ಡಾ. ಗುರುಮೂರ್ತಿ ಯರಗಂಬಳಿಮಠಮನುಕುಲಕ್ಕೆ ನೈತಿಕತೆಯ ಪಾಠಮಾಡಿ ಸತ್ಯ-ಶುದ್ಧ ಸನ್ನಡತೆಯ ಸಾತ್ವಿಕ ಬದುಕಿನ ಸಂಸ್ಕಾರ ಅರುಹಿದ ಚೈತನ್ಯ ಶಕ್ತಿಯೇ ಶ್ರೀವೀರಭದ್ರ ದೇವರು. ಬದುಕಿನ ಶ್ರೇಷ್ಠ ನಡೆ-ನುಡಿಗೆ ಅಗತ್ಯವಾದ ಧರ್ಮ ಮಾರ್ಗದಲ್ಲಿ ಕೈಹಿಡಿದು ಮುನ್ನಡೆಸಲು ಬೆಳಕನಿತ್ತ ಮಹಾನುಭಾವ. ಮಾನವನ ಇಹದ ಬದುಕಿನ ಸ್ತರಗಳಲ್ಲಿ ಇರಬಹುದಾದ ಜನವಿರೋಧಿ ಕೃತ್ಯಗಳ ನಿವಾರಣೆಗೆ ಶ್ರೀವೀರಭದ್ರ ದೇವರ ಮಹಾಶಕ್ತಿ ಸಂಚಯವು ನಿರಂತರ ಪ್ರಭಾವ ಬೀರುತ್ತದೆ.
ವಿಶ್ವತೋಮುಖ: ಭಾರತದ ದೇವಭೂಮಿಯಲ್ಲಿ ಶ್ರೀವೀರಭದ್ರ ದೇವರ ಅವತಾರವಾಗಿದ್ದು, ಇದಕ್ಕೆ ಸಾಕ್ಷಿಯಾಗಿ ರಾಷ್ಟ್ರವ್ಯಾಪಿ ಇರುವ ಶ್ರೀವೀರಭದ್ರ ದೇವರ ದೇವಾಲಯಗಳು ಭಕ್ತಗಣದ ಸತ್ಸಂಕಲ್ಪಗಳಿಗೆ ಅನುಗುಣವಾಗಿ ಅವರ ಇಷ್ಟಾರ್ಥಗಳನ್ನು ಈಡೇರಿಸುತ್ತಿವೆ. ಶ್ರೀರಂಭಾಪುರಿ ಪೀಠದ ಗೋತ್ರಪುರುಷನಾಗಿ, ಕ್ಷೇತ್ರನಾಗಿ ನೆಲೆನಿಂತಿರುವ ವೀರಭದ್ರಸ್ವಾಮಿಯ ಕ್ಷೇತ್ರಗಳಲ್ಲಿ ಕರ್ನಾಟಕದ್ದು ಸಿಂಹಪಾಲು. ವೀರಭದ್ರ ಎಂಬ ಶಬ್ದದಲ್ಲಿ ವೀರ ಮತ್ತು ಭದ್ರ ಎಂಬ ಎರಡು ಪದಗಳ ಸಂಗಮವಿದೆ. ವೀರ ಎಂಬ ಪದಕ್ಕೆ ಕಲಿ, ಶೂರ, ಪರಾಕ್ರಮಿ, ಶಕ್ತಿಯುವಾದ, ಬಲಿಷ್ಠವಾದ, ಶ್ರೇಷ್ಠವಾದ, ಅತ್ಯುತ್ತಮವಾದ, ಭಯಂಕರವಾದ ಎಂಬಿತ್ಯಾದಿ ಅರ್ಥಗಳು ಗೋಚರಿಸುತ್ತವೆ. ಭದ್ರ ಎಂಬ ಪದಕ್ಕೆ ದೃಢವಾದ, ಗಟ್ಟಿಯಾದ, ಸುಖ, ಶ್ರೇಯಸ್ಸು, ಸುರಕ್ಷಿತ, ಚಿನ್ನ, ಮಂಗಳಕರವಾದ, ಶುಭ್ರವಾದ, ಶ್ರೇಷ್ಠವಾದ, ಅಂದವಾದ ಮುಂತಾದ ಅರ್ಥ ವಿವರಣೆಯನ್ನು ಕಾಣುತ್ತೇವೆ. ಈ ನಿಟ್ಟಿನಲ್ಲಿ ವೀರಭದ್ರ ಪದದ ಅರ್ಥವ್ಯಾಪ್ತಿ ವಿಶ್ವತೋಮುಖವಾದದ್ದು.
ವಚನಗಳಲ್ಲಿ ವೀರಭದ್ರ: ವೀರಭದ್ರ ದೇವರು ಸ್ಥಿತಿಬಿಂಬ ಮತ್ತು ಜಂಗಮ ಶ್ರೀಲತೆಯ ಚೈತನ್ಯದ ಗತಿಬಿಂಬಗಳನ್ನು ಪ್ರತಿನಿಧಿಸುವ ಮಹಾಶಕ್ತಿ ಸಂಚಯ. ‘ವೀರಭದ್ರ ದೇವರ ಜಡಿ ಮುಡಿ ಕೇಶಂಗಳಲ್ಲಿ ಅನಂತ ಗಣಂಗಳುದಯ ವಿಸ್ತಾರವು ಇದೇನು ನಿಮ್ಮರಿವಿಂಗೆ ದುರ್ಲಭ ಮಹತ್ವವೆಂಬೆನೆ ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಶ್ರೀಸಿದ್ಧರಾಮ ಶಿವಯೋಗಿಗಳ ವಚನದಲ್ಲಿ ವೀರಭದ್ರ ದೇವರ ಅಪಾರ ಶಕ್ತಿಯ ಅನಾವರಣವಿದೆ. ಆಂಧ್ರಪ್ರದೇಶದ ರಾಯಚೋಟಿ ಕ್ಷೇತ್ರದ ವೀರಭದ್ರ ದೇವರನ್ನು ಕುರಿತು ವಚನಕಾರ ಆದಯ್ಯನು ‘ ಶ್ರೀರಾಚೋಟಿ ವೀರಭದ್ರ ದೇವರ ಪ್ರತಾಪವೆಂತೆಂದೊಡೆ; ಪಾತಾಳದಿಂ ಕೆಳಗೆಪಾದ ಸುರಲೋಕದಿಂ ಮೇಲೆ ಉತ್ತಮಾಂಗ ಬ್ರಹ್ಮಾಂಡವೆ ಮುಕುಟ…ಗಗನವೇ ಮುಖ, ಸೂರ್ಯ ಚಂದ್ರಾರ್ಕಗಳೇ ನೇತ್ರಗಳು…ನಕ್ಷತ್ರವೇ ಪುಷ್ಪ, ನಿತ್ಯವೆ ಪೂಜೆ, ಮೇಘವೇ ಜಡೆ, ಬೆಳದಿಂಗಳೇ ವಿಭೂತಿ…ಜಗವೇ ಕಥಾ…ಪೃಥ್ವಿಯೇ ಸಿಂಹಾಸನ…ನಿರಾಳವೇ ತೃಪ್ತಿ… ನಮೋ ನಮೋ ಎನುರ್ತಿದ್ದನಯ್ಯ ಸೌರಾಷ್ಟ್ರ ಸೋಮೇಶ್ವರ. ಇಲ್ಲಿ ಶ್ರೀವೀರಭದ್ರ ದೇವರ ವಿಶ್ವವ್ಯಾಪಕ ಸ್ವರೂಪ ಹಾಗೂ ಚೈತನ್ಯ ವೈಭವವನ್ನು ಆದಯ್ಯ ಸೊಗಸಾಗಿ ನಿರೂಪಿಸಿದ್ದಾನೆ. ಶಿವ ಸಂಸ್ಕೃತಿಯನ್ನು ಎತ್ತಿಹಿಡಿದ ವೀರಭದ್ರನ ಘನವ್ಯಕ್ತಿತ್ವ ಇದರಿಂದ ತಿಳಿಯುತ್ತದೆ.
ಶಾಸನಗಳಲ್ಲಿ ವೀರಭದ್ರ: ನಾಡಿನಲ್ಲಿ ದೊರೆತ ಹಲವಾರು ಶಾಸನಗಳು ಕೂಡ ಶ್ರೀವೀರಭದ್ರ ದೇವರ ಅಸ್ತಿ್ತ್ವವನ್ನು ಉಲ್ಲೇಖಿಸುತ್ತವೆ. ಕ್ರಿ.ಶ. 1045ರ ಹಾವೇರಿ ಜಿಲ್ಲೆ ಕೋಳೂರು ಶಾಸನದಲ್ಲಿ ಚಾಲುಕ್ಯ ತ್ರೈಲೋಕಮಲ್ಲ 1ನೆಯ ಸೋಮೇಶ್ವರನನ್ನು ವರ್ಣಿಸುವಾಗ ಶೌರ್ಯದಲ್ಲಿ ಅವನು ವೀರಭದ್ರನಿಗೆ ಸಮಾನ ಎಂದು ಹೋಲಿಸಿದ್ದಾನೆ. ಮಂಡ್ಯಜಿಲ್ಲೆಯ ರಾಯಶೆಟ್ಟಿಪುರ ಸೋಮೇಶ್ವರ ದೇವಾಲಯದ ಕ್ರಿ.ಶ. 1251ರ ಶಾಸನದಲ್ಲಿ ಅಸಂಖ್ಯಾತ ಮಹಾಗಣಂಗಳು ವೀರಭದ್ರ ದೇವರು ಮತ್ತು ವೀರಸೋಮೇಶ್ವರ ಬಿಟ್ಟಿರುವ ದತ್ತಿ ಎಂದಿದೆ. ಕ್ರಿ.ಶ. 1257 ರಲ್ಲಿ ದೊರೆತ ಚಿಕ್ಕಮಗಳೂರು ತಾಲೂಕಿನ ಶಾಸನದಲ್ಲಿ ಬಾಚನಾಯಕ ಶ್ರೀಸೋಮೇಶ್ವರ ದೇವರನ್ನೂ ವೀರಭದ್ರ ದೇವರನ್ನೂ ಪ್ರತಿಷ್ಠಾಪಿಸಿ ದೇವರಿಗೆ ದತ್ತಿಗಳನ್ನು ಬಿಟ್ಟಿದ್ದು ಎಂದು ತಿಳಿಸುತ್ತದೆ. ಅರಸಿಕೆರೆಯ ಕ್ರಿ.ಶ. 1278ರ ಶಾಸನವು ಕಲ್ಲಯ್ಯನೆಂಬ ವೀರನೊಬ್ಬನು ಭೃಂಗೀಶ, ನಂದಿನಾಥ ಮತ್ತು ವೀರಭದ್ರ ದೇವರು ಮೆಚ್ಚುವಂತೆ ಹೋರಾಡಿದನು ಎಂದು ಹೇಳುತ್ತದೆ. ಕೇವಲ ಕನ್ನಡ ನಾಡಿಗೆ ಸೀಮಿತವಾಗಿರದೇ, ನೆರೆಯ ಆಂಧ್ರಪ್ರದೇಶವೂ ಸೇರಿದಂತೆ ಭಾರತದಾದ್ಯಂತ ವೀರಭದ್ರ ದೇವರ ಶಾಸನಗಳು ಹಾಗೂ ದೇವಾಲಯಗಳ ಉಲ್ಲೇಖಗಳಿವೆ.
ವೀರಭದ್ರ ದೇವರ ಜಯಂತಿ: ಶ್ರೀವೀರಭದ್ರ ದೇವರು ಅವತಾರವಾದದ್ದು ಭಾದ್ರಪದ ಮಾಸದ ಮೊದಲ ಮಂಗಳವಾರ. ಸೆ. 19 ರಂದು ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಶ್ರೀವೀರಭದ್ರ ದೇವರ ಜಯಂತಿಯನ್ನು ಆಚರಿಸಲು ಭಕ್ತ ಸಮೂಹ ಸಜ್ಜುಗೊಂಡಿದೆ. ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಂಘಟನಾ ವೇದಿಕೆಯು ಶ್ರೀವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸಲು ಎಲ್ಲೆಡೆ ಪೂರಕ ವಾತಾವರಣ ನಿರ್ವಿುಸಿದೆ. ದೇಶದ ಎಲ್ಲಾ ವೀರಭದ್ರ ದೇವಾಲಯಗಳಲ್ಲಿ ರುದ್ರಾಭಿಷೇಕ ಮಹಾಪೂಜೆ, ಪಲ್ಲಕ್ಕಿ ಉತ್ಸವಗಳು ನಡೆಯಲಿವೆ.
(ಲೇಖಕರು ಹವ್ಯಾಸಿ ಬರಹಗಾರರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eleven =
Remember me
