| ಮೇಧಾ ಪ್ರಹ್ಲಾದಾಚಾರ್ಯ ಜೋಶಿಶ್ರಾವಣ ಮಾಸ ಹಬ್ಬಗಳ ಪರ್ವಕಾಲವೆನಿಸಿದೆ. ಈ ಶ್ರಾವಣ ಮಾಸಕ್ಕೆ ಭಗವಂತನ ಶ್ರೀಧರ ರೂಪ ನಿಯಾಮಕವಾಗಿದೆ. ಒಂದು ದಿನವೂ ಹಬ್ಬರಹಿತವಾಗಿಲ್ಲದ ಏಕೈಕ ಮಾಸ ಶ್ರಾವಣ. ವಿಶೇಷವಾಗಿ ಸ್ತ್ರೀಯರಿಗೆ ಪ್ರೀತ್ಯಾಸ್ಪದವಾದ ಆಚರಣೆಯ ಮಾಸವಿದು.
ಹಬ್ಬ ಹರಿದಿನಗಳ ಆಚರಣೆ ಸನಾತನ ಧರ್ಮದ ಅವಿಭಾಜ್ಯ ಅಂಗ. ಎಲ್ಲ ಮಾಸಗಳು ಅದರದ್ದೇ ಆದ ಮಾಸಧರ್ಮಗಳನ್ನು ಹೊಂದಿವೆ. ಅದರಲ್ಲೂ ಶ್ರಾವಣ ಮಾಸ ಹಬ್ಬಗಳ ಪರ್ವ. ಸನಾತನ ಸಂಸ್ಕೃತಿಯಲ್ಲಿ ಹಬ್ಬ ಆಚರಣೆಗಳು ಜಾತಿ ಧರ್ಮಗಳನ್ನು ಮೀರಿದ ಸರ್ವತೋಮುಖ ದೃಷ್ಟಿಕೋನ ಹೊಂದಿವೆ. ನಮ್ಮ ನಮ್ಮ ಆಚರಣೆಗಳನ್ನು ನಾವು ಶ್ರದ್ಧಾಭಕ್ತಿಯಿಂದ ಆಚರಿಸಿ ಮುನ್ನಡೆಸಿ, ಮುಂದಿನ ಪೀಳಿಗೆಗೆ ಈ ಮೌಲ್ಯಯುತವಾದ ಸಂಪ್ರದಾಯಗಳನ್ನು ಬಳುವಳಿಯಾಗಿ ನೀಡಿ ಉಳಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ.
ಶುಕ್ರವಾರ ಗೌರಿ ವ್ರತ, ವರಮಹಾಲಕ್ಷ್ಮಿ ವ್ರತ:ಮಾಸ ಮಹಾಲಕ್ಷ್ಮಿ ಪೂಜೆ ಅಂತಲೂ ಕರೆಯುವ ಇದು ಉತ್ತರ ಕರ್ನಾಟಕದಲ್ಲಿ ಹೆಚ್ಚು ಆಚರಣೆಯಲ್ಲಿದೆ. ಶ್ರಾವಣದ 4 ಅಥವಾ 5 ಶುಕ್ರವಾರ ಈ ಪೂಜೆ. ಕಲಶದಲ್ಲಿ ಅಥವಾ ಚಿತ್ರದಲ್ಲಿ ಲಕ್ಷ್ಮೀದೇವಿಯ ಆವಾಹನೆಯನ್ನು ಮಾಡಿ ಷೋಡಶೋಪಚಾರ ಪೂಜೆ ಮಾಡಲಾಗುತ್ತದೆ. ಶ್ರಾವಣದ 2ನೇ ಶುಕ್ರವಾರ ಅಥವಾ ಹುಣ್ಣಿಮೆ ಸಮೀಪದ ಶುಕ್ರವಾರ ಬರುವಂಥದ್ದು ವರಮಹಾಲಕ್ಷ್ಮಿ ವ್ರತ. ಇದು ಸಾಮಾನ್ಯವಾಗಿ ಎಲ್ಲರೂ ಆಚರಿಸುವ ಹಬ್ಬ. ಈ ಎಲ್ಲ ಪೂಜೆಗಳಲ್ಲಿ ಕೇವಲ ಲಕ್ಷ್ಮಿ ಪೂಜೆ ಎಂದಿಗೂ ವಿಹಿತವಲ್ಲ. ನಾರಾಯಣನ ಸಮೇತವಾಗಿಯೇ ಲಕ್ಷ್ಮಿ ಪೂಜೆ ಮಾಡಬೇಕೆನ್ನುತ್ತವೆ ಶಾಸ್ತ್ರಗಳು. (ಆ. 18, 25; ಸೆ. 1, 8)
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ:ಕಲಿಯುಗದ ಕಾಮಧೇನು ಕಲ್ಪವೃಕ್ಷರೆಂದೇ ಪ್ರಸಿದ್ಧರಾದ ಮಂತ್ರಾಲಯ ಪ್ರಭುಗಳ ಆರಾಧನೆ. ಯಾವುದೇ ಜಾತಿ ಧರ್ಮದ ಅಡ್ಡಗೋಡೆಗಳಿಲ್ಲದೆ ಸರ್ವ ಧರ್ಮದವರೂ ತಲೆಬಾಗುವ ಜಗದ್ಗುರುಗಳು ರಾಯರು. (ಸೆ. 1)
ಸಂಪತ್ ಶನಿವಾರದ ವ್ರತ:ಶ್ರಾವಣದ 4 ಶನಿವಾರಗಳಲ್ಲಿ ಮಾಡುವ ಲಕ್ಷ್ಮಿ ಪೂಜೆ. ಲಕ್ಷ್ಮಿಗೆ ಜೋಳದಿಂದ ಮಾಡಿದ ಪದಾರ್ಥಗಳನ್ನೇ ನಿವೇದಿಸುವುದು ಸಂಪ್ರದಾಯ. ಸಕಲ ಸಂಪತ್ತಿನ ಪ್ರಾಪ್ತಿಗಾಗಿ ಈ ಪೂಜೆ. (ಆ. 19, 26; ಸೆ. 2 ,9)
ಮಂಗಳ ಗೌರಿ ವ್ರತ:ಶ್ರಾವಣದಲ್ಲಿ ಬರುವ 4 ಅಥವಾ 5 ಮಂಗಳವಾರಗಳಲ್ಲಿ ಈ ವ್ರತ ಆಚರಿಸುತ್ತಾರೆ. ಹೊಸದಾಗಿ ವಿವಾಹವಾದ ಸ್ತ್ರೀಯರು ಸುಖ ದಾಂಪತ್ಯಕ್ಕಾಗಿ ಈ ಪೂಜೆ ಮಾಡುತ್ತಾರೆ. ಮದುವೆಯಾದ ವರ್ಷದಿಂದ ಪ್ರಾರಂಭಿಸಿ 5 ವರ್ಷಗಳವರೆಗೆ ಆಚರಿಸಬೇಕು. ಪತಿಯ ದೀರ್ಘಾಯಸ್ಸಿನಿಂದ ಸೌಮಾಂಗಲ್ಯ ನೀಡುವ ಪಾರ್ವತಿ ಪರಮೇಶ್ವರರ ಪೂಜೆ ಇದು.
ನಾಗಚತುರ್ಥಿ, ನಾಗ ಪಂಚಮಿ:ನಾಗ ಚತುರ್ಥಿಯಂದು ಸ್ತ್ರೀಯರು ಅದರಲ್ಲೂ ವಿಶೇಷವಾಗಿ ತಾಯಂದಿರು ಮಕ್ಕಳ ಹಾಗೂ ಅಣ್ಣತಮ್ಮಂದಿರ ದೀರ್ಘಾಯುಷ್ಯಕ್ಕಾಗಿ ಶೇಷನನ್ನು ಪೂಜಿಸಿ ಉಪವಾಸವಿರಬೇಕು. ಅಂದು ಮನೆಯ ಹೊರಗಡೆ ಕಲ್ಲಿನ ನಾಗನಿಗೆ ಹಾಲೆರೆದು ಪೂಜಿಸುವ ಸಂಪ್ರದಾಯವಿದೆ. ನಾಗ ಪಂಚಮಿಯಂದು ಮನೆಯಲ್ಲಿಯೇ ಮಣ್ಣಿನಿಂದ ಮಾಡಿದ ಶೇಷನಿಗೆ ಹಾಲೆರೆದು ಪೂಜೆ ಮಾಡುವ ಪದ್ಧತಿ. ನಾಗ ಪಂಚಮಿಯಂದು ಪುರುಷರೂ ನಾಗಪೂಜೆ ಮಾಡಬೇಕೆಂಬ ವಿಧಿ ಉಂಟು. ಹೀಗೆ ಚೌತಿಯ ದಿನ ಹೊರಗೆ ಪೂಜೆ, ಪಂಚಮಿಯಂದು ಒಳಗೆ ಪೂಜೆ ಎಂಬ ಸಂಪ್ರದಾಯವಿದೆ. (ನಾಗಚೌತಿ ಆ. 20; ನಾಗಪಂಚಮಿ ಆ. 21)
ರಕ್ಷಾ ಬಂಧನ:ಸನಾತನ ಸಂಸ್ಕೃತಿಯಲ್ಲಿ ಸ್ತ್ರೀಯರನ್ನು ಬಹಳ ಪೂಜ್ಯನೀಯವಾಗಿ ಕಂಡಿದ್ದಾರೆ. ಸ್ತ್ರೀಯರನ್ನು ತಂದೆಯಾಗಲಿ ಪತಿಯಾಗಲಿ ಅಣ್ಣ ತಮ್ಮಂದಿರಾಗಲಿ ರಕ್ಷಣೆ ಮಾಡಬೇಕಾದ್ದು ಆದ್ಯ ಕರ್ತವ್ಯ. ಶ್ರಾವಣದ ಹುಣ್ಣಿಮೆಯಂದು ಈ ರಕ್ಷಾಬಂಧನದ ಆಚರಣೆ. (ಆ. 31)
ಬುಧ ಬೃಹಸ್ಪತಿ ವ್ರತ:ನವಗ್ರಹಗಳಲ್ಲಿ ಇಬ್ಬರಾದ ಬುಧ ಹಾಗೂ ಬೃಹಸ್ಪತಿಯ ಪೂಜೆಯನ್ನು ಶ್ರಾವಣದ ಪ್ರತಿ ಬುಧವಾರ ಹಾಗೂ ಗುರುವಾರ ಆಚರಿಸಬೇಕು. ಈ ಪೂಜೆಯನ್ನು ವಿಶೇಷವಾಗಿ ವಿದ್ಯೆಯ ಪ್ರಾಪ್ತಿಗಾಗಿ, ಅಧ್ಯಯನದ ಉದ್ದೇಶದಿಂದ ಆಚರಿಸುವುದು. (ಆ. 23, 24 / 30,31; ಸೆ. 6,7/ 13,14)
ಶ್ರಾವಣ ಸೋಮವಾರ ವ್ರತ:ಮನೋನಿಯಾಮಕರಾದ ರುದ್ರದೇವರ ವಾರ ಸೋಮವಾರ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ವಿಶೇಷ ಸ್ಥಾನವಿದೆ. ಶ್ರಾವಣದ 4 ಸೋಮವಾರಗಳಲ್ಲಿ ಅನೇಕ ದೇವಸ್ಥಾನಗಳಲ್ಲಿ ರುದ್ರಾಭಿಷೇಕ ರುದ್ರ ಪಾರಾಯಣ ಮೊದಲಾದವು ನೆರವೇರುತ್ತವೆ. ಶಿವನನ್ನು ಉದ್ದೇಶಿಸಿ ಅಂದು ಉಪವಾಸ ಮಾಡುವ ಸಂಪ್ರದಾಯವೂ ಇದೆ. (ಆ. 21, 28; ಸೆ. 4 ,11)
ಶ್ರೀ ಕೃಷ್ಣ ಜನ್ಮಾಷ್ಟಮಿ:ಭಾರತದಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೃಷ್ಣನ ಜನ್ಮ ಸಮಯದವರೆಗೂ ಉಪವಾಸವಿದ್ದು ಭಜನೆ ಸಂಕೀರ್ತನೆ ನಡೆಸಿ ರಾತ್ರಿ ವೇಳೆ ಕೃಷ್ಣ ಜನ್ಮೋತ್ಸವ ಆಚರಿಸುವುದು ವಾಡಿಕೆ. ಈ ಬಾರಿಯದಂತೂ ವಿಶೇಷ. ‘ಅಷ್ಟಮೀ ಬುಧವಾರೆಣ ರೋಹಿಣೀಸಹಿತಾ ಯದಿ ಭವೇತ್ ಚ ಮುನಿಶಾರ್ದೂಲ ಕಿಮ್ ಫಲಂ ವ್ರತಕೋಟಿಭಿಃ’ – ಶ್ರಾವಣ ಕೃಷ್ಣ ಅಷ್ಟಮಿ ರೋಹಿಣಿ ನಕ್ಷತ್ರವಿದ್ದು ಬುಧವಾರ ಬಂದರೆ ಇದು ಅಪರೂಪದ ಹಾಗೂ ಅನೇಕ ವರ್ಷಗಳಿಗೊಮ್ಮೆ ಒದಗಿ ಬರುವ ಯೋಗ. ಈ ದಿನದ ಆಚರಣೆಯು ಕೋಟಿ ವ್ರತಗಳನ್ನು ಮಾಡಿದ್ದಕ್ಕಿಂತ ಮಿಗಿಲಾದದ್ದು. (ಸೆ. 6)
ಋಗ್-ಯಜು ಉಪಾಕರ್ಮ:ಶ್ರಾವಣದಲ್ಲಿ ಪುರುಷರಿಗಾಗಿ ವಿಧಿಸಿದ ವಿಶೇಷ ಆಚರಣೆ ಉಪಾಕರ್ಮ. ಅಂದರೆ ಜನಿವಾರ ಧಾರಣೆ. ವರ್ಷವಿಡೀ ಮಾಡಿದ ಅಧ್ಯಯನವನ್ನು ದೇವರಲ್ಲಿ ಸಮರ್ಪಿಸಿ ನೂತನ ಅಧ್ಯಯನಕ್ಕೆ ಸಿದ್ಧರಾಗುವುದು ಇದರ ಸಂಕೇತ. ಅನೇಕ ಧಾರ್ವಿುಕ ಹಿನ್ನೆಲೆಗಳನ್ನು ಹೊಂದಿದ ಈ ಉಪಾಕರ್ಮವನ್ನು ನಮ್ಮ ದೇಶದಲ್ಲಿ ಅನೇಕ ಧರ್ಮದವರು ಆಚರಿಸುತ್ತಾರೆ. (ಋಗುಪಾಕರ್ಮ ಆ. 29. ಯಜುಪಾಕರ್ಮ ಆ. 30)
ವಿಶ್ವ ಸಂಸ್ಕೃತ ದಿನಾಚರಣೆ:ಸಕಲ ಭಾಷೆಗಳಿಗೂ ಜನನಿಯಾದ, ದೇವ ಭಾಷೆ ಎನಿಸಿದ ಸಂಸ್ಕೃತ ಭಾಷೆಯ ಆಚರಣೆಯ ದಿನ. ವಿಶ್ವದೆಲ್ಲೆಡೆ ಸಂಸ್ಕೃತದ ಮಹತ್ವವನ್ನು ಸಾರುವುದೇ ಇದರ ಉದ್ದೇಶ. ಅನೇಕ ವಿದೇಶಗಳಲ್ಲಿಯೂ ಆದ್ಯತೆ ಪಡೆದ ಸಂಸ್ಕೃತ ಭಾಷೆಯನ್ನು ನಾವು ಭಾರತೀಯರು ಬಹಳ ಗೌರವದಿಂದ ಆಚರಿಸಬೇಕು. (ಆ. 31)
ಗಾದೆಮಾತು ಪ್ರಕರಣ: ರಿಯಲ್ ಸ್ಟಾರ್ ಉಪೇಂದ್ರ ಕಡೆಯಿಂದ ಮಹತ್ವದ ಸೂಚನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 18 =
Remember me
