| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ರಾಜ್ಯದಲ್ಲಿ ಕೃಷಿ ಅವಲಂಬಿತರ ಸಂಖ್ಯೆ ಶೇ.60. ಆದರೆ ಒಟ್ಟು ಜಿಡಿಪಿಯಲ್ಲಿ ಕೃಷಿಯ ಪಾಲು ಶೇ.13 ಮಾತ್ರ. ಈ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ಕ್ಷೇತ್ರ ಮಾಡಬೇಕಾದ ಕಾರ್ಯಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.
ಇಳುವರಿ ಹೆಚ್ಚಳವಾದರೆ ಸಹಜವಾಗಿ ಜಿಡಿಪಿ ಕೂಡ ಹೆಚ್ಚಾಗಲಿದೆ ಮತ್ತು ರೈತರ ತಲಾದಾಯವೂ ಹೆಚ್ಚಾಗಿ ಖರ್ಚು ಮಾಡುವ ಸಾಮರ್ಥ್ಯ ವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಕೃಷಿ ಪ್ರದೇಶ ವಿಸ್ತರಣೆ, ಇಳುವರಿ ಹೆಚ್ಚಳಕ್ಕೆ ಅಗತ್ಯ ನೆರವು ನೀಡಲು ಬ್ಯಾಂಕಿಂಗ್ ಕ್ಷೇತ್ರದ ಕಡೆಯಿಂದ ಆಗಬೇಕಾದ ಸಹಕಾರದ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆಯಾಗಿದೆ.
ಕೃಷಿಗೆ ಪೂರಕ ಮೂಲಸೌಕರ್ಯ ಕೊರತೆ ಹಾಗೂ ಕಡಿಮೆ ತಲಾ ಆದಾಯ, ಕೃಷಿಗೆ ಸಾಲ ನೀಡುವಿಕೆ ಕಡಿಮೆ ಇರುವ ಹಿಂದುಳಿದ ಜಿಲ್ಲೆಗಳನ್ನು ಗುರುತಿಸಿ ಅಲ್ಲಿ ಕೃಷಿಗೆ ಉತ್ತೇಜನ ನೀಡಲು ಅಗತ್ಯ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ಬ್ಯಾಂಕರುಗಳ ಸಮಿತಿ ಈ ಬಗ್ಗೆ ಹೆಗಲಿಗೆ ಹೆಗಲುಕೊಡುವಂತೆ ನಬಾರ್ಡ್ ನೆರವನ್ನು ಕೋರಿದೆ.
ನಬಾರ್ಡ್ ಕೂಡ ತನ್ನಲ್ಲಿರುವ ಡೇಟಾವನ್ನು ಬ್ಯಾಂಕುಗಳ ಪ್ರಮುಖರ ಉಪಸ್ಥಿತಿ ಇರುವ ಉನ್ನತ ಮಟ್ಟದಲ್ಲಿ ಸಭೆಯಲ್ಲಿ ಹಂಚಿಕೊಂಡಿದೆ. ಬ್ಯಾಂಕುಗಳು ಠೇವಣಿಗಳ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಎಷ್ಟು ಸಾಲವಾಗಿ ಬಳಸಿದೆ ಎಂಬುದನ್ನು ತಿಳಿಸುವ ಮಾಪಕದ ಆಧಾರದಲ್ಲಿ ಜಿಲ್ಲಾವಾರು ಸ್ಥಿತಿಗತಿಯ ಅಂಶವನ್ನು ಪ್ರಸ್ತಾಪಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಿಡಿ ಅನುಪಾತ ಶೇ.70ಕ್ಕಿಂತ ಕಡಿಮೆ ಇದ್ದರೆ, 14 ಜಿಲ್ಲೆಗಳಲ್ಲಿ ಶೇ.70ರಿಂದ 100 ಅನುಪಾತವನ್ನು ಹೊಂದಿವೆ. ಅಂದರೆ ಠೇವಣಿ ಹಾಗೂ ಸಾಲ ನೀಡಿಕೆಯಲ್ಲಿ ವ್ಯತ್ಯಾಸವಿದೆ. ಹಾವೇರಿಯಲ್ಲಿ ಸಿಡಿ ರೇಶ್ಯೋ ಹೆಚ್ಚಿದೆ. ಒಟ್ಟಾರೆ ಕೃಷಿಗೆ ಸಾಲ ನೀಡಿಕೆ ಪ್ರಮಾಣ ಹೆಚ್ಚಬೇಕೆಂಬ ಅಭಿಪ್ರಾಯ ನೀಡಲಾಗಿದೆ. ಗುಲ್ಬರ್ಗ, ಬಳ್ಳಾರಿ, ಚಾಮರಾಜನಗರ ಕೃಷಿ ಮತ್ತು ಎಫ್​ಪಿಒನಲ್ಲಿ ಹಿಂದುಳಿದಿದೆ. ಮೈಕ್ರೋ ಕ್ರೆಡಿಟ್​ನಲ್ಲಿ ಮೈಸೂರು ಮತ್ತು ಬೆಂಗಳೂರು ನಗರ ಹಿಂದುಳಿದಿವೆ. ಕೃಷಿ ಮತ್ತು ಮೂಲಸೌಕರ್ಯ ವಿಚಾರಕ್ಕೆ ಬಂದರೆ ವಿಜಯನಗರ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗೆ ಉತ್ತಮ ಬೆಂಬಲ ಸಿಗುತ್ತಿದೆ. ಮೈಕ್ರೋ ಕ್ರೆಡಿಟ್ ವಿಷಯದಲ್ಲಿ ಅಗ್ರ ಜಿಲ್ಲೆಗಳೆಂದರೆ ತುಮಕೂರು, ಗುಲ್ಬರ್ಗಾ, ಬಳ್ಳಾರಿ. ಆಹಾರ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಹಾಗೂ ಕಾರ್ಯನಿರ್ವಹಣೆಯಲ್ಲಿ ಯಾದಗಿರಿ, ಉತ್ತರ ಕನ್ನಡ ಮತ್ತು ವಿಜಯನಗರ ಉತ್ತಮ ಸ್ಥಿತಿಯಲ್ಲಿವೆ. ಕೃಷಿ ಮೂಲಸೌಕರ್ಯಕ್ಕೆ ಅನುದಾನ ಹಂಚಿಕೆ ಮಾಡುವಾಗ ಜಿಲ್ಲಾವಾರು ಕೊರತೆ ಇರುವ ಜಿಲ್ಲೆಗಳಿಗೆ ಗಮನಿಸಿ ಮಂಜೂರಾತಿ ನೀಡಬೇಕು ಮತ್ತು ಆದ್ಯತೆ ಮೇಲೆ ಪರಿಗಣಿಸಬೇಕೆಂದು ತಿಳಿಸಲಾಗಿದೆ. ಈ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಇನ್ನೊಂದಿಷ್ಟು ಸ್ಪಷ್ಟ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಇದಿನ್ನೂ ಪ್ರಾಥಮಿಕ ಹಂತವಾಗಿದೆ. ಜಿಡಿಪಿಗೆ ಕೃಷಿಯ ಪಾಲು ಹೆಚ್ಚಿಸಲು ಆಗಬೇಕಾದ ಪ್ರಯತ್ನ ಬೇರೆ ಬೇರೆ ಆಯಾಮಗಳಲ್ಲಿ ನಡೆಯಲಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಶೇ.80 ಜನಪ್ರತಿನಿಧಿಗಳ ಗೈರು:ಬ್ಯಾಂಕುಗಳ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯಲ್ಲಿ ಜನ ಪ್ರತಿನಿಧಿಗಳ ಗೈರು ಎದ್ದು ಕಾಣಿಸುತ್ತಿದೆ. ಜನ ಪ್ರತಿನಿಧಿಗಳನ್ನು ಈ ಸಭೆಗೆ ಹಾಜರಾಗುವಂತೆ ಮಾಡಿದರೆ ಜನರ ಅಭಿಪ್ರಾಯ ಮತ್ತು ಬ್ಯಾಂಕುಗಳು ಎದುರಿಸುವ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂಬ ಅಭಿಪ್ರಾಯವಿದೆ. ಈವರೆಗಿನ ಲೆಕ್ಕಾಚಾರದ ಪ್ರಕಾರ ಶೇ.80 ಡಿಎಲ್​ಆರ್​ಸಿ ಸಭೆಯಲ್ಲಿ ಜನ ಪ್ರತಿನಿಧಿಗಳು ಗೈರಾಗಿದ್ದಾರೆ. ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲಿ ನಡೆಯುವ ಸಭೆಗಳಲ್ಲಿ ಚುನಾಯಿತ ಸದಸ್ಯರನ್ನು ಆಹ್ವಾನಿಸುವುದು ಮತ್ತು ಅವರ ಸಲಹೆ ಆಲಿಸಲು ಆದ್ಯತೆ ನೀಡುವಂತೆ ಲೀಡ್ ಬ್ಯಾಂಕ್​ಗಳಿಗೆ ಸೂಚನೆ ಹೋಗಿದೆ.
ಸರ್ಕಾರಿ ಯೋಜನೆಗಳಲ್ಲಿ ಎನ್​ಪಿಎ:ವಿವಿಧ ಸರ್ಕಾರಿ ಯೋಜನೆಗಳಡಿ ಬ್ಯಾಂಕುಗಳಿಂದ ಸಾಲ ಪಡೆದು ಮರು ಪಾವತಿ ಮಾಡದವರ ಸಂಖ್ಯೆ ಹೆಚ್ಚುತ್ತಿದ್ದು, ಎನ್​ಪಿಎ ಮಾಹಿತಿಗಳ ಕ್ರೋಡೀಕರಣಕ್ಕೆ ಬ್ಯಾಂಕುಗಳಿಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆಯಿಂದ ಸೂಚನೆ ಕಳಿಸಲಾಗಿದೆ. ಸರ್ಕಾರಿ ಪ್ರಾಯೋಜಿತ ಯೋಜನೆಗಳ ಎನ್​ಪಿಎ ಡೇಟಾವನ್ನು ಹಂಚಿಕೊಳ್ಳಲು ಎಲ್ಲ ಬ್ಯಾಂಕ್​ಗಳಿಗೆ ವಿನಂತಿಸಲಾಗಿದೆ. ರಾಜ್ಯಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾದರೆ ಬ್ಯಾಂಕುಗಳ ಮೇಲಿನ ಒತ್ತಡ ಕಡಿಮೆ ಮಾಡಿಕೊಳ್ಳಬಹುದು, ಪರಿಹಾರ ಕಂಡುಕೊಳ್ಳಬಹುದು ಎಂಬ ಅಭಿಪ್ರಾಯ ಅಧಿಕಾರಿಗಳದ್ದಾಗಿದೆ.
ರೈತರ ಪಾಲಿಗೆ ಬ್ಯಾಂಕ್ ಸಾಲ ನೀತಿ ಕಠಿಣವಾಗಿದೆ. ಸಿಬಿಲ್ ಸ್ಕೋರ್ ಬಳಕೆ ಕೃಷಿ ಕ್ಷೇತ್ರದಿಂದ ತೆಗೆಯಬೇಕೆಂಬುದು ನಮ್ಮ ಬಲವಾದ ಆಗ್ರಹ. ಕರೊನಾ ಸೇರಿ ಯಾವುದೇ ಪರಿಸ್ಥಿತಿ ಎದುರಾದರೂ ದೇಶದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಕೆಡದೇ ಇರಲು ಕೃಷಿ ಕ್ಷೇತ್ರ ಕಾರಣ. ಹೀಗಾಗಿ ಕೃಷಿಯನ್ನು ಲಾಭದಾಯಕ ವಾಗಿಸಲು ಕಾರ್ಯಕ್ರಮ ರೂಪಿಸಬೇಕು.
| ಕುರುಬೂರು ಶಾಂತಕುಮಾರ್, ರೈತ ಮುಖಂಡ
ಎನ್​ಪಿಎ ಭಯ:ರೈತರ ಸಾಲದ ಮರುಪಾವತಿ ವಿಷಯದಲ್ಲಿ ಬಳ್ಳಾರಿಯಲ್ಲಿ ನಡೆದ ರೈತರ ಹೋರಾಟದ ಬಗ್ಗೆ ಬ್ಯಾಂಕರುಗಳು ಕಳವಳ ಹೊರಹಾಕಿದ್ದಾರೆ. ನೂರು ದಿನ ನಡೆದ ಹೋರಾಟ ಸರ್ಕಾರದ ಮಧ್ಯ ಪ್ರವೇಶದಿಂದ ಕೊನೆಯಾಯಿತು. ಆದರೆ, ಸರ್ಕಾರ ಇಂತಹ ಬೆಳವಣಿಗೆಯಾದಾಗ ಕೂಡಲೇ ಮಧ್ಯ ಪ್ರವೇಶ ಮಾಡುವುದು ಒಳಿತು. ಇಲ್ಲವಾದರೆ ಬ್ಯಾಂಕ್​ಗಳ ಕಾರ್ಯನಿರ್ವಹಣೆ ಹಾಗೂ ಎನ್​ಪಿಎ ತಗ್ಗಿಸಬೇಕೆಂಬ ನಮ್ಮ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ ಎಂದು ಬ್ಯಾಂಕ್​ಗಳು ಕೋರಿಕೊಂಡ ಪ್ರಸಂಗ ಕೂಡ ನಡೆದಿದೆ.
ಮೊನ್ನೆ ಜಗ್ಗೇಶ್​ಗೆ ಕನ್ನಡ ಪಾಠ ಮಾಡಿದ್ದ ‘ಮೇಷ್ಟ್ರು’, ಇಂದು ಸಚಿವರು-ಸರ್ಕಾರಿ ಅಧಿಕಾರಿಗಳಿಗೂ ಕಿವಿಮಾತು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 6 =
Remember me
