ಕಾಯವನು ಮೃದ್ಭಾಂಡ ಮಾಂಸಪಿಂಡವೆನುತ್ತೆ|ಹೇಯವೆಂದೆಂದೊಡಾತ್ಮಂಗಪ್ಪುದೇನು?||ಆಯುಧವನದನು ತೊರೆದಾತ್ಮನೇಂಗೈದಪನು?|ನ್ಯಾಯ ತನುವಿಗಮಿರಲಿ-ಮಂಕುತಿಮ್ಮ||389||
ಶರೀರವನ್ನು ಮಣ್ಣಿನ ಮಡಿಕೆ, ಮಾಂಸಪಿಂಡ ಎನ್ನುತ್ತಾ ಅಸಹ್ಯವೆಂದರೆ ಆತ್ಮಚೈತನ್ಯಕ್ಕೇನು ಲಾಭ? ಆಯುಧವನ್ನು ತೊರೆದ ಆತ್ಮನು ಏನನ್ನು ಮಾಡಲು ಸಾಧ್ಯ? ಆತ್ಮನ ಕಾರ್ಯಗಳಿಗೆ ದೇಹವೆ ಸಾಧನ. ಹಾಗಾಗಿ ಶರೀರಕ್ಕೂ ನ್ಯಾಯವಿರಲಿ ಎನ್ನುತ್ತದೆ ಈ ಕಗ್ಗ.
ಮನುಷ್ಯನು ಸ್ವಭಾವತಃ ಭೋಗಾಭಿಲಾಷಿ. ಪಂಚೇಂದ್ರಿಯಗಳ ಮೂಲಕ ಲೋಕದ ಅನುಭವವನ್ನು ಪಡೆಯುವ ಮತ್ತು ಜಗದ ಅದ್ಭುತ ಸೌಂದರ್ಯವನ್ನು ಗ್ರಹಿಸುವ ಮನಸ್ಸು ಅಷ್ಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಮತ್ತೆಮತ್ತೆ ಸುಖಾಪೇಕ್ಷೆಗಾಗಿ ಹಾತೊರೆ ಯುತ್ತದೆ. ಇದರಿಂದಾಗಿ ವಿವೇಚನೆಯ ಸದ್ದಡಗುತ್ತದೆ. ಮನಸ್ಸು ಹುಚ್ಚೆದ್ದು ಕುಣಿಯುವಾಗ ಬುದ್ಧಿಯು ಮಂಕಾದರೆ ಕಡಿವಾಣವಿಲ್ಲದ ಕುದುರೆಯಂತೆ ಅಲೆದಾಡುತ್ತಾನೆ. ಪ್ರಮಾದಗಳನ್ನೆಸಗುತ್ತಾನೆ. ಇದರಿಂದಾಗಿ ಪರಮಾತ್ಮನೆಡೆಗೆ ಸಾಗುವ ಆತ್ಮನ ಯಾತ್ರೆಗೆ ತೊಡಕುಂಟಾಗುತ್ತದೆ. ಇದಕ್ಕಾಗಿ ಭೋಗೇಚ್ಛೆಯನ್ನು ಪ್ರಯತ್ನ ಪೂರ್ವಕವಾಗಿ ತ್ಯಜಿಸಿ ತ್ಯಾಗದತ್ತ ತಿರುಗಿಸಬೇಕು. ತ್ಯಾಗವು ಶ್ರೇಯಸ್ಕರವಾದುದು. ಆದರೆ ಭೋಗವು ಎಲ್ಲರಿಗೂ ಪ್ರಿಯವಾದುದು. ಇವೆರಡನ್ನು ಸಮದೂಗಿಸಿಕೊಂಡು ಹೋಗುವುದಕ್ಕಾಗಿ ವಿರಕ್ತಿಯನ್ನು ನೇಮದಂತೆ ಆಚರಿಸಲಾಗುತ್ತದೆ.
ಹಾಗಾಗಿಯೇ ದೇಹ ನಶ್ವರವಾದುದು, ಮೂಳೆ-ಮಾಂಸಗಳ ತಡಿಕೆ. ಕೊಳಕು, ಕಶ್ಮಲ, ದುರ್ಗಂಧಗಳಿಂದ ಕೂಡಿದ ರಚನೆ. ಸದಾ ಬಯಕೆಗಳ ಬೆನ್ನಟ್ಟುವಂತೆ ಮಾಡುವ, ಲೌಕಿಕದಲ್ಲೇ ತೊಳಲಾಡುವ ಸ್ಥಿತಿಗೆ ತಳ್ಳುವ ಬಂಧನ ಎಂದು ಶರೀರವನ್ನು ತುಚ್ಛವಾಗಿ ಕಾಣಲಾಗುತ್ತದೆ. ದೇಹದಂಡನೆಯ ಮೂಲಕ ಮನಸ್ಸನ್ನು ನಿಗ್ರಹಿಸಿ ಆತ್ಮೋದ್ಧಾರಕ್ಕಾಗಿ ಪ್ರಯತ್ನಿಸಬೇಕು ಎನ್ನುವ ಅಭಿಪ್ರಾಯವಿದೆ. ಆದರೆ ಇದರಿಂದ ನಿಜಕ್ಕೂ ಆತ್ಮಚೈತನ್ಯದ ಮಾರ್ಗವು ನಿಷ್ಕಂಟಕವಾದೀತೇನು? ದೇಹ ಸೌಖ್ಯವನ್ನು ಕಡೆಗಣಿಸುವುದರಿಂದ ಆತ್ಮನಿಗೇನು ಲಾಭ?
ಪರಮಾತ್ಮನೆಡೆಗೆ ಸಾಗುತ್ತಿರುವ ಆತ್ಮಚೈತನ್ಯವು ದೇಹವೆನುವ ರಥವನ್ನು ಏರಿದೆ. ಹತ್ತು ದಿಕ್ಕಿಗೆ ಓಡುವ ಮನಸ್ಸೆಂಬ ಕುದುರೆಯನ್ನು ಬುದ್ಧಿ ಎಂಬ ವಾಘಯಿಂದ ನಿಯಂತ್ರಿಸಿ ತನ್ನ ಗಮ್ಯವನ್ನು ಅದು ಸೇರಬೇಕು. ಈ ಯಾತ್ರೆಯು ಸುಗಮವಾಗಿ ಸಾಗಬೇಕೆಂದರೆ ರಥವು ಸದೃಢವಾಗಿರಬೇಕು, ಕುದುರೆಗಳು ಹದ್ದುಬಸ್ತಿನಲ್ಲಿರಬೇಕು.ಯಾತ್ರೆಯ ನಡುವೆ ಸಾವೆನುವ ನಿಲ್ದಾಣದಲ್ಲಿ ಆ ದಾರಿ ಮುಗಿಯಬಹುದು. ಆಗ ಏರಿದ ರಥವನ್ನು ತ್ಯಜಿಸಿ ಮತ್ತೊಂದು ಹೊಸರಥವನ್ನೇರಿ ಆತ್ಮನು ಮುಂದುವರಿಯುತ್ತಾನೆ. ಹೀಗೆ ಹಲವು ಜನುಮಗಳನ್ನೆತ್ತಿ ಮತ್ತೆಮತ್ತೆ ಭೂಮಿಗೆ ಬರುವ ಜೀವಾತ್ಮನು ಕರ್ಮದೋಷಗಳಿಂದ, ಋಣಶೇಷಗಳಿಂದ ಮುಕ್ತನಾಗಿ ಆತ್ಮೋನ್ನತಿಯನ್ನು ಪಡೆಯುತ್ತಾನೆ. ಪರಮಾತ್ಮನನ್ನು ಸೇರಲೆಂದು ಸಾಗುವ ಈ ಸುದೀರ್ಘ ಯಾತ್ರೆಯು ಸಫಲವಾಗಬೇಕಾದರೆ ಲೋಕ ಜೀವನವೂ ಮುಖ್ಯ. ಆಕಸ್ಮಿಕಗಳು ತುಂಬಿರುವ ಜೀವನದಲ್ಲಿ ಹತ್ತುಹಲವು ಕನಸುಗಳೊಂದಿಗೆ ಭವ್ಯಭವಿತವ್ಯದತ್ತ ಮುಖಮಾಡಿ ನಡೆಯುವ ವ್ಯಕ್ತಿಗೆ ಅನೇಕ ಸವಾಲು, ಸಮಸ್ಯೆಗಳು ಎದುರಾಗುತ್ತವೆ. ಮೋಹಕ್ಕೆ ಒಳಗಾಗಿ ಬದುಕು ಒಡ್ಡುವ ಭ್ರಮೆಯಲ್ಲಿ ಕಳೆದುಹೋಗುತ್ತಾನೆ. ಭೋಗಜೀವನಕ್ಕಾಗಿ ಹಾತೊರೆಯುತ್ತಾನೆ. ಭಾವೋದ್ವೇಗಕ್ಕೆ ಒಳಗಾಗಿ ಪಾಪಕಾರ್ಯಗಳಿಗೆಳಸುವುದು, ಅವಿವೇಕದಿಂದ ನಡೆದುಕೊಳ್ಳುವುದು ಸಾಮಾನ್ಯ. ಹೀಗೆ ಜೀವನ ಪರೀಕ್ಷೆಯನ್ನು ಎದುರಿಸುವ ಮನುಷ್ಯನನ್ನು ಅರಿಷಡ್ವರ್ಗಗಳು ಕಾಡುತ್ತವೆ, ತ್ರಿಗುಣಗಳು ಕ್ಷಣಕ್ಷಣಕ್ಕೂ ವ್ಯತ್ಯಾಸಗೊಳ್ಳುತ್ತಾ ಮನಸ್ಸನ್ನು ಕೆರಳಿಸುತ್ತದೆ. ದೇಹಸೌಖ್ಯವನ್ನು ಪಡೆಯುವುದೇ ಬದುಕಿನ ಸಾಧನೆ ಎಂದು ಸುಖಲೋಲುಪತೆಯೆಡೆಗೆ ವಾಲುವುದು ಸುಳ್ಳಲ್ಲ. ಆತ್ಮನನ್ನು ಮರೆತು ಶರೀರವೆ ತಾನೆಂದು ಭ್ರಮಿಸುವುದರಿಂದ ಖಂಡಿತಾ ಆತ್ಮನ ಯಾತ್ರೆಗೆ ತೊಡಕುಂಟಾಗುತ್ತದೆ.
ದೇಹವೆನ್ನುವುದು ಆತ್ಮಚೈತನ್ಯವು ತನ್ನ ಪ್ರಯಾಣಕ್ಕಾಗಿ ಬಳಸುವ ಸಾಧನ. ಅದಕ್ಕೆ ಹೆಚ್ಚಿನ ಪ್ರಾಧಾನ್ಯವನ್ನು ಕೊಡುವುದು ಸರಿಯಲ್ಲ. ದೇಹದ ಚೆಲುವು, ಸೌಖ್ಯವಷ್ಟೇ ಮುಖ್ಯ ಎಂದು ಭಾವಿಸುವುದರಿಂದ ಆತ್ಮೋನ್ನತಿಯು ಸಾಧ್ಯವಿಲ್ಲ. ಹಾಗೆಂದು ದೇಹದ ಸ್ವಾಸ್ಥ್ಯವನ್ನು ಕಡೆಗಣಿಸುವುದರಿಂದ ಚಿತ್ತಸ್ವಾಸ್ಥ್ಯವೂ ಕೆಡುತ್ತದೆ. ಪೂಜೆ, ಧ್ಯಾನ, ಚಿಂತನೆಗಳಿಂದ ಆತ್ಮನಿಗೆ ಪೋಷಣೆಯನ್ನು ನೀಡಿದಂತೆಯೇ ಹಿತಮಿತವಾದ ಉಪಚಾರಗಳಿಂದ ದೇಹದ ಬೇಡಿಕೆಗಳನ್ನೂ ಪೂರೈಸಬೇಕು. ದೋಣಿಯನ್ನೇರಿ ನದಿ ದಾಟುವುದಕ್ಕೆ ಹೊರಟವನು ದೋಣಿಯು ತೂತು ಬೀಳದಂತೆ ಕಾಪಾಡಿಕೊಳ್ಳಬೇಕು. ಜೊತೆಗೆ ಆಚೆ ದಡವನ್ನು ಸೇರಿದ ಮೇಲೆ ದೋಣಿಯನ್ನು ಜೊತೆಗೆ ಕೊಂಡೊಯ್ಯುವ ವ್ಯಾಮೋಹವನ್ನೂ ಬಿಟ್ಟುಬಿಡಬೇಕು. ದೇಹದ ಜ್ಞಾನೇಂದ್ರಿಯಗಳನ್ನು, ಕಮೇಂದ್ರಿಯಗಳನ್ನು ತೊರೆದರೆ ಆತ್ಮನು ಕರ್ಮನಿರತನಾಗಲು ಸಾಧ್ಯವಿಲ್ಲ. ದೇಹವಷ್ಟೇ ಮುಖ್ಯವೆಂದರೆ ಆತ್ಮನನ್ನು ಬಂಧಿಸಿದಂತಾಗುತ್ತದೆ. ಸಮನ್ವಯದಿಂದ ಇದ್ದರಷ್ಟೇ ಜೀವೋತ್ಕರ್ಷ. ಜೀವನವು ಆತ್ಮನಿಗೆ ಸಂಸ್ಕಾರವನ್ನು, ಪುಣ್ಯ ಸಂಚಯನಕ್ಕೆ ಅವಕಾಶವನ್ನು ಒದಗಿಸಿ ಆತ್ಮೋದ್ಧಾರಕ್ಕೆ ಕಾರಣವಾಗುತ್ತದೆ. ದೇಹಕ್ಕೆ ಆತ್ಮನಿಂದ ಚೈತನ್ಯ, ಆತ್ಮನ ಕಾರ್ಯಕೌಶಲ್ಯಕ್ಕೆ ದೇಹವೆ ಸಾಧನ.
(ಲೇಖಕರು ಉಪನ್ಯಾಸಕರು, ಕವಯಿತ್ರಿ)
ಶ್ರೀಲಂಕಾದ ಸ್ಟಾರ್​ ಬ್ಯಾಟರ್​ನ ದಾಖಲೆ ಮುರಿದ ಜಡೇಜಾ

ಬೆತ್ತಲೆ ಹಬ್ಬ; ಪುರುಷರ ಜತೆ ಮಹಿಳೆಯರಿಗೂ ಅವಕಾಶ..ಷರತ್ತುಗಳು ಅನ್ವಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − nine =
Remember me
