|ಸಿದ್ಧಲಿಂಗಯ್ಯ ಬಿ. ಕುಲಕರ್ಣಿ, ಧಾರವಾಡ
ಭಾರತ ಭೂಮಿಯಲ್ಲಿ ಸಮಾನತೆಯ ಧ್ವಜ ಹಾರಲೇಬೇಕೆಂದು ಗಟ್ಟಿ ನಿರ್ಧಾರಗೈದ ಕಲ್ಯಾಣದ ಸಾವಿರಾರು ಶರಣರು ಚನ್ನಬಸವಣ್ಣನವರ ಜತೆಗೆ ಕಲ್ಯಾಣದಿಂದ ಹೊರಟು ಗೋವೆಯ ಕದಂಬರ ಆಡಳಿತ ವ್ಯಾಪ್ತಿಯಲ್ಲಿದ್ದ ಸಹ್ಯಾದ್ರಿ ಪರ್ವತಗಳ ಮಧ್ಯದಲ್ಲಿರುವ ಪ್ರಶಾಂತವಾದ ಸ್ಥಳ ಉಳವಿಗೆ ಬಂದರು. ಪ್ರಸ್ತುತವಾಗಿ ಈ ಪ್ರದೇಶವು ಈಗಿನ ಕಾರವಾರ ಜಿಲ್ಲೆ, ಜೊಯಿಡಾ ತಾಲೂಕಿನಲ್ಲಿದೆ. ಧಾರವಾಡದಿಂದ 110 ಕಿ. ಮೀ., ಕಾರವಾರದಿಂದ 80ಕಿ.ಮೀ. ದೂರವಿದೆ.
ಅಲ್ಲಮ ಪ್ರಭುದೇವರ ಒಂದು ವಚನದ ಪ್ರಕಾರ ‘ಎರಡೆಂಬತ್ತುಕೋಟಿ ವಚನವ ಹಾಡಿ ಹಂಬಲಿಸಿತೆನ್ನ ಮನವು’ ಎಂದಿದ್ದು, ಅಂದರೆ ವಚನಗಳ ಸಂಖ್ಯೆಯು 160 ಕೋಟಿ ಮೀರಿತ್ತು. ಆದರೆ, ಅವುಗಳಲ್ಲಿ ಇಂದು ನಮಗೆ ಲಭ್ಯವಾಗಿರುವುದು ಅಂದಾಜು 25 ಸಾವಿರ ವಚನಗಳು ಮಾತ್ರ ಎಂದು ತಿಳಿದುಬರುತ್ತದೆ. ಉಳಿದವುಗಳು ಎಲ್ಲಿ ಎಂಬ ಪ್ರಶ್ನೆ? ಲಭ್ಯವಾಗಿರುವ 25 ಸಾವಿರ ವಚನಗಳು ನಮಗೆ ದೊರಕಲು ಕಾರಣ ಯಾರು? ಎಂದು ಹುಡುಕುತ್ತ ಹೋದರೆ ಅಂತಿಮವಾಗಿ ಮುಂಚೂಣಿಯಲ್ಲಿ ಬರುವ ಹೆಸರೇ ಚನ್ನಬಸವಣ್ಣನವರು.
ಚನ್ನಬಸವಣ್ಣನವರು ಅಂದಾಕ್ಷಣ ನೆನಪಾಗುವುದು ಉಳವಿ, ಎಲ್ಲರಿಗೂ ತಿಳಿದಹಾಗೆ ಕಲ್ಯಾಣ ಬಸವಣ್ಣನವರ ಸೋದರ ಅಳಿಯ. ಚನ್ನಬಸವಣ್ಣನವರು ಗರ್ಭಸ್ಥ ಶಿಶುವಿರುವಾಗಲೇ ಬಸವಣ್ಣನವರು ಲಿಂಗದೀಕ್ಷೆ ನೀಡಿದ್ದರು. ಲಿಂಗವಂತ ಸಂಸ್ಕಾರದ ನೆರಳು ತಾಯಿಯ ಗರ್ಭದಲ್ಲಿ ಇರುವಾಗಲೇ ಬಿದ್ದಿತ್ತು. ಹಾಗಾಗಿ ಇಷ್ಟಲಿಂಗ ತತ್ವದ ಸಾಕಾರ ಮೂರ್ತಿಯಾಗಿ ಆವತರಿಸಿದ್ದರು.
ಚನ್ನಬಸವಣ್ಣನವರ ಮೊದಲು ಗುರು ಬಸವಣ್ಣನವರು, ಕಾಲಕ್ರಮೇಣ ಅಲ್ಲಮ ಪ್ರಭುದೇವರು, ಸೊನ್ನಲಗಿ ಸಿದ್ಧರಾಮರು, ಹಡಪದ ಅಪ್ಪಣ್ಣನವರು ಅಲ್ಲದೆ ಅನೇಕ ಹಿರಿಯ ಸಾವಿರಾರು ಶರಣರನ್ನು ಇವರು ತಮ್ಮ ಗುರುವೆಂದು ಕರೆದಿದ್ದಾರೆ. ಸಮಾಜದಲ್ಲಿ ಜಾತಿ ಭೇದ, ಮೇಲು- ಕೀಳು, ವರ್ಣ ಭೇದಗಳನ್ನು ದೂರಮಾಡಲು, ನೂರಾರು ಸಾಧಕರಿಗೆ, ಅನೇಕ ಕಾಯಕ ವರ್ಗದವರಿಗೆ ಲಿಂಗದೀಕ್ಷೆಕೊಟ್ಟರು. ಸಾವಿರಾರು ಶರಣರನ್ನು ಸಂಸಾರಿಕ ಜೀವನದಲ್ಲೂ ಸಾಧನೆಯ ಶಿಖರಕ್ಕೇರಿಸಿದ್ದರು. ಚನ್ನಬಸವಣ್ಣನವರು ಹೆಚ್ಚಾಗಿ ಮಹಾಮನೆ ಕಾರ್ಯಕಲಾಪಗಳಲ್ಲಿ ತೊಡಗಿಸಿಕೊಂಡಿದ್ದರು. ಮಾನವನ ನಿರೀಕ್ಷೆ ಆಕಾಂಕ್ಷೆಗಳಿಗೆ ಕುಂದುಕೊರತೆ ಬರದಹಾಗೆ ನಡೆದರು. ಮಹಾಜ್ಞಾನಿ, ಅವಿರಳಜ್ಞಾನಿ, ಸುಜ್ಞಾನಿ, ದಿವ್ಯಜ್ಞಾನಿ, ಷಟ್​ಸ್ಥಲಜ್ಞಾನಿ, ಷಟ್​ಸ್ಥಲಬ್ರಹ್ಮ, ಷಟ್​ಸ್ಥಲಚಕ್ರವರ್ತಿ ಹೀಗೆ ಹಲವಾರು ಬಗೆಯಾಗಿ ಚನ್ನಬಸವಣ್ಣನವರು ಶರಣರುಗಳಿಂದ ಕರೆಯಲ್ಪಟ್ಟಿದ್ದಾರೆ. ಚನ್ನಬಸವಣ್ಣನವರು ತಮ್ಮ ಕಿರಿಯ ವಯಸ್ಸಿನಲ್ಲೇ ಬಿಜ್ಜಳರ ಭಂಡಾರದ ಚಿಕ್ಕದಂಡ ನಾಯಕರಾಗಿದ್ದರು. ಬಸವಣ್ಣನವರು ಮಂತ್ರಿಪದವಿ ತ್ಯಜಿಸಿದ ನಂತರ ತೆರವಾದ ದಂಡನಾಯಕನ ಸ್ಥಾನವನ್ನು ಚನ್ನಬಸವಣ್ಣನವರು ವಹಿಸಿಕೊಂಡಿದ್ದರು.
ಬಸವಣ್ಣನವರು ಮಂತ್ರಿಪದವಿ ಬಿಟ್ಟು ಕಪ್ಪಡಿಸಂಗಮಕ್ಕೆ ತೆರಳಿ ಸಂಗಮನಾಥರಲ್ಲಿ ಕ್ರಿ.ಶ. 1166 ಲಿಂಗೈಕ್ಯರಾಗುವ ಮುನ್ನ ಬ್ರಾಹ್ಮಣ ಕುಲದ ಮಧುವರಸನ ಮಗಳು ಕಲಾವತಿ, ಅಸ್ಪಶ್ಯರಾದ ಹರಳಯ್ಯನ ಮಗ ಶೀಲವಂತರಿಗೆ ಮದುವೆ ಮಾಡಿ ಸಂಬಂಧ ಬೆಳೆಸಿದ್ದರು. ಇದನ್ನೇ ಅಂತರಜಾತಿ ವಿವಾಹ ಎಂದು ದೊಡ್ಡ ವಿಷಯವನ್ನಾಗಿ ಮಾಡಲಾಗಿತ್ತು. ಕಲ್ಯಾಣದಲ್ಲಿ ಶರಣರಿಗೆ ಇಲ್ಲಸಲ್ಲದ ಅಪವಾದಗಳನ್ನು ಕೊಟ್ಟು ಜನಗಳನ್ನೂ, ರಾಜನನ್ನೂ ಶರಣರ ವಿರುದ್ಧ ಎತ್ತಿ ಕಟ್ಟುವ ಸನ್ನಾಹ ನಡೆದಿತ್ತು. ರಾಜ ವಿರೋಧ ಮತ್ತು ಧರ್ಮ ವಿರೋಧವನ್ನು ಕಟ್ಟಿಕೊಂಡು ಈ ಅಂದೋಲನ ಈಗ ಇನ್ನಾವುದೇ ಒಂದು ಕಡೆಯಲ್ಲೂ ಬೆಳೆಯುವಂತಿರಲಿಲ್ಲ, ಇದನ್ನೆಲ್ಲವನ್ನರಿತ ಚನ್ನಬಸವಣ್ಣನವರು ಎಲ್ಲವನ್ನು ವಿಕೇಂದ್ರೀಕೃತಗೊಳಿಸಿ ಜನತೆಯ ಬಳಿಗೆ ಅಂದೋಲನದ ಬೀಜಗಳನ್ನು ಬಿತ್ತುವ ಮಾರ್ಗ ಕಂಡುಕೊಂಡರು. ಕಲ್ಯಾಣದಲ್ಲಿ ಶೇಖರಗೊಂಡಿದ್ದ ವಚನಗಳೆಂಬ ಬೀಜಗಳನ್ನು ನಾಡಿನ ಉದ್ದಕ್ಕೂ ಬಿತ್ತಬೇಕಾಗಿತ್ತು. ಅದಕ್ಕೆ ಆರಿಸಿಕೊಂಡ ಮಾರ್ಗ ಉಳವಿಯ ಪ್ರಯಾಣ.
ಚನ್ನಬಸವಣ್ಣನವರ ಯಾತ್ರೆ ಶರಣರು ರಚಿಸಿದ ವಚನಗಳ ಕಟ್ಟುಗಳು, ಸಾವಿರಾರು ಶರಣರು, ಸಹಸ್ರಾರು ಭಕ್ತರ ಸಮೇತ ಕಲ್ಯಾಣದಿಂದ ಹೊರಟು ಉಳವಿ ಸೇರಿತು. ಈ ಯಾತ್ರೆ ಉದ್ದಕ್ಕೂ ಅವರು ಮಾನವ ಧರ್ಮವನ್ನು ಜನಮನಕ್ಕೆ ಮುಟ್ಟಿಸುತ್ತಾ ಅವರ ಭಕ್ತಿ- ಪ್ರೇಮಗಳನ್ನು ಪಡೆದರು. ಶರಣರ ಇಡೀ ಯಾತ್ರೆ ನಿಭಾಯಿಸುವ ಕೇಂದ್ರ ಶಕ್ತಿಯಾಗಿ ಪರಿಣಮಿಸಿದರು. ಶರಣರು ಶಿವಭಕ್ತರಿಗೆ ಲಿಂಗ ದೀಕ್ಷೆನೀಡಿ ವಚನಗಳ ಕಟ್ಟುಗಳನ್ನು ಕೊಟ್ಟು ಅವುಗಳನ್ನು ಗುಡಿ, ಮಠ, ಶಾಲೆಗಳಲ್ಲಿ ದಿನಾಲೂ ಎಲ್ಲರಿಗೂ ತಿಳಿಸಿಹೇಳಿ ಲಿಂಗವಂತರ ಸಾರ ಪ್ರಸಾರ ಮಾಡಲು ಹೇಳುತ್ತಿದ್ದರು. ಶರಣರು ಶಿವಗಣ ಸೈನಾಧಿಪತಿಯಾಗಿ, ಆರಾಧ್ಯ ಮಾಡಿದ ಕೈಗಳಿಂದ ಶಿವಾಚಾರಿಗಳಾಗಿ ಆಯುಧ ಹಿಡಿದು, ಮಾರ್ಗಮಧ್ಯ ಯುದ್ಧ ಮಾಡುತ್ತ ವೈರಿಗಳನ್ನು ಸದೆಬಡಿಯುತ್ತ, ವಚನ ಸಾಹಿತ್ಯಗಳನ್ನು ಕಾಪಾಡಿಕೊಂಡುಬಂದರು. ಜನಮನದಲ್ಲಿ ಅಡಗಿದ ಕೊಳೆಯ ಕಳೆ ಕಿತ್ತು ನೂತನ ಲಿಂಗವಂತ ಬೆಳೆ ಬೆಳೆಯಲು ಉಳವಿಗೆ ವಚನ ಸಾಹಿತ್ಯ ತಂದರು. ಧಾರ್ವಿುಕ ಮಹಾಸಂಪತ್ತಿನ ಅಳಿವು ಉಳಿವುಗಳ ಹೋರಾಟದಲ್ಲಿ ಜಯಿಸಿ ಚನ್ನಬಸವಣ್ಣನವರು ಸರಿಸುಮಾರು ಕ್ರಿ.ಶ. 1168ರ ವೇಳೆಗೆ ಉಳವಿಯ ದಡಕ್ಕೆ ಸೇರಿದ್ದರು. ಇಲ್ಲಿ ಅಳಿದವರೆಷ್ಟು? ಉಳಿದವರೆಷ್ಟು? ಉಳಿದವರು ಎಷ್ಟು ದಿನ ಬದುಕಿದರು? ಈ ಗಂಭಿರವಾದ ವಿಷಯವು ದೊಡ್ಡ ಪ್ರಶ್ನೆಯಾಗಿಯೇ ಇವತ್ತಿಗೂ ಉಳಿದಿದೆ. ಆದರೂ ಕ್ರಿ.ಶ. 1166ರಿಂದ ಕ್ರಿ.ಶ. 1168 ಸುಮಾರು ಎರಡು ವರ್ಷ ಕಾಲ ಕಲ್ಯಾಣಕ್ರಾಂತಿಯು ಕಲ್ಯಾಣದಿಂದ ಉಳವಿಯವರೆಗೂ ನಡೆದು ಬಂದಿತ್ತು. ಉಳವಿಯ ಮಹಾಮನೆಯಿಂದ ಜಗತ್ತಿನ ಮನೆಗಳನ್ನೆಲ್ಲ ಮಹಾಮನೆಯನ್ನಾಗಿ ಮಾಡುವ ಉದ್ದೇಶಕ್ಕಾಗಿ ಶರಣರು ಚಿಕ್ಕಚಿಕ್ಕ ತಂಡಗಳಾಗಿ, ಹಂಪಿ, ಬನವಾಸಿ, ತಮಿಳುನಾಡು, ಆಂಧ್ರಪ್ರದೇಶ ಹೀಗೆ ಅಷ್ಟದಿಕ್ಕುಗಳಿಗೂ ಜೋಳಿಗೆಯ ತುಂಬ ವಚನಗಳ ಓಲೆಗರಿ ಹೊತ್ತಗೆಗಳನ್ನು ತುಂಬಿಸಿ ಹಂಚುವುದಕ್ಕೆ ಹೋದರು. ಹೀಗೆ ಚನ್ನಬಸವಣ್ಣನವರ ಒಟ್ಟು ಜೀವನ ಒಂದು ವಿಶೇಷ ಕೊಡುಗೆ, ಅವರ ದಿನಗಳೆಲ್ಲ ಹೊಣೆಗಾರಿಕೆ, ಧಾರ್ವಿುಕ ಇತಿಹಾಸದಲ್ಲಿ ಅಪೂರ್ವ ಪ್ರಸಂಗ. ಈ ಸಾಹಸದಲ್ಲಿ ಚನ್ನಬಸವಣ್ಣನವರ ದೇಹವು ಚಂದನದಂತೆ ತೇಯ್ದುಕೊಂಡಿತ್ತು. ಕಲ್ಯಾಣದಿಂದ ಕಡಲ ತೀರದವರೆಗೆ ಹರಿದುಬಂದ ಧರ್ಮವಾಹಿನಿಗೆ ಕಡಲಾಗಿಯೇ ಪರಿಣಮಿಸುವಂತಾಯಿತು ಉಳವಿ.
ಚನ್ನಬಸವಣ್ಣನವರ ಕರ್ತವ್ಯ ಮುಗಿದಂತೆ ತೋರಿತು. ಮಾನವರಲ್ಲಿ ದೇವನಾಗಿ, ದೇವತ್ವಕ್ಕೇರಿದ ಕಿರಿವಯಸ್ಸಿನ ಷಟ್​ಸ್ಥಲ ಜ್ಞಾನಿ ಚನ್ನಬಸವಣ್ಣನವರು. ದೀರ್ಘಕಾಲ ಬಾಳಲಿಲ್ಲ; ಬಾಳಿದ ಕ್ಷಣಗಳೆಲ್ಲ ಮಹತ್ತರ ಕಾರ್ಯ ಮಾಡಿ ಪ್ರತಿ ಕ್ಷಣದ ಪ್ರಯೋಜನವನ್ನು ಲಿಂಗವಂತ ಧರ್ಮಕ್ಕೆ ಮೀಸಲಾಗಿಟ್ಟಿದ್ದರು. ಅವರು ತಮ್ಮ 24ನೇ ವಯಸ್ಸಿನಲ್ಲಿ ಕ್ರಿ.ಶ. 1168 ಮಾಘ ಹುಣ್ಣಿಮೆ, ಮಘಾ ನಕ್ಷತ್ರದ ದಿವಸ ಐಕ್ಯರಾದರು. ಚನ್ನಬಸವಣ್ಣನವರ ಮರಣ, ಮರಣವಲ್ಲ; ಅವರು ಮೃತ್ಯು ಜಯಸಿದ ಮೃತ್ಯುಂಜಯನಾಗಿದ್ದು, ಊರಿಗೆ ಬಂದ ಅತಿಥಿಯಂತೆ ಈ ಲೋಕಬಿಟ್ಟು ತಮ್ಮ ಮೂಲ ಮನೆಗೆ ನಡೆದಿದ್ದರು. ಇವರ ಗದ್ದುಗೆ ಇಂದು ಜಾಗೃತ ಸ್ಥಾನವಾಗಿದ್ದು ಪ್ರತಿವರ್ಷ ಮಾಘ ಹುಣ್ಣಿಮೆ ದಿವಸ ಚನ್ನಬಸವಣ್ಣನವರ ರಥೋತ್ಸವ ಜರುಗುವ ಪರಂಪರೆ ಉಳವಿಯಲ್ಲಿ ಮುಂದುವರಿದಿದೆ.
(ಲೇಖಕರು ಹವ್ಯಾಸಿ ಬರಹಗಾರರು)
ವರ್ಕೌಟ್​ ಆದ 50% ಆಫರ್​: ಮೂರನೇ ದಿನವೂ ಕೋಟಿಗಟ್ಟಲೆ ಟ್ರಾಫಿಕ್​ ಫೈನ್​ ಸಂಗ್ರಹ; ಒಟ್ಟು ಮೊತ್ತವೆಷ್ಟು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
