ಬೆಂಗಳೂರು:ಸ್ಪೀಕರ್ ಪೀಠದ ಸಮ್ಮುಖವೇ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ವಿಧಾನಸಭೆಯಲ್ಲಿ ತಾವಾಡಿದ ಮಾತಿಗೆ ಮಾಜಿ ಸ್ಪೀಕರ್ ರಮೇಶ್​ಕುಮಾರ್ ಎರಡು ದಿನಗಳ ಬಳಿಕ ವಿಷಾದ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಇತ್ತಂಡಗಳ ಹಕ್ಕುಚ್ಯುತಿ ಪ್ರಸ್ತಾಪವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೈಬಿಟ್ಟಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ನಡೆದಿದ್ದ ಜಿದ್ದಾಜಿದ್ದಿಗೆ ತೆರೆ ಬಿದ್ದಿದೆ.
ಗುರುವಾರ ಬೆಳಗ್ಗೆ ಕಲಾಪದಲ್ಲಿ ಸಿದ್ದರಾಮಯ್ಯ ತಾವು ಮಂಡಿಸಿದ ಹಕ್ಕುಚ್ಯುತಿ ಬಗ್ಗೆ ಪ್ರಸ್ತಾಪಿಸಿ, ಸಚಿವ ಸುಧಾಕರ್ ಸಂವಿಧಾನ ಚರ್ಚೆ ವೇಳೆ ಸ್ಪೀಕರ್ ಪೀಠವನ್ನುದ್ದೇಶಿಸಿ ‘ರಾಜಕೀಯ ಷಡ್ಯಂತ್ರ ಮಾಡಲಾಗಿದೆ’ ಎಂದಿದ್ದರು. ಈ ಮೂಲಕ ಸ್ಪೀಕರ್ ಪೀಠ, ರಮೇಶ್​ಕುಮಾರ್, ಇಡೀ ಸದನಕ್ಕೆ ಅವಮಾನ ಮಾಡಿದ್ದಾರೆ. ಇದು ಹಕ್ಕುಚ್ಯುತಿ. ಅವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ವಾದಿಸಿದರು.
ದಿನದ ಎರಡನೇ ಅವಧಿಯಲ್ಲಿ ಡಾ.ಸುಧಾಕರ್, ರಮೇಶ್​ಕುಮಾರ್ ವಿರುದ್ಧ ಮಂಡಿಸಿದ್ದ ಹಕ್ಕುಚ್ಯುತಿಗೆ ಪೂರಕವಾಗಿ ವಾದ ಮಂಡಿಸಿದರು. ಜತೆಗೆ ಸಿಕ್ಕ ಅವಕಾಶದಲ್ಲಿ ರಮೇಶ್​ಕುಮಾರ್ ವಿರುದ್ಧ ಆರೋಪಗಳ ಸುರಿಮಳೆಗೈದರು. ಅಂತಿಮವಾಗಿ ವಿಷಯವನ್ನು ಇಷ್ಟಕ್ಕೆ ಮುಗಿಸಲು ರಮೇಶ್​ಕುಮಾರ್ ವಿಷಾದ ವ್ಯಕ್ತಪಡಿಸಿದ್ದರಿಂದ ಸ್ಪೀಕರ್ ಎರಡೂ ಹಕ್ಕುಚ್ಯುತಿ ಪ್ರಸ್ತಾಪವನ್ನು ಕೈಬಿಟ್ಟರು. ಚರ್ಚೆ ವೇಳೆ ರಮೇಶ್​ಕುಮಾರ್ ಸಚಿವ ಸುಧಾಕರ್ ಅವರನ್ನು ಉದ್ದೇಶಿಸಿ ಬಾಸ್ಟರ್ಡ್ ಸೇರಿ ಇನ್ನೆರಡು ಅಸಂಸದೀಯ ಪದಪ್ರಯೋಗ ಮಾಡಿದ್ದರು. ಸಚಿವರೂ ರಮೇಶ್​ಕುಮಾರ್ ವಿರುದ್ಧ ವಾಗ್ದಾಳಿ ಮಾಡಿದ್ದರು. ಅದು ತಾಂತ್ರಿಕ ಕಾರಣಗಳಿಂದ ವಿಧಾನಸಭೆ ದಾಖಲೆಯಲ್ಲಿ ಸೇರ್ಪಡೆಯಾಗದಿದ್ದರೂ ಸಭೆಯಲ್ಲಿದ್ದವರ ಕಿವಿಗೆ ಹೊಕ್ಕಿತ್ತು. ಹೀಗಾಗಿ ಎರಡೂ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡು ಹಕ್ಕುಚ್ಯುತಿ ಮಂಡಿಸಿದ್ದರು.
ಮಾಜಿ ಸ್ಪೀಕರ್ ಹೇಳಿದ್ದೇನು?
‘ನಾನು ಆ ರೀತಿ ಹೇಳಿಲ್ಲ, ಹಂಗೇನಾದರೂ ಹೇಳಿದ್ದೇನೆ ಎಂದುಕೊಂಡರೆ ವಿಷಾದ ವ್ಯಕ್ತಪಡಿಸು ತ್ತೇನೆ. ನಮ್ಮ ನಡುವೆ ವೈಯಕ್ತಿಕ ವಾಗಿ ಏನೂ ಇಲ್ಲ. ನಿಲುವು, ವಿಚಾರ ವಿಭಿನ್ನವಾಗಿರ ಬಹುದು’ ಎಂದು ರಮೇಶ್​ಕುಮಾರ್ ಸದನದಲ್ಲಿ ಹೇಳಿದರು. ನಾನು ಸ್ಪೀಕರ್ ಪೀಠದಲ್ಲಿದ್ದಾಗ ಕೊಟ್ಟ ತೀರ್ಪನ್ನು ಭಾಗಶಃ ಸುಪ್ರೀಂ ಎತ್ತಿ ಹಿಡಿದಿದೆ. ಯಾವ ನಿಯಂತ್ರಣಕ್ಕೂ ಒಳಗಾಗದೆ ತೀರ್ಪಕೊಟ್ಟಿದ್ದೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಅದೇ ರೀತಿ ಸುಧಾಕರ್ ಸಹ, ಸ್ಪೀಕರ್ ಆಗಿದ್ದಾಗ ರಮೇಶ್​ಕುಮಾರ್ ಆಡಿದ ಮಾತು ಉಲ್ಲೇಖಿಸಿ ಟೀಕಿಸಿದರು.
ಜಟಾಪಟಿ
ಗುರುವಾರ ಬೆಳಗ್ಗೆ ಸಿದ್ದರಾಮಯ್ಯ ವಾದ ಮಂಡನೆ ಸಂದರ್ಭ ‘ಅರ್ಹ ಸಚಿವರು’ ಪದೇಪದೆ ಅಡ್ಡಿಪಡಿಸಿದರು. ಇನ್ನು ಸುಧಾಕರ್ ಮಾತನಾಡುವಾಗಲೂ ಕಾಂಗ್ರೆಸ್ ಕಡೆಯಿಂದ ಮತ್ತೆ ಮತ್ತೆ ಅಡ್ಡಿಯಾಯಿತು. ಈ ವೇಳೆ ಮಾತನಾಡಿದ ಸುಧಾಕರ್, ನಿಮಗೆ ಅಷ್ಟು ತಾಳ್ಮೆ ಇಲ್ಲವಾದರೆ ಹೇಗೆ? ಶಾಸಕರಿಗೆ ಸದನದಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲವೆ ಎಂದು ಪ್ರಶ್ನಿಸಿದರು. 6-7 ತಿಂಗಳು ಅತಂತ್ರ ಸ್ಥಿತಿಯಲ್ಲಿದ್ದೇವು. ನಾವು ಅನರ್ಹರು ಎಂದು ಮಾಧ್ಯಮಗಳು ಕಾಯಿನ್ ಮಾಡಿದ್ದವು ಎಂದು ಭಾವುಕರಾಗಿ ಹೇಳಿದರು. ವಿಶೇಷವಾಗಿ ಇಷ್ಟು ದಿನ ನಾವಾಯಿತು ನಮ್ಮ ಪಾಡಾಯಿತು ಎಂದು ಸುಮ್ಮನೆ ಕುಳಿತಿರುತ್ತಿದ್ದ ‘ಅರ್ಹ ಸಚಿವರು’ ಒಟ್ಟಾಗಿ ಮಾತಿನ ಬಲ ಪ್ರದರ್ಶನ ಮಾಡಿದರು.
ಸಿದ್ದರಾಮಯ್ಯ ವಾದ
2. 17 ಶಾಸಕರ ವಿರುದ್ಧ ಅಂದಿನ ಸ್ಪೀಕರ್ ಸಂವಿಧಾನದ 10 ಷೆಡ್ಯೂಲ್​ನಡಿ ಕ್ರಮಕೈಗೊಂಡಿದ್ದಾರೆ. ಅವರು ಸ್ಪೀಕರ್ ಸ್ಥಾನದಿಂದ ವಾದ-ವಿವಾದ ಆಲಿಸಿದ ಬಳಿಕ ತೀರ್ಪು ನೀಡಿದ್ದರು. ಇದನ್ನು ಷಡ್ಯಂತ್ರ ಎಂದು ಹೇಳುವುದು ಹಕ್ಕುಚ್ಯುತಿ ವ್ಯಾಪ್ತಿಗೆ ಬರುತ್ತದೆ.
3. ಸ್ಪೀಕರ್ ಸ್ಥಾನ ಸಾಂವಿಧಾನಿಕ ಸ್ಥಾನಮಾನವಾಗಿದೆ. ಕಾನೂನಿನಡಿ ಸಚಿವರಿಗೆ ಛೀಮಾರಿ ಹಾಕಬಹುದು, ಅಮಾನತುಗೊಳಿಸಬಹುದು, ವಜಾಗೊಳಿಸಬಹುದು ಅಥವಾ ಹಕ್ಕುಚ್ಯುತಿ ಸಮಿತಿಗೆ ಈ ವಿಷಯವನ್ನು ಕಳುಹಿಸಬಹುದು.
ಸಚಿವ ಸುಧಾಕರ್ ಪ್ರತಿವಾದ
2. ಸ್ಪೀಕರ್ ಸ್ಥಾನದಲ್ಲಿದ್ದ ರಮೇಶ್​ಕುಮಾರ್, ರಾಹುಲ್, ಸೋನಿಯಾ ಕಾರಣ ಸಿದ್ದರಾಮಯ್ಯ ರಿಂದ ಈ ಸ್ಥಾನದಲ್ಲಿದ್ದೇನೆ ಎಂದಿದ್ದರು. ಅಂದರೆ ಪಕ್ಷಪಾತಿ ಅಲ್ಲದೇ ಏನು? ನಾನೊಬ್ಬನೇ ಶ್ರೀರಾಮ ಅನ್ನೋ ಮನೋಧರ್ಮ ಬದಲಾಗಲಿ.
3. ಸುಪ್ರೀಂತೀರ್ಪ, ಸಭೆ ನಡಾವಳಿ ಇಟ್ಟುಕೊಂಡೇ ಮಾತನಾಡುತ್ತಿದ್ದೇನೆ. ಯಾವುದನ್ನೂ ಮ್ಯಾನ್ಯುಫ್ಯಾಕ್ಚರ್ ಆಗಿ ಮಾತನಾಡುತ್ತಿಲ್ಲ. ರಮೇಶ್​ಕುಮಾರ್ ಪೂರ್ವಾಗ್ರಹ ಪೀಡಿತರಾಗಿ ಮಾತನಾಡಿದ್ದರು. ನನಗೆ ಕೆಟ್ಟ ಶಬ್ದದಲ್ಲಿ ಮಾತನಾಡಿಲ್ಲ ಎಂದಾದರೆ ನೂರು ಸುಳ್ಳುಗಳಲ್ಲಿ ಇದೂ ಒಂದಾಗುತ್ತದೆ.
ಸಂಡೇ ಮಂಡೆ ಲಾಯರೆ›, ಏನಿವಾಗ?
ಹಕ್ಕುಚ್ಯುತಿ ಪ್ರಸ್ತಾಪ ವೇಳೆ ಸಿದ್ದರಾಮಯ್ಯ ವಾದದ ಶೈಲಿಕಂಡು ಮಾಜಿ ಸ್ಪೀಕರ್ ಬೋಪಯ್ಯ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮತ್ತಿತರರು ಅಭಿಪ್ರಾಯ ನೀಡಿದರು. ಆಗ ಮಾತನಾಡಿದ ಸಿದ್ದರಾಮಯ್ಯ, ನಾನು ಒಂದು ರೀತಿ ಸಂಡೇ ಮಂಡೆ ಲಾಯರ್. ವಾದ ಮಾಡುವುದೂ ಗೊತ್ತಿದೆ ಎಂದು ಹಳೆಯ ಘಟನೆ ನೆನಪಿಸಿ ನಕ್ಕರು. 1974ರಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದೆ. 75ರಲ್ಲಿ ಎಮರ್ಜೆನ್ಸಿ ಬಂತು. 78ರಲ್ಲಿ ತಾಲೂಕು ಬೋರ್ಡ್ ಸದಸ್ಯನಾದೆ. ಈ ಮಧ್ಯೆ ಬೆಳಗ್ಗೆ ಕೋರ್ಟ್​ಗೆ ಹೋಗುವುದು ಮಧ್ಯಾಹ್ನ ತಾಲೂಕು ಬೋರ್ಡ್​ಗೆ ಹೋಗುತ್ತಿದ್ದೆ. ಅರ್ಧಂಬರ್ಧ ವಕೀಲಿಕೆ ಮಾಡುತ್ತಿದ್ದೆ. ಹೀಗಾಗಿ ಒಂಥರಾ ಸಂಡೆ ಮಂಡೇ ಲಾಯರ್ ಎಂದರು. ಇದಕ್ಕೆ ಕೆ.ಜಿ.ಬೋಪಯ್ಯ, ಅದೊಂದು ಅತ್ಯುನ್ನತ ವೃತ್ತಿ, ಅದನ್ನು ಹಾಗೆ ಕರೆಯುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ನನ್ನ ವಿಚಾರ ಹೇಳಿಕೊಂಡಿದ್ದೇನೆ, ನಾನು ಸಂಡೆ ಮಂಡೆ ಲಾಯರೇ› ಏನಿವಾಗ ಎಂದು ಪ್ರಶ್ನಿಸಿದರು. ಬೋಪಯ್ಯನವರಿಗೆ ಬೇಜಾರಾದರೆ ಕಡತದಿಂದ ಆ ಪದ ತೆಗೆಸಿ ಎಂದು ಸ್ಪೀಕರ್​ಗೆ ಹೇಳಿದರು.
ವ್ಯಾಪಾರ ಬಲ್ಲವನಿಗೆ ನಷ್ಟವಿಲ್ಲ…
ನೀವು ಬಹಳ ಚೆಂದ ಮಾತನಾಡುತ್ತೀರಿ. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ ಎಂದು ಸಚಿವ ಶಿವರಾಂ ಹೆಬ್ಬಾರ್ ಹಕ್ಕುಚ್ಯುತಿ ಪ್ರಸ್ತಾವನೆ ವೇಳೆ ಮಾಜಿ ಸ್ಪೀಕರ್ ರಮೇಶ್​ಕುಮಾರ್ ಕಾಲೆಳೆದರು, ಇದಕ್ಕೆ ಪ್ರತಿಯಾಗಿ, ‘ವ್ಯಾಪಾರ ಬಲ್ಲವನಿಗೆ ನಷ್ಟವಿಲ್ಲ’ ಎಂದು ರಮೇಶ್​ಕುಮಾರ್ ಸಚಿವರನ್ನು ಮಾತಲ್ಲೇ ತಿವಿದರು.
ಬಿಕ್ಕಟ್ಟಿಗೆ ಮುಖ್ಯಮಂತ್ರಿ ಪರಿಹಾರ
ಎರಡು ದಿನಗಳ ಹಕ್ಕುಚ್ಯುತಿ ಗದ್ದಲ ಗುರುವಾರವೂ ಮುಂದುವರಿದಿತ್ತು. ಸಿದ್ದರಾಮಯ್ಯ ಮಾತನಾಡಲು ಎದ್ದು ನಿಂತಾಗ ಆಡಳಿತ ಪಕ್ಷದ ಸದಸ್ಯರು ಅಡ್ಡಿ ಪಡಿಸಿದರು. ಸ್ಪೀಕರ್ ಕೈಚೆಲ್ಲಿ ಕುಳಿತರು. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪಕ್ಷದ ಸದಸ್ಯರನ್ನು ಸಮಾಧಾನಪಡಿಸಿ ಮೊದಲು ಸಿದ್ದರಾಮಯ್ಯರಿಗೆ ಮಾತನಾಡಲು ಅವಕಾಶ ಕೊಡೋಣ, ನಂತರ ನಾವು ಮಾತನಾಡೋಣ ಎಂದು ಸಮಾಧಾನಪಡಿಸಿ ಚರ್ಚೆಗೆ ಅವಕಾಶ ಕಲ್ಪಿಸಿದರು. ಈ ಮೂಲಕ ಎರಡು ದಿನಗಳ ಬಿಕ್ಕಟ್ಟಿಗೆ ಸಿಎಂ ತೆರೆ ಎಳೆದರು.
ನಾನೆಲ್ಲಿ ಮುಂಬೈಗೆ ಹೋಗಿದ್ದೆ?
ಹಕ್ಕುಚ್ಯುತಿ ಪ್ರಸ್ತಾಪ ಸಂದರ್ಭ ಸಚಿವ ಆನಂದ್ ಸಿಂಗ್, ಮಾಜಿ ಸ್ಪೀಕರ್ ರಮೇಶ್​ಕುಮಾರ್ ಅವರನ್ನುದ್ದೇಶಿಸಿ ಮಾತಿನ ಚಾಟಿ ಬೀಸಿದರು. ಸಿದ್ದರಾಮಯ್ಯ ಮಾತನಾಡುವ ವೇಳೆ, ನೀವೆಲ್ಲ ಮುಂಬೈಗೆ ಒಟ್ಟಿಗೆ ಇದ್ದಿರಲ್ಲ ಎಂದು ಶಾಸಕರ ಅನರ್ಹತೆ ಪ್ರಕರಣ ಸಮರ್ಥಿಸಿಕೊಂಡರು. ಆಗ ಮಾತನಾಡಿದ ಆನಂದ್ ಸಿಂಗ್, ನಾನೆಲ್ಲಿ ಮುಂಬೈಗೆ ಹೋಗಿದ್ದೆ? ನನ್ನನ್ನೇಕೆ ಅನರ್ಹ ಮಾಡಿದರು ಎಂದು ರಮೇಶ್​ಕುಮಾರ್​ರನ್ನು ದಿಟ್ಟಿಸಿ ಪ್ರಶ್ನಿಸಿದರು. ಈ ವೇಳೆ ಪ್ರತಿಪಕ್ಷದಿಂದ ಉತ್ತರ ಬಾರದೆ ಹೋಯಿತು.
ನಮಗೂ ಹೇಳುವುದಿದೆ, ಹೇಳ್ತಿವಿ..
‘ಅರ್ಹ ಸಚಿವ’ರ ಪೈಕಿ ನಾರಾಯಣ ಗೌಡ ಮತ್ತು ಶಿವರಾಂ ಹೆಬ್ಬಾರ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದು, ನಮ್ಮ ಬಳಿ ದಾಖಲೆ ಇದೆ, ನಮಗೂ ಹೇಳುವುದಿದೆ ಎಂದು ಮತ್ತೆ ಮತ್ತೆ ಪ್ರಸ್ತಾಪಿಸಿದರು. ಶಾಸಕರ ಅನರ್ಹತೆ ಸಂದರ್ಭದಲ್ಲಿನ ಬೆಳವಣಿಗೆ ಬಗ್ಗೆ ಉಲ್ಲೇಖಿ ಸಿದ ಅವರು, ಸಮಯಕ್ಕೆ ಕಾಯುತ್ತಿದ್ದೇವೆ ಎಂದರು. ಸಂಜೆ ವೇಳೆ ಎ ಜಿ.ಪರಮೇಶ್ವರ್, ನಮಗೆ ಗೊತ್ತಿದೆ ಬಹಳ ವಿಷಯವಿದೆ ಎನ್ನುತ್ತಿದ್ದೀರಿ. ಎಷ್ಟಿದೆ ಹೊರಗೆ ಹಾಕಿ ಎಂದು ಸವಾಲು ಹಾಕಿದರು.
https://www.vijayavani.net/video-summer-vacation-for-1-6th-std-students-in-bengaluru/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
