ಬೆಂಗಳೂರು:ಶ್ರಾವಣ ಮಾಸ ಬಂತೆಂದರೆ ಸಾಲು ಸಾಲು ಹಬ್ಬಗಳದ್ದೇ ಸಂಭ್ರಮ. ಪ್ರತಿ ಹಬ್ಬವೂ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಕೂಡಿರುತ್ತದೆ. ಅದರಲ್ಲೂ ಹೆಂಗಳೆಯರು ಸಡಗರದಿಂದ ಆಚರಿಸುವ ವರಮಹಾಲಕ್ಷ್ಮೀ ಹಬ್ಬ ವಿಶೇಷ ಮಹತ್ವ ಪಡೆದುಕೊಂಡಿದೆ. ಅರಿಶಿನ, ಕುಂಕುಮ, ಬಳೆ ಸೇರಿದಂತೆ ಮಂಗಳ ವಸ್ತುಗಳನ್ನು ಮಹಿಳೆಯರು ಪರಸ್ಪರ ವಿನಿಯಮ ಮಾಡಿಕೊಂಡು ಮುತೆôದೆತನ ನೀಡುವಂತೆ ಹಾಗೂ ಮನೆಯಲ್ಲಿ ಸಿರಿ ಸಂಪತ್ತು ಹೆಚ್ಚಿಸುವಂತೆ ದೇವಿಯನ್ನು ಪ್ರಾರ್ಥಿಸುವ ಹಬ್ಬವೇ ವರಮಹಾಲಕ್ಷ್ಮೀ ವ್ರತ. ಲಕ್ಷ್ಮೀಯನ್ನು ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಎಂಬ ಎಂಟು ರೂಪಗಳಲ್ಲಿ ಪ್ರಾರ್ಥಿಲಾಗುತ್ತದೆ. ಇವು ಲಕ್ಷ್ಮೀಯ ಎಂಟು ರೂಪಗಳು. ಹಾಗಾಗಿಯೇ ಅಷ್ಟಲಕ್ಷ್ಮೀ ಎಂದು ಕರೆಯುವುದುಂಟು. ಮಹಾಲಕ್ಷ್ಮಿದೇವಿಗೆ ಸಂಬಂಧಿಸಿದ ಹಲವಾರು ಶ್ಲೋಕಗಳಿವೆ. ಅದರಲ್ಲಿ ವರಮಹಾಲಕ್ಷ್ಮೀ ಹಬ್ಬದಂದು ಲಕ್ಷ್ಮೀ ಅಷ್ಟೋತ್ತರ ಹಾಗೂ ಲಕ್ಷ್ಮೀ ಸಹಸ್ರನಾಮ ಪಾರಾಯಣದೊಂದಿಗೆ ಪೂಜೆ ಮಾಡುವುದು ಹೆಚ್ಚು ಶ್ರೇಷ್ಠ.
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ:ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಜತೆಗೂಡಿ ಕ್ಷೀರಸಾಗರದಲ್ಲಿ ಮಂದರ ಪರ್ವತವನ್ನು ಕಡೆಯುತ್ತಿರುವಾಗ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಲಕ್ಷ್ಮೀ ಉದ್ಭವಿಸುತ್ತಾಳೆ. ಹೀಗೆ ಅವತರಿಸಿದ ಲಕ್ಷ್ಮಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಆರಾಧಿಸಿದರೆ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ಅದರ ಪ್ರತೀಕವಾಗಿ ವರಮಹಾಲಕ್ಷ್ಮೀ ವ್ರತ ಆಚರಿಸಿಕೊಂಡು ಬರಲಾಗಿದೆ.
ಬೇಡಿದ್ದನ್ನು ಭಕ್ತರಿಗೆ ಕೊಡುವಳು:ಪುರಾಣದಲ್ಲಿ ಚಾರುಮತಿ ಎಂಬವಳು ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಆಕೆಯ ಶ್ರದ್ಧಾ ಭಕ್ತಿಗೆ ಒಲಿದ ಲಕ್ಷ್ಮೀ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎಂದು ಹೇಳುತ್ತಾಳೆ. ಚಾರುಮತಿ ಶ್ರಾವಣ ಹುಣ್ಣಿಮೆಗೂ ಮುನ್ನ ಶುಕ್ರವಾರ ದಂದು ಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಈಡೇರಿಸಿ ಕೊಳ್ಳುತ್ತಾಳೆ ಎಂಬ ಕಥೆ ಇದೆ.
ಶುದ್ಧತೆಯ ಸಂಕೇತವೇ ಲಕ್ಷ್ಮೀ. ಹೀಗಾಗಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ಅಂಗಳದಲ್ಲಿ ರಂಗೋಲಿ ಹಾಕಿ ಬಾಗಿಲಿಗೆ ತಳಿರು ತೋರಣಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ. ಸಣ್ಣ ತಾಮ್ರದ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ಒಣ ದ್ರಾಕ್ಷಿಯನ್ನು ಹಾಕಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಲಶದಲ್ಲಿ ಜೋಡಿಸಿ ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ ಅಲಂಕರಿಸುತ್ತಾರೆ. ಜೊತೆಗೆ ಒಡವೆಗಳನ್ನು ಹಾಕಿ ಸಿಂಗಾರಗೊಳಿಸುತ್ತಾರೆ. ಹೀಗೆ ಶುಕ್ರವಾರ ವರಮಹಾಲಕ್ಷ್ಮಿಯನ್ನು ಬ್ರಾಹ್ಮೀ (ಮುಂಜಾನೆ 4:30 ರಿಂದ 5.30) ಮುಹೂರ್ತದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಬೇಕು. ಈ ಮುಹೂರ್ತದಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದರೆ ನಮ್ಮ ಪ್ರಾರ್ಥನೆ ದೇವಿಗೆ ತಲುಪಿ, ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎನ್ನುವ ನಂಬಿಕೆಯಿದೆ.
ಲಕ್ಷ್ಮಿಗೆ ಹೂವಿನ ಅಲಂಕಾರ:ಲಕ್ಷ್ಮಿಗೆ ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವು ಹಾಗೂ ಬಿಲ್ವಪತ್ರೆ ದೇವಿಯ ಇಷ್ಟದ ಹೂಗಳು. ಹೀಗಾಗಿ ವ್ರತ ಮಾಡುವವರು ಈ ಹೂವನ್ನು ತಪ್ಪದೆ ತಾಯಿಯ ಬಳಿಯಿಟ್ಟು ಪೂಜೆ ಮಾಡುತ್ತಾರೆ. ಇದೇ ಅಲ್ಲದೆ ಗುಲಾಬಿ, ಕನಕಾಂಬರಿ, ಸೇವಂತಿಗೆ, ಮಲ್ಲಿಗೆ ಸೇರಿ ಬಗೆಬಗೆಯ ಹೂಗಳಿಂದ ಅಲಂಕರಿಸಿ, ಬಗೆ ಬಗೆಯ ಹಣ್ಣುಗಳು, ಸಿಹಿ ತಿನಿಸುಗಳನ್ನು ಇಟ್ಟು. ಪೂಜಿಸಲಾಗುವುದು. ಸಂಪತ್ತು ಮತ್ತು ಸೌಭಾಗ್ಯದ ದೇವಿಯಾಗಿರುವ ಲಕ್ಷ್ಮೀಗೆ ಅರಿಶಿನ ಕುಂಕುಮ, ಬಳೆಗಳಿಂದ ಅಲಂಕರಿಸಿ ಚಿನ್ನಾ ಭರಣಗಳನ್ನಿಟ್ಟು ಐಶ್ವರ್ಯ ಹೆಚ್ಚಿಸುವಂತೆ ಪ್ರಾರ್ಥಿಸುತ್ತಾರೆ.
ಬಿಲ್ವ ವೃಕ್ಷಕ್ಕೆ ಪೂಜೆ:ವರಗಳನ್ನು ಕೊಡುವ ತಾಯಿ ವರಮಹಾಲಕ್ಷ್ಮೀ ಬಿಲ್ವ ವೃಕ್ಷದಲ್ಲಿ ನೆಲೆಸಿರುತ್ತಾಳೆ. ಹಾಗಾಗಿ ಬಿಲ್ವ ಪತ್ರೆಯಿಂದ ಪೂಜೆ ಮಾಡಿದರೆ ತಾಯಿ ಒಲಿಯುತ್ತಾಳೆ ಎಂಬುದು ನಂಬಿಕೆ. ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಶ್ರೇಷ್ಠ. ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ ಹಾಗೂ ಎಲ್ಲಾ ಕೆಲಸದಲ್ಲಿ ಏಳಿಗೆ ಆಗುತ್ತದೆಂಬ ನಂಬಿಕೆಯೂ ಇದೆ. ಎಲ್ಲಿ ಮನೆ ಮನಗಳು ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮೀ ಸದಾಕಾಲ ನೆಲೆಸಿರುತ್ತಾಳೆ ಎಂಬುದು ಪೂರ್ವಜರ ನಂಬಿಕೆಯಾಗಿದೆ.
ಕಡಲೆಬೇಳೆ ಪ್ರಿಯ ಧಾನ್ಯ:ಧಾನ್ಯಗಳಲ್ಲಿ ಕಡಲೆಬೇಳೆ ಲಕ್ಷ್ಮೀಗೆ ಪ್ರಿಯವಾದ ಧಾನ್ಯ. ಹಾಗಾಗಿ ವರಮಹಾಲಕ್ಷ್ಮೀ ಹಬ್ಬದಂತೆ ತಪ್ಪದೇ ಕಡಲೆಬೇಳೆಯಿಂದ ಪಾಯಸ ಹಾಗೂ ಹೋಳಿಕೆ ತಯಾರಿಸಿ ದೇವಿಗೆ ಅರ್ಪಿಸಲಾಗುತ್ತದೆ. ಸಂಜೆ ಮನೆಗೆ ಮುತೆôದೆಯರನ್ನು ಕರೆದು ಅರಿಶಿಣ, ಕುಂಕುಮ, ಬಳೆ, ಸಿಹಿ ಕೊಡುತ್ತಾರೆ. ಇದೇ ರೀತಿ ಮದುವೆಯಾದ ಹೆಣ್ಣು ಮಕ್ಕಳು ಮೊದಲನೇ ವರ್ಷದಿಂದ ಒಂಬತ್ತು ವರ್ಷದವರೆಗೆ ಶ್ರದ್ಧೆಯಿಂದ ವ್ರತವನ್ನಾಚರಿಸಿ ಒಂಬತ್ತನೇ ವರ್ಷ ವ್ರತವನ್ನು ಮುಗಿಸುತ್ತಾರೆ.
ಪ್ಲಾಸ್ಟಿಕ್​ ಕಪ್​, ಪ್ಲೇಟ್​, ಸ್ಟ್ರಾಗಳ ಉತ್ಪಾದನೆಯೇ ಬಂದ್​; ಸರ್ಕಾರದಿಂದ ಘೋಷಣೆ

ಭಾರತದಲ್ಲಿ ಪ್ರತಿನಿತ್ಯ 1,157 ಮಹಿಳೆಯರು ನಾಪತ್ತೆ!; ದೇಶದಲ್ಲಿ ಹೆಚ್ಚಾಗಿದೆ ಸ್ತ್ರೀಯರ ಮಿಸ್ಸಿಂಗ್​ ಕೇಸ್​..

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:1 × two =
Remember me
