|ಮಂಜುನಾಥ ಕೆ.ಬೆಂಗಳೂರು
ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿದ್ದ ಹಿರಿಯ ನಾಗರಿಕರ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಹಾಗೂ ಕಿರುಕುಳ ಈಗಲೂ ಮುಂದುವರಿದಿದೆ. ವಿಶ್ವ ಹಿರಿಯ ನಾಗರಿಕರ ನಿಂದನೆ ಜಾಗೃತಿ ದಿನ (ಜೂ. 15) ಹಿನ್ನೆಲೆಯಲ್ಲಿ ಬೆಂಗಳೂರಿನಂತಹ ಹೈಟೆಕ್ ಸಿಟಿಯಲ್ಲೇ ಹಣ ಹಾಗೂ ಆಸ್ತಿಗಾಗಿ ಮಕ್ಕಳು ಹಾಗೂ ಸಂಬಂಧಿಕರಿಂದಲೇ ಹಿರಿಯ ನಾಗರಿಕರ ನಿಂದನೆ ಪ್ರಕರಣಗಳು ಹೆಚ್ಚಾಗಿರುವ ವಿಚಾರ ಹಿರಿಯರ ಸಹಾಯವಾಣಿ ಕೇಂದ್ರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.
ಹಿರಿಯರ ನಿಂದನೆ ಪ್ರಕರಣಗಳನ್ನು ದಾಖಲು ಮಾಡಿಕೊಂಡು ನೆರವಾಗುವ ಉದ್ದೇಶದಿಂದ ಬೆಂಗಳೂರು ಪೊಲೀಸರು, ನೈಟಿಂಗೇಲ್ಸ್ ವೈದ್ಯಕೀಯ ಟ್ರಸ್ಟ್ ಎಂಬ ಎನ್​ಜಿಒ ಜತೆ ಸೇರಿ ಹಿರಿಯರ ಸಹಾಯವಾಣಿ ಕೇಂದ್ರವನ್ನು ಆರಂಭಿಸಿದೆ. ಕಳೆದ 5 ವರ್ಷದಲ್ಲಿ ಸಹಾಯವಾಣಿ ಕೇಂದ್ರ (1090)ಕ್ಕೆ ಒಟ್ಟು 64455 ಕರೆಗಳು ಬಂದಿವೆ. ಇದರಲ್ಲಿ ಕಿರುಕುಳ, ನಿರ್ಲಕ್ಷ್ಯ, ದೌರ್ಜನ್ಯಕ್ಕೆ ಸಂಬಂಧಿಸಿದಂತೆ 1717 ದೂರುಗಳು ದಾಖಲಾಗಿವೆ. ಆಸ್ತಿ ವಿಚಾರಕ್ಕಾಗಿ ಹಿರಿಯರಿಗೆ ಕಿರುಕುಳ ಅಥವಾ ನಿಂದಿಸುತ್ತಿರುವ 244 ಕೇಸ್ ದಾಖಲಾಗಿವೆ. ಇದರಲ್ಲಿ ಮೌಖಿಕವಾಗಿ 67 ಪ್ರಕರಣಗಳು ದಾಖಲಾಗಿವೆ. ಅಧಿಕೃತವಾಗಿ ಮತ್ತು ಮೌಖಿಕವಾಗಿ ಒಟ್ಟು 311 ಪ್ರಕರಣಗಳು ಹಿರಿಯ ಸಹಾಯವಾಣಿಯಲ್ಲಿ ದಾಖಲಾಗಿವೆ.
ಶೇ.80 ನಿಂದನೆ ದೂರು:ಹಿರಿಯರ ಸಹಾಯವಾಣಿಯಲ್ಲಿ ದಾಖಲಾಗಿರುವ ದೂರುಗಳ ಅಧ್ಯಯನದ ಪ್ರಕಾರ ಶೇ.80 ದೂರುಗಳು ಕಿರುಕುಳ, ನಿರ್ಲಕ್ಷ್ಯ, ದೌರ್ಜನ್ಯ, ಹಣ ಅಥವಾ ಆಸ್ತಿಗಾಗಿ ಬೇಡಿಕೆ, ವಂಚನೆ, ಶೋಷಣೆ ಇತ್ಯಾದಿ ರೂಪದಲ್ಲಿ ನಿಂದನೆಗೆ ಸಂಬಂಧಿಸಿದ್ದಾಗಿದೆ. ಕಳೆದ 20 ವರ್ಷಗಳ ಅವಧಿಯಲ್ಲಿ 2.35 ಲಕ್ಷ ಹಿರಿಯರು ವಿವಿಧ ಅಗತ್ಯಗಳು ಮತ್ತು ಸಹಾಯಕ್ಕಾಗಿ ಹಿರಿಯರ ಸಹಾಯವಾಣಿ 1090ಗೆ ಸಂರ್ಪಸಿದ್ದಾರೆ. 2022 ಮೇ ತಿಂಗಳ ಅಂತ್ಯದವರೆಗೂ 10591 ಗಂಭೀರ ಸ್ವರೂಪದ ದೂರುಗಳು ದಾಖಲಾಗಿವೆ. ದಾಖಲಾದ ದೂರುಗಳಲ್ಲಿ ಶೇ.69 ದೂರುಗಳನ್ನು ಸಹಾಯವಾಣಿ ಕೇಂದ್ರ ಪರಿಹರಿಸಿದೆ.
ಅಪ್ಪನಿಗೆ ಮಗಳ ಟಾರ್ಚರ್:ಅದ್ದೂರಿಯಾಗಿ ಮದುವೆ ಮಾಡಿಕೊಟ್ಟ ನಂತರ ಗಂಡ ಮದ್ಯವ್ಯಸನಿ ಎಂಬ ಕಾರಣಕ್ಕೆ ಆತನನ್ನು ತೊರೆದು ತವರು ಮನೆಗೆ ಬಂದ ಮಗಳಿಗಾಗಿ ತಂದೆ ಒಂದು ಪ್ರತ್ಯೇಕ ಮನೆ ನೀಡಿದ್ದರು. ಅದರಲ್ಲಿ ಮಕ್ಕಳೊಂದಿಗೆ ಆಕೆ ಆರಾಮವಾಗಿ ಇದ್ದಳು. ಕೆಲವು ದಿನಗಳ ನಂತರ ತಂದೆಯ ಆರೋಗ್ಯದಲ್ಲಿ ಏರುಪೇರಾಗಿ ಕೆಲಸ ಕಳೆದುಕೊಂಡರು. ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ನಂತರ ಹೃದಯ ಸಮಸ್ಯೆಯು ಎದುರಾಯಿತು. ಮಗಳು ತಂದೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಳು. ಸರಿಯಾಗಿ ನೋಡಿಕೊಳ್ಳದೆ ಔಷಧಕ್ಕೆ ಹಣವನ್ನೂ ನೀಡುತ್ತಿರಲಿಲ್ಲ. ಮನೆ ಬಿಟ್ಟು ಹೋಗುವಂತೆ ಒತ್ತಾಯಿಸುತ್ತಿದ್ದಳು. ಈ ಬಗ್ಗೆ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದರು. ಬಳಿಕ ಆಕೆಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದಾಗ ತಂದೆ ಸುಳ್ಳು ಹೇಳುತ್ತಿರುವುದಾಗಿ ಹೇಳಿದ್ದಳು. ಸಮಾಲೋಚನೆ ನಡೆಸಿದ ನಂತರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ನಗರ ಪ್ರದೇಶದಲ್ಲಿ ಹಿರಿಯರ ಮೇಲೆ ನಿಂದನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಆಸ್ತಿ ವಿಚಾರಕ್ಕೆ ಹಾಗೂ ಹಣಕಾಸು ವಿಚಾರಕ್ಕೆ ಹಿರಿಯರಿಗೆ ಕಿರುಕುಳ ನೀಡಲಾಗುತ್ತಿದೆ. ದಿನೇ ದಿನೇ ಆಸ್ತಿ ಮೌಲ್ಯ ಹೆಚ್ಚಾಗುತ್ತಿರುವುದೇ ಇದಕ್ಕೆ ಮೂಲ ಕಾರಣವಾಗಿದೆ.
|ಡಾ.ರಾಧ ಎಸ್.ಮೂರ್ತಿನೈಟಿಂಗೇಲ್ಸ್ ವೈದ್ಯಕೀಯ ಟ್ರಸ್ಟ್​ನ (ಎನ್​ಜಿಒ) ಮ್ಯಾನೇಜಿಂಗ್ ಟ್ರಸ್ಟಿ
ಆಸ್ತಿಗಾಗಿ ಗಲಾಟೆ:ತಂದೆ-ತಾಯಿ ಕೆಳಗಡೆ ಮನೆಯಲ್ಲಿದ್ದರು. ಮೇಲಿನ ಮನೆಯನ್ನು ಒಬ್ಬ ಮಗನ ಹೆಸರಿಗೆ ಬರೆದುಕೊಟ್ಟಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಒಬ್ಬ ಬೇರೆ ಕಡೆ ವಾಸವಾಗಿದ್ದ. ವ್ಯವಹಾರದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪಾಲಕರ ಬಳಿ ಬಂದು ನನಗೆ ಆಸ್ತಿ ಬೇಕು. ಅದನ್ನು ಮಾರಾಟ ಮಾಡಿ ಹಂಚಿಕೆ ಮಾಡಿ ಅಂತಾ ಎಂದು ಗಲಾಟೆ ಮಾಡತೊಡಗಿದ್ದ. ಇಲ್ಲವಾದರೆ ನಾನು ನಿಮ್ಮ ಮನೆಗೆ ಬಂದು ವಾಸ್ತವ್ಯ ಹೂಡುತ್ತೇವೆ ಎಂದು ಬ್ಲಾ್ಯಕ್​ವೆುೕಲ್ ಮಾಡತೊಡಗಿದ್ದ. ನಂತರ ತಂದೆ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ದೂರು ನೀಡಿದರು. ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದಾಗ ನನಗೆ ಸ್ವಲ್ಪ ಹಣ ಕೊಟ್ಟರೆ ತಂದೆಗೆ ತೊಂದರೆ ಕೊಡುವುದಿಲ್ಲ ಎಂದು ಹಣ ಪಡೆದು ಹೋದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಂಬರ್​ಗೆ ಕರೆ ಮಾಡಿ:ಸಂಕಟದಲ್ಲಿರುವ ಹಿರಿಯ ನಾಗರಿಕರು ಅಥವಾ ಹಿರಿಯರ ಮೇಲೆ ದೌರ್ಜನ್ಯ ನಡೆದಿರುವುದನ್ನು ಕಂಡ ಇತರರು ಹಿರಿಯರ ಸಹಾಯವಾಣಿ 1090(ಟೋಲ್ ಫ್ರೀ) ಅಥವಾ 22943226 ಗೆ ಕರೆ ಮಾಡಬಹುದು. ಹಿರಿಯರ ನಿಂದನೆ ದೂರುಗಳನ್ನು ಮೂಲಕವೂ ಅನಾಮಧೇಯವಾಗಿ ನೋಂದಾಯಿಸಬಹುದಾಗಿದೆ.
ರಾಜ್ಯದಲ್ಲಿ ಮುಂದಿನ 5 ದಿನ ವ್ಯಾಪಕ ಮಳೆ: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
