|ಎನ್.ಡಿ. ಶಾಂತಕುಮಾರಶಿವಮೊಗ್ಗ
ಶಿವಶರಣರ ನಾಡು ಶಿಕಾರಿಪುರ ಈ ಚುನಾವಣೆಯಲ್ಲಿ ಮತ್ತೆ ರಾಜ್ಯಮಟ್ಟದಲ್ಲಿ ಸುದ್ದಿಯಲ್ಲಿದೆ. ಬಿ.ವೈ. ವಿಜಯೇಂದ್ರ ಸ್ಪರ್ಧೆಯೇ ಇದಕ್ಕೆ ಕಾರಣ ಎಂದು ಪ್ರತ್ಯೇಕವಾಗಿ ಉಲ್ಲೇಖ ಮಾಡುವ ಅಗತ್ಯವಿಲ್ಲ. ಈ ಚುನಾವಣೆಯಲ್ಲಿ ಯಾರು ಯಾರ ಶಿಕಾರಿ ಮಾಡಲಿದ್ದಾರೆ ಎಂಬುದೇ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಶಿಕಾರಿಪುರ ಕ್ಷೇತ್ರ ಬಿಡಿಸಿಕೊಳ್ಳಬೇಕು ಎನ್ನುವ ಹಠ ಕೆಲವರಲ್ಲಿ ಬಂದಿದ್ದರೆ, ಮೊದಲ ಚುನಾವಣೆ ಫಲಿತಾಂಶ ದಾಖಲೆಗಳ ಪುಟಕ್ಕೆ ಸೇರ್ಪಡೆಯಾಗಬೇಕು ಎನ್ನುವುದು ವಿಜಯೇಂದ್ರ ಮತ್ತು ಅವರ ತಂಡದ ಆಶಯ.
ಟಿಕೆಟ್ ಹಂಚಿಕೆ ಹಂತದಲ್ಲೇ ಕಾಂಗ್ರೆಸ್​ನಲ್ಲಿ ಬಂಡಾಯ ಕಾಣಿಸಿಕೊಂಡಿದ್ದು, ಗೋಣಿ ಮಾಲತೇಶ್ ಅವರಿಗೆ ಟಿಕೆಟ್ ಫೈನಲ್ ಆಗುತ್ತಿದ್ದಂತೆ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ನಾಗರಾಜ ಗೌಡ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ. ಬಿಜೆಪಿ ಗೆಲುವು ಸುಲಭವಾಗಲಿ ಎನ್ನುವ ಉದ್ದೇಶದಿಂದಲೇ ಕೆಪಿಸಿಸಿ ಹಂತದಲ್ಲೇ ಹೊಂದಾಣಿಕೆ ರಾಜಕಾರಣ ನಡೆದಿದೆ ಎಂಬುದು ನಾಗರಾಜ ಗೌಡ ಆರೋಪ. ಗೋಣಿ ಮಾಲತೇಶ್ ಅವರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕ್ಯಾಂಡಿಡೇಟ್ ಎನ್ನುವುದರಲ್ಲಿ ಅನುಮಾನ ಇಲ್ಲ. ಒಂದು ವೇಳೆ ಒಳ ಒಪ್ಪಂದವೇ ನಿಜವಾಗಿದ್ದರೆ ಕಳೆದ ಚುನಾವಣೆಯಲ್ಲಿ 35 ಸಾವಿರ ಮತ ಗಳಿಸಿದ್ದ ಮಾಲತೇಶ್​ಗೆ ಟಿಕೆಟ್ ಕೊಡುತ್ತಿರಲಿಲ್ಲ ಎಂದು ಮಾಲತೇಶ್ ಬೆಂಬಲಿಗರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.ಒಳ ಮೀಸಲಾತಿ ವಿಚಾರದಲ್ಲಿ ಬಿಎಸ್​ವೈ ಮನೆ ಮೇಲೆ ಕಲ್ಲು ತೂರಾಟ ನಡೆದಾಗ ಭಾರಿ ಲೆಕ್ಕಾಚಾರಗಳು ನಡೆದವು. ಎರಡು ದಿನಗಳ ನಂತರ ಯಡಿಯೂರಪ್ಪ ಶಿಕಾರಿಪುರಕ್ಕೆ ಬಂದಾಗ ಲಂಬಾಣಿ ಸಮಾಜದ ಹಿರಿಯರು, ಸ್ವಾಮೀಜಿ ಅವರು ಬಿಎಸ್​ವೈ ಅವರೊಂದಿಗೆ ಕುಳಿತು ಚರ್ಚೆ ಮಾಡಿದರು. ಶತ್ರುಗಳ ವಿರುದ್ಧ ಹೋರಾಟ ಮಾಡುವ ಬದಲಿಗೆ ಅವರನ್ನೇ ಮಿತ್ರಪಡೆ ಮಾಡಿಕೊಂಡು ಅವರ ಮೂಲಕವೇ ಕಾಳಗಕ್ಕೆ ಇಳಿಯುವ ಮನೋಭಾವ ಯಡಿಯೂರಪ್ಪ ಅವರದ್ದು. ಈ ಗುಣ ವಿಜಯೇಂದ್ರ ಅವರಿಗೂ ಬಂದಿದೆ.
ಯಡಿಯೂರಪ್ಪ ಚುನಾವಣೆ ನಿವೃತ್ತಿ ಘೊಷಣೆ ಮಾಡಿ ವಿಜಯೇಂದ್ರ ಅವರೇ ಉತ್ತರಾಧಿಕಾರಿ ಎಂದು ಹೇಳಿದ ದಿನದಿಂದಲೇ ಶಿಕಾರಿಪುರದಲ್ಲಿ ಗೆಲುವಿಗೆ ಶಿಕಾರಿ ಆರಂಭವಾಗಿದೆ. ಬಿ.ವೈ. ರಾಘವೇಂದ್ರ ಸತತವಾಗಿ ಕ್ಷೇತ್ರದಲ್ಲಿ ಸಂಪರ್ಕದಲ್ಲಿದ್ದರೆ, ವಿಜಯೇಂದ್ರ ಕೂಡ ಪ್ರವಾಸದಲ್ಲಿ ನಿರತರಾಗಿದ್ದಾರೆ. ಈವರೆಗೆ ಜೆಡಿಎಸ್​ನಲ್ಲಿದ್ದ ಎಚ್.ಟಿ. ಬಳಿಗಾರ್ ಈಗ ಬಿಜೆಪಿ ಸೇರಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರರ ನಡುವೆ ತ್ರಿಕೋನ ಸ್ಪರ್ಧೆಯಂತೆ ಕಂಡು ಬಂದರೂ ವಾಸ್ತವದಲ್ಲಿ ನೇರ ಹಣಾಹಣಿ ಇದೆ.
ಬಿಜೆಪಿ ವರಿಷ್ಠರ ಸೂಚನೆಯಂತೆ ಹಾಲಿ ಶಾಸಕ ಕೆ.ಎಸ್. ಈಶ್ವರಪ್ಪ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಪಕ್ಷದ ತತ್ವ, ಸಿದ್ಧಾಂತ ಪ್ರತಿಪಾದನೆ, ಹಿಂದುತ್ವ ವಿಚಾರದಲ್ಲಿ ಅವರದೇ ಪಡಿಯಚ್ಚಿನಂತಿರುವ ನಗರ ಪಾಲಿಕೆ ಸದಸ್ಯ ಚನ್ನಬಸಪ್ಪ ಬಿಜೆಪಿ ಹುರಿಯಾಳು. ಕಾಂಗ್ರೆಸ್​ನಿಂದ ಮಾಜಿ ಶಾಸಕ ಚಂದ್ರಶೇಖರಪ್ಪ ಅವರ ಪುತ್ರ, ನಗರ ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ. ಅಚ್ಚರಿ ಬೆಳವಣಿಗೆಯಲ್ಲಿ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಪರಿಷತ್ ಸದಸ್ಯತ್ವಕ್ಕೆ ರಾಜೀ ನಾಮೆ ನೀಡಿ, ಪಕ್ಷಕ್ಕೂ ಗುಡ್​ಬೈ ಹೇಳಿ ಜೆಡಿಎಸ್​ನಿಂದ ಕಣಕ್ಕೆ ಇಳಿದಿದ್ದಾರೆ. ಮೊದಲ ಬಾರಿಗೆ ಜೆಡಿಎಸ್ ಆಟಕ್ಕೂ ಉಂಟು, ಲೆಕ್ಕಕ್ಕೂ ಉಂಟು ಎನ್ನುವ ಪರಿಸ್ಥಿತಿ ನಿರ್ವಣಕ್ಕೆ ಆಯನೂರು ಕಾರಣರಾಗಿದ್ದಾರೆ. ಈವರೆಗೆ ಕಾಂಗ್ರೆಸ್-ಬಿಜೆಪಿ ನಡುವೆ ಸ್ಪರ್ಧೆ ನಡೆಯುತ್ತಿತ್ತು. 3 ಪಕ್ಷಗಳ ನಡುವೆ ಹಣಾಹಣಿ ಏರ್ಪಟ್ಟಿದೆ.
ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್​ನಿಂದ ಲಂಬಾಣಿ ಸಮಾಜಕ್ಕೆ ಆದ್ಯತೆ ಸಿಕ್ಕಿದೆ. ಕಾಂಗ್ರೆಸ್​ನಿಂದ ಮಾದಿಗ ಸಮಾಜದ ಅಭ್ಯರ್ಥಿ ಕಣಕ್ಕೆ ಇಳಿಸಲಾಗಿದೆ. ಬಿಜೆಪಿ ಅಭ್ಯರ್ಥಿ, ಶಾಸಕ ಅಶೋಕ ನಾಯ್ಕ ಮತ್ತೆ ಪುನರಾಯ್ಕೆ ಬಯಸಿದ್ದಾರೆ. ಮಾಜಿ ಶಾಸಕಿ ಶಾರದಾಪೂರ್ಯಾನಾಯ್ಕ ಎರಡನೇ ಬಾರಿಗೆ ಅಶೋಕ್ ಅವರಿಗೆ ಮುಖಾಮುಖಿಯಾಗುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಶ್ರೀನಿವಾಸ ಕರಿಯಣ್ಣ ಕೂಡ 2ನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಮಾಡಿರುವ ಕೆಲಸ ಮತ್ತು ಯಡಿಯೂರಪ್ಪ ಅವರ ಬಲದ ಮೇಲೆ ಅಶೋಕ್ ಮತದಾರರ ಬಳಿ ಹೋಗುತ್ತಿದ್ದಾರೆ. ಶಾರದಾ ಅವರು ಕಳೆದ ಚುನಾವಣೆಯ ಸೋಲಿನ ಅನುಕಂಪ ಮತ್ತು ಲಿಂಗಾಯತ ಸಮಾಜದ ವಿಶ್ವಾಸದ ನಿರೀಕ್ಷೆಯಲ್ಲಿದ್ದಾರೆ.
ಒಂದೇ ಪಕ್ಷದಲ್ಲಿ ಕೆಲಸ ಮಾಡಿದ ಮೂವರೂ ಈಗ ಸಾಗರ ಕ್ಷೇತ್ರದಲ್ಲಿ ಪರಸ್ಪರ ಎದುರಾಳಿಗಳು. ಬಿಜೆಪಿಯಿಂದ ಹರತಾಳು ಹಾಲಪ್ಪ, ಕಾಂಗ್ರೆಸ್​ನಿಂದ ಬೇಳೂರು ಗೋಪಾಲಕೃಷ್ಣ ಮತ್ತು ಆಮ್​ದಿ್ಮುಂದ ಕೆ. ದಿವಾಕರ ಸ್ಪರ್ಧೆಯಲ್ಲಿದ್ದಾರೆ. ಹಾಲಪ್ಪ ಕ್ಷೇತ್ರದಲ್ಲಿ ಆಗಿರುವ ಕೆಲಸ ಮತ್ತು ಡಬಲ್ ಇಂಜಿನ್ ಸರ್ಕಾರಕ್ಕಾಗಿ ಬಿಜೆಪಿಗೆ ಮತ ಕೊಡಿ ಎಂದು ಕೇಳುತ್ತಿದ್ದಾರೆ. ಬೇಳೂರು ಗೋಪಾಲಕೃಷ್ಣ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ನಂಬಿಕೊಂಡಿದ್ದಾರೆ. ಆಮ್ ಆದ್ಮಿಯ ದಿವಾಕರ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಲೋಪಗಳನ್ನು ಪಟ್ಟಿ ಮಾಡಿ ಮತ ಕೇಳುತ್ತಿದ್ದಾರೆ. ಹಾಲಪ್ಪ ಅವರಿಗೆ ಪಕ್ಷದಲ್ಲೇ ಕೆಲವರು ವಿರೋಧ ಮಾಡಿದ್ದು ಗುಟ್ಟೇನೂ ಅಲ್ಲ. ಕ್ಷೇತ್ರದಲ್ಲಿ ಒಳಸುಳಿ ಕೆಲಸ ಮಾಡುವ ಲಕ್ಷಣಗಳಿವೆ. ಇಲ್ಲಿ ಜೆೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ.
ಹಾಲಿ ಶಾಸಕರಿಗೆ ಟಿಕೆಟ್ ಕೊಡ ಬಾರದು ಎಂದು ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾದ ಕ್ಷೇತ್ರ ಸೊರಬ. ಕುಮಾರ ಬಂಗಾರಪ್ಪ ಮೂಲ ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಅವರ ಮೇಲಿರುವ ಆರೋಪ. ಕುಮಾರ ಬಂಗಾರಪ್ಪ ವಿರೋಧಿಗಳು ನಮೋ ವೇದಿಕೆ ರಚನೆ ಮಾಡಿಕೊಂಡಿದ್ದು, ಕುಮಾರ ಬಂಗಾರಪ್ಪಗೆ ಟಿಕೆಟ್ ಕೊಟ್ಟರೆ ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು ಎಂಬ ಬೆದರಿಕೆ ಠುಸ್ ಆಗಿದೆ. ಆದರೆ ಎಲ್ಲೂ ಪ್ರಚಾರಕ್ಕೆ ಹೋಗದೆ ತಟಸ್ಥರಾಗಿದ್ದಾರೆ. ಕಳೆದ ಬಾರಿ ಜೆಡಿಎಸ್​ನಿಂದ ಕಣದಲ್ಲಿದ್ದ ಮಧು ಬಂಗಾರಪ್ಪ ಈಗ ಕಾಂಗ್ರೆಸ್ ಅಭ್ಯರ್ಥಿ. ಗೀತಾ ಶಿವರಾಜ್​ಕುಮಾರ್ ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್​ನಿಂದ ಬಾಸೂರು ಚಂದ್ರೇಗೌಡ, ಸಮಾಜವಾದಿ ಪಕ್ಷದಿಂದ ಬಿ.ಜಿ. ಪರಶುರಾಮ್ ಕಣದಲ್ಲಿದ್ದಾರೆ.
ಭದ್ರಾವತಿ ಹೊರತುಪಡಿಸಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಪತಾಕೆ ಹಾರಿಸಿದೆ. ಇಲ್ಲಿ ಗೆಲುವು ದಕ್ಕಿಸಿಕೊಳ್ಳಲು ಈ ಬಾರಿ ಸ್ಥಳೀಯರೇ ಆದ ಯುವ ವಕೀಲ ಮಂಗೋಟೆ ರುದ್ರೇಶ್ ಅವರನ್ನು ಪಕ್ಷ ಕಣಕ್ಕೆ ಇಳಿಸಿದೆ. ಕಾಂಗ್ರೆಸ್​ನಿಂದ ಶಾಸಕ ಬಿ.ಕೆ. ಸಂಗಮೇಶ್ವರ ಪುನರಾಯ್ಕೆ ಬಯಸಿದ್ದಾರೆ. ಅಪ್ಪಾಜಿಗೌಡ ನಿಧನದಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ಅವರ ಪತ್ನಿ ಶಾರದಾ ಅಪ್ಪಾಜಿಗೌಡ ನಿವಾರಣೆ ಮಾಡುವ ಯತ್ನದಲ್ಲಿ ಕಣಕ್ಕೆ ಇಳಿದಿದ್ದಾರೆ. ಶಾರದಾ ಅಪ್ಪಾಜಿ ಅನುಕಂಪದ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ರುದ್ರೇಶ್ ಹುರುಪಿನಲ್ಲಿದ್ದಾರೆ.
‘ಇದು ನನ್ನ ಕಡೆಯ ಚುನಾವಣೆ’ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಧ್ಯಪ್ರವೇಶದಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ ಮತ್ತು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ಅವರ ನಡುವಿನ ಮುನಿಸು ಮರೆಯಾಗಿದೆ. ಇಬ್ಬರ ಜಗಳದಲ್ಲಿ ಸಲೀಸಾಗಿ ಗೆದ್ದು ಬರುತ್ತಿದ್ದ ಜ್ಞಾನೇಂದ್ರ ಅವರಿಗೆ ಈ ಇಬ್ಬರ ಬಲ ಎದುರಿಸುವ ಸವಾಲು ಎದುರಾಗಿದೆ. ಜೆಡಿಎಸ್​ನಿಂದ ಯಡೂರು ರಾಜಾರಾಮ್ ಕಣದಲ್ಲಿದ್ದರೂ ಕಿಮ್ಮನೆ ರತ್ನಾಕರ, ಆರಗ ಜ್ಞಾನೇಂದ್ರ ನಡುವೆ ನೇರ ಹಣಾಹಣಿ ಇದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
