|ಬನ್ನೂರು ಕೆ. ರಾಜು
ಮನುಷ್ಯತ್ವದಿಂದ ದೈವತ್ವಕ್ಕೇರಿದ ಸಂತ
ಮಹಾಮೇರು ಮಾತೃಗುಣದ ಹೃದಯವಂತ
ಮಹಾದಾಸೋಹಿ ಅಕ್ಷರಾನ್ನ ಆರೋಗ್ಯದಾತ
ಮರಣಿಸುವವರೆಗೂ ಸಮಾಜ ಪೊರೆದಾತ
ಮಹಾಸ್ವಾಮೀಜಿ ರಾಜೇಂದ್ರ ಶ್ರೀ ಮಹಿಮಾನ್ವಿತ!
ಮಹಾತಾಯಿಯಾಗಿ, ಮಹಾತಂದೆಯಾಗಿ, ಮಹಾಗುರುವಾಗಿ ಸಾವಿರಾರು ಬಡ ಮಕ್ಕಳಿಗೆ ಅನ್ನವಿಟ್ಟು ಅಕ್ಷರ ಕಲಿಸಿ ಎಲ್ಲರ ಬಾಳು ಬೆಳಗಿ ಬದುಕಿದ್ದಾಗಲೇ ದಂತಕಥೆಯಾಗಿದ್ದವರು ತ್ರಿವಿಧ ದಾಸೋಹಿ ಸಂತ, ರಾಜಗುರು ತಿಲಕ, ಸುತ್ತೂರು ಶ್ರೀ ಮಠದ 23ನೆಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ಅಕ್ಷರಶಃ ಜಗದ್ಗುರುಗಳೇ ಆಗಿದ್ದರು. ಇವರಿಂದಾಗಿ ಕಲಿತವರು, ಕಲಿತು ಬದುಕು ಕಟ್ಟಿಕೊಂಡವರು, ಬದುಕಿನಾಚೆಗೂ ಹೋಗಿ ನಾಡು ಕಟ್ಟಿದವರು, ನಾಡಿನಾಚೆಗೂ ಜಿಗಿದು ದೇಶ ಕಟ್ಟಿದವರು, ದೇಶದಿಂದಾಚೆಗೂ ಹಾರಿ ಜಗತ್ತು ಕಟ್ಟಿದವರು ಬಹಳಷ್ಟಿದ್ದಾರೆ. ಸುತ್ತೂರು ಮಠದ ಸರ್ವಾಂಗೀಣ ಅಭ್ಯುದಯದ ತಾಯಿಬೇರು ಸಹ ಇವರೇ ಎಂಬುದು ಸತ್ಯಸ್ಯ ಸತ್ಯ. ಇದೆಲ್ಲಕ್ಕೂ ಮೂಲಧಾತು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಲ್ಲಿದ್ದ ದೂರದೃಷ್ಟಿ, ಕ್ರಿಯಾಶೀಲತೆ ಮತ್ತು ಧೀಶಕ್ತಿ. ಎಲ್ಲಕ್ಕಿಂತ ಮಿಗಿಲಾಗಿ ಎಲ್ಲರಲ್ಲೂ ತನ್ನವರನ್ನು ಕಾಣುವ ಅವರೊಳಗಿದ್ದ ಮಹಾಮಾನವೀಯತೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಅವರು ಸ್ಥಾಪಿಸಿದ ಉಚಿತ ವಿದ್ಯಾರ್ಥಿ ನಿಲಯಗಳು. ಎಂಥಾ ಸಂಕಷ್ಟ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕಾಪಾಡುತ್ತಿದ್ದರು. ಅದಕ್ಕೇ ಅವರನ್ನು ನಂಬಿ ಬಂದವರಿಗೆ ಕಲಿಯುಗದ ಕಾಮಧೇನು ಎಂತಲೂ, ಬೇಡಿ ಬಂದವರನ್ನು ಕೈಬಿಡದ ಕಲ್ಪವೃಕ್ಷ ಎಂತಲೂ ಜನ ಭಕ್ತಿಯಿಂದ ಕರೆಯುತ್ತಿದ್ದರು.
ಕಾಯಕಯೋಗಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಕಾಲಮಾನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಸಂಸ್ಥೆ (ಜೆಎಸ್​ಎಸ್) ಪಾಲಿಗೆ ಹಾಗೂ ಕನ್ನಡ ನಾಡಿಗೆ ಅದರಲ್ಲೂ ವಿಶೇಷವಾಗಿ ಮೈಸೂರು ಭಾಗದ ಜನತೆಗೆ ಸುವರ್ಣ ಯುಗವೇ ಆಗಿತ್ತು. ಸಾವಿರಾರು ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಊಟ, ವಸತಿ ಕಲ್ಪಿಸಿ ಅನಕ್ಷರಸ್ಥರೋ, ಅಲ್ಪ ವಿದ್ಯಾವಂತರೋ ಆಗಿಯೇ ಉಳಿಯುತ್ತಿದ್ದ ಅನೇಕ ಮಂದಿಯನ್ನು ಪೂರ್ಣ ವಿದ್ಯಾವಂತರನ್ನಾಗಿ ಮಾಡಿದ ಅವರು ಮಾತೃಹೃದಯಿ ಆಗಿದ್ದರು. ತಮ್ಮ ಚಿಕಿತ್ಸಕ ಗುಣ, ಸೌಜನ್ಯ, ಸರಳತೆ ಮತ್ತು ಸಮಾಜಮುಖಿ ಚಿಂತನೆಗಳಿಂದ ನಾಡಿನ ಹೃನ್ಮನವನ್ನು ಗೆದ್ದಿದ್ದರು.
ಶ್ರೀಮತ್ಸುತ್ತೂರು ವೀರ ಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವುಂಟು. ಯುದ್ಧಾಸಕ್ತನಾಗಿ ಯುದ್ಧೋನ್ಮಾದದಿಂದ ಬಂದಿದ್ದ ತಮಿಳುನಾಡಿನ ಚಕ್ರಾಧಿಪತಿ ರಾಜೇಂದ್ರ ಚೋಳ ಮತ್ತು ತಲಕಾಡಿನ ಗಂಗರ ದೊರೆ ರಾಚಮಲ್ಲರ ನಡುವೆ ಯುದ್ಧ ನಿಲ್ಲಿಸಿ, ಶಾಂತಿ-ಸಾಮರಸ್ಯಗಳನ್ನು ಮೂಡಿಸಿ ಅವರಿಂದ ಪೂಜನೀಯ ಗೌರವಕ್ಕೆ ಭಾಜನರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರಿಂದ ಸಾವಿರ ವರ್ಷಗಳ ಹಿಂದೆಯೇ ಸಮಾಜಮುಖಿ ಚಿಂತನೆಗಳ ಆಶಯದಿಂದ ಶಾಂತಿಯ ಸಂಕೇತವಾಗಿ ಸಂಸ್ಥಾಪಿಸಿದ ಧರ್ಮಪೀಠವಿದು. ಈ ಪೀಠದ ಜಗದ್ಗುರುಗಳ ಪರಂಪರೆಯ ಪಥದಲ್ಲಿ ಸಂತ ಶ್ರೇಷ್ಠರು, ಸಮಾಜಮುಖಿ ಚಿಂತಕರು, ಅನುಭಾವಿಗಳು, ವಚನಕಾರರು, ದಾರ್ಶನಿಕರು ಆಗಿಹೋಗಿದ್ದು ಅವರವರ ಕಾಲಘಟ್ಟಗಳಲ್ಲಿ ಆರೋಗ್ಯಕರ ಸಮಾಜ ಕಟ್ಟುವಲ್ಲಿ ತೋರುಮಾರ್ಗವಾಗಿದ್ದಾರೆ. ಅವರುಗಳೆಲ್ಲರ ತತ್ವ ಸಿದ್ಧಾಂತ ಹಾಗೂ ಆಶೋತ್ತರಗಳ ಒಟ್ಟು ಮೊತ್ತದಂತಿದ್ದವರು ಮಠದ ಇಪ್ಪತ್ಮೂರನೇ ಪೀಠಾಧಿಪತಿಗಳಾಗಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು.
‘ಸ್ವಾಮಿಗಳನ್ನು ಮಾಡಬಾರದು, ಸ್ವಾಮಿಗಳು ಆಗಬೇಕು’ ಎಂಬ ಅರ್ಥಪೂರ್ಣ ನುಡಿಮುತ್ತಿಗೆ ಅನ್ವರ್ಥವಾಗಿ ಹುಟ್ಟಿನಿಂದಲೇ ಸ್ವಾಮಿತ್ವ ಪಡೆದುಕೊಂಡು ಲೋಕಕ್ಕೆ ಬಂದವರಿವರು. ಪೂರ್ವಾಶ್ರಮ ಎಂಬ ಮಾತೇ ಇಲ್ಲದೆ ಹುಟ್ಟುತ್ತಲೇ ‘ಶಿವರಾತ್ರಿ ರಾಜೇಂದ್ರ’ ಎಂಬ ನಾಮಾಂಕಿತವನ್ನು ಪಡೆದವರು. ಇವರು ಜನಿಸಿದ್ದು 1916ರ ಆಗಸ್ಟ್ 29ರಂದು. ಶಾಲಿವಾಹನಶಕ 1838ನೇ ನಳನಾಮ ಸಂವತ್ಸರದ ಭಾದ್ರಪದ ಮಾಸ ಶುದ್ಧ ಪಾಡ್ಯದ ಸುಮುಹೂರ್ತ ಕಾಲವದು. ಜನ್ಮ ಸ್ಥಳ ಶ್ರೀಮಠದ ನೆಲೆಬೀಡಾದ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮ. ಜನ್ಮವಿತ್ತ ಪುಣ್ಯಾತ್ಮರು ತಾಯಿ ಶರಣೆ ಶಂಕರಮ್ಮ. ಇವರಿಗೆ ಮರಮ್ಮಣ್ಣಿ ಎಂಬ ಮತ್ತೊಂದು ಹೆಸರೂ ಉಂಟು. ತಂದೆ ಶರಣ ಮಲ್ಲಿಕಾರ್ಜುನ ದೇವರು. ಸುತ್ತೂರು ಮಠಕ್ಕೆ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಶ್ರೀ ಶಿವರಾತ್ರೀಶ್ವರರ ಪರಮ ಭಕ್ತರಿವರು. ಬಾಲಕ ಶಿವರಾತ್ರಿ ರಾಜೇಂದ್ರರ ಬೆಳವಣಿಗೆಯಲ್ಲಿ ಇಬ್ಬರು ಅಜ್ಜಿಯರ ಪಾತ್ರ ಬಹಳ ಮುಖ್ಯವಾಗಿತ್ತು. ಒಬ್ಬ ಅಜ್ಜಿ ಇವರ ತಾಯಿಯ ತಾಯಿ ಮಲ್ಲಮ್ಮಯ್ಯ. ಇವರು ಜ್ಯೋತಿಷ್ಯದಲ್ಲಿ ಪರಿಣತಿ ಹೊಂದಿದ್ದರು. ಮತ್ತೊಬ್ಬ ಅಜ್ಜಿ ತಂದೆಯ ತಾಯಿ ಚಿಕ್ಕಬಸಮಯ್ಯ. ಇವರು ಸಹ ಹಸ್ತ ಸಾಮುದ್ರಿಕೆಯಲ್ಲಿ ಪ್ರಸಿದ್ಧರಾಗಿದ್ದರು.
ಐದು ವರ್ಷಗಳವರೆಗೆ ಕುಟುಂಬದ ವಾತ್ಸಲ್ಯದ ಹಾರೈಕೆಯಲ್ಲಿ ಬೆಳೆದ ಶಿಶು ಶಿವರಾತ್ರಿ ರಾಜೇಂದ್ರರನ್ನು ನಂತರ ಜಗದ್ಗುರು ಶ್ರೀ ಶಿವರಾತ್ರೀಶ್ವರ ಸ್ವಾಮಿಗಳಿಗೆ ಕೊಟ್ಟ ಮಾತಿನಂತೆ ಶ್ರೀಮಠಕ್ಕೆ ಒಪ್ಪಿಸಲಾಯಿತು. ಅಂದಿನಿಂದ ಬಾಲಕ ಶಿವರಾತ್ರಿ ರಾಜೇಂದ್ರರ ಸಂಪೂರ್ಣ ಹೊಣೆ ನೇರವಾಗಿ ಶ್ರೀ ಶಿವರಾತ್ರೀಶ್ವರ ಸ್ವಾಮಿಗಳದ್ದಾಯಿತು. ದಿನದಿಂದ ದಿನಕ್ಕೆ ಬಾಲಕ ಶಿವರಾತ್ರಿ ರಾಜೇಂದ್ರ ಭವ್ಯವಾಗಿ ಬೆಳೆದು ಎಲ್ಲರನ್ನೂ, ಎಲ್ಲವನ್ನೂ ತನ್ನತ್ತ ಸೆಳೆದುಕೊಂಡರು. ಶ್ರೀಮಠದ ಉತ್ತರಾಧಿಕಾರಿಯಾದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸುತ್ತೂರಿನಿಂದ ಮೈಸೂರು ನಗರದತ್ತ ಪಯಣಿಸಿದರು. ಅಲ್ಲಿ ಸಕಲ ವಿದ್ಯಾಪಾರಂಗತರಾಗಿ ರೂಪುಗೊಳ್ಳತೊಡಗಿದ ಅವರು ಶ್ರೀ ಮಠದಲ್ಲಿ ಹೊಸ ಇತಿಹಾಸವೊಂದನ್ನು ಬರೆಯುವತ್ತ ಚಿಕ್ಕ ವಯಸ್ಸಿನಲ್ಲೇ ಮುಂದಾಗಿ ಬೆಳೆದು ನಿಂತರು. ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ 1928ರ ಫೆಬ್ರವರಿ 24ರಂದು ಕೇವಲ 12ನೇ ವಯಸ್ಸಿಗೆ ಐತಿಹಾಸಿಕ ಸುತ್ತೂರು ಮಠದ ಪೀಠಾರೋಹಣ ಮಾಡಿ ಜಗದ್ಗುರು ಸ್ಥಾನದಲ್ಲಿ ಕುಳಿತರು!
ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಎಣೆಯಿಲ್ಲದ ತ್ರಿವಿಧ ದಾಸೋಹವನ್ನು ಕಣ್ಣಾರೆ ಕಂಡು ವಿಸ್ಮಯಗೊಂಡಿದ್ದ ರಸಋಷಿ ಕುವೆಂಪು ಅವರು ‘ಸಾಮಾನ್ಯರ ಮನೆ ಬಾಗಿಲಿಗೆ ಅಪೂರ್ವವೂ ಅವ್ಯಕ್ತವೂ ಆದ ಜ್ಞಾನವನ್ನು ಪ್ರವಹಿಸಿ, ಅವರ ಹೃದಯವನ್ನು ತಿದ್ದಿ ಉದ್ಧರಿಸುವ ಕಾಯಕ ಮಾಡಿದ ಅಪೂರ್ವ ತೇಜೋಮಯ ದಾರ್ಶನಿಕ ವ್ಯಕ್ತಿ’ ಎಂದು ಶ್ರೀಗಳನ್ನು ಶ್ಲಾಘಿಸಿ ಅವರ ನಿಸ್ವಾರ್ಥ ಸೇವಾ ಕೈಂಕರ್ಯಕ್ಕೆ ಚಿನ್ನದ ಪ್ರಭಾವಳಿ ತೊಡಿಸಿದ್ದರು. ಅನ್ನ, ಅಕ್ಷರ, ಆರೋಗ್ಯವೆಂಬ ತ್ರಿವಿಧ ದಾಸೋಹದ ಸಾರ್ಥಕ ಸೇವೆಯಲ್ಲಿ ಬೆಳೆದು ನಿಂತಿರುವ ಸುತ್ತೂರು ಮಠದ ಸೇವಾ ಕೈಂಕರ್ಯಗಳ ಹಿಮಾಲಯವನ್ನು ಯಾವ ದಿಕ್ಕಿನಿಂದ ಇಣುಕಿ ನೋಡಿದರೂ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳೇ ಕಾಣುತ್ತಾರೆ. 1986ರ ಡಿಸೆಂಬರ್ 6ರಂದು ಶ್ರೀಗಳು ಲಿಂಗೈಕ್ಯರಾಗಿ ಭೌತಿಕವಾಗಿ ನಮ್ಮಿಂದ ಕಣ್ಮರೆಯಾಗಿದ್ದರೂ ಅವರೆಂದೆಂದಿಗೂ ಮರೆಯಲಾಗದ ಮಹಾಚೇತನವಾಗಿದ್ದಾರೆ. ಅಂತೆಯೇ ಅವರು ತಮ್ಮ ಉತ್ತರಾಧಿಕಾರಿಯಾಗಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯಂತಹ ಸಂತರತ್ನವನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ.
(ಲೇಖಕರು ಪತ್ರಕರ್ತರು)
ಖ್ಯಾತ ಗಾಯಕನ ಆಸ್ತಿಯೇ ಒತ್ತುವರಿ; ಭೂಮಾಫಿಯಾಗೆ ಕೈಜೋಡಿಸಿದ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ!?

ರಾಜ್ಯಾದ್ಯಂತ ಗುಡುಗು-ಮಿಂಚುಸಹಿತ ಭಾರಿ ಮಳೆ; ಯಾವ್ಯಾವಾಗ ಎಲ್ಲೆಲ್ಲಿ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 − 3 =
Remember me
