ಬೆಂಗಳೂರು:ಕ್ಷೇತ್ರಕ್ಕೆ ಹೆಚ್ಚುವರಿ ಅನುದಾನ ಸಿಗುತ್ತಿಲ್ಲ, ನಾವು ಹೇಳಿದವರ ವರ್ಗಾವಣೆ ಆಗುತ್ತಿಲ್ಲ, ಸಚಿವರು ನಮ್ಮನ್ನು ಕಡೆಗಣಿಸುತ್ತಿ ದ್ದಾರೆಂದು ಸಹಿ ಸಂಗ್ರಹಿಸಿ ಅಸಮಾಧಾನ ಹೊರಹಾರಿಸಿದ್ದ ಸ್ವಪಕ್ಷೀಯ ಶಾಸಕರ ಮನವೊಲಿಕೆ ಆರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೋಮವಾರ ಆರು ಜಿಲ್ಲೆಗಳ ಕಾಂಗ್ರೆಸ್ ಶಾಸಕರ ಬೇಡಿಕೆಗಳಿಗೆ ಕಿವಿಗೊಟ್ಟು ಸಮನ್ವಯತೆ ಸಾಧಿಸುವ ಪ್ರಯತ್ನ ಮಾಡಿದ್ದಾರೆ.
ತುಮಕೂರು, ಯಾದಗಿರಿ, ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿ, ಧಾರವಾಡ ಜಿಲ್ಲೆಯ ಪಕ್ಷದ ಶಾಸಕರೊಂದಿಗೆ ಜಿಲ್ಲಾವಾರು ಪ್ರತ್ಯೇಕ ಸಭೆ ನಡೆಸಿದ ಅವರು ದಿನಪೂರ್ತಿ ಈ ಕಾರ್ಯಕ್ಕೆ ಮೀಸಲಿಟ್ಟಿದ್ದರು. ಕ್ಷೇತ್ರವಾರು ಸಮಸ್ಯೆ ಬಗ್ಗೆ ಆಲಿಸಿದ ಸಿಎಂ, ಪ್ರಮುಖವಾಗಿ ಐದು ಅಂಶಗಳ ಬಗ್ಗೆ ಗಮನ ನೀಡಿದ್ದಾರೆ.
ಐದು ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ಕ್ಷೇತ್ರಗಳಿಗೆ ಈ ಸಾಲಿನಲ್ಲಿ ಹೆಚ್ಚಿನ ಅನುದಾನ ಕೊಡುವುದು ಕಷ್ಟವಾಗಲಿದೆ. ಅನುದಾನ ತರದೇ ಇದ್ದರೆ ಯಾವ ರೀತಿ ಒತ್ತಡ ಇರಲಿದೆ ಎಂಬ ಅರಿವಿದೆ. ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಸಿಎಂ ಮನವೊಲಿಸಿದ್ದಾರೆ.
ಶಾಸಕರ ಬೇಡಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಗೆಹರಿಸಬೇಕು, ಒಂದು ವೇಳೆ ಆ ಹಂತದಲ್ಲೂ ಬಗೆಹರಿಯಲಿಲ್ಲವಾದಲ್ಲಿ ನಾನೇ ಖುದ್ದು ಬಗೆಹರಿಸುತ್ತೇನೆ. ಮೊದಲು ಬಹಿರಂಗ ಹೇಳಿಕೆ ಕೊಡುವುದು ನಿಲ್ಲಿಸಿ. ಇದರಿಂದ ಸರ್ಕಾರಕ್ಕೆ, ಪಕ್ಷಕ್ಕೆ ಕೆಟ್ಟ ಹೆಸರು ಬರಲಿದೆ ಎಂದು ಸಿಎಂ ಸೂಚಿಸಿದ್ದಾರಲ್ಲದೇ, ಮುಂಬರುವ ಸಂಪುಟ ಸಭೆಯಲ್ಲಿ ಶಾಸಕರ ಒಟ್ಟು ಅಹವಾಲನ್ನು ಸಚಿವ ಸಹೋದ್ಯೋಗಿಗಳ ಗಮನಕ್ಕೆ ತರಲು ನಿರ್ಧರಿಸಿದ್ದಾರೆ.
ಚುನಾವಣಾ ತಯಾರಿ:ಈ ಜಿಲ್ಲಾವಾರು ಸ್ವಪಕ್ಷೀಯ ಶಾಸಕರ ಸಭೆಯನ್ನು ಲೋಕಸಭಾ ಚುನಾವಣೆ ತಯಾರಿಯ ಸಭೆಯಾಗಿಯೂ ಬಳಸಿಕೊಂಡ ಸಿಎಂ, ಹೈಕಮಾಂಡ್ ಯಾವ ರೀತಿ ನಿರೀಕ್ಷೆ ಇಟ್ಟುಕೊಂಡಿದೆ ಎಂಬುದನ್ನು ಶಾಸಕರ ಗಮನಕ್ಕೆ ತಂದರು. ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲಬೇಕು. ಹೈಕಮಾಂಡ್ ಕೈ ಬಲಪಡಿಸಲು ಇದೊಂದು ಅವಕಾಶ, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಇದೇ ವೇಳೆ ಹಿಂದಿನ ಅವಧಿಯಲ್ಲಿ ಶಾಸಕರು ಟೆಂಡರ್ ಕರೆಯದೇ ಕಾಮಗಾರಿ ನಡೆಸಿರುವ ವಿಚಾರ ಸಭೆಯಲ್ಲಿ ಚರ್ಚೆಯಾಗಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಶಾಸಕರು ಭರವಸೆ ಪಡೆದುಕೊಂಡಿದ್ದಾರೆ.
ಶಾಸಕರ ಬೇಡಿಕೆಗಳು:ಅನೇಕ ಕಾಮಗಾರಿ ಅರ್ಧಂಬರ್ಧವಾಗಿದೆ, ಇದನ್ನು ಮುಗಿಸಲು ಬಾಕಿ ಹಣ ಬಿಡುಗಡೆ ಮಾಡಬೇಕು, ಗುತ್ತಿಗೆದಾರರ ಬಾಕಿ ಪಾವತಿಯಾಗದೇ ಅವರು ಮನೆ ಬಾಗಿಲಿಗೆ ಬರುತ್ತಿದ್ದಾರೆ, ಅವರ ಬೇಡಿಕೆ ಈಡೇರಿಸಿ, ಚುನಾವಣೆ ವೇಳೆ ನೀಡಿದ್ದ ಸಣ್ಣಪುಟ್ಟ ಭರವಸೆ ಈಡೇರಿಸಲು ಅನುದಾನವನ್ನು ಆದ್ಯತೆ ಮೇಲೆ ಕೊಡಬೇಕು ಎಂಬುದು ಬಹುತೇಕ ಶಾಸಕರ ಬೇಡಿಕೆಯಾಗಿತ್ತು. ಕೆಲವು ಯೋಜನೆ ಜಾರಿಗೆ ಸಂಬಂಧ ಬಾಕಿಯಾಗಿರುವ ಪ್ರಕ್ರಿಯೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು.
2. ಶಾಸಕರು ಮತ್ತು ಸಚಿವರ ನಡುವೆ ಹೊಂದಾಣಿಕೆ ಮುಖ್ಯ, ಇದರಿಂದ ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸಹಕಾರ ಸಿಗಲಿದೆ. ಇಲ್ಲವಾದರೆ ಪ್ರತಿಪಕ್ಷಕ್ಕೆ ಆಹಾರವಾದಂತೆ.
3. ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ತಮ್ಮನ್ನು ಸಂರ್ಪಸಿ ಹೇಳಿಕೊಳ್ಳಬಹುದು, ಬಹಿರಂಗ ಹೇಳಿಕೆಗಳು ಸರ್ಕಾರದ ಇಮೇಜ್​ಗೆ ಧಕ್ಕೆಯಾಗುವುದು.
4. ಲೋಕಸಭೆ ಚುನಾವಣೆ ಬರಲಿದ್ದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು, ತಮ್ಮ ತಮ್ಮ ಕ್ಷೇತ್ರದಲ್ಲಿ ಲೀಡ್ ಕೊಡಿಸಬೇಕು.
5. ಅನುದಾನ, ವರ್ಗಾವಣೆ ಸೇರಿ ಯಾವುದೇ ಬೇಡಿಕೆಗಳಿದ್ದರೂ ಹಂತಹಂತವಾಗಿ ಪರಿಹರಿಸಲಾಗುವುದು, ಆತುರ ಬೇಡ. ಲಭ್ಯತೆ ಮೇಲೆ ಅನುದಾನ ನೀಡಲಾಗುವುದು.
ಬೆಂಗಳೂರು:ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗಾವಣೆ ವಿಳಂಬ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ, ಒಂದು ವಾರದೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ವರ್ಗಾವಣೆಗೆ ಶಾಸಕರ ಶಿಫಾರಸು ಪತ್ರ ಒಂದು ಹಂತ. ಶಾಸಕರ ಶಿಫಾರಸು ಪತ್ರದ ಜತೆ ಪರಿಶೀಲನೆಯನ್ನೂ ಮಾಡಿ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಿದರು. ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಕುರಿತು ಪ್ರತಿಕ್ರಿಯೆ ನೀಡಿ, ವರದಿ ಜಾರಿಗೆ ನಾವು ಬದ್ಧರಾಗಿದ್ದೇವೆ. ಬಿಜೆಪಿಯವರು ಈ ಹಿಂದೆ ಶೇ.2ರಂತೆ ಹಂಚಿಕೆ ಮಾಡಿದ್ದಾರೆ. ಆದರೆ ಅವರ ಪಕ್ಷದ ಕೇಂದ್ರ ಮಂತ್ರಿ ನಾರಾಯಣಸ್ವಾಮಿಯೇ ಇದು ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ನಾವು ಕುಳಿತು ಚರ್ಚೆ ಮಾಡುತ್ತೇನೆ. ಯಾರ್ಯಾರಿಗೆ ಎಷ್ಟೆಷ್ಟು ಮೀಸಲಾತಿ ಹಂಚಿಕೆ ಅಂತ ತೀರ್ಮಾನ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಕೆಲವು ಜಿಲ್ಲೆಗಳ ಶಾಸಕರುಗಳ ಜತೆ ಆಯಾ ಕ್ಷೇತ್ರಗಳ ವಿಚಾರವಾಗಿ ಚರ್ಚೆ ಮಾಡಿದ್ದು, ರಾಜಕೀಯವಾಗಿ ಮಾರ್ಗದರ್ಶನ ನೀಡಿದ್ದೇವೆ. ಅವರ ಅಹವಾಲುಗಳನ್ನು ಆಲಿಸಿದ್ದೇವೆ. ಇದರ ಜತೆಗೆ ನಮ್ಮ ಸರ್ಕಾರದ ಕಾರ್ಯಕ್ರಮಗಳ ಜಾರಿ ಹಾಗೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸತತವಾಗಿ ಒಂದು ವಾರಗಳ ಕಾಲ ಈ ರೀತಿ ಚರ್ಚೆ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನ ಕೆಲವು ವಾರ್ಡ್​ಗಳಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರು ನನ್ನನ್ನು ಭೇಟಿ ಮಾಡಿದ್ದರು. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಸಾವಿರ ಕೋಟಿ ರೂ. ಬಾಕಿ ಇದ್ದರೆ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ 170 ಕೋಟಿ ರೂ. ಮಾತ್ರ ಬಾಕಿ ಇದೆ. ಇದೆಲ್ಲವೂ ಸತ್ಯ ಅಲ್ಲವೇ? ಮೊದಲು ನಮ್ಮ ಪಕ್ಷದ ಶಾಸಕರ ಅಹವಾಲು ಆಲಿಸುತ್ತೇವೆ ಎಂದು ತಿಳಿಸಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಅನಗತ್ಯ ಸರ್ಕಾರ ನಮ್ಮ ಶಾಸಕರ ಜತೆಗೂ ಸಭೆ ಮಾಡಬಹುದಾಗಿತ್ತು ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ, ನಾವು ಅವರ ಪಕ್ಷದ ಶಾಸಕರ ಜತೆಗೂ ಸಭೆ ಮಾಡುತ್ತೇವೆ. ಅವರ ಜತೆ ಸಭೆ ಮಾಡುವುದಿಲ್ಲ ಎಂದು ಯಾರು ಹೇಳಿದರು? ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ಶಾಸಕರಿಗೆ ಕೊಟ್ಟ ಮಾತಿನಂತೆ ಸಭೆ ಮಾಡುತ್ತಿದ್ದೇವೆ. ಎಲ್ಲರನ್ನು ಒಟ್ಟಿಗೆ ಕರೆದು ಜಗಳಕ್ಕೆ ಬಿಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 19 =
Remember me
