| ಪ್ರೊ. ಐ.ಜಿ. ಸನದಿರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅಧಿಕಾರದ ಅಡ್ಡಪಲ್ಲಕ್ಕಿಯಲ್ಲಿ ಎಂದೂ ಮೆರೆಯಲಿಲ್ಲ. ರಾಜ್ಯದ ಕೋಟಿ ಕೋಟಿ ಜನರ ಹೃದಯ ಸಿಂಹಾಸನದಲ್ಲಿ ಮೆರೆದರು. ಸೇವೆ-ತ್ಯಾಗ ಅವರ ಬಾಳ ಉಸಿರಾಗಿತ್ತು. ಅವರು ಕರುಣಾಳು, ಸಮದುಃಖಿ. ಉರಿ ಬರಲಿ, ಸಿರಿ ಬರಲಿ ಅದನ್ನು ತಮ್ಮ ಜೀವನದಲ್ಲಿ ಸಮಚಿತ್ತದಿಂದ ಸ್ವೀಕರಿಸಿದರು. ಆಸ್ತಿ-ಸಂಪತ್ತಿಗಾಗಿ ಹಪಹಪಿಸಲಿಲ್ಲ. ಅವರೊಬ್ಬ ಸಜ್ಜನ ಹೃದಯಿ, ಬಡವರ ಬಾಳಿನ ಆಶಾಕಿರಣ. ಬಡವರು ತಮ್ಮ ಕಷ್ಟ ತೋಡಿಕೊಳ್ಳಲು ಬಂದಾಗ ಸಮಾಧಾನಿಯಾಗಿ ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತಿದ್ದರು. ಬೇಡಿ ಬಂದವರಿಗೆ ಇಲ್ಲ ಎಂದು ಹೇಳದೇ ಎಂದೂ ತಿರುಗಿ ಕಳುಹಿಸುತ್ತಿರಲಿಲ್ಲ.
ಅರಸು ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆಗ ಅವರನ್ನು ಮಹದೇವ ಹೊರಟ್ಟಿ ಹುಬ್ಬಳ್ಳಿಗೆ ಕಾರ್ಯಕ್ರಮವೊಂದಕ್ಕೆ ಕರೆ ತಂದಿದ್ದರು. ಮಳೆ ಸಿಕ್ಕಾಪಟ್ಟೆ ಬಂದು ತೊಯ್ದರು. ನಾನಾಗ ಹುಬ್ಬಳ್ಳಿಯ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿದ್ದೆ. ಅವರನ್ನು ನಮ್ಮ ಕಾಲೇಜಿಗೆ ಕರೆದೊಯ್ದು ಮಾತನಾಡಿದೆ. ಕೇಂದ್ರದಲ್ಲಿ ಸಚಿವರಾಗಿದ್ದ ಎಫ್.ಎಚ್. ಮೊಹಿಸಿನ್ ನಮ್ಮ ಕಾಲೇಜಿನ ಅಧ್ಯಕ್ಷರು. ಅಲ್ಲಿಂದ ಅವರೊಂದಿಗೆ ಉತ್ತಮ ಸಂಬಂಧ ಬೆಳೆಯಿತು. ಅದಕ್ಕೂ ಮೊದಲು ಪ್ರಪಂಚ ಪತ್ರಿಕೆಯಲ್ಲಿ ಪತ್ರಕರ್ತನಾಗಿದ್ದಾಗ ಅವರೊಂದಿಗೆ ಸಾಕಷ್ಟು ಚರ್ಚೆ ಮಾಡಿದ್ದೆ. ಪತ್ರಕರ್ತರಿಗೆ ಪಾಸ್ ನೀಡಲು ನಾನು ಮಾಡಿದ್ದ ಮನವಿಗೆ ಅರಸು ಒಪ್ಪಿ ಸಂಪಾದಕರ ಹೆಸರಿನಲ್ಲಿ ಪಾಸ್ ಕೊಡುವ ವ್ಯವಸ್ಥೆ ಮಾಡಿದರು. ಅವರು ನಮಗೊಂದು ಮಾತು ಹೇಳಿದ್ದನ್ನು ನಾ ಇಂದಿಗೂ ಮರೆಯಲಾರೆ. ಅದು ಏನೆಂದರೆ ‘ಕಣ್ಣೀರು ಸುರಿಸುತ್ತ ಸಹಾಯಕ್ಕಾಗಿ ಯಾರಾದರೂ ಬಂದರೆ ಸಮಾಧಾನದಿಂದ ಆಲಿಸಿರಿ, ಪರಿಹಾರ ಒದಗಿಸಿರಿ. ಇಲ್ಲದಿದ್ದರೆ ನೀವು ಅವರ ಬಿಸಿ ಉಸಿರಿನಲ್ಲಿ ಸುಟ್ಟು ಭಸ್ಮವಾಗುತ್ತೀರಿ, ಜೋಕೆ’ ಎಂದು ಹೇಳಿದ್ದನ್ನು ಹೇಗೆ ಮರೆಯಲು ಸಾಧ್ಯ?
ಚತುರ ರಾಜಕಾರಣಿ: ರಾಜಕೀಯ ಚದುರಂಗದಾಟದಲ್ಲಿ ಅರಸು ಅವರು ಚತುರರಾಗಿದ್ದರು. ಉತ್ತಮರನ್ನು ನಮಸ್ಕರಿಸಿ, ಶೂರರನ್ನು ಭೇದಿಸಿ, ಸಮಶಕ್ತಿವಂತರನ್ನು ಪರಾಕ್ರಮದಿಂದ ಗೆದ್ದಿದ್ದನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ರಾಜಕೀಯ ಜೀವನದಲ್ಲಿ ಯಾರನ್ನು ಅವರು ಕೈ ಹಿಡಿದು ಎತ್ತಿದ್ದರೋ, ಅವರೇ ಕಷ್ಟಕಾಲದಲ್ಲಿ ಕೈಬಿಟ್ಟು ಹೋದರೂ ಅಚಲ ಧೈರ್ಯ ಮಾತ್ರ ಅರಸು ಅವರನ್ನು ಕೈಬಿಟ್ಟು ಹೋಗಲಿಲ್ಲ. ಯಾರಿಗೂ ಶರಣು ಎನ್ನಲಿಲ್ಲ, ದಿಟ್ಟತನದಿಂದ ಸವಾಲುಗಳನ್ನು ಎದುರಿಸಿ ಬೆಳೆದ ಧೀಮಂತ ಅವರು.
ಸಾಮಾಜಿಕ ಕ್ರಾಂತಿಯ ಹರಿಕಾರ:ದೇವರಾಜ ಅರಸು ಅವರು ಸಾಮಾಜಿಕ ಕ್ರಾಂತಿಯ ಹರಿಕಾರ ಆಗಿ ‘ಇವನಾರವ ಇವನಾರವ ಎಂದೆನಿಸದೆ, ಇವ ನಮ್ಮವ ಎಂದೆನಿಸಯ್ಯ’ ಎಂಬ ಬಸವಣ್ಣನ ವಚನದಂತೆ ಎಲ್ಲರನ್ನೂ ಇವ ನಮ್ಮವ ಎಂದು ಭಾವಿಸಿ ಅವರಿಗೆ ನೆರವು ನೀಡಿದ್ದರು. ಸಕಲರಿಗೂ ಲೇಸನ್ನೇ ಬಯಸಿದರು. ಅರಸು ಅವರಿಗೆ ರೈತರ ಬಗ್ಗೆ ಅಪಾರ ಕಾಳಜಿ ಇತ್ತು. ರೈತ ಅನ್ನದಾತ, ರೈತರ ಏಳ್ಗೆಯೇ ಜನರ ಏಳ್ಗೆ ಎಂದು ಭಾವಿಸಿ, ಜೀತ ಪದ್ಧತಿ ರದ್ದುಪಡಿಸಿದರು. ಭೂ ಸುಧಾರಣಾ ಕಾಯ್ದೆ ತಂದು ರೈತರನ್ನು ಭೂ ಒಡೆಯನನ್ನಾಗಿ ಮಾಡಿದರು. ಹಿಂದುಳಿದವರ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚನೆ ಮಾಡಿದರು. ಅರೆಹೊಟ್ಟೆ, ಹರಕು ಬಟ್ಟೆ ತೊಟ್ಟ ಬಡಜನರು ಜೀವನ ಸುಧಾರಣೆಗೆ ಶ್ರಮಿಸಿದರು. ನೆಲವೇ ಹಾಸಿಗೆ, ಆಕಾಶವೇ ಹೊದಿಕೆ ಎಂದವರ ಬಾಳಿನಲ್ಲಿ ಹೊಸ ಬೆಳಕನ್ನು ತಂದರು. ಸಾಲದ ಶೂಲಕ್ಕೆ ಸಿಕ್ಕ ಬಡಜನರ ಉದ್ಧಾರಕ್ಕಾಗಿ ಋಣ ವಿಮುಕ್ತಿ ಕಾಯ್ದೆ ತಂದು ಶೋಷಿತ ವರ್ಗದ ಬವಣೆ ನೀಗಿಸಿದರು. ಮನುಷ್ಯ ಜಾತಿಗೆ ಕಳಂಕವಾಗಿದ್ದ ಮಲ ಹೊರುವ ಪದ್ಧತಿ ರದ್ದುಗೊಳಿಸಿದರು.
ದೇವರಾಜ ಅರಸು ಅವರಿಗೆ ಕನ್ನಡದ ಖ್ಯಾತ ಸಾಹಿತಿಗಳ ಒಡನಾಟವಿತ್ತು. ಕನ್ನಡ ಭಾಷೆ ಅಭಿವೃದ್ಧಿಗಾಗಿ ಕನ್ನಡ ಕಾವಲು ಸಮಿತಿ ರಚನೆಗೆ ಸಿದ್ಧತೆ ಮಾಡಿದ್ದರು. ಹೊರನಾಡು-ಗಡಿನಾಡು ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿದರು. ಬೆಳಗಾವಿಯಲ್ಲಿ ಹೊರನಾಡು ಮಹಾರಾಷ್ಟ್ರದಿಂದ ಯಾವುದೇ ಕನ್ನಡಿಗ ವಾಸ ಮಾಡಲು ಬಂದರೆ ಅವರಿಗೆ ಆಶ್ರಯ ನೀಡಿದರು. ಗಡಿ ಸಮಸ್ಯೆಯ ಜಾಲದಲ್ಲಿ ಸಿಲುಕಿದ್ದ ಬೆಳಗಾವಿಗೆ ಶಕ್ತಿ ತುಂಬಿದರು. ಇಂದು ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಅರಸು ಅವರ ಪ್ರಯತ್ನ ನಾವು ನೆನಪಿಸಿಕೊಳ್ಳಲೇಬೇಕು.
ರಾಜಕೀಯಕ್ಕೆ ಬಂದಿದ್ದು:ನಾನು ರಾಜಕೀಯಕ್ಕೆ ಬಂದಿದ್ದು ಸಹ ಅರಸು ಅವರಿಂದಲೇ. ಹುಬ್ಬಳ್ಳಿ ಬಹಳ ಸೂಕ್ಷ್ಮ ಪ್ರದೇಶ. 1972ರ ಚುನಾವಣೆಗೆ ಅಲ್ಲಿ ಹೊಸಬರನ್ನು ಹುಡುಕುತ್ತಿದ್ದರು. ಕನ್ನಡ ಚೆನ್ನಾಗಿ ಮಾತನಾಡುವ ಮುಸ್ಲಿಂ ಅಭ್ಯರ್ಥಿ ಶೋಧದಲ್ಲಿದ್ದರು. ನನ್ನನ್ನು ಆಯ್ಕೆ ಮಾಡಿದರು. ಪ್ರಾಂಶುಪಾಲರ ಹುದ್ದೆಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದರು. ಧೈರ್ಯ ಮಾಡಿ ಚುನಾವಣೆಗೆ ಸ್ಪರ್ಧೆ ಮಾಡಿದೆ. ಧಾರವಾಡ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 17ರಲ್ಲಿ ಕಾಂಗ್ರೆಸ್ ಗೆದ್ದಿತು. ನನಗೆ ಚುನಾವಣೆ ನಿಭಾಯಿಸಲು ಹಣ ಇರಲಿಲ್ಲ. ಮೊಹಿಸಿನ್ ಅವರ ಸೂಚನೆಯಂತೆ ಬೆಂಗಳೂರಿಗೆ ಹೋಗಿ ಅರಸು ಅವರನ್ನು ಕಂಡೆ. ಅವರು ಊಟ ಮಾಡಿಸಿ ಆರ್.ಎಂ. ದೇಸಾಯಿ ಅವರನ್ನು ಕಾಣುವಂತೆ ಸೂಚಿಸಿದರು. ಅವರು ಕೊಟ್ಟ ಹಣವನ್ನು ಎದೆಗೆ ಅಪ್ಪಿಕೊಂಡೇ ತಂದು ಚುನಾವಣೆ ಮಾಡಿ ಗೆದ್ದೆ.
ಅಧಿವೇಶನದಲ್ಲಿ ಅರಸು ಅವರಿಂದ ನಾವು ಕಲಿತಿದ್ದು ಅಪಾರ. ಅವರು ಕಲಾಪದಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು. ಬೇರೆಯವರು ಮಾತನಾಡುವು ದನ್ನು ಆಸಕ್ತಿಯಿಂದ ಕೇಳುತ್ತಿದ್ದರು. ಚರ್ಚೆಯ ಸಂದರ್ಭದಲ್ಲಿ ಸಲಹೆಗಳನ್ನು ನೀಡುತ್ತಿದ್ದರು. ಹಿರಿಯಣ್ಣನೊಬ್ಬ ಮನೆಯನ್ನು ಸಂಭಾಳಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಅದಕ್ಕೂ ಮೊದಲು 1971ರಲ್ಲಿ ಲೋಕಸಭಾ ಚುನಾವಣೆ, ಕಾಂಗ್ರೆಸ್​ನಿಂದ ಮೊಹಿಸಿನ್ ಮತ್ತು ಸರೋಜಿನಿ ಮಹಿಷಿ ಅಭ್ಯರ್ಥಿಗಳು. ಆ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರ ಭಾಷಣ ತರ್ಜುಮೆ ಮಾಡುವ ಅವಕಾಶ ಅರಸು ಅವರಿಂದ ನನಗೆ ಲಭ್ಯವಾಯಿತು.
ದೂರದೃಷ್ಟಿಯ ನಾಯಕ:ಅರಸು ಅವರಿಗೆ ತಂತ್ರಜ್ಞಾನವೂ ಸೇರಿದಂತೆ ಅನೇಕ ವಿಚಾರಗಳಲ್ಲಿ ದೂರದೃಷ್ಟಿ ಇತ್ತು. ಕಿಯೋನಿಕ್ಸ್ ಸ್ಥಾಪನೆಯಾಗಿದ್ದು ಅವರ ಕಾಲದಲ್ಲಿಯೇ. ಸಂಪರ್ಕ ಕ್ಷೇತ್ರದ ಕ್ರಾಂತಿಗಾಗಿ ಬೆಂಗಳೂರಿನಲ್ಲಿ 330 ಎಕರೆ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ ಸಿಟಿ ಸ್ಥಾಪನೆಗೆ ಕಾರಣಕರ್ತರು ಸಹ ಅರಸು. ಇಡೀ ದೇಶದಲ್ಲಿ ಬಡವರಿಗೆ ನೆಮ್ಮದಿಯ ಜೀವನಕ್ಕೆ ಕಾರಣವಾಗಿರುವ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಅರಸು ತಂದಿದ್ದ ಕೂಲಿಗಾಗಿ ಕಾಳು ಯೋಜನೆಯ ಮುಂದುವರಿದ ಭಾಗವೇ ಆಗಿದೆ. ಈ ರೀತಿ ಅನೇಕ ವಿಚಾರದಲ್ಲಿ ಅರಸು ಆಲೋಚನೆಗಳು ಎಂದಿಗೂ ಮಾದರಿ.
ಅರಸು ಅವರಿಗೆ ಇದ್ದ ಮತ್ತೊಂದು ವಿಶೇಷತೆ ಎಂದರೆ ಯಾವುದೇ ಭಾಗಕ್ಕೆ ಪ್ರವಾಸ ಹೋದರೂ ಕಾರಿನಲ್ಲಿ ಪ್ರವಾಸ ಮಾಡುವಾಗ ಆ ಭಾಗದ ಜನಪ್ರತಿನಿಧಿಗಳನ್ನು ಜತೆಯಲ್ಲಿ ಕೂರಿಸಿಕೊಂಡು ಅಲ್ಲಿನ ಸಮಸ್ಯೆಗಳ ಬಗ್ಗೆ ಆಲಿಸುತ್ತಿದ್ದರು. ತಕ್ಷಣ ಪರಿಹಾರ ಕಂಡುಕೊಳ್ಳುತ್ತಿದ್ದರು. ಅವರು ಅಧಿಕಾರಕ್ಕೆ ಬಂದಾಗ ಬರ ಬಂದಿತ್ತು. ಧಾರವಾಡ ಪ್ರವಾಸಕ್ಕೆ ಬಂದ ಅವರು ಮುಂಡರಗಿ ಭಾಗದಲ್ಲಿ ಕೆರೆ ಅಂಗಳದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಳ ಜತೆ ಸಂವಾದ ಮಾಡಿದ್ದರು. ದಿನಕ್ಕೆ 5 ರೂ. 10 ಪೈಸೆ ಕೂಲಿ ಸಿಗುತ್ತಿದೆ. ಆದರೆ, ಸರ್ಕಾರಿ ಡಾಕ್ಟರ್ ಇಂಜೆಕ್ಷನ್ ಮಾಡಲು 10 ರೂ. ಲಂಚ ತೆಗೆದುಕೊಳ್ಳುತ್ತಾನೆ ಎಂಬ ದೂರು ನೀಡಿದರು. ಆಗ ಸ್ಥಳದಲ್ಲಿಯೇ ವೈದ್ಯರ ಅಮಾನತ್ತಿಗೆ ಸೂಚನೆ ನೀಡಿದ್ದರು. ಅದು ಅರಸು ಅವರ ಆಡಳಿತ ಶೈಲಿ. ಬಡವರಿಗೆ ತೊಂದರೆ ಕೊಡುವುದನ್ನು ಅವರೆಂದೂ ಸಹಿಸುತ್ತಿರಲಿಲ್ಲ. ಧಾರವಾಡ ಪ್ರವಾಸದಲ್ಲಿ ಹಮಾಲರು, ಪೈಲ್ವಾನರು ಮಾಡಿಕೊಂಡ ಮನವಿಗೆ ಸ್ಪಂದಿಸಿ ಅವರಿಗೆ ಪಿಂಚಣಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ನನ್ನ ಮನವಿಗೆ ಓಗೊಟ್ಟು ಬಂದು ಕಾಡಿನ ಮಧ್ಯೆ ನಾರಿಹಳ್ಳ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದರು. ಸೇವಾದಳದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ವಾಯಿ ಆಚಾರ್ಯ ಅವರು ಬಾಲಬ್ರೂಯಿಗೆ ಬಂದು ಮಗಳ ಮದುವೆಗೆ ಆಹ್ವಾನ ನೀಡಿದರು. ಅರಸು ತಕ್ಷಣ ಅವರಿಗೆ ಹಣ ಕೊಟ್ಟರು. ಅದಕ್ಕೆ ಆಚಾರ್ಯರು, ‘ನಾನು ಹಣಕ್ಕಾಗಿ ಬರಲಿಲ್ಲ’ ಎಂದಾಗ, ಅರಸು, ‘ಮದುವೆಗೆ ಜನ ಹೆಚ್ಚು ಬರುತ್ತಾರೆ. ಖರ್ಚು ಇರುತ್ತದೆ. ನಿನ್ನ ಬಳಿಯೂ ಹಣವಿಲ್ಲ ಎಂಬುದು ಗೊತ್ತು, ಇಟ್ಟುಕೋ’ ಎಂದು ಮನವೊಲಿಸಿದರು.
ಕಷ್ಟದಲ್ಲಿರುವವರ ಕೈ ಬಿಡಲಿಲ್ಲ:ಮೈಸೂರು ಶಾಸಕ ಅಜೀಜ್ ಸೇಠ್ ಅವರನ್ನು ಮಂತ್ರಿ ಮಾಡಿದ್ದರು. ಅವರಿಗೆ ಸಾಕಷ್ಟು ನೆರವು ನೀಡಿದ್ದರು. ಯಾವುದೋ ಒಂದು ಪ್ರಸಂಗದಲ್ಲಿ ಇಂದಿರಾ ಗಾಂಧಿ ಅವರು ಸೇಠ್ ಅವರನ್ನು ಮಂತ್ರಿಮಂಡಲದಿಂದ ಕೈ ಬಿಡುವಂತೆ ಸೂಚನೆ ನೀಡಿದರು. ಸೇಠ್ ಅವರನ್ನು ಕೈಬಿಟ್ಟರು. ಆ ನಂತರ ನನ್ನನ್ನು ಕರೆದ ಅರಸು ಅವರು, ‘ಸನದಿ ಅವರೇ ಅಜೀಜ್ ಸೇಠ್ ನನ್ನ ಪರಮ ಮಿತ್ರ, ಬಡವರ ಬಗ್ಗೆ ಕಳಕಳಿ ಹೊಂದಿದವ. ಅವನನ್ನು ಮತ್ತೆ ಮಂತ್ರಿ ಮಾಡಲು ತಾವೆಲ್ಲರೂ ಇಂದಿರಾ ಗಾಂಧಿ ಅವರಲ್ಲಿ ವಿನಂತಿಸಿ’ ಎಂದು ಹೇಳಿದ್ದು ನನಗಿನ್ನೂ ನೆನಪಿದೆ. ಅರಸು ಅವರು ಯಾವತ್ತೂ ತಾವು ನಂಬಿದವರನ್ನು ಕೈಬಿಡುತ್ತಿರಲಿಲ್ಲ. ನಾನು ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೇ ಹೊರತು, ಅರಸನಲ್ಲ ಎಂಬ ವಿನಮ್ರ ಭಾವನೆ ಅವರಲ್ಲಿತ್ತು.
ದೇವರಾಜ ಅರಸು ಎಲ್ಲ ವರ್ಗದ ಜನರನ್ನು ಗುರುತಿಸಿ ಅಧಿಕಾರ ನೀಡಿದರು. ಯಾರೂ ಎಂದೂ ಕನಸು ಕಂಡಿಲ್ಲದ ಜನರನ್ನು ರಾಜಕೀಯ ಮುಂದಾಳುವಾಗುವಂತೆ ಮಾಡಿದರು. ಇಂದು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯ್ಲಿ, ಬಂಗಾರಪ್ಪ, ಧರ್ಮಸಿಂಗ್ ಹೀಗೆ ಅನೇಕರನ್ನು ನಾವು ಗುರುತಿಸಬಹುದಾಗಿದೆ. ಅಧಿಕಾರದ ಕೆರೆ ತುಂಬಿದಾಗ ಅವರ ಸಂಗಡ ಮಜಾ ಮಾಡಿದ ಸ್ವಾರ್ಥ ರಾಜಕಾರಣಿಗಳು, ಪಕ್ಷಿಗಳು ಕೆರೆ ಬರಿದಾದಾಗ ಬೇರೆ ಕಡೆ ಹಾರಿ ಹೋಗುವಂತೆ ಅರಸು ಅವರಿಂದ ಕಷ್ಟ ಕಾಲದಲ್ಲಿ ದೂರವಾದರು. ಇದು ಅರಸು ಅವರ ರಾಜಕೀಯ ಜೀವನದ ದುರಂತ.
(ಲೇಖಕರು ಲೋಕಸಭಾ ಮಾಜಿ ಸದಸ್ಯರು, ಕಾಂಗ್ರೆಸ್​ನ ಹಿರಿಯ ನಾಯಕರು)
ಅಲ್ಪಸಂಖ್ಯಾತ ವಿದ್ಯಾರ್ಥಿವೇತನದಲ್ಲಿ ಭಾರಿ ಹಗರಣ; ಅರ್ಧಕ್ಕರ್ಧ ಫಲಾನುಭವಿಗಳು ನಕಲಿ!; ಸಿಬಿಐ ತನಿಖೆಗೆ ಆದೇಶ

ಪ್ರಧಾನಿ ಮೋದಿಗೆ ಉಡುಗೊರೆಯಾಗಿ ಹೊಸ ತಳಿಯ ತಾವರೆ; ‘ನಮೋಃ 108’ ಅನಾವರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − five =
Remember me
