| ಶಿವಶರಣೆ ಡಾ. ನೀಲಮ್ಮತಾಯಿ ಅಸುಂಡಿಬ್ರಹ್ಮ ವಿಷ್ಣುಗಳ ಮಾಯೆ ತೊತ್ತಳದುಳಿವಂದುದೇವನಾದವರ ಮಾಯೆ ಅಗಿದಗಿದು ತಿಂಬಂದುರುದ್ರಗಣ ಪ್ರಮಥಗಣವೆಂಬವರ ಮಾಯೆ ಮರುಳ್ಮಾಡಿ ಕಾಡುವಂದುನೊಸಲ ಕಣ್ಣು ಪಂಚಮುಖ ದಶಭುಜದವರಿಗೆ ಮಾಯೆ ಅರ್ಧಾಂಗಿಯಾದಂದುಅಷ್ಟಾಶೀತಿಸಹಸ್ರ ಋಷಿಯರುಗಳ ಮಾಯೆ ತಪೋಮದದಲಿ ಕೆಡಹುವಂದುನಾನು ಮಾಯಾ ಕೋಳಾಹಳನಾಗಿರ್ದೆ ಕಾಣಾ ಗುಹೇಶ್ವರಾ…
ನಾರಿಯರ ನಸುನೋಟಕ್ಕೆ ಮನಮಿಸುಗದಿರುವವನೇ ನಿಜವಾದ ವಿರಕ್ತನು. ಆ ವಿರಕ್ತತೆಯ ಸಾರ್ವಭೌಮ ಚಕ್ರವರ್ತಿ ಆದಿ ನಿರಂಜನ ಜಗದ್ಗುರು ಶ್ರೀಮದಲ್ಲಮಪ್ರಭು. ವಿರಕ್ತಮಠ ಪೀಠಗಳಿಗೆ ಅಸ್ತಿತ್ವದ ತಳಹದಿ ರೂಪಿಸಿದವನು. ಬಹುಶಃ ಅಲ್ಲಮಪ್ರಭು ಅವತರಿಸಿ ಬರದಿದ್ದರೆ ಇಂದಿನ ವಿರಕ್ತಮಠಪೀಠಗಳಿಗೆ ಅಸ್ತಿತ್ವವೇ ಇರುತ್ತಿರಲಿಲ್ಲವೇನೋ! ವಿರಕ್ತ ಪರಂಪರೆಯ ರೂವಾರಿ ಅಲ್ಲಮಪ್ರಭು. ಆತ ಮಾಯೆ ಮೋಹ ಮಮಕಾರಗಳನ್ನು ಗೆದ್ದ ಧೀಮಂತ. ಭೋಗಗಳನ್ನು ತೃಣದಂತೆ ಕಂಡ ವೈರಾಗ್ಯದ ಮೇರು ಶಿಖರ. ನಿಜಗುಣರ ವಾಕ್ಯದಲ್ಲಿ ಕೇಳಿ: ವಿರಕ್ತನಾದವಗೆ ಈ ಪೃಥ್ವಿ ಒಂದು ಆಕಳ ಹೆಜ್ಜೆಗೆ ಸಮಾನ. ಸಪ್ತಸಮುದ್ರಗಳು ಒಂದು ಬೊಗಸೆ ನೀರು, ಬ್ರಹ್ಮಾಂಡವೇ ಒಂದು ಚೆಂಡು…ಅಗಣಿತ ಸಿದ್ದಿಗಳೆಲ್ಲಾ ನಾಟಕ ಶೃಂಗಾರದಂತೆ.
ನಿಜ, ಇಹಲೋಕದ ಸುರಲೋಕದ ಸಿರಿ ವೈಭವಗಳನ್ನೆಲ್ಲ ಪ್ರಭುವಿನ ವೈರಾಗ್ಯ ಕೊಚ್ಚಿಹಾಕಿತು. ‘ಕರಣಜಯದಿಂದ ಕಲಿತನವುಂಟೆ?’ ಎಂಬ ಪ್ರಶ್ನೆಗೆ ಉತ್ತರ ರೂಪವಾಗಿದ್ದ ಪ್ರಭು. ಹರನ ಅಪ್ಪಣೆಯ ಮೇರೆಗೆ ಮಾಯೆಯನ್ನು ಸೋಲಿಸಿ, ಮಾನವಲೋಕಕ್ಕೆ ಸತ್ಯವನ್ನರುಹಿ ಮುಕ್ತರನ್ನಾಗಿ ಮಾಡಲು ಬಂದ ಕಾರಣಿಕ ಮಹಾ ಪ್ರಭು.
ಪಾರ್ವತಿಯ ತಾಮಸ ಗುಣದ ಪ್ರತಿನಿಧಿಯಾದ (ಪ್ರತೀಕವಾದ) ಮಾಯಾದೇವಿ ಬನವಾಸಿ ಪಟ್ಟಣದ ಮಮಕಾರ ಮೋಹಿನಿಯರಿಗೆ ಮಗಳಾಗಿ ಜನಿಸಿದ್ದಾಳೆ. ಮೂರು ಲೋಕವೆಲ್ಲವೂ ನನ್ನ ಮಾಯೆಯ ಬಲೆಯೊಳಗುಂಟು ನನ್ನ ಮಾಯೆಯನ್ನು ಸೋಲಿಸುವ ಸಾಮರ್ಥ್ಯ ಅದ್ಯಾರಿಗೂ ಇಲ್ಲವೆಂಬ ಅಹಂಕಾರ ಪಾರ್ವತಿಗೆ ಬಂದು ಮಾಯೆಯನ್ನು ಕಳುಹಿಸಿದ್ದಾಳೆ ಈ ಧರೆಗೆ.
ಮಾಯೆಯ ಬಲೆಯಲ್ಲಿ ಬೀಳುವವರು ದುರ್ಬಲ ಮನಸ್ಸಿನವರು. ಮನಸ್ಸು ಮಹಾದೇವನ ಸ್ವರೂಪವಾದಾಗ ಮಾಯೆಯ ಕೈಚಳಕ ಅಲ್ಲಿ ನಡೆಯಲಾರದು. ಕನಕ- ಕಾಂಚನ – ಕಾಮಿನಿ ಮೊದಲಾದ ವಿಷಯಗಳನ್ನೆಲ್ಲ ಕಣ್ಣೆತ್ತಿ ನೋಡದ ನಿಜ ವಿರಾಗಿ ಅಲ್ಲಮ ಪ್ರಭು.
ಕನಸಿನ ಬದುಕು ಕ್ಷಣ ಯುಗದವರೆಗೆ ಹೀಗೆ ಇರುತ್ತದೆೆಂಬ ಸಂಭ್ರಮ ಈ ಮಾನವ ಲೋಕದ್ದು. ಇದನ್ನು ಕಂಡು ಪ್ರಭು ಹೀಗೆ ಹೇಳಿದ: ಕತ್ತಲೆಯ ಸಂಪಾದನೆಗೆ ಬೆಳಗ ಮಾರಿಹವು ಈ ಜೀವಿಗಳು, ಕತ್ತಲೆ ಎಂಬುದು ಅತ್ತಲೆ ಅಯ್ಯ ಗುಹೇಶ್ವರನೆಂಬುವವ ಈತ್ತಲೇ ಅಯ್ಯ, ಕತ್ತಲೆಯ ರಾಜ್ಯಕ್ಕೆ ಮಿಂಚಿನ ಹುಳು ಅಧಿಕಾರಿ ಆದಂತೆ ಅಜ್ಞಾನದ ಬದುಕಿಗೆ ಅವಿವೇಕಿಗಳೇ ಸಾಮ್ರಾಜ್ಯಶಾಹಿಗಳು. ಇಂತಹವರನ್ನು ನೋಡಿಯೇ ಪ್ರಭು ಕನಿಕರಿಸಿ ‘ಅಂಗಜೀವಿಗಳೆಲ್ಲ ಅಶನಕ್ಕೆ ನೆರೆದರೆ ವಿನಹ ಲಿಂಗತತ್ವದ ಹವಣನವರೆತ್ತ ಬಲ್ಲರು?’ ಎಂದು ಹೇಳಿದರು.
ಮಾಯೆಯನ್ನು ಸೋಲಿಸಲು ಬಂದ ಪ್ರಭು ಮಾಯೆಯ ಬಲುಹನ್ನು ಅವರ ವಾಣಿಯಿಂದಲೆ ಕೇಳಿ, ಮಾಯೆಯು ಬ್ರಹ್ಮ ವಿಷ್ಣು ರುದ್ರರನ್ನು ಮರಳ್ಮಾಡಿ ಕಾಡಿದ್ದಾಳೆ. ಬ್ರಹ್ಮನಿಗೆ ಸರಸ್ವತಿಯಾಗಿ ನಾಲಿಗೆಯಲ್ಲಿ ಕುಳಿತಿದ್ದಾಳೆ. ವಿಷ್ಣುವಿಗೆ ಲಕ್ಷ್ಮೀಯಾಗಿ ವಕ್ಷಸ್ಥಲದಲ್ಲಿ ಕುಳಿತಿದ್ದಾಳೆ. ರುದ್ರನಿಗೆ(ಶಿವನಿಗೆ) ಪಾರ್ವತಿಯಾಗಿ ತೊಡೆಯ ಮೇಲೆ ಕುಳಿತಿದ್ದಾಳೆ, ಗಂಗೆಯಾಗಿ ಜಡೆಯಮೇಲೆ ಕುಳಿತಿದ್ದಾಳೆ.. ಅಂತೂ ನೊಸಲಕಣ್ಣು ಪಂಚಮುಖ ದಶಭುಜದವರಿಗೆ ಮಾಯೆ ಅರ್ಧಾಂಗಿಯಾಗಿದ್ದಾಳೆ. ಆದರೆ ನಾನು ಮಾತ್ರ ಮಾಯಾ ಕೊಳಾಹಳನಾಗಿರ್ದೆ ಕಾಣಾ ಗುಹೇಶ್ವರ! ಎಂದು ಹೇಳುವ ಧೈರ್ಯ ಪ್ರಭುವಿಗೆ ಮಾತ್ರ ಅಲ್ಲವೇ?
ಮಾಯಾಕೋಲಾಹಲನಾದ ಅಲ್ಲಮಪ್ರಭುವಿನಂತಹ ಮಹಾ ವಿಭೂತಿ ಪುರುಷನನ್ನು ಮಾಯೆಗೆ ಸೋಲಿಸಲಿಕ್ಕಾಗಲಿಲ್ಲ. ತಾನೇ ಸೋಲುವ ಪ್ರಸಂಗ ಬಂದಿತು. ಮಾಯೆ-ಪ್ರಭುವಿಗೆ ಹೇಳುತ್ತಾಳೆ: ವಿಷ್ಣು ಶಂಕರ ಬ್ರಹ್ಮ ಸುರ ನರ ನಾಗರೆಂಬ ಅಜ್ಞಾನಿಗಳ ತಂಡವನ್ನು ನನಗೆ ಸೇವಕರಾಗುವಂತೆ ಶರಣಾಗತರಾಗುವಂತೆ ಮಾಡಿದ್ದೇನೆ. ನಿನ್ನನ್ನು ಸಹ ನನ್ನ ಮಾಯದ ಬಲೆಯಲ್ಲಿ ಸಿಕ್ಕಿ ಹಾಕುವೆ. ಪ್ರಭು ಉತ್ತರಿಸುತ್ತಾನೆ: ಮಾಯೆ ಪ್ರತಾಪದ ಮಾತನ್ನಾಡಬೇಡ. ಆದಿ ಅಂತವನರಿಯೆದೆಲ್ಲರ ಸೋಲಿಸಿದೆನೆಂಬ ಗರ್ವತನದಲ್ಲಿ ನುಡಿಯಬೇಡ. ವೇದ ಶಾಸ್ತ್ರಾಗಮಗಳನ್ನಾದರೂ ಕೇಳಿ ನೋಡು. ಮಾಯೆ ಉತ್ತರಿಸಿದಳು: ಆ ವೇದಾಗಮಗಳು ವ್ಯರ್ಥವಾದ ಮಾತುಗಳು. ಶಬ್ದಗಳ ರಾಶಿ ನನ್ನ ಪಾದಗಳ ಬಡಿತದ ಧ್ವನಿ. ಅವುಗಳನ್ನೇನು ಕೇಳುವುದು?.
ಪ್ರಭು ಕೇಳುತ್ತಾನೆ:ಎಲ್ಲರನ್ನು ನಿಂದಿಸಿ ಜರಿದು ಝಾಡಿಸಿ ಮಾತಾಡುವೆ ನೀನು, ನಿನ್ನ ಮೂರ್ಖತನವನ್ನು ಬಿಟ್ಟು ವಿವೇಕದ ಕಣ್ಣಿನಿಂದ ನೋಡಿ ತಿಳಿದು ಮಾತನಾಡು. ಎಲ್ಲರನ್ನಾಡಿಸುವ ನಿನ್ನನ್ನು ಹಿಂದೆ ನಿಂತು ಆಡಿಸುವರೊಬ್ಬರು ಇರಲೆಬೇಕಲ್ಲವೇ?
‘ಯಾರು ಯಾರನ್ನೆ ಆಡಿಸಲಿ ವ್ಯರ್ಥವಾದ ಮಾತು ಬೇಡ, ನಿನ್ನ ಈ ವಿಕೃತವಾದ ವೇಷವನ್ನು ತೊರೆದು ನನ್ನ ಮೇಲೆ ಕೃಪೆ ಮಾಡು’ ಎಂದು ಮಾಯೆ ಬೇಡಿದಳು. ಪ್ರಭು, ಬೇವಿನ ಬೀಜವ ಬಿತ್ತಿ ಮಾವಿನ ಫಲ ಬೇಡಿದರೆ ಬರುತ್ತದೆಯೆ? ನೀನು ಮಾಡಿದ್ದರ ಕರ್ಮ ಫಲ ಕೈ ಸೇರಿತು ಇನ್ನು ಕಾಡಬೇಡ, ನಿನ್ನ ಸ್ವಸ್ಥಾನಕ್ಕೆ ಹೋಗು ಎನ್ನುತ್ತಾನೆ. ಮಾಯೆ, ನನ್ನ ಪಂಥ ಕೈ ಗೂಡದೇ ಹೋದರೆ ಕೈಲಾಸದವರು ನನ್ನನ್ನು ನೋಡಿ ನಗುವರು. ಶ್ರಮಕ್ಕೆ ಫಲವಿಲ್ಲದಾಯಿತು. ಪೂಜೆಯಲ್ಲಿ ನಾನೇನು ಕೊರತೆ ಮಾಡಿಲ್ಲ, ಪೂಜೆಗೆ ಫಲ ಬೇಡವೆ? ಎಂದು ಅಲ್ಲಮನ್ನು ಕೇಳಿದಳು. ನೀನು, ಶಿವನನ್ನು ಪೂಜಿಸುವ ಕ್ರಮ ತಿಳಿಯದೆ ಅಹಂಕಾರದಲ್ಲಿ ಬುದ್ಧಿಗೆಟ್ಟು ಹುಸಿ ಭಕ್ತಿಯನ್ನೆ ಮಾಡಿರುವ ನೀನು ಫಲ ಬೇಡುವಿಯಾ? ದುಡಿದಷ್ಟು ಫಲ, ನಡೆದಷ್ಟು ದಾರಿ, ನಿಜವಲ್ಲದ ಭಕ್ತಿ ಎನಿತುಕಾಲ ಮಾಡಿದರೇನು? ಅದಕ್ಕೆ ಫಲವಿಲ್ಲ ಎಂದು ಅಲ್ಲಮನು ನುಡಿಯುತ್ತಿರುವಾಗ ಮಧ್ಯದಲ್ಲಿ ಪ್ರವೇಶಿಸಿದ ವಿಮಳೆ ಹೀಗೆಂದಳು: ಶರಣರಕ್ಷಾಮಣಿಯೇ, ಈ ಮಾಯೆಯನ್ನು ಹೆಚ್ಚು ಪರೀಕ್ಷಿಸುವುದು ಬೇಡ. ನಿನ್ನ ಕರುಣೆಯೇ ಆಕೆಯ ಪ್ರಾಣವಾದುದರಿಂದ ಕೀಳುಕಬ್ಬಿಣವಾದರೂ ಪರುಷ ಮುಟ್ಟಲು ಬಂಗಾರವಾಗುವದಿಲ್ಲವೆ? ಹಾಗೇ ಪ್ರಭು ಈ ಮಾಯೆಗೆ ನಿನ್ನ ಕೃಪೆಯಾಗಬೇಕು ಎಂದು ಪ್ರಾರ್ಥಿಸಿದಳು. ಆದರೆ ಪ್ರಭು, ಕತ್ತಲೆಗೂ ಸೂರ್ಯನಿಗೂ ಸಂಬಂಧವೇ? ಬಂದ ದಾರಿಯಿಂದ ಸೀದಾ ಹೋಗಿ, ನನ್ನ ಮುಂದಣ ಪಯಣಕ್ಕೆ ಆತಂಕ ಮಾಡಬೇಡಿರಿ ಎಂದು ಪ್ರಭು ಹೇಳಿದ.
ಕೊನೆಗೆ ವಿಮಳೆ ಪ್ರಭುವಿನಲ್ಲಿ ಮಾಯೆಗೆ ತತ್ವಜ್ಞಾನ ಭೋದಿಸಿ ರಕ್ಷಿಸು ಎಂದಳು. ಆದರೆ ಯಾವ ಕಾಲಕ್ಕೂ ಮಾಯೆಗೆ ತತ್ವಜ್ಞಾನವಾಗಲು ಸಾಧ್ಯವೇ ಇಲ್ಲ ಎಂದು ಅಲ್ಲಮನು ನುಡಿದನು. ಅದಕ್ಕೆ ಕೋಪಗೊಂಡು ಮಾಯಾದೇವಿಯು, ‘ನನ್ನ ಪ್ರತಿಜ್ಞೆ ಕೈಗೂಡವವರೆಗೂ ಬಿಡೆನು. ನಿರ್ದೇಹಿ ನಾನೆಂಬ ಗರ್ವ ಬೇಡ, ನಿನ್ನನ್ನು ಬಂಧಿಸುವೆ ನೋಡು ಎಂದು ಪ್ರಭುವನ್ನು ಹಿಡಿಯಲು ಮುಂದಾದಳು. ಆದರೆ ಬಯಲು ಬಂಧಿಯಾಗುವುದೇ? ಬಯಲು ಮೂರ್ತಿಯಾದ ಪ್ರಭು ಮಾಯೆಯ ಬಂಧನಕ್ಕೆ ಕಟ್ಟು ಬೀಳುವನೇ? ಇಲ್ಲ. ಮಾಯೆಯ ಪ್ರಯತ್ನ ವ್ಯರ್ಥವಾಯಿತು, ಮಾಯೆ ನಿಸ್ಸಹಾಯಕಳಾಗಿ ದುಃಖಿತಳಾದಳು. ವಿಮಳೆ ಆ ಮಾಯೆಯನ್ನು ಕರೆದುಕೊಂಡು ಕೈಲಾಸಕ್ಕೆ ಹೋದಳು. ನಡೆದ ಘಟನೆಯನ್ನು ಪಾರ್ವತಿ ದೇವಿಯ ಸಮ್ಮುಖದಲ್ಲಿ ಮಾಯೆಯು ವಿವರಿಸಿದಳು. ಇಂಥ ನಿಜ ವಿರಾಗಿ ಅಲ್ಲಮ ಪ್ರಭು.
(ಲೇಖಕರು ಗದಗ ಅಧ್ಯಾತ್ಮ ವಿದ್ಯಾಶ್ರಮದ ಮುಖ್ಯಸ್ಥೆ)
ಬಿಜೆಪಿ ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪ; ಚೈತ್ರಾ ಕುಂದಾಪುರ ಸೇರಿ ನಾಲ್ವರು ಪೊಲೀಸರ ವಶ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
