|ಡಾ. ವಿದ್ಯಾ ಪಾಟೀಲ
ಬಯಲು ಬಯಲನ ಬಿತ್ತಿ ಬಯಲು ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾಯಿತ್ತಯ್ಯ ಎಂಬ ಅಲ್ಲಮ ಪ್ರಭುದೇವರ ವಾಣಿಯಂತೆ ಸಿದ್ಧೇಶ್ವರ ಶ್ರೀಗಳು ನಿತ್ಯ ನಿರಂಜನ ಬಯಲನ್ನು ಅರಿತು ಆ ಅನಂತ ಶಾಂತಿಯ ನೆಲೆಯನ್ನು ಕಂಡುಂಡು ಅದನ್ನು ಸಮರಸ ಭಾವದಿಂದ ಅನುಭವಿಸಿ ಶಿಷ್ಯವರ್ಗಕ್ಕೆ ತಮ್ಮ ಅನುಭಾವದ ಅಡುಗೆಯನ್ನು ಉಣ ಬಡಿಸಿದ್ದರು.
ಗುರುಗಳು ಬ್ರಹ್ಮಾಂಡದ ತುಂಬೆಲ್ಲ ಓತಪೋ›ತವಾಗಿ ತುಂಬಿರುವ ದೇವನನ್ನು ಪಂಚಭೂತಾತ್ಮಕ ಸೃಷ್ಟಿಯಲ್ಲಿ ಮತ್ತು ಆತ್ಮ ಚೈತನ್ಯದಲ್ಲಿ ದೇವನ ನೆಲೆಯನ್ನು ಕಂಡು ಗುರುತಿಸಿ, ನಿಸರ್ಗದಲ್ಲಿ ದೇವನನ್ನು ಕಾಣಬೇಕೆಂದು ಹೇಳುತ್ತಿದ್ದರು. ಕವಿ ರವೀಂದ್ರರ ನಿಸರ್ಗ ಪ್ರೇಮವನ್ನು ದೈವಿಕತೆಯ ನೆಲೆಯಲ್ಲಿ ಹೇಳಿದ ಗೀತೆಗಳನ್ನು ಅವರ ಪ್ರವಚನಗಳಲ್ಲಿ ಮೆಲುಕು ಹಾಕುತ್ತಾ ಪ್ರಕೃತಿಯಲ್ಲಿ ದೈವಿ ಸ್ವರೂಪವನ್ನು ಕಂಡು ಆರಾಧಿಸಬೇಕೆಂದು ಹೇಳುತ್ತಿದ್ದರು.
ನಿಸರ್ಗದಲ್ಲಿನ ಹೂವು, ಹಣ್ಣು, ಪಕ್ಷಿ, ಪ್ರಾಣಿ, ಗಿಡ-ಮರಗಳು, ನೆಲ-ಜಲ, ಬೆಟ್ಟಗುಡ್ಡ, ಸೂರ್ಯ, ಚಂದ್ರ, ನಕ್ಷತ್ರಗಳು, ಕೆಲವೊಮ್ಮೆ ಪ್ರವಚನದಲ್ಲಿ ಹಕ್ಕಿಗಳ ಇಂಚರ ಮತ್ತು ಚಂದ್ರನ ಹುಣ್ಣಿಮೆಯ ಬೆಳದಿಂಗಳನ್ನು ನಮ್ಮ ಕೈಯಲ್ಲಿ ತಂದುಕೊಟ್ಟವರಂತೆ ಮಾಡುತ್ತಿದ್ದರು. ಇತ್ತೀಚಿನ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಂಶೋಧನೆಗಳನ್ನು ಅರಿತು ತಮ್ಮ ಪ್ರವಚನಗಳಲ್ಲಿ ಹೇಳುತ್ತಾ ವಿಜ್ಞಾನ ಮತ್ತು ಧರ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎನ್ನುತ್ತಿದ್ದರು. ರಸಾಯನ ಶಾಸ್ತ್ರ ಮತ್ತು ಭೌತಶಾಸ್ತ್ರಗಳನ್ನು ಆಳವಾಗಿ ತಿಳಿದಿದ್ದರು.
ಗಣಿತ ಗುರೂಜಿಯವರಿಗೆ ಬಹುಪ್ರಿಯ. ಯುಕ್ತಿಯ ಸದ್ಬಳಕೆ, ಚಿಂತನಾಶೀಲತೆ ಇವುಗಳೆಲ್ಲವೂ ಒಳಗೊಂಡು ಸತ್ಯದ ಹಾದಿಯನ್ನು ಗಟ್ಟಿಗೊಳಿಸಬಲ್ಲವೂ ಎಂಬುದು ಅವರ ನಿಲುವಾಗಿತ್ತು. ಗಣಿತವನ್ನು ದೇವ ಭಾಷೆ ಎನ್ನುತ್ತಿದ್ದರು. ತಮ್ಮ ಪ್ರವಚನಗಳಲ್ಲಿ ಎಲ್ಲಿಯಾದರೂ ಒಂದೆಡೆ ಗಣಿತದ ವಿಷಯ ಪ್ರಸ್ತಾಪಿಸುತ್ತಿದ್ದರು.
ಶಿಷ್ಯ ವರ್ಗಕ್ಕೆ ಸಿದ್ಧೇಶ್ವರರು ನೆಚ್ಚಿನ ಬುದ್ಧಿಜೀ ಆಗಿದ್ದರು. ತಮ್ಮ ಪ್ರವಚನದ ವಾಣಿಯಿಂದ ಎಲ್ಲರ ಮನಸ್ಸನ್ನು ಮಂತ್ರ ಮುಗ್ಧರನ್ನಾಗಿಸಿ ಪ್ರಶಾಂತಿಯ ಕಡೆಗೆ ಕೊಂಡೊಯ್ಯುತ್ತಿದ್ದರು. ನಿಜ ನೆಲೆಯಲ್ಲಿ ಕೆಲ ಕಾಲ ನಿಲ್ಲುವಂತೆ ಮಾಡುತ್ತಿದ್ದರು. ಸ್ಮೃ, ಶೃತಿಗಳ ಜ್ಞಾನ ಮತ್ತು ಬ್ರಹ್ಮನಿಷ್ಟುತ್ವದ ಅಧಿಕಾರಿಯಾಗಿದ್ದರು. ಕೇವಲ ಅವರ ಪ್ರವಚನದ ನುಡಿಗಳಿಂದಲೇ ಶ್ರವಣ ಸಿದ್ಧಿಯನ್ನು ಎಲ್ಲರಿಗೂ ಮಾಡಿಸುತ್ತಿದ್ದರು. ಪೂಜ್ಯ ಸಿದ್ಧೇಶ್ವರರಲ್ಲಿ ಬುದ್ಧ, ಬಸವಣ್ಣ, ಮಹಾವೀರ, ರಾಮಕೃಷ್ಣ ಪರಮಹಂಸರಂತಹ ತಪಸ್ವಿಗಳನ್ನು ಕಂಡರೆ ಮತ್ತೊಂದೆಡೆ ಸಾಕ್ರೆಟಿಸ್, ಪ್ಲೇಟೊ, ಅರಿಸ್ಟಾಟಲರಂತಹ ತತ್ವಜ್ಞಾನಿಗಳನ್ನು, ಆರ್ಯಭಟ್ಟ, ಭಾಸ್ಕರಾಚಾರ್ಯ, ನ್ಯೂಟನ್ ಅವರಂತಹ ವಿಜ್ಞಾನಿಗಳನ್ನು ಕಾಣಬಹುದು. ಎಲ್ಲ ವಿಷಯಗಳ ಅಮೂಲಾಗ್ರ ಜ್ಞಾನವನ್ನು ಹೊಂದಿದ್ದರು ಪೂಜ್ಯರು.
ವೇದ ಮತ್ತು ಉಪನಿಷತ್ತುಗಳು ಕೇವಲ ಸಂಸ್ಕೃತ ಬಲ್ಲವರಷ್ಟೇ ತಿಳಿಯಬೇಕೆನ್ನುವ ಕಾಲಘಟ್ಟದಲ್ಲಿ ಅವುಗಳ ಬಗೆಗೆ ಜನಸಾಮಾನ್ಯರಿಗೂ ತಿಳಿಸಿ ಎಲ್ಲರನ್ನೂ ಅರಿವಿನ ಮಹಾಂತರನ್ನಾಗಿ ಮಾಡಿದರು. ಋಷಿಗಳು ಶಿಷ್ಯರನ್ನು ಜೀವನದ ಕ್ಷೇತ್ರಕ್ಕೆ ಕಳಿಸುವಲ್ಲಿ ಆತನಿಗೆ ಜೀವನದ ಎಲ್ಲ ಪಾಠವನ್ನು ಕಲಿಸಿ ಕಳುಹಿಸುತ್ತಿದ್ದರು. ಗುರುವಾದವನು ಪೂರ್ಣ ಜ್ಞಾನವನ್ನು ಹೊಂದಿ ಶಿಷ್ಯನಿಗೆ ನಿರಪೇಕ್ಷೆಯಿಂದ ಅದೆಲ್ಲವನ್ನೂ ನೀಡಬೇಕು. ಹೀಗೆ ಹೇಳುವಲ್ಲಿ ಅವರೊಬ್ಬ ನಿರಾಭಾರಿ ಋಷಿ ಎನಿಸುತ್ತಿದ್ದರು. ಗಾರ್ಗೆ ಮೈತ್ರಿ, ಸೀತೆಯ ಕಷ್ಟ ಕಾರ್ಪಣ್ಯಗಳನ್ನು ಧೈರ್ಯದಿಂದ ಎದುರಿಸಿದ ಬಗೆಯನ್ನು ಹೇಳಿ, ಅಕ್ಕಮಹಾದೇವಿಯ ದಿಟ್ಟತನ, ಶಾರದಾ ತಾಯಿಯ ಸಾಧನೆಯನ್ನು ಹೇಳುತ್ತಾ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಪುಟ್ಟದೆಬ್ಬಿಸುತ್ತಿದ್ದರು. ಬಾಬಾ ರಾಮತೀರ್ಥರು, ಸ್ವಾಮಿ ವಿವೇಕಾನಂದ, ಗಾಂಧಿಯವರ ದೇಶ ಪ್ರೇಮವನ್ನು ಹೇಳುತ್ತಾ ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಪರಾಕಾಷ್ಠೆಯನ್ನು ತುಂಬುತ್ತಿದ್ದರು. ಮನೆ-ಮನಸ್ಸು ಹೇಗಿರಬೇಕು ಎಂದು ಹೇಳುತ್ತಾ ಅಂತರಂಗ, ಬಹಿರಂಗ ಶುಚಿಯಾಗಿಟ್ಟುಕೊಳ್ಳುವ ಬಗೆಯನ್ನು ತಿಳಿಯಾಗಿ ತಿಳಿಸುತ್ತಿದ್ದರು. ರೈತರೆಂದರೆ ಗುರೂಜಿಯವರಿಗೆ ಅಚ್ಚುಮೆಚ್ಚು. ಮಣ್ಣು ನಮ್ಮ ನಿಜವಾದ ಧರ್ಮವೆಂದು ಹೇಳುತ್ತಿದ್ದರು. ಧರ್ಮ ಜಾತಿಗಳ ವಿಷಯದಲ್ಲಿ ಹೊಡೆದಾಡದೆ ಎಲ್ಲರೂ ಒಂದೇ ಎಂಬ ವಿಶ್ವಮಾನವ ತತ್ತ್ವವನ್ನು ಸಾರಿದರು. ರೈತರ ಶ್ರಮ ಜೀವನದ ಮೇಲೆ ದೇಶದ ಭವಿಷ್ಯವಿದೆ. ರೈತರು ನಿಜವಾದ ಯೋಗಿಗಳು ಎಂದು ಹೇಳಿ ಅವರಲ್ಲಿ ಅಗಾಧವಾದ ಅಭಿಮಾನವನ್ನು ತುಂಬುತ್ತಿದ್ದರು.
ವಿದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡುವ ಬದಲು ಸ್ವದೇಶದಲ್ಲಿ ವ್ಯವಸಾಯ, ಸ್ವಂತ ದುಡಿಮೆ ಮಾಡಿ ಯಾರಿಗೂ ಕೈ ಚಾಚಿದ ಸ್ವಂತಿಕೆಯನ್ನು ಬೆಳೆಸಲು ಯುವ ಪೀಳಿಗೆಯನ್ನು ಪ್ರೋತ್ಸಾಹಿಸುತ್ತಿದ್ದರು. ಯುವಕರಿಗೆ ದುಶ್ಚಟಗಳಿಗೆ ಬಲಿಯಾಗದ, ಸರಳವಾದ ಜೀವನ ನಡೆಸಲು ಹೇಳಿದರು. ಹಿರಿಯರನ್ನು ನೋಡಿಕೊಳ್ಳುವ ಪರಿ ಮತ್ತು ಸಂಸಾರದಲ್ಲಿ ಸತಿಪತಿಗಳು ಹೇಗೆ ಅನ್ಯೋನ್ಯವಾಗಿ ಜೀವನ ನಡೆಸಬೇಕೆಂಬುದನ್ನು ತಿಳಿಸಿಕೊಟ್ಟರು.
ಮಿತ ಆಹಾರ, ಶುಚಿತ್ವದ ಬಗ್ಗೆ ಮಾತನಾಡುವುದಲ್ಲದೆ, ಸ್ವತಃ ಆಚರಣೆಯಲ್ಲಿ ತಂದು ರಾಜಕಾರಣಿಗಳಿಗೆ ನೀತಿ ಮಾರ್ಗದಲ್ಲಿ ಸಾಗಲು ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸಲು ರ್ಚಚಿಸುತ್ತಿದ್ದರು. ಗುರುವಾಗಿ, ಅಪ್ಪಾಜಿ ಎಲ್ಲರಿಗೂ ಪ್ರಿಯರು. ಶಿಷ್ಯರೊಂದಿಗೆ ಪರಮ ಜ್ಞಾನವನ್ನು ಹಂಚಿಕೊಳ್ಳುವ ಗುರುವರ್ಯರು ಇಂದಿನ ದಿನಗಳಲ್ಲಿ ಬಹು ವಿರಳ. ಆದರೆ, ಅಪ್ಪಾಜಿ ಅವರು ತಾವು ಕಂಡುಕೊಂಡ ಸತ್ಯದ ಸಮ್ಯಕ್ ಜ್ಞಾನವನ್ನು ಶಿಷ್ಯ ವೃಂದಕ್ಕೆ ನೀಡಿ ಮುಂದಿನ ಪೀಳಿಗೆ ಆ ಜ್ಞಾನವನ್ನು ಹೊಂದಿ ಸುಖಮಯವಾದ ಜೀವನವನ್ನು ನಡೆಸಲು ನಮಗೆಲ್ಲರಿಗೂ ಕಲಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಅಪ್ಪಾಜಿಯವರ ಮಾತುಗಳು ತಾಯಿಯಂತೆ ಮತ್ತು ಕೆಲವೊಮ್ಮೆತಂದೆ ಹೇಳಿದ ದಿಟ್ಟ ನಿಲುವಿನ ಸತ್ಯದ ಹಾದಿಯಲ್ಲಿ ನಡೆಯಲು ದೀಪಗಳಂತೆ ಕಂಡುಬರುತ್ತವೆ. ಇಂದಿನ ಪೀಳಿಗೆಗೆ ಗುರೂಜಿಯವರ ಪ್ರವಚನ ವ್ಯಕ್ತಿತ್ವ ನಿರ್ವಣದ ಅತ್ಯುತ್ತಮ ಪಠ್ಯ. ಅವರ ಪ್ರವಚನವು ಮಕ್ಕಳಲ್ಲಿ ವಿದ್ಯೆಯಲ್ಲಿ ಶ್ರದ್ಧೆ, ಜ್ಞಾನ ದಾಹ, ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಿ ಅವರನ್ನು ಸಚ್ಚಾರಿತ್ರರನ್ನಾಗಿ ರೂಪಿಸಬಲ್ಲದು ಎಂದೆನಿಸುತ್ತದೆ.
ಬದುಕು ಸುಂದರ, ಭವ್ಯ ವೈಭವವಾಗಿರಬೇಕೆಂದು ಸರಳತೆಯ ಸಾಕಾರ ಮೂರ್ತಿಯಾಗಿ, ಎಲ್ಲರೂ ನೂರು ವರ್ಷಗಳ ಕಾಲ ಆನಂದವಾಗಿರಬೇಕು ಎಂದು ಹೇಳುತ್ತಾ ಬಾಹ್ಯ ಶುಚಿ ಮತ್ತು ಅಂತರಂಗದ ಶುಚಿಯ ಬಗ್ಗೆ ಹೇಳಿ ಬದುಕುವ ಕಲೆಯನ್ನು ಸಾಮಾನ್ಯನಿಗೂ ತಿಳಿಯಪಡಿಸಿದರು. ಬದುಕನ್ನು ಪ್ರೀತಿಸುವ ಮತ್ತು ಬದುಕನ್ನು ಬೆಳಗಿಸುವ ಎರಡು ಕ್ರಿಯೆಗಳು ಆಗಬೇಕು ಎಂಬುದು ಅವರ ಆಶಯವಾಗಿತ್ತು. ಗುರೂಜಿಯವರು ಸತತ 50 ವರ್ಷಗಳ ಕಾಲ ಪ್ರವಚನ ಮಾಡುತ್ತಾ ಜನಮಾನಸದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಜೀವನದುದ್ದಕ್ಕೂ ಕಾಯಕ ಮಾಡಿ ಪ್ರಸಾದ ಸೇವಿಸಬೇಕೆಂಬ ನಿಶ್ಚಲ ಮನಸ್ಸು, ಯಾವ ಆಸೆ ಆಮಿಷಗಳಿಗೆ ಹೋಗದ ನಿಮೋಹಿಗಳಾಗಿದ್ದರು.
ಸಾಗರದಾಚೆ ಪ್ರವಚನಗಳನ್ನು ಮಾಡಿ ಪಾಶ್ಚಿಮಾತ್ಯರಲ್ಲಿ ಭಾರತದ ಆಧ್ಯಾತ್ಮಿಕ ಸಂಸ್ಕೃತಿಯನ್ನು ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸರಳ ನಡೆ ನುಡಿಗೆ ಮಾರು ಹೋಗದವರೇ ಇಲ್ಲ. ಸದ್ಭಾವದಿಂದ ಸಿದ್ಧಪುರುಷರಾದರು.
‘ಊರಿಂಗೆ ದಾರಿಯನು ಯಾರು ತೋರಿದರೇನು’ ಎಂಬ ಸರ್ವಜ್ಞನ ನುಡಿಗಳಂತೆ ಆತ್ಮಜ್ಞಾನದ ಚಿಂತನೆಯೇ ಆಗಿರಲಿ, ಜೀವನದ ಮಾರ್ಗದರ್ಶನವಾಗಲಿ, ಜಗತ್ತಿನ ಯಾವ ಧರ್ಮವೇ ನೀಡಲಿ, ಯಾವ ಸಂತರೇ ನೀಡಲಿ. ಏಕೋ ಭಾವದಿಂದ ಏಕೋ ದೇವ ಎಂಬ ತತ್ವದಲ್ಲಿ ಸಮೀಕರಿಸಿ ನಡೆದು ಹೋಗಬೇಕಪ್ಪ, ಸದ್ವಿಚಾರಗಳನ್ನು ಹಂಚಿಕೊಳ್ಳುವುದು ಧರ್ಮವೆಂದು ಹೇಳಿ, ಧರ್ಮದ ನಿಜ ವ್ಯಾಖ್ಯಾನವನ್ನು ಸಾರಿದರು. ಯಾವ ಧರ್ಮದ ಕಟ್ಟು ಪಾಡಿಗೂ ಸಿಲುಕದೆ ಜಗತ್ತಿನ ಎಲ್ಲ ಸಂತರ, ಮಹಾತ್ಮರ ವಿಚಾರಗಳು ನಮ್ಮ ಬದುಕನ್ನು ಭವ್ಯಗೊಳಿಸಲಿ. ಭಿನ್ನ ಭೇದ ಇವುಗಳಲ್ಲಿ ಸಲ್ಲದು ಎಂದು ನುಡಿದಂತೆ ನಡೆದು ತೋರಿದ ನಿಜದ ನೆಲೆಯ ಅರಿತ ಏಕೈಕ ಶತಮಾನದ ಸಂತ ನಮ್ಮ ಪೂಜ್ಯ ಗುರುಗಳು ಗುರುಸಿದ್ಧೇಶ್ವರರು.
(ಲೇಖಕರು ಬೆಂಗಳೂರಿನ ಆರ್.ವಿ. ತಾಂತ್ರಿಕ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು)
ವರ್ಕೌಟ್​ ಆದ 50% ಆಫರ್​: ಮೂರನೇ ದಿನವೂ ಕೋಟಿಗಟ್ಟಲೆ ಟ್ರಾಫಿಕ್​ ಫೈನ್​ ಸಂಗ್ರಹ; ಒಟ್ಟು ಮೊತ್ತವೆಷ್ಟು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
