|ಮಹಿಪಾಲರೆಡ್ಡಿಸೇಡಂ
ಜನಸಾಮಾನ್ಯರ ಕವಿ, ಜೀವಕಾರುಣ್ಯದ ಕವಿ, ಲೋಕಕ್ಕೆ ಮಾರ್ಗದರ್ಶಿಯಾಗಿದ್ದ ಮತ್ತು ತಮ್ಮ ಜೀವಿತಾವಧಿಯ ಕಾಲಘಟ್ಟದಲ್ಲಿ ಜಾತೀಯತೆ, ಅಂಧಶ್ರದ್ಧೆ, ಮೇಲುಕೀಳುಗಳನ್ನು ತಮ್ಮ ಪದ್ಯಗಳ ಮೂಲಕ ಧಿಕ್ಕರಿಸಿದವರು ವೇಮನ ಮಹಾಯೋಗಿ. 1412- 1480ರ ನಡುವೆ ಅಂದಾಜು 68 ವರ್ಷ ಬದುಕಿದ್ದ ವೇಮನ ಮಹಾಕವಿ, ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತರಾಗಿ, ಮಹಾಂತರಾಗಿ ಬೆಳೆದದ್ದು ಅಪೂರ್ವ. 15ನೇ ಶತಮಾನದ ತೆಲುಗು ಭಾಷೆಯ ಅನುಭಾವಿ ವಚನಕಾರ ಮತ್ತು ಸಮಾಜ ಸುಧಾರಕ ಈ ವೇಮನರು. ಕನ್ನಡದಲ್ಲಿ ಸರ್ವಜ್ಞ ಮತ್ತು ತಮಿಳಿನಲ್ಲಿ ತಿರುವಳ್ಳುವರ್ ಅವರಂತೆ ತೆಲುಗಿನಲ್ಲಿ ಶ್ರೇಷ್ಠ ಮತ್ತು ಮಹಾಕವಿ ಎಂದರೆ ವೇಮನ ಮಹಾಯೋಗಿ.
15ನೇ ಶತಮಾನದಲ್ಲಿ ವಿಶಾಲಾಂಧ್ರ ಪ್ರದೇಶದ ತೆಲುಗು ಭಾಷಿಕ ಶ್ರೇಷ್ಠ ವಚನಕಾರ, ಕವಿತಿಲಕ, ಸಮಾಜ ಚಿಂತಕ ಎಂದು ಖ್ಯಾತಿ ಪಡೆದ ವೇಮನರು, ಮಾನವ ಕುಲದ ಏಳಿಗೆಗಾಗಿ ಶ್ರಮಪಟ್ಟವರಲ್ಲಿ ಅಗ್ರಗಣ್ಯರು. ಅವರ ವಚನಗಳು, ಸಂದೇಶವಿರುವ ಪದ್ಯಗಳು ತೆಲುಗಿನ ಸಾಹಿತ್ಯದಲ್ಲಿ ‘ವೇಮನ ಶತಕಲು’ (ವೇಮನ ಶತಕಗಳು) ಎಂದು ಜನಜನಿತವಾಗಿವೆ.
ವೇಮನ ಮತ್ತು ಅವರ ಪದ್ಯಗಳ ಕುರಿತು ಮೊಟ್ಟಮೊದಲ ಬಾರಿಗೆ ಬೆಳಕು ಚೆಲ್ಲಿದ್ದು, ಸಿ.ಪಿ. ಬ್ರೌನ್. ಆತನ ಪ್ರಕಾರ, ವೇಮನರು ಈಗಿನ ಆಂಧ್ರಪ್ರದೇಶದ ಮೂಗಚಿಪಲ್ಲಿಯ ಕೋಮಗಿರಿ ವೇಮ ಭೂಪಾಲ ಮತ್ತು ಮಲ್ಲಮಾಂಬೆ ಎಂಬ ದಂಪತಿಯ ಮಗನಾಗಿ ಜನಿಸಿದರು. ಬದುಕಿನುದ್ದಕ್ಕೂ ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧಿಸಿ, ಭಕ್ತಿ ಸಂಪನ್ನೆ ಎನ್ನಿಸಿಕೊಂಡಿರುವ ಮಹಾಸಾಧಿ್ವ ಹೇಮರೆಡ್ಡಿ ಮಲ್ಲಮ್ಮನ ಮೈದುನ ಆಗಿದ್ದ ವೇಮನರು, ಹೆತ್ತವರಿಂದ, ಒಡಹುಟ್ಟಿದವರಿಂದ, ಸಂಬಂಧಿಕರಿಂದ ಅನಾದರಕ್ಕೆ ಗುರಿಯಾಗುತ್ತಾರೆ. ಕೆಲವು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಪರಸ್ತ್ರೀ ಸಂಗದಲ್ಲಿ ವಿಷಯಾಸಕ್ತರಾದ ವೇಮನರು, ವೇಶ್ಯಾಸ್ತ್ರೀಯೊಬ್ಬಳ ಸಹವಾಸ ಮಾಡುತ್ತಾರೆ. ಈ ಕಾರಣಕ್ಕೆ ತಮ್ಮ ಮನೆಯ ಸಂಪತ್ತನ್ನೆಲ್ಲಾ ಹಾಳು ಮಾಡಿಕೊಳ್ಳುತ್ತಾರೆ. ವೇಮನರಿಗೆ ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ಮೈದುನನ ಮನ ತಿದ್ದಲು ಪ್ರಯತ್ನಿಸುತ್ತಾರೆ. ಮನೆತನದ ಗೌರವವನ್ನು ಕಾಪಾಡುವುದಕ್ಕಾಗಿ ಮೈದುನನಿಗೆ ಬುದ್ಧಿ ಹೇಳುತ್ತಾರೆ. ಆ ಕಾರ್ಯದಲ್ಲಿ ಸಫಲ ಕೂಡ ಆಗುತ್ತಾರೆ. ಅದೊಮ್ಮೆ ಹೇಮರೆಡ್ಡಿ ಮಲ್ಲಮ್ಮರ ಮೂಗುತಿಯನ್ನು ವೇಶ್ಯಾಸ್ತ್ರೀ ಗಮನಿಸುತ್ತಾಳೆ. ತನ್ನ ಅಂತಃಪುರಕ್ಕೆ ಬಂದ ವೇಳೆಯಲ್ಲಿ ವೇಮನರ ಬಳಿ ಮೂಗುತಿಯ ಪ್ರಸ್ತಾಪ ಮಾಡುತ್ತಾಳೆ. ಆದರೆ, ಅದು ಅಸಾಧ್ಯವೆಂದರೂ ಕೇಳದ ಅವಳ ಮನದಾಸೆ ಈಡೇರಿಸಲು, ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮನ ಮೂಗುತಿ ಬೇಕೆಂದು ವೇಮನ ಕೇಳುತ್ತಾರೆ. ಆಗ ಮಲ್ಲಮ್ಮ ಅವರು ಮೂಗುತಿ ಕೊಡಲು ಒಪ್ಪಿ ಕರಾರೊಂದನ್ನು ಹಾಕುತ್ತಾರೆ.
ಮನದನ್ನೆಯ ಬಯಕೆಯನ್ನು ಈಡೇರಿಸುವುದೊಂದೇ ಗುರಿಯಾಗಿಟ್ಟುಕೊಂಡಿದ್ದ ವೇಮನರು ಅತ್ತಿಗೆ ಹಾಕುವ ಕರಾರಿಗೆ ಒಪ್ಪಿಕೊಳ್ಳುತ್ತಾರೆ. ‘ಮೂಗುತಿಯನ್ನು ಆ ವೇಶ್ಯಾಸ್ತ್ರೀಗೆ ಕೊಡುವಾಗ, ಆಕೆ ನಗ್ನಳಾಗಿ ಬಂದು ವೇಮನ ಕುಳಿತಿರುವ ಮಂಚವನ್ನು ಮೂರು ಸುತ್ತು ಸುತ್ತಬೇಕು. ನಂತರ ಹಿಂಬದಿಗೆ ಬಾಗಿ, ಎರಡು ಕಾಲುಗಳ ನಡುವೆ ಬಗ್ಗಿ ಕೈ ಚಾಚಿ ವೇಮನನಿಂದ ಮೂಗುತಿಯನ್ನು ಪಡೆಯಬೇಕು. ಅವಳು ಆ ಮೂಗುತಿಯನ್ನು ಪಡೆಯುವವರೆಗೂ ವೇಮನರು ಆಕೆಯ ನಗ್ನದೇಹವನ್ನು ತದೇಕಚಿತ್ತನಾಗಿ ನೋಡಬೇಕು’ ಎಂದು ಅತ್ತಿಗೆ ಹಾಕಿದ ಕರಾರಿನೊಂದಿಗೆ, ವೇಮನರು ವೇಶ್ಯೆ ಮನೆಗೆ ಹೋಗುತ್ತಾರೆ. ಅತ್ತಿಗೆಯ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಮೂಗುತಿಯನ್ನು ಕೊಡುವಾಗ ಪ್ರೇಯಸಿಯ ನಗ್ನ ಶರೀರವನ್ನು ಕಂಡೊಡನೆ ಅವರೊಳಗೆ ಭಯಂಕರವಾದ ಜಿಗುಪ್ಸೆ, ಅಸಹ್ಯ ಭಾವನೆ ಮೂಡುತ್ತದೆ. ತಕ್ಷಣವೇ ವೈರಾಗ್ಯ ತಾಳುತ್ತಾರೆ. ಗಾಬರಿಗೊಳ್ಳುತ್ತಾರೆ. ಕಣ್ಮುಚ್ಚಿಕೊಳ್ಳುತ್ತಾರೆ. ತಮ್ಮೊಳಗಿನ ವೈರಾಗ್ಯದ ಮನೋಭಾವವನ್ನು ಕವಿತೆಯಾಗಿಸಿಕೊಂಡು, ತತ್ವಜ್ಞಾನ ಹೇಳುತ್ತಾ ಲೋಕಸಂಚಾರಿಯಾಗುತ್ತಾರೆ.
ತಾಯಿಯ ಗರ್ಭದಿಂದ ತಾನು ಬರುವ ಸಮಯದಿ
ಮೊದಲು ವಸ್ತ್ರಮಿಲ್ಲ, ತುದಿಗುಮಿಲ್ಲ
ನಡುವೆ ಬಟ್ಟೆಯುಡುವುದೇಕೆಂದು ಅರಿಯಿರಿ
ವಿಶ್ವದಾಭಿರಾಮ ಕೇಳೋ ವೇಮ|
ಜೀವನವೆಲ್ಲ ನಶ್ವರವೆನ್ನಿಸಿ, ನಗ್ನನಾಗಿ ವೈರಾಗಿಯಂತೆ ವೇಶ್ಯಾಸ್ತ್ರೀಯ ಮನೆಯಿಂದ ಹೊರಬೀಳುತ್ತಾರೆ. ನಾಡಿನ ತುಂಬೆಲ್ಲ ಸಂಚರಿಸಿ, ಲೋಕಜ್ಞಾನವನ್ನು ಹರಡುತ್ತಾರೆ. ತಮ್ಮ ಸಾಧನೆಯಿಂದ ಮಹಾಯೋಗಿಯಾಗುತ್ತಾರೆ. ಯೌವ್ವನದ ಆರಂಭದ ದಿನಗಳಲ್ಲಿ ಸ್ವೇಚ್ಛಾಜೀವನ ನಡೆಸುತ್ತಿದ್ದ ವೇಮನರು ಜ್ಞಾನೋದಯ ಪಡೆದು ದಾರ್ಶನಿಕ ಕವಿಯೂ, ಅನುಭಾವಿಯೂ ಆಗಿ ರೂಪುಗೊಂಡಿದ್ದು ಐತಿಹಾಸಿಕ ಸತ್ಯ. ಯೋಗಿ ವೇಮನ, ವಚನಗಳ ಸತ್ಯವನ್ನು ಪ್ರತಿಪಾದಿಸಿದ್ದು, ಲೋಕಕ್ಕೆ ಹಂಚಿದ್ದು ಇಂದಿಗೂ ಪ್ರಸ್ತುತ ಎನಿಸಿವೆ.
ವೇಮನರು ಶಾರ್ವರಿ ನಾಮ ಸಂವತ್ಸರ ಶ್ರೀರಾಮನವಮಿ ದಿನದಂದು ಇಹಲೋಕ ತ್ಯಜಿಸಿದರೆಂದು ಹೇಳಲಾಗಿದೆ. ಈಗಿನ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಕದಿರು ತಾಲೂಕಿನ ಕಟಾರುಪಳ್ಳಿಯಲ್ಲಿ ಅವರ ಸಮಾಧಿ ಇದ್ದು, ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಸುಖದಲ್ಲಿಯೇ ಆಸಕ್ತನಾಗಿ ಲೌಕಿಕ ಜೀವನದಲ್ಲಿ ಕೆಟ್ಟವನು ಎನಿಸಿಕೊಂಡಿದ್ದ ವೇಮನರು, ಗುರುವಿನ ಕೃಪಾಕಟಾಕ್ಷದಿಂದ ಜ್ಞಾನಿಯಾಗುತ್ತಾರೆ; ಯೋಗಿಯಾಗುತ್ತಾರೆ; ಸಿದ್ಧಸಾಧಕರಾಗುತ್ತಾರೆ. ಮೊದಲಿನಿಂದಲೂ ವೇಮನರು ಸತ್ಯಪ್ರಿಯರಾಗಿದ್ದರು. ನೇರ ಮತ್ತು ನಿರ್ಭಯವಾಗಿ ತೋಚಿದ್ದನ್ನು ಆಡುವ ಸ್ವಭಾವ. ಇದು ಯೋಗಿಯಾದ ನಂತರ ಮತ್ತಷ್ಟು ಮೊನಚಾಯಿತು. ಸೃಷ್ಟಿಯಲ್ಲಿ ಎಲ್ಲರೂ ಸಮಾನರು, ಮೇಲು-ಕೀಳೆಂಬುದೇ ಇಲ್ಲ ಎಂಬುದನ್ನು ಹೇಳುತ್ತಾ ಎಲ್ಲಾ ಜಾತಿಗಳ ಹಿರಿತನವನ್ನೂ ಪೊಳ್ಳು ಎಂದು ಸಾರಿದರು. ಜಾತಿ ಪದ್ಧತಿಯನ್ನು ಖಂಡಿಸಿದರು.
ಯೋಗಿಯಾದ ನಂತರ ವೇಮನ ಮನೆ ಬಿಟ್ಟು ಬೈರಾಗಿಯಾಗಿ ಸುತ್ತಾಡಿದರು. ಎಲ್ಲರಿಗೂ ತಾವು ಒಳ್ಳೆಯದೆಂದು ಕಂಡುಕೊಂಡದ್ದನ್ನೇ ಹೇಳಲು ಪ್ರಯತ್ನಿಸಿದರು. ಜನಸಾಮಾನ್ಯರ ಬಾಯಲ್ಲಿ ಸುಲಭವಾಗಿ ನಿಲ್ಲಬಲ್ಲ ಪದ್ಯಗಳನ್ನು ರಚಿಸಿ ಹೇಳಿದರು. ವೇಮನರ ಪದ್ಯಗಳ ಕೊನೆಯಲ್ಲಿ ವೆರ್ರಿ ವೇಮ (ಹುಚ್ಚ ವೇಮ) ಎಂದು ಹೇಳಿರುವುದನ್ನು ನೋಡುತ್ತೇವೆ. ಆದರೆ, ಆಟವೆಲದಿ ಛಂದಸ್ಸಿನಲ್ಲಿ ಹೇಳಿರುವ ಪದ್ಯಗಳೇ ತುಂಬ ಜನಪ್ರಿಯವಾದವು. ತೆಲುಗು ಸಾಹಿತ್ಯದಲ್ಲಿ ಆಟವೆಲದಿ ಛಂದಸ್ಸಿಗೆ ಒಂದು ರೂಪ ಕೊಟ್ಟು ಅದಕ್ಕೆ ಸ್ಥಾಯಿಯಾದ ಸ್ಥಾನ ಕಲ್ಪಿಸಿದ್ದು ವೇಮನರ ರಚನೆ ಎಂದು ಹೇಳಲಾಗುತ್ತದೆ.
ವೇಮನರ ಬಹುಪಾಲು ಪದ್ಯಗಳು ‘ವಿಶ್ವದಾಭಿರಾಮ ಕೇಳೋ ವೇಮ’ ಎಂಬ ಅಂಕಿತನಾಮದಲ್ಲಿವೆ. ತಮ್ಮ ಗುರು ಅಭಿರಾಮಾಚಾರ್ಯರ ಗೌರವಾರ್ಥ ವೇಮನರು ಇದನ್ನು ಬಳಸಿರಬಹುದು ಎನ್ನಲಾಗುತ್ತದೆ. ವಿಶ್ವಬೋಧೆ ಮಾಡಿಸಿದ ಗುರು (ಅಭಿರಾಮ ಆಚಾರ್ಯ) ನಿನಗೆ (ವೇಮನನಿಗೆ) ಹೇಳುತ್ತಿದ್ದಾರೆ, ಕೇಳು ಎಂದು ಇದರ ಅರ್ಥ. ಮೂರೇ ಸಾಲುಗಳಿಂದ ಬಾಳಿನ ಸಾರ ಸರ್ವವನ್ನೆಲ್ಲಾ ಭಟ್ಟಿ ಇಳಿಸಿ, ಜನರ ಆಡುಮಾತಿನಲ್ಲಿಯೇ ಅವರಿಗೆ ತಿಳಿಸಿ, ಅವರ ನಾಲಿಗೆಯ ಮೇಲೆ ಸದಾ ಜೀವಂತವಾಗಿರುವಂತೆ ಪದ್ಯಗಳನ್ನು ಬರೆದದ್ದು ವೇಮನರು. ಅವರ ಬರೆದ ಕೆಲ ಪದ್ಯಗಳನ್ನು ಗಮನಿಸಿ.
ಆತ್ಮಶುದ್ಧಿ ಇರದ ಆಚಾರವೇತಕೆ?/ ಮಡಕೆ ಶುದ್ಧಿ ಇರದ ಅಡುಗೆ ಯಾತಕೆ?
ಚಿತ್ತಶುದ್ಧಿ ಇರದ ಶಿವನ ಪೂಜೆ ಯಾಕೆ?/ ವಿಶ್ವದಾಭಿರಾಮ ಕೇಳೋ ವೇಮ |
ಮಿಥ್ಯ ತಿಳಿವಿನಿಂದ ಮೋಕ್ಷ ದೊರಕಬಹುದೆ?/ ಕೈಲಾಗದ ಕೆಲಸ ಗೆಯ್ಯಬೇಡ
ಗುರುವು ಎನ್ನಬೇಡ ಗುಣಹೀನನಾಗಿರೆ/ ವಿಶ್ವದಾಭಿರಾಮ ಕೇಳು ವೇಮ |
(ಲೇಖಕರು ಪತ್ರಕರ್ತರು. ಕಲಬುರಗಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರು)
‘ಸತ್ತು ಹೋದವ’ ಸತ್ತ ಮರುದಿನವೇ ತಾನು ಮೃತಪಟ್ಟಿದ್ದ ಆ ಸ್ಥಳದಲ್ಲೇ ಮತ್ತೆ ಕಾಣಿಸಿಕೊಂಡಿದ್ದ!; ಆಗಿದ್ದಾದರೂ ಏನು, ಏಕೆ?
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 5 =
Remember me
