|ಚಿಂತಾಮಣಿ ಕೊಡ್ಲೆಕೆರೆ
ಜಗತ್ತಿನ ವಿಸ್ಮಯಗಳಲ್ಲಿ ಕಾವ್ಯ ಒಂದು. ಚಿತ್ರಕಲೆ, ಶಿಲ್ಪಕಲೆ, ಸಂಗೀತ, ನಾಟ್ಯ ಇವೆಲ್ಲವೂ ಭಾಷೆಯ ಬಂಧ ಇಲ್ಲದ ಕಲಾರೂಪಗಳು. ಲೋಕೋಪಯೋಗಿಯಾದ ಭಾಷೆಯನ್ನು, ಪದಗಳನ್ನು ಬಳಸಿಕೊಂಡು, ‘ಹೊರಳಿಸಿಕೊಂಡು’, ಅದರ ಅರ್ಥಸಾಧ್ಯತೆಗಳನ್ನು ಹೆಚ್ಚಿಸಿಕೊಂಡು ಕವಿ ತನ್ನ ಕೃತಿಯನ್ನು ಕಟ್ಟುತ್ತಾನೆ. ನವನವೋಲ್ಲೇಖಶಾಲಿನಿಯೂ, ನವನವೋನ್ಮೇಷಶಾಲಿನಿಯೂ ಆದ ಕವಿಪ್ರತಿಭೆಯ ಫಲ ಕಾವ್ಯ. ಆ ಕಾವ್ಯ ಬೆಳೆಯುವುದು ತನ್ನ ಅನನ್ಯ ಧ್ವನಿಶಕ್ತಿಯಿಂದ. ಕಾವ್ಯದ ಆತ್ಮ ರಸ. ಶಬ್ದಮಾರ್ಗಿಯಾದ ಕಾವ್ಯವು ಅಂತಿಮವಾಗಿ ಶಬ್ದಗಳನ್ನೂ, ಅರ್ಥಗಳನ್ನೂ ಮೀರಿ ಹಾರಿ ರಸಾನುಭವ ನೀಡುತ್ತದೆ. ಅದರದು ಅಪರೋಕ್ಷಾನುಭೂತಿ.
‘ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’- ಕನ್ನಡ ಪ್ರತಿಭಟನಾ ಕಾವ್ಯದ ಈ ಧ್ವನಿಪೂರ್ಣ ಘೊಷವಾಕ್ಯವೇ ಒಂದು ಕವಿತೆಸಾಲಿನಂತಿದೆ. ಕವಿಯಲ್ಲವೇ ಜಗತ್ತಿನ ಪ್ರಾಣಮಿತ್ರ? ಅವನ ಮುಂದೆ ಜಗತ್ತು ತನ್ನ ಅಪೇಕ್ಷೆಗಳನ್ನು ಮುಂದಿಡುವುದರಲ್ಲಿ ತಪ್ಪೇನು? ಅದೇ ಹೊತ್ತಿಗೆ ಅದ್ಭುತ ಪ್ರಭಾವ ಬೀರಬಲ್ಲ ಕವಿಕಾವ್ಯಗಳ ಕುರಿತು ಎಲ್ಲ ಅರಸೊತ್ತಿಗೆಗಳಿಗೂ, ಎಲ್ಲ ಕಾಲದಲ್ಲೂ ಅತೀ ಅನುಮಾನ. ಒಳಗೊಳಗೇ ಭಯವೂ ಇದೆ. ಕವಿಯನ್ನು ಗಡೀಪಾರು ಮಾಡಿ ಅವನ ಕವಿತೆಗಳ ಗಡಿ ವಿಸ್ತರಿಸಿದ ಪಾಶ್ಚಾತ್ಯ ದೇಶಗಳ ಇತ್ತೀಚಿನ ಇತಿಹಾಸವೂ ಕಣ್ಣ ಮುಂದೇ ಇದೆ.
ಹಾಗಿದ್ದರೂ ಕವಿತೆ ಓದುವವರು ಇದ್ದಾರೆಯೇ? ಎಂಬ ವಿಷಾದಪರ್ವದಲ್ಲಿ ಕವಿಗಳು ಮುಳುಗುವರೇಕೆ? ಅವನಿಗೆ ಸಿಗುವ ಕೆಲವು ‘ಸಹೃದಯ’ರೂ ಆ ಮಾತುಗಳನ್ನಾಡುವುದೇಕೆ? ತುಂಬ ಯೋಚಿಸಿದ ಮೇಲೆ ನನಗೆ ಕಂಡ ಕಾರಣ ಇಷ್ಟೆ: ಈ ಪ್ರಶ್ನೆ ಹುಟ್ಟುವುದು ಅನೇಕ ಲೌಕಿಕ ವ್ಯಾವಹಾರಿಕ ಸಂದರ್ಭಗಳಲ್ಲಿ. ಕವಿತಾಸಂಕಲನಗಳನ್ನು ಪ್ರಕಟಿಸುವವರಿಲ್ಲ. ಕವಿತಾಸಂಕಲನಗಳು ಮಾರಾಟವಾಗುವುದಿಲ್ಲ. ಇಂಥವು. ಮುಕ್ತಮನಸಿನಿಂದ ಯೋಚಿಸಿದರೆ ಇದೊಂದು ಹೊಸವಿಷಯವೇ ಅಲ್ಲ. ‘ಗಂಗಾವತರಣ’ ತಾನೇ ಪ್ರಕಟಿಸುತ್ತೇನೆ ಎಂದು ವರಕವಿಗಳು ಪ್ರಕಟಣೆ ಕೊಟ್ಟರೂ ಒಟ್ಟು ಎಂಟು ಓದುಗರು ಮುಂಗಡಹಣ ಕಳುಹಿಸಿದ್ದರಂತೆ! ಅದೇ ಕವಿ ಸಭೆಗಳಲ್ಲಿ ಪದ್ಯ ಓದಿದರೆ, ಗಾಯಕರು ಅವರ ಪದ್ಯ ಹಾಡಿದರೆ ಜನಸಮೂಹ ಹುಚ್ಚೇಳುತ್ತಿತ್ತು. ಅಂದರೆ ಕಾವ್ಯಾಭಿರುಚಿಯನ್ನು, ಕಾವ್ಯಸಂಸ್ಕಾರವನ್ನು ಬೇರೆಯದೇ ಮಾನದಂಡಗಳಿಂದ ಅರಿಯುವ ಅಗತ್ಯವಿದೆ. ಶಾಸ್ತ್ರೀಯ ಸಂಗೀತವೂ ಸೇರಿ ಅನೇಕ ಶುದ್ಧಕಲೆಗಳ ಕಲಾವಿದರು ಇಂಥ ಆಹ್ವಾನಗಳನ್ನು ತಾಳಿಕೊಂಡೇ ಬೆಳೆಯುತ್ತಿದ್ದಾರೆ.
ಅಸಹನೆ, ಅನುಮಾನ ತೊರೆದು ನೋಡಿದರೆ ಸಮೂಹ ಮಾಧ್ಯಮಗಳ ಮೂಲಕ ಕವಿಕಾವ್ಯಕ್ಕೆ ಒಂದು ಹೊಸವೇದಿಕೆಯೇ ನಿರ್ವಣವಾಗಿದೆ. ಅನೇಕ ಕವಿಮಿತ್ರರು ಆಸಕ್ತರ ಗುಂಪುಗಳನ್ನು ಮಾಡಿಕೊಂಡು ತಮ್ಮ ಕವಿತೆಗಳನ್ನು ಹಂಚಿಕೊಂಡು ಓದುವುದು ಸುಲಭಸಾಧ್ಯವಾಗಿದೆ, ಪ್ರತಿಕ್ರಿಯೆಗಳ ವಿಧಾನವೂ ಸರಳವಾಗಿದೆ. ಕಾವ್ಯದ ಛಂದೋಮಾದರಿಗಳನ್ನು ಕಲಿಸಿಕೊಡುವ ಒಂದು ವಾಟ್ಸ್​ಆ್ಯಪ್​ ಬಳಗಕ್ಕೆ ವಿದ್ವತ್ಕವಿ ಕೊರ್ಗಿಯವರು ಮಾರ್ಗದರ್ಶನ ಮಾಡುವುದನ್ನು ಕಂಡಿದ್ದೇನೆ.
ಕನ್ನಡಕಾವ್ಯಕ್ಕೆ ಸೀಮಿತಗೊಳಿಸಿಕೊಂಡೇ ನೋಡಿದರೂ ಎಷ್ಟೊಂದು ಯುವಪ್ರತಿಭೆಗಳು ಕಾವ್ಯನಿರ್ವಿುತಿಯಲ್ಲಿ ತೊಡಗಿವೆ ಎಂಬುದನ್ನು ಕಂಡು ಸಂತಸಪಟ್ಟಿದ್ದೇನೆ. ಮೊಗಹೊತ್ತಿಗೆಯಲ್ಲಿ ಅವುಗಳಿಗೆ ಕೆಲವಾದರೂ ಪ್ರಬುದ್ಧ ಪ್ರತಿಕ್ರಿಯೆಗಳು ಬರುತ್ತವೆ. ಹಾಗಾಗಿ ಕವಿತೆ ಓದುವವರು ಇದ್ದಾರೆಯೇ? ಎಂಬ ಪ್ರಶ್ನೆಗೆ ನನ್ನ ಉತ್ತರ: ‘ಕವಿತೆ ಓದುವವರು ಇದ್ದಾರೆ ಮತ್ತು ಮುಂದೆಯೂ ಇರುತ್ತಾರೆ’!
|ಲಲಿತಾ ಸಿದ್ಧಬಸವಯ್ಯ
ಬರಹಗಾರರಿಗೆ ಆಯಾ ಭಾಷೆಯ ಸಾಹಿತ್ಯ ಪರಂಪರೆಯ ಪರಿಚಯವಿರುವುದು ಅಗತ್ಯವೇ?- ಈ ಪ್ರಶ್ನೆ ಈ ಹದಿನೈದು ವರ್ಷಗಳಿಂದೀಚೆಗೆ ಬಹುವಾಗಿ ಗುಲ್ಲೆಬ್ಬಿಸಿದೆ. ಅಗತ್ಯವೇ ಎನ್ನುವ ಪ್ರಶ್ನೆಯಲ್ಲಿರುವ ‘ದನಿ’ ಅಗತ್ಯವೇನಿಲ್ಲ ಎಂಬ ಉತ್ತರವನ್ನು ಖಚಿತ ಮಾಡಿಕೊಂಡೇ ಹುಟ್ಟಿರುವುದು.
ಭಾಷಿಕ ಸಮುದಾಯವೊಂದು ತನಗೆ ಬೇಕಾದ ಮಾತು ಎಂಬುದನ್ನು ಆಂಗಿಕ ‘ಸನ್ನೆ’ಯಿಂದ ಮೊದಲು ಮಾಡಿ ಅವಿರತ ಪ್ರಯತ್ನಗಳಿಂದ ಅದನ್ನು ‘ಆಡುವ’ ಮಾತಾಗಿ ಪರಿವರ್ತಿಸುತ್ತದೆ. ಈ ಕ್ರಿಯೆಯು ಕಂಡಂತೆ, ಕಾಣದಂತೆ ಸಾವಿರಾರು ವರ್ಷಗಳನ್ನು ನುಂಗಿರುತ್ತದೆ. ಸಮುದಾಯದ ಇಡೀ ನೆನಪುಗಳನ್ನು ನೂಲಿನ ಹುರಿಯಂತೆ ಹೊಸೆದುಕೊಂಡು ಕೊನೆಗೊಂದು ಗಳಿಗೆಯಲ್ಲಿ ಪೂರ್ಣ ಪ್ರಮಾಣದ ‘ಆಡುವ ಮಾತು’ ಎನ್ನುವುದು ಆಕಾರಗೊಳ್ಳುತ್ತದೆ. ವಾಸ್ತವ ವಾಗಿ ಈ ಭಾಷೆಯೆನ್ನುವುದು ಹುಟ್ಟುವುದಲ್ಲ ಅದು ಕ್ರಮಕ್ರಮೇಣ ಕಟ್ಟಲ್ಪಡು ವುದು. ಹೀಗೆ ಕಟ್ಟಿದ ಭಾಷೆಯೊಂದು ಬರೀಭಾವ ವಿನಿಮಯೋಪಯೋಗಿ ಮಾತ್ರವಲ್ಲ, ಅದು ಆ ಸಮುದಾಯದ ಚರಿತ್ರೆಯ ಕೋಡಿಂಗ್!
ಪ್ರತಿ ಭಾಷೆಯಲ್ಲೂ ಮೊದಲು ಹುಟ್ಟುವ ಜನಪದರ ಮುಖೋದ್ಗತ ಸಾಹಿತ್ಯವೇ ಜಗತ್ತಿನ ಎಲ್ಲ ಭಾಷೆಗಳ ಸಾಹಿತ್ಯದ ತಾಯಿಬೇರು, ನರಮನುಷ್ಯರ ಸಕಲ ವಿಧವಾದ ಸಂತೋಷ-ಸಂಭ್ರಮ, ಗೋಳು-ವೇದನೆ ಎಲ್ಲವುಗಳನ್ನೂ ಅದು ಮುಟ್ಟಿಬಿಟ್ಟಿರುತ್ತದೆ. ಈ ಆಡುಮಾತಿಗೊಂದು ಲಿಪಿ ಬೇಕು. ಅನೇಕರ ಅನೇಕ ಜೀವಿತಗಳೇ ಲಿಪಿಕಾರಣದಲ್ಲಿ ಹೂಡಿರುತ್ತವೆ. ಹೀಗೆ ತಯಾರಾದ ಲಿಪಿಯೂ ಏಕದಂ ಮಹಾಕಾವ್ಯವನ್ನಿರಲಿ ಸಾಮಾನ್ಯವಾದದ್ದನ್ನೂ ಹೆರುವುದಿಲ್ಲ. ಲಿಪಿ ತನ್ನನ್ನು ಒಂದು ವ್ಯಾಕರಣದ ಕಟ್ಟಿನೊಳಗೆ ಬಿಗಿಸಿಕೊಂಡು, ಸುಧಾರಿಸಿಕೊಂಡು ಇತರ ಭಾಷೆಗಳಿಂದ ಕೊಡುಕೊಳೆ ಮಾಡಿಕೊಂಡು ದಷ್ಟಪುಷ್ಟವಾದ ಮೇಲೆ ಅದರಲ್ಲಿ ಅನೇಕಾನೇಕ ಪ್ರಯೋಗಗಳು ನಡೆದು, ಯಾವುದೋ ಸಂಧಿಕಾಲದಲ್ಲಿ ಭುವನದ ಭಾಗ್ಯದ ಹಾಗೆ ಮಹಾಕಾವ್ಯವೆಂಬ ಮಥನಫಲವು ಜನಿಸುತ್ತದೆ. ಅಲ್ಲಿಂದ ಮುಂದೆ ಆ ಭಾಷೆಯಲ್ಲಿ ಉತ್ಪಾದಿಸಲ್ಪಡುವ ಎಲ್ಲ ಸಾಹಿತ್ಯ ಕೃತಿಗಳೂ ಆ ಕೃತಿಗೆ ಮತ್ತು ಈ ಮೇಲಿನ ಎಲ್ಲ ಕ್ರಿಯಾಸರಪಳಿಗೆ ರುಣಬಂಧಿತವೇ ಹೊರತು ಸ್ವಯಂಭೂ ಅಲ್ಲ.
ಪ್ರತಿಯೊಂದು ಭಾಷೆಗೂ ನಿತ್ಯವೂ ಹೊಸ ಶಬ್ದ ಸೇರ್ಪಡೆಯಾಗುವುದು, ಭಾಷೆ ಸುಧಾರಣೆಗೊಳಗಾಗುವುದು ಇದ್ದೇ ಇರುತ್ತದೆ. ಆ ಕೆಲಸವೂ ಇಡೀ ಭಾಷಾ ಸಮುದಾಯದ ರಾಜಕಾರಣ, ಸಮಾಜಕಾರಣ, ಧರ್ಮಕಾರಣದ ವ್ಯವಹಾರಗಳಿಂದಾಗುತ್ತದೆಯೇ ವಿನಾ ಸಾಹಿತಿಗಳಿಂದ ಮಾತ್ರವೇನಲ್ಲ. ಆಯಾ ಕಾಲದ ದಕ್ಷ ಬರಹಗಾರರು ಅಂತಹ ಸೇರ್ಪಡೆಗಳನ್ನು ಮಸೆದು ನಯಗೊಳಿಸಿ ಭಾಷೆಯ ತಿಜೋರಿಯೊಳಗಿಟ್ಟು ಇಡುಗಂಟನ್ನು ವೃದ್ಧಿಸುವ ಕಾವಲುಗಾರರು, ಆ ಇಡುಗಂಟನ್ನು ಬಳಸಿಕೊಳ್ಳುವ ಅವಕಾಶ ಮುಂದಿನ ತಲೆಮಾರಿಗೆ ಸುನಾಯಾಸವಾಗಿ ದತ್ತವಾಗುತ್ತದೆ. ಇದೇ ಕಾರಣದಿಂದ ಪ್ರತಿಯೊಂದು ಕಾಲಘಟ್ಟದ ಹೊಸ ಬರಹಗಾರರು ಹಳೆಯ ಸಾಹಿತಿಗಳ ಅನುಯಾಯಿಗಳೇ ಹೌದು, ತನ್ನ ಅನುಯಾಯಿತನವನ್ನು ಎಷ್ಟು ಚೆನ್ನಾಗಿ ಮುಚ್ಚಿ ಹಾಕುತ್ತಾರೋ ಆ ಚೆನ್ನವೇ ಅವರ ಅಸಲಿ ಪ್ರತಿಭೆ.
ಈ ಮೇಲಿನ ವಿವರಣೆಯ ತಾತ್ಪರ್ಯ ಇಷ್ಟು. ಹೊಸ ಬರಹಗಾರರೊಬ್ಬರು, ‘ನನಗೆ ನನ್ನ ಭಾಷೆಯ ಸಾಹಿತ್ಯ ಪರಂಪರೆಯನ್ನು ಅರಿಯುವ ಜರೂರತ್ತೇನಿಲ್ಲ. ಅದರ ತಿಳಿವಳಿಕೆ ತಿಲಮಾತ್ರ ಇರದೆಯೂ ನಾನೊಂದು ಸಾಹಿತ್ಯ ಕೃತಿಯನ್ನು ರಚಿಸಬಲ್ಲೆ’ ಎಂದರೆ ಅದು ಅವರ ಅರೆಜ್ಞಾನ. ಬರಹಗಾರರೊಬ್ಬರು ತಮ್ಮರಿವಿಗೆ ಬರದಂತೆ ತಮ್ಮ ಭಾಷೆಯ ಋಣದಲ್ಲಿ ಬಿದ್ದಿರುತ್ತಾರೆ.
ಸಾಹಿತ್ಯ ಪರಂಪರೆಯನ್ನು ಅಕೆಡೆಮಿಕ್ ಶಿಸ್ತಿನಿಂದ ಓದಿರಲಿ, ಓದದಿರಲಿ ಪ್ರತಿ ಬರಹಗಾರರೂ ಸಾಹಿತ್ಯ ಹರಿವಿನ ಬಿಂದುವಾಗುತ್ತಲೆ ಹರಿವೂ ಆಗಿರುತ್ತಾರೆ. ನೀವು ಪಂಪನನ್ನೋ, ಕುಮಾರವ್ಯಾಸನನ್ನೋ, ವಚನಕಾರರನ್ನೋ ಕೂತು ಓದಿಲ್ಲದಿರಬಹುದು, ಆದರೆ ನಿಮ್ಮ ಕನ್ನಡ ವಾಕ್ಯರಚನಾಶೈಲಿ ಮತ್ತು ಯೋಚನಾ ವಿಧಾನ ಈ ಮೂವರರಲ್ಲೊಬ್ಬರದ್ದೇ ಆಗಿರುತ್ತದೆ, ಅದೇ ಪರಂಪರೆ.
ನಮ್ಮ ಬರಹಕ್ಕೆ ಶಕ್ತಿ ಬೇಕೆಂದರೆ ಪರಂಪರೆಯ ಮೌಖಿಕ, ದೇಸಿ, ಮಾರ್ಗ ಎಲ್ಲದರ ಅರಿಯುವಿಕೆಯೂ ಬೇಕು. ಆಗ ನಮ್ಮ ವಿಚಾರತೀಕ್ಷ್ಣತೆ, ಭಾವಪಕ್ವತೆ ಮತ್ತು ಪದಸಂಪತ್ತು ಸದಾ ಭರ್ತಿ ತಿಜೋರಿಯಾಗಿರುತ್ತದೆ. ಒಂದು ಅಂಶ ನೆನಪಿನಲ್ಲಿಟ್ಟರೆ ಎಲ್ಲ ಬರಹಗಾರರಿಗೂ ಒಳಿತು. ನಾವು ಅಭ್ಯಾಸ ಮಾಡಿದರೆಷ್ಟು ಬಿಟ್ಟರೆಷ್ಟು, ನಮ್ಮ ಭಾಷಾ ಸಾಹಿತ್ಯ ಪರಂಪರೆಗೆ ಅದರಿಂದ ಆಗೇನು? ಕೇಡೇನು? ಏನೂ ಇಲ್ಲ. ಆದರೆ ಅಭ್ಯಾಸ ಮಾಡದಿದ್ದರೆ ನಷ್ಟ ನಮಗೆ, ನರಪೇತಲವಾಗುವುದು ನಮ್ಮ ಬರವಣಿಗೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 2 =
Remember me
