ಪ್ರಶಾಂತ ರಿಪ್ಪನ್​ಪೇಟೆ,ಬೆಂಗಳೂರು:ನಗರದಲ್ಲಿ ಪ್ರತಿದಿನ ರಸ್ತೆಗಿಳಿಯುವ ವಾಹನ ಸವಾರರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಟ್ರಾಫಿಕ್ ಸಮಸ್ಯೆಗೆ ಸದ್ಯಕ್ಕಂತೂ ಮುಕ್ತಿ ಸಿಗುವ ಲಕ್ಷಣಗಳು ಕಂಡುಬರುತ್ತಿಲ್ಲ.ನಗರದ ಯಾವುದೇ ಪ್ರಮುಖ ರಸ್ತೆಗೆ ಹೋದರೂ ಸಂಚಾರ ದಟ್ಟಣೆ ಸಾಮಾನ್ಯ.ಅದರಲ್ಲೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಜಂಕ್ಷನ್ ಕಡೆ ಹೋಗುವುದೆಂದರೆ ಒಂದು ಗಂಟೆ ಮುಂಚಿತವಾಗಿಯೇ ಮನೆಯಿಂದ ಹೊರಡಬೇಕಾದ ಅನಿವಾರ್ಯತೆ ಎದುರಾಗಿದೆ.ಇದಕ್ಕೆ ಕಾರಣ ಹೆಬ್ಬಾಳ ಜಂಕ್ಷನ್‌ನಲ್ಲಿ ನಡೆಯುತ್ತಿರುವ ನಿಧಾನಗತಿ ಕಾಮಗಾರಿ.
ನಗರದ ಸಂಚಾರ ದಟ್ಟಣೆಗೆ ಪರಿಹಾರ ಒದಗಿಸಬೇಕೆಂಬ ಕಾರಣಕ್ಕಾಗಿಯೇ ಪರಿಚಿತವಾದ ಮೆಟ್ರೋ ರೈಲು ಯೋಜನೆ ಕಾರ್ಯಾರಂಭಕ್ಕೂ ಮೊದಲು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.ಕೇಂದ್ರ ರೇಷ್ಮೆ ಮಂಡಳಿಯಿಂದ ಕೆ.ಆರ್.ಪುರ ಮಾರ್ಗವಾಗಿ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಿರ್ಮಾಣವಾಗುತ್ತಿರುವ ನೀಲಿ ಮಾರ್ಗದ ಮೆಟ್ರೋ ಕಾಮಗಾರಿಯ ಪರಿಣಾಮ ಹೆಬ್ಬಾಳ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಹೆಚ್ಚಾಗಿಸಿದೆ.ಇದೇ ವೇಳೆ ಕೆ.ಆರ್.ಪುರದಿಂದ ಬರುವ ವಾಹನಗಳು ಬ್ಯಾಪ್ಟಿಸ್ಟ್ ಆಸ್ಪತ್ರೆ ಮೂಲಕ ಮೆಜೆಸ್ಟಿಕ್ ಕಡೆ ಹೋಗಲು ಈ ಹಿಂದೆ ಇದ್ದ ಫ್ಲೈಓವರ್ ಸಂಪರ್ಕವನ್ನು ಕಡಿತಗೊಳಿಸಿ ಪ್ರತ್ಯೇಕ ಲೂಪ್ ನಿರ್ಮಾಣ ಮಾಡಲಾಗುತ್ತಿದ್ದು,ಇದರಿಂದ ಹೆಬ್ಬಾಳ ಸುತ್ತಮುತ್ತಲ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಈ ಎಲ್ಲ ಕಾಮಗಾರಿಗಾಗಿ ಬೃಹತ್ ವಾಹನಗಳು ಸರಕು–ಸಾಗಾಟಕ್ಕಾಗಿ ಸಂಚರಿಸುತ್ತಿರುವುದು ಮತ್ತು ಮಳೆಗಾಲದ ಪರಿಣಾಮ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿರುವುದು ದ್ವಿಚಕ್ರ ವಾಹನ ಸವಾರರು ಸ್ವಲ್ಪ ಮೈಮರೆತರು ನರಕ ದರ್ಶನ ಗ್ಯಾರಂಟಿ ಅನ್ನುವಂತಾಗಿದೆ.ರಸ್ತೆಗೆ ಅಡ್ಡಲಾಗಿ ನಮ್ಮ ಮೆಟ್ರೋ ಬ್ಯಾರಿಕೇಡ್‌ಗಳನ್ನು ಹಾಕಿದೆಯಾದರೂ ಬ್ಯಾರಿಕೇಡ್ ಪಕ್ಕದಲ್ಲೇ ದೊಡ್ಡ ಯಂತ್ರಗಳು ಕಾಮಗಾರಿಯಲ್ಲಿ ತೊಡಗಿದ್ದು,ಬೃಹತ್ ಗುಂಡಿಗಳು ನಿರ್ಮಾಣವಾಗಿ ಮಳೆನೀರು ನಿಂತಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಏರ್‌ಪೋರ್ಟ್ ಹೋಗುವವರಿಗೆ ತಪ್ಪದ ಗೋಳು
ಹೆಬ್ಬಾಳ ಜಂಕ್ಷನ್ ಟ್ರಾಫಿಕ್ ಜಾಮ್‌ನಿಂದ ಅತಿಹೆಚ್ಚು ಸಮಸ್ಯೆ ಅನುಭವಿಸುವವರು ಏರ್‌ಪೋರ್ಟ್‌ಗೆ ತೆರಳುವವರು.ವಿಮಾನ ನಿಲ್ದಾಣಕ್ಕೆ ಸಮಯಕ್ಕೆ ಸರಿಯಾಗಿ ಹೋಗಲೇ ಬೇಕಾದ ಅನಿವಾರ್ಯತೆಯಲ್ಲಿ ಮನೆಯಿಂದ ನಿಗದಿತ ಸಮಯಕ್ಕಿಂತಲೂ ಬೇಗ ಹೊರಡಬೇಕಾಗಿದೆ.
ಮೇಖ್ರಿ ಸರ್ಕಲ್ ಕಡೆಯಿಂದ ಬಂದು ಏರ್‌ಪೋರ್ಟ್ ಹೋಗುವ ವಾಹನಗಳಿಗೆ ಬ್ಯಾಪ್ಟಿಸ್ಟ್ ಆಸ್ಪತ್ರೆ ಎದುರಿನ ಫ್ಲೈಓವರ್​ನಲ್ಲಿ ಪ್ರತ್ಯೇಕ ಮಾರ್ಗವಿದೆಯಾದರೂ,ಒಂದು ಕಡೆ ಕಾಮಗಾರಿ ನಡೆಯುತ್ತಿರುವುದು ಹಾಗೂ ಇನ್ನೊಂದು ಕಡೆ ಸರ್ವೀಸ್ ರಸ್ತೆ ಮೂಲಕವೂ ದೊಡ್ಡ ಸಂಖ್ಯೆಯಲ್ಲಿ ವಾಹನಗಳು ಬರುವುದರಿಂದ ಪ್ರತ್ಯೇಕವಾಗಿ ವಾಹನಗಳನ್ನು ಬಿಡಲಾಗುತ್ತದೆ.ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ.ಏರ್‌ಪೋರ್ಟ್ ಕಡೆಯಿಂದ ಸಿಟಿಗೆ ವಾಪಸ್ ಬರುವ ವಾಹನಗಳಿಗೆ ಹೆಚ್ಚಿನ ಸಮಸ್ಯೆ ಇಲ್ಲ.ಆದರೆ ಕೆ.ಆರ್.ಪುರಂ ಕಡೆಯಿಂದ ಸಂಪರ್ಕವಿದ್ದ ಫ್ಲೈಓವರ್ ಪ್ರತ್ಯೇಕ ಲೂಪ್ ಕಾಮಗಾರಿಗಾಗಿ ಬಂದ್ ಮಾಡಿರುವುದರಿಂದ ವಾಹನಗಳು ಫ್ಲೈಓವರ್ ಕೆಳಗೆ ಬಲಕ್ಕೆ ತಿರುಗಿ ಕೊಡಿಗೆಹಳ್ಳಿ ಕ್ರಾಸ್‌ವರೆಗೆ ಹೋಗಿ ಯೂಟರ್ನ್ ಮಾಡಿಕೊಂಡು ಸರ್ವೀಸ್ ರಸ್ತೆಯ ಮೂಲಕ ಹೆಬ್ಬಾಳ ಜಂಕ್ಷನ್‌ನ ಸುರುಳಿ ತಿರುವಿನ ಮೂಲಕ ಸಿಟಿ ಕಡೆ ಹೋಗಬೇಕಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
ಇಷ್ಟೆಲ್ಲಾ ಟ್ರಾಫಿಕ್ ನಡುವೆ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಕಡೆಯಿಂದ ಬಂದು ಏರ್‌ಪೋರ್ಟ್ ಹೋಗುವರಿಗೆ ಸರ್ವೀಸ್ ರಸ್ತೆ ಮುಕ್ತವಾಗಿದ್ದರೂ,ಕೆ.ಆರ್.ಪುರದ ಕಡೆಗೆ ಹೋಗುವ ಎಲ್ಲ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಬರುವುದರಿಂದ ಟ್ರಾಫಿಕ್ ಜಾಮ್‌ನಲ್ಲಿ ಮೂರ‌್ನಾಲ್ಕು ಸಿಗ್ನಲ್ ಆಗುವವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ.
ವಾರಾಂತ್ಯದಲ್ಲಿ ಹೆಚ್ಚಾಗುವ ಸಂಚಾರ ದಟ್ಟಣೆ
ಸಾಮಾನ್ಯವಾಗಿ ನಗರದಲ್ಲಿ ಹೆಚ್ಚಿನ ಟ್ರಾಫಿಕ್ ಇರುವ ಕೆಲ ರಸ್ತೆಗಳಲ್ಲಿ ವಾರಾಂತ್ಯದಲ್ಲಿ ಕೊಂಚ ಟ್ರಾಫಿಕ್ ತಗ್ಗುತ್ತದೆ.ಆದರೆ ಹೆಬ್ಬಾಳ ಜಂಕ್ಷನ್ ಮೂಲಕ ಬಳ್ಳಾರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ವಾರಾಂತ್ಯದಲ್ಲಿ ಹೆಚ್ಚಾಗುತ್ತದೆ.ಇದೇ ರಸ್ತೆಯ ಮೂಲಕ ಆಂಧ್ರಪ್ರದೇಶದ ಕರ್ನೂಲು,ಅನಂತಪುರ ಹಾಗೂ ರಾಜ್ಯದ ವಿವಿಧ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ.ಸ್ವಂತ ವಾಹನಗಳ ಜೊತೆಗೆ ವಾರಾಂತ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ.ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣಗೊಂಡಿರುವ ಈಶ ಫೌಂಡೇಶನ್‌ನ ಆದಿಯೋಗಿ ದರ್ಶನಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆಯೂ ಕಾರಣ ಎಂಬುದು ಸಂಚಾರ ಪೊಲೀಸರ ಅಭಿಪ್ರಾಯ.
ವಿಮಾನ ಪ್ರಯಾಣಿಕರು ಹೆಬ್ಬಾಳದ ಟ್ರಾಫಿಕ್ ಸಮಸ್ಯೆಯಿಂದಾಗಿ ಒಂದು ಗಂಟೆ ಮೊದಲೇ ಕ್ಯಾಬ್ ಬುಕ್ ಮಾಡುತ್ತಿದ್ದಾರೆ.ಏರ್‌ಪೋರ್ಟಿಗೆ ಹೋಗುವಾಗ ತಡವಾದರೆ ಕೊನೇ ಘಳಿಗೆಯಲ್ಲಿ ಅನಾವಶ್ಯಕ ಒತ್ತಡ ಆಗುತ್ತದೆ ಎಂಬ ಕಾರಣಕ್ಕೆ ಮೊದಲೇ ಹೋಗುತ್ತಿದ್ದಾರೆ.
–ಕಿರಣ್,ಟ್ಯಾಕ್ಸಿ ಚಾಲಕ
ವಾರಾಂತ್ಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ನಿಗಮದ ಬಸ್‌ಗಳ ಸಂಚಾರವೂ ಹೆಚ್ಚಾಗಿರುತ್ತದೆ.ಪ್ರತಿದಿನ ಏರ್‌ಪೋರ್ಟಿಗೆ ವಾಯುವಜ್ರ340ಟ್ರಿಪ್ ಮಾಡುತ್ತದೆ.ಹೊರ ಊರುಗಳಿಗೆ ಹೋಗುವ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಖ್ಯೆ500ಕ್ಕೂ ಹೆಚ್ಚಿವೆ.ಆದರೆ ಇಲ್ಲಿರುವ ಬಸ್ ನಿಲ್ದಾಣದ ಬಳಿ ಮಹಿಳೆಯರಿಗೆ ಶೌಚಾಲಯ ಮತ್ತು ಸರಿಯಾದ ಲೈಟ್ ವ್ಯವಸ್ಥೆ ಇಲ್ಲ.ಈ ಬಗ್ಗೆ ಬಿಬಿಎಂಪಿ ಗಮನ ನೀಡಬೇಕು.
–ದಾವತ್ ಸಾಬ್ ಕಲೊದ್,ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕರು
ನಮ್ಮ ಸರ್ಕಾರಗಳಿಗೆ ದೂರದೃಷ್ಟಿ ಇಲ್ಲ.ಸಂಚಾರ ಸಮಸ್ಯೆ ಉಂಟಾದ ನಂತರ ಪರಿಹಾರಕ್ಕೆ ಹೊರಟಿವೆ.ವಿಮಾನ ನಿಲ್ದಾಣ ನಿರ್ಮಾಣದ ವೇಳೆಯೇ ಮೆಟ್ರೋ ಕಾಮಗಾರಿ ಮಾಡಬೇಕಿತ್ತು.ಮುಂದಿನ10ವರ್ಷದ ವಿಜನ್ ಇಲ್ಲದಿರುವ ಪರಿಣಾಮ ಈ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.ಬ್ರಾಂಡ್ ಬೆಂಗಳೂರು ಎಂಬುದು ಕೇವಲ ಜಾಹೀರಾತಿಗೆ ಸೀಮಿತವಾಗಿದೆ.
–ಶ್ರೀನಿವಾಸ್,ಕೊಡಿಗೆಹಳ್ಳಿ ನಿವಾಸಿ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:12 + 14 =
Remember me
