|ಡಾ. ಬುರುಡೇಕಟ್ಟೆ ಮಂಜಪ್ಪ
ಕನ್ನಡ ನಾಡು ಕಂಡ ಶ್ರೇಷ್ಠ ದಾರ್ಶನಿಕ ಸರ್ವಜ್ಞ. ವೈಚಾರಿಕ ತ್ರಿಪದಿಗಳ ಚಕ್ರವರ್ತಿ. ಜನರ ನಡುವೆ ಬದುಕಿದ ಜನಪದ ವರಕವಿ. ಸರ್ವಜ್ಞನಿಗಾಗಿ ಒಂದು ಗಾದೆ ಹುಟ್ಟಿಕೊಂಡಿರುವುದು ಒಂದು ವಿಶೇಷ. ಏನೆಂದರೆ- ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞನು ಹೇಳದ ಮಾತಿಲ್ಲ. ಅಂದರೆ ಸರ್ವಜ್ಞ ಎಲ್ಲ ವಿಷಯಗಳನ್ನು ಬಲ್ಲವ ಎಂದರ್ಥ.
ಸರ್ವಜ್ಞ ಕವಿಯು ಮೂರು ಸಾಲಿನಲ್ಲಿ ಮಹಾಕಾವ್ಯಗಳ, ಮಹಾ ಗ್ರಂಥಗಳ ಸಾರವನ್ನು ಹಿಡಿದಿಟ್ಟಿದ್ದಾನೆ. ತುಳಸಿದಾಸರು ಹೇಳುವಂತೆ ‘ಗಾಗರ್ವೆ ಸಾಗರ’ ಅಂದರೆ ಕೊಡದಲ್ಲಿ ಸಾಗರವನ್ನು ತುಂಬಿಸುವಂತೆ 3 ಸಾಲಿನ ಪದ್ಯದಲ್ಲಿ ಸರ್ವಜ್ಞ ಮಹಾಕವಿಯು ಜಗತ್ತಿನ ಜ್ಞಾನ, ವೈಚಾರಿಕತೆ, ಮಾನವೀಯ ಮೌಲ್ಯಗಳನ್ನು ತುಂಬಿಟ್ಟಿದ್ದಾನೆ. ಈ ಸಾಹಿತ್ಯದ ತ್ರಿಪದಿಗಳ ವಿಶೇಷವೇನೆಂದರೆ ಷಟ್ಪದಿಯ ರೂಪದಲ್ಲಿ ಛಂದಸ್ಸನ್ನು ಕಾಣುತ್ತೇವೆ. ಪ್ರತಿ ಸಾಲಿನ ಎರಡನೆಯ ಅಕ್ಷರ ಪ್ರಾಸವಾಗಿರುವುದು ಸರ್ವಜ್ಞನ ತ್ರಿಪದಿಗಳ ವಿಶೇಷ ಲಕ್ಷಣವಾಗಿದೆ. ಸರ್ವಜ್ಞನು ಚಿತ್ರ ತ್ರಿಪದಿ, ವಿಚಿತ್ರ ತ್ರಿಪದಿ, ಚಿತ್ರಲತೆ ತ್ರಿಪದಿ ಎಂಬ ಮೂರು ಪ್ರಕಾರದಲ್ಲಿ ತತ್ವ ಬೋಧಿಸಿರುವುದನ್ನು ಆತನ ವಚನಗಳಲ್ಲಿ ಕಾಣುತ್ತೇವೆ.
ಸರ್ವಜ್ಞನು ನಾಲ್ಕು ಗೋಡೆ ಮಧ್ಯೆ ಪಾರಂಪರಿಕ ಮತ್ತು ಸಾಂಪ್ರದಾಯಿಕ ಶಿಷ್ಟ ಶಿಕ್ಷಣವನ್ನು ಪಡೆಯದೆ, ಜನಸಾಮಾನ್ಯರು, ಕಾರ್ವಿುಕರು, ರೈತರ ಮಧ್ಯೆ ಇದ್ದು, ಎಲ್ಲರೊಂದಿಗೆ ಬಾಳಿ ಬದುಕಿ ಮಹಾಜ್ಞಾನಪರ್ವತವೇ ಆಗಿದ್ದು ಒಂದು ವಿಶೇಷ.
ನಮ್ಮ ಕನ್ನಡ ಸಾಹಿತ್ಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಕವಿಗಳು ರಾಜಾಶ್ರಯ, ಆಡಳಿತ, ಜನಪ್ರತಿನಿಧಿಗಳ ಓಲೈಕೆ ಮಾಡುವ ಸಾಹಿತ್ಯವನ್ನು ರಚಿಸಿರುವುದು ಅಲ್ಲಲ್ಲಿ ಕಂಡು ಬರುತ್ತದೆ. ಇದಕ್ಕೆ ಅಪವಾದವೆಂಬಂತೆ ಅನೇಕ ಕವಿಗಳೂ ಕನ್ನಡದಲ್ಲಿದ್ದಾರೆ. ಆದರೆ, ರಾಜಾಶ್ರಯವನ್ನು ಧಿಕ್ಕರಿಸಿ ಜನಸಾಮಾನ್ಯರ ಮಧ್ಯೆ ಬದುಕಿ, ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ಆ ಸರ್ವಜ್ಞ ಮಹಾಶಯನಿಗೆ ಸಲ್ಲುತ್ತದೆ.
ಸರ್ವಜ್ಞ ಕನ್ನಡದ ತ್ರಿಪದಿ ಲೋಕಕ್ಕೆ ಹೊಸ ಭಾಷ್ಯ ಬರೆದಿದ್ದಾನೆ. ಸರಳವಾದ ಪದಗಳನ್ನು, ಕನ್ನಡದ ಪಾರಂಪರಿಕ ಜನಪದ ಪದಗಳನ್ನು ಬಳಸಿ ತ್ರಿಪದಿಗಳನ್ನು ರಚಿಸಿ ಅವುಗಳ ಮೂಲಕ ಸಮಾಜದಲ್ಲಿರುವ ಅನೇಕ ಅಂಕು-ಡೊಂಕುಗಳನ್ನು ತಿದ್ದಲು ಪ್ರಯತ್ನ ಮಾಡಿದ್ದಾನೆ. ಸರ್ವಜ್ಞನ ವಚನಗಳು ಡಂಭಾಚಾರ, ಮೂಢನಂಬಿಕೆ, ಶೋಷಣೆ ಮುಂತಾದವುಗಳನ್ನು ಕಟುವಾಗಿ ಟೀಕಿಸಿ ಅವುಗಳಿಂದ ಮುಕ್ತವಾದ ಸಮ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಪ್ರತಿಪಾದಿಸುತ್ತವೆ.
ಸಮಾಜದ ಶ್ರೇಷ್ಠ ಮನೋವಿಜ್ಞಾನಿಯಾಗಿ, ಸಮಾಜ ವಿಜ್ಞಾನಿಯಾಗಿ, ಒಬ್ಬ ಮಹಾ ವೈದ್ಯನಾಗಿ, ಕೃಷಿಕನಾಗಿ, ಪಂಡಿತನಾಗಿ, ಒಬ್ಬ ಮಹಾ ತಂತ್ರಜ್ಞಾನಿಯಾಗಿ, ಯೋಗಿಯಾಗಿ, ಜನಪದ ಕವಿಯಾಗಿ… ಹೀಗೆ ಅನೇಕ ಭೂಮಿಕೆಗಳಲ್ಲಿ ಸರ್ವಜ್ಞನನ್ನು ಕಾಣಬಹುದು. ಇತ್ತೀಚಿನ ಜಾಗತಿಕ ಪಿಡುಗುಗಳಾದ ಜಾತಿ, ಮತ, ಧರ್ಮ ಸಂಘರ್ಷದ ನಾಶಕ್ಕೆ ಸರ್ವಜ್ಞನ ವಚನಗಳು ದಿವ್ಯ ಔಷಧಗಳಾಗಿ ಕಂಡುಬರುತ್ತವೆ. ವಿಶ್ವ ಮಾನವತೆ, ವಿಶ್ವ ಕುಟುಂಬ, ಮಾನವೀಯ ಮೌಲ್ಯಗಳ ನೆಲೆಗಟ್ಟನ್ನು ಆತನ ತ್ರಿಪದಿಗಳಲ್ಲಿ ಕಾಣಬಹುದು. ಅವುಗಳಲ್ಲಿ ಕೆಲ ಉದಾಹರಣೆಗಳನ್ನು ನೋಡೋಣ.
ನಡೆವುದೊಂದೇ ಭೂಮಿ ಕುಡಿಬೋದೊಂದೇ ನೀರು,
ಸುಡುವಗ್ನಿಯೊಂದೇ ಇರುತಿರಲು ಕುಲ ಗೋತ್ರ
ಎತ್ತಣದು ನಡುವೆ ಸರ್ವಜ್ಞ?
ಸರ್ವಜ್ಞನ ಈ ಪ್ರಶ್ನೆಗೆ ನಮ್ಮ ಬಳಿ ಉತ್ತರ ಸಿಗುವುದು ಕಷ್ಟ. ಆತ ಕೇಳುವ ದಿಟ್ಟ, ನೇರ, ಕಟು ಸತ್ಯಗಳಿಗೆ ಸಮಾಜಘಾತಕ ದುಷ್ಟ ಶಕ್ತಿಗಳ ಬಳಿ ಉತ್ತರ ದೊರೆಯುವುದು ಬಹಳ ಕಷ್ಟಕರ. ಹಾಗಾಗಿ, ಸರ್ವಜ್ಞನ ರ್ತಾಕವನ್ನು, ವಿಚಾರಧಾರೆಯನ್ನು ಹತ್ತಿಕ್ಕಲು ಅನೇಕ ಪಟ್ಟ ಭದ್ರ ಹಿತಾಸಕ್ತಿಗಳು ಅಂದಿನಿಂದ ಇಂದಿನವರೆಗೂ ಪ್ರಯತ್ನ ಮಾಡುತ್ತ ಬಂದಿದ್ದಾರೆ!
ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ?
ಜಾತಿ ವಿಜಾತಿ ಎನಬೇಡ
ದೇವನೊಲಿದಾತನೇ ಜಾತ ಸರ್ವಜ್ಞ
ಸರ್ವಜ್ಞನು ಸಮ ಸಮಾಜ ನಿರ್ವಣದಲ್ಲಿ ಬಹುದೊಡ್ಡ ದಿಟ್ಟ ಹೆಜ್ಜೆಯನ್ನು ಇಟ್ಟವನು. ಯಾವುದಕ್ಕೂ ಅಂಜದೆ, ಅಳುಕದೆ ನೇರವಾಗಿ ಕಟು ಸತ್ಯವನ್ನು ಬಿಚ್ಚಿಟ್ಟವನು. ಜಾತಿಯ ವಿಚಾರದಲ್ಲಿ ಸರ್ವಜ್ಞ ಬೆಂಕಿಯ ಉಂಡೆಯಂತೆ ಇದ್ದಾನೆ.
ಕರದಿ ಕಪ್ಪರ ಉಂಟು ಹಿರಿದಾದ ನಾಡು ಉಂಟು
ಹರನೆಂಬ ದೈವ ನಮಗುಂಟು
ತಿರುವರಿಂ ಸಿರಿವಂತರಾರು? ಸರ್ವಜ್ಞ
ಸರ್ವಜ್ಞನ ದೃಷ್ಟಿಯಲ್ಲಿ ರಾಜ ಮತ್ತು ರಂಕ ಇಬ್ಬರೂ ಒಂದೇ ಆಗಿದ್ದಾರೆ. ರಾಜನಿಗೆ ಎಷ್ಟು ಗೌರವವಿದೆಯೋ ಮಾನವೀಯ ನೆಲೆಯಲ್ಲಿ ಉಳಿದವರಿಗೂ ಅಷ್ಟೇ ಗೌರವ ಇದೆ.
ವಿದ್ಯೆ ಕಲಿಸದಾ ತಂದೆ ಬುದ್ಧಿ ಹೇಳದ ಗುರು
ಬಿದ್ದಿರಲು ಬಂದು ನೋಡದ ತಾಯಿ
ಇವು ಮೂರು ಶುದ್ಧ ವೈರಿಗಳು ಸರ್ವಜ್ಞ
ಗುರು, ತಂದೆ, ತಾಯಿಯ ಸ್ಥಾನದ ಕುರಿತು ವಚನದಲ್ಲಿ ಎಚ್ಚರಿಸುತ್ತಾನೆ. ಅವರವರ ಕರ್ತವ್ಯಗಳು ಏನು ಎಂದು ತಿಳಿಸಿದ್ದಾನೆ.
ಜಗತ್ತಿಗೆ ಬೆಳಕು ಕೊಟ್ಟ ಸರ್ವಜ್ಞನ ಕುರುಹುಗಳನ್ನು ಸಂರಕ್ಷಣೆ ಮಾಡುವಲ್ಲಿ ಜನಪ್ರತಿನಿಧಿಗಳು, ಸರ್ಕಾರ, ಅನೇಕ ಸಂಘಗಳು ಮುಂದೆ ಬಂದಿರುವುದು ಆಶಾಕಿರಣವಾಗಿದೆ. ಇಂಥ ಮಹತ್ತರವಾದ ಕಾರ್ಯಗಳಿಗೆ ಕನ್ನಡಿಗರೆಲ್ಲರೂ ಸಹಕಾರ ಮಾಡಬೇಕಿದೆ. ಸರ್ಕಾರದ ಜತೆ ಕೈಜೋಡಿಸಬೇಕಿದೆ. ಆದಷ್ಟು ಬೇಗ ಪ್ರಾಧಿಕಾರ ಕಾರ್ಯ ಆರಂಭ ಮಾಡಲಿ ಮತ್ತು ಸರ್ವಜ್ಞ ಮಹಾಕವಿಯ ವಿಚಾರಧಾರೆ, ವೈಯಕ್ತಿಕ ಬದುಕಿನ ಕುರಿತು ಹೆಚ್ಚಿನ ಬೆಳಕು ದೊರೆಯಲಿ ಎಂದು ಶುಭ ಹಾರೈಸುತ್ತ ನಾಡಿನ ಜನತೆಗೆ 503ನೇ ಸರ್ವಜ್ಞ ಜಯಂತಿಯ ಶುಭಾಶಯಗಳು.
ಸರ್ವಜ್ಞನ ನೀಡಿದ ಸಂದೇಶವನ್ನು ಜಗತ್ತಿನ ಮೂಲೆ ಮೂಲೆಗೂ ತಲುಪಿಸಬೇಕಾದಂತಹ ಆದ್ಯ ಕರ್ತವ್ಯವನ್ನು ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ತ್ರಿಪದಿಗಳು ಜಗತ್ತಿನ ಎಲ್ಲ ದುಃಖಕ್ಕೆ ದಿವ್ಯ ಔಷಧವನ್ನು ಕೊಡುವ ಸಾಮರ್ಥ್ಯ ಹೊಂದಿವೆ. ಜಗತ್ತಿನಾದ್ಯಂತದ ಎಲ್ಲ ಭಾಷೆಗಳಿಗೆ ಸರ್ವಜ್ಞನ ಸಾಹಿತ್ಯ ತರ್ಜುಮೆಯಾಗಿ ಪ್ರಚಾರವಾದರೆ ಬಹುಶಃ ವಿಶ್ವದ ಅತಿ ಶ್ರೇಷ್ಠ ವೈಚಾರಿಕ ದಾರ್ಶನಿಕರಲ್ಲಿ ಸರ್ವಜ್ಞನೇ ಅಗ್ರ ಸ್ಥಾನದಲ್ಲಿ ಇರುತ್ತಾನೆ ಎನ್ನಬಹುದು. ಇಂಗ್ಲಿಷರು ಶೇಕ್ಸಪಿಯರನನ್ನು ಜಗತ್ತಿನಾದ್ಯಂತ ಸುಲಭವಾಗಿ ಪ್ರಚಾರ ಮಾಡಿದಂತೆ ಜಗತ್ತಿನ ಪ್ರಮುಖ ಭಾಷೆಗಳಿಗೆ ಸರ್ವಜ್ಞನ ವಚನ ಸಾಹಿತ್ಯ ಭಾಷಾಂತರವಾಗಬೇಕು. ಈ ಜ್ಞಾನದ ಬೆಳಕು ಜಗತ್ತಿಗೆಲ್ಲ ತಲುಪಬೇಕು. ಈಗಾಗಲೇ ಅನೇಕ ಕವಿಗಳು, ಧಾರ್ವಿುಕರು, ಸಂತರು, ಸಂಶೋಧಕರು ಸರ್ವಜ್ಞನ ವಚನಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಸಂರಕ್ಷಿಸಿದಲ್ಲಿ ಸೂರ್ಯ ಚಂದ್ರ ಇರುವವರೆಗೂ ಜಗತ್ತಿನ ದುಃಖಕ್ಕೆ ದಿವ್ಯ ಔಷಧಗಳಾಗಿರುವ ತ್ರಿಪದಿಗಳು ಶಾಶ್ವತವಾಗಿ ಉಳಿಯಲಿವೆ.
1975ರಲ್ಲಿ ಅಂದಿನ ಕರ್ನಾಟಕ ವಿಧಾನಸಭಾಧ್ಯಕ್ಷೆ ಕೆ.ಎಸ್. ನಾಗರತ್ನಮ್ಮ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಸರ್ವಜ್ಞನ ಜನ್ಮ ಸ್ಥಳವಾದ ಮಾಸೂರಿಗೆ ಬಂದು ಮಾಸೂರಿನಲ್ಲಿ ಸರ್ವಜ್ಞನ ನಾಲ್ಕನೇ ಶತಮಾನೋತ್ಸವದ ಸ್ಮರಣೆಗಾಗಿ ಶತಮಾನೋತ್ಸವ ಸ್ಮಾರಕ ಭವನವನ್ನು ನಿರ್ಮಾಣ ಮಾಡಲು ಅಡಿಗಲ್ಲು ಹಾಕಿ ಹೋಗಿರುವುದು ಒಂದು ಪ್ರಮುಖ ಘಟ್ಟವಾಗಿದೆ. ಅದೇ ರೀತಿ ಕರ್ನಾಟಕದ ಪ್ರಸಿದ್ಧ ಸಾಹಿತಿಗಳಾದ ಪ್ರಾತಃಸ್ಮರಣೀಯರಾದ ರಂಶ್ರೀ ಮುಗಳಿ ಹಾಗೂ ಬೆಟಗೇರಿ ಕೃಷ್ಣಶರ್ಮ ಅವರು ಅನೇಕ ಸಾಹಿತಿಗಳೊಂದಿಗೆ 1975ರಲ್ಲಿ ಸರ್ವಜ್ಞನ ಮಾಸೂರಿಗೆ ಬಂದು ಸರ್ವಜ್ಞನ ಜಯಂತಿ ಆಚರಿಸಿರುವುದು ಮತ್ತೊಂದು ಮೈಲಿಗಲ್ಲಾಗಿದೆ. ಇದೇ ರೀತಿ ಸರ್ಕಾರದವರು ಮಾಸೂರಿನಲ್ಲಿ ಸರ್ವಜ್ಞನ ಹೆಸರಿನಲ್ಲಿ ಗ್ರಂಥಾಲಯವನ್ನು ಸ್ಥಾಪಿಸಿ ಉದ್ಘಾಟಿಸಿದ್ದು ಇನ್ನೊಂದು ಮೈಲಿಗಲ್ಲಾಗಿದೆ. ಅದರಲ್ಲೂ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರವು ರಚನೆಯಾಗಿರುವುದು ಮತ್ತೊಂದು ಪ್ರಮುಖ ಘಟ್ಟವಾಗಿದೆ.
ಸರ್ವಜ್ಞನ ಜನ್ಮಸ್ಥಳ, ಕರ್ಮಭೂಮಿ, ವಿಶ್ರಾಂತಿ ಸ್ಥಳ, ಆತನಿದ್ದ ಮನೆ, ತಂದೆ ಆರಾಧಿಸುತ್ತಿದ್ದ ದೇವಾಲಯ, ಕುಮದ್ವತಿ ನದಿ, ಆತನ ವಚನಗಳಲ್ಲಿ ಬರುವ ಸ್ಥಾನವಾಚಕಗಳು, ಜಾತಿವಾಚಕಗಳು, ದೈವ ಪದ್ಧತಿ, ಆಹಾರ ಪದ್ಧತಿ ಹೀಗೆ ಅನೇಕ ವಿಚಾರಗಳ ಮೇಲೆ ಬೆಳಕು ಚೆಲ್ಲುವ, ಪರಿಷ್ಕರಿಸುವ ಒಂದು ರಾಜ್ಯಮಟ್ಟದ ಸಂಶೋಧಕರ ಸಮಿತಿ ರಚನೆಯಾಗಬೇಕಾದ ಅನಿವಾರ್ಯತೆ ಇದೆ. ಈ ಕುರುಹುಗಳನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡುವಲ್ಲಿ ಜನಪ್ರತಿನಿಧಿಗಳು, ಎಲ್ಲ ವರ್ಗದವರು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.
(ಲೇಖಕರು ಇತಿಹಾಸ ಸಂಶೋಧಕರು, ಸಂಸ್ಥಾಪಕ ಅಧ್ಯಕ್ಷರು, ಸರ್ವಜ್ಞ ಸಂಶೋಧನಾ ಪೀಠ ದಾವಣಗೆರೆ)
ಚುನಾವಣೆ ಮುಗಿಯುವವರೆಗೂ ರಾಜಕೀಯ ಪ್ರೇರಿತ ಕ್ರಿಕೆಟ್​ ಟೂರ್ನಮೆಂಟ್​​ಗಳಿಗೆ ನಿಷೇಧ; ಪಂದ್ಯಾವಳಿ ನಡೆಸಿದ್ರೆ ಕೇಸ್​!

ಅಳಿಯನನ್ನೇ ಅಪಹರಿಸಿ ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿದ ಅತ್ತೆ; ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಮತ್ತು ಕುಟುಂಬಸ್ಥರ ವಿರುದ್ಧ ಕೇಸ್​

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:17 − nine =
Remember me
