| ಜಿ.ಟಿ. ಹೆಗಡೆ ಹುಬ್ಬಳ್ಳಿ
ಕರೊನಾ ಕಾರಣಕ್ಕೆ ಕೆಲ ತಿಂಗಳು ತಡವಾಗಿ ಬಂದಿರುವ ಮೇಲ್ಮನೆ ಚುನಾವಣೆ ಉತ್ತರ ಕರ್ನಾಟಕದಲ್ಲಿ ಈಗ ಮೋಡ-ಮಳೆ, ನೀರು-ನೆರೆ ಮಧ್ಯೆಯೂ ಬಿಸಿ ಹೆಚ್ಚಿಸತೊಡಗಿದೆ. ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ.28ರಂದು ಮತದಾನ ನಡೆಯಲಿದ್ದು, ಪ್ರಮುಖ ರಾಜಕೀಯ ಪಕ್ಷಗಳು ಜಿದ್ದಿಗೆ ಬಿದ್ದಿವೆ. ಪಕ್ಷೇತರರು ತಾವೂ ಒಂದು ಕೈ ನೋಡೇಬಿಡುವುದಾಗಿ ಛಲದಿಂದ ಪ್ರಚಾರ ನಡೆಸಿದ್ದಾರೆ.
ಕಾಂಗ್ರೆಸ್ ಕೋಟೆಯಾಗಿದ್ದ ಈ ಕ್ಷೇತ್ರವನ್ನು ಬಿಜೆಪಿ 2008ರಲ್ಲಿ ವಶಕ್ಕೆ ಪಡೆಯಿತು. 2014ರಲ್ಲಿ ಪ್ರೊ.ಎಸ್.ವಿ.ಸಂಕನೂರ ಬಹುಮತದಿಂದ ಗೆದ್ದರು. ಅವರೇ ಮತ್ತೀಗ ಬಿಜೆಪಿ ಅಭ್ಯರ್ಥಿ. ಹೇಗಾದರೂ ಒಮ್ಮೆ ಎಂಎಲ್​ಸಿ ಆಗಬೇಕೆಂದು ಮತ್ತೆ ಮತ್ತೆ ಸ್ಪರ್ಧಿಸಿದ್ದ ಪ್ರೊ.ಆರ್.ಎಂ.ಕುಬೇರಪ್ಪಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಜೆಡಿಎಸ್​ನಿಂದ ಅಣ್ಣಿಗೇರಿಯ ವಕೀಲ ಶಿವಶಂಕರ ಕಲ್ಲೂರ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ, ಸದ್ಯ ರಾಷ್ಟ್ರೀಯ ಸಂಘದ ಉಪಾಧ್ಯಕ್ಷರಾಗಿರುವ ಬಸವರಾಜ ಗುರಿಕಾರ ಪಕ್ಷೇತರನಾಗಿ ಕಣಕ್ಕಿಳಿದಿದ್ದಾರೆ. ಸಂಕನೂರ ಎಲ್ಲಿಯೂ ವಿವಾದಕ್ಕೆ ಗುರಿಯಾದವರಲ್ಲ. ಶಿಕ್ಷಕರು ಸೇರಿ ಸರ್ಕಾರಿ ನೌಕರರ, ಪದವೀಧರರ ಅನೇಕ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಸದನದ ಒಳ, ಹೊರಗೆ ಹುದ್ದೆಯ ಘನತೆಗೆ ಕುಂದು ಬಾರದಂತೆ ನಡೆದುಕೊಂಡಿದ್ದಾರೆ. ಕುಬೇರಪ್ಪ ಶಿಕ್ಷಕರ ಸಂಘಟನೆಗಳ ಮೂಲಕ ಪರಿಚಿತರು. ಹಿಂದೆ ಬಿಜೆಪಿ ಟಿಕೆಟ್​ಗಾಗಿ ಪ್ರಯತ್ನಿಸಿ, ಸಿಗದಿದ್ದಾಗ ಸ್ವತಂತ್ರವಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಕೆಲ ವರ್ಷದ ಹಿಂದೆಯೇ ಕಾಂಗ್ರೆಸ್ ಸೇರಿ, ಇತ್ತೀಚೆಗೆ ಪಕ್ಷ ಸಂಘಟನೆ ಚುರುಕುಗೊಳಿಸಿದ್ದಾರೆ. ಅದನ್ನು ಒರೆಗೆ ಹಚ್ಚಿದ್ದಾರೆ ಕಾಂಗ್ರೆಸ್ ನಾಯಕರು. ಕ್ಷೇತ್ರದಲ್ಲಿ ತುರುಸಿನ ಸ್ಪರ್ಧೆ ಇರುವುದು ಬಿಜೆಪಿ-ಕಾಂಗ್ರೆಸ್ ಮಧ್ಯೆ. ರಾಷ್ಟ್ರೀಯ ಪಕ್ಷಕ್ಕೇ ಇಲ್ಲಿಯ ಮತದಾರರು ಮಣೆ ಹಾಕುತ್ತ ಬಂದಿರುವ ಇತಿಹಾಸ ಇದೆ. ಆದಾಗ್ಯೂ ಜೆಡಿಎಸ್, ಇತರರು ಎಷ್ಟು ಮತ ಪಡೆಯುತ್ತಾರೆ, ಅದು ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಕುತೂಹಲವಿದೆ.
ಗಣ್ಯರಿಗೆ ಪ್ರತಿಷ್ಠೆ:ಸಂಕನೂರರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವುದು ಸಚಿವರಾದ ಜಗದೀಶ ಶೆಟ್ಟರ್, ಬಸರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ್, ಸಿ.ಸಿ.ಪಾಟೀಲ್, ಶಿವರಾಮ ಹೆಬ್ಬಾರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇತರ ಗಣ್ಯರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ, ಕರೊನಾ ಆತಂಕದ ಮಧ್ಯೆಯೂ ಪ್ರಚಾರ ಚುರುಕುಗೊಳಿಸಿದ್ದಾರೆ.
ಮೊದಲ ಅವಧಿ ಯಲ್ಲಿ ಮಾಡಿದ ಕೆಲಸ, ಬಿಜೆಪಿ ಸರ್ಕಾರದ ಬಗ್ಗೆ ಜನರಿಗೆ ಇರುವ ನಂಬಿಕೆ, ಕ್ಷೇತ್ರ ವ್ಯಾಪ್ತಿಯ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರ ಪರಿಶ್ರಮ.. ಇವೆಲ್ಲ ನನಗೆ ಶ್ರೀರಕ್ಷೆ. ಹೆಚ್ಚಿನ ಬಹುತದಿಂದ ಗೆಲ್ಲುತ್ತೇನೆಂಬ ವಿಶ್ವಾಸವಿದೆ.
|ಎಸ್.ವಿ. ಸಂಕನೂರಬಿಜೆಪಿ ಅಭ್ಯರ್ಥಿ
ಪಕ್ಷೇತರರು:ಬಸವರಾಜ ಗುರಿಕಾರ, ದಶರಥ ಚಂದ್ರಹಾಸ ರಂಗರಡ್ಡಿ, ಬಿ.ಡಿ. ಹಿರೇಗೌಡರ, ಬಸವರಾಜ ತೇರದಾಳ, ನಾಗರಕಟ್ಟಿ ಮಹ್ಮದ ಶಫಿವುದ್ದೀನ್, ಶಿವಕುಮಾರ ತಳವಾರ.
ಕ್ಷೇತ್ರದಲ್ಲಿ ಶೇ.50 ಮತದಾರರು ಲಿಂಗಾಯತ-ವೀರಶೈವರೇ ಆಗಿದ್ದಾರೆ. ಇದು ಲಿಂಗಾಯತ ಎಸ್.ವಿ.ಸಂಕನೂರರಿಗೇ ಟಿಕೆಟ್ ನೀಡಿರುವ ಬಿಜೆಪಿಗೆ ಅನುಕೂಲವಾಗಿದೆ. ಬ್ರಾಹ್ಮಣ, ಇತರ ಸಮುದಾಯದ ಹೆಚ್ಚಿನ ಮತಗಳೂ ಬಿಜೆಪಿಗೇ ಬರುತ್ತವೆ ಎನ್ನುವುದು ಮುಖಂಡರ ಲೆಕ್ಕಾಚಾರ. ಆರ್.ಎಂ.ಕುಬೇರಪ್ಪ ರಡ್ಡಿ ಲಿಂಗಾಯತ ಆಗಿದ್ದು, ಎಲ್ಲ ಸಮುದಾಯದೊಂದಿಗೆ ಸ್ನೇಹ ಹೊಂದಿದ್ದಾರೆ. ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಕುರುಬ ಸಮಾಜದವರು. ಶಿಕ್ಷಕರ ಸಂಘದಲ್ಲಿ ಸುದೀರ್ಘ ಕಾರ್ಯ ನಿರ್ವಹಿಸಿದ್ದರಿಂದ ಜಾತಿಗಳನ್ನು ಮೀರಿ ಮತ ಪಡೆಯುವ ಪ್ರಯತ್ನದಲ್ಲಿದ್ದಾರೆ.
ಕ್ಷೇತ್ರ ವ್ಯಾಪ್ತಿ-ಬಲಾಬಲ:ಒಟ್ಟು 3 ಲೋಕಸಭಾ ಕ್ಷೇತ್ರ, 23 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 23ರಲ್ಲಿ 19 ಬಿಜೆಪಿ ಶಾಸಕರಿದ್ದಾರೆ. 4 ಕಾಂಗ್ರೆಸ್​ನವರು. ಮೂರಕ್ಕೆ ಮೂರೂ ಲೋಕಸಭಾ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಮೂರು ಪಕ್ಷಗಳಿಂದ ತಲಾ ಒಬ್ಬ ಎಂಎಲ್​ಸಿಗಳಿದ್ದಾರೆ.
ಕಳೆದ ಅವಧಿಯಲ್ಲಿ ಕ್ಷೇತ್ರ ಪ್ರತಿನಿಧಿಸಿದವರು, ಬಿಜೆಪಿ ಸರ್ಕಾರ ಪದವೀಧರರ ಅಹವಾಲುಗಳಿಗೆ ಸ್ಪಂದಿಸಿಲ್ಲ. ಪಕ್ಷದ ನಾಯಕರು, ಕಾರ್ಯ ಕರ್ತರು ನಿರಂತರ ಪ್ರಚಾರ ನಡೆಸುತ್ತಿದ್ದಾರೆ. ಈ ಸಲ ಕ್ಷೇತ್ರ ಪುನಃ ಕೈ ವಶವಾಗಲಿದೆ.
|ಆರ್.ಎಂ.ಕುಬೇರಪ್ಪಕಾಂಗ್ರೆಸ್ ಅಭ್ಯರ್ಥಿ
ರಾಜ್ಯದಲ್ಲಿ ಜೆಡಿಎಸ್ ಸಾಧನೆ, ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಮತದಾರರಿಗೆ ಇರುವ ವಿಶ್ವಾಸ, ರಾಷ್ಟ್ರೀಯ ಪಕ್ಷಗಳ ಮಿತಿಗಳು ಇತ್ಯಾದಿ ಕಾರಣದಿಂದ ಪದವೀಧರರು ಪ್ರಾದೇಶಿಕ ಪಕ್ಷವನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನ್ನದು.
|ಶಿವಶಂಕರ ಕಲ್ಲೂರಜೆಡಿಎಸ್ ಅಭ್ಯರ್ಥಿ
ಪದವೀಧರರ ಸಮಸ್ಯೆಗಳಿಗೆ ವಿಧಾನಸಭೆಯಲ್ಲಿ ಸರಿಯಾದ ಧ್ವನಿ ನೀಡುವ ಘನ ಉದ್ದೇಶವಿರುವ ಅಭ್ಯರ್ಥಿ ನಾನು. ರಾಜಕೀಯ ಪಕ್ಷದವರನ್ನು ಆರಿಸಿ ನೋಡಿ ಬೇಸತ್ತಿರುವ ಮತದಾರರು ಈ ಸಲ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ.
|ಬಸವರಾಜ ಗುರಿಕಾರಪಕ್ಷೇತರ ಅಭ್ಯರ್ಥಿ
ಬಿಜೆಪಿ ಎಸ್.ವಿ. ಸಂಕನೂರ
ಕಾಂಗ್ರೆಸ್ ಆರ್.ಎಂ. ಕುಬೇರಪ್ಪ
ಜೆಡಿಎಸ್ ಶಿವಶಂಕರ ಕಲ್ಲೂರ
ಕರ್ನಾಟಕ ರಾಷ್ಟ್ರ ಸಮಿತಿ ಶಿವರಾಜ ಕಾಂಬಳೆ
ಶಿವಸೇನಾ ಸೋಮಶೇಖರ್ ಉಮರಾಣಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
