ಬೆಂಗಳೂರು:ಅನ್ಯಭಾಗ್ಯ ಯೋಜನೆಗೆ ಅಕ್ಕಿ ಪೂರೈಕೆ ವಿಚಾರ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ‘ಅಪರಾಧಿ ಸ್ಥಾನ’ದಲ್ಲಿ ನಿಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸಿದರೆ, ಪ್ರತಿಪಕ್ಷ ಬಿಜೆಪಿ ತೀವ್ರ ಪ್ರತಿರೋಧವೊಡ್ಡಿ ಅಡ್ಡಗಾಲು ಹಾಕಿತು.
ಪರಸ್ಪರ ರಾಜಕೀಯ ಚಾಟಿ ಏಟು, ಚುನಾವಣೆ ಸೋಲು-ಗೆಲುವುಗಳ ದೋಷಾರೋಪಗಳಿಗೆ ವಿಧಾನ ಪರಿಷತ್ ಶುಕ್ರವಾರ ವೇದಿಕೆಯಾಯಿತು. ಮಾತಿನ ಏಟಿಗೆ ಪ್ರತಿಏಟು, ವಾಕ್ಸಮರದಿಂದ ಕೋಲಾಹಲ ಮರುಕಳಿಸಿದರೆ, ಸದನ ನಿಯಂತ್ರಿಸಲು ಸಭಾಪತಿ ಬಸವರಾಜ ಹೊರಟ್ಟಿ ಪದೇಪದೆ ಎದ್ದು ನಿಲ್ಲಬೇಕಾಯಿತು. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಿದ್ದರಾಮಯ್ಯ ತಮ್ಮ ಭಾಷಣದುದ್ದಕ್ಕೂ ರಾಜಕೀಯ ಬೆರೆಸಿದರು.
ಪ್ರತಿಪಕ್ಷಗಳ ಸಕಾರಾತ್ಮಕ ಸಲಹೆ ಸ್ವೀಕರಿಸುವೆ. ಲೋಪಗಳನ್ನು ತೋರಿಸಿದರೆ ತಿದ್ದಿಕೊಂಡು ಮುನ್ನಡೆಯುತ್ತೇವೆ. ರಾಜಕೀಯ ಕಾರಣಕ್ಕೆ ಟೀಕಿಸಿದರೆ ಸ್ವೀಕರಿಸಿದರೆ ತಿರುಗೇಟು ನೀಡಲಿದ್ದೇವೆ ಎನ್ನುತ್ತಲೇ ಬಿಜೆಪಿಗೆ ಚಿವುಟಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ವಿಷಯ ಎತ್ತಿದಾಗಲೆಲ್ಲ ಬಿಜೆಪಿ ಸದಸ್ಯರಿಂದ ತೀವ್ರ ವಿರೋಧ, ಟೀಕೆಗೆ-ಪ್ರತಿಯಾಗಿ ಟೀಕಿಸಿದರು. ಸಿಎಂ ಮಾತಿಗೆ ಅಡ್ಡಿಪಡಿಸುವುದು ಸರಿಯಲ್ಲವೆಂದು ಆಡಳಿತ ಪಕ್ಷದ ಸದಸ್ಯರು ಕೆರಳಿ ಚುನಾವಣೆಯಲ್ಲಿ ಸೋತ ಅಸ್ತ್ರವನ್ನು ಬಳಸಿಕೊಂಡು ತಿವಿದರು. ಕೇಂದ್ರ ಸರ್ಕಾರದ ವಿರುದ್ಧದ ಪ್ರತಿ ಟೀಕೆಗೆ ಬಿಜೆಪಿ ಸದಸ್ಯರು ಕೌಂಟರ್ ನೀಡಿದರು. ಪ್ರತಿ ಮಾತಿಗೆ ಎದ್ದು ನಿಂತು ವಿರೋಧಿಸುತ್ತಿದ್ದ ಕಾರಣ ಸಿದ್ದರಾಮಯ್ಯ ಸಹನೆ ಕಳೆದುಕೊಂಡರು. ಮುಖ್ಯಮಂತ್ರಿ ಮಾತನಾಡುವಾಗ ಪದೇಪದೆ ಎದ್ದು ನಿಂತು ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಸಭಾಪತಿ ಸೂಚನೆಗೂ ಗೌರವ ನೀಡುತ್ತಿಲ್ಲ. ನಾವು ಪ್ರತಿಪಕ್ಷದಲ್ಲಿದ್ದಾಗ ಪೀಠದಿಂದ ಆದೇಶ ಬಂದ ತಕ್ಷಣ ಕೇಳುತ್ತಿದ್ದೆವು. ಬಿಜೆಪಿ ನಡೆಯು ಬೇಜವಾಬ್ದಾರಿಯುತವಾಗಿ ಎಂದು ಹರಿಹಾಯ್ದರು.
ಬಡವರ ಪರ-ವಿರೋಧ:ಕೇಂದ್ರ ಸರ್ಕಾರದಿಂದ ಐದು ಕೆಜಿ ಜತೆಗೆ ಹೆಚ್ಚುವರಿಯಾಗಿ ರಾಜ್ಯದಿಂದ ಐದು ಕೆಜಿ ಸೇರಿ ಸೇರಿಸಿ ತಲಾ 10 ಕೆಜಿ ಅಕ್ಕಿ ಅನ್ನಭಾಗ್ಯ ಯೋಜನೆಯಡಿ ಕೊಡುತ್ತೇವೆ ಎಂಬ ಭರವಸೆ ನೀಡಿದ್ದೆವು ಎಂದು ಸಿದ್ದರಾಮಯ್ಯ ಹೇಳಿದರು. ಸಭಾಪತಿ ಸೂಚನೆ ನಡುವೆಯೂ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್, ತುಳಸಿ ಮುನಿರಾಜುಗೌಡ ಇನ್ನಿತರರು ಆಕ್ಷೇಪಿಸಿ, ಜನರಿಗೆ ಭರವಸೆ ನೀಡುವಾಗ ಕೇಂದ್ರ ಹೆಸರೆತ್ತಿಲ್ಲ, ತಲಾ 10 ಕೆಜಿ ಕೊಡುತ್ತೇವೆ ಎಂಬ ಭರವಸೆ ನೀಡಿದ್ದೀರಿ. ಬೇಕಿದ್ದರೆ ನಿಮ್ಮ, ಡಿ.ಕೆ.ಶಿವಕುಮಾರ್ ಚುನಾವಣೆ ಭಾಷಣದ ಆಡಿಯೋ ಕೇಳಿಸುತ್ತೇವೆ, ವಿಡಿಯೋ ತೋರಿಸುತ್ತೇವೆ ಎಂದರು. ಓಹೋ, ಜೋರುಧ್ವನಿ ಆರ್​ಎಸ್​ಎಸ್​ನವರಿಗೆ ಕೇಳಿಸಿತು. ಸಾಕು ಸುಮ್ಮನಿರಿ ಎಂದು ಸಿದ್ದರಾಮಯ್ಯ ಛೇಡಿಸಿದರೆ, ಸುಳ್ಳು ಹೇಳಿದ್ದನ್ನು ಎತ್ತಿ ತೋರಿಸಿದರೆ ನಿಮಗೆ ಸಹಿಸಲಾಗುತ್ತಿಲ್ಲ ಎಂದು ಎನ್. ರವಿಕುಮಾರ್ ಕುಟುಕಿದರು. ಅನ್ನಭಾಗ್ಯಕ್ಕೆ ಅಕ್ಕಿ ಕೊಡಲಿಲ್ಲ, ಬಡವರ ವಿರೋಧಿಗಳು ಎಂದು ಸಿದ್ದರಾಮಯ್ಯ ಜರಿದಾಗ ಮೋದಿಯವರು 81 ಕೋಟಿ ಜನರಿಗೆ ತಲಾ ಐದು ಕೆಜಿ ಕೊಡುತ್ತಿದ್ದಾರೆ ಎಂದು ಬಿಜೆಪಿ ಪ್ರತ್ಯುತ್ತರಿಸಿತು. ಮನಮೋಹನ್​ಸಿಂಗ್ ಜಾರಿಗೊಳಿಸಿದ ಆಹಾರ ಭದ್ರತಾ ಕಾಯ್ದೆಯ ಫಲವೆಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ಕಾಯ್ದೆ ಕಾಂಗ್ರೆಸ್ ಕಾಲದ್ದಾದರೂ ಮೋದಿಯವರು ಬಂದ ಮೇಲೆ ನಿಯಮಾವಳಿ ರೂಪಿಸಿ ದೇಶವ್ಯಾಪಿ ಜಾರಿಗೊಳಿಸಲಾಯಿತು, ಕೋಟ ಶ್ರೀನಿವಾಸ ಪೂಜಾರಿ ಸಮಜಾಯಿಷಿ ನೀಡಿದರು. ಕಾಪೋರೇಟ್ ಟ್ಯಾಕ್ಸ್ ಇಳಿಸಿದ್ದು, ಹಾಲು-ಮೊಸರು, ಅಕ್ಕಿಗೆ ತೆರಿಗೆ ಹಾಕಿದ್ದು, ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್, ಡೀಸೆಲ್ ದರ ಏರಿಸಿದ್ದು ಬಡವರ ಪರವೆ ? ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಕೇಳಿದರೆ ಬಿಜೆಪಿಯವರದು ಮಾತಿನ ಗದ್ದಲವೇ ಉತ್ತರವಾಯಿತು.
ಕರ್ನಾಟಕದಿಂದಲೇ ಅವನತಿ:ಭ್ರಷ್ಟಾಚಾರ, ಕೋಮುವಾದ, ಕೊಟ್ಟ ಮಾತು ಉಳಿಸಿಕೊಳ್ಳದ ಕಾರಣಕ್ಕೆ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದು, ಕರ್ನಾಟಕದಿಂದಲೇ ಬಿಜೆಪಿ ಅವನತಿ ಆರಂಭವಾಗಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು. ಮೋದಿಯವರು ಎತ್ತರದ ನಾಯಕ, ಪ್ರಭಾವಿಯಾಗಿದ್ದಾರೆ ಎಂಬ ಮಾತಿಗೆ ತಕರಾರಿಲ್ಲ. ಆದರೆ ಮೇಲೆ ಏರಿದವರು ಕೆಳಗೆ ಇಳಿಯಲೇಬೇಕಲ್ಲ. ರಾಜ್ಯಕ್ಕೆ 28 ಬಾರಿ ಭೇಟಿ ಕೊಟ್ಟು ಜನ ಬೆಂಬಲ ಯಾಚಿಸಿದರು. ಮೋದಿ ಹೋದಡೆಯೆಲ್ಲಲ್ಲ ಬಿಜೆಪಿ ಸೋತಿದ್ದು, ಅವರ ಪ್ರಭಾವ ಮಂಕಾಗಿರುವುದಕ್ಕೆ ನಿದರ್ಶನವೆಂದು ಹೇಳಿದರು.
ಬಿಜೆಪಿ ಸಭಾತ್ಯಾಗ:ತೀವ್ರ ವಾಗ್ವಾದ, ಧಿಕ್ಕಾರದ ಘೋಷಣೆಗಳ ಮೊಳಗು, ಪ್ರತಿಪಕ್ಷ ಬಿಜೆಪಿ ಸಭಾತ್ಯಾಗದ ಮಧ್ಯೆ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವು ಮೇಲ್ಮನೆಯಲ್ಲಿ ಧ್ವನಿಮತದ ಮೂಲಕ ಶುಕ್ರವಾರ ಅಂಗೀಕಾರವಾಯಿತು. ಸಭಾತ್ಯಾಗಕ್ಕೂ ಮುನ್ನ ಬಿಜೆಪಿ ಸದಸ್ಯರು ಒಟ್ಟಾಗಿ ಕಾಂಗ್ರೆಸ್, ಸಿಎಂ ವಿರುದ್ಧ ಹರಿಹಾಯ್ದರು. ಐದು ಗ್ಯಾರಂಟಿಗಳ ವಿಷಯದಲ್ಲಿ ನುಡಿದಂತೆ ನಡೆದಿಲ್ಲ. ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದೆ, ಸುಳ್ಳು- ಪೊಳ್ಳು ಸರ್ಕಾರಕ್ಕೆ ಧಿಕ್ಕಾರವೆಂದು ಘೋಷಣೆ ಮೊಳಗಿಸುತ್ತಾ ಹೊರ ನಡೆದರೆ, ಪಲಾಯನವಾದಿ ಬಿಜೆಪಿ ಎಂದು ಆಡಳಿತ ಪಕ್ಷದ ಸದಸ್ಯರು ಏರುಧ್ವನಿಯಲ್ಲಿ ಕುಟುಕಿದರು. ಗ್ಯಾರಂಟಿಗಳು ಜಾರಿಯಾಗುವುದಿಲ್ಲ ಎಂದುಕೊಂಡಿದ್ದರು. ಜಾರಿ ಮಾಡಿರುವುದರಿಂದ ಪ್ರತಿಪಕ್ಷ ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಹೊರನಡೆದಿದ್ದು, ಬೇಜವಾಬ್ದಾರಿ ಪ್ರತಿಪಕ್ಷವೆಂದು ಸಿಎಂ ಸಿದ್ದರಾಮಯ್ಯ ಚಾಟಿ ಬೀಸಿದರು. ಸದನದಲ್ಲಿ ಜೆಡಿಎಸ್ ಸದಸ್ಯರು ಹಾಜರಿದ್ದರು. ಈ ಪೈಕಿ ಮರಿತಿಬ್ಬೇಗೌಡ ಗ್ಯಾರಂಟಿ ಯೋಜನೆಗಳು ಬಡವರ ಪರ ಕಾರ್ಯಕ್ರಮವೆಂದು ಪ್ರಶಂಸಿಸಿ, ರಾಜ್ಯಪಾಲರ ಭಾಷಣಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಜನ ಸಮುದಾಯದ ಸಂಕಷ್ಟಕ್ಕೆ ಸ್ಪಂದನೆಗಿಂತ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ಟೀಕೆಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ ಎಂದು ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಮಳೆಯಿಲ್ಲದೆ ರಾಜ್ಯದ 21 ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿ ರೈತರ ಬವಣೆ ಹೆಚ್ಚಿದೆ. ಮಲೆನಾಡಿನಂತಹ ಪ್ರದೇಶದಲ್ಲೂ ಕುಡಿಯುವ ಕೊರತೆ ಕಾಡಲಾರಂಭಿಸಿದ್ದು, ಅತ್ತ ಗಮನಹರಿಸಲು ಸರ್ಕಾರಕ್ಕೆ ಪುರುಸೊತ್ತು ಸಿಕ್ಕಿಲ್ಲ ಎಂದು ಕುಟುಕಿದರು.
ಜನರ ಕಷ್ಟ-ಕಾರ್ಪಣ್ಯಗಳು, ತುರ್ತು ಅಗತ್ಯಗಳನ್ನು ಮರೆತು ಗ್ಯಾರಂಟಿ ಯೋಜನೆಗಳಿಂದ ಏನೆಲ್ಲ ಪ್ರಯೋಜನವಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದರು. ಗ್ಯಾರಂಟಿಗಳ ವಿಚಾರದಲ್ಲಿ ಜನರಿಗೆ ಅದೆಷ್ಟು ಸುಳ್ಳುಗಳನ್ನು ಹೇಳಿದೆ ಎಂದು ಸದನದಲ್ಲಿ ರ್ಚಚಿಸುತ್ತೇವೆ. ರಾಜ್ಯ ಸರ್ಕಾರ ಗ್ಯಾರಂಟಿಗಳ ವಿಷಯದಲ್ಲೇ ಕಾಲಹರಣ ಮಾಡದೇ ಜನರ ಕಷ್ಟ-ಕಾರ್ಪಣ್ಯಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಹೊಸದೇನಲ್ಲ:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಕಾಂಗ್ರೆಸ್ ಯಾವ ನಿಲುವು ತಳೆದಿದೆ ಎಂಬುದು ಗೊತ್ತಿರುವ ವಿಚಾರ. ಸಂಘದಡಿ ಬರುವ ಜನಸೇವಾ ಟ್ರಸ್ಟ್​ನ ಶಿಕ್ಷಣ ಕೇಂದ್ರದಲ್ಲಿ ಸಾವಿರಾರು ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದೆ ಎಂದರು. ಅಂತಹ ಸಂಸ್ಥೆಗೆ ನೀಡಿರುವ ಜಮೀನು ಹಸ್ತಾಂತರವಾಗದಂತೆ ತಡೆ ನೀಡಿದೆ. ಅಕ್ಕಿ ವಿಷಯದಲ್ಲೂ ಕೇಂದ್ರದ ವಿರುದ್ಧ ಕಾಂಗ್ರೆಸ್ ಸರ್ಕಾರ ಸುಳ್ಳು ಆರೋಪ ಹೊರಿಸುತ್ತಿದೆ. ಬಡವರಿಗೆ ಅಕ್ಕಿ ವಿತರಿಸಲು ಕೊಡುತ್ತಿಲ್ಲ. ಎಥೆನಾಲ್ ಉತ್ಪಾದನೆಗೆ ಪೂರೈಸುತ್ತಿದೆ ಎಂದು ಹೇಳುತ್ತಿದೆ. ಪೆಟ್ರೋಲ್​ನಲ್ಲಿ ಶೇ.25 ಎಥೆನಾಲ್ ಮಿಶ್ರಣ ಮಾಡಬೇಕು ಎಂಬುದು ಕೇಂದ್ರದ ನೀತಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ನಿಯಂತ್ರಣ ಹಾಗೂ ವಿದೇಶಿ ವಿನಿಮಯ ಉಳಿತಾಯಕ್ಕಾಗಿ ಎಥೆನಾಲ್ ಉತ್ಪಾದನೆಗೆ ಪೋ›ತ್ಸಾಹಿಸುತ್ತಿದೆ. ಈ ನಿಜಾಂಶವನ್ನು ಮರೆಮಾಚಿ ಕೇಂದ್ರ ಸರ್ಕಾರ, ಮೋದಿಯವರನ್ನು ಕಾಂಗ್ರೆಸ್ ಸರ್ಕಾರ ಟೀಕಿಸುತ್ತಿದೆ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಅಂದಾಜು ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಗುರಿಯಾಗಿಸಿರುವುದು ಸಿಎಂ, ಸಚಿವರ ಹೇಳಿಕೆಗಳು ದೃಢಪಡಿಸಿವೆ. ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿ ದರು. ಆಡಳಿತದ ಚುಕ್ಕಾಣಿ ಹಿಡಿದ ನಂತರವೂ ಅದನ್ನೇ ಮುಂದುವರಿಸಿದ್ದು, ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿದರು. ಅವ್ಯವಹಾರಗಳಾಗಿದ್ದರೆ ತನಿಖೆ ನಡೆಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದರು.
ಬೆಂಗಳೂರು:ಗೃಹಲಕ್ಷ್ಮಿ ಯೋಜನೆಗೆ 30 ಸಾವಿರ ಕೋಟಿ ರೂ. ಬೇಕಿದ್ದು, ಬಜೆಟ್​ನಲ್ಲಿ 17,500 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ಒದಗಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಮೇಲ್ಮನೆಯಲ್ಲಿ ಬಿಜೆಪಿಯ ಹೇಮಲತ ನಾಯಕ್ ಪ್ರಶ್ನೆಗೆ ಉತ್ತರಿಸಿ, ಆ.15ರಿಂದ ಫಲಾನುಭವಿಗಳ ಖಾತೆಗೆ 2 ಸಾವಿರ ರೂ ಜಮೆ ಮಾಡಲಾಗುವುದು. ನಾಲ್ಕೈದು ದಿನದಲ್ಲಿ ಅರ್ಜಿ ಕರೆಯಲಾಗುವುದು ಎಂದರು.
ಗಂಗಾ ಕಲ್ಯಾಣದಲ್ಲಿ ಶೇ.40 ಸಾಧನೆ:ಗಂಗಾ ಕಲ್ಯಾಣ ಯೋಜನೆಯಲ್ಲಿ ಶೇ.40 ಸಾಧನೆ ಮಾಡಲಾಗಿದೆ. ಇನ್ನುಳಿದದ್ದನ್ನು ನಿಗಧಿತ ಅವಧಿಯಲ್ಲಿ ಸಾಧಿಸಲಾಗುವುದು ಎಂದು ಮೇಲ್ಮನೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಬಿಜೆಪಿಯ ಡಿ.ಎಸ್.ಅರುಣ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಪ್ರಾರಂಭಿಸಿದ್ದ ಆಪ್ ಈಗ ಕೆಲಸ ಮಾಡುತ್ತಿಲ್ಲ. ಶೀಘ್ರದಲ್ಲಿಯೇ ಆಪ್ ಅಭಿವೃದ್ಧಿಪಡಿಸಿ ಕೊಡಲಾಗುವುದು ಎಂದರು.
ನೀರಿನ ಘಟಕ ದುರಸ್ತಿಗೆ ಕ್ರಮ: ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ನೀಲಿ ನಕ್ಷೆ ತಯಾರು ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಜೆಡಿಎಸ್​ನ ಸಿ.ಎನ್.ಮಂಜೇಗೌಡರ ಪ್ರಶ್ನೆಗೆ ಉತ್ತರಿಸಿ, ಅನೇಕ ಕಡೆಯಲ್ಲಿ ನೀರಿನ ಮೂಲವೇ ಇಲ್ಲದ ಕಡೆಯಲ್ಲಿ ಘಟಕ ಸ್ಥಾಪಿಸಿರುವುದು ಸಮಸ್ಯೆಯಾಗಿದೆ. ಈ ಬಗ್ಗೆ ವೈಜಾನಿಕವಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − ten =
Remember me
