| ಮಂಡಗದ್ದೆ ಪ್ರಕಾಶ್​ಬಾಬು ಕೆ.ಆರ್.ಜೀವನಕ್ಕೆ ಧನವೇ ಮೂಲವೆಂದು ಭಾವಿಸುತ್ತೇವೆ. ಅಂತಹ ಧನಕ್ಕೆ ಮೂಲ ಆಗಿರುವವಳು ‘ಲಕ್ಷ್ಮೀ’ದೇವಿ. ಲಕ್ಷ್ಮೀ ಈ ಪದ ಕಿವಿಗೆ ಬಿದ್ದಾಗ ಏನೋ ರೋಮಾಂಚನ ಹಾಗೂ ಶುಭಕರವಾದ ಮಾಂಗಲ್ಯಮಯವಾದ ಭಾವನೆ ಮನದಲ್ಲಿ ಮೂಡುತ್ತದೆ. ಮಾತಿಗೆ ನಿಲುಕದ ಸುಂದರ ಕಲ್ಪನೆ ಹೆಣೆದುಕೊಳ್ಳುತ್ತದೆ. ಈ ಲಕ್ಷ್ಮಿಯ ಹುಟ್ಟಿನ ಕಥೆ ಅದ್ಭುತವಾಗಿದೆ. ಹಿಂದೂ ಪುರಾಣಗಳಲ್ಲಿ, ತಂತ್ರಶಾಸ್ತ್ರಗಳಲ್ಲಿ ಶಕ್ತಿಯನ್ನು ‘ಸ್ತ್ರೀ’ ರೂಪವಾಗಿ, ದೇವಿಯಾಗಿ, ಪುರುಷ ದೇವತೆಯ ಸಂಗಾತಿಯಾಗಿ ತೋರಿಸಿದ್ದಾರೆ. ತ್ರಿಮೂರ್ತಿಗಳಲ್ಲಿ ಪ್ರತಿಯೊಬ್ಬರೂ ಈ ಶಕ್ತಿ ಅಥವಾ ದೇವಿಯನ್ನು ತಮ್ಮ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಬ್ರಹ್ಮನಿಗೆ ಸರಸ್ವತಿ, ವಿಷ್ಣುವಿಗೆ ಲಕ್ಷ್ಮೀ ಹಾಗೂ ಶಿವನಿಗೆ ಪಾರ್ವತಿ.
ಸಾಮಾನ್ಯವಾಗಿ ವಿದ್ಯಾಧಿದೇವತೆಯಾದ ಸರಸ್ವತಿಗಿಂತ ಭಾಗ್ಯದೇವತೆಯಾದ ಲಕ್ಷ್ಮೀಯನ್ನು ಜನ ಹೆಚ್ಚು ಆರಾಧಿಸುವರು. ಜಗತ್ಪಾಲಕನಾದ ಮಹಾವಿಷ್ಣುವಿನ ಶಕ್ತಿಯಾಗಿ, ಅವನ ಹೃದಯೇಶ್ವರಿಯಾಗಿರುವ ಲಕ್ಷ್ಮೀಯನ್ನು ಜಗತ್ ಪೋಷಣೆಗೆ ಅವಶ್ಯವಾದ ವೃದ್ಧಿ-ಸಮೃದ್ಧಿಗಳ ಸಕಲ ಭಾಗ್ಯಗಳಾಗಿ ಪೂಜಿಸುವರು. ಶ್ರೀ ಎಂದರೆ ಲಕ್ಷ್ಮೀ ಎಂದೇ. ಈಕೆಯನ್ನು ವೇದಗಳಲ್ಲಿ ಹಾಡಿಹೊಗಳಿರುವರು. ಶ್ರೀ ವೇದಪೂರ್ವದಲ್ಲಿದ್ದ ದೇವತೆ ಹಾಗೂ ಫಲಶಕ್ತಿ, ಜಲ ಮತ್ತು ಕೃಷಿಗಳಿಗೆ ಸಂಬಂಧಪಟ್ಟ ದೇವತೆ. ಕಾಲಕ್ರಮದಲ್ಲಿ ಈ ವೇದಪೂರ್ವ ದೇವತೆ, ವೇದದಲ್ಲಿನ ನಿರುಪಮ ಸೌಂದರ್ಯವತಿ ಲಕ್ಷ್ಮೀಯೊಡನೆ ಒಂದಾದಳು.
ವಿಷ್ಣುಪುರಾಣದಲ್ಲಿ ಲಕ್ಷ್ಮೀ:ವಿಷ್ಣುಪುರಾಣದ ಪ್ರಕಾರ ಲಕ್ಷ್ಮೀಯು ಭೃಗುಮಹರ್ಷಿಯ ಪುತ್ರಿ. ಭೃಗುಮಹರ್ಷಿಯ ಪತ್ನಿ ಖ್ಯಾತಿ ಎಂಬುವಳು. ಇವರಿಗೆ ಗಂಡುಮಕ್ಕಳು ಮಾತ್ರ ಇದ್ದರು. ಖ್ಯಾತಿಗೆ ಹೆಣ್ಣುಮಕ್ಕಳನ್ನು ಪಡೆಯಬೇಕು ಎಂಬ ಆಸೆಯಾಯಿತು. ಅವಳು ಪತಿಯ ಅನುಮತಿ ಪಡೆದು ದೇವಿಯನ್ನು ಕುರಿತು ತಪಸ್ಸು ಮಾಡಿದಳು. ತಪಸ್ಸಿಗೆ ಮೆಚ್ಚಿ ಜಗನ್ಮಾತೆಯು ಪುತ್ರಿಯನ್ನು ಕರುಣಿಸಿದಳು. ಆಕೆಗೆ ‘ಲಕ್ಷ್ಮೀ’ ಎಂದು ಹೆಸರಿಟ್ಟರು. ಲಕ್ಷ್ಮೀ ಚಿಕ್ಕ ಹುಡುಗಿ ಆದರೂ ವಿಷ್ಣುವನ್ನು ಕುರಿತು ತಪಸ್ಸು ಮಾಡಿದಳು. ಅವಳ ತಪಸ್ಸಿಗೆ ಮೆಚ್ಚಿದ ವಿಷ್ಣುವು ನಾರಾಯಣನ ರೂಪದಲ್ಲಿ ಪ್ರತ್ಯಕ್ಷನಾಗಿ ವರವನ್ನು ಬೇಡು ಎನ್ನಲು ‘ಸ್ವಾಮೀ, ನಿಮ್ಮ ವಿಶ್ವರೂಪ ತೋರಿಸಿದರೆ ನಾನು ನಂಬುವೆನು. ನಂತರ ನನ್ನನ್ನು ವಿವಾಹ ಮಾಡಿಕೊಳ್ಳಿರಿ’ ಎಂದು ವರವನ್ನು ಬೇಡಿದಳು. ವಿಷ್ಣು ವಿಶ್ವರೂಪವನ್ನು ತೋರಿಸಿ ಶ್ರೀಲಕ್ಷ್ಮಿಯನ್ನು ವಿವಾಹವಾದನು ಹಾಗೂ ಲಕ್ಷ್ಮಿ ಸಂಪತ್ತಿಗೆ ಅಧಿದೇವತೆ ಆದಳು ಎಂದು ವಿಷ್ಣುಪುರಾಣದಲ್ಲಿ ಹೇಳಲಾಗಿದೆ. ಈ ಲಕ್ಷ್ಮೀಯೇ ಕ್ಷೀರಾಬ್ದಿಯಿಂದ ಉದ್ಭವಿಸಿದಳು. ನಂತರ ವಿಷ್ಣುವಿನ ಪತ್ನಿಯಾದಳು. ವಾಮನಾವತಾರದಲ್ಲಿ ಪದ್ಮಳಾಗಿ, ಪರಶುರಾಮಾವತಾರದಲ್ಲಿ ಧರಣಿಯಾಗಿ, ರಾಮಾವತಾರದಲ್ಲಿ ಸೀತೆಯಾಗಿ, ಕೃಷ್ಣಾವತಾರದಲ್ಲಿ ರುಕ್ಮಿಣಿಯಾಗಿ ಅವತರಿಸಿದವಳು ಈ ಲಕ್ಷ್ಮಿಯೇ.
ಅಲಕ್ಷ್ಮೀ:ಲಕ್ಷ್ಮೀಯ ತದ್ವಿರುದ್ಧ ದೇವತೆ ಅಲಕ್ಷ್ಮೀ. ಸಮುದ್ರಮಥನ ಕಾಲದಲ್ಲಿ ಇವಳ ಜನನವಾಯಿತು. ಲಕ್ಷ್ಮೀಗಿಂತ ಮೊದಲು ಜನನವಾಗಿದ್ದರಿಂದ ಈಕೆಯನ್ನು ಜೇಷ್ಠಲಕ್ಷ್ಮೀ ಎನ್ನುವರು. ಅಧರ್ಮವೇ ಇವಳ ಪುತ್ರ. ಕಪಿಲಮುನಿ ಇವಳ ಪತಿ. ಅಲಕ್ಷ್ಮೀಯ ವಾಹನ ಕತ್ತೆ, ಕಾಗೆ ಇವಳ ಧ್ವಜದ ಸಂಕೇತ. ಇವಳನ್ನು ಭಕ್ತಿಯಿಂದ ಆರಾಧಿಸಿದರೆ ಭಾಗ್ಯವನ್ನು ನೀಡುವಳು. ಇವಳ ದೇವಾಲಯಗಳು ಬಹಳ ವಿರಳ. ಜೇಷ್ಠಮಾಸದಲ್ಲಿ ಪ್ರತಿ ಶುಕ್ರವಾರ ಈ ಜೇಷ್ಠಲಕ್ಷ್ಮೀಯನ್ನು ಪೂಜಿಸುತ್ತಾರೆ.
ಲಕ್ಷ್ಮೀ ಒಲಿದರೆ ಬರುತ್ತಾಳೆ. ಆದರೆ, ಬರುವಾಗ ಧರ್ಮದಂಡವನ್ನು ಕೈಯಲ್ಲಿ ಹಿಡಿದೇ ಬರುತ್ತಾಳೆ. ಕಾರಣ, ಅವಳು ಸ್ವಯಂ ಧರ್ಮದಂಡ ಸ್ವರೂಪಳು. ಶ್ರೀದೇವಿಯನ್ನು ಭೂದೇವಿಯಲ್ಲಿ ಕಾಣಬೇಕು. ಆಗ ಭೂ ಸಂಬಂಧವಾದುದನ್ನು ಗಂಧ ಶಬ್ದದ ಮೂಲಕ ತಿಳಿಸಲಾಗಿದೆ. ಪಂಚತನ್ಮಾತ್ರಯಗಳಲ್ಲಿ ಗಂಧವೂ ಒಂದು. ಶ್ರೀಸೂಕ್ತದಲ್ಲಿ ‘ಗಂಧದ್ವಾರಂ’ ಎಂದು ಹೇಳುವುದರಲ್ಲಿ ಗಂಧದ ಮೂಲಕ ತಿಳಿಯಲ್ಪಡುವ ವೃದ್ಧಿಯಾಗಿರುವ ಶ್ರೀಲಕ್ಷ್ಮೀಯನ್ನು ಪ್ರಾರ್ಥಿಸಲಾಗಿದೆ. ಗಂಧವು, ಭೂಮಿಯ ಗುಣ. ಭೂಮಿಯಲ್ಲಿ ಶ್ರೀದೇವಿಯ ಖನಿಜ, ಸಸ್ಯ, ರತ್ನಾದಿಗಳು, ಲೋಹ, ಧಾನ್ಯ, ಪ್ರಾಣಿಸಂಕಲ ಇತ್ಯಾದಿಗಳಲ್ಲಿದ್ದಾಳೆ. ಇದನ್ನು ಲಕ್ಷ್ಮೀಭಾವದಿಂದ ಪೂಜಿಸುವುದರಲ್ಲಿ ಅರ್ಥವಿದೆ. ಈ ಕಾರಣದಿಂದಲೇ ಅಷ್ಟಲಕ್ಷ್ಮೀಯರು ಬಂದಿರುವುದು. ಅವರು ಯಾರ್ಯಾರು ಎಂದರೆ- ಧನಲಕ್ಷ್ಮೀ, ಧೈರ್ಯಲಕ್ಷ್ಮೀ, ಸಂತಾನಲಕ್ಷ್ಮೀ, ವಿಜಯಲಕ್ಷ್ಮೀ, ಆದಿಲಕ್ಷ್ಮೀ, ಗಜಲಕ್ಷ್ಮೀ, ವಿದ್ಯಾಲಕ್ಷ್ಮೀ, ಧಾನ್ಯಲಕ್ಷ್ಮೀ.
ವರಮಹಾಲಕ್ಷ್ಮೀ ವ್ರತದ ಹಿನ್ನೆಲೆ:ಒಮ್ಮೆ ಶಿವ ಮತ್ತು ಪಾರ್ವತಿಯು ಚದುರಂಗದ ಆಟವನ್ನು ಆಡಬೇಕೆಂದು ನಿರ್ಧರಿಸಿದರು. ಆ ಆಟದ ತೀರ್ಪಗಾರರಾಗಿ ಶಿವಗಣದ ಚಿತ್ರನೇಮಿ ಎಂಬುವವನನ್ನು ನೇಮಿಸಿದರು. ಚಿತ್ರನೇಮಿಯು ಇವರಿಬ್ಬರ ಆಟವನ್ನು ಸರಿಯಾಗಿ ವೀಕ್ಷಿಸಿದನು. ಬಹಳ ಹೊತ್ತಿನ ನಂತರ ಇದ್ದಕ್ಕಿದ್ದಂತೆ ಶಿವ-ಪಾರ್ವತಿಯರಲ್ಲಿ ಸೋಲು-ಗೆಲುವಿನ ಬಗ್ಗೆ ಚರ್ಚೆ ನಡೆಯಿತು. ಚಿತ್ರನೇಮಿಯು ಶಿವನೇ ಆಟದಲ್ಲಿ ಗೆದ್ದಿರುವುದು ಎಂದು ನುಡಿದನು. ಆಗ ಪಾರ್ವತಿಗೆ ಕೋಪ ಬಂದು ತಕ್ಷಣ, ನೀನು ಕುಷ್ಠರೋಗದಿಂದ ನರಳುವಂತಾಗು ಎಂದು ಶಾಪ ಕೊಟ್ಟಳು. ತಾನು ತಪ್ಪು ಮಾಡದೇ ಇದ್ದರೂ ಈ ರೀತಿ ಶಾಪ ಕೊಟ್ಟಿರುವರಲ್ಲ ಎಂದು ನೊಂದುಕೊಂಡು ಆ ಶಾಪದಿಂದ ಮುಕ್ತನಾಗುವುದು ಹೇಗೆ ಎಂದು ಪಾರ್ವತಿಯನ್ನು ಕೇಳಿದನು. ಆಗ ಪಾರ್ವತಿಯು ಈ ರೀತಿ ತಿಳಿಸಿದಳು. ಭೂಲೋಕದಲ್ಲಿ ಶ್ರಾವಣಮಾಸದ ಎರಡನೇ ಶುಕ್ರವಾರ ‘ಮಹಾಲಕ್ಷ್ಮೀ ವ್ರತ’ ಆಚರಿಸುತ್ತಾರೆ. ಅದನ್ನು ನೀನು ಏಕಾಗ್ರತೆಯಿಂದ ನೋಡಿದರೆ ಶಾಪ ವಿಮೋಚನೆ ಆಗುವುದು ಎಂದಳು. ಅದೇ ರೀತಿ ಚಿತ್ರನೇಮಿ ಭೂಲೋಕಕ್ಕೆ ಬಂದು ವರಮಹಾಲಕ್ಷ್ಮೀ ವ್ರತವನ್ನು ಕಣ್ತುಂಬ ನೋಡಿ ಸಂತೋಷಗೊಂಡನು ಹಾಗೂ ಶಾಪದಿಂದ ವಿಮುಕ್ತನಾದನು. ಈ ವ್ರತವನ್ನು ನೋಡುವುದರಿಂದಲೇ ಶಾಪ ಪರಿಹಾರ ಆದ ಮೇಲೆ ಈ ವ್ರತವನ್ನು ಆಚರಿಸುವುದರಿಂದ ಅದರ ಫಲ ಎಷ್ಟು ಅಪಾರವೆಂದು ತಿಳಿದು ಇತ್ತೀಚೆಗೆ ಹೆಚ್ಚಿನ ಭಕ್ತರುಗಳು ಈ ವ್ರತವನ್ನು ಮಾಡಲು ಪ್ರಾರಂಭಿಸಿದರು.
ಪ್ರತಿದಿನವೂ ಮನೆಯ ಮುಂದೆ ರಂಗೋಲಿಯ ಹಾಕುವುದರಿಂದ, ದೇವರ ಮುಂದೆ ದೀಪವನ್ನು ಬೆಳಗುವುದರಿಂದ, ತುಳಸಿಯನ್ನು ಪೂಜಿಸುವುದರಿಂದ, ಕಮಲದ ಹೂವಿನಿಂದ ಲಕ್ಷ್ಮೀಯನ್ನು ಪೂಜಿಸುವುದರಿಂದ, ಗೋವು ಪೂಜೆ ಮಾಡುವುದರಿಂದ, ಪ್ರತಿದಿನ ಸುಮಂಗಲಿಯರು ಹಣೆಯಲ್ಲಿ ಕುಂಕುಮವನ್ನು ಧರಿಸುವುದರಿಂದ ಭಾಗ್ಯದೇವತೆ ಲಕ್ಷ್ಮೀಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.
(ಲೇಖಕರು ಆಧ್ಯಾತ್ಮ ಚಿಂತಕರು, ಹವ್ಯಾಸಿ ಬರಹಗಾರ)
ಇಸ್ರೋ ಪ್ರಧಾನ ಕಚೇರಿ ಬೆಂಗಳೂರಿನಲ್ಲೇ ಆಗಿದ್ದು ಹೇಗೆ? ಇದಕ್ಕೆ ಕಾರಣ ಯಾರು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + one =
Remember me
