ಸರಳ ಸಂಸ್ಕೃತದಲ್ಲಿಯೇ ಮಾತನಾಡುತ್ತಿದ್ದರು. ಸಂಸ್ಕೃತ ಆಗ ಎಲ್ಲರ ನಾಲಿಗೆಯ ಮೇಲೂ ನರ್ತಿಸುತ್ತಿತ್ತು. ಭಾರತವನ್ನು ತುಂಡು ಮಾಡಲು ಯತ್ನಿಸುತ್ತಿದ್ದ ಬ್ರಿಟಿಷರು ಭಾರತೀಯರನ್ನು ಹೆಜ್ಜೆ ಹೆಜ್ಜೆಗೂ ದುರ್ಬಲಗೊಳಿಸಲು ಅನೇಕ ದುರ್ವರ್ಗಗಳನ್ನು ಆಶ್ರಯಿಸಿದರು. 1835ರಲ್ಲಿ ಮೆಕಾಲೆ ಭಾರತೀಯರನ್ನು ಪರಮ ದುರ್ಬಲಗೊಳಿಸಲು ಭಾರತೀಯ ಶಿಕ್ಷಣ ಕ್ರಮದ ನಾಶವನ್ನು ಆರಂಭಿಸಿದ. ಸಂಸ್ಕೃತ ಪಾಠ ಶಾಲೆಗಳನ್ನು ಮುಚ್ಚಿಸಿದ. ಶಿಕ್ಷಣ ಪದ್ಧತಿಯನ್ನು ಬದಲಾಯಿಸಿದ. ಸಂಸ್ಕೃತವನ್ನು ಮೃತ ಭಾಷೆ ಎಂದು ಘೊಷಿಸಿದ. ಅಲ್ಲದೆ ಸಂಸ್ಕೃತವನ್ನು ಅನುವಾದ ಪದ್ಧತಿಯಲ್ಲಿ ಬೋಧಿಸಲು ಆರಂಭಿಸಿದ. ಇದರ ಪರಿಣಾಮ ಸಂಸ್ಕೃತ ಇಂದು ಕಠಿಣ ಭಾಷೆಯಾಗಿ ಭ್ರಾಂತಿಯಿಂದ ತೋರುತ್ತಿದೆ.
ಸಂಸ್ಕೃತವು ವ್ಯವಹಾರದಲ್ಲಿ ಇಲ್ಲ ಎನ್ನುವ ಕಾರಣಕ್ಕಾಗಿ ಸಂಸ್ಕೃತವನ್ನು ತಿಳಿದ ವಿದ್ವಾಂಸರು ಸ್ವಲ್ಪ ಶಾಸ್ತ್ರ ವಿಹಿತ ಭಾಷೆಯಲ್ಲಿ ಮಾತನಾಡುವುದರಿಂದಲೂ ಕೂಡ, ಶಾಸ್ತ್ರ ಚರ್ಚೆಗಳು ಪ್ರೌಢ ಭಾಷೆಯಲ್ಲಿ ಇರುವುದರಿಂದಲೂ ಕೂಡ ಸಂಸ್ಕೃತ ಕಠಿಣ ಎಂಬ ಭಾವನೆ ಬಂದಿರಬಹುದು. ಸಾಮಾನ್ಯವಾಗಿ ಭಾಷೆಯಲ್ಲಿ ಎರಡು ಸ್ತರಗಳು ಇರುತ್ತವೆ. ಮೊದಲನೆಯದು ವ್ಯವಹಾರಿಕ ಭಾಷೆ, ಇದು ಸರಳವಾಗಿರುತ್ತದೆ. ಎರಡನೆಯದು ಸಾಹಿತ್ಯಕ್ಕೆ ಸಂಬಂಧಪಟ್ಟ ಭಾಷೆ, ಇದು ಪ್ರೌಢವಾಗಿರುತ್ತದೆ. ಆದರೂ ಸಂಸ್ಕೃತದ ವ್ಯಾವಹಾರಿಕ ಉಪಯೋಗ ಕಡಿಮೆಯಾಗಿರುವುದರಿಂದ ಅಲ್ಲದೇ ಸಾಹಿತ್ಯಕ ಭಾಷೆಯೇ ನಮಗೆ ಕಾಣಿಸುತ್ತಿರುವುದರಿಂದ ಸಂಸ್ಕೃತ ಕಠಿಣ ಎಂಬ ಭ್ರಾಂತಿ ನಮ್ಮಲ್ಲಿದೆ. ಈ ಎಲ್ಲಾ ಭ್ರಮೆಗಳನ್ನು ದೂರ ಮಾಡಲು ಇರುವ ಒಂದೇ ಒಂದು ಉಪಾಯವೆಂದರೆ ಸರಳ ಸಂಸ್ಕೃತದಲ್ಲಿ ಮಾತನಾಡುವುದು. ಸಂಸ್ಕೃತದಲ್ಲಿ ಮಾತನಾಡುವುದರಿಂದ ಎಲ್ಲಾ ಭಾಷೆಗಳ ಉಚ್ಚಾರಣೆ ಸ್ಪಷ್ಟವಾಗುತ್ತದೆ. ಭಾಷೆಯ ಮೇಲಿನ ಹಿಡಿತ ಸಾಧ್ಯ. ಸಂಸ್ಕೃತದಲ್ಲಿ ಮಾತನಾಡುವುದರಿಂದ ಅದರಲ್ಲಿರುವ ವಿಸರ್ಗ, ಅನುಸ್ವಾರ , ಅಲ್ಪಪ್ರಾಣ, ಮಹಾಪ್ರಾಣ ಇತ್ಯಾದಿಗಳ ಉಚ್ಚಾರಣೆಯಿಂದ ನಮಗೆ ಅರಿವಿಲ್ಲದಂತೆ ಪ್ರಾಣಾಯಾಮವೂ ಆಗುತ್ತದೆ! ಅದು ನಮ್ಮ ದೈನಂದಿನ ಆರೋಗ್ಯಕ್ಕೆ ಸಹಜವಾಗಿಯೇ ಸಹಾಯಕವಾಗುತ್ತದೆ.
ಎಲ್ಲ ಭಾಷೆಗಳು ಭಾರತೀಯ ಸಮರಸತೆಗೆ ಸಹಾಯಕವಾಗಬೇಕು. ಈಗಿರುವ ವಾತಾವರಣದಲ್ಲಿ ಭಾಷಾ ವಿರಸವನ್ನು ನಿವಾರಣೆಗೆ ಸಂಸ್ಕೃತ ಅತ್ಯುತ್ತಮ ಸಾಧನವಾಗಿದೆ. ಅಲ್ಲದೆ ಸಂಸ್ಕೃತದಲ್ಲಿ ಮಾತನಾಡುವುದರಿಂದ ನಮ್ಮ ನಮ್ಮ ಮಾತೃಭಾಷೆ ಪಕ್ವಗೊಳ್ಳುವುದಲ್ಲದೇ, ಮಾತೃಭಾಷೆಯೊಂದಿಗೆನ ಸಂಬಂಧ ದೃಢಗೊಳ್ಳುತ್ತದೆ. ಈ ಸಂಬಂಧ ಶಿಥಿಲಗೊಂಡಿರುವುದರ ಕಾರಣದಿಂದ ವಿದೇಶಿ ಭಾಷೆಯಾದ ಆಂಗ್ಲ ಭಾಷೆ ನಮ್ಮ ಮೇಲೆ ಸವಾರಿ ಮಾಡುವಂತೆ ಆಗಿದೆ. ಸಂಸ್ಕೃತ ಭಾಷೆಯ ವಿಪುಲ ಶಬ್ದ ಭಂಡಾರದಿಂದ ವಿಜ್ಞಾನದ ಎಲ್ಲ ವಿಷಯಗಳನ್ನು ಭಾರತೀಯ ಭಾಷೆಗೆ ಅನುವಾದಗೊಳಿಸಲು ಸಹಾಯಕವಾಗುತ್ತದೆ. ಇದರಿಂದ ವೈದ್ಯಕೀಯ, ತಾಂತ್ರಿಕ ಇತ್ಯಾದಿ ಆಧುನಿಕ ವಿಷಯಗಳು ಕೂಡ ಸಂಸ್ಕೃತ ಭಾಷೆಗೆ ಸಂಸ್ಕೃತ ಭಾಷೆಯ ಸಹಾಯದಿಂದ ಭಾರತೀಯ ಭಾಷೆಗೆ ಅನುವಾದ ಗೊಂಡರೆ ಸರಳವಾಗಿ ಸಕಲ ಭಾರತೀಯರಿಗೂ ಅನುಕೂಲವಾಗುತ್ತದೆ.
ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯನ್ನು ದೃಢಗೊಳಿಸಲು ಇರುವ ಅತ್ಯುತ್ತಮ ಮಾಧ್ಯಮ. ಸಂಸ್ಕೃತ ಮತ್ತು ಭಾರತೀಯ ಸಂಸ್ಕೃತಿ ಇವೆರಡು ಪ್ರತಿಷ್ಠೆಗಳು ಎಂದು ಅನೇಕ ಹಿರಿಯರು ಹತ್ತಾರು ಬಾರಿ ಉದ್ಘರಿಸಿದ್ದಾರೆ. ಭಾರತದ ಆತ್ಮ ರೂಪವಾಗಿ, ಪ್ರಾಣ ರೂಪವಾಗಿ ಧರ್ಮ ಮತ್ತು ಸಂಸ್ಕೃತಿಗಳಿವೆ. ಅನಾದಿಕಾಲದಿಂದಲೂ ಸಂಸ್ಕೃತ ಭಾರತೀಯ ಸಂಸ್ಕೃತಿಯ ವಾಹಕವಾಗಿದೆ. ಹಾಗಾಗಿ ಸಂಸ್ಕೃತ ಸಾಂಸ್ಕೃತಿಕ ಭಾಷೆಯೂ ಆಗಿದೆ. ಈ ಸಾಂಸ್ಕೃತಿಕ ಭಾಷೆಯನ್ನು ಕಲಿಯುವುದರಿಂದ ಜಾತಿ ಭೇದ, ಮತಭೇದ, ವರ್ಗಭೇದ, ಭಾಷಾಭೇದ, ಉತ್ತರ ದಕ್ಷಿಣ ಭೇದವಿಲ್ಲದೆ ಸಮರಸತೆಯಿಂದ ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ದೃಢೀಕರಿಸಬಹುದು. ಅಲ್ಲದೆ ಭಾರತೀಯ ಭಾಷೆಗಳು ಪರಸ್ಪರ ಪೂರಕವಾದವು. ಭಾರತೀಯ ಭಾಷೆಗಳ ಪ್ರಚಾರದಿಂದ ಸಂಸ್ಕೃತ ಪ್ರಚಾರದ ಕೆಲಸ ಸುಲಭವಾಗುತ್ತದೆ. ಸಂಸ್ಕೃತದ ಪ್ರಚಾರದಿಂದ ಸಮಸ್ತ ಭಾರತೀಯ ಭಾಷೆಗಳ ಪೋಷಣೆಯಾಗುತ್ತದೆ. ಸಂಸ್ಕೃತ ಭಾಷೆಗಿರುವ ಶಬ್ದ ರಚನಾ ಶಕ್ತಿ ಪ್ರಾಯಹ ಬೇರೆಯಾವ ಭಾಷೆಗೂ ಇರಲಿಕ್ಕಿಲ್ಲ ಹೆಚ್ಚು ಶಬ್ದಗಳ ನಿರ್ವಣದಿಂದ ಯಾವುದೇ ಭಾವ ಅಥವಾ ಅದರ ಸುಂದರತೆ ಅಥವಾ ಅದರ ಸೂಕ್ಷ್ಮಾತಿ ಸೂಕ್ಷ್ಮವಾದ ಅರ್ಥಗಳನ್ನು ಸರಳವಾಗಿ ಪ್ರಕಟಗೊಳಿಸಬಹುದು. ಶಾಸ್ತ್ರಸಮ್ಮತವಾದ ಅಥವಾ ಪಾರಿಭಾಷಿಕ ಶಬ್ದಗಳ ನಿರ್ಮಾಣ ಮತ್ತು ವ್ಯವಹಾರಕ್ಕೆ ಉಪಯೋಗವಾಗುವ ಅನೇಕ ಹೊಸ ಶಬ್ದಗಳ ನಿರ್ಮಾಣ ಸಂಸ್ಕೃತದಿಂದ ಸಾಧ್ಯ
ಎಲ್ಲಾ ಭಾರತೀಯ ಭಾಷೆಗಳಲ್ಲಿಯೂ ಶೇಕಡ 50 ರಿಂದ 60 ರಷ್ಟು ಸಂಸ್ಕೃತ ಶಬ್ದಗಳಿವೆ. ಎಲ್ಲ ಭಾರತೀಯ ಭಾಷೆಗಳ ಧ್ವನಿ ವ್ಯವಸ್ಥೆಯು ಸಂಸ್ಕೃತದಿಂದಲೇ ಪ್ರೇರಿತಗೊಂಡಿದ್ದು. ವಾಕ್ಯ ರಚನೆಯು ಕೂಡ ಒಂದೇ ತರಹದ್ದು.ಇವುಗಳ ವ್ಯಾಕರಣ ಬೋಧನಾ ಪದ್ಧತಿಯು ಕೂಡ ಸಂಸ್ಕೃತದಿಂದಲೇ ಪ್ರಭಾವಿತಗೊಂಡಿದ್ದು. ಸಹಜವಾಗಿ ಮಠ ಮಂದಿರಗಳಲ್ಲಿ ಪೂಜೆ ಇತ್ಯಾದಿಗಳಲ್ಲಿ ಕಥಾ ಪ್ರವಚನಗಳಲ್ಲಿ ಹೇಳಲಾಗುವ ಶ್ಲೋಕಗಳನ್ನು ಕೇಳುವ ಮೂಲಕ ಎಲ್ಲಾ ಭಾರತೀಯರು ಸಂಸ್ಕೃತದ ಶ್ರವಣ ಸಂಸ್ಕಾರ ಪಡೆದಿರುತ್ತಾರೆ. ಆದ್ದರಿಂದ ಭಾರತದಲ್ಲಿ ಸಂಸ್ಕೃತವನ್ನು ಕಲಿಯುವುದೆಂದರೆ ಅದೊಂದು ಹೊಸ ಭಾಷೆಯ ಕಲಿಕೆಯಂತೆ ಅಲ್ಲ. ಇಂದು ಭಾರತದ ಶಿಕ್ಷಿತರಲ್ಲಿ ಪ್ರಾಯಶಃ ಶೇಕಡ 50ಕ್ಕೂ ಹೆಚ್ಚು ಜನರು ತಮ್ಮ ಶಾಲಾ ಜೀವನದಲ್ಲಿಯೇ ಸಂಸ್ಕೃತ ಕಲಿತಿರುತ್ತಾರೆ. ಹಾಗೆಯೇ ಭಾರತೀಯ ಸಾಂಸ್ಕೃತಿಕ ಪರಂಪರೆಯ ಕಾರಣದಿಂದ ಭಾರತೀಯರ ರಕ್ತದ ಕಣಕಣದಲ್ಲಿಯೂ ಸಂಸ್ಕೃತ ಜೊತೆಗೊಂಡಿದೆ. ಆಶ್ಚರ್ಯವೆಂದರೆ ಭಾರತದ ಯಾವ ಮೂಲೆಯಲ್ಲೂ ಸಂಸ್ಕೃತಕ್ಕೆ ವಿರೋಧವಿಲ್ಲ. ಬದಲಾಗಿ ಸಂಸ್ಕೃತದ ಬಗೆಗೆ ಅಪಾರವಾದ ಶ್ರದ್ಧೆ ಇದೆ ಗೌರವವಿದೆ ಸಂಸ್ಕೃತದಲ್ಲಿ ಮಾತನಾಡುವವರ ಬಗೆಗೆ ಆದರವಿದೆ.
ನಾವು ಇಂದು ಭಾರತೀಯ ಜ್ಞಾನ ಪರಂಪರೆಯ ಆಧಾರದ ಮೇಲೆ ಪುನಃ ಭಾರತವನ್ನು ನಿರ್ವಿುಸಬೇಕಾಗಿದೆ. ಈ ಭಾರತ ದೃಢವಾದ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಭಾರತವಾಗಬೇಕು. ಅಂತಹ ಭಾರತವನ್ನು ಕಟ್ಟಲು ಸಂಸ್ಕೃತ ಅತಿ ದೊಡ್ಡ ಸಾಧನವಾಗಲಿದೆ. ಈ ಎಲ್ಲ ದೃಷ್ಟಿಗಳನ್ನು ಮನದಲ್ಲಿರಿಸಿ ಸಂಸ್ಕೃತ ಭಾರತಿ ಕಳೆದ 42 ವರ್ಷಗಳಿಂದ ಜನರಿಗೆ ಸಹಜವಾಗಿ, ಸರಳವಾಗಿ ಸಂಸ್ಕೃತ ಭಾಷೆಯನ್ನು ಕಲಿಸುತ್ತಿದೆ. 10 ದಿನಗಳ ಕಾಲ ದಿನಕ್ಕೆ ಎರಡು ಗಂಟೆಯಂತೆ ನಡೆಯುವ ಸರಳ ಸಂಸ್ಕೃತ ಸಂಭಾಷಣ ವರ್ಗದಲ್ಲಿ ಭಾಗವಹಿಸಿದ ಅನೇಕರು ಸಂಸ್ಕೃತ ಸರಳ, ಸಂಸ್ಕೃತ ಎಲ್ಲರದ್ದು ಎಂಬ ಭಾವನೆಯನ್ನು ಹೊಂದಿದವರಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದ ನರ್ಸರಿಗಳಲ್ಲಿ ಓದುವ ಮಕ್ಕಳು ಒಂದೇ ವರ್ಷದಲ್ಲಿ ವಿದೇಶಿ ಭಾಷೆಯಾದ ಇಂಗ್ಲಿಷ್​ನಲ್ಲಿ ಮಾತನಾಡಲು ಶಕ್ತರಾಗುತ್ತಾರೆ ಎಂದಾದರೆ ಭಾರತೀಯರ ಧಮನಿಗಳಲ್ಲಿ ಹರಿಯುತ್ತಿರುವ ಸಂಸ್ಕೃತ ಭಾಷೆ ಹೇಗೆ ಕಠಿಣ ಆದೀತು? ಕಳೆದ 250 ವರ್ಷಗಳಲ್ಲಿ ಭಾರತದಲ್ಲಿ ಇಂಗ್ಲಿಷ್ ಭಾಷೆಯ ಕಲಿಕೆಗಾಗಿ ಎಷ್ಟು ಹಣ ಮತ್ತು ಸರ್ಕಾರದ ವ್ಯವಸ್ಥೆಯನ್ನು ಸುರಿಯಲಾಯಿತೋ ಅದರ ಶೇಕಡ ಒಂದು ಭಾಗವನ್ನು ಸಂಸ್ಕೃತಕ್ಕಾಗಿ ಬಳಸಿದ್ದರೆ ಇಂದು ಸಂಸ್ಕೃತದ ಸ್ಥಿತಿ ಈ ರೀತಿಯದಾಗುತ್ತಿರಲಿಲ್ಲ.
ಸಂಸ್ಕೃತ ಭಾರತಿಯ ಕಾರ್ಯದ ಕಾರಣದಿಂದ ಸುಮಾರು ಎರಡು ಲಕ್ಷ ಸಂಸ್ಕೃತ ಶಿಕ್ಷಕರು ಇಂದು ಸಂಸ್ಕೃತವನ್ನು ಸಂಸ್ಕೃತದಲ್ಲಿಯೇ ಬೋಧಿಸಲು ಸಿದ್ಧರಿದ್ದಾರೆ. ಈ ತಿಂಗಳ 31ರಂದು ವಿಶ್ವಾದ್ಯಂತ ಸಂಸ್ಕೃತ ದಿನದ ಆಚರಣೆ ನಡೆಯಲಿದೆ. ಅಂತೆಯೇ ಸಂಸ್ಕೃತ ಭಾರತಿಯು ಕೂಡ ಅನೇಕ ಸಂಘಟನೆಗಳ ಜೊತೆಗೂಡಿ ಸಂಸ್ಕೃತ ಸಂಭಾಷಣೆಯನ್ನು ಸಹಜವಾಗಿ ಸರಳವಾಗಿ ಕಲಿಸುವ ಮೂಲಕ ಸಂಸ್ಕೃತದ ಸರಳತೆಯನ್ನು ಸಾರುತ್ತಿದೆ.
ಬನ್ನಿ! ಸರಳವಾಗಿ ಸಂಸ್ಕೃತವನ್ನು ಕಲಿಯುವುದರ ಮೂಲಕ ಭಾರತವನ್ನು ಹೆಚ್ಚು ಹೆಚ್ಚು ಅರಿತುಕೊಳ್ಳುತ್ತ ಮತ್ತೊಮ್ಮೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡೋಣ.
(ಲೇಖಕರು, ರಾಜ್ಯ ಸಂಘಟನಾ ಕಾರ್ಯದರ್ಶಿ, ಸಂಸ್ಕೃತ ಭಾರತಿ)
ಪೊಲೀಸ್ ‘ಪೋಸ್ಟ್​’ಗಳಲ್ಲೂ ಕ್ರಿಯೇಟಿವಿಟಿ; ಇಂಪ್ರೆಸ್​ ಆಗುವಂತೆ ‘ಎಕ್ಸ್​’ಪ್ರೆಸ್ ಮಾಡುತ್ತಿರುವ ಪೊಲೀಸರು!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 5 =
Remember me
