ಕೆಲವು ಜಾಣ ರಾಜಕಾರಣಿಗಳು ಚುನಾವಣೆ ಸಮಯದಲ್ಲಿ ವಿರೋಧಿಗಳ ಸಹಕಾರವನ್ನು ಸಹ ಕೇಳಲು ಹಿಂಜರಿಯರು. ಅದರಿಂದ ದೊಡ್ಡ ಲಾಭ ಆಗುತ್ತದೆಯೋ ಇಲ್ಲವೋ ಅದು ಬೇರೆ. ಆದರೆ ದಾಳ ಉರುಳಿಸಲು ಹಿಂದೆ ಮುಂದೆ ನೋಡುವುದಿಲ್ಲ. ಅದೇ ರೀತಿ ಮಾತಿನ ಮೂಲಕ ಫಜೀತಿ ತಂದುಕೊಂಡವರು ಸಹ ಕಡಿಮೆ ಏನಿಲ್ಲ.
ಇಬ್ಬರು ಪ್ರಬಲರ ಮೇಲಾಟ ಎಂದರೆ ಹಾಗೇ ಇರುತ್ತದೇನೋ. ಅಥವಾ ಅದು ಅಹಂಕಾರದ ತಾಕಲಾಟವೂ ಆದೀತು. ಭೀಷ್ಮ ಪಿತಾಮಹನಿಗೆ ಯಾಕೋ ಏನೋ ಮೊದಲಿನಿಂದಲೂ ಕರ್ಣ ಎಂದರೆ ಅಷ್ಟಕ್ಕಷ್ಟೇ. ಅಸಡ್ಡೆ. ಕರ್ಣನಿಗೂ ಅಷ್ಟೇ. ಭೀಷ್ಮ ಎಂದರೆ ಒಂದು ಬಗೆಯ ತಿರಸ್ಕಾರ. ಆದರೆ ಇವರ ನಡುವಣ ಮುನಿಸು ದೊಡ್ಡ ಪೀಕಲಾಟ ತಂದಿತ್ತಿದ್ದು ದುರ್ಯೋಧನನಿಗೆ. ಇನ್ನೇನು ಪಾಂಡವರ ವಿರುದ್ಧ ಸಮರ ಶುರು ಆಗಬೇಕು ಎಂಬ ಹಂತದಲ್ಲಿ ಇವರ ಜಗಳ ತಾರಕಕ್ಕೆ ಏರಿಬಿಟ್ಟಿತ್ತು. ಅತಿರಥನಾದ ತನ್ನನ್ನು ಅರ್ಧರಥಿ ಎಂದು ಭೀಷ್ಮ ಹಂಗಿಸಿದರೆಂದು ಕರ್ಣ ವಿಪರೀತ ಕೋಪಗೊಂಡಿದ್ದ.
ಭೀಷ್ಮನು ಕೌರವರ ಸೇನಾಪತಿಯಾಗಿರುವವರೆಗೆ ತಾನು ಯುದ್ಧರಂಗಕ್ಕೆ ಬರಲಾರೆ ಎಂದು ರಚ್ಚೆ ಹಿಡಿದು ಒಳಸೇರಿಕೊಂಡುಬಿಟ್ಟ. ಕೌರವನಿಗೋ ಸಂದಿಗ್ಧ. ಅತ್ತ ಕುರುಕುಲದ ದೀಪಸ್ತಂಭದ ಹಾಗಿರುವ ಭೀಷ್ಮರನ್ನು ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲದ ಸನ್ನಿವೇಶ. ಪಾಂಡವರನ್ನು ಎದುರಿಸಲು ಮಹಾಸೇನಾನಿಯ ನಾಯಕತ್ವವೇ ಬೇಕಿತ್ತು. ಇತ್ತ, ತನ್ನ ಆತ್ಮೀಯ ಸ್ನೇಹಿತನಾದ ಕರ್ಣನನ್ನು ಬಿಟ್ಟುಕೊಡಲಾಗದು. ಕರ್ಣ ಎಂದರೆ ಸಾಮಾನ್ಯನಲ್ಲ. ಆ ಕಾಲದಲ್ಲಿ ಬಿಲ್ವಿದ್ಯೆಯಲ್ಲಿ ಅರ್ಜುನನಿಗೆ ಸೆಡ್ಡು ಹೊಡೆಯುವ ತಾಕತ್ತು ತೋರಿದವನು. ಹೀಗಾಗಿಯೇ ಕರ್ಣನನ್ನು ಅಂಗರಾಜ್ಯದ ರಾಜನನ್ನಾಗಿ ಮಾಡಿ ಸೂತಪುತ್ರ ಎಂದು ಹಂಗಿಸುತ್ತಿದ್ದವರಿಗೆ ಉತ್ತರ ನೀಡಿದ ಕೌರವ. ಹಾಗೇ ಕರ್ಣ ಕೂಡ ಕೌರವನ ಋಣವನ್ನು ಮರೆಯಲಿಲ್ಲ. ಕೊನೆಯಲ್ಲಿ ತನ್ನ ಜನನದ ಗುಟ್ಟು ಗೊತ್ತಾದರೂ ಪಕ್ಷ ಬಿಡಲಿಲ್ಲ. ಇಂಥ ಕರ್ಣ ಕೊನೆಗೂ ಶಸ್ತ್ರ ಹಿಡಿದಿದ್ದು ಭೀಷ್ಮ ಕೌರವ ಸೇನೆಯ ಸೇನಾಪತಿ ಪಟ್ಟವನ್ನು ಬಿಟ್ಟ ಮೇಲೆಯೇ. ಸೇನಾಪತಿ ಹುದ್ದೆ ತ್ಯಜಿಸಿದ ಭೀಷ್ಮ ಶರಶಯ್ಯೆಯಲ್ಲಿ ಪವಡಿಸಿ ಉತ್ತರಾಯಣವನ್ನು ನಿರೀಕ್ಷಿಸುತ್ತ ಉಳಿದುಬಿಟ್ಟ. ಅದು ಬೇರೆ ಸಂಗತಿ.
ಸಮರ ಸನ್ನಿವೇಶದ ವಿನ್ಯಾಸ, ಚೌಕಟ್ಟೆ ಹಾಗೆ. ಅಲ್ಲಿ ತುಸು ಹೆಜ್ಜೆ ತಪ್ಪಿದರೂ ಫಲಿತಾಂಶ ಏರುಪೇರು ಆಗುತ್ತದೆ. ಹೀಗಾಗಿಯೇ ಯುದ್ಧತಂತ್ರ ಮುಖ್ಯ. ಇದೀಗ ದೇಶದಲ್ಲಿ ಲೋಕಸಭಾ ಚುನಾವಣೆ ಕಾವು ಹೆಚ್ಚುತ್ತಿದೆ. ಪ್ರಮುಖ ಪಕ್ಷಗಳ ಮುಖಂಡರು ಬೆವರು ಹರಿಸುತ್ತ ಮತಬೇಟೆಯಲ್ಲಿ ತೊಡಗಿದ್ದಾರೆ. ಚುನಾವಣಾ ವೇದಿಕೆಯಿಂದ ಮಾತಿನ ಬೆಡಗು-ಬೆರಗು ಭರಪೂರ. ಈ ಕಾರಣದಿಂದ ಮಹಾಭಾರತ ಸಮರದ ನೆನಪು ಸುರುಳಿ ಸುರುಳಿಯಾಗಿ ತೇಲಿ ಬಂದರೆ ಅಚ್ಚರಿಯಿಲ್ಲ. ಏಕೆಂದರೆ, ವ್ಯಾಸ ಮಹರ್ಷಿಗಳೇ ಹೇಳಿದ ಹಾಗೆ- ಮಹಾಭಾರತದಲ್ಲಿ ಇಲ್ಲದ್ದು ಜಗತ್ತಿನಲ್ಲಿ ಯಾವುದೂ ಇಲ್ಲ. ಅಂದರೆ ಮಹಾಭಾರತ ಎಲ್ಲವನ್ನೂ ಒಳಗೊಂಡಿದೆ. ಅಲ್ಲಿ ಅವತಾರಪುರುಷ ಕೃಷ್ಣನ ಸಾನ್ನಿಧ್ಯ ಇದೆ, ದಾಯಾದಿ ಮತ್ಸರ ಇದೆ, ಸೇಡು, ಪ್ರೀತಿ, ಮುನಿಸು, ಕೋಪತಾಪ, ಸ್ತ್ರೀಯರ ನಿಟ್ಟುಸಿರು, ವೀರರ ದಂತಕಥೆ, ದಾಸ-ದಾಸಿಯರ ವ್ಯಥೆ, ಹಠ, ಅಹಂಕಾರ ಇದೆ. ಮಾನವನ ಮನೋವ್ಯಾಪಾರದ ಎಲ್ಲ ಆಯಾಮಗಳು ಅಲ್ಲಿ ಕಿಕ್ಕಿರಿದಿವೆ.
ಭಾರತದಲ್ಲಿ ಚುನಾವಣೆಯನ್ನು ‘ಪ್ರಜಾತಂತ್ರದ ಹಬ್ಬ’ ಎಂದೇ ಬಣ್ಣಿಸಲಾಗುತ್ತದೆ. ಮತಗಟ್ಟೆಗಳಲ್ಲಿ ಜನರು ಉದ್ದುದ್ದ ಸಾಲುಗಳಲ್ಲಿ ನಿಲ್ಲುವುದನ್ನು ನೋಡುವುದೇ ಒಂದು ಸೊಗಸು. ಆ ಸಾಲಿನಲ್ಲಿ ವೃದ್ಧರು, ಮಹಿಳೆಯರು, ಯುವಜನರು, ಮಧ್ಯವಯಸ್ಕರು… ಹೀಗೆ ಎಲ್ಲರೂ ಇರುತ್ತಾರೆ. ಒಂದರ್ಥದಲ್ಲಿ ಅದು ಭಾರತದ ವೈವಿಧ್ಯದ ಸಂಕೇತ ಕೂಡ ಹೌದು. ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಸಾಂಪ್ರದಾಯಿಕ ಬಣ್ಣದ ಉಡುಪಿನಲ್ಲಿ ಬಂದು ಮತ ಚಲಾಯಿಸಲು ಸಾಲಿನಲ್ಲಿ ನಿಲ್ಲುವ ಸನ್ನಿವೇಶ ಜಗತ್ತಿನ ಇತರ ದೇಶಗಳಲ್ಲಿ ದುರ್ಲಭ. ಆ ಬಣ್ಣವೇ ಭಾರತದ ಮಣ್ಣಿನ ರಂಗು.
ಚುನಾವಣೆ ಘೊಷಣೆ ಆಗುವ ತಿಂಗಳುಗಳ ಮುಂಚೆಯೇ ರಾಜಕೀಯ ಪಕ್ಷಗಳು ತಯಾರಿ ಶುರುಮಾಡುತ್ತವೆ. ಚುನಾವಣಾ ಕಣದಲ್ಲಿ ಯಾವ ಯಾವ ವಿಷಯ ಪ್ರಸ್ತಾಪ ಮಾಡಬೇಕು, ಸಂಭಾವ್ಯ ಅಭ್ಯರ್ಥಿಗಳ ಕುರಿತು ಮಾಹಿತಿ ಕಲೆಹಾಕುವುದು, ಎದುರಾಳಿಗಳನ್ನು ಇಕ್ಕಳದಲ್ಲಿ ಸಿಕ್ಕಿಸುವುದು ಹೇಗೆ… ಇತ್ಯಾದಿ ಮಂತ್ರಾಲೋಚನೆ ಚುರುಕು ಪಡೆಯುತ್ತದೆ. ಚುನಾವಣೆ ಅಧಿಕೃತವಾಗಿ ಘೊಷಣೆಯಾದ ಬಳಿಕ ಕೇಳುವುದೇ ಬೇಡ. ನಾವು ಕನ್ನಡ ಶಾಲೆಗೆ ಹೋಗುತ್ತಿದ್ದಾಗ ಕಂಡ ಚುನಾವಣಾ ನೋಟಗಳು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆಗೆಲ್ಲ ಮೈಕಾಸುರನ ಹಾವಳಿ ಜೋರು ಇರುತ್ತಿತ್ತು. ಕಾಂಗ್ರೆಸ್ ಪರವಿರುವ ಅಂಗಡಿ ಮತ್ತು ಇತರ ಪಕ್ಷಗಳ ಪರ ಇರುವ ಅಂಗಡಿಯನ್ನೇ ಕಚೇರಿ ರೀತಿ ಮಾಡಿಕೊಂಡು ಇಡೀ ದಿನ ಧ್ವನಿವರ್ಧಕಗಳ ಮೂಲಕ ಹಾಡುಗಳ ಆರ್ಭಟ ನಡೆದೇ ಇರುತ್ತಿತ್ತು. ಇನ್ನು ಕಾರ್ಯಕರ್ತರು ಸದಾ ಅವಸರದಲ್ಲಿ ಇರುತ್ತಿದ್ದರು. ಓಡಾಟಕ್ಕೆ ವಾಹನ ವ್ಯವಸ್ಥೆ. ಕಾರ್ಯಕರ್ತರಿಗೆ ಟೀ, ಕಾಫಿ ಎಲ್ಲ ಈಗಿನ ಹಾಗೆ ಧಾರಾಳ ಇರಲಿಲ್ಲ. ನಮಗೆ ಶಾಲೆ ಬಿಟ್ಟ ಮೇಲೆ ಈ ಪ್ರಚಾರ ನೋಡುವ ಉಮೇದು. ಪಕ್ಷಗಳ ಬಾವುಟ, ಕರಪತ್ರ, ಬಿಲ್ಲೆ ನೋಡಿದಾಗ ಇದೆಲ್ಲ ಏನು ಎಂದು ಸರಿಯಾಗಿ ತಿಳಿಯದಿದ್ದರೂ ಪಕ್ಷಗಳ ನಡುವಣ ಹೋರಾಟದ ಸಣ್ಣ ಅಂದಾಜು ಸಿಗುತ್ತಿತ್ತು.
ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳ ವ್ಯಾಪ್ತಿ ಮತ್ತು ವಿನ್ಯಾಸ ಬೇರೆ ಬೇರೆ ಆದರೂ ಓಘ ಮಾತ್ರ ಒಂದೇ. ಮಹಾಭಾರತ ಯುದ್ಧದಲ್ಲಿ ಅಸ್ತ್ರಶಸ್ತ್ರಗಳ ಆರ್ಭಟ ಇತ್ತು. ಮುಖಾಮುಖಿ ಕಾದಾಟ ಇತ್ತು. ನಮ್ಮಲ್ಲಿ ನಡೆಯುವ ಚುನಾವಣೆ ಎಂಬ ಸಮರದಲ್ಲಿ ಇವು ಇಲ್ಲ ಎಂಬುದನ್ನು ಬಿಟ್ಟರೆ ಯುದ್ಧದ ಇತರ ಸಕಲ ತಯಾರಿಯೂ ಇರುತ್ತದೆ. ಹಾಗಂತ ಚುನಾವಣೆಯಲ್ಲಿ ಹಿಂಸೆ ನಡೆಯುವುದಿಲ್ಲ ಎಂದಲ್ಲ. ಹಿಂದೆ ಮತಪೆಟ್ಟಿಗೆ ಅಪಹರಣದಂತಹ ಘಟನೆಗಳು ಸಹ ಅಲ್ಲಲ್ಲಿ ವರದಿಯಾಗುತ್ತಿದ್ದವು. ಟಿ.ಎನ್.ಶೇಷನ್ ಅವರು ಕೇಂದ್ರ ಚುನಾವಣಾ ಆಯುಕ್ತರಾಗಿ ಬರುವ ಮೊದಲಿನ ಚಿತ್ರಣಕ್ಕೂ, ನಂತರದ ವಾತಾವರಣಕ್ಕೂ ಇರುವ ವ್ಯತ್ಯಾಸ ಗೊತ್ತೇ ಇದೆ. ಅವರು ಆ ಹುದ್ದೆಗೆ ಒಂದು ಖದರ್ ತಂದುಕೊಟ್ಟರಲ್ಲದೆ ಚುನಾವಣೆ ಎಂದರೆ ಹೀಗೆ ಎಂದು ತೋರಿಸಿಕೊಟ್ಟರು. ಇದಕ್ಕಾಗಿ ಅವರು ಕೆಲ ವಲಯಗಳಿಂದ ವಿರೋಧ-ಟೀಕೆಗಳನ್ನು ಕೂಡ ಎದುರಿಸಬೇಕಾಯಿತು. ಆದರೆ ಅವರು ಕ್ಯಾರೇ ಅನ್ನಲಿಲ್ಲ. ಶೇಷನ್​ಗೆ ಹಾಸ್ಯಪ್ರಜ್ಞೆ ಸಹ ಇತ್ತು. ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳಲು ಕೂಡ ಹಿಂಜರಿಯುತ್ತಿರಲಿಲ್ಲ. ಒಮ್ಮೆ ಅವರು ಹೇಳಿದ್ದರು- ‘ಯಾರು ಏನು ಮಾಡಿದರೂ ನನ್ನ ಒಂದು ಕೂದಲನ್ನು ಸಹ ಅಲುಗಿಸಲು ಸಾಧ್ಯವಿಲ್ಲ. ಏಕೆಂದರೆ ನನ್ನ ತಲೆ ಮೇಲೆ ಕೂದಲೇ ಇಲ್ಲ!’
ಇನ್ನೇನು ಯುದ್ಧ ಶುರು ಆಗಬೇಕು, ಆ ಹಂತದಲ್ಲಿ ಪ್ರಮುಖ ನಾಯಕನೇ ಮುನಿಸು ಮಾಡಿಕೊಂಡರೆ ದೊಡ್ಡ ಹಾನಿ ಖಂಡಿತ. ಆಗ ಸಾಮದಾನದಂಡಭೇದದ ಚತುರೋಪಾಯ ಮಾಡಿಯಾದರೂ ಅವನನ್ನು ಸಮಾಧಾನಪಡಿಸಿ ರಂಗಕ್ಕೆ ಬರುವಂತೆ ಮಾಡುವುದು ಅನಿವಾರ್ಯ. ಈಗಿನ ಚುನಾವಣೆಯ ಹೊತ್ತಿನಲ್ಲೇ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇಂಥ ಎಷ್ಟೋ ಪ್ರಸಂಗಗಳು ನಡೆದವಲ್ಲ. ಸ್ಪರ್ಧೆಗೆ ಟಿಕೆಟ್ ಸಿಗಲಿಲ್ಲ ಎಂದು ಕೋಪಗೊಂಡು, ಪಕ್ಷದ ವಿರುದ್ಧ ಕೆಲಸ ಮಾಡುವುದು, ಬೇರೆ ಪಕ್ಷ ಸೇರುವುದು, ಕೆಲಸ ಮಾಡದೆ ತಟಸ್ಥ ಧೋರಣೆ ತಳೆಯುವುದು ಅಥವಾ ಬಂಡಾಯವಾಗಿ ಸ್ಪರ್ಧೆ ಮಾಡುವುದು… ಹೀಗೆ ಅಸಮಾಧಾನ ವ್ಯಕ್ತವಾಗುವ ಬಗೆ ವಿಭಿನ್ನ.
ಮಹಾಭಾರತ ಯುದ್ಧ ಅನಿವಾರ್ಯ ಎಂಬುದು ನಿಚ್ಚಳ ಆದ ಮೇಲೆ ಪಾಂಡವರು ಮತ್ತು ಕೌರವರ ಕಡೆಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯತೊಡಗಿದವು. ರಾಜರನ್ನು ಸಂರ್ಪಸಿ ಬೆಂಬಲ ಕೋರುವುದು, ಆಸೆಆಮಿಷ ತೋರಿಸಿ ತಮ್ಮತ್ತ ಸೆಳೆಯಲು ಯತ್ನಿಸುವುದು, ಭಾವನಾತ್ಮಕ ಅಸ್ತ್ರ ಪ್ರಯೋಗ, ಕೊನೆಗೆ ಬೆದರಿಕೆ ಹುಟ್ಟಿಸಿಯಾದರೂ ತಮ್ಮ ಪರವಾಗಿ ಯುದ್ಧಕ್ಕೆ ಬರುವಂತೆ ಮಾಡುವುದು- ಹೀಗೆ ನಾನಾ ಬಗೆಯ ತಂತ್ರ. ಪಾಂಡವರಿಗೆ ಸ್ವತಃ ಶ್ರೀಕೃಷ್ಣನೇ ಇದ್ದುದರಿಂದ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಅನುಕೂಲ ಆಯಿತು. ಹಾಗೆ ನೋಡಿದರೆ ಇಡೀ ಯುದ್ಧವನ್ನು ನಿರ್ದೇಶಿಸಿದ್ದು ಕೃಷ್ಣನೇ. ಪಾಂಡವರು ನಿಮಿತ್ತರಾದರು. ಅದೇ ವೇಳೆ ಅರ್ಜುನನನ್ನು ನಿಮಿತ್ತವಾಗಿಸಿಕೊಂಡು ಭಗವಂತ ಗೀತೆಯ ಬೆಳಕನ್ನೂ ಲೋಕಕ್ಕೆ ನೀಡಿದ. ಅತ್ತ ದುರ್ಯೋಧನ ಕೂಡ ಕಡಿಮೆ ಏನಲ್ಲ. ಅವನಿಗೆ ಹೆಗಲೆಣೆಯಾಗಿ ಕರ್ಣ. ಇಂಥ ಸಂದರ್ಭದಲ್ಲಿ ನಾಯಕನ ಮಾತು ಸಹ ಮುಖ್ಯವಾಗುತ್ತದೆ. ಇದಕ್ಕೆ ಒಂದು ಉದಾಹರಣೆ ನೋಡುವುದಾದರೆ- ಕರ್ಣನ ರಥಕ್ಕೆ ಸಾರಥಿಯಾಗಿ ನಿಯೋಜನೆಗೊಂಡವನು ಮದ್ರ ದೇಶದ ಶಲ್ಯ ಮಹಾರಾಜ. ರಾಜನಾದ ತಾನು ಸೂತಪುತ್ರ ಕರ್ಣನ ರಥಕ್ಕೆ ಸಾರಥಿ ಆಗಬೇಕಾ ಎಂಬ ಅಸಮಾಧಾನ ಅವನಿಗೆ ಇತ್ತು. ಸಾರಥಿ ಸಮರ್ಥನಲ್ಲದಿದ್ದರೆ ಯುದ್ಧ ಮಾಡುವುದು ಕಷ್ಟವಾಗುತ್ತದೆ. ರಥವನ್ನು ಯಾವ ಸಂದರ್ಭದಲ್ಲಿ ಎತ್ತ ಒಯ್ಯಬೇಕು, ಯಾವಾಗ ದಿಕ್ಕು ಬದಲಿಸಬೇಕು, ಎದುರಾಳಿಗಳ ನಡೆ ಹೇಗಿದೆ ಎಂಬುದನ್ನೆಲ್ಲ ಸಾರಥಿ ಗ್ರಹಿಸಿ ರಥ ನಡೆಸಬಲ್ಲ. ‘ಸಾರಥಿಯ ನಿರ್ದೇಶನದಲ್ಲಿಯೆ ಯುದ್ಧದ ನಡೆಗಳು, ಫಲಿತಾಂಶಗಳು ನಿಶ್ಚಯವಾಗುತ್ತವೆ’ ಎಂದು ಹೇಳುವ ಮೂಲಕ ಶಲ್ಯನ ಮನವೊಲಿಸಿದ್ದು ಕೌರವನ ಜಾಣತನ.
ಹಾಗೆ ನೋಡಿದರೆ ಯುದ್ಧವೆಂಬುದು ಅಹಂಕಾರದ ಅಭಿವ್ಯಕ್ತಿಯೂ ಹೌದು. ಆದರೆ ಯುದ್ಧದ ಸಮಯದಲ್ಲಿ ಕೆಲವೊಮ್ಮೆ ‘ಅಹಂ’ ಅನ್ನು ಬದಿಗಿಟ್ಟು ವ್ಯವಹರಿಸಬೇಕಾಗುತ್ತದೆ. ಇಲ್ಲವಾದಲ್ಲಿ ಅಪೇಕ್ಷಿತ ಪ್ರಯೋಜನ ದಕ್ಕದು. ಯುದ್ಧದಲ್ಲಿ ಕೃಷ್ಣನ ಬೆಂಬಲ ಕೋರಲು ಹೋದಾಗ ಅರ್ಜುನ ಕೃಷ್ಣನ ಕಾಲಬುಡದಲ್ಲಿ ಕುಳಿತ. ಅದೇ, ದುರ್ಯೋಧನ ಕೃಷ್ಣನ ತಲೆಯ ಹತ್ತಿರ ಕೂತಿದ್ದ. ಕೃಷ್ಣ ಎಚ್ಚರಗೊಂಡಾಗ ಮೊದಲು ಕಂಡಿದ್ದು ಅರ್ಜುನ. ಹೀಗಾಗಿ ಮೊದಲು ಕೇಳುವ ಅವಕಾಶ ಅವನಿಗೆ ದಕ್ಕಿತು. ಕೃಷ್ಣ ಪಾಂಡವರ ಕಡೆಗೆ ಪಾದ ಬೆಳೆಸಿದ. ಕೌರವನಿಗೆ ತಾನು ಮಹಾರಾಜ ಎಂಬ ಗರ್ವ ಇತ್ತು. ಕೃಷ್ಣ ಕೈತಪ್ಪಿದ. ತಾನು ಶಸ್ತ್ರ ಹಿಡಿದು ಕಾದುವುದಿಲ್ಲ ಎಂದು ಬೇರೆ ಕೃಷ್ಣ ಹೇಳಿದ್ದನಲ್ಲ. ಈ ಮಾತಿನ ಸೂಕ್ಷ ್ಮ ದುರ್ಯೋಧನನಿಗೆ ಅರಿವಿಗೆ ಬರಲಿಲ್ಲ. ಆಗಲೇ ವಿಜಯಲಕ್ಷಿ ್ಮ ಪಾಂಡವರ ಕಡೆಗೆ ನಡೆದಳು ಎಂದು ಕಾಣುತ್ತದೆ.
ಯುದ್ಧದ ವಾತಾವರಣದಲ್ಲಿ ಸಂಧಾನ ಸಹ ನಿರ್ಣಾಯಕ ಪಾತ್ರ ವಹಿಸಬಲ್ಲದು. ‘ಪಾಂಡವರಿಗೆ ಅರ್ಧರಾಜ್ಯ ಬೇಡ ಕನಿಷ್ಠ ಪಕ್ಷ ಐದು ಗ್ರಾಮಗಳನ್ನಾದರೂ ಕೊಡು’ ಎಂದು ಸಂಧಾನಕ್ಕೆ ಬಂದ ಕೃಷ್ಣನು ದುರ್ಯೋಧನನ ಎದುರು ಪ್ರಸ್ತಾಪ ಮುಂದಿಟ್ಟಿದ್ದ. ಆದರೆ ಕೌರವ, ‘ಐದು ಗ್ರಾಮಗಳಿರಲಿ ಒಂದು ಸೂಜಿ ಮೊನೆಯಷ್ಟು ಭೂಮಿಯನ್ನು ಸಹ ಕೊಡಲಾರೆ’ ಎಂದುಬಿಟ್ಟ. ಅಷ್ಟೇ ಅಲ್ಲ ಕೃಷ್ಣನನ್ನೇ ಬಂಧಿಸಲು ಮುಂದಾದ. ಸಮರವೇ ನಿಕ್ಕಿ ಆಯಿತು. ಕೊಡು-ಕೊಳ್ಳುವಿಕೆಯ ನಡೆ ಸನ್ನಿವೇಶವನ್ನು ಬದಲಿಸಬಲ್ಲದು.
ಈಗ ನಡೆಯುತ್ತಿರುವ ಚುನಾವಣಾ ಹೋರಾಟದಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂದು ತಿಳಿಯಲು ಬಹಳ ದಿನ ಬೇಕಿಲ್ಲ. ಮತ ಎಂಬುದು ಜನರ ಕೈಲಿ ಇರುವ ಪ್ರಬಲ ಆಯುಧ. ಇದನ್ನು ವಿವೇಚನೆಯಿಂದ ಚಲಾಯಿಸುವುದು ಜನರ ಕರ್ತವ್ಯ. ಬದಲಾದ ಕಾನೂನು, ನಿಯಮಗಳಿಂದಾಗಿ ಚುನಾವಣೆಯ ಸ್ವರೂಪ ಮೊದಲಿಗಿಂತ ಭಿನ್ನವಾಗಿದೆ. ತಂತ್ರಜ್ಞಾನ ಪ್ರವೇಶ ಮಾಡಿದೆ. ಡಿಜಿಟಲ್ ಆಯಾಮ ತೆರೆದುಕೊಂಡಿದೆ. ಚುನಾವಣಾ ವಾರ್​ರೂಂಗಳಲ್ಲಿ ಪಕ್ಷಗಳ ತಂತ್ರಗಳು ಹೊಸೆಯಲ್ಪಡುತ್ತಿವೆ. ಆದರೆ ಚುನಾವಣೆಯ ಆ ಗಮ್ಮತ್ತು ಮರೆಯಾಗಿಲ್ಲ.
ಕೊನೇ ಮಾತು:ಚುನಾವಣೆ ಎಂದ ಮೇಲೆ ಒಂದು ಹಂತದ ಆವೇಶ, ಮಾತಿನ ಜಟಾಪಟಿ ಇವೆಲ್ಲ ಸಹಜ. ಆದರೆ ಯಾವುದಕ್ಕೂ ಲಕ್ಷ ್ಮರೇಖೆ ಎನ್ನುವುದು ಬೇಕು. ಯಾರು ಗೆದ್ದರೂ, ಅಂತಿಮವಾಗಿ ದೇಶ ದೊಡ್ಡದು ಎಂಬ ವಿಶಾಲ ಮನೋಭಾವದಿಂದ ಜನಪ್ರತಿನಿಧಿಗಳು ಕೆಲಸ ಮಾಡಬೇಕು ಎಂಬುದು ಜನಮಾನಸದ ಭಾವನೆ. ಈ ಧ್ವನಿ ರಾಜಕೀಯ ನಾಯಕರ ಹೃದಯದಲ್ಲಿ ಅನುರಣಿಸೀತೆ? ಮಹಾಭಾರತವನ್ನು ನೋಡಿ ಕಲಿಯುವುದು ಬಹಳ ಇದೆ. ಯಾವ ಪಾತ್ರ ನಮಗೆ ಆದರ್ಶ ಆಗಬೇಕು, ಯಾವ ವ್ಯಕ್ತಿತ್ವ ಯಾವ ಸಂದೇಶವನ್ನು ನೀಡುತ್ತದೆ ಎಂಬುದನ್ನು ವಿವೇಚಿಸಿ ನಿರ್ಣಯಕ್ಕೆ ಬರುವುದು ಅವರವರಿಗೆ ಬಿಟ್ಟಿದ್ದು. ‘ಪ್ರಜಾಪ್ರಭುತ್ವದ ಶಕ್ತಿ ನಮ್ಮ ದೇಶದ ಹೆಮ್ಮೆ. ಇದನ್ನು ನಾವು ಜತನದಿಂದ ಕಾಪಾಡಿಕೊಂಡು ಹೋಗಬೇಕು ಮತ್ತು ಇನ್ನಷ್ಟು ಬಲಗೊಳಿಸಬೇಕು’ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ನಿಜ ಅಲ್ಲವೇ… ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಓರೆಕೋರೆಗಳು ಇಲ್ಲವೆಂದಲ್ಲ. ಆದರೆ ಇತರ ಆಡಳಿತ ವ್ಯವಸ್ಥೆಗಳಿಗೆ ಹೋಲಿಸಿದಲ್ಲಿ ಇದುವೇ ಉತ್ತಮ.
ಹ್ಯಾಟ್ರಿಕ್​ ಸೋಲು: ಸೋಮನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಹಾರ್ದಿಕ್ ಪಾಂಡ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
