ಕ್ರೀಡಾಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಕುರಿತು ಪರ-ವಿರೋಧ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ಅಂಪೈರಿಂಗ್​ನಂತಹ ವಿಷಯಗಳಲ್ಲಿ ತಂತ್ರಜ್ಞಾನದ ಬಳಕೆ ಓಕೆ. ಆದರೆ ವೀಕ್ಷಕ ವಿವರಣೆಗೆ, ತರಬೇತಿಗೆ, ಆಟಗಾರರ ಆಯ್ಕೆಯಂತಹ ವಿಷಯಗಳಿಗೂ ಕೃತಕ ಬುದ್ಧಿಮತ್ತೆಯ ಬಳಕೆ ಅಗತ್ಯವೇ?
ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರೀಡಾಭಿಮಾನಿಗಳು ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಐಪಿಎಲ್ ಮುಗಿಯುತ್ತಿದ್ದಂತೆಯೇ ಟಿ-ಟ್ವೆಂಟಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ದಿಗ್ವಿಜಯ, ಅದಾದ ನಂತರ ಹೊಸ ಮುಖಗಳ ಜಿಂಬಾಬ್ವೆ ಪ್ರವಾಸ, ಅದರ ಬೆನ್ನಿಗೇ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಭರ್ಜರಿ ಪ್ರದರ್ಶನ, ಅದು ಮುಗಿಯುತ್ತಿದ್ದಂತೆಯೇ ಏಷ್ಯಾ ಕಪ್, ಆನಂತರ ಟಿ-ಟ್ವೆಂಟಿ ವಿಶ್ವಕಪ್… ಮತ್ತೊಂದೆಡೆ, ಈ ಬಾರಿ ಸ್ವಲ್ಪ ಹೆಚ್ಚೇ ಆಸೆ ಮೂಡಿಸಿರುವ ಒಲಿಂಪಿಕ್ಸ್, ಜತೆಗೆ ಕುತೂಹಲದ ಘಟ್ಟಕ್ಕೆ ಬಂದಿರುವ ವಿಂಬಲ್ಡನ್, ಈ ಮಧ್ಯೆ ಫುಟ್ಬಾಲ್ ಪ್ರೇಮಿಗಳು ಕಾಯುತ್ತಿದ್ದ ಯೂರೋ ಕಪ್… ಹೀಗೆ ಸಾಲು ಸಾಲು ಕ್ರೀಡಾ ಚಟುವಟಿಕೆಗಳ ವೇಳಾಪಟ್ಟಿಯ ನಡುವೆ ತನ್ನ ಸಮಯವನ್ನು ಹೊಂದಾಣಿಕೆ ಮಾಡಲು ಕಷ್ಟಪಡುತ್ತಿರುವ ಕ್ರೀಡಾಪ್ರೇಮಿಗೆ ಇದೊಂಥರ ಹಿತವಾದ ಗೊಂದಲ.
ಇಂತಹ ಕ್ರೀಡಾ ರಶ್ ಬರೀ ವೀಕ್ಷಕರಿಗಷ್ಟೇ ಅಲ್ಲ, ಅದರ ನೇರಪ್ರಸಾರ ಮಾಡುವ ಸಂಸ್ಥೆಗಳಿಗೂ ಸವಾಲಿನ ಸಮಯ. ಪ್ರತಿ ಬಾರಿಯೂ ಹಿಂದಿನದಕ್ಕಿಂತ ಮತ್ತಷ್ಟು ಹೆಚ್ಚು ನಾವೀನ್ಯಭರಿತ ರೀತಿಯಲ್ಲಿ ಪ್ರಸ್ತುತಪಡಿಸಿ ವೀಕ್ಷಕರ ಆಸಕ್ತಿಯನ್ನು ಕಾಪಿಟ್ಟುಕೊಳ್ಳುವ ಸವಾಲು ಅವರ ಎದುರಿಗಿದೆ. ಹೀಗಾಗಿ ಅವರು ಪ್ರತಿ ಬಾರಿಯೂ ಮೊರೆ ಹೋಗುವುದು ಮಾರುಕಟ್ಟೆಯಲ್ಲಿರುವ ಅತ್ಯುನ್ನತ ತಂತ್ರಜ್ಞಾನಕ್ಕೆ. ಅಂತಹುದರಲ್ಲಿ ಸದ್ಯಕ್ಕೆ ತಂತ್ರಜ್ಞಾನದ ಮಾರ್ಕೆಟ್​ನಲ್ಲಿ ಕೃತಕ ಬುದ್ಧಿಮತ್ತೆ ಭರ್ಜರಿ ಓಡುತ್ತಿರುವ ಕುದುರೆ. ಸೀನು ಹಾಗಿರುವಾಗ ಇನ್ನು ಪ್ರದರ್ಶಕರು ಬಿಟ್ಟಾರೆಯೇ? ಹಾಗಾಗಿ ಅಲ್ಲೂ ಇದೀಗ ಎಐ ಉರ್ಫ್ ಕೃತಕ ಬುದ್ಧಿಮತ್ತೆಯದ್ದೇ ಕಾರುಬಾರು.
ಕೆಲ ದಿನಗಳ ಹಿಂದೆ ವಿಂಬಲ್ಡನ್ ಪಂದ್ಯಾವಳಿಯ ಆಯೋಜಕರಾದ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ ಮತ್ತು ಐಟಿ ದಿಗ್ಗಜ ಐಬಿಎಂ ಸಂಸ್ಥೆ ಜಂಟಿಯಾಗಿ ವಿಂಬಲ್ಡನ್​ನ ತನ್ನದೇ ಆಪ್​ನಲ್ಲಿ ಈ ವರ್ಷದ ವಿಶೇಷ ಆಕರ್ಷಣೆಯಾಗಿ ಕ್ಯಾಚ್ ಮಿ ಅಪ್ ಎಂಬ ನೂತನ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವುದಾಗಿ ಘೊಷಿಸಿದವು. ಈ ಆಪ್ ವಿಂಬಲ್ಡನ್ ಪಂದ್ಯಾವಳಿಯ ಪಂದ್ಯಗಳ ಕ್ಷಣ ಕ್ಷಣದ ಮಾಹಿತಿ, ಪ್ರತಿಯೊಬ್ಬ ಆಟಗಾರನ ಸಂಪೂರ್ಣ ವಿವರ, ಪ್ರತಿ ಪಂದ್ಯದ ಮೊದಲು ಫಲಿತಾಂಶದ ಸಾಧ್ಯತೆ ಮತ್ತು ತದನಂತರ ವಿಮರ್ಶೆ ಹೀಗೆ ಮಾಹಿತಿಯ ಮಹಾಪೂರವನ್ನೇ ಸಂಪೂರ್ಣ ಕೃತಕ ಬುದ್ಧಿಮತ್ತೆಯನ್ನು ಬಳಸಿ ನೀಡುತ್ತದೆ. ಅಷ್ಟೇ ಅಲ್ಲ, ಬಳಕೆದಾರನ ಆಸಕ್ತಿಗೆ ಅನುಗುಣವಾಗಿ ಪಂದ್ಯಾವಳಿಯಲ್ಲಿ ಆತನ ನೆಚ್ಚಿನ ಆಟಗಾರನ ಪ್ರಗತಿ, ಆಟದ ಮಟ್ಟ, ಅಭಿಮಾನಿಗಳಿಗಾಗಿಯೇ ವಿಶಿಷ್ಟ ಸಂದರ್ಶನ ಹೀಗೆ ಅಭಿಮಾನಿಯೊಬ್ಬನಿಗೆ ಬೇಕಾಗಿರುವ ಆಸಕ್ತಿಕರ ವಿಷಯವನ್ನೆಲ್ಲ ಬಳಕೆದಾರನಿಗೆ ಪ್ರಾಮಾಣಿಕವಾಗಿ ತಲುಪಿಸುತ್ತದೆ. ವಿಂಬಲ್ಡನ್ ಆಯೋಜಕರು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ವಿಂಬಲ್ಡನ್ ಜಾಲತಾಣದಲ್ಲಿ ಪ್ರದರ್ಶನವಾಗುತ್ತಿದ್ದ ಪಂದ್ಯಗಳ ಹೈಲೈಟ್​ಗಳಲ್ಲಿ ವೀಕ್ಷಕ ವಿವರಣೆಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲಾಗಿತ್ತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ವೀಕ್ಷಕ ವಿವರಣಾಕಾರರ ನೌಕರಿಯನ್ನು ಕಿತ್ತುಕೊಳ್ಳುವ ಪಾಪದ ಕೆಲಸಕ್ಕೆ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ ನಾಂದಿ ಹಾಡುತ್ತಿದೆಯೆಂಬ ಕಟುವಿಮರ್ಶೆಗಳು ಚಾಲ್ತಿಯಲ್ಲಿರುವ ವಿಮರ್ಶಕರಿಂದ ಕೇಳಿ ಬಂದಿದ್ದವು. ಅದೇ ರೀತಿ ಎರಡು ವರ್ಷಗಳ ಹಿಂದೆ ಕೂಡ ಬಾಲ್ ಅಂಪೈರ್​ಗಳನ್ನು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯ ವ್ಯವಸ್ಥೆಯ ಮೂಲಕ ಬದಲಾಯಿಸಲಾಗುವುದೆಂಬ ಗುಲ್ಲು ಸಹ ಎದ್ದಿತ್ತು. ನಂತರ ಇದಕ್ಕೆ ವ್ಯಾಪಕ ವಿರೋಧ ಬಂದ ಹಿನ್ನೆಲೆಯಲ್ಲಿ ಆಯೋಜಕರು ಹಿಂದಡಿಯಿಟ್ಟರು.
ಒಂದೆಡೆ ವೀಕ್ಷಕರ ಗಮನವನ್ನು ಹಿಡಿಟ್ಟುಕೊಳ್ಳಲು ಕೃತಕ ಬುದ್ಧಿಮತ್ತೆ ಬಳಕೆಯಾಗುತ್ತಿದ್ದರೆ ಮತ್ತೊಂದೆಡೆ ಆಟಗಾರರ ತರಬೇತಿಯಲ್ಲಿ ಅದಾಗಲೇ ಈ ತಂತ್ರಜ್ಞಾನ ಎಂಟ್ರಿ ಕೊಟ್ಟು ತನ್ನ ಬೇರುಗಳನ್ನು ಗಟ್ಟಿಗೊಳಿಸುವ ಪ್ರಕ್ರಿಯೆಯಲ್ಲಿದೆ. ಅಮೆರಿಕದ ಪ್ರತಿಷ್ಠಿತ ರಗ್ಬಿ ಲೀಗ್ ನ್ಯಾಷನಲ್ ಫುಟ್​ಬಾಲ್ ಲೀಗ್ ಯಾನೆ ಎನ್​ಎಫ್​ಎಲ್ ತಂತ್ರಜ್ಞಾನದ ದಿಗ್ಗಜ ಅಮೆಜಾನ್ ಜತೆಗೆ ಒಡಂಬಡಿಕೆಯಲ್ಲಿದ್ದು ಅದರಡಿಯಲ್ಲಿ ನೆಕ್ಸ್ ್ಟ ಜೆನ್ ಸ್ಟಾ್ಯಟ್ಸ್ ಎಂಬ ನೂತನ ತಂತ್ರಜ್ಞಾನವನ್ನು ರಗ್ಬಿ ತಂಡಗಳು ಬಳಸುತ್ತಿವೆ. ಇದರಲ್ಲಿ ಮೈದಾನದಲ್ಲಿ ಆಡುವ ಎಲ್ಲ ಆಟಗಾರರು ಧರಿಸುವ ಜೆರ್ಸಿಯ ಎದೆಯ ಭಾಗದಲ್ಲಿ ಒಂದು ಪುಟ್ಟ ಚಿಪ್ ಅಳವಡಿಸಲಾಗುತ್ತದೆ. ಅವುಗಳ ಮೂಲಕ ಆಟಗಾರರ ಪ್ರತಿಯೊಂದು ಚಟುವಟಿಕೆ ಮೇಲೆ ನಿಗಾ ಇಡಲಾಗುತ್ತದೆ. ಹೀಗೆ ಸಂಗ್ರಹಿಸಲಾದ ದತ್ತಾಂಶಗಳನ್ನು ಮೊದಲನೆಯದಾಗಿ ತಂಡಗಳ ಗೆಲುವಿನ ತಂತ್ರವನ್ನು ಹೂಡಲು ಬಳಸಲಾಗುತ್ತದೆ. ಅಂದರೆ ಕೃತಕ ಬುದ್ಧಿಮತ್ತೆಯೇ ಗೆಲುವನ್ನು ಸಾಧಿಸಲು ಹೂಡಬೇಕಾಗುವ ತಂತ್ರಗಳನ್ನು ತಂಡದ ನಾಯಕ ಮತ್ತು ತರಬೇತುದಾರರಿಗೆ ಸೂಚಿಸುತ್ತದೆ. ಮತ್ತೊಂದೆಡೆ ಮೈದಾನದಲ್ಲಿ ಸಂಗ್ರಹಿಸಲಾದ ದತ್ತಾಂಶವನ್ನು ಬಳಸಿ ಆಟಗಾರರ ದೈಹಿಕ ಸಾಮರ್ಥ್ಯವನ್ನೂ ಅಳೆಯಲಾಗುತ್ತದೆ. ಪ್ರತಿ ಆಟಗಾರನ ಕಂಪ್ಯೂಟರ್ ಮಾಡೆಲ್ ರಚಿಸಿ ಆತನ ದೈಹಿಕ ಶಕ್ತಿಯನ್ನು ಅಂದಾಜಿಸುವ ಜತೆಗೆ ಗಾಯಕ್ಕೊಳಗಾಗುವ ಸಾಧ್ಯತೆಯನ್ನೂ ಊಹಿಸಿ ಅದನ್ನು ತಪ್ಪಿಸಲು ತಕ್ಕುದಾದ ಪ್ರತಿತಂತ್ರಗಳನ್ನು ನೆಕ್ಸ್ ್ಟ ಜೆನ್ ಸ್ಟಾ್ಯಟ್ಸ್ ಸೂಚಿಸುತ್ತದೆ.
ಅಮೆರಿಕದ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಸಂಘ ಯಾನೆ ಎನ್​ಬಿಎಯಂತೂ ಕೃತಕ ಬುದ್ಧಿಮತ್ತೆಯ ಬಳಕೆಯಲ್ಲಿ ಬೇರೆ ಕ್ರೀಡೆಗಳಿಗಿಂತ ಹಲವು ಹೆಜ್ಜೆ ಮುಂದಿದೆ. ಅಲ್ಲಿ ರಗ್ಬಿ ತಂಡಗಳಂತೆಯೇ ಆಟಗಾರರ ಜೆರ್ಸಿಗೆ ಚಿಪ್ ಅಳವಡಿಸಿ ಅವುಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ಆಟದ ತಂತ್ರಗಾರಿಕೆಯನ್ನು ಸೂಚಿಸುವ ಜತೆಗೆ ಅವರ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ಕಾಲಕಾಲಕ್ಕೆ ಸಲಹೆ ಸೂಚನೆಯನ್ನೂ ನೀಡುತ್ತದೆ. ಅಷ್ಟೇ ಅಲ್ಲ, ತಂಡಕ್ಕೆ ಹೊಸ ಆಟಗಾರರ ಸಾಮರ್ಥ್ಯವನ್ನು ಪರಾಮಶಿಸಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವುದರ ಕುರಿತು ಅಭಿಪ್ರಾಯ ನೀಡುತ್ತದೆ. ವರ್ಚುವಲ್ ರಿಯಾಲಿಟಿ ಬಳಸಿ ಪಂದ್ಯದ ಸನ್ನಿವೇಶಗಳನ್ನು ಸೃಷ್ಟಿಸಿ ಆ ಮೂಲಕ ಆಟಗಾರ ಕಠಿಣ ಪರಿಸ್ಥಿತಿಯಲ್ಲಿ ನೀಡುವ ಪ್ರತಿಕ್ರಿಯೆಯನ್ನು ದಾಖಲಿಸಿ ತರಬೇತಿಗೆ ಬಳಸಲಾಗುತ್ತದೆ. ಎನ್​ಬಿಎ ಆಡಳಿತ ಮಂಡಳಿಯ ಪ್ರಕಾರ ಕೃತಕ ಬುದ್ಧಿಮತ್ತೆಯ ಬಳಕೆ ಒಳ್ಳೆಯ ಫಲ ನೀಡುತ್ತಿದ್ದು ಅದನ್ನು ಮತ್ತಷ್ಟು ಕ್ಷೇತ್ರಗಳಿಗೆ ವಿಸ್ತರಿಸುವ ಆಲೋಚನೆ ಅವರಿಗಿದೆ.
ಇತ್ತೀಚೆಗೆ ಸಂಪನ್ನಗೊಂಡ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಟಗಾರರಿಗೆ ಪ್ಲೇಯರ್ ಇಂಪ್ಯಾಕ್ಟ್ ಸ್ಕೋರ್ ಎಂಬ ಹೊಸ ಅಂಕಗಳನ್ನು ನೀಡುವ ಪದ್ಧತಿ ಘೊಷಿತವಾಗಿತ್ತು. ಅದರ ಪ್ರಕಾರ ಇಲ್ಲಿಯವರೆಗಿನ ಐಪಿಎಲ್ ಪಂದ್ಯಾವಳಿಯಲ್ಲಿಯೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸುನೀಲ್ ನಾರೈನ್ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಆಟಗಾರನೆಂಬ ಖ್ಯಾತಿಗೆ ಪಾತ್ರರಾದರು. ಆಟಗಾರನೊಬ್ಬ ಬ್ಯಾಟಿಂಗ್, ಬೌಲಿಂಗ್ ಮತ್ತು ಕ್ಷೇತ್ರರಕ್ಷಣೆಯಲ್ಲಿ ತನ್ನ ತಂಡಕ್ಕೆ ನೀಡುವ ಕಾಣಿಕೆಯನ್ನು ಪ್ರಮಾಣೀರಿಸಿ ತದನಂತರ ಅದನ್ನು ಇತರ ಆಟಗಾರರೊಂದಿಗೆ ಹೋಲಿಸಿ ವಿಜೇತರನ್ನು ಘೊಷಿಸುವ ಈ ಪೂರ್ತಿ ಲೆಕ್ಕಾಚಾರದ ಜವಾಬ್ದಾರಿಯನ್ನು ನಿರ್ವಹಿಸಿದ್ದು ಕೃತಕ ಬುದ್ಧಿಮತ್ತೆ. ಮದ್ರಾಸ್ ಐಐಟಿ ತಯಾರಿಸಿದ ಈ ತಂತ್ರಾಂಶಕ್ಕೆ ಇದೀಗ ಬೇರೆಯ ಲೀಗ್ ಪಂದ್ಯಾವಳಿಗಳಿಂದಲೂ ಬೇಡಿಕೆ ಬಂದಿದೆ. ಅಂದಹಾಗೆ ಈ ಐಐಟಿಯಲ್ಲಿ ಸೆಂಟರ್ ಫಾರ್ ಎಕ್ಸಲೆನ್ಸ್ ಸ್ಪೋರ್ಟ್ಸ್ ಸೈನ್ಸ್ ಆಂಡ್ ಅನಲಿಟಿಕ್ಸ್ ಅನ್ನುವ ಶಾಖೆಯೇ ಇದೆ. ಕ್ರೀಡೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಪೋ›ತ್ಸಾಹಿಸಲು ಈ ಶಾಖೆ ಶ್ರಮಿಸುತ್ತಿದೆ. ಈ ವರ್ಷದ ಐಪಿಎಲ್​ನಲ್ಲಿ ಆರ್​ಸಿಬಿ ತಂಡಕ್ಕೆ ಇವರೇ ಸಿದ್ಧಪಡಿಸಿದ ಕೃತಕ ಬುದ್ಧಿಮತ್ತೆಯ ತಂತ್ರಾಂಶ ಎದುರಾಳಿ ತಂಡದ ನ್ಯೂನತೆಗಳನ್ನು ಹಾಗೂ ಪಂದ್ಯ ಗೆಲ್ಲಲು ಅನುಸರಿಸಬೇಕಾದ ರಣತಂತ್ರದ ಕುರಿತು ಸಲಹೆಗಳನ್ನು ನೀಡುತ್ತಿತ್ತು. ಅಷ್ಟೇ ಅಲ್ಲ, ಇನ್ನೂ ಪ್ರಥಮ ದರ್ಜೆ ಕ್ರಿಕೆಟ್ ಆಡಿರದ ಹೊಸ ಮುಖಗಳನ್ನು ಗುರುತಿಸಿ ತಮ್ಮ ತಂಡದ ಮೂಲಕ ಪಾದಾರ್ಪಣೆ ಮಾಡಿಸಲು ಆರ್​ಸಿಬಿ ಆಡಳಿತ ಹಾಕಿಕೊಂಡ ವಿಶೇಷ ಯೋಜನೆ ಹಿಂಟರ್​ಲ್ಯಾಂಡ್ ಸ್ಕೌಟಿಂಗ್​ನ ಹಿಂದಿರುವುದು ಇದೇ ಕೃತಕ ಬುದ್ಧಿಮತ್ತೆ. ಆ ಯೋಜನೆಯ ಅನ್ವಯ ಕಳೆದ ವರ್ಷ ಆ ತಂಡ ಖರೀದಿಸಿದ ಅವಿನಾಶ್ ಸಿಂಗ್ ಎಂಬ ವೇಗದ ಬೌಲರ್​ನ ವಿಡಿಯೋಗಳನ್ನು ನೋಡಿ ಕೃತಕ ಬುದ್ಧಿಮತ್ತೆ ಬಳಸಿ ಆತನ ಆಯ್ಕೆಯನ್ನು ನಿರ್ಧರಿಸಲಾಯಿತು. ಆದರೆ ಕೃತಕ ಬುದ್ಧಿಮತ್ತೆಯ ಬಳಕೆ ಕೇವಲ ಆರ್​ಸಿಬಿ ತಂಡಕ್ಕಷ್ಟೇ ಸೀಮಿತವಾಗಿಲ್ಲ. ಅಮೆರಿಕದ ರಗ್ಬಿ ತಂಡ ಬಳಸುವ ಅಮೆಜಾನ್ ಮಾಲೀತ್ವದ ನೆಕ್ಸ್ ್ಟ್ಟ ಜೆನ್ ಸ್ಟಾ್ಯಟ್ಸ್ ಅನ್ನು ಭಾರತದಲ್ಲಿ ಪರಿಚಯಿಸಲು ಟೆಕ್ ಮಹೀಂದ್ರಾ ಕಂಪನಿಯ ಜತೆ ಒಡಂಬಡಿಕೆಯಾಗಿದೆ. ಈ ಕಂಪನಿಯು ನೆಕ್ಸ್ ್ಟ್ಟ ಜೆನ್ ಸ್ಟಾ್ಯಟ್ಸ್ ಬಳಸಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ನೆರವನ್ನು ನೀಡುತ್ತಿದೆ.
ಓಟಿಟಿಯಲ್ಲಿ ಪಂದ್ಯಾವಳಿಗಳನ್ನು ವೀಕ್ಷಿಸುವಾಗ ನಾವು ನೋಡುವ ಜಾಹೀರಾತುಗಳನ್ನಂತೂ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯೇ ನಿರ್ಧರಿಸುತ್ತದೆ. ಉದಾಹರಣೆಗೆ ಓಟಿಟಿಯಲ್ಲಿ ಕ್ರಿಕೆಟ್​ಪಂದ್ಯವೊಂದರ ನೇರಪ್ರಸಾರ ನಡೆಯುತ್ತಿದ್ದು ರಾಹುಲ್ ಮತ್ತು ಜಡೇಜಾ ಜತೆಯಾಟ ನಡೆಯುತ್ತಿದೆ ಎಂದುಕೊಳ್ಳಿ. ಬ್ರೇಕ್​ನಲ್ಲಿ ಜಾಹೀರಾತು ಬರುವಾಗ ಕರ್ನಾಟಕದ ವೀಕ್ಷಕರಿಗೆ ರಾಹುಲ್ ಇರುವ ಜಾಹೀರಾತು ಪ್ರಸಾರವಾಗುತ್ತಿದ್ದರೆ ಅದೇ ಸಮಯದಲ್ಲಿ ಗುಜರಾತಿನ ಭಾಗದ ವೀಕ್ಷಕರಿಗೆ ಜಡೇಜಾ ನಟಿಸಿರುವ ಜಾಹೀರಾತು ಬರುತ್ತಿರುತ್ತದೆ. ಹೀಗೆ ವೀಕ್ಷಕರ ಅಭಿರುಚಿ, ಆಸಕ್ತಿ, ಪ್ರಾದೇಶಿಕತೆ ಹೀಗೆ ಹತ್ತು ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೃತಕ ಬುದ್ಧಿಮತ್ತೆ ಅತಿ ಹೆಚ್ಚು ಜನರಿಗೆ ಒಪ್ಪಿಗೆಯಾಗುವಂತಹ ರೀತಿಯಲ್ಲಿ ಜಾಹೀರಾತುಗಳನ್ನು ಹರಿಬಿಡುತ್ತದೆ.
ಕ್ರೀಡಾಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದೆಡೆ ಅಂಪೈರಿಂಗ್​ನಂತಹ ವಿಷಯಗಳಲ್ಲಿ ಪೂರಕವಾಗಿ ತಂತ್ರಜ್ಞಾನದ ಬಳಕೆ ಓಕೆ ಎಂಬುದು ಎಲ್ಲರೂ ಒಪ್ಪತಕ್ಕಂತದ್ದೇ. ಆದರೆ ವೀಕ್ಷಕ ವಿವರಣೆಗೆ, ತರಬೇತಿಗೆ, ಆಟಗಾರರ ಆಯ್ಕೆಯಂತಹ ವಿಷಯಗಳಿಗೂ ಕೃತಕ ಬುದ್ಧಿಮತ್ತೆಯ ಬಳಕೆ ಅಗತ್ಯವೇ ಎಂಬುದು ಹೆಚ್ಚಿನವರ ಪ್ರಶ್ನೆ. ಅದಕ್ಕೆ ಕಾರಣ ಸ್ಪಷ್ಟ. ಎಲ್ಲ ಕ್ಷೇತ್ರಗಳಂತೆಯೇ ಇಲ್ಲಿಯೂ ಸಹ ಈ ತಂತ್ರಜ್ಞಾನ ಹಲವರ ನೌಕರಿಗೆ ಕುತ್ತು ತರಬಹುದೆಂಬ ಆತಂಕ ಅವರೆಲ್ಲರದ್ದು. ಅದಕ್ಕುತ್ತರವನ್ನೂ ಬಹುಶಃ ಎಐಯಷ್ಟೇ ಹೇಳಬಲ್ಲದು.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)
“ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದ್ರೆ….” ವಿಚ್ಛೇದನ ಖಚಿತಪಡಿಸಿದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
