|ಪ್ರೊ.ಎಸ್.ಡಿ. ಶಶಿಕಲಾ
ಕನ್ನಡ ಸಾರಸ್ವತ ಲೋಕದ ಬಹುದೊಡ್ಡ ವಿದ್ವಾಂಸರಾದ ತೀನಂಶ್ರೀ ಅವರನ್ನು ಸ್ಮರಿಸುವ ಮೂಲಕ ಅವರ ಸಾಹಿತ್ಯಿಕ ಸಾಧನೆಗಳನ್ನು ಮನನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಅವರ ಪೂರ್ಣ ಹೆಸರು ತೀರ್ಥಪುರದ ನಂಜುಂಡಯ್ಯ ಶ್ರೀಕಂಠಯ್ಯ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರ ಎನ್ನುವ ಹಳ್ಳಿಯ ಶಾನುಭಾಗ ಕುಟುಂಬ ಅವರದು. ಅವರ ತಂದೆ ಶಾನುಭಾಗ ನಂಜುಂಡಯ್ಯನವರು, ತಾಯಿ ಭಾಗೀರಥಮ್ಮ. ಹುಟ್ಟಿದ ಒಂಬತ್ತು ವರ್ಷಕ್ಕೆ ತಾಯಿಯನ್ನು ಕಳೆದುಕೊಂಡ ತೀನಂಶ್ರೀಯವರು ಸೋದರಿ, ಸೋದರತ್ತೆಯ ಒಡನಾಟ ಮತ್ತು ಆರೈಕೆಯಲ್ಲಿ ಬೆಳೆದರು. ತೀರ್ಥಪುರ, ಚಿಕ್ಕನಾಯಕನಹಳ್ಳಿ, ಬೆಂಗಳೂರು, ತುಮಕೂರು ಮತ್ತು ಮೈಸೂರಿನಲ್ಲಿ ಬಾಲ್ಯದ ವಿದ್ಯಾಭ್ಯಾಸ ಮತ್ತು ಉನ್ನತ ಶಿಕ್ಷಣ ಪಡೆದರು. ಕನ್ನಡದೊಂದಿಗೆ ಸಂಸ್ಕೃತ, ಇಂಗ್ಲಿಷ್ ಭಾಷೆಗಳ ಅಧ್ಯಯನ ಮಾಡುವುದರೊಂದಿಗೆ ಈ ಭಾಷೆಗಳ ಸಾಹಿತ್ಯವನ್ನೂ ಅಭ್ಯಸಿಸಿದರು. ಎಂ. ಹಿರಣ್ಣಯ್ಯ, ಬಿಎಂಶ್ರೀ, ಟಿ.ಎಸ್. ವೆಂಕಣ್ಣಯ್ಯ ಮೊದಲಾದವರು ಇವರ ಗುರುಗಳಾಗಿದ್ದರು.
1926ರಲ್ಲಿ ತುರುವೆಕೆರೆಯ ಜಯಲಕ್ಷ್ಮೀ ಅವರೊಂದಿಗೆ ಅವರ ವಿವಾಹವಾಯಿತು. ನಾಗರತ್ನ, ನಾಗಭೂಷಣ ಅವರ ಮಕ್ಕಳು. ಅಧ್ಯಾಪಕರಾಗಿ ಮಹಾರಾಜ ಕಾಲೇಜನ್ನು ಸೇರಿದಾಗ ಪೊ›. ರಾಲೋ, ಪೊ›. ವೆಂಕಟೇಶ್, ಪೊ›. ರಾಧಾಕೃಷ್ಣನ್, ಪೊ›. ವಾಡಿಯಾ, ಪೊ›. ಹಿರಿಯಣ್ಣ, ಪೊ›. ಟಿ.ಎಸ್. ವೆಂಕಣ್ಣಯ್ಯ, ಆಚಾರ್ಯ ಬಿಎಂಶ್ರೀ ಮೊದಲಾದ ವಿದ್ವಾಂಸರ ಸಂಗ ದೊರೆಯಿತು. ಕನ್ನಡದ ಕೆಲಸಗಳಿಗೆ ತಮ್ಮನ್ನು ತಾವು ತೇಯ್ದುಕೊಳ್ಳುವ ವಾತಾವರಣ ತೀನಂಶ್ರೀಗೆ ದೊರೆಯಿತು. ಪೊ›. ಮೂರ್ತಿರಾವ್, ಪೊ›. ನರಸಿಂಹಾಚಾರ್, ಎ.ಆರ್. ಕೃಷ್ಣಶಾಸ್ತ್ರಿ ಮೊದಲಾದವರ ಸ್ನೇಹ ಸಿಂಚನವೂ ಲಭ್ಯವಾಯಿತು.
ತೀನಂಶ್ರೀ ಹಲವಾರು ಹುದ್ದೆಗಳನ್ನು ನಿರ್ವಹಿಸಿ ಅಧ್ಯಾಪಕರಾದರು. ಕಂದಾಯ ಇಲಾಖೆಯಲ್ಲಿ (ಸಿವಿಲ್ ಸರ್ವಿಸ್) ಉದ್ಯೋಗ ಆರಂಭಿಸಿ ಅಮಲ್ದಾರ್ ಹುದ್ದೆ ನಿರ್ವಹಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಭಾಷಾವಿಜ್ಞಾನದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇದರಿಂದ ಸುನೀತಿ ಕುಮಾರ್ ಚಟರ್ಜಿ, ಎಂ.ಬಿ. ಎಮಿನೋ ಅವರ ಸಂಪರ್ಕ ಸಾಧ್ಯವಾಯಿತು. ಅಮೆರಿಕದ ಮಿಶಿಗನ್ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯಗಳಲ್ಲಿ ಅಮೆರಿಕದ ರಾಕ್ ಫೆಲರ್ ಪ್ರತಿಷ್ಠಾನದ ಗೌರವ ವೇತನದಿಂದಾಗಿ ವಿದೇಶಕ್ಕೆ ತೆರಳುವ ಅವಕಾಶ ಸೃಷ್ಟಿಯಾಯಿತು. 1955-56ರ ಎಂಟು ತಿಂಗಳ ಅಧ್ಯಯನದ ನಂತರ ಇಂಗ್ಲೆಂಡ್, ಫ್ರಾನ್ಸ್, ಇಟಲಿ ಮೊದಲಾದ ದೇಶಗಳಿಗೂ ಭೇಟಿ ನೀಡಿದರು.
ಮಹಾರಾಜ ಕಾಲೇಜಿಗೆ ಪ್ರಾಧ್ಯಾಪಕರಾಗಿ ಹಿಂದಿರುಗಿದ ತೀನಂಶ್ರೀ ಅವರು ಅಲ್ಲಿ ನಡೆಯುತ್ತಿದ್ದ ಕನ್ನಡ ಸ್ನಾತಕೋತ್ತರ ಕೇಂದ್ರವನ್ನು ಮಾನಸಗಂಗೋತ್ರಿಯ ಆವರಣಕ್ಕೆ ತಂದರು. ಮೂವತ್ನಾಲ್ಕು ವರ್ಷಗಳ ಸುದೀರ್ಘ ಸೇವಾವಧಿಯ ನಂತರ 1962 ನೆಯ ಮಾರ್ಚ್ ತಿಂಗಳಿನಲ್ಲಿ ನಿವೃತ್ತರಾದರು. ನಿವೃತ್ತ ಜೀವನವನ್ನು ಪತ್ನಿಯೊಂದಿಗೆ ಮಗಳು-ಅಳಿಯ, ಮಗ-ಸೊಸೆಯರ ಸಮ್ಮುಖದಲ್ಲಿ ಕಳೆದರು. 1966ರ ಸೆಪ್ಟೆಂಬರ್ 7ರಂದು ನಿಧನರಾದರು.
ಸಾಹಿತ್ಯ ಸೇವೆ: ಸುಮಾರು 60 ವರ್ಷಗಳ ಅವರ ಜೀವಿತಾವಧಿಯಲ್ಲಿ ಮಾಡಿದ ಸಾಹಿತ್ಯ ಸೇವೆ ಮಹತ್ವಪೂರ್ಣವಾದುದು. ಸೃಜನಶೀಲ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಒಲುಮೆ ಎಂಬ ಕವನ ಸಂಕಲನವನ್ನು 1932ರಲ್ಲಿ ಪ್ರಕಟಿಸಿದರು. ಕನ್ನಡದ ಪ್ರೇಮಗೀತೆಗಳ ಸಂಕಲನ ಇದಾಗಿದ್ದು, ಈ ಕೃತಿಗೆ ಬಿ.ಎಂ.ಶ್ರೀ, ಮಾಸ್ತಿಯವರ ಪೋ›ತ್ಸಾಹ ದೊರೆಯಿತು. ಪ್ರಶಂಸೆಗೆ ಪಾತ್ರವಾಯಿತು. 1962ರಲ್ಲಿ ಪ್ರಕಟವಾದ ನಂಟರು ಪ್ರಬಂಧ ಸಂಕಲನದಲ್ಲಿ ತಾರೆಗಳು, ಕಾಸಿನ ಸಂಘ, ನೇಗಡಿ ತಗುಣಿ, ಮಮತೆ, ಮನೆಗಳು ಮೊದಲಾದ ಶೀರ್ಷಿಕೆಯ ಪ್ರಬಂಧಗಳಿದ್ದು ಹಾಸ್ಯ, ಗಂಭೀರ ಶೈಲಿಯಲ್ಲಿ ಮೂಡಿವೆ. ಅನುವಾದಕರಾಗಿಯೂ ಕಾಣಬರುವ ತೀನಂಶ್ರೀ ವಿಶಾಖದತ್ತನ ‘ಮುದ್ರಾರಾಕ್ಷಸ’ದ ರೂಪಾಂತರವಾಗಿ ’ರಾಕ್ಷಸನ ಮುದ್ರಿಕೆ’ಯನ್ನು ಪ್ರಕಟಿಸಿದರು.
ಶಾಸ್ತ್ರಕ್ಕೆ ಸಂಬಂಧಿಸಿದಂತೆ ಅವರು 1953ರಲ್ಲಿ ಮೊದಲಿಗೆ ಪ್ರಕಟಿಸಿದ ‘ಭಾರತೀಯ ಕಾವ್ಯ ಮೀಮಾಂಸೆ’ ಕೃತಿ ಕಾವ್ಯದ ಸ್ವರೂಪ, ಲಕ್ಷಣ, ಕಾವ್ಯದ ಪ್ರಯೋಜನ, ಪರಿಕರ, ರಸ, ಧ್ವನಿ, ಅಲಂಕಾರ, ಔಚಿತ್ಯ, ಕವಿಕಾವ್ಯ ಸಹೃದಯ…. ಹೀಗೆ ಹಲವು ವಿಚಾರಗಳ ಕುರಿತ ಬರಹಗಳನ್ನು ಒಳಗೊಂಡಿವೆ. ತೀನಂಶ್ರೀ ಅದಕ್ಕೆ ಪೂರಕ ಪಠ್ಯವನ್ನು, ಸಂಸ್ಕೃತ ಮತ್ತು ಕನ್ನಡ ಕಾವ್ಯ ನಾಟಕಗಳಿಂದ ಆಯ್ದುಕೊಂಡು ವ್ಯಾಖ್ಯಾನಿಸವು ತೀನಂಶ್ರೀ ವ ಕ್ರಮ ಅವರ ವಿಸ್ತಾರವಾದ ಓದು, ಆಳವಾದ ಪಾಂಡಿತ್ಯವನ್ನು ಸಾಕ್ಷೀಕರಿಸುತ್ತದೆ. 1939ರಲ್ಲಿ ಪ್ರಕಟಗೊಂಡ ‘ಕನ್ನಡ ಮಾಧ್ಯಮ ವ್ಯಾಕರಣ’ ಎಂಥವರಿಗೂ ಅಗುವಂತೆ ಬರೆದಿದ್ದಾರೆ.
ಸಂಪಾದನೆಗೆ ಸಂಬಂಧಿಸಿದಂತೆ ತೀನಂಶ್ರೀ ಅವರ ವಿದ್ವತ್ ಪೂರ್ಣ ಕೃತಿಯೆಂದರೆ ‘ರನ್ನ ಕವಿಯ ಗದಾಯುದ್ಧ ಸಂಗ್ರಹಂ’. ರನ್ನನ ಮೂಲ ಕಾವ್ಯಕ್ಕೆ ಚ್ಯುತಿಬಾರದಂತೆ ಸಂಪಾದಿಸಿರುವ ಕೃತಿ ಇದು. ಹಳೆಗನ್ನಡದ ಈ ಪ್ರಾಚೀನ ಕಾವ್ಯವನ್ನು ಓದುವವರಿಗೆ ಅವರು ಕೊಟ್ಟಿರುವ ಶಬ್ದಕೋಶಸಹಿತ ವ್ಯಾಖ್ಯಾನವು ಮಹತ್ವಪೂರ್ಣದ್ದಾಗಿದೆ. 1946ರಲ್ಲಿ ಪ್ರಕಟಿಸಿದ ‘ಹರಿಹರ ಕವಿಯ ನಂಬಿಯಣ್ಣನ ರಗಳೆ’ ಮತ್ತೊಂದು ಅವರ ಸಂಪಾದಿತ ಕೃತಿ. ಈ ಗ್ರಂಥ ಸಂಪಾದನೆಯ ಸಂದರ್ಭದಲ್ಲಿ ಬಿಎಂಶ್ರೀ ಮತ್ತು ಡಿ.ಎಲ್. ನರಸಿಂಹಾಚಾರ್ಯರ ಪೋ›ತ್ಸಾಹ ತೀನಂಶ್ರೀಗೆ ದೊರೆಯಿತು. ಈ ಗ್ರಂಥ ಸಂಪಾದನೆಗೆ ವೀರಶೈವ ಸಾಹಿತ್ಯದ ಅವರ ಆಸಕ್ತಿ ಕಾರಣವಾಗಿದೆ. ವಿಶೇಷ ಪರಿಶ್ರಮದಿಂದ ಓಲೆ ಮತ್ತು ಹಸ್ತಪ್ರತಿಗಳನ್ನು ಅಧ್ಯಯನ ಮಾಡಿ ಅಚ್ಚುಕಟ್ಟಾಗಿ ಸಂಪಾದಿಸಿದ್ದಾರೆ. ತೀನಂಶ್ರೀಯವರ ಆಯ್ದ ಜನಪದ ಗೀತೆಗಳ ಸಂಗ್ರಹ ‘ಹೆಣ್ಣುಮಕ್ಕಳ ಪದಗಳು’ ಜನಪದ ಮಹಿಳೆಯರ ಅಂತರಂಗದ ಕಷ್ಟ-ಸುಖ-ತಳಮಳಗಳನ್ನು ಹೇಳುವ ಈ ಗೀತೆಗಳು ಗರತಿಯ ಹಾಡುಗಳೆಂದೇ ಪ್ರಸಿದ್ಧಿಯಾಗಿವೆ.
ತೀನಂಶ್ರೀಯವರ ‘ವಿಮರ್ಶೆ’ಗೆ ಸಂಬಂಧಿಸಿದಂತೆ ‘ಪಂಪ’ ಕೃತಿ 1939ರಲ್ಲಿ ಪ್ರಕಟವಾಗಿದೆ. ಮೈಸೂರು ವಿವಿಯ ಪ್ರಚಾರೋಪನ್ಯಾಸ ಮಾಲೆಗಾಗಿ ಸಿದ್ಧಪಡಿಸಲಾದ ಕೃತಿ. ಪಂಪನ ಕಾವ್ಯಗಳ ಬಗ್ಗೆ ಪ್ರಾಥಮಿಕ ಮಾಹಿತಿಯಿಂದ ವಿಸ್ತಾರ-ವ್ಯಾಪ್ತಿಯ ಮಹತ್ತುಗಳವರೆಗೆ ತಿಳಿಯಬಯಸುವವರಿಗೆ ಈ ಕೃತಿ ಉಪಯುಕ್ತವಾಗಿದೆ. ‘ಕಾವ್ಯ ಸಮೀಕ್ಷೆ’ 1947ರಲ್ಲಿ ಪ್ರಕಟವಾಗಿದ್ದು ಐದು ಸಮೀಕ್ಷಾ ಲೇಖನಗಳನ್ನೊಳಗೊಂಡಿದೆ.
ಕಾಳಿದಾಸನ ನಾಟಕಗಳಲ್ಲಿ ದುರಂತ ವಸ್ತುವಿನ್ಯಾಸ, ಮಹದೇವಿಯಕ್ಕನ ಕೆಲವು ವಚನಗಳು… ಮೊದಲಾದವು ‘ಸಮಾಲೋಕನ’ ಎಂಬ ಮತ್ತೊಂದು ವಿಮರ್ಶಾಕೃತಿ 1958ರಲ್ಲಿ ಪ್ರಕಟವಾಗಿದ್ದು 25 ಲೇಖನಗಳನ್ನು ಒಳಗೊಂಡಿದೆ. ಭಾಷೆ, ವ್ಯಾಕರಣ, ಛಂದಸ್ಸು, ಇಂಗ್ಲಿಷ್ ಗೀತೆಗಳು, ಅಹಲ್ಯೆ ಮೊದಲಾದ ವಿಷಯ ಕೃತಿಗಳನ್ನು ಕುರಿತದ್ದಾಗಿವೆ. ಹಲವು ಪತ್ರಿಕೆಗಳಿಗೆ ಬರೆದ ವಿಮರ್ಶೆ, ಪ್ರಸ್ತಾವನೆ, ಉಪನ್ಯಾಸಗಳು ಬರಹ ರೂಪದೊಂದಿಗೆ ಮೂಡಿಬಂದಿವೆ. 1970ರ ‘ಕಾವ್ಯಾನುಭವ’ ಮತ್ತೊಂದು ವಿಮರ್ಶಾ ಕೃತಿಯಾಗಿದ್ದು, ಚತ್ತಾಣ ಮತ್ತು ಬೆದಂಡೆ, ಗದಾಯುದ್ಧವೂ ಸ್ವೀಕರಣ ವಿಚಾರವೂ ಮೊದಲಾದ ಲೇಖನಗಳೊಂದಿಗೆ ಪತ್ರಿಕೆಗಳಿಗೆ ಬರೆದ ಲೇಖನಗಳು, ಆಕಾಶವಾಣಿಯಲ್ಲಿ ಪ್ರಸಾರವಾದ ಅವರ ಭಾಷಣಗಳನ್ನೊಳಗೊಂಡಿದೆ.
ಹೀಗೆ ಸಾಹಿತ್ಯದ ಸೃಜನಶೀಲ, ಸೃಜನೇತರ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಅಪಾರ ವಿದ್ವತ್ಪೂರ್ಣ ವಿಚಾರಗಳಿಂದ ಕನ್ನಡ ಸಾಹಿತ್ಯ ಶ್ರೀಮಂತಿಕೆಗೆ ಕಾರಣವಾದವರು ಪೊ›.ತೀ.ನಂ.ಶ್ರೀಯವರು. ಅವರ 116ನೇ ಜನ್ಮದಿನಾಚರಣೆಯ ಹೊತ್ತಿನಲ್ಲಿ ಅವರ ಮಹತ್ವಪೂರ್ಣ ಬದುಕು, ಬರಹಗಳನ್ನು ಹಿಂತಿರುಗಿ ನೋಡುತ್ತ ಸಾಗುವ ಅಗತ್ಯ ನಮ್ಮ ಇಂದಿನ ತಲೆಮಾರಿಗಿದೆ. ಅವಸರದ ಒತ್ತಡದ ಬದುಕಿನಲ್ಲಿ ಕಳೆದುಹೋಗದೆ ಕನ್ನಡವನ್ನು ಕಟ್ಟುವ, ಬೆಳೆಸುವ ಜವಾಬ್ದಾರಿಯನ್ನು ತೀ.ನಂ.ಶ್ರೀಯವರ ಬದುಕು ನಮಗೆ ತೋರಿಸಿಕೊಟ್ಟಿದೆ.
(ಲೇಖಕರು ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಕನ್ನಡ ಪ್ರಾಧ್ಯಾಪಕರು)
‘ದೈವ ದೇವರೆಂದರೆ ತಮಾಷೆಯಾ?’; ‘ಕಾಂತಾರ’ದ ‘ವರಾಹ ರೂಪಂ’ ಗೀತೆ ರಚಿಸಿದ ಸಾಹಿತಿ ಹೀಗಂದಿದ್ದೇಕೆ?

ಏನಿದು ಪ್ರೆಷರ್ ಕುಕ್ಕರ್ ಬಾಂಬ್? ಉಗ್ರರಲ್ಲಿ ಈ ಪರಿಕಲ್ಪನೆ ಶುರುವಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಡೀಟೇಲ್ಸ್…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:8 + thirteen =
Remember me
