|ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಪಲಿಮಾರು ಮಠ, ಉಡುಪಿ
ಆಚಾರ್ಯ ಮಧ್ವರು ವಾಯುದೇವರ ಮೂರನೇ ಅವತಾರ. ಎರಡು ಅವತಾರಗಳು ನಮ್ಮ ನೆಲದಲ್ಲೇ ಆಗಿರುವುದು ಕನ್ನಡ ನಾಡಿನ ಸೌಭಾಗ್ಯ. ಹಂಪಿಯಲ್ಲಿ ಹನುಮಂತ ದೇವರು, ಪಾಜಕದಲ್ಲಿ ಮಧ್ವಾಚಾರ್ಯರು ಅವತರಿಸಿದ್ದಾರೆ. ಅನೇಕ ಮಂದಿ ಮಹಾಪುರುಷರ ಬಗ್ಗೆ ನಮಗೆ ನಿಖರ ಮಾಹಿತಿಗಳು ಲಭ್ಯವಾಗುವುದಿಲ್ಲ. ಆದರೆ ಆಚಾರ್ಯ ಮಧ್ವರ ಸಮಕಾಲೀನ ವಿದ್ವಾಂಸ ನಾರಾಯಣ ಪಂಡಿತಾರ್ಯರು ‘ಮಧ್ವವಿಜಯ’ವನ್ನು ರಚಿಸುವ ಮೂಲಕ ಸಾರಸ್ವತ ಜಗತ್ತಿಗೆ ಬಹುದೊಡ್ಡ ಕೊಡುಗೆ ಸಲ್ಲಿಸಿದ್ದಾರೆ. ಇದೇ ಗ್ರಂಥದ ಆಧಾರದಲ್ಲಿ ಆಚಾರ್ಯ ಮಧ್ವರ ಬಾಲ್ಯ, ಸಂನ್ಯಾಸ, ತತ್ತ್ವಪ್ರಸಾರ, ಕೊಡುಗೆಗಳನ್ನು ತಿಳಿಯಲು ನಮಗೆ ಸಾಧ್ಯವಾಗಿದೆ.
ಆಚಾರ್ಯ ಮಧ್ವರು ದಾರ್ಶನಿಕ. ಯಾವುದೇ ವ್ಯಕ್ತಿ ದಾರ್ಶನಿಕನಾಗಬೇಕಾದರೆ ಮುಖ್ಯವಾಗಿ ಆತನ ಸಿದ್ಧಾಂತ ಸಾರ್ವಕಾಲಿಕವಾಗಿರಬೇಕು. ಸಂಶಯಗಳಿಗೆ ಎಡೆಗಳಿರಬಾರದು. ನಿರ್ಣಯಾತ್ಮಕ ಜ್ಞಾನ ಹೊಂದಿರಬೇಕು. 800 ವರ್ಷಗಳು ಕಳೆದರೂ ಆಚಾರ್ಯ ಮಧ್ವರು ಪ್ರತಿಪಾದಿಸಿದ ಸಿದ್ಧಾಂತ ಹೊಸ ಹೊಸ ವಿಚಾರಗಳನ್ನು ಸ್ಪುರಿಸುತ್ತಾ ಸಾಧಕರಿಗೆ ಮಾರ್ಗದರ್ಶಕವಾಗಿದೆ.
ಸಿದ್ಧಾಂತವನ್ನು ಪ್ರತಿಪಾದನೆ ಮಾಡುವಾಗ ಅದು ಮತ್ತೊಬ್ಬರಿಗೆ ಮನವರಿಕೆಯಾಗುವಂತಿರಬೇಕು. ‘ನನಗೆ ಕನಸು ಬಿದ್ದಿದೆ. ಹೀಗಾಗಿ ಈ ಜಾಗ ನನಗೆ ಕೊಡು’ ಎಂದು ಯಾರಾದರೂ ಹೇಳಿದರೆ ‘ನನಗೆ ಅಂಥ ಕನಸು ಬಿದ್ದಿಲ್ಲ. ಆದ್ದರಿಂದ ಕೊಡೋದಿಲ’ ಎಂದು ಮತ್ತೊಬ್ಬ ನಿರಾಕರಣೆ ಮಾಡಬಹುದು. ಹೀಗಾಗಿ ಪ್ರತಿಯೊಬ್ಬರಿಗೂ ಅನುಭವಗಳ ಹಿನ್ನೆಲೆಯಲ್ಲಿ ಸಿದ್ಧಾಂತ ನಿರೂಪಿಸುವುದು ಸವಾಲಿನ ಕಾರ್ಯ. ಆಚಾರ್ಯರು ಇದನ್ನು ಶಾಸ್ತ್ರಗಳ ಜತೆಗೆ ಲೌಕಿಕ ಜೀವನದಲ್ಲೂ ಮಾಡಿ ತೋರಿಸಿದ್ದಾರೆ.
ಆಚಾರ್ಯರು ಒಮ್ಮೆ ಉತ್ತರ ಭಾರತ ಪ್ರವಾಸದಲ್ಲಿದ್ದರು. ಗಂಗಾ ನದಿ ದಾಟಬೇಕು. ಆದರೆ ಆಚೆಬದಿಯಲ್ಲಿ ಮುಸ್ಲಿಂ ರಾಜನ ಆಳ್ವಿಕೆ. ಹೀಗಾಗಿ ಪ್ರಯಾಣಕ್ಕೆ ಯಾವುದೇ ಸೌಕರ್ಯಗಳಿಲ್ಲ. ಶಿಷ್ಯರಿಗೆ ತನ್ನನ್ನು ಅನುಸರಿಸುವಂತೆ ಹೇಳಿ ನದಿಗೆ ಇಳಿದೇ ಬಿಟ್ಟರು. ಯಾರೋ ಶತ್ರುಗಳು ಬರುತ್ತಿದ್ದಾರೆ ಎಂದು ರಾಜಭಟರು ನೀರಿಗೆ ಧುಮುಕಲು ಮುಂದಾದರು. ‘ನೀವು ನೀರಿಗೆ ಇಳಿಯುವ ತೊಂದರೆ ತೆಗೆದುಕೊಳ್ಳಬೇಡಿ, ನಾವೇ ನಿಮ್ಮ ಬಳಿಗೆ ಬರುತ್ತೇವೆ. ನಮ್ಮಿಂದ ನಿಮಗೇನು ಅಪಾಯವಿಲ್ಲ’ ಎಂದು ಆಚಾರ್ಯರು ಗಟ್ಟಿಧ್ವನಿಯಲ್ಲಿ ಹೇಳಿದರು. ಸೈನಿಕರು ಶಾಂತರಾದರು. ದಡ ಸೇರಿದ ಬಳಿಕ ‘ನಿಮ್ಮ ದೊರೆಯನ್ನು ಕಾಣಲು ಬಂದಿದ್ದೇವೆ’ ಎಂದು ರಾಜನ ಬಳಿಗೆ ಬಂದರು. ಇಷ್ಟು ಬಿಗಿ ಪಹರೆಯ ನಡುವೆ ಈ ಸಂನ್ಯಾಸಿ ನನ್ನ ಪ್ರದೇಶ ಹೇಗೆ ತಲುಪಿದ ಎಂದು ಆಶ್ಚರ್ಯಚಕಿತನಾದ ದೊರೆ ಈ ಪ್ರಶ್ನೆಯನ್ನು ಕೇಳಿಯೇ ಬಿಟ್ಟ. ಅದಕ್ಕೆ ಆಚಾರ್ಯರು ಅವನದ್ದೇ ಅರೆಬಿಕ್ ಭಾಷೆಯಲ್ಲಿ ಉತ್ತರಿಸಿದರು. ‘ಯೋಸೌ ದೇವಃ ವಿಶ್ವದೀಪ ಪ್ರದೀಪ್ತ…’- ಈ ವಿಶ್ವವನ್ನೇ ಬೆಳಗುವ ಆ ದೇವರನ್ನು ನಾನು ಮತ್ತು ನೀನು ಪೂಜೆ ಮಾಡುತ್ತೇವೆ. ಆದ್ದರಿಂದ ನನಗೇನು ಭಯವಿಲ’ ಎಂದರು. ಇದರಿಂದ ಬಹಳ ಸಂತೋಷಗೊಂಡ ದೊರೆ ಅರ್ಧರಾಜ್ಯ ಕೊಡುತ್ತೇನೆ ಎಂದಾಗ ಅದನ್ನು ನಿರಾಕರಿಸಿ ಬದರಿಯತ್ತ ನಡೆದರು. ಒಟ್ಟಿನಲ್ಲಿ ಇದು ಸಮಾಜವನ್ನು ಬೆಸೆಯುವ ಕ್ರಮ. ಎಲ್ಲರಿಗೂ ಸಮ್ಮತವಾದ ಸಿದ್ಧಾಂತ ಪ್ರತಿಪಾದನೆ ಆಚಾರ್ಯರ ವೈಶಿಷ್ಟ್ಯ
ಪ್ರಪಂಚಕ್ಕೂ ದೇವರಿಗೂ ಇರುವ ನಂಟು:ಮಹಾಮಂಗಳಾರತಿ ನಂತರ ವೈದಿಕರು ‘ಜಗತ್ತು ಸತ್ಯ. ಜಗತ್ತಿಗೆ ಮಂಗಳವಾಗಲಿ’ ಎಂದು ಪ್ರಾರ್ಥಿಸುತ್ತಾರೆ. ಇದನ್ನೇ ಆಚಾರ್ಯರು ಪ್ರತಿಪಾದಿಸಿದ್ದಾರೆ. ಭಗವಂತನಿಗೂ ವಿಶ್ವಕ್ಕೂ ಇರುವ ಕೊಂಡಿಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪ್ರಪಂಚ ಸೃಷ್ಟಿಗೆ ಭಗವಂತ ಕಾರಣ ಹೇಗೆ? ಕಾಣದ ದೇವರನ್ನು ಕಾಣುವ ಬಗೆ ಹೇಗೆ? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ತತ್ತ್ವಸಿದ್ಧಾಂತ ನಿರೂಪಿಸಿದ್ದಾರೆ. ತೋಟದಲ್ಲಿ ಬಗೆ ಬಗೆಯ ಪುಷ್ಪಗಳಿರುತ್ತವೆ. ಭ್ರಮರಕ್ಕೆ ಮಧು ಹೀರಿ ಜೇನು ಸಂಗ್ರಹಿಸಲು ಹೇಳಿಕೊಟ್ಟವರು ಯಾರು? ಜಗತ್ತು ಇಷ್ಟು ವೈವಿಧ್ಯಮಯವಾಗಿರಲು ಅದಕ್ಕೊಂದು ಸೃಷ್ಟಿಕರ್ತ ಇರಲೇಬೇಕಲ್ಲ, ಆ ಶಕ್ತಿ ಯಾವುದು? ಇಂಥ ಕೊಂಡಿಗಳನ್ನು ಚಿತ್ರಿಸಿದವರು ಆಚಾರ್ಯರು.
ಆಚಾರ್ಯರು ಹುಟ್ಟುಜ್ಞಾನಿ. ಭೂಮಿಗೆ ಬರುವಾಗಲೇ ಸಮಗ್ರ ವಿಷಯಗಳಲ್ಲಿ ಇದಮಿತ್ಥಂ ಎಂದು ಹೇಳುವ ಸಾಮರ್ಥ್ಯ ಪಡೆದಿದ್ದರು. ಅವರ ಜೀವನ ಚರಿತ್ರೆಯಲ್ಲೇ ಒಂದು ಘಟನೆ ಬರುತ್ತದೆ. ಗುರು ಅಚ್ಯುತಪ್ರಜ್ಞರ ಭಾಗವತ ಪ್ರವಚನದ ಲೋಪಗಳನ್ನು ಮಧ್ವಾಚಾರ್ಯರು ಗುರುತಿಸಿದರು. ಇದಕ್ಕೆ ಆಕ್ಷೇಪಿಸಿದ ಗುರುಗಳು, ‘ಹಾಗಾದರೆ 5ನೇ ಸ್ಕಂದವನ್ನು ಓದಿ ಅರ್ಥ ಹೇಳು’ ಎಂದರು. ಆಚಾರ್ಯರು ನಿರರ್ಗಳವಾಗಿ ಉಪನ್ಯಾಸ ನೀಡಿದಾಗ ಮೂಕವಿಸ್ಮಿತರಾದ ಗುರುಗಳು ‘ನೀನು ಈ ಜನ್ಮದಲ್ಲಿ ಓದಿಲ್ಲ. ನಿನ್ನದು ಸ್ವಯಂಪ್ರಜ್ಞೆ’ ಎಂದು ಉದ್ಗರಿಸಿದ್ದರು. ಭಗವದ್ಗೀತೆ ಹಿನ್ನೆಲೆಯಲ್ಲಿ ಕೃಷ್ಣ ಸಾರ್ವಭೌಮತೆಯನ್ನು ಮಧ್ವರು ಸಮರ್ಥಿಸಿದ್ದಾರೆ. ಪ್ರತೀ ಶಬ್ದವೂ ಭಗವದ್ವಾಚಕ. ಇದೊಂದು ವಿಶಿಷ್ಟ ರೀತಿಯಲ್ಲಿ ವೈದಿಕ ಸಿದ್ಧಾಂತವನ್ನು ಪ್ರತಿಪಾದಿಸಿದ ಕ್ರಮ. ಭಗವಂತ ಹೊರತುಪಡಿಸಿ ಪ್ರಪಂಚ ಇರಲು ಸಾಧ್ಯವಿಲ್ಲ. ಹೇಗೆ ಮಹಾಭಾರತ ಯುದ್ಧದ ಕೊನೆಯಲ್ಲಿ ಕೃಷ್ಣ ಇಳಿದಾಗ ಅರ್ಜುನನ ರಥ ಸುಟ್ಟುಬೂದಿಯಾಯಿತೋ ಹಾಗೆ ಶರೀರದಲ್ಲಿ ದೇವರು ಇರುವವರೆಗೆ ಬದುಕು. ಹೀಗಾಗಿ ಭಗವಂತನ ಆರಾಧನೆ ಜೀವನದ ಉದ್ದೇಶವಾಗಬೇಕು. ಭಗವಂತನಲ್ಲಿ ಸ್ನೇಹಭಾವದಿಂದ ಮುಕ್ತಿಹೊಂದಬಹುದು ಎಂದು ಮೊದಲ ಬಾರಿ ಪ್ರತಿಪಾದಿಸಿದವರು ಆಚಾರ್ಯರು. ಹೀಗಾಗಿಯೇ ವ್ಯಾಸರಾಜರು ಮಧ್ವರನ್ನು ‘ಆನಂದ ತೀರ್ಥ’ ಎಂದು ಸ್ತುತಿಸಿದರು. ನೀರು ಹೇಗೆ ಬಿಸಿಲಿನ ತಾಪವನ್ನು ನಿವಾರಿಸುತ್ತದೆಯೋ ಹಾಗೆ ಮನುಷ್ಯನ ತಾಪತ್ರಯಗಳನ್ನು ಆನಂದ ತೀರ್ಥರು ಪರಿಹರಿಸುತ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
